ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 75
ಗ್ರಂಥ ರಚನೆ - ಚರಣದಾಸ
ನೆಪಮಾತ್ರ ದೇಹ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೆ ಗುರುನಾಥರ ಪಾದಗಳೆರಡೂ ಸುಟ್ಟು ಹೋಗಿದ್ದು ಕಾಲಿಗೆ ಬಟ್ಟೆ ಕಟ್ಟಿ, ದಿಂಬಿನ ಮೇಲೆ ನಡೆದಾಡುವ ಪರಿಸ್ಥಿತಿ ಇತ್ತು. ನಾವೆಲ್ಲರೂ ಅವರನ್ನು ಹೊತ್ತುಕೊಂಡೇ ಓಡಾಡುತ್ತಿದ್ದೆವು. ಒಮ್ಮೆ ರಾತ್ರಿ ಒಂದು ಗಂಟೆಗೆ ದಿಢೀರನೆ ಎದ್ದ ಗುರುನಾಥರು ಬರಿಗಾಲಿನಲ್ಲಿ ಎದ್ದು ಹೋಗಿ ಎಂದಿನಂತೆ ಯಾರದೇ ಸಹಕಾರವಿರದೆ ಬಂದು ಮಲಗಿದ್ದು ನೋಡಿ ನಮಗೆಲ್ಲ ಆಶ್ಚರ್ಯವಾಯಿತು.
ಗುರುವಿಗೆ ದೇಹವೆಂಬುದು ಕೇವಲ ನೆಪಮಾತ್ರವಾಗಿದ್ದು ಅದು ನಂಬಿ ಬಂದ ಭಕ್ತರ ಖಾಯಿಲೆ ಗುಣಪಡಿಸಲೋಸುಗ ಬಳಸಲ್ಪಡುತ್ತಿರುತ್ತದೆ.
ಗುರುನಾಥರು ಆಗಾಗ್ಗೆ "ನನಗೆ ಕಾಲುನೋವು, ತಲೆಭಾರ ಇತ್ಯಾದಿಗಳನ್ನು ಹೇಳಿ" ಕೆಲ ಭಕ್ತಾದಿಗಳಿಂದ ತಲೆ, ಕಾಲು, ಒತ್ತಿಸಿಕೊಳ್ಳುತ್ತಿದ್ದರು.
ಅವರುಗಳು ಹೊರಟು ಹೋದ ಮೇಲೆ, "ಅಯ್ಯಾ ಕ್ಯಾನ್ಸರ್ ನಂತಹ ಖಾಯಿಲೆಯನ್ನು ವಾಸಿಮಾಡುವ ಶಕ್ತಿ ಈ ಈಶ್ವರ ನೀಡಿರುವಾಗ ನಂಗೆಂತದಯ್ಯಾ ಖಾಯಿಲೆ? ಅವರ ಖಾಯಿಲೆ ವಾಸಿಯಾಗಲಿ ಎಂದು ಕಾಲೊತ್ತು ಅಂದೆ ಕಣಯ್ಯ" ಅಂತಿದ್ರು.
ಗುರು ಕರುಣೆ, ಪ್ರೀತಿ ಎಂಬುದು ಜಗದ ಎಲ್ಲ ಪ್ರೀತಿ ಕರುಣೆಗಳಿಗಿಂತ ಮಿಗಿಲಾದುದು ಎನ್ನಲು ಈ ಕೆಲ ಘಟನೆಗಳು ನಿದರ್ಶನ.
ತುಮಕೂರು ಸಮೀಪದ ಮಠದಲ್ಲಿ ವಾಸವಿದ್ದ ಖ್ಯಾತ ಯತಿವರೇಣ್ಯರೊಬ್ಬರು ಆಗಾಗ್ಗೆ ಗುರುನಿವಾಸಕ್ಕೆ ಬಂದು ಹೋಗುತ್ತಿದ್ದರು. ಗುರುನಾಥರು ಹಾಗೂ ನಾವು ಕೂಡ ಯತಿಗಳ ದರ್ಶನಕ್ಕೆ ಅಲ್ಲಿಗೆ ಹೋಗುವ ಪರಿಪಾಠವಿತ್ತು. ದೇಹಭಾವವನ್ನು ಸಂಪೂರ್ಣವಾಗಿ ತೊರೆದಿದ್ದ ಆ ಯತಿಗಳಿಗೆ ತನ್ನ ಬಟ್ಟೆ ಹರಿದುಹೋದ ಬಗ್ಗೆಯೂ ಗಮನವಿರಲಿಲ್ಲ.
ಆದರೆ ಸರ್ವಾಂತರ್ಯಾಮಿಯಾದ ಗುರುನಾಥರು ಕೂಡಲೇ ಯತಿಗಳಿಗೆ ಹಾಗೂ ಮಠಕ್ಕೆ ಬೇಕಾದ ವಸ್ತು ಹಾಗೂ ವಸ್ತ್ರಗಳನ್ನು ಸಕಾಲದಲ್ಲಿ ಕಳಿಸಿಕೊಡುತ್ತಿದ್ದರು. ಸನ್ಯಾಸಿಗಳು ಸದಾ ಸಾಧನಾ ನಿರತರಾಗಿರಬೇಕೆಂದು ಅಪೇಕ್ಷಿಸುತ್ತಿದ್ದ ನಮ್ಮ ಗುರುನಾಥರು ಅಂತಹ ಸಾಧಕರನ್ನು ಕಣ್ಣ ರೆಪ್ಪೆಯಂತೆ ಕಾಯುತ್ತಿದ್ದರು.
ಆ ಯತಿಗಳು ಒಮ್ಮೆ ವಿಪರೀತ ಕಾಲು ನೋವಿನಿಂದ ಬಳಲತೊಡಗಿ ಇನ್ನೇನು ದೇಹ ಬಿಡುವ ಹಂತ ತಲುಪಿದ್ದರು. ಈ ವಿಷಯ ತಿಳಿದ ಗುರುನಾಥರು ಕೂಡಲೇ ಅಲ್ಲಿಗೆ ಬಂದು ಯತಿಗಳ ದೇಹವವೆಲ್ಲವನ್ನೂ ಸ್ಪರ್ಶಿಸಿ ಅಲ್ಲಿಂದ ಹೊರಟು ಬಂದು ಬೆಂಗಳೂರಿನ ಗುರುಭಕ್ತರ ಮನೆಯಲ್ಲಿ ಮಲಗಿದರು. ಮಲಗಿ ಕೆಲ ಕ್ಷಣದಲ್ಲೇ ವಿಪರೀತವಾಗಿ ಯಾತನೆಪಡತೊಡಗಿದರು. ಸುಮಾರು ಎರಡು ಗಂಟೆಗಳ ಕಾಲ ನೋವನ್ನು ಅನುಭವಿಸಿದ ಗುರುನಾಥರು ಆ ನಂತರ ನಿಧಾನವಾಗಿ ಎದ್ದು ಬಿಸಿನೀರಿನ ಸ್ನಾನ ಮಾಡಿಸಲು ಹೇಳಿದರು. ಸ್ನಾನದ ನಂತರ ಮತ್ತೆ ಆರಾಮವಾದರು. ಅದೇ ಕಾಲಕ್ಕೆ ಸರಿಯಾಗಿ ಆ ಯತಿಗಳೂ ಸ್ವಸ್ಥರಾದರು......,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment