ಒಟ್ಟು ನೋಟಗಳು

Monday, December 19, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 76


    ಗ್ರಂಥ ರಚನೆ - ಚರಣದಾಸ 


ಹಕ್ಕಿಯ ರೂಪದಲ್ಲಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಆ ದಂಪತಿಗಳು ಗುರುನಿವಾಸಕ್ಕೆ ಬರುವಾಗಲೆಲ್ಲಾ ಜೋಳದ ರೊಟ್ಟಿ, ಉತ್ತರ ಕರ್ನಾಟಕದ ಪಲ್ಯ, ಸಿಹಿ ತಿನಿಸುಗಳನ್ನು ತರುತ್ತಿದ್ದರು. ಮಾತ್ರವಲ್ಲ ತಾವೂ ತಿಂದು, ಮನೆಯಲ್ಲಿರುವವರೆಗೆಲ್ಲ ನೀಡಿ ದಾರಿಹೋಕರಿಗೂ ಹಂಚುತ್ತಿದ್ದಾಗ ಅವರು ಕಾಣುತ್ತಿದ್ದ ಆನಂದ ವರ್ಣನಾತೀತ. 

ಒಮ್ಮೆ ಆ ದಂಪತಿಗಳು ಗುರುನಿವಾಸಕ್ಕೆ ಎಂದಿನಂತೆ ಬಂದರು. ಎಂದಿನಂತೆ ಕುಶಲೋಪರಿ ವಿಚಾರಿಸಿ ಗುರುನಾಥರು ಅವರ ಸಮಸ್ಯೆ ಪರಿಹಾರಾರ್ಥವಾಗಿ ಗಣಪತಿ ಹೋಮ ಮಾಡಿಸಲು ಹೇಳಿದರು. ಆದರೆ ಅವರಿಗೆ ಹೋರಾಡಲು ತಿಳಿಸಲಿಲ್ಲ. ರಾತ್ರಿ 10-30 ಇರಬಹುದು. ಚಿಕ್ಕಮಗಳೂರಿನಿಂದ ಬೆಂಗಳೂರು ಕಡೆಗೆ ಕೊನೆಯ ಬಸ್ ಬರುವ ಹೊತ್ತಾಗಿತ್ತು. 

ಆಗ ಇದ್ದಕ್ಕಿದ್ದಂತೆ ಅವರನ್ನು ಕರೆದ ಗುರುನಾಥರು "ಇನ್ನೂ ಏನು ಮಾಡ್ತಿದ್ದೀರಾ? ಹೋಗಿ ನಾಳೆ ಬೆಳಿಗ್ಗೆನೇ ಹೋಮ ಮುಗಿಸಿ" ಎಂದರು. 

ಸಮಯ 10-30 ಎಂದು ತಿಳಿದು "ಈಗ ಬರುವ ಬಸ್ಸೇ ಕೊನೆಯದಲ್ವೆ? ಹೊರಡಿ. ಬಸ್ ನಲ್ಲಿ ನಿಮಗಾಗಿ ಮುಂದುಗಡೆ ಎರಡು ಸೀಟು ಖಾಲಿ ಇರುವುದು. ಆ ದೇವನಿಗೆ ಬೇಕಾದ್ರೆ ಅವನೇ ಹೋಮ ಮಾಡಿಸ್ಕೊತಾನೆ. ನೀವೇನು ಅಂತ ಮಾಡ್ತೀರಿ?" ಅಂದು ಕಳಿಸಿದರು. 

ಆ ದಂಪತಿಗಳು ನಿಲ್ದಾಣದ ಹತ್ತಿರ ಬರುವಷ್ಟರಲ್ಲಿ ಬಸ್ ಕೂಡಾ ಬಂತು. ಮಾತ್ರವಲ್ಲ ಗುರುನಾಥರು ಹೇಳಿದಂತೆ ಮುಂದುಗಡೆಯ ಎರಡು ಸೀಟು ಖಾಲಿ ಇದ್ದು ಇವರು ಅದರಲ್ಲಿ ಕುಳಿತುಕೊಂಡರು. 

ಅವರು "ನಾಳೆ ಬೆಳಿಗ್ಗೆ ಪುರೋಹಿತರನ್ನು ಎಲ್ಲಿಂದ ಕರೆತರುವುದು?" ಎಂದು ಯೋಚಿಸುತ್ತಾ ಮನೆ ತಲುಪಿದರು. ಆಗ ಕೆಲ ದಿನಗಳಿಂದ ಇವರ ಮನೆಗೆ ಬರಬೇಕೆಂದಿದ್ದ ಸ್ನೇಹಿತರೋರ್ವರು ಅವರ ಸ್ನೇಹಿತರೊಂದಿಗೆ ಇವರ ಮನೆಗೆ ಬಂದರು. 

ಉಭಯ ಕುಶಲೋಪರಿ ನಂತರ ಇವರು ಬಂಡ ಅತಿಥಿಗಳಿಗೆ, ತಾವು ಸಖರಾಯಪಟ್ಟಣಕ್ಕೆ ಹೋಗಿ ಬಂದ ವಿಷಯ ತಿಳಿಸಿ ಇಂದೇ ಗಣಪತಿ ಹೋಮ ಮಾಡಬೇಕಾದ ಅನಿವಾರ್ಯತೆಯನ್ನು ತಿಳಿಸಲು ಆ ಸ್ನೇಹಿತರು ತನ್ನ ಜೊತೆ ಬಂದಿರುವವರು ಪುರೋಹಿತರೇ ಎಂದೂ ಅವರೇ ಹೋಮ ಮಾಡುವರು ಎಂದೂ ತಿಳಿಸಿದರು. ಹಾಗೂ ತಾನೇ ಅಡುಗೆ ಕಾರ್ಯ ಮಾಡುವೆನೆಂದು ತಿಳಿಸಿದರು. ಹೀಗೆ ಗುರು ತನ್ನ ಕಾರ್ಯವನ್ನು ತಾನೇ ನೆರವೇರಿಸಿಕೊಂಡನು. 

ಪೂರ್ಣಾಹುತಿಯಾಗಿ ಮಂಗಳಾರತಿ ಹೊತ್ತಿಗೆ ಸರಿಯಾಗಿ ಎರಡು ಹಕ್ಕಿಗಳು ಕಿಟಕಿ ಹತ್ತಿರ ಕುಳಿತು ನಂತರ ಹಾರಿ ಹೋದವು. ಆಗ "ತಾನು ಎರಡು ಹಕ್ಕಿಗಳ ರೂಪದಲ್ಲಿಯಾದರೂ ನಿಮ್ಮ ಮನೆಗೆ ಬರುವೆ" ಎಂಬ ಗುರುನಾಥರ ಮಾತು ನೆನಪಾಗಿ ಕಣ್ತುಂಬಿ ಬಂತು......,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment