ಒಟ್ಟು ನೋಟಗಳು

Thursday, December 1, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 19


ಗುರುನಾಥರೆಂದರೆ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮೊದಲಿನಿಂದಲೂ ಬಹಳ ದಯಾವಂತರೂ, ಕರುಣಾಶಾಲಿಗಳೂ ಆಗಿದ್ದ ಗುರುನಾಥರು, ಪ್ರಾಣಿಪಕ್ಷಿಗಳು ಅಷ್ಟೇ ಏಕೆ ಸಸ್ಯಾದಿಗಿಡಗಳ ಬಗ್ಗೆಯೂ ಅದೆಷ್ಟು ಕರುಣೆ ಹೊಂದಿದ್ದರೆಂಬುದನ್ನು ತಿಳಿಸುವ ಅನೇಕ ಘಟನೆಗಳನ್ನು, ಅವರೊಂದಿಗಿದ್ದ ಗುರುಬಂಧುಗಳೊಬ್ಬರು ಹೀಗೆ ವಿವರಿಸುತ್ತಾರೆ: "ಸುಮಾರು ಐವತ್ತು ವರ್ಷಗಳ ಹಿಂದಿನ ಘಟನೆ. ನಮ್ಮ ಮನೆಯಲ್ಲಿದ್ದ ಒಂದು ಹಸುವಿಗೆ ಅದೇನಾಯಿತೋ, ಅದು ತುಂಬಾ ನೋವನ್ನು ಅನುಭವಿಸುತ್ತಿತ್ತು. ನಮಗೇನು ಮಾಡಬೇಕೆಂದು ತಿಳಿಯಲಿಲ್ಲ. ಮನೆಯಲ್ಲೂ ಹಿರಿಯರು ಯಾರೂ ಆ ದಿನ ಇರಲಿಲ್ಲ. ಅದಕ್ಕೇನಾದರೂ ಚಿಕಿತ್ಸೆ ಮಾಡಿಸಲು, ನಾವು ಗುರುನಾಥರ ಬಳಿ ಗಾಭರಿಯಿಂದ ಓಡಿ, ಇದನ್ನು ತಿಳಿಸಿದೆವು. ಅವರು ನಮಗೆ ಧೈರ್ಯ ಹೇಳುತ್ತಾ 'ಬರುತ್ತೇನೆ ಏನೂ ಆಗಲ್ಲಯ್ಯಾ... ಬಾ ನೋಡೋಣ' ಎಂದರು. 'ಒಂದಿಷ್ಟು ನೀರು ಕೊಡಿ' ಎಂದರು. ಅದೇನು ಮಂತ್ರ ಮಾಡಿದರೋ, ಆ ನೀರನ್ನು ಮಂತ್ರಿಸಿ ದನಕ್ಕೆ ಪ್ರೋಕ್ಷಣೆ ಮಾಡುತ್ತಿದ್ದಂತೆ, ಅದು ತನ್ನ ನೋವಿನಿಂದ ದೂರವಾಗಿ, ಎದ್ದು ಅಲ್ಲಿಂದ ಸಲೀಸಾಗಿ ಹೊರಟುಹೋಯಿತು. ಪ್ರಾಣಿಗಳೆಂದರೆ ಅಪಾರ ಪ್ರೀತಿ ಇರುವ ಗುರುನಾಥರು ಆಗಾಗ್ಗೆ ಹೇಳುತ್ತಿದ್ದರು. 'ನನಗೆ ಮನುಷ್ಯರ ಉಸಿರಾಟಕ್ಕಿಂತ ಪ್ರಾಣಿಗಳ ಉಸಿರಾಟದ ಸನಿಹದಲ್ಲಿರುವುದು ಹೆಚ್ಚು ನೆಮ್ಮದಿ ತರುತ್ತದೆ' ಎಂದು ನೆನಪಿಸಿಕೊಂಡರು. 

ಮುಂದಾಗಬಹುದಾದದ್ದನ್ನು ಅತಿ ಸರಳವಾಗಿ ತಿಳಿಸುತ್ತಾ, ಅದಕ್ಕೆ ನಮ್ಮನ್ನು ಸಿದ್ಧಪಡಿಸಿ, ಒಂದೇ ಬಾರಿ ಆಗುವ ಆಘಾತದ ತೀವ್ರತೆಯನ್ನು ಕಡಿಮೆ ಮಾಡುತ್ತಿದ್ದ ಅವರ ರೀತಿ, ಹೇಗೋ ಬರುವುದನ್ನು ಎದುರಿಸಿಯೇ ತೀರಬೇಕೆಂಬ ನಿತ್ಯಸತ್ಯವನ್ನು ಅವರು ಅನೇಕ ಸಾರಿ ಪ್ರಕಟಪಡಿಸಿದ್ದಾರೆ. ನಮ್ಮ ಮನೆಗೆ ಸಾಮಾನ್ಯವಾಗಿ ಬರುತ್ತಿದ್ದ ಅವರು, ಒಂದು ದಿನ ಸಹಜವಾಗಿ ಎಂಬಂತೆ,ನಮ್ಮ ತಾಯಿಯನ್ನು ಕುರಿತು 'ಇನ್ನೇನು ಆಯ್ತಲ್ಲಾ... ಹತ್ತಿರ ಬರುತ್ತಿದೆಯಯ್ಯಾ ಕಾಲ' ಹೀಗೆ ಸೂಚ್ಯವಾಗಿ ಹೇಳಿದರು. ಕೆಲದಿನಗಳಲ್ಲೇ ನಮ್ಮ ತಾಯಿ ಇಹಲೀಲೆಯನ್ನು ಪರಿಸಮಾಪ್ತಿಗೊಳಿಸಿದ್ದರು. ಸುಮಾರು 1988 ರಲ್ಲಿ ಈ ಘಟನೆ ನಡೆದಿದ್ದಿರಬೇಕೆಂದರು. ಎಲ್ಲ ಬಲ್ಲ ಸರ್ವಜ್ಞರಿಗೆ ಅವಿತು ಕುಳಿತು, ಧುತ್ತೆಂದು ಬಂದೆರಗುವ ಮೃತ್ಯುವಿನ ಆಗಮನ ತಿಳಿಯದಿರುತ್ತದೆಯೇ? ಎಲ್ಲ ಅರಿತಿದ್ದರೂ ಅವರಾಡುತ್ತಿದ್ದುದು ಬಹು ಕಡಿಮೆಯೇ. 

ಸರಳ ವಿವಾಹದ ಹರಿಕಾರರು 


"ಗುರುನಾಥರು ನಾನು ಕಂಡಂತೆ ಅನೇಕ ವಿವಾಹಗಳನ್ನು ಮಾಡಿಸಿದ್ದಾರೆ. ಮಾಡುವೆ ಮುಂಜಿಗಳ ಮುಹೂರ್ತ ಇಡುವುದಕ್ಕೆ ಯಾವ ಪಂಚಾಂಗವೂ ಬೇಡ ಇವರಿಗೆ. ಅವರು ಆಡಿದ ಘಳಿಗೆಯೇ ಸುಮುಹೂರ್ತ. ಅವರಿಟ್ಟ ಸಮಯಕ್ಕೆ ಗುರುಬಲ ಅದಾಗಿ ಕೂಡಿ ಬರುತ್ತಿತ್ತು. ಅವರ ಸರಳ ರೀತಿ ನೋಡಬೇಕು. ಯಾರಿಗಾದರೂ ಮಾಡುವೆ ಮಾಡಿಸುವ ಮುನ್ನ, ಗಂಡು ಹೆಣ್ಣು ಮತ್ತು ಅವರ ಕಡೆಯವರನ್ನು ಕರೆಸಿ 'ಏನಯ್ಯಾ ಎಲ್ಲ ಚೆನ್ನಾಗಿ ಆಗುತ್ತೆ. ಈ ಹುಡುಗಿ ಒಪ್ಪಿಗೆಯೇ?" ಎನ್ನುತ್ತಿದ್ದರು. ಅಂತೆಯೇ ಹುಡುಗಿ ಕಡೆಯವರಿಗೆ 'ನೋಡಯ್ಯಾ ಅವನು ದುಡಿಯುವುದಿಷ್ಟೇ. ಏನೇನೋ ಇದೆ ಅಂತ ಭಾವಿಸಬೇಡ.. ಆದರೆ ಲಗ್ನವಾದರೆ ಸುಖವಾಗಿರ್ತಾರೆ' ಎನ್ನುತ್ತಿದ್ದರು. ಮದುವೆಗೆ ಮುಹೂರ್ತವೂ ಅಲ್ಲೇ. ಆ ಕೂಡಲೇ ಹೇಳಿಬಿಡುತ್ತಿದ್ದರು. ಒಂದೆರಡು ದಿವಸದಲ್ಲಿ ಅತ್ಯಂತ ಸರಳ ವಿವಾಹ - ವೀಡಿಯೊ ಖರ್ಚಿಲ್ಲ, ದೊಡ್ಡ ಛತ್ರಗಳ ಹುಡುಕಾಟವಿಲ್ಲ. ಆದರೆ ಸರಳವಾದರೂ ಶಾಸ್ತ್ರೋಕ್ತವಾದ ವಿವಾಹಗಳಾಗಿರುತ್ತಿದ್ದವು. 'ನಂಬಿಕೆ ಇದ್ದರೆ ಮುಂದುವರೆಯಿರಿ.... ಮತ್ತೆ ನಾನು ಬಲವಂತ ಮಾಡಿದೆ ಅಂತ ಒಪ್ಪಬೇಡಿ' ಎಂದೆನ್ನುತ್ತಿದ್ದರು. ಹೀಗೆ ಗುರುನಾಥರು ನನಗೆ ಕಂಡಂತೆ ಹತ್ತಿಪ್ಪತ್ತು ವಿವಾಹಗಳನ್ನು ಮಾಡಿಸಿದ್ದಾರೆ. ಅವರೆಲ್ಲಾ ಸುಖವಾಗಿದ್ದಾರೆ. ಮದುವೆಯೆಂಬ ದುಬಾರಿಯಿಂದ ತಮ್ಮ ಭಕ್ತರನ್ನು ಬಚಾವು ಮಾಡುವುದರ ಜೊತೆಗೆ, ಎಂದೂ ಆಡಂಬರ, ತೋರಿಕೆಯ ಪ್ರಕ್ರಿಯೆಗೆ ಬೆಲೆ ಕೊಡದ ಅವರು, ಎರಡು ಮನಗಳ, ಎರಡು ಮನೆಯವರುಗಳನ್ನು ಈ ರೀತಿ 'ಮದುವೆ' ಎಂಬ ಮೂರಕ್ಷರದಲ್ಲಿ ಒಂದುಗೂಡಿಸುತ್ತಿದ್ದರೇನೋ" ಎನ್ನುತ್ತಾರೆ ಆ ಗುರುಬಂಧುಗಳು. 

ಗುರುವಿನ ಕುರಿತಾಗಿ ಗುರುನಾಥರ ವಿಚಾರಗಳನ್ನು ತಿಳಿಯಲು ಬೆಂಗಳೂರಿಗೆ ಗುರುಬಂಧು ಒಬ್ಬರ ಬಳಿ ಹೋದಾಗ ಈ ಗುರುಬಂಧುಗಳು, 'ನನಗಷ್ಟೇನೂ ತಿಳಿದಿಲ್ಲ... ' ಎನ್ನುತ್ತಾ ಸತ್ಸಂಗಕ್ಕೆ ಕುಳಿತಾಗ- ಗುರುನಾಥರೇ ನುಡಿಸಿದ, ಜ್ಞಾಪಕಕ್ಕೆ ತರಿಸಿದ ವಿಚಾರಗಳನ್ನು ಮುಂದಿಟ್ಟಿದ್ದು ಹೀಗೆ: "ಜಗದ್ಗುರು ಪೀಠದ ಬಗ್ಗೆ ಅಸೀಮ ಭಕ್ತಿ ಭಾವವಿದ್ದ ಗುರುನಾಥರು... ಯಾರು ಏನು ಕಷ್ಟ ಅಂತ ಬಂದರೂ" ಜಗದ್ಗುರುಗಳ ದರ್ಶನ ಮಾಡಿ ಬನ್ನಿ' ಎನ್ನುತ್ತಿದ್ದರು. ಅದರಲ್ಲೂ ಚಂದ್ರಶೇಖರ ಭಾರತಿಗಳ ಬಗ್ಗೆ ಅವರಿಗೆ ಅದೆಂತಹ ಭಕ್ತಿ, ಪ್ರೇಮ, ಭರವಸೆಗಳಿತ್ತೆಂದರೆ, ಅನೇಕ ಸಾರಿ 'ಏನೂ ಆಗುವುದಿಲ್ಲವೆನಯ್ಯಾ ನಿನ್ನ ಕೈಲಿ, ಕಡೆ ಪಕ್ಷ ಚಂದ್ರಶೇಖರ ಭಾರತೀ ಸ್ವಾಮಿಗಳ ನಾಮವನ್ನು ಭಕ್ತಿಯಿಂದ ಬಾಯಲ್ಲಿ ಹೇಳಯ್ಯಾ. ನಿನ್ನ ಎಲ್ಲ  ದೂರವಾಗುತ್ತೆ' ಎನ್ನುತ್ತಿದ್ದರು. ಕೊಡುವುದರಲ್ಲಿ ಎತ್ತಿದ ಕೈ ಆದ ಇವರು ಗುರುವಿಗೆ ಗೌರವ ತೋರುವುದನ್ನು ಗುರುನಾಥರನ್ನು ನೋಡಿ ನಾವು ಕಲಿಯಬೇಕು... ಒಂದು ದಿನದ ಸೇವೆ ಎಂದರೆ ಮಠದ ಗೋವು, ಮಠದ ಕುದುರೆಗಳಿಗೆ ಹುಲ್ಲಿನಿಂದ ಹಿಡಿದು.... ಪೂಜಾದಿಗಳಿಗೆ ಬೇಕಾದ ಹೂವು, ಹಣ್ಣು, ಕಾಯಿ, ಪಂಚಾಮೃತ, ಗುರುಭಿಕ್ಷೆಗೆ ಬೇಕಾದ ತರಕಾರಿಯಿಂದ ಹಿಡಿದು ದವಸ ಧಾನ್ಯಾದಿ ಎಲ್ಲ ವಸ್ತುಗಳನ್ನೂ ಜೋಡಿಸಿ, ಗುರುವಂದನೆ ಸಲ್ಲಿಸುತ್ತಿದ್ದರು. ಎಷ್ಟು ಕೊಟ್ಟರೂ ಕೊಡುತ್ತಿರುವುದೇ ಇವರ ವಿಶೇಷ. ದುಡ್ಡಿದ್ದು ಭಕ್ತಿ ಇಲ್ಲದೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಪಾದಪೂಜೆ ಮಾಡಿದೆವೆಂಬ ಜನರನ್ನು ಕುರಿತು, 'ಪಾದಪೂಜೆ ಎಂದರೆ ನೀವು ಕೊಡುವ ದುಡ್ಡೋ, ದಕ್ಷಿಣೆಯೋ ಅಲ್ಲ. ಪಾದುಕೆಗಳಿಗೆ ಮಾಡುವ ಪೂಜೆಯೂ ಅಲ್ಲ. ಗುರುವಿನ ಪದಗಳ ಪೂಜೆ ಮಾಡಬೇಕು. ಗುರುವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಪಾದಪೂಜೆ' ಎನ್ನುತ್ತಿದ್ದರು. ಸಮಯಕ್ಕೆ ಅತ್ಯಂತ ಬೆಲೆ ಕೊಡುತ್ತಿದ್ದ ಗುರುನಾಥರು, ಜಗದ್ಗುರು ಪೀಠಕ್ಕೆ ಯಾವುದೇ ಸೇವೆ ಸಲ್ಲಿಸುವಾಗ, ಕಳಿಸುವಾಗ, ತಮ್ಮ ಶಿಷ್ಯರನ್ನು ಎಚ್ಚರಿಸುತ್ತಿದ್ದರು. 'ಎಳ್ರಯ್ಯಾ ಬೇಗ ಹೊರಡಿ, ಸರಿಯಾದ ಸಮಯಕ್ಕೆ ತಲುಪದಿದ್ದರೆ ಗುರುದರ್ಶನವಾಗುವುದಿಲ್ಲವೆನ್ನುತ್ತಿದ್ದರು. ನಾವೇನು ಅಲ್ಲಿ ಮಾಡಬೇಕೆಂಬುದನ್ನು ತಿಳಿಸುತ್ತಾ, 'ಮಠಕ್ಕೆ ಹೋಗಿ ಊಟ ಮಾಡಿ ಬರುವುದಲ್ಲ. ಅದಕ್ಕಿಂತ ಮಠಕ್ಕೆ ನಾವೇನು ಕೊಟ್ಟೆವು, ಎಂಬುದನ್ನು ಚಿಂತಿಸುವುದಕ್ಕೆ ಮಠಕ್ಕೆ ಹೋಗಬೇಕು' ಎನ್ನುತ್ತಿದ್ದರು. ಕೊಡುವುದೆಂದರೆ ಗುರುನಾಥರು. ಗುರುನಾಥರೆಂದರೆ ಕೊಡುವುದು. ಎಷ್ಟು ಕೊಟ್ಟರೂ ದಣಿಯದ ಮನ ಅವರದು. ಹಾಗೆ ಕೊಡುತ್ತಿರುವಾಗ, ಅಷ್ಟೊಂದು ವಸ್ತುಗಳು ಅದೆಲ್ಲಿಂದ ಸೃಷ್ಠಿಯಾಗುತ್ತಿದ್ದವು ಎಂಬುದೇ ಆಶ್ಚರ್ಯ. ಇದರ ಬಗ್ಗೆ ಜಗದ್ಗುರುಗಳು ಆಡಿದ ಮಾತೊಂದು ನೆನಪಾಗುತ್ತದೆ. 'ಓಹೋ ಸಖರಾಯಪಟ್ಟಣದ ಅವಧೂತರು ಬಂದರೆಂದರೆ ಮಾಯಾ ಬಜಾರ್ ಸೃಷ್ಠಿಯಾಗಿ ಬಿಡುತ್ತೆ. ಸಖರಾಯಪಟ್ಟಣದ ಗುರುಗಳೆಂದರೆ ಸೃಷ್ಠಿಸುವುದು" ಎಂದದ್ದೂ ಇದೆ. 

ಮದುವೆಯ ಮನೆಯಾದ ನಮ್ಮ ಮನೆ 


ಬೆಳಗಿನ ಆರೂವರೆಗೆ ನಮಗೆ ಗುರುನಾಥರಿಂದ ದೂರವಾಣಿ ಬಂದಿತು. "ನೀವು ತಳಿರು ತೋರಣಗಳನ್ನು ಮನೆಗೆ ಕಟ್ಟಿ ಮದುವೆ ಮನೆಯಂತೆ ಸಂಭ್ರಮಿಸಿರಿ" ಎಂದು. ಆಗ ತಾನೇ ಹೊರಬಂದು, ಮತ್ತೊಬ್ಬ ನಮ್ಮ ಮನೆ ಸನಿಹದ ಗುರು ಭಕ್ತೆಯರನ್ನು ಕಂಡಾಗ 'ನನಗೂ ಗುರುನಾಥರು ಇದೇ ರೀತಿ ಹೇಳಿದರು' ಎಂದರು. ನಾವು ಅಲ್ಲೇ ಸನಿಹದಲ್ಲಿದ್ದ ಒಬ್ಬರ ಮನೆಗೆ ಹೋಗಿ ಮಾವಿನ ಸೊಪ್ಪು ತಂದು ಸಿಂಗರಿಸಿದೆವು. ಸ್ವಲ್ಪ ಹೊತ್ತಿನಲ್ಲಿ ಅಡುಗೆಯ ಪಾತ್ರೆ ಪಡಗಗಳು ಬಂದವು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಒಂದು ಮನೆಗೆ ಗಂಡಿನವರು ಇನ್ನೊಂದು ಮನೆಗೆ ಹೆಣ್ಣಿನವರು ಬಂದರು.

ನಮಗಿದೇನು ಆಗುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ. ಆದರೆ ಗುರುನಾಥರು ಏನೋ ಹೇಳಿದ್ದಾರೆ. ಮಂಗಳಕಾರ್ಯ ನಡೆಯುವುದಿದೆ ಅನ್ನುವುದು ಮಾತ್ರ ತಿಳಿದಿತ್ತು. ಹಾಗೂ ಅವರು ತಿಳಿಸಿದಂತೆ ನಡೆಯುವುದೊಂದೇ ನಮ್ಮ ಕೆಲಸವಾಗಿತ್ತು.

ಚಿರೋಟಿ, ಉಂಡೆ, ಚಕ್ಕುಲಿ, ಭಾಗಿನಗಳೆಲ್ಲಾ ಸಿದ್ಧವಾದವು. ಗುರುನಾಥರು ಎರಡು ಭಕ್ತರ ಮನೆಯ ಕುಡಿಗಳು ಗುರುಬಂಧುಗಳಾಗಿದ್ದವರು, ದಢೀರನೆ ಮದುವೆ ಎಂಬ ಬಂಧನದಿಂದ ಒಂದು ಕುಟುಂಬದವರಾಗುವ 'ಮಂಗಳಮಯ ಮದುವೆ' ನಡೆಸಿದರು. ಆಶ್ಚರ್ಯ ಆದರೂ ನಿಜವಾಗಿ ಸಂಭ್ರಮದಂತೆ ನಡೆಯಿತು. ಹೀಗೆ ನಮ್ಮ ಮನೆಗಳು ಗುರುಬಂಧುಗಳ ಮದುವೆಯಿಂದ 'ಲಕ್ಷ್ಮೀನಾರಾಯಣರ' ದರ್ಶನ ಪಡೆವ ಸ್ಥಾನವಾಯಿತು- ಇದೆಲ್ಲಾ ಆ ಕೂಡಲೇ ಗುರುನಾಥರು ಮಾಡಿದ ವ್ಯವಸ್ಥೆಯಾಗಿತ್ತು.

ಯಾವ ಅದ್ಧೂರಿಯ ದೊಂಬರಾಟವಿಲ್ಲದೆ, ಎರಡು ಯುವ ಹೃದಯಗಳು ಶಾಸ್ತ್ರೋಕ್ತವಾಗಿ ಬಂಧುಗಳ ಸಮ್ಮುಖದಲ್ಲಿ ಒಂದಾಗಿದ್ದು- ನಮ್ಮ ಗುರುನಾಥರ ಲೀಲೆ ಅನುಗ್ರಹದಿಂದ. ತಿಂಗಳುಗಟ್ಟಲೆ ತಯಾರಿ ಇಲ್ಲ. ಭಾರಿ ಹಣದ ಸಾಲದ ಹೊರೆ ಇಲ್ಲ. ವಿಶ್ವ ಮಂಗಲ ಪ್ರಭುವಾದ ನಮ್ಮ ಗುರುನಾಥರಿಗೆ ಈ ಮದುವೆ ಒಂದು ಲೀಲಾ ವಿನೋದದಂತಿತ್ತು. 'ಚೆನ್ನರಾಯಪಟ್ಟಣದ ಗುರು ಭಕ್ತೆಯೊಬ್ಬರು ಗುರುನಾಥರ ಲೀಲಾಮೃತಕ್ಕೆ ತಮ್ಮ ಕಣ್ಣೆದುರು ಜರುಗಿದ ಘಟನೆಯನ್ನು ಹೀಗೆ ತಿಳಿಸಿದರು.

ನನಗೊಂದು ರೇಷ್ಮೆ ಸೀರೆ ತೆಗೆದಿಡು 


ಮತ್ತೆ ಮುಂದುವರೆದು ಇನ್ನೂ ಅದ್ಭುತವಾದ ಮತ್ತೊಂದು ಸಂಗತಿಯನ್ನು ಹೀಗೆ ಹೇಳತೊಡಗಿದರು. "ಅಂದು ಅಲ್ಲಿ ಗೋಕಲಾಷ್ಟಮಿಗಾಗಿ ಉಂಡೆಗಳು ತಯಾರಾಗುತ್ತಿತ್ತು. ಅಲ್ಲಿಗೆ ಬಂದ  ಗುರುನಾಥರು 'ನನಗೂ ಎಲ್ಲಾ ಬಗೆಯ ಐದೈದು ದೊಡ್ಡ ದೊಡ್ಡ ಉಂಡೆಗಳನ್ನು ಕಟ್ಟಿ ತೆಗೆದಿಡಿ' ಎಂದರು. ನಮ್ಮ ಮನೆಗವರು ಅಂದು ಬಂದಿದ್ದಾಗ, ನಮ್ಮ ಮತ್ತೊಬ್ಬ ಗುರುಬಂಧು ಸ್ನೇಹಿತೆಯು ಫೋನು ಮಾಡಿ ರೇಷ್ಮೆ ಸೀರೆಯವರು ಬಂದಿರುವ ವಿಚಾರ ತಿಳಿಸುತ್ತಿದ್ದಾರೆ... ಗುರುನಾಥರಿರುವಾಗ ಇವೆಲ್ಲಾ ಸೀರೆ ವಿಚಾರ ಬೇಕೇ? ಎಂದು ನಾನು ಗಾಭರಿಯಾಗಿರುವಾಗ, ಗುರುನಾಥರೇ ಫೋನು ತೆಗೆದುಕೊಂಡು 'ಹಾಂ.... ಹೌದಮ್ಮ ನನಗೆ ರೇಷ್ಮೆ ಸೀರೆ ಬೇಕು... ನನಗೊಂದು ತೆಗೆದಿಡು' ಎಂದರು. ಇದೇನಿದು ಗುರುನಾಥರಿಗೇಕೆ ರೇಷ್ಮೆ ಸೀರೆ ಬೇಕೆಂಬ ಯೋಚನೆಯು ನನಗೆ ಮನದಲ್ಲಿ ಬರಲಿಲ್ಲ. ಮತ್ತಾರಿಗೋ ಹೇಳಿ ತಾಳಿ ತೆಗೆಸಿದ್ದರಂತೆ.

ಹುಡುಗ ಹುಡುಗಿಯನ್ನು ನೋಡಿಲ್ಲ, ಹುಡುಗಿ ಹುಡುಗನನ್ನು ನೋಡಿಲ್ಲ... ಇದ್ದಕ್ಕಿದ್ದಂತೆ ಅವರಿಬ್ಬರ ಮಾಡುವೆ ಸಾಧ್ಯಾನಾ? ನಮ್ಮ ದೃಷ್ಟಿಯಲ್ಲಿ ಇದರ ಹಿಂದೆ ದೊಡ್ಡ ಪ್ರಕ್ರಿಯೆಗಳೇ ನಡೆಯುತ್ತೆ. ಆದರಿಲ್ಲಿ, ಅವತ್ತು ಗುರುನಾಥರು ಹುಡುಗಿಗೆ ಹೇಳಿದರು. 'ನೋಡಮ್ಮಾ ಇವನೇ ಹುಡುಗ, ಮಾಡುವೆ ಆಗ್ತೀಯಾ?' ಹಾಗೆ ಹುಡುಗನಿಗೂ 'ನೋಡಪ್ಪಾ, ಇವಳೇ ಹುಡುಗಿ' ನಿಮ್ಮಿಬ್ಬರ ಮದುವೆಯಾದರೆ ಸುಖವಾಗಿರ್ತೀರಿ' ಎಂದರು. ಅವರಿಬ್ಬರೂ ಗುರುನಾಥರ ಮಾತಿಗೊಪ್ಪಿದರು. ಕೂಡಲೇ ಮದುವೆಯಾಯಿತು.

ಗುರುಶಿಷ್ಯರ ನಡುವಿನ ಸಂಬಂಧವೇ ಅದಲ್ಲವೇ? ಶಿಷ್ಯನ 'ಜೀವನ ಕಲ್ಯಾಣ' ಗುರುವಿನ ಜವಾಬ್ದಾರಿ. ಗುರುವಾಕ್ಯವೆಂದರೆ ವೇದವಾಕ್ಯ ಎಂದು ತಿಳಿದು ನಡೆಯುವುದು ಶಿಷ್ಯನ ಕರ್ತವ್ಯ.

ಇದರಂತೆ ಅವರಿಬರೂ ಒಪ್ಪಿದರು. ಗುರು ಭಕ್ತರಾದ ಅವರ ಮನೆಯವರೂ ಗುರುವಾಕ್ಯವನ್ನು ಮೀರಲಿಲ್ಲ. ಆ ದಿನವೇ ಗುರುಗಳು ಮಾಡಿಸಿಟ್ಟಿದ್ದ ಉಂಡೆ, ಚಕ್ಕುಲಿಗಳು, ಬಾಗಿಣಗಳು, ರೇಷ್ಮೆ ಸೀರೆ, ತಾಳಿ ಎಲ್ಲವೂ ಒಂದೆಡೆ ಸೇರಿದವು. 'ಚಿಟಿಕೆ ಚಪ್ಪರ' ಎನ್ನುವ ಮಾತೊಂದಿದೆ. ಚಿಟಿಕೆ ಹೊಡೆಯುವುದರಲ್ಲಿ ಎಲ್ಲಾ ಮಂಗಳ ಕೆಲಸಗಳಾಗಿ ಬಿಡುವುದು ಎಂದಿದರ ಅರ್ಥ.

ಹೀಗೆ ಚಿಟಿಕೆ ಹೊಡೆಯುವುದರಲ್ಲಿ ಒಂದು ಮದುವೆ ನಡೆಯಿತು. ಗುರುನಾಥರು ಇಲ್ಲೂ ಆಡಂಬರಕ್ಕೆ ಎಡೆ ಕೊಡಲಿಲ್ಲ. ಅದ್ಧೂರಿಯ ಛತ್ರ ಬಾಜಾ ಭಜಂತ್ರಿಗಳಿಲ್ಲ.. ಸರಳವಾಗಿ ಎಲ್ಲ ನಡೆಸಿದರು. ಗುರುನಾಥರ ಚಮತ್ಕಾರವನ್ನು ನಾವೆಲ್ಲಾ ಕಣ್ಣಾರೆ ಕಂಡು ಸಂತಸಿಸಿದ್ದೆವು' ಎಂದು ಮತ್ತೆ ಗುರುನಾಥರನ್ನು ಸ್ಮರಿಸುತ್ತಾ, ಮನದಲ್ಲಿ ಇಂತಹ ಮಹಾತ್ಮನೊಂದಿಗಿದ್ದ ನಾವೇ ಧನ್ಯರೆಂಬ ಭಾವ ಅವರಲ್ಲಿ ಮೂಡಿತ್ತು.

ಸರಳ ಮದುವೆಯ ಹರಿಕಾರರಾದ ಗುರುನಾಥರು ಹೀಗೆ ಅನೇಕ ಕಲ್ಯಾಣ ಕಾರ್ಯಗಳನ್ನು ನಡೆಸಿರುವುದು, ಅವರ ಭಕ್ತಕೋಟಿಯ ಹಿತಕ್ಕಾಗಿ ಮಾತ್ರವಷ್ಟೇ. ಗುರುನಾಥರು ನಡೆಸಿದ ಕೊನೆಯ ವಿವಾಹ ಇದಾಗಿತ್ತಂತೆ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

No comments:

Post a Comment