ಒಟ್ಟು ನೋಟಗಳು

Tuesday, December 13, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 70


    ಗ್ರಂಥ ರಚನೆ - ಚರಣದಾಸ 


ಶರಣಾಗತ ರಕ್ಷಕ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಆತ ಆಗ ತಾನೇ ವೈದ್ಯಕೀಯ ಕೋರ್ಸ್ ಮುಗಿಸಿ ಹೆಚ್ಚಿನ ವ್ಯಾಸಂಗ ಹಾಗೂ ವೃತ್ತಿಗಾಗಿ ವಿದೇಶಕ್ಕೆ ಹೊರಡಬೇಕೆಂದು ಬಯಸಿದ್ದರು. ಆಗಾಗ್ಗೆ ತನ್ನೂರಿಗೆ ಬರುತ್ತಿದ್ದ ಅವರಿಗೆ ಗುರುನಾಥರ ಪರಿಚಯವಾಯಿತು. ಈ ಮಧ್ಯೆ ಆತ ವಿದೇಶದವರು ನಡೆಸುವ ಆಯ್ಕೆ ಪರೀಕ್ಷೆಗೆ  ಅರ್ಜಿ ಸಲ್ಲಿಸಿದ್ದರು. 

ಗುರುನಾಥರ ಮೇಲೆ ಅಪಾರ ಭಕ್ತಿಯಿದ್ದ ಆತ ಗುರುವಾಕ್ಯವನ್ನು ತಪ್ಪದೇ ಪಾಲಿಸುತ್ತಿದ್ದರು. ಪರೀಕ್ಷೆಗೂ ಮುನ್ನ ಗುರುದರ್ಶನಕ್ಕೆ ಬಂದ ಅವರು ಗುರುನಾಥರ ಮಾತಿನಂತೆ ಒಂದೇ ಜೊತೆ ಬುಟ್ಟಿಯಲ್ಲಿ ಸುಮಾರು  ಒಂದು ತಿಂಗಳ ಕಾಲ ಸ್ನಾನವನ್ನೂ ಮಾಡದೇ, ತಾನೊಬ್ಬ ವೈದ್ಯನೆಂಬುದನ್ನು ಮರೆತು ಅತ್ಯಂತ ಸರಳತೆಯಿಂದ ಗುರುನಾಥರೊಂದಿಗೆ ಇದ್ದರು. 

ಪರೀಕ್ಷೆಯ ಹಿಂದಿನ ದಿನ ಹೊರಟು ಪರ ರಾಜ್ಯಕ್ಕೆ ಹೋಗಿ ಪರೀಕ್ಷೆ ಬರೆದು ಬಂದರು. ನಂತರ ನಡೆದ ಮೌಖಿಕ ಸಂದರ್ಶನವನ್ನು ಮುಗಿಸಿ ಬಂದರು. ವಿಶೇಷವೆಂದರೆ ಈ ಪರೀಕ್ಷಾ ಕಾಲದಲ್ಲಿ ಅವರು ಏನೊಂದೂ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ ಹಾಗೂ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಹಾಗಿದ್ದೂ ದೇಶದ ಮೊದಲಿಗನಾಗಿ ಆಯ್ಕೆಯಾದರು. 

ಈ ಕುರಿತು ಗುರುನಾಥರು ಆಗಾಗ್ಗೆ  ಹೀಗೆ ಹೇಳುತ್ತಿದ್ದರು. "ಪರೀಕ್ಷೆ ಬರೆದಿದ್ದು ಅವನಲ್ಲವೋ, ನಾನು ಕಣೋ" ಎಂದು. ಆ ವ್ಯಕ್ತಿಯನ್ನು ಸಂದರ್ಶನ ಮಾಡಿದ ವಿದೇಶಿ ವ್ಯಕ್ತಿ "ನನ್ನ ಈವರೆಗಿನ ಸೇವೆಯಲ್ಲಿ ಇಷ್ಟೊಂದು ನಿಖರ ಉತ್ತರ ನೀಡಿದವರು ಯಾರೂ ಇಲ್ಲ" ಎಂದು ಉದ್ಗರಿಸಿದರು. 

ನಂತರ ವಿದೇಶಕ್ಕೆ ತೆರಳಿದ ಆತ ಅಲ್ಲಿ ನಂತರ ನಡೆದ ಎಲ್ಲ ಪರೀಕ್ಷೆಗಳಲ್ಲೂ ಸುಲಭವಾಗಿ ಆಯ್ಕೆಯಾದರು. ಇಂದು ಆತ ಜಗತ್ತಿನ ಕೆಲವೇ  ಶ್ರೇಷ್ಠ ಹೃದ್ರೋಗ ತಜ್ಞರಲ್ಲಿ ಒಬ್ಬರಾಗಿರುವರು. 

ಗುರುನಾಥರ ತಾಯಿ ಆ ವೈದ್ಯರನ್ನು ಸಲುಗೆಯಿಂದ ಆಗಾಗ್ಗೆ "ಪುಟ್ಟ ಡಾಕ್ಟರ್" ಎಂದು ಸಂಬೋಧಿಸುತ್ತಿದ್ದರು. ಅದನ್ನು ಕೇಳಿದ ಗುರುನಾಥರು "ಅಮ್ಮಾ ಅವರು ಪುಟ್ಟ ಡಾಕ್ಟರ್ ಅಲ್ಲಮ್ಮಾ, ದೋ... ಡ್ಡ ಡಾಕ್ಟರ್" ಎಂದಿದ್ದರು. 

"ಎಲ್ಲವೂ ಅವನಿಚ್ಛೆಯಂತೆ ನಡೆಯಲಿ ಎಂದು ಶರಣಾಗತ ಭಾವದಲ್ಲಿ ನಿಂತವರನ್ನು ಗುರು ಹೇಗೆ ಕಣ್ಣಲ್ಲಿ ಕಣ್ಣಿಟ್ಟು ಕಾಯುವನೆಂಬುದಕ್ಕೆ ಈ ಘಟನೆ ನಿರ್ದರ್ಶನ". 

ಗುರುನಾಥರ ದೂರದ ಸಂಬಂಧಿಯಾದ ಒಬ್ಬ ವ್ಯಕ್ತಿ ಜಿಲ್ಲಾ ಮುಖ್ಯ ಕೇಂದ್ರದಲ್ಲಿ ಇಂಜಿನೀಯರಿಂಗ್ ಓದುತ್ತಿದ್ದರು. ಗುರುನಾಥರ ಮನೆಗೆ ಆಗಾಗ್ಗೆ ಬರುತ್ತಿದ್ದ ಅವನಿಗೆ ಗುರುನಾಥರು ತನ್ನ ನಿವಾಸದಲ್ಲೇ ಇದ್ದು ವ್ಯಾಸಂಗ ಮುಂದುವರೆಸುವಂತೆ ತಿಳಿಸಿದರು. ಆತ ಅಂತೆಯೇ ಅಲ್ಲಿಯೇ ವಾಸವಿದ್ದು  ಬಿಡುವಿನ ಕಾಲದಲ್ಲಿ ಗುರುನಿವಾಸದ ಕಾರ್ಯ ಕಲಾಪದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. 

ಅವರ ಅಂತಿಮ ಪರೀಕ್ಷೆ ಕಾಲದಲ್ಲಿ ಗುರುನಾಥರು ಅವರನ್ನು ಒಂದು ಮುಖ್ಯ ಕಾರ್ಯ ನಿಮಿತ್ತ ಬೇರೆಡೆಗೆ ಹೋಗಲು ತಿಳಿಸಿದರು. ಆತ ನಂಗೆ ಪರೀಕ್ಷೆ ಇದೆ ಎನ್ನಲು, ಗುರುನಾಥರು "ಕಾಲೇಜಿನವರು ನಿನಗೊಬ್ಬನಿಗಾಗಿಯೇ ಮತ್ತೊಮ್ಮೆ ಪರೀಕ್ಷೆ ನಡೆಸುವರು" ಹೋಗಿ ಬಾ ಎಂದರು. ಅಂತೆಯೇ ಆತ ಪರೀಕ್ಷೆಯನ್ನು ಬಿಟ್ಟು ಗುರುವಿನ ಕಾರ್ಯದಲ್ಲಿ ಮಗ್ನರಾದರು. ಆ ನಂತರ ಕಾಲೇಜಿಗೆ ತೆರಳಲು ಗುರುನಾಥರು ಹೇಳಿದಂತೆಯೇ ಅವರಿಗಾಗಿಯೇ ಪ್ರತ್ಯೇಕವಾಗಿ ಪರೀಕ್ಷೆ ನಡೆಸಿದರು. ಇಂದು ಆತ ಇಂಜಿನೀಯರ್  ಆಗಿರುವರು. 

ಸದ್ಗುರು ಸೂಕ್ಷ್ಮ ಸಂವೇದನಾ ಶೀಲ. ನಮ್ಮ ಮನದ ಚಿಕ್ಕ ಚಿಕ್ಕ ಬೇಡಿಕೆ ತಳಮಳ, ದುಃಖಕ್ಕೂ ಆತ ಸದಾ ಉತ್ತರಿಸುವನು. ಅದಕ್ಕೆ ನಮ್ಮಲ್ಲಿ ಇರಬೇಕಾದ್ದು ಮೌನ,  ಸಹನೆ ಹಾಗೂ ಸಂಪೂರ್ಣ ಶರಣಾಗತಿ. 

ಒಂದು ದಿನ ಚರಣದಾಸನಾದ ನಾನು ಎಂದಿನಂತೆ ದನಕರುಗಳಿಗೆ ಕುಡಿಯಲು ನೀರು ತುಂಬಿಸುತ್ತಿದ್ದೆ. ಆಗ ಮಧ್ಯಾನ್ಹ ಸಮಯ. ಆಯಾಸಗೊಂಡಿದ್ದ ಗುರುನಾಥರು ಮಲಗಿದ್ದರು. ಆ ಸಮಯ ಮನೆಯ ಮುಂದೆ ಬಂದ ಓರ್ವ ಯುವಕ "ಗುರುಗಳಿದ್ದಾರಾ...." ಎಂದು ಪ್ರಶ್ನಿಸಲು, ನಾನು "ಅವರು ಮಲಗಿದ್ದಾರೆ. ನಾಲ್ಕು ಗಂಟೆಗೆ ಬನ್ನಿ ಸಿಗುವರು" ಎಂದು ಉತ್ತರಿಸಿದೆ. 

ಕೂಡಲೇ ಸಹನೆ ಕಳೆದುಕೊಂಡ ಆ ಯುವಕ ನನಗೆ ಅವಾಚ್ಯ ಶಬ್ದದಿಂದ ನಿಂದಿಸಿ ಹೋದನು. 

ನಾನು  ಮೌನವಾಗಿ "ಎಲ್ಲಾ ಅವನಿಚ್ಛೆ" ಅಂದುಕೊಂಡು ನನ್ನ ಕೆಲಸದಲ್ಲಿ ಮಗ್ನನಾದೆ. 

ನಾಲ್ಕು ಗಂಟೆ ಸುಮಾರಿಗೆ ಅದೇ ಯುವಕ ಮನೆಗೆ ಬಂದು ಮೆಟ್ಟಿಲೇರಿ ಇನ್ನೇನು ಹೊಸ್ತಿಲು ದಾಟಲು ಸಿದ್ಧವಾಗಿದ್ದನು. ಆಗ ಅಲ್ಲಿಯೇ ಕುಳಿತಿದ್ದ ಗುರುನಾಥರು ಆ ಯುವಕ ಯಾವ ಪದ ಬಳಸಿ ನನ್ನನ್ನು ನಿಂದಿಸಿದ್ದನೋ ಅದೇ ಪದ ಬಳಸಿ ಆತನಿಗೆ ಗದರಿಸಿ ಒಳಗೆ ಬರಬೇಡವೆಂದು ಹೇಳಿ ವಾಪಸ್ಸು ಕಳಿಸಿದರು. 

ಅಲ್ಲೇ ಕುಳಿತು ಇದನ್ನೆಲ್ಲ  ಗಮನಿಸುತ್ತಿದ್ದ ನನಗೆ ಆಶ್ಚರ್ಯವಾಯಿತು ಹಾಗೂ ಸದ್ಗುರು ಇಂದಿಗೂ ಶರಣಾಗತರನ್ನು ಮಡಿಲಲ್ಲಿಟ್ಟು ಕಾಯುವನೆಂಬ ಭಾವನೆ ದೃಢವಾಯಿತು. ಜೊತೆಗೇ, ಈ ಸತ್ಯ ಹಲವಾರು ಬಾರಿ ಸಾಬೀತಾಗಿದ್ದರೂ  ನನ್ನಲ್ಲಿ ಅತೀವವಾಗಿದ್ದ ನಾನೆಂಬ ಭಾವದ ಬಗ್ಗೆ ಅಸಹ್ಯವೆನಿಸಿತು.......,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment