ಒಟ್ಟು ನೋಟಗಳು

Tuesday, December 6, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 63


    ಗ್ರಂಥ ರಚನೆ - ಚರಣದಾಸ 


ಮೆದುಳು ಸಮಸ್ಯೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಚರಣದಾಸನಾದ ನನ್ನ ಸೋದರಿಯೊಬ್ಬರಿಗೆ ಆಗಾಗ್ಗೆ ವಿಪರೀತವಾದ ಬೆನ್ನು ನೋವು ಹಾಗೂ ತಲೆ ನೋವು ಬರುತ್ತಿತ್ತು. ವೈದ್ಯರ ಔಷಧೋಪಚಾರ ನಾಟುತ್ತಿರಲಿಲ್ಲ. ತಲೆಯನ್ನು ಕೈಯಲ್ಲಿ ಮುಟ್ಟಲೂ ಆಗದಷ್ಟು ನೋವಿರುತ್ತಿತ್ತು. ಈ ಕುರಿತು ಎಕ್ಸ್-ರೇ ತೆಗೆಸಿ ನೋಡಿದಾಗ ಮೆದುಳು ಊತ ಬಂದಿದೆ ಎಂದು ತಿಳಿದು ಬಂತು. 

ಈ ಕುರಿತು ಗುರುಮಹಾರಾಜರಲ್ಲಿ ವಿನಂತಿಸಿದಾಗ ಧೈರ್ಯ ತುಂಬಿದ ಅವರು ನೀಡಿದ ಔಷಧಿ ವೈದ್ಯಲೋಕವನ್ನು ವಿಸ್ಮಯಗೊಳಿಸುವಂತಿತ್ತು. ದಾರಿಯಲ್ಲಿ ಹಾದು ಹೋಗುತ್ತಿದ್ದ ಎಮ್ಮೆಗಳಿಗೆ ಬಾಳೆಹಣ್ಣು ಎಸೆಯಲು ಹೇಳಿದರು. ಅಕ್ಕ ಹಾಗೆಯೇ ಮಾಡಲು ಅವಳ ತಲೆನೋವು ಸಂಪೂರ್ಣ ಗುಣವಾಯಿತು. ಇಂದಿಗೂ ಆಕೆ ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ. 

ಒಟ್ಟು ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳಿಂದ ಹೈರಾಣಾಗಿದ್ದ ಸೋದರಿಯೊಬ್ಬರು ಗುರುವಿನ ಮುಂದೆ ತನ್ನ ದುಃಖವನ್ನು ನಿವೇದಿಸಿದಾಗ, ಗುರುನಾಥರು "ಸುಮ್ಮನಿರಮ್ಮಾ, ನಿನ್ನ ಯಜಮಾನ ಮನೆ ಕಟ್ಟುತ್ತಾನೆ. ನಾನೇ ನಿಂತು ಗೃಹಪ್ರವೇಶ ಮಾಡಿಸುತ್ತೇನೆ" ಎಂದು ಅಭಯವಿತ್ತರು. 

ಅದು ಬಹುಶಃ 2006-07 ರ ಸಮಯ. ಇದ್ದಕ್ಕಿದ್ದಂತೆ ಚರಣದಾಸನಾದ ನನ್ನನ್ನು ಶಿವಮೊಗ್ಗದ ಭಕ್ತರೋರ್ವರ ಕಾರಿನಲ್ಲಿ ಎಲ್ಲಾ ಪರಿಕರಗಳೊಂದಿಗೆ ಬೆಂಗಳೂರಿಗೆ ಕಳಿಸಿದರು. ನಾವು ಬೆಂಗಳೂರಿನ ನಾಗರಬಾವಿಯಲ್ಲಿರುವ ಸೋದರಿಯ ಮನೆ ತಲುಪಿದಾಗ ಆ ಮನೆಯಲ್ಲಿ ಇನ್ನೂ ನೀರಿನ ಪೈಪ್ ಜೋಡಣಾ ಕಾರ್ಯ ನಡೆದಿತ್ತು. 

ನಾವು ಎಲ್ಲಾ ಗುರುಬಂಧುಗಳೊಂದಿಗೆ ಅಲ್ಲಿಗೆ ತೆರಳಿ ಗೃಹಪ್ರವೇಶ ಇಂದೇ ಮಾಡಬೇಕೆಂಬ ಗುರುವಿನ ಆದೇಶವನ್ನು ತಿಳಿಸಿದೆವು. 

ಗಾಬರಿಯಾದ ಭಾವನವರು ತಕ್ಷಣವೇ ಮನೆ ನಿರ್ಮಾಣ ಕಾರ್ಯ ನಿಲ್ಲಿಸಿ ಕೆಳ ಅಂತಸ್ತನ್ನು ಪೂಜೆಗೆ ಅನುವು ಮಾಡಿಕೊಟ್ಟರು. ಅರುಣಪಾರಾಯಣ, ಪಾದುಕಾಪೂಜೆ, ನಂತರ ಗುರುವಿನ ಅಣತಿಯಂತೆ ರಾತ್ರಿ 10:30ಕ್ಕೆ ಗೃಹಪ್ರವೇಶ ಸಾಂಗವಾಗಿ ನೆರವೇರಿತು. ನಂತರ ಮನೆಗೆ ನೀರಿನ ಪೈಪ್ ಜೋಡಣೆ ಕಾರ್ಯ ಆರಂಭವಾಯಿತು. 

ವಿಶೇಷವೆಂದರೆ ನಮ್ಮ ಭಾವನವರು ಗುರುವಿನ ಸಮ್ಮತಿ ಪಡೆದು ಆ ಮನೆಯ ಜಾಗ ಕೊಂಡುಕೊಂಡ ದಿನ ಅಲ್ಲಿ ಗುದ್ದಲಿ ಪೂಜೆ ನಡೆದ ದಿನ ಹಾಗೂ ಗೃಹ ಪ್ರವೇಶವಾದ ದಿನ ಒಂದೇ ಆಗಿರುವುದು. ಅದು ಜನ ಸಾಮಾನ್ಯರಲ್ಲಿ ನಿಷಿದ್ಧವೆನಿಸಿದ ಮಂಗಳವಾರದಂದು. 

ಆಗ ಸೋದರಿ ಚರಣದಾಸನಾದ ನನ್ನನ್ನು ಕರೆದು, "ಗುರು ಇಂದಿಗೂ ನುಡಿದಂತೆ ನಡೆವವನು ಕಣೋ, ಮೂರ್ನಾಲ್ಕು ವರ್ಷದ ಹಿಂದೆ ನನಗೆ ಅಭಯ ನೀಡಿದ್ದು, ನಾನೇ ಅದನ್ನು ಮರೆತಿದ್ದೆ. ಆದರೆ ಗುರು ಮಾತು ಉಳಿಸಿದರು ಕಣೋ" ಎಂದು ಆನಂದದಿಂದ ಕಣ್ತುಂಬಿಕೊಂಡಳು....,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment