ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 77
ಗ್ರಂಥ ರಚನೆ - ಚರಣದಾಸ
ಸಂಸ್ಕಾರ - ಸನ್ಯಾಸ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ಎಂದೂ ಯಾರಿಗೂ ನೀ ಸಂಸಾರಿ ಆಗಬೇಡ - ಸನ್ಯಾಸಿಯಾಗಿರು ಎಂದು ಉಪದೇಶಿಸುತ್ತಿರಲಿಲ್ಲ. ಬದಲಿಗೆ ಎಲ್ಲವನ್ನು ಅನುಭವಿಸಿ ಗೆದ್ದು ಮುನ್ನೆಡೆವ ದಾರಿ, ಧೈರ್ಯವನ್ನು ಕಲಿಸುತ್ತಿದ್ದರು. ಅದುವೇ ನನ್ನೊಡೆಯನ ವೈಶಿಷ್ಠ್ಯ.
ಒಮ್ಮೆ ಗುರುನಿವಾಸ ಭಕ್ತ ಜನರಿಂದ ತುಂಬಿತ್ತು. ಅದು ಮಧ್ಯಾನ್ಹವೆನಿಸುತ್ತದೆ. ಎಂದಿನಂತೆ ಅನ್ನ ದಾಸೋಹ ನಡೆದಿತ್ತು. ಗುರುಗಳು ಒಂದು ಕುರ್ಚಿಯಲ್ಲಿ ಮನೆ ಮೆಟ್ಟಿಲಿಗೆ ಎದುರಾಗಿ ಕುಳಿತಿದ್ದರು.
ಆಗ ಒಬ್ಬ ಕೂಲಿ-ನಾಲಿ ಮಾಡಿ ಬದುಕುವ ಬಡ ಹೆಂಗಸೊಬ್ಬಳು ಒಳ ಬಂದು ಗುರುಪಾದಗಳಿಗೆ ನಮಿಸಿ "ಬುದ್ದೀ.... ನನ್ ಗಂಡಂಗೆ ಮೈಗೆ ಉಷಾರಿಲ್ಲ...." ಎಂದು ಕರ ಜೋಡಿಸಿದಳು. ಅದಕ್ಕೆ ಗುರುಗಳು ಜೋರಾಗಿ "ಏನ್, ನೀ ಅವ್ನಿಗೆ ಬೈತೀಯಾ? ಅಂತೀಯಾ? ಆಕ್ಷೇಪಿಸ್ತೀಯಾ ..... ಅಂದಮೇಲೆ ಅವನು ಹೇಗೆ ನಿಂಗ್ ಗಂಡ ಆಗ್ತಾನೆ?" ಎಂದರು.
ಆಕೆ ಕೂಡಲೇ "ನಾ ಯಾಕೆ ಅವನಿಗೆ ಬೈಲಿ ಬುದ್ದೀ? ಅವನೇ ನನ್ನ ದೇವರು ಸರ್ವಸ್ವ... " ಎಂದಳು ಮುಗ್ಧವಾಗಿ.
ನಂತರ ಗುರುಗಳು ನೀಡಿದ್ದನ್ನು ತಗೊಂಡು ಮತ್ತೆ ನಮಸ್ಕರಿಸಿ ಆನಂದದಿಂದ ತಿರುಗಿ ಹೊರಟಳು.
ಆಮೇಲೆ ಗುರುನಾಥರು ಅಲ್ಲಿದ್ದವರನ್ನು ಉದ್ದೇಶಿಸಿ "ನೋಡ್ರಮ್ಮಾ.. ಆಕೆ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದರೂ ಆಕೆಗೆ ಗಂಡನೇ ಸರ್ವಸ್ವ ಅಂತಿದ್ದಾಳೆ. ಆದ್ರೆ ಎಲ್ಲಾ ಅನುಕೂಲವಿರೋ ನೀವುಗಳು ಗಂಡ ಸರಿ ಇಲ್ಲ, ಹಂಗೆ-ಹಿಂಗೆ ಅಂತ ಮಾತು ಆಕ್ಷೇಪಣೆ ಹೊತ್ತು ಬರ್ತೀರಾ ಇಲ್ಲಿಗೆ ಅಲ್ವೇ? ಏನಂದುಕೊಂಡಿದೀರಿ ಜೀವನ ಅಂದ್ರೆ? ಹೆಣ್ಣು ಅಂದ್ರೆ ಹೆಂಗಿರಬೇಕು ಗೊತ್ತೇ... ? ಗಂಡಂಗೆ ಒಳ್ಳೆ ಹೆಂಡತಿಯಾಗಿ ಮಕ್ಕಳಿಗೆ ಒಳ್ಳೆ ತಾಯಾಗಿ ಅವರೆಲ್ಲರನ್ನೂ ಎಂದೂ ಏನೂ ಆಕ್ಷೇಪಿಸದಂತೆ ಬಾಳಬೇಕು. ತಂದೆ ತಾಯಿಗಳು ಮಕ್ಕಳನ್ನು ಗೆದ್ದು ಬರಬೇಕು ತಿಳಿಯಿತೇ?" ಎಂದು ಪ್ರಶ್ನಿಸಿದ್ದರು.
ಅಂತೆಯೇ ಮಕ್ಕಳು ಗುರುನಿವಾಸಕ್ಕೆ ಹೋದ್ರೆ "ನೋಡ್ರಯ್ಯಾ, ತಂದೆ-ತಾಯಿನ ಏನೂ ಅನ್ನಬೇಡಿರಯ್ಯಾ. ಅವರಿಂದಾಗಿಯೇ ನಿಮಗೆ ಈ ದೇಹ ದೊರಕಿದೆ. ಅವರು ಇರೋವಾಗ ಚಂದಾಗಿ ನೋಡ್ಕೊಳ್ಳಿ. ಸತ್ತ ಮೇಲೆ ವಡೆ ಮಾಡಿದ್ರೇನು ಉಪಯೋಗ ಅಲ್ಲವೇ... ಎಂದು ಹೇಳುತ್ತಿದ್ದರು.
ಅದೇ ರೀತಿ ಗಂಡಸರಿಗೆ, "ಹೆಂಡತಿ, ಮಕ್ಕಳನ್ನ ಚೆನ್ನಾಗಿ ನೋಡ್ಕೊಬೇಕಪ್ಪಾ, ಅಂದ್ರೆ ಆಸ್ತಿ ಮಾಡಿಡೋದಲ್ಲ... ಬದಲಿಗೆ ಅವರಿಗೆ ಉತ್ತಮ ಸಂಸ್ಕಾರ-ಧರ್ಮ ಮಾರ್ಗ ತಿಳಿಸಿ ನೆಮ್ಮದಿ ಕೊಡಬೇಕು ತಿಳೀತೇ" ಅನ್ನುತ್ತಿದ್ದರು.
ಈ ಎಲ್ಲ ಮಾತುಗಳು ಪ್ರತಿಯೊಬ್ಬರಿಗೂ "ಗುರುಗಳು ನಂಗೇ ಹೇಳುತ್ತಿದ್ದಾರೆ" ಅನ್ನಿಸುವಂತೆ ಮಾಡುತ್ತಿತ್ತು.
ಒಮ್ಮೆ ಹೀಗೆ ಮಾತನಾಡುತ್ತಾ ಸ್ತ್ರೀ ಧಾರ್ಮ ಜಗತ್ತಿನಲ್ಲಿ ಅತ್ಯುನ್ನತವಾದದ್ದು, ಅತಿ ಶ್ರೇಷ್ಠವಾದದ್ದು ಕಣ್ರಪ್ಪಾ ... ನಾಳೆ ಎಂಬುದನ್ನು ಗುರು ನಿಶ್ಚಯ ಮಾಡಿರುವನು. ಆದ್ರಿಂದ ನಿನ್ನ ನಾಳೆಗಳ ಚಿಂತೆ ಬಿಟ್ಟು ವರ್ತಮಾನದಲ್ಲಿ ಬದುಕಬೇಕು.
ಪ್ರತಿನಿತ್ಯ ಪ್ರತೀ ಕಾರ್ಯವನ್ನು ಗುರುವಿಗೆ ಅರ್ಪಿಸಿ ಇದ್ಯಾವುದೂ ನಮ್ಮದಲ್ಲವೆಂಬ ಭಾವಾನ ಗಟ್ಟಿಗೊಳಿಸಿ ಮುನ್ನಡಿಯಬೇಕು...
ಗುರು ವ್ಯಾಪಾರಕ್ಕಲ್ಲ, ಪ್ರಚಾರಕ್ಕಲ್ಲ, ನಿತ್ಯ ಸಾಧನೆಗಾಗಿ... ಪ್ರತಿ ನಿತ್ಯವೂ ಗುರು ಮಾರ್ಗದಲ್ಲಿ ಸಾಗಬೇಕಯ್ಯಾ.... ಪ್ರತಿಯೊಂದನ್ನೂ ನಿಂತು ನಿಂತು ನೋಡಬೇಕು, ವಿಚಾರ ಮಾಡಿ ಮುಂದುವರಿಯಬೇಕು, ಆ ವಿಚಾರ ಜ್ಞಾನವೇ ಗುರು, ದೇಹವಲ್ಲ ತಿಳಿಯಿತೇ ಎಂದು ಕೇಳಿದ್ದರು. ಮತ್ತೂ ಮುಂದುವರೆದು..
ನಮ್ಮ ಹೆತ್ತವರು ನಮ್ಮನ್ನು ಬೆಳೆಸೋಕೆ ಎಷ್ಟು ಕಷ್ಟಪಟ್ಟಿರಬಹುದಲ್ಲವೇ.... ...
ಆ ಋಣಾನ ಹೆಂಗೆ ತೀರಿಸಬೇಕಂತ ಯೋಚಿಸಬೇಕಾದದ್ದು ನಮ್ಮ ಧರ್ಮವಾಗಬೇಕು. ತಂದೆ ತಾಯಿ ಹಾಗೂ ಗುರುವಿನ ಹೆಸರನ್ನು ಸುಮ್ಮನೆ ಬಳಸೋಕೂ ಯೋಚಿಸಬೇಕಪ್ಪಾ....
ನಮ್ಮ ಉತ್ತಮ ನಡವಳಿಕೆಯಿಂದ ಯಾರಿಗೂ ನೋವಾಗದಂತೆ ಬಾಳಿ ತನ್ಮೂಲಕ ನಮ್ಮ ತಂದೆ ತಾಯಿ ಗುರು ಯಾರೆಂದು ತೋರಿಸಬೇಕು.
ಹೀಗೆ ಮಾಡ್ತಾ ಮಾಡ್ತಾ ಮನೋ ಶುಭ್ರತೆಯನ್ನು ಕಾಣಲು ನಾವೇನು ತ್ಯಾಗ ಮಾಡಬೇಕು ಅಂತ ತಿಳಿಬೇಕು. ಇದೆಲ್ಲಕ್ಕೂ ಸಂಸ್ಕಾರವಿರಬೇಕು. ಅದು ಜನ್ಮಾಂತರದಿಂದ ಬರಬೇಕು.
ಆ ದಿಕ್ಕಿನಲ್ಲಿ ನಮ್ಮನ್ನು ಕರೆದೊಯ್ಯುವನೇ ಗುರು... ಗೊತ್ತಾಯಿತೇ?
ಈ ರೀತಿ ಬದುಕುವುದಕ್ಕೆ ಭೋಗ ಸನ್ಯಾಸ ಅಂತಾರಪ್ಪಾ. ಅದರಿಂದ ನಮಗೆ ಕ್ರಮೇಣ ದೇಹ ಸನ್ಯಾಸ ಮತ್ತು ಜ್ಞಾನ ಸನ್ಯಾಸ ಲಬ್ಧವಾಗಬೇಕು.
ಒಂದೇ ಮಾತಿನಲ್ಲಿ ಹೇಳೋದಾದ್ರೆ ಈ ಕಲಿಯುಗ ಅಂದ್ರೆ ಕಲಿಯುವ ಯುಗ ಅಂತ ಅರ್ಥ.. ಅಂದ್ರೆ ಎಂದೆಂದೂ ವಿದ್ಯಾರ್ಥಿಯಾಗಿರು ಎಂದಷ್ಟೇ... ಅದಕ್ಕೆ... ಒಂದು ಕ್ಷಣವನ್ನು ಹಾಳು ಮಾಡಬೇಡಿ. ಈ ಕಾಲ ಮತ್ತೆ ಸಿಗೋದಿಲ್ಲಪ್ಪಾ ಅರ್ಥವಾಯಿತೇ.. ಎಂದು ಏರು ಧ್ವನಿಯಲ್ಲಿ ಕೇಳಿ ಎಲ್ಲಾ ವಯೋಮಾನದವರಿಗೂ ಬದುಕಿನ ಅರ್ಥ ಸಾರ್ಥಕತೆಯನ್ನು ತಿಳಿಸುತ್ತಿದ್ದ ಆ ನನ್ನೊಡೆಯನಿಗೆ ತಿರುಗಿ ನಾವೇನು ನೀಡಬೇಕೆಂದು ಯೋಚಿಸಬೇಕಾದದ್ದು ಪ್ರತಿಯೊಬ್ಬನ ಧಾರ್ಮ ತಾನೇ?......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment