ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 68
ಗ್ರಂಥ ರಚನೆ - ಚರಣದಾಸ
ನೂರ ಮೂವತ್ತೊಂಬತ್ತು ವರ್ಷ ಹಿಂದಿನ ಸಾಧುಗಳ ದರ್ಶನ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಆ ವ್ಯಕ್ತಿಗಳಿಬ್ಬರೂ ಸ್ನೇಹಿತರು. ಒಬ್ಬರು ಮೂಲತಃ ಮಂಗಳೂರಿನವರಾಗಿದ್ದು ಇನ್ನೊಬ್ಬರು ಮೈಸೂರು ವಾಸಿ. ಈಗ ಇಬ್ಬರೂ ಮೈಸೂರಿನಲ್ಲೇ ನೆಲೆಸಿದ್ದಾರೆ. ವೃತ್ತಿಯಲ್ಲಿ ವ್ಯಾಪಾರಿಗಳಾದ ಇವರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಆಗಾಗ್ಗೆ ಸಖರಾಯಪಟ್ಟಣಕ್ಕೆ ಬರುತ್ತಿದ್ದರು.
ಗುರುನಿವಾಸದಲ್ಲಿ ಒಂದು ಮೂಲೆಯಲ್ಲಿ ನಿಂತು ಗುರುವಿನ ಆಜ್ಞೆ ಆಗುವವರೆಗೂ ಕಾದು, ಗುರುನಾಥರು ಕರೆದಾಗ ಓಡಿ ಬಂದು ತನ್ನ ಸಮಸ್ಯೆಗಳನ್ನು ನಿವೇದಿಸಿ ಪರಿಹಾರ ಪಡೆದುಕೊಂಡು ಹೋಗುತ್ತಿದ್ದ ಅವರ ಗುರು ಭಕ್ತಿ ಹಾಗೂ ವಿನಯ, ಜಾತಿ ಮತವನ್ನು ಮೀರಿದ್ದು, ಸರ್ವರಿಗೂ ಆದರ್ಶಪ್ರಾಯವೆನಿಸಿದೆ.
ಒಮ್ಮೆ 2009 ರಲ್ಲಿ ಗುರುನಿವಾಸಕ್ಕೆ ಬಂದಿದ್ದ ಅವರನ್ನು ಕರೆದ ಗುರುನಾಥರು "ಇನ್ನು ಹತ್ತು ದಿನದಲ್ಲಿ ನೀವಿಬ್ಬರೂ ಮಂಗಳೂರಿನ ಮಂಗಳಾಂಬಿಕೆ ದೇಗುಲ ಹಾಗೂ ಬಿಜೈನ ಚರ್ಚ್ ಗೆ ಭೇಟಿ ನೀಡಿ ಬರಬೇಕು. ದಾರಿಯಲ್ಲಿ ಕುಂಟಾಡಿ ಎಂಬ ಸ್ಥಳದಲ್ಲಿ ಮಧ್ಯಾನ್ಹ ಮೂರು ಗಂಟೆ ಹದಿನೈದು ನಿಮಿಷಕ್ಕೆ ಓರ್ವ ಸಾಧುವಿನ ದರ್ಶನವಾಗುವುದು. ಅವರು ನೋಡಲು ಬಹಳ ಉಗ್ರವಾಗಿರುವರು. ಆದರೆ ನೀವುಗಳು ಭಯ ಪಡದೇ ಅವರ ದರ್ಶನ ಮಾಡಬೇಕು. ಅದೇ ಸಾಧು ನಿಮಗೆ ಮೂರು ಸಾರಿ ದರ್ಶನ ನೀಡುವರು ತಿಳೀತಾ?" ಅಂದರು.
ಆಗ ಅವರಿಬ್ಬರಲ್ಲಿ ಒಬ್ಬರು ಕುತೂಹಲದಿಂದ "ನೀವು ಹೇಳಿದ ಸಾಧುಗಳು ಅವರೇಎನ್ನಲು ಕುರುಹು ಏನೆಂದು" ಪ್ರಶ್ನಿಸಿದರು.
ಆಗ ಗುರುನಾಥರು "ಆ ಸಾಧು ಮೊದಲು ದರ್ಶನ ನೀಡುವ ಜಾಗದ ಸಮೀಪ ಎರಡು ಆರಕ್ಷಕ ವಾಹನ ಹಾಗೂ ಟ್ರಾಕ್ಟರ್ ನಿಂತಿರುವುದು" ಎಂದರು.
ಅಂತೆಯೇ ಅವರಿಬ್ಬರೂ ಮಂಗಳೂರಿಗೆ ಹೋಗಿ ಮಂಗಳಾಂಬಿಕೆ ದೇಗುಲ ಹಾಗೂ ಚರ್ಚ್ ನ ದರ್ಶನ ಮಾಡಿ ಅಲ್ಲಿಂದ ಮುಂದೆ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಉಡುಪಿ ಸಮೀಪದ ಅಂಬಲಪಾಡಿ ದೇಗುಲವನ್ನು ದರ್ಶಿಸಿ ಅಲ್ಲಿಂದ ಬರುತ್ತಿರಲು ಒಂದು ವೃತ್ತದ ಸಮೀಪ ವೇಗವಾಗಿ ಬಂದ ಕಾರೊಂದು ಇವರ ಕಾರಿಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಅದನ್ನು ತಪ್ಪಿಸಲು ಕಾರನ್ನು ಸಂಪೂರ್ಣವಾಗಿ ಎಡಕ್ಕೆ ತಿರುಗಿಸಿ ಅದೇ ಮಾರ್ಗವಾಗಿ ಮುಂದುವರೆದರು.
ಸ್ವಲ್ಪ ದೂರಕ್ಕೆ ಸಾಗುತ್ತಿದ್ದಂತೆಯೇ ಗುರುನಾಥರು ಹೇಳಿದ ಎರಡು ಆರಕ್ಷಕ ವಾಹನ ನಿಂತಿದ್ದು ಅದರ ಸಮೀಪದಲ್ಲಿಯೇ ಸುಮಾರು ಆರು ಅಡಿ ಎತ್ತರವಿರುವ ಒಬ್ಬ ಜಟಾಧಾರಿ ನಿಂತಿದ್ದನ್ನು ಕಂಡ ಅವರು ಕಾರನ್ನು ಬದಿಗೆ ನಿಲ್ಲಿಸಿ ಓಡಿ ಬಂದು ನಮಸ್ಕರಿಸಿದರು. ಅವರಲ್ಲಿ ಒಬ್ಬರು ಗುರುವಾಕ್ಯವನ್ನು ಸಂಶಯಿಸುತ್ತಲೇ ನಮಸ್ಕರಿಸಿದರು.
ಆ ನಂತರ ಮುಂದೆ ಸಾಗಿದ ಅವರು "ಸಾಧುಗಳಿಗೆ ದಕ್ಷಿಣೆಯಾಗಿ ಏನನ್ನು ನೀಡಲಿಲ್ವಲ್ಲಾ? ಮಣಿಪಾಲದಲ್ಲಿ ನೋಡಿದ ಮಾವಿನ ಹಣ್ಣನ್ನಾದರೂ ತರಬಹುದಿತ್ತು" ಎಂದು ಮಾತನಾಡಿಕೊಂಡು ಕಾರು ನಿಲ್ಲಿಸಿ ಸಮೀಪದ ಅಂಗಡಿಯೊಂದರಿಂದ ನೀರು ಹಾಗೂ ಬಾಳೆಹಣ್ಣನ್ನು ತೆಗೆದುಕೊಂಡು ಕಾರು ತಿರುಗಿಸಿ ಬರುವಷ್ಟರಲ್ಲಿ ಆ ಸಾಧು ಅವರಿಗಾಗಿಯೇ ಕಾದಿರುವರೋ ಎಂಬಂತೆ ಸಮೀಪದಲ್ಲಿಯೇ ನಿಂತಿದ್ದರು. ಅವರಿಗೆ ಮತೊಮ್ಮೆ ನಮಸ್ಕರಿಸಿ ಹಣ್ಣು ನೀರನ್ನು ಸಮರ್ಪಿಸಿ ನೋಡಲು, ಮೊದಲು ದರ್ಶನದಲ್ಲಿ ಬರಿಗೈಯಲ್ಲಿದ್ದ ಆ ಸಾಧುಗಳ ಕೈಯಲ್ಲಿ ಮಾವಿನ ಹಣ್ಣೊಂದು ಇರುವುದನ್ನು ಕಂಡು ಚಕಿತರಾದರು.
ಗುರುನಾಥರು ಅಂದಂತೆಯೇ ಆ ಸಾಧುಗಳು ಭಯಾನಕವಾಗಿದ್ದರು. ತಮ್ಮ ಕೃಪೆ ಸದಾ ತಮ್ಮ ಮೇಲಿರಬೇಕೆಂದು ಪ್ರಾರ್ಥಿಸಿದ ಅವರು ಕಾರನ್ನು ತಿರುಗಿಸಿಕೊಂಡು ಸಮೀಪವಿದ್ದ ಆಶ್ರಮದೆಡೆಗೆ ನಡೆದರು. ಅಲ್ಲಿ ಸಮಾಧಿಸ್ಥರಾದ ಸಾಧುಗಳ ಸಮಾಧಿಗೆ ನಮಸ್ಕರಿಸಿ ಅವರ ಭಾವಚಿತ್ರವನ್ನು ನೋಡಿ ಅರೆಕ್ಷಣ ದಂಗಾದರು. ಕಾರಣ, ಆ ಭಾವಚಿತ್ರ ತಾವು ಆಗತಾನೇ ದರ್ಶಿಸಿ ಬಂದ ಸಾಧುಗಳದ್ದೇ ಆಗಿತ್ತು.
ಮೊದಲ ಸಾರಿ ಅನುಮಾನದಿಂದಲೇ ನಮಸ್ಕರಿಸಿದ್ದ ಅವರಲ್ಲಿ ಒಬ್ಬರಿಗೆ ಈಗ ನಂಬಿಕೆ ಧೃಡಗೊಂಡಿತು. ಆದರೆ ಕಾಲ ಮಿಂಚಿದ್ದರಿಂದ ಪರಿತಪಿಸಿದ ಆ ವ್ಯಕ್ತಿ "ಗುರುವೇ ನನ್ನ ಕ್ಷಮಿಸು. ಇನ್ನೊಮ್ಮೆ ದರ್ಶನ ನೀಡೆಂದು" ಪ್ರಾರ್ಥಿಸುತ್ತಾ ಇಬ್ಬರೂ ಹೊರನಡೆದು ತುಸು ದೂರ ಸಾಗುವಷ್ಟರಲ್ಲಿ ಆ ಸಾಧು ಮೂರನೇ ಬಾರಿ ದರ್ಶನ ನೀಡಿದರು. ಆಗ ಮತ್ತೊಮ್ಮೆ ನಮಸ್ಕರಿಸಿ, ಗುರು ಕೃಪೆಯನ್ನು ಕೊಂಡಾಡುತ್ತಾ ಆ ವ್ಯಕ್ತಿಗಳು ಮುನ್ನೆಡೆದರು.
ಈ ವಿಚಾರವನ್ನು ನನ್ನೊಂದಿಗೆ ಹೇಳುವಾಗಲೆಲ್ಲಾ ಅವರ ಕಣ್ಣಾಲೆಗಳು ತೇವವಾಗುತ್ತಿತ್ತು. ಇಂದು ಅವರಿಬ್ಬರೂ ಹಲವಾರು ಸಮಸ್ಯೆಗಳಲ್ಲಿ ಸಿಲುಕಿದ್ದರೂ ಕೂಡಾ ಗುರುನಾಥರ ಮೇಲಿದ್ದ ಅವರ ಭಕ್ತಿ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದು ಎಲ್ಲರಿಗೂ ಮಾದರಿ ಎನಿಸುತ್ತದೆ. ಅಂದ ಹಾಗೆ ಈ ಘಟನೆ ನಡೆದ ದಿನ 13ನೇ ಮೇ 2009... ,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment