ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 64
ಗ್ರಂಥ ರಚನೆ - ಚರಣದಾಸ
ಗುರುನಿವಾಸದಲ್ಲಿ ನಿಧಿ ಸಿಕ್ಕ ಕತೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಘಟನೆ ಚರಣದಾಸನಾದ ನಾನು ಸಖರಾಯಪಟ್ಟಣಕ್ಕೆ ಬರುವ ಮುನ್ನವೇ ನಡೆದಿದ್ದು, ಗುರುಗಳೇ ಸ್ವತಃ ತಿಳಿಸಿದ್ದರಿಂದ ಇಲ್ಲಿ ದಾಖಲಿಸುತ್ತಿದ್ದೇನೆ.
ಗುರುಗಳಿಗೆ ಎರಡು ಮನೆಗಳಿದ್ದು ಹೊಸ ಮನೆಯನ್ನು ಗುರುನಾಥರೇ ಕಟ್ಟಿಸಿದ್ದು, ಒಮ್ಮೆ ಗುರುನಾಥರು ಎಲ್ಲಿ ದೇಹಾಂತ್ಯಗೊಂಡರೋ ಆ ಕೋಣೆಯ ಬಾಗಿಲಿರುವಲ್ಲಿ ಗುಂಡಿ ತೋಡುತ್ತಿದ್ದ ಪುಟ್ಟಪ್ಪ ಎಂಬಾತನನ್ನು ಕರೆದ ಗುರುನಾಥರು "ನೀ ಅಗೆಯುತ್ತಿರುವಲ್ಲಿ ಬಂಗಾರದ ನಾಣ್ಯ ಸಿಗುವುದು. ಅದರಲ್ಲಿ ನನಗೆ ಪೂಜೆಗೆ ಒಂದೆರಡನ್ನು ನೀಡಿ ಉಳಿದುದನ್ನು ನೀ ತೆಗೆದುಕೋ" ಎಂದಿದ್ದರು.
ಅವರೆಂದಂತೆಯೇ ನಿಧಿ (ಬಂಗಾರದ ನಾಣ್ಯ) ಸಿಕ್ಕಿತು. ಆತ ಯಾರಿಗೂ ತಿಳಿಸದೇ ಅದನ್ನು ತನ್ನ ಮನೆಗೆ ತೆಗೆದುಕೊಂಡು ಒಯ್ದನು. ಆದರೆ ಇದೆಲ್ಲದರ ಅರಿವಿದ್ದ ಗುರುಗಳು ಮೌನವಾಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಪುಟ್ಟಪ್ಪನ ಎರಡು ಹೆಣ್ಣು ಮಕ್ಕಳು ಲಾರಿ ಅಡಿಗೆ ಸಿಕ್ಕು ಮೃತರಾದರು. ಇದರಿಂದ ಆಘಾತಕ್ಕೆ ಒಳಗಾದ ಆತ ನೇರವಾಗಿ ಗುರುನಿವಾಸಕ್ಕೆ ಬಂದು ಗುರುವಿನಲ್ಲಿ ತಪ್ಪೊಪ್ಪಿಕೊಂಡನು.
ಆಗ ಗುರುನಾಥರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಅವನಿಗೆ ಕೆಲಸ ನೀಡಿದರು. ಈ ಘಟನೆ ಕುರಿತು ಪುಟ್ಟಪ್ಪನು ನನ್ನಲ್ಲಿ ಹೇಳುತ್ತಾ: "ಅಪ್ಪಾ.. ನಿಧಿ ಮಾತ್ರ ಸಿಗಬಾರದು ಜೀವನದಲ್ಲಿ... " ಎಂದು ಕೈ ಮುಗಿಯುತ್ತಿದ್ದ ಅವನ ನೋವಿನ ಕತೆ ಇಂದಿಗೂ ಮನದಲ್ಲಿ ಮೂರ್ತಿವೆತ್ತಂತಿದೆ.
ಅಪಘಾತದಿಂದ ತಪ್ಪಿಸಿದ್ದು
ಇದು ನಡೆದದ್ದು ಬಹುಶಃ 2006-07 ರ ಸಮಯದಲ್ಲಿ. ಪರಮ ಗುರುಭಕ್ತೆಯಾದ ಓರ್ವ ಮಹಿಳೆ ಎಂದಿನಂತೆ ತನ್ನ ಒಬ್ಬಳೇ ಮಗಳನ್ನು ಕಾಲೇಜಿಗೆ ಸಖರಾಯಪಟ್ಟಣದಿಂದ ಚಿಕ್ಕಮಗಳೂರಿಗೆ ಕಳಿಸಿ ಮನೆಯಲ್ಲಿದ್ದರು.
ಆಗ ದಿಢೀರನೆ ಗುರುನಾಥರು ಆಕೆಗೆ ಕರೆ ಮಾಡಿ "ಈ ಕ್ಷಣವೇ ಸಮೀಪದ ಈಶ್ವರ ಹಾಗೂ ಅಲ್ಲೇ ಇರುವ ಅರಳಿ ಮರ ಮತ್ತು ಸನ್ಯಾಸಿಗಳ ಸಮಾಧಿಗೆ ಹಾಲು ಸಕ್ಕರೆ ಹಾಕಿ ಬರುವಂತೆ" ತಿಳಿಸಿದರು.
ಸರಿ ಸುಮಾರು ಅದೇ ಸಮಯಕ್ಕೆ ಅವರ ಮಗಳಿಗೆ ಅಪಘಾತವಾಗಿ ಸಾವಿನಂಚಿನಿಂದ ಕೂದಲೆಳೆಯಲ್ಲಿ ಪಾರಾದಳು. ಸದಾ ದಟ್ಟವಾಹನ ಸಂದಣೆ ಇರುತ್ತಿದ್ದ ಆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದಾಗ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸಿದ್ದು ನಿಜಕ್ಕೂ ಗುರುಕರುಣೆಯ ಸಂಕೇತ.
ಆ ಮಹಿಳೆ ಗುರುವಿನ ಅಣತಿಯಂತೆ ಮಾಡಿ ಮನೆ ತಲುಪುವಷ್ಟರಲ್ಲಿ ಈ ಅಪಘಾತದ ಸುದ್ದಿ ಅವರಿಗೆ ತಲುಪಿತ್ತು. ಆ ಹೆಣ್ಣು ಮಗಳು ಇಂದಿಗೂ ಆರೋಗ್ಯದಿಂದ ಇದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವರು.
ಹಾಗೆಯೇ ಗುರುನಾಥರು ದೇಹ ಬಿಡುವ ಒಂದು ವಾರ ಮೊದಲು ಅದೇ ಹುಡುಗಿ ವಿಪರೀತ ವಾಂತಿ, ಭೇದಿಯಿಂದಾಗಿ ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವಿಷಯ ಫೋನ್ ಮೂಲಕ ತಿಳಿದ ಗುರುನಾಥರು ಆಕೆಯ ಖಾಯಿಲೆಗೆ ಔಷಧವನ್ನು ತಿಳಿಸಿದರು.
ಅಂತೆಯೇ ಆಕೆ ಗುಣಮುಖರಾದರು. ಈ ವಿಷಯ ತಿಳಿಸಲು ಆ ಮಹಿಳೆ ಚರಣದಾಸನಾದ ನನಗೆ ಕರೆ ಮಾಡಿದರು.
ಆಗ ವಿಷಯ ದಿಳಿದು ಸಂತಸಪಟ್ಟ ಗುರುನಾಥರು "ಏನಮ್ಮಾ ಎಲ್ಲಿ, ನನಗೆ ಬೋಂಡ, ಸಜ್ಜಿಗೆ ಮಾಡಿಕೊಡಲ್ವೇ?" ಎಂದರು.
ಆಗ ಆ ಮಹಿಳೆ ಆನಂದಪರವಶರಾಗಿ "ಗುರುಗಳೇ ಊರಿಂದ ಬಂದ ತಕ್ಷಣ ಮಾಡಿಕೊಡ್ತೀನಿ" ಎಂದರು. ಅದಕ್ಕೆ ಗುರುನಾಥರು "ಇರಲಿ.... ನನ್ನ ಪರವಾಗಿ ನಮ್ಮ ಚರಣದಾಸನಿಗೆ ತಪ್ಪದೇ ಮಾಡಿಕೊಡಿ" ಎಂದರು. ಆದರೆ ಆ ಮರುದಿನ ಗುರುನಾಥರು ನಮ್ಮೆಲ್ಲರನ್ನೂ ಅನಾಥರಾಗಿಸಿ ದೇಹ ಯಾತ್ರೆ ಮುಗಿಸಿದರು.
ಕೆಲವು ದಿನಗಳ ಬಳಿಕ ಸದ್ಭಕ್ತಳಾದ ಆ ತಾಯಿ ಕಣ್ಣೀರಿಡುತ್ತಲೇ ನನಗೆ ಗುರುವಾಕ್ಯದಂತೆ ಬೋಂಡ, ಸಜ್ಜಿಗೆ ಮಾಡಿಕೊಟ್ಟರು.....,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment