ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 20
ಸರಳ ನುಡಿಗಳ ಸ್ವಾರಸ್ಯ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ದೈನಂದಿನ ಕೆಲಸಕಾರ್ಯಗಳಲ್ಲಿ ನಾವು ಮಾಡುವ ತಪ್ಪುಗಳನ್ನು ಸರಳವಾಗಿ ಗುರುನಾಥರು ತಿದ್ದುತ್ತಿದ್ದ ರೀತಿಗಳು ಹೀಗಿತ್ತು. ಒಮ್ಮೆ 'ಶೃಂಗೇರಿಗೆ ಹೋಗಬೇಕು. ಒಂದಿಷ್ಟು ಬಿಲ್ವ ಪತ್ರೆಯನ್ನು ತಾರಯ್ಯಾ?' ಎಂದರು. ಸ್ವಲ್ಪ ಹೊತ್ತಿನಲ್ಲೇ ನಾನು ಒಂದಿಷ್ಟು ಜಾಸ್ತಿಯೇ ಬಿಲ್ವಪತ್ರೆಗಳನ್ನು ಸಂಗ್ರಹಿಸಿ ತಂದಿದ್ದೆ - ಹೇಗೆ ತಂದಿರಿ ಎಂದು ಕೇಳಿದಾಗ 'ಅಲ್ಲೊಂದು ಕೋಲು ಇತ್ತು. ಬಡಿದು, ಬಿಲ್ವ ಪತ್ರೆಗಳನ್ನು ಉದುರಿಸಿ ತಂದೆ' ಎಂದು ಯಥಾವತ್ತಾಗಿ ತಿಳಿಸಿದೆ.
'ಅಲ್ಲ ಕಣಯ್ಯಾ ಮರಕ್ಕೆ ನೀರು ಹಾಕಿ ನೀನೇನು ಬೆಳೆಸಿದ್ದೀಯಾ.. ಮರಕ್ಕೆ ಕೋಲಿನಿಂದ ಬಡಿದೆಯಲ್ಲಾ. ಅದಕ್ಕೆಷ್ಟು ನೋವಾಯ್ತು ಯೋಚಿಸಿದೆಯಾ' ಎಂದಿದ್ದರು. ಚೌಕಾಸಿ ಮಾಡುವ ಸ್ವಭಾವದವರು, ಹೂವನ್ನು ಕೊಂಡು ತಂದಾಗ 'ಏನಯ್ಯಾ ಈ ಹೂವು ಮಾರುವವಳ ಬಳಿ ಚೌಕಾಸಿ ಮಾಡಿ ನಾಲ್ಕಾಣೆ ಉಳಿಸಿದೆಯಲ್ಲಾ... ಈ ಹೂವು ಪೂಜೆ ಮಾಡುವರ ಕೈಯಲ್ಲಿ ಸಿಕ್ಕಿ ನುಜ್ಜುಗುಜ್ಜಾಗಿ ಅದನ್ನು ಎಳೆದು ಹರಿದು ನಾಳೆ ಒಣಗಿತು ಎಂದು ಬಿಸಾಡ್ತೀವಿ. ಆ ಬಿಸಿಲಲ್ಲಿ ಕುಳಿತು, ಹೂ ಕಟ್ಟಿ ಮಾರುವ ಮುದುಕಿಗೆ ಎಂಟಾಣೆ ಜಾಸ್ತಿ ಕೊಟ್ಟಿದ್ದರೆ ನಿಜವಾದ ಸಾರ್ಥಕವಾಗುತ್ತಿತ್ತು' ಎನ್ನುತ್ತಿದ್ದರು. 'ತುಳಸಿ, ಹೂವುಗಳನ್ನು ಎರ್ರಾಬಿರ್ರಿ ಕಿತ್ತು ತರುತ್ತೀರಲ್ಲಾ, ನೀವೇನು ನೀರು ಹಾಕಿ ಬೆಳೆಸಿದ್ದೀರಾ? ಕೀಳುವ ಮುನ್ನ ಎಂದಾದರೂ ಯೋಚಿಸಿದ್ದೀರಾ?' ಎಂದು ಪ್ರಶ್ನಿಸುತ್ತಿದ್ದರು. ಸತ್ಸಂಗ ನಡೆಸುತ್ತಿದ್ದ ಗುರುಬಂಧುಗಳು ಸ್ವಲ್ಪ ಹೊತ್ತು ಮೌನವಾದರು. ಮತ್ತೆ ಅವರೊಳಗೆ ಕುಳಿತ ಗುರುನಾಥರು ಹೀಗೆ ಮುಂದುವರೆಸಿದರು. "ಅನೇಕ ಸಂದರ್ಭದಲ್ಲಿ ಥಟ್ ಅಂತ ಗುರುನಾಥರು ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಏನಾದರೂ ಹೇಳಿ ಬಿಡುತ್ತಿದ್ದರು. ಆ ಕ್ಷಣದಲ್ಲಿ ನಗೆಬುಗ್ಗೆ ಹೊಮ್ಮಿದರೂ, ಯೋಚಿಸಿದಾಗ ಸತ್ಯದ ಅರಿವಾಗುತ್ತಿತ್ತು. ಕೇವಲ ಆಚರಣೆಗೆ ಮಾತ್ರ ಸೀಮಿತಗೊಂಡ, ಭಾವವಿಲ್ಲದ, ನಮ್ಮ ರೀತಿಯ ಅರಿವಾಗುತ್ತಿತ್ತು. ಯಾರಾದರೂ ಕುಳಿತವರು ತಟ್ಟನೆ ಎದ್ದಾಗ 'ಎಲ್ಲಿಗೆ ಹೋಗುತ್ತಿದ್ದೀಯಯ್ಯಾ' ಎಂದು ಗುರುನಾಥರು ಕೇಳುತ್ತಿದ್ದರು. ಅವರು 'ಧರ್ಮೋದಕ ಬಿಡಲು, ಶ್ರಾದ್ಧಕ್ಕೆ... ಎಂದೇನಾದರೂ ಅಂದಾಗ ಗುರುನಾಥರು 'ಜೀವಂತವಿದ್ದಾಗ ಅವರ ಬಾಯಿಗೆ ಒಂದು ತೊಟ್ಟು ನೀರು ಕೊಡದೆ ಸತ್ತಮೇಲೆ ಧರ್ಮೋದಕ ಬಿಡುವುದೇನು ಚಂದನಯ್ಯಾ, ಇದ್ದಾಗ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದೆ ಈಗ ಪ್ರತಿ ವೈದಿಕದಲ್ಲೂ ವಡೆ ಮುರಿಯೋದೆ ಶ್ರಾದ್ಧವಲ್ಲವೆನಯ್ಯಾ..." ಎಂದು ಬಿಡುತ್ತಿದ್ದರು. ಸ್ನಾನಕ್ಕೆ ಹೊರಟೆ ಎಂದು ಯಾರಾದರೂ ಅಂದರೆ, 'ಅಂದರೆ ಬಚ್ಚಲಿಗೆ ನೀರು ಹೊಯ್ಯುವುದು ತಾನೇ?' ಎಂದದ್ದಿದೆ. ಮನಶುದ್ಧವಾಗದ ತನುಶುದ್ಧಿಯಿಂದ ಏನೂ ಪ್ರಯೋಜನವೆಂಬ ಅರಿವು ಮೂಡಿಸುತ್ತಿದ್ದರು".
ಒಮ್ಮೆ ಈ ಗುರುಬಂಧುಗಳನ್ನು 'ನಡಿಯಯ್ಯಾ ಕಾರು ಹತ್ತು' ಎಂದು ಕಾರು ಹತ್ತಿಸಿಕೊಂಡು ಹೊರಟ ಗುರುನಾಥರು ಎರಡು ಮೂರು ದಿನಗಳ ನಂತರವೇ ವಾಪಸ್ಸು ಬಂದಿದ್ದು. ಈ ಮಧ್ಯೆ ನಡೆದ ಒಂದು ಆಶ್ಚರ್ಯ ಘಟನೆ ಎಂದರೆ, ಎಲ್ಲಿಯೋ ದೂರದ ಊರಿಗೆ ಕಾರು ಸಾಗುತ್ತಿತ್ತು. ತುಂಬಾ ಕತ್ತಲೆಯಾಗಿತ್ತು. ಯಾವುದೋ ಒಂದು ದೊಡ್ಡ ಫ್ಯಾಕ್ಟರಿಯ ಗೇಟಿನಿಂದ ದೂರದಲ್ಲಿ ಕಾರು ನಿಲ್ಲಿಸಿದ ಗುರುನಾಥರು ಆ ದೊಡ್ಡ ಗೇಟಿನ ಬಳಿ ಹೋಗಿ ನಿಂತು, ಆ ತುದಿಯಿಂದ ಈ ತುದಿಯವರೆಗೆ ಗೇಟನ್ನು ತಡವಿದರು. ಆಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಒಳಗೆ ಹೋದಂತೆ ಕಂಡಿತು. ಮಾರನೆಯ ದಿನ ಬಹಳ ಹೊತ್ತಾದರೂ ಗುರುನಾಥರು ಎದ್ದಿರಲಿಲ್ಲ. ಬೆಳಿಗ್ಗೆ ತಿಳಿದ ವಿಚಾರವೆಂದರೆ ಆ ಫ್ಯಾಕ್ಟರಿಯ ದೊಡ್ಡ ಬಾಯ್ಲರ್ ಒಂದು ಒಡೆದು, ಒಬ್ಬರು ಸಾವನ್ನಪ್ಪಿದ್ದರು. ಪಕ್ಕದ ಫ್ಯಾಕ್ಟರಿಯವರ ಸಹಾಯದಿಂದ ಆಗಬಹುದಾದ ಬಹುದೊಡ್ಡ ಅಪಘಾತವು ತಪ್ಪಿತೆಂದು, ಗುರುನಾಥರು ಜನಹಿತಕ್ಕಾಗಿ ಹೀಗೆ ಎಂತೆಂತಹ ಅವಘಡಗಳನ್ನು ತೃಣಮಾತ್ರವಾಗಿಸಿದ್ದಿದೆ. ಇತರರ ನೋವನ್ನು ತಾವು ತೆಗೆದುಕೊಂಡು ಅನುಭವಿಸಿದ ಘಟನೆಗಳನ್ನು ಕಂಡಿದ್ದೇನೆ. ಈ ಕಲಿಯುಗದಲ್ಲಿ ಬೇರೆಯವರ ನೋವನ್ನು ತಾವು ತೆಗೆದುಕೊಂಡು ಅನುಭವಿಸುವ ಶಕ್ತಿ ಗುರುವಿಗಲ್ಲದೆ ಯಾವ ದೇವಾನುದೇವತೆಗಳಿಗೂ ಇಲ್ಲ. ಇದನ್ನೂ ತೋರಿಸಿದ್ದಾರೆ. ಒಮ್ಮೆ ಬಂದ ಒಬ್ಬ ವ್ಯಕ್ತಿ 'ತನ್ನ ತಾಯಿಗೆ ತೀವ್ರವಾದ ಖಾಯಿಲೆ, ಅವರು ಅಹಲ್ಯಾ ಬಳಲುತ್ತಿದ್ದಾರೆ. ಕರುಣೆ ತೋರಿ' ಎಂದು ಬೇಡಿದ. ಗುರುನಾಥರು ಏನೋ ಮಂತ್ರಿಸಿ ಕೊಟ್ಟು 'ಬೇಗ ನಿಮ್ಮ ತಾಯಿಗಿದನ್ನು ಕೊಡು' ಎಂದು ಹೇಳಿದರು. ಆ ಹುಡುಗ ಹೊರಹೋದ. ಸ್ವಲ್ಪ ಹೊತ್ತಿನಲ್ಲಿ, ಗುರುನಾಥರಿಗೆ ತೀವ್ರವಾದ ನೋವು, ಹೊಟ್ಟೆಯುಬ್ಬರಿಕೆಗಳಾದವು. ಗುರುನಾಥರು 'ಆ ಹುಡುಗ ಹೋದನಾ' ಎಂದು ಕೇಳಿದರು. ಆದರೆ ಆತ ಅಲ್ಲೇ ಹೊರಗೆ ಕುಳಿತಿದ್ದ. 'ಬೇಗ ಹೋಗಿ ನಿಮ್ಮ ತಾಯಿಗಿದನ್ನು ಕೊಡಿ' ಎಂದು ಹೇಳಿ ಕಳುಹಿಸಲಾಯಿತು. ಹೀಗೆ ಭಕ್ತರ ನೋವು ಸಂಕಟಗಳನ್ನು ತೆಗೆದುಕೊಂಡ ಉದಾಹರಣೆಗಳಿವೆ" ಎಂದು ಹೇಳಿ ಗುರುನಾಥರ ಸ್ಮರಣೆಯಲ್ಲಿ ಅವರು ನಿರತರಾದರು.
ಬರುವ ಕಾಲಕ್ಕೆ ಅದೇ ಬರುತ್ತದೆ
"ಎಲ್ಲರ ಮನೆಯಲ್ಲಿ ಪಾದುಕೆಗಳಿರುತ್ತದೆ. ನಮ್ಮ ಮನೆಯಲ್ಲಿ ಎಲ್ಲವಲ್ಲಾ ಎಂಬ ವಿಚಾರ ಮನದಲ್ಲಿ ಬಂದಿತು. ಒಮ್ಮೆ ಹೀಗೆಯೇ ಜಗದ್ಗುರುಗಳ ಬಳಿ ಹೋಗಿದ್ದಾಗ ಸ್ವಾಮಿ ನನಗೊಂದು ಪೂಜೆಗಾಗಿ ಪಾದುಕೆ ಬೇಕೆಂದು ನಮಸ್ಕರಿಸಿ ಬೇಡಿಕೊಂಡೆ. ನಾನು ಇಂತಹ ಊರಿನವನು, ನಮ್ಮ ತಂದೆ ಇಂತಹವರೆಂದು ಎಲ್ಲಾ ಹೇಳಿಕೊಂಡೆ. ಜಗದ್ಗುರುಗಳು ಎಲ್ಲವನ್ನೂ ಶಾಂತವಾಗಿ ಕೇಳಿಕೊಂಡು 'ಆಯ್ತು, ಶ್ರೀಮಠಕ್ಕೆ ಬರುತ್ತಾ ಇರಿ. ನಿಮಗೆ ಪಾದುಕೆಗಳು ಸಿಗುತ್ತವೆ' ಎಂದರು. ಮನಸ್ಸಿಗೆ ಸ್ವಲ್ಪ ನಿರಾಸೆಯಾಯ್ತು. ಏನು ಮಾಡುವುದಕ್ಕಾಗುತ್ತದೆ? ಎಂದು ಗುರುನಾಥರ ಭಕ್ತರೊಬ್ಬರು ಗುರುಚರಿತ್ರೆಯನ್ನು ಹೀಗೆ ಪ್ರಾರಂಭಿಸಿದರು.
"ಕೆಲ ದಿನಗಳ ನಂತರ, ಗುರುನಾಥರನ್ನು ಕಾಣಲು ಸಖರಾಯಪಟ್ಟಣಕ್ಕೆ ಹೋಗಿದ್ದೆ. ಗುರುನಾಥರಿಗೆ ನಮಿಸಿ ಕುಳಿತುಕೊಂಡಾಗ, ನಾನು ಮರೆತೇಬಿಟ್ಟಿದ್ದ ಪಾದುಕೆಯ ವಿಚಾರವನ್ನು ಕುರಿತು 'ಅಲ್ಲಯ್ಯಾ ಯಾಕಯ್ಯಾ ನಿಂಗೆ ಪಾದುಕೆ? ಜಗದ್ಗುರುಗಳ ಹತ್ತಿರ ಹೋಗಿ ಪಾದುಕೆ ಕೇಳಬೇಕೆ? ಬರುವ ಕಾಲ ಬಂದರೆ ಅದೇ ನಿಮ್ಮ ಮನೆಗೆ ಬರುತ್ತೆ.... ಪಾದುಕೇಲಿ ಏನಿದೆ... ? ಯಾಕೆ ಬೇಕು ಪಾದುಕೆ?' ಎಂದು ಅವರೆಂದಾಗ ನನಗಾಶ್ಚರ್ಯವಾಯಿತು. ಕೆಲ ದಿನಗಳು ಕಳೆದ ನಂತರ ಒಮ್ಮೆ ಮಂಡಗದ್ದೆಗೆ ಹೋಗಬೇಕಾದ ಪ್ರಸಂಗ ಬಂದಿತು. ನಮ್ಮ ಆಪ್ತರೊಬ್ಬರು 'ನಿಮಗಾಗೇ ಕಾಯುತ್ತಿದ್ದೆವು. ಸರಿಯಾದ ಸಮಯಕ್ಕೆ ಬಂದಿರಿ. ನಾವೇ ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಮೊನ್ನೇ ಶಿರಡಿ ಸಾಯಿಬಾಬಾ ಅವರ ದರ್ಶನಕ್ಕೆ ಹೋಗಿದ್ದೆವು. ಅಲ್ಲಿ ಎರಡು ಪಾದುಕೆಗಳನ್ನು ತೆಗೆದುಕೊಂಡೆವು. ಒಂದು ನಿಮಗೆ, ನಿಮ್ಮ ಮನೆಗೇ ಬಂದು ಕೊಡಬೇಕೆಂದು ಯೋಚಿಸಿದ್ದೆವು. ನೀವೇ ಬಂದಿದ್ದು ಒಳ್ಳೆಯದೇ ಆಯಿತು' ಎಂದರು. ಶಿರಡಿಯ ಸಾಯಿಬಾಬಾ ಎಂದರೆ ದತ್ತರೇ. ಗುರುನಾಥರು ಹೇಳಿದ ಕಾಲ ಹೀಗೆ ಒದಗಿ ಬಂದು ದತ್ತ ಪಾದುಕೆ ನಮ್ಮ ಮನೆಗೆ ಬಂದಿತು' ಎನ್ನುತ್ತಾ ಗುರುನಾಥರ ಕೃಪೆ, ಅವರ ಭವಿಷ್ಯವಾಣಿಗಳನ್ನವರು ಸ್ಮರಿಸುತ್ತಾ ಗುರುಕಥಾನಕವನ್ನು ಹಾಗೆ ಮುಂದುವರೆಸಿದರು.
ಪುರಿಜಗನ್ನಾಥದಲ್ಲೂ ಗುರುನಾಥರು
ತುಮಕೂರಿನ ಗುರುನಾಥರ ಭಕ್ತರೊಬ್ಬರು ಹೀಗೆಯೇ ಪ್ರವಾಸ ಮಾಡುತ್ತಾ ಪುರಿಗೆ ಹೋದರು. ಅಲ್ಲಿ ಜಗನ್ನಾಥನ ದರ್ಶನವಾಯಿತು. ಗುರುನಾಥರ ಈ ಭಕ್ತರಿಗೆ ಮನದಲ್ಲಿ ನಿರಂತರ ಗುರುನಾಥರದೇ ಸ್ಮರಣೆ. ತಾವಿಲ್ಲಿಗೆ ಬಂದಿರುವುದೂ, ಗುರುನಾಥರ ಕರುಣೆಯಿಂದಲೇ ಎಂಬ ಭಾವ ತುಂಬಿತ್ತು. ಜಗನ್ನಾಥನ ಬಳಿ ಬಂದವರಿಗೆ ಒಂದೆಡೆ ಒಬರು ಪ್ರಸಾದ ಕೊಡುತ್ತಿದ್ದರು. ತುಮಕೂರಿನ ಈ ಭಕ್ತರ ಮನದೊಳಗಿದ್ದ ಭಾವ ಎದುರಿಗೆ ಮೂರ್ತಿ ರೂಪವಾದಂತೆ, ಗುರುನಾಥರ ದರ್ಶನವಾಯಿತಂತೆ. ತಮ್ಮ ಕಣ್ಣನ್ನು ನಂಬದಾದರು. ಯಾವ ದೃಷ್ಠಿಯಿಂದ ನೋಡಿದರೂ ಗುರುನಾಥರೇ. ಕೂಡಲೇ ಆ ದಂಪತಿಗಳು ಅವರ ಬಳಿ ಓಡಿದರು, ನಮಸ್ಕರಿಸಿದರು. ಇವರ ಮಾತುಗಳು ಆವರಿಗರ್ಥವಾಗುತ್ತಿಲ್ಲ. ಅವರ ಮಾತು ಇವರಿಗರ್ಥವಾಗುತ್ತಿಲ್ಲ. ಬಹುಶಃ ಇದೂ ಒಂದು ಗುರುನಾಥರ ಲೀಲಾ ವಿನೋದವೇ ಇರಬೇಕು. ತಮ್ಮ ಮನಸ್ಸಿನ ಭಾವ ಮತ್ತಷ್ಟು ಗಟ್ಟಿಯಾಯ್ತು. ಕಾರಣ ಗುರುನಾಥರು ರೀತಿಯದೇ ಚರ್ಯೆ, ಹಾವ, ಭಾವ, ಹಾಗೂ ಅದೇ ಪ್ರಶಾಂತ ನೋಟ. ಕೂಡಲೇ ಅಲ್ಲೊಬರು ಬಂದು ಇವರ ಮಾತುಗಳನ್ನು ತರ್ಜುಮೆ ಮಾಡಿದರು. ತುಮಕೂರಿನ ಈ ಭಕ್ತರು 'ನಿಮ್ಮದೊಂದು ಫೋಟೋ ತೆಗೆದುಕೊಳ್ಳುತ್ತೇವೆ' ಎಂದಾಗ, ಇಲ್ಲಿ ಕ್ಯಾಮರಾ ಬಳಸುವಂತಿಲ್ಲ. ಫೋಟೋ ತೆಗೆಯುವಂತಿಲ್ಲ ಎಂಬ ವಿಚಾರ ತಿಳಿದು ಬಂತು.
ಆ ಜಾಗದಿಂದ ಸ್ವಲ್ಪ ದೂರಕ್ಕೆ ಅವರನ್ನು ಕರೆದುಕೊಂಡು ಹೋಗಿ ನಮಿಸಿ, ತಮ್ಮ ಬಳಿ ಇದ್ದ ಅಲ್ಪ ಕಾಣಿಕೆಗಳನ್ನು ನೀಡಿದಾಗ, ಗುರುನಾಥರು ಜಗನ್ನಾಥನ ಪ್ರಸಾದವನ್ನು ಕೈತುತ್ತಾಗಿ ಒಂದಾದ ಮೇಲೆ ಒಂದರಂತೆ ನೀಡುತ್ತಿದ್ದರು. ಬೇಡವೆಂದರೂ 'ಇಲ್ಲ, ಹಾಗೆನ್ನಬೇಡಿ. ಇದು ಒಳ್ಳೆಯದು ಪ್ರಸಾದವೆಂದು' ತಾಯಿಯ ಮಮತೆಯಂತೆ, ಗುರುನಾಥರು ನೀಡಿದಂತೆಯೇ ನೀಡಿದರಂತೆ. ಹೀಗೆ ನೆನೆದವರ ಮನದಲ್ಲಿ ಎಂಬಂತೆ ಗುರುನಾಥರು ಪುರಿಯಲ್ಲಿ ಕಂಡದ್ದು ಒಂದು ವಿಚಿತ್ರವಾದರೂ ಸತ್ಯ. ಇಲ್ಲಿದೆ ನೋಡಿ ಅವರ ಭವ್ಯ ಚಿತ್ರ.
ಗುರುಕರುಣಾಶಾಲಿ. ಕರೆದಲ್ಲಿ ಬರುವ ಕರುಣಾಮಯಿ ಎಂಬುದಕ್ಕೆ ಇದೊಂದು ನಿದರ್ಶನ. ನಿರಂತರ ಹಲವಾರು ವರ್ಷಗಳು ಗುರುನಾಥರ ಜೊತೆ ಜೊತೆ, ಹಗಲು ರಾತ್ರಿಯೆನ್ನದೆ, ಗುರುನಾಥರ ಜೊತೆಗಿದ್ದುದರ ಫಲ- ಅವರಿಗೆ ಈ ರೀತಿ ಸಿಕ್ಕಿರಬೇಕು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment