ಒಟ್ಟು ನೋಟಗಳು

Saturday, December 3, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 21


ಆ ದಿನಗಳಲ್ಲಿ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ನನ್ನ ಸಾರಥಿಯಾಗಬೇಕು


ಗುರುನಾಥರ ಬಳಿ ಬರುತ್ತಿದ್ದ, ಅವರನ್ನು ಅಪಾರವಾಗಿ ಪೂಜಿಸುತ್ತಿದ್ದ ಗುರುಭಕ್ತೆಯೊಬ್ಬರ ಬಳಿ, ಆಗಾಗ್ಗೆ 'ನೀನು ತಾಯಿ, ನನ್ನ ತಲೆಗೆ ಎಣ್ಣೆ ಹೆಚ್ಚು, ಅಭ್ಯಂಜನ ಮಾಡಿಸು' ಎಂದು ಸೇವೆ ತೆಗೆದುಕೊಳ್ಳುತ್ತಿದ್ದರಂತೆ. 

ಗುರುನಾಥರು ಕೊನೆಯ ದಿನಗಳಲ್ಲಿ, ಸಖರಾಯಪಟ್ಟಣದ ತಮ್ಮ ಮನೆಯಲ್ಲಿ ಇರುವಾಗ ಆ ಗುರುಭಕ್ತೆಯ ಪತಿಯನ್ನು ಕರೆದು, ಒಂದು ಶ್ವೇತ ವಸ್ತ್ರವನ್ನು ನೀಡುತ್ತಾ 'ನೋಡಪ್ಪಾ, ನೀನು ನನ್ನ ಕೊನೆಯ ಘಳಿಗೆಯ ಸಾರಥಿಯಾಗಬೇಕು. ಈ ವಿಚಾರವನ್ನು ಯಾರ ಮುಂದೆಯೂ ಹೇಳಬೇಡ' ಎಂದಾಗ ಆ ಭಕ್ತರಿಗಾದ ಅಪಾರ ನೋವನ್ನು ವರ್ಣಿಸಲಾಗದು. ಗುರುನಾಥರ ಅಗಲಿಕೆಯ ವಿಚಾರವೇ ಸಹಿಸಲಸದಳವಾದರೂ, ಇಚ್ಛಾ ಮರಣಿಗಳಾದ, ಪ್ರಕೃತಿ ನಿಮಯದಂತೆ ಈ ಭೌತಿಕ ಶರೀರವನ್ನು ಒಂದು ದಿನ ಕಳಚಲೇ ಬೇಕೆಂಬ ಸತ್ಯವರಿತ ಗುರುನಾಥರಂತೂ ನಿರ್ವಿಕಾರಿಗಳಾಗಿ ಇರುತ್ತಿದ್ದರು. ಹೀಗೆ ಸೂಚ್ಯವಾಗಿ, ಸಾಂಕೇತಿಕವಾಗಿ ಗುರುನಾಥರು ತಮ್ಮಗಲಿಕೆಯ ವಿಚಾರವನ್ನು ಭಕ್ತ ಸಮಾಜಕ್ಕೆ ಮೊದಲೇ ತಿಳಿಸಿ, ಅವರ ಸ್ಥೈರ್ಯವನ್ನು ದೃಢಗೊಳಿಸುತ್ತಿದ್ದರು. ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಿದ್ದರು. 

ಒಂದು ಸ್ವಲ್ಪ ಅವನ್ನ ನೋಡ್ಕಳಯ್ಯ 


ಅನೇಕ ದಿನಗಳಿಂದ ಗುರುನಾಥರ ಎಡಬಿಡದೆ ಜೊತೆಗಿರುತ್ತಿದ್ದ ನನಗೆ ಗುರುನಾಥರ ಲೀಲೆಯನ್ನು ಆ ದಿನ ಅರಿಯಲಾಗಲಿಲ್ಲ. ಸಣ್ಣದಾಗಿ ಮಳೆಯು ಜಿನುಗುತ್ತಿತ್ತು. 1963ರಲ್ಲಿ ಅವರ ತಂದೆಯವರು ಗುರುನಾಥರಿಗಾಗಿ ಕಟ್ಟಿಸಿದ ಮನೆಯಲ್ಲಿರಲು ಅವರು ಇಚ್ಛಿಸುತ್ತಿದ್ದುದರಿಂದ, ಓಡಾಡಲಾಗದ ಅವರನ್ನು ನಾವು ಗುರುಬಂಧುಗಳೆಲ್ಲಾ ಕೈಗಳ ಕುರ್ಚಿ ಮಾಡಿ ಈ ಮನೆಗೆ ತಂದಿದ್ದೆವು. ರುದ್ರಜಪ, ಧ್ಯಾನದಲ್ಲಿ ನಿರಂತರ ನಿರತರಾಗಿದ್ದ ಅವರಿಗೆ ಸಾವು-ನೋವುಗಳ ಭಯವೇ ಇರಲಿಲ್ಲ. ಅಂದು ಅವರು ಏನೋ ನಿರ್ಧರಿಸಿದಂತೆ ಇತ್ತು. ರಾತ್ರಿ ಹತ್ತೂವರೆಯ ಸಮಯ ಗುರುನಾಥರು ಮಲಗಿದ್ದರು. ಅವರ ಮಗ ಬಂದು ಗುರುನಾಥರಿಗೆ ಹೊದಿಕೆ ಹೊದಿಸುತ್ತಾ, ಪಾದಗಳಿಗೆ ನಮಸ್ಕರಿಸಿ ಹೊರಬಂದರು. 

ಇದಕ್ಕೆ ಸ್ವಲ್ಪ ಸಮಯದ ಮುಂಚೆ ಗುರುನಾಥರಿಗೆ, ದೂರವಾಣಿ ಕರೆಯೊಂದು ಬಂದಿತ್ತು. ಕೊಡಲೋ, ಬೇಡವೋ ಎಂದು ಯೋಚಿಸುತ್ತಿದ್ದಾಗ ತುಂಬಾ 'ಆಲಸ್ಯವಾಗಿದೆ ಕಣಯ್ಯಾ. ಬೆಳಿಗ್ಗೆ ಮಾತಾಡ್ತೀನಿ' ಅಂದವರು ಮತ್ತದೇಕೋ ಫೋನು ತೆಗೆದುಕೊಂಡು ಫೋನಿನಲ್ಲಿ ಬಹಳ ಹೊತ್ತು ಮಾತನಾಡಿದರು. ಇದಾಗಿ ಮಗ ಬಂದು ಹೊದಿಕೆ ಹೊದಿಸುವಂತೆ ನಾಟಕ ಮಾಡಿ ನಮಿಸಿ, ಹೊರ ಹೋದಾಗ 'ಅಯ್ಯಾ ಮಳೆಯಲ್ಲಿ ಅವನು ಹೋಗ್ತಾ ಇದಾನಯ್ಯಾ, ಅವನ್ನ ಸ್ವಲ್ಪ ನೋಡ್ಕಳಯ್ಯ' ಎಂದಾಗ ನನಗೆ ಹೊರಬರುವುದು ಅನಿವಾರ್ಯವಾಗಿತ್ತು. ಇದೇ ನಾನು ಕೇಳಿದ ಕೊನೆಯ ವಾಕ್ಯ. ಗುರುನಾಥರ ವೇದಿಕೆಯ ಎದುರು ಕುಳಿತ ಆ ವ್ಯಕ್ತಿ ಬಿಕ್ಕಿದರು. ಆ ಕೊನೆಯ ವಾಕ್ಯ - ಗುರುಬಂಧುಗಳ ಮೇಲೊಂದು ಜವಾಬ್ದಾರಿಯನ್ನು ಆಂತರ್ಯದಲ್ಲಿ ಸೂಚಿಸಿತ್ತು. ಶಿರೋಧಾರಿಯಾದ ಆ ಗುರುವಾಕ್ಯವನ್ನಿಂದೂ ಅವರು ನಡೆಸುತ್ತಾ ಸಾಗಿದ್ದಾರೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ಗುರುನಾಥರು ವಹಿಸಿದ್ದಾರೆ. ಏಕೆಂದರೆ ಕರ್ಮತತ್ವದಿಂದ ತನ್ನ ಭಕ್ತರು ದೂರವಾಗಬಾರದೆಂದು ಗುರುವಿನ ಆಶಯವಿರಬೇಕು. ಎಲ್ಲೆಡೆ ಅದು ನಿರಂತರವಾಗಿ ಸಾಗಿರುವುದೇ ಆನಂದದ ಸಂಗತಿ. ಗುರುನಾಥರ ಕೃಪಾ ವಿಶೇಷ. 


ದಿನನಿತ್ಯ ರುದ್ರಾಭಿಷೇಕ 


ಗುರುನಾಥರ ನಿರಂತರ ಸೇವೆಯಲ್ಲಿ ನಿರತರಾದ ಅವರ ಆಪ್ತ ಬಂಧುವೊಬ್ಬರು ಆ ದಿನಗಳ ಗುರುನಾಥರ ಜೀವನವನ್ನು ಸ್ಮರಿಸುತ್ತಾ "ದಿನ ನಿತ್ಯ ಎಲ್ಲಾ ದೇವರ ವಿಗ್ರಹಗಳನ್ನು ಒಂದು ದೊಡ್ಡ ಜರಡಿಯಲ್ಲಿರಿಸಿ, ರುದ್ರ ಪಠಣ ಮಾಡಿ, ಅಭಿಷೇಕ ಮಾಡಲು ತಿಳಿಸುತ್ತಿದ್ದರು. ಗುರುನಾಥರ ಕಾಲಿಗೆ ಆಪರೇಷನ್ ಆಗಿತ್ತು. ನೀರು ಸೋಂಕುವಂತಿರಲಿಲ್ಲ. ಆದರೂ 'ಇರಲಿ ಬಿಡಯ್ಯ. ಏನೂ ಆಗಲ್ಲ' ಎನ್ನುತ್ತಿದ್ದರು. ನಾವು ಪ್ಲಾಸ್ಟಿಕ್ ಗಳನ್ನೆಲ್ಲಾ ಕಟ್ಟಿ, ಬ್ಯಾಂಡೇಜು ಹಾಕಿ ತಡ ನಂತರ ತಲೆಯ ಮೇಲೆ ರುದ್ರಾಭಿಷೇಕ ಮಾಡಿದ, ಎಲ್ಲಾ ದೇವರುಗಳ ತೀರ್ಥ ಗುರುನಾಥರ ತಲೆ, ಮೈ ಕೈಗಳ ಮೇಲೆ ಬೀಳುವಂತೆ ಅಭಿಷೇಕ ಮಾಡುತ್ತಿದ್ದೆವು. ಸ್ವತಃ ಗುರುನಾಥರೂ ರುದ್ರಘೋಷ ಮಾಡುತ್ತಿದ್ದರು" ಎಂದರು. 

ಸ್ವತಃ ಗುರುನಾಥರೇ ಶಿವ ಸ್ವರೂಪರಾಗಿದ್ದರೂ, ಭೌತಿಕ ಶರೀರ ಧರಿಸಿದ ಮೇಲೆ ಈ ಶರೀರಕ್ಕಾಗಬೇಕಾದ ಎಲ್ಲಾ ಕಾರ್ಯಗಳನ್ನೂ ಮನುಷ್ಯ ಸಹಜರಂತೆ, ಅನುಭವಿಸಿದರು. "ಕರ್ಮವನ್ನು ಅನುಭವಿಸಿಯೇ ತೀರಬೇಕು. ಅದನ್ನು ತಪ್ಪಿಸಿಕೊಂಡು ಓಡುವುದಲ್ಲ. ಆದರೆ, ಅದ್ಯಾವುದರಲ್ಲೂ ನಾವು ಅಂಟಿಕೊಳ್ಳಬಾರದೆಂಬುದನ್ನು ಭಕ್ತರಿಗೆಲ್ಲಾ ತೋರಿಸಿದರು". 


ಇನ್ನು ಮೆಟ್ಟಿಲು ಹತ್ತಲ್ಲ 


ಯಾವಾಗಲೂ ತಮ್ಮ ಪ್ರಿಯರಾದ ಗುರುಭಕ್ತರೊಬ್ಬರ ಮನೆಗೆ ಪದೇ ಪದೇ ಬರುತ್ತಿದ್ದ ಗುರುನಾಥರು, ಅಂದು ಅವರಿಗದೇನು ಅನಿಸಿತೋ ಏನೋ, ತಮ್ಮ ಇಹ ಯಾತ್ರೆಯ ಪರಿಸಮಾಪ್ತಿಯ ಬಗ್ಗೆ ಮುನ್ಸೂಚನೆ ನೀಡಿದರಂತೆ. "ಅಯ್ಯಾ, ಇನ್ನು ನನ್ನದಾಯ್ತಯ್ಯಾ, ಇನ್ನು ಮುಂದೆ ನಾನು ಮೆಟ್ಟಿಲು ಹತ್ತುವುದಿಲ್ಲ" ಎಂದಿದ್ದರು. ಸಾಮಾನ್ಯರಿಗಿದು, ಗುರುಗಳ ಕಾಲಿಗೆ ಆಗಿರುವ ನೋವಿನಿಂದಾಗಿ ಅವರಿಗೆ ಮೆಟ್ಟಿಲು ಹತ್ತುವುದು ಕಷ್ಟ. ಹಾಗಾಗಿ ಹೀಗೆ ಮಾತನಾಡಿರಬಹುದೆಂದು ಎಣಿಸಿದರೇನೋ. ಗುರುನಾಥರ ಮಾತಿನ ಮರ್ಮವೇ ಬೇರೆ. ಅದರಂತೆಯೇ ಅದೇ ಅವರು ಆ ಭಕ್ತರ ಮನೆಗೆ ಬಂದಿದ್ದು ಕಡೆಯದಾಯಿತು. ಆದರೇನು, ಭಕ್ತ ಪರಾಧೀನನಾದ ಗುರುನಾಥರು, ದೇಹದ ಪರಾಧೀನತೆಯಿಂದ ಮುಕ್ತರಾದ ಮೇಲೆ - ಎಲ್ಲರ  ಮನೆ ಮನಗಳಲ್ಲಿ ಇರುವುದು, ಹಲವೆಡೆ ಸಶರೀರವಾಗಿ ಕಂಡುಬಂದಿರುವುದೂ ಗುರುಲೀಲೆಯ ಮತ್ತೊಂದು ಮುಖವಾಗಿದೆ. ಅನೇಕರಿಗೆ ಗುರುವಿನ ಮರ್ಮದ ಮಾತುಗಳು ಅರ್ಥವಾದರೂ ಏನೂ ಮಾಡಲಾಗದ ಸ್ಥಿತಿ ಇದ್ದರೆ  - ಇನ್ನು ಕೆಲವರಿಗೆ ಹುಟ್ಟು ಸಾವು ಈ ದೇಹಕ್ಕೆ ಗುರುನಾಥರು 'ಸದಾ ನಿಮ್ಮೊಂದಿಗೆ ಇರುತ್ತೇನೆಂದು' ಅಭಯ ನೀಡಿದ್ದಾರಲ್ಲಾ ಎಂದು ನಿಶ್ಚಿಂತರಾಗಿ ಗುರುನಾಥರ ಚಿಂತನೆ, ನಾಮಸ್ಮರಣೆಯಲ್ಲಿ ತೊಡಗಿದವರೂ ಇದ್ದಾರೆ. 


ಎದುರಿಸಲಾಗದ ಸತ್ಯ 


ಎಷ್ಟು ತತ್ವಗಳನ್ನರಿತರೂ, ಘಟನೆಯನ್ನು ಎದುರಿಸುವಲ್ಲಿ, ತಾಯಿಗಿಂತ ಮಿಗಿಲಾದ ಪ್ರೀತಿಯ ಸವಿಯನ್ನು ಅನುಭವಿಸಿ ಅದನ್ನು ಕಳೆದುಕೊಳ್ಳುತ್ತಿದ್ದೇವೆ ಎಂದಾಗ ದುಃಖ ಉಮ್ಮಳಿಸಿ ಬರುವುದು ಸಹಜ. ಆರ್ತರಾಗಿ ಹೋದಾಗಲೆಲ್ಲಾ ತಲೆದಡವಿ ಸಂತೈಸುತ್ತಿದ್ದ ಆ ಜೀವವಿಲ್ಲ ಎಂದಾಗ ದುಃಖವಾಗದೆ ಇರುತ್ತದೆಯೇ? ಗುರುನಾಥರ ವಿಯೋಗದ ದುಃಖ ಹರಿಸಲು ಈ ಒಂದು ಪ್ರಸಂಗ ಸಹಾಯವಾದೀತು. ಗುರುಚರಿತ್ರೆಯಲ್ಲಿ ಒಂದು ಕಡೆ ಬರುವ ಈ ಪ್ರಸಂಗವೆಂದರೆ, ಗುರುಗಳು ತಮ್ಮ ಗಾಣಗಾಪುರ ವಾಸದ ಇಹಲೀಲೆಯನ್ನು ಪೂರೈಸಿ, ಶ್ರೀ ಗಿರಿಗೆ ಹೋಗುವ ವಿಚಾರ ತಿಳಿಸಿ, ನದಿಯ ಸಮೀಪಕ್ಕೆ ತೆರಳುವಾಗ ಅವರ ನಾಲ್ಕು ಜನ ಪ್ರಿಯ ಶಿಷ್ಯರಿರುತ್ತಾರೆ. ಊರ ಹೊರಗಿನವರೆಗೆ ಊರ ಮಂದಿ ಶಿಷ್ಯರೆಲ್ಲಾ ಗುರುವಿನ ಅಗಲಿಕೆಗಾಗಿ ರೋಧಿಸುತ್ತಾ ಬಂದು 'ಗುರುಗಳು ಹೋಗಬಾರದೆಂದು' ವಿನಂತಿಸುತ್ತಾರೆ. ಗುರುಗಳು ಸಮಾಧಾನ ಹೇಳಿ, ನಾನೆಲ್ಲೂ ಹೋಗುವುದಿಲ್ಲ. ಪ್ರತಿನಿತ್ಯ ಮಧ್ಯಾನ್ಹ ಗಾಣಗಾಪುರಕ್ಕೆ ಭಿಕ್ಷೆಗೆ ಬರುತ್ತೇನೆ. ಸದಾ ನನ್ನ ನಿರ್ಗುಣ ಆವಾಸ ಇಲ್ಲಿಯೇ ಎಂದು ಸಂತೈಸಿ ಬೀಳ್ಕೊಡುತ್ತಾರೆ. ಊರಿಗೆ ಬಂದು ಗುರುಮಠಕ್ಕೆ ಬಂದ  ಎಲ್ಲಾ ಶಿಷ್ಯರಿಗೆ ಗುರುಗಳು ಮಠದಲ್ಲಿರುವುದು ಗೋಚರಿಸುತ್ತದೆ. ನಂತರ ಅದೃಶ್ಯರಾಗುತ್ತಾರೆ. ಗುರುನಾಥರ ಇಹಲೀಲಾ ಪರಿಸಮಾಪ್ತಿಯ ವಿಚಾರ ತಿಳಿದ ಶಿವಮೊಗ್ಗದ ಭಜನಾ ಮಂಡಳಿಯ ಭಕ್ತರು, ತುಂಗೆಗೆ ಬಾಗಿನ ನೀಡಲು ಹೋಗಿದ್ದು, ನಂತರ ಭಜನಾ ಮಂದಿರಕ್ಕೆ ಬಂದು ಗುರುನಾಥರಿಗೆ ಭಜನೆ ಮಾಡಿ, ಕೆಲಕಾಲ ಮೌನ ಧ್ಯಾನ ಮಾಡಿದರು. 'ದೇಹಾತೀತರಾದ ಗುರುನಾಥರು ಕರೆದಲ್ಲಿ ಬರುತ್ತಾರೆಂದು' ಗುರುನಾಥರ ಲೀಲೆಯ ಸತ್ಸಂಗ ನಡೆಯಿತು. ಅಂದು ಪ್ರಸಾದ ವಿನಿಯೋಗವಾದಾಗ ಒಂದಾದ ಮೇಲೆ ಒಂದರಂತೆ ಹತ್ತು ಹನ್ನೆರಡು ಪ್ರಸಾದಗಳನ್ನು ಹಂಚಲಾಯ್ತು. ಗುರುನಾಥರ ಬಳಿ ಬಂದ ಎಲ್ಲರಿಗಾಗುವ ವಿಶೇಷ ಅನುಭವಗಳಲ್ಲಿ ಮೇಲಿಂದ ಮೇಲೆ ಹಲವು ರೀತಿಯ ಪ್ರಸಾದವನ್ನು ತರಿಸಿ, ಭಕ್ತವೃಂದಕ್ಕೆ ಹಂಚಿಸುವುದೂ ಒಂದು. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು, ಗುರುನಾಥರು ತಮ್ಮ ಬಂಧುಗಳು ಕರೆದಲ್ಲಿ ಬಂದೇ ತೀರುತ್ತಾರೆ ಎಂಬುದಕ್ಕೆ. 


ದಾರಿ ತೋರಿದ ಗುರುನಾಥರು 


ಗುರುನಾಥರ ಅಗಲಿಕೆಯ ಆಘಾತಕಾರಿಯಾದ ಸುದ್ದಿಯಿಂದ ಬಳಲಿದ ಭಕ್ತೆಯೊಬ್ಬರಿಗೆ ಎರಡು ದಿನಗಳು ಅಳುವುದೊಂದೇ ಕೆಲಸವಾಗಿತ್ತು. ದುಃಖದ ಆವೇಗ, ತನ್ನ ಕೆಲಸ ಕಾರ್ಯಗಳನ್ನೂ ಮರೆಸಿತ್ತು. ದೈನಂದಿನ ಕೆಲಸಗಳಿಂದ ವಿಮುಖರಾದರೆ ಮನೆಯ ಇತರರ ಬೇಕು ಬೇಡಗಳ ಜವಾಬ್ದಾರಿ ಹೊತ್ತ ಇವರ ಕೆಲಸ ಮಾಡುವವರು ಯಾರು - ಸುದ್ದಿ ತಿಳಿಯುತ್ತಿದ್ದಂತೆ ಸಖರಾಯಪಟ್ಟಣಕ್ಕೆ ಹೋಗಿ ಬಂದರೂ ಮನಸ್ಸು ಸ್ಥಿಮಿತವಾಗಿರಲಿಲ್ಲ. 

'ಗುರುನಾಥ ನನಗಿನ್ಯಾರು ಗತಿ' ಎಂದು ಚಿಂತಿಸುತ್ತಾ ದುಃಖದಲ್ಲಿಯೇ ನಿದ್ದೆಯ ಮಂಪರಿಗಿಳಿದಾಗ ಕನಸೊಂದು ಬಿತ್ತು . ಗುರುನಾಥರು ಅವರ ಮನೆಗೆ ಬಂದು ಅವರ ದೇವರ ಮನೆಯ ಮುಂಭಾಗದಲ್ಲಿ ಹಾಕಿದ್ದ ಶ್ರೀ ಸತ್ ಉಪಾಸಿ ಸದ್ಗುರುಗಳ ಭಾವಚಿತ್ರದಿಂದ ಒಂದು ಹೂವನ್ನು ತೆಗೆದುಕೊಟ್ಟರಂತೆ. ಕೂಡಲೇ ಅವರಿಗೆ ಎಚ್ಚರವಾಯಿತು. ಇದೇನು ಹೀಗಾಯ್ತಲ್ಲಾ ಎಂದು ತಿಳಿದವರಲ್ಲಿ ಪ್ರಶ್ನಿಸಿದಾಗ - ಗುರುವಿಗೆ ಅಳಿವಿಲ್ಲ - ಭ್ರಾಂತಿಯಲ್ಲಿ ನಾವು ಕರ್ತವ್ಯ ವಿಮುಖರಾಗಬಾರದು. ಸದ್ಗುರುವಿನ ಅನೇಕ ರೂಪಗಳಿವೆ. ಅದರಲ್ಲಿ ಒಂದನ್ನು ನಿನ್ನ ತೃಪ್ತಿಗಾಗಿ ತೋರಿದ್ದಾರೆ  ಎಂದಾಗ, ಸತ್ ಉಪಾಸಿಗಳ ದರ್ಶನ ಪಡೆದು ನಿತ್ಯ ಜೀವನದಲ್ಲಿ ತೊಡಗಿದರಂತೆ. ಹೀಗೆ ದಾರಿ ತೋರಿದರು ಗುರುನಾಥರು. ಮುಂದೆ ಗುರು ನುಡಿಗಳನ್ನು ಮಲಕು ಹಾಕುತ್ತಾ ಅರ್ಥ ಮಾಡಿಕೊಂಡಿದ್ದರು. 


ಅಲ್ಲ ನಿನಗೇನೂ ಕೊಡಲ್ಲಯ್ಯ 


ಚಿಕ್ಕಮಗಳೂರಿನ ಗುರುಭಕ್ತರು, ಗುರುನಾಥರನ್ನು ಮೊದಲ ಬಾರಿ ಕಂಡಾಗ - 'ಏನು ಬಂದಿರಿ ಏಕೆ ಬಂದಿರಿ' ಎಂದು ಕೇಳಿದಾಗ 'ನಿಮ್ಮೊಂದಿಗಿರಲು' ಎಂದು ಅವರು ಉತ್ತರಿಸಿದ್ದರು. ಭಾವಶುದ್ಧತೆಗೆ ಬೆಲೆ ನೀಡುವ ಗುರುನಾಥರು ಕೊನೆಯ ಘಳಿಗೆಯಲ್ಲಿ ಕರೆಸಿಕೊಂಡು ಸಾಮೀಪ್ಯವನ್ನು ನೀಡಿದ ಈ ಅದ್ಭುತವನ್ನು ಆ ಗುರುಬಂಧು ಹೀಗೆ ಹೇಳುತ್ತಾರೆ. "ಒಮ್ಮೆ ಗುರುನಾಥರ ಬಳಿ ಹೋದಾಗ, ಅವರು ಅದೇಕೋ 'ಅಲ್ಲಯ್ಯಾ ನಿನಗೇನು ಕೊಡಲಿ ನಾನು, ಏನಾದರೂ ಕೊಡಬೇಕಲ್ಲಯ್ಯ" ಎಂದು ಕೇಳಿದರಂತೆ. ಅದಕ್ಕೆ ಇವರು 'ಏನೂ ಬೇಡ ಗುರುಗಳೇ, ಈ ನಿಮ್ಮ ಮೇಲಿನ ಪ್ರೀತಿ, ಚಂಚಲವಾಗದೆ ಸದಾ ನಿಮ್ಮ ಮೇಲಿರುವಂತೆ ಅನುಗ್ರಹಿಸಿ'- ಎಂದಿದ್ದರಂತೆ. ಆ ಕೊನೆಯ ಘಳಿಗೆಯಲ್ಲೂ, ದೈಹಿಕ ಯಾತನೆಯಲ್ಲಿಯೂ ನನ್ನ ಮರೆಯಲಿಲ್ಲ. ಆ ರಾತ್ರಿ, ಫೋನು ಮಾಡಿ ಕರೆಸಿದರು. ಜೊತೆಯಲ್ಲಿ ಊಟ ಮಾಡಿದರು. ನಾನು ತಂಡ ಚಿಪ್ಸನ್ನು ಎಲ್ಲರಿಗೂ ಕೊಡೆಂದರು. ಅಂಗಾಲಿನಿಂದ ತಲೆಯವರೆಗೆ ಒತ್ತಲು ತಿಳಿಸಿದರು. ಗುರುನಾಥರಿಗೆ ಅತಿಯಾದ ಕೆಮ್ಮಿತ್ತು. 'ಗುರುಗಳೇ ಇದಕ್ಕೇನು ಔಷಧಿ ಮಾಡಬೇಕೆಂದು' ಕೇಳಿದಾಗ - ಸರಳವಾಗಿ 'ಸೌತೆಕಾಯಿ ತಿರುಳು' ಎಂದರು. ಕೂಡಲೇ ಸೌತೆಕಾಯಿ ತರಿಸಲಾಯ್ತು. ಸೌತೆಕಾಯನ್ನೆಲ್ಲಾ ನಾವು ತಿಂದೆವು. ಅದರ ತಿರುಳನ್ನು ಗುರುನಾಥರಿಗೆ ಅಲ್ಲಿದ್ದ ನಾವು ಗುರುಬಂಧುಗಳು ತಿನ್ನಿಸಿದೆವು. ಗುರುನಾಥರ ಸಂಗದಲ್ಲಿ ಸಮಯ ಜಾರುತ್ತಿದ್ದುದೇ ಅರಿವಾಗಿರಲಿಲ್ಲ. ಅಷ್ಟು ಹೊತ್ತಿಗೆ ಇನ್ನೊಬ್ಬ ಗುರುಬಂಧುವಿಗೆ 'ಇವರನ್ನು ಬಸ್ ಸ್ಟ್ಯಾಂಡಿಗೆ ಬಿಟ್ಟು ಬಿಡಯ್ಯಾ' ಎಂದು ನನ್ನನ್ನು ಆಶೀರ್ವದಿಸಿ ಕಳಿಸಿದರು - ಆ ಲೀಲಾ ನಾಟಕ ಸೂತ್ರಧಾರಿಯು 'ನಿಮ್ಮೊಂದಿಗಿರಲು ಬಂದೆ' ಎಂದ ನನ್ನ ಮನದಾಸೆಯ ಮಾತನ್ನು ಹೀಗೆ ಕರೆಸಿಕೊಂಡು ನಡೆಸಿದ್ದಾರೆಂದು ನನಗಾಗ ತಿಳಿಯಲೇ ಇಲ್ಲ' ಎಂದು ಗುರುನಾಥರ ಅಗಲಿಕೆಯ ಕೊನೆ ಘಳಿಗೆಯ ದರ್ಶನದ ವಿಚಾರವನ್ನು ನಿರ್ವಿಕಾರ ಭಾವದಿಂದ ಅವರು ಹಂಚಿಕೊಂಡರು. ಹೀಗೆ ಗುರುನಾಥರು ಅವರವರ ಬೇಡಿಕೆಗನುಗುಣವಾಗಿ ಅವರ ಬೇಡಿಕೆಯನ್ನು ಪೂರೈಸಿ, ಮಾತು ನಡೆಸಿಕೊಂಡ ಮಹಾತ್ಮರಾದರು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

No comments:

Post a Comment