ಒಟ್ಟು ನೋಟಗಳು

Friday, December 16, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 73


    ಗ್ರಂಥ ರಚನೆ - ಚರಣದಾಸ 


ಮಣ್ಣು ಪಂಚೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಸಾಮಾನ್ಯವಾಗಿ ನಾವೆಲ್ಲರೂ ವ್ಯಕ್ತಿಗಳನ್ನು ಅವರ ವೇಷಭೂಷಣ-ಅಂತಸ್ತಿನ ಆಧಾರದಲ್ಲಿ ಅರ್ಥೈಸುತ್ತೇವೆ. ಆದರೆ ಸದ್ಗುರುವಾದರೋ ಪ್ರತಿ ವ್ಯಕ್ತಿಯ ಒಳ (ಆಂತರ್ಯ) ಅಲಂಕಾರವನ್ನು ಗುರುತಿಸಿ ಆದರಿಸುವನು. 

ಘಟನೆ ಚರಣದಾಸನಾದ ನಾನು ಗುರುನಿವಾಸಕ್ಕೆ ಬರುವ ಬಹಳ ಮೊದಲು ನಡೆದದ್ದು. ಮೊನ್ನೆ ಭೇಟಿಯಾದ ವ್ಯಕ್ತಿಯೊಬ್ಬರು ಈ ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದರಿಂದ ಇಲ್ಲಿ ದಾಖಲಿಸುತ್ತಿದ್ದೇನೆ. 

ಒಮ್ಮೆ ಚಿಕ್ಕಮಗಳೂರಿನ ಓರ್ವ ಗುರುಬಂಧುಗಳ ಮನೆಯಲ್ಲಿ ಮದುವೆ ಸಮಾರಂಭವಿತ್ತು. ಗುರುನಾಥರ ನಿಕಟ ಸಂಪರ್ಕದಲ್ಲಿದ್ದ ಆ ಗುರುಬಂಧುಗಳು ಗುರುನಾಥರಿಗೂ ಆಹ್ವಾನವಿತ್ತಿದ್ದರು. ಆ ಮದುವೆಗೆ ಬಂದಿದ್ದ ಬಂಧು ಒಬ್ಬರು ಗುರುನಾಥರ ಕುರಿತು "ಅವರನ್ನು ಯಾರು ಗುರು ಅಂತಾರೆ. ಅವರ ಪಂಚೆ ನೋಡು. ಎಷ್ಟು ಕೊಳಕಾಗಿದೆ. ಮುಖವೇನೋ ತೇಜೋಮಯವಾಗಿದೆ ಅಷ್ಟೇ......." ಎಂದು ಹಗುರವಾಗಿ ಮಾತನಾಡಿದರು. ಇದನ್ನು ಕೇಳಿಸಿಕೊಂಡ ಗುರುಭಕ್ತರೊಬ್ಬರು "ಅಪ್ಪಾ, ಆ ರೀತಿ ಏನೂ ಮಾತಾಡಬೇಡವೋ, ಗುರುಗಳಿಗೆ ಗೊತ್ತಾಗುತ್ತೆ" ಅಂದರು. 

ಮತ್ತದೇ ಧಾಟಿಯಲ್ಲಿ ಮುಂದುವರೆಸಿದ ಆತ "ಓಹೋ, ಏನ್ ಇಲ್ಲಿ ಮಾತನಾಡಿದ್ದು ಅವರಿಗೆ ಹೆಂಗೆ ಗೊತ್ತಾಗುತ್ತೆ? ನಾನೇನು ಮೈಕ್ ಇಟ್ಟುಕೊಂಡಿದ್ದೀನಾ.... ?" ಅಂದರು. 

ಇದಕ್ಕೂ ಮೊದಲು ಆ ಮನೆಯವರು ಗುರುನಾಥರಿಗೆ ಕೊಡಲೆಂದೇ ಎರಡು ಪಂಚೆ ತರಿಸಿಟ್ಟಿದ್ದರು. 

ಈ ಮಾತುಕತೆಯಾಗಿ ಕೆಲವೇ ನಿಮಿಷದಲ್ಲಿ ಛತ್ರದ ಮುಂಭಾಗ ಬಂದ ಗುರುಗಳು ಒಬ್ಬ ವ್ಯಕ್ತಿಯನ್ನು ಕಳಿಸಿ ನನಗಾಗಿ ತಂದಿರೋ ಪಂಚೆ ಕೊಡೋಣವಂತೆ... ಎಂದು ಹೇಳಿ ಕಳುಹಿಸಿದರು. ಈ ಘಟನೆಯನ್ನು ಕಣ್ಣಾರೆ ಕಂಡ ಆ ವ್ಯಕ್ತಿ ಅವಾಕ್ಕಾದರು. ಮಾತ್ರವಲ್ಲ ಮನದಲ್ಲೇ ಗುರುವಿಗೆ ವಂದಿಸಿದರು. 

ತನ್ನ ಹಳೆಯ ಪಂಚೆಯ ಮೇಲುಗಡೆಯೇ ಹೊಸ ಪಂಚೆಯನ್ನುಟ್ಟು ಒಳಬಂದ ಗುರುನಾಥರು ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಹೊಸಪಂಚೆಯನ್ನು ಬಿಚ್ಚಿ ಹಿಂತಿರುಗಿಸಿ ಅಲ್ಲಿಂದ ಹೊರಟರು. ಗುರುನಾಥರ ಮೌನವೇ ಅಲ್ಲಿದ್ದ ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಿತ್ತು.....,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment