ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 84
ಗ್ರಂಥ ರಚನೆ - ಚರಣದಾಸ
ಸುಲಭ ಪೂಜೆಯ ಮಾಡಿ.....
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ಮನೆಯಲ್ಲಿದ್ದರೆ ಆ ರಸ್ತೆಯಲ್ಲಿ ಓಡಾಡುವ ಯಾವುದೇ ಜೀವಿಯೂ ಉಪವಾಸ ಹೋದ ಉದಾಹರಣೆ ಇಲ್ಲ. ಜಾನುವಾರುಗಳಿಗೆ ರಸ್ತೆ ಬದಿಯಲ್ಲಿ ಮೇವು ಹಾಕಿ ಮನೆ ಮುಂದೆ ಕುಡಿಯಲು ನೀರಿನ ತೊಟ್ಟಿ ಇಟ್ಟಿರುತ್ತಿದ್ದರು. ಸದಾ ಕಾಲ ಹಣ್ಣು, ಹಂಪಲು, ಸಿಹಿ ತಿನಿಸುಗಳನ್ನು ವಿತರಿಸುತ್ತಿದ್ದರು. ಬಿಸಿಲ ಕಾಲದಲ್ಲಿ ದಾರಿಯಲ್ಲಿ ಹೋಗುವವರಿಗೆಲ್ಲ ತಂಪಾದ ಮಜ್ಜಿಗೆ ವಿತರಿಸುತ್ತಿದ್ದರು.
ಯಾರೋ ಒಬ್ಬರು "ಸ್ವಾಮಿ, ತಾವು ಏನು ಪೂಜೆ ಮಾಡ್ತೀರಾ?" ಅಂತ ಕೇಳಿದ್ದಕ್ಕೆ, "ನಂಗೆಂತದಯ್ಯಾ ಪೂಜೆ? ಈಗ ಮಾಡ್ತಿದೀನಲ್ಲ ಇದೇ ಹೋಮ, ಇದೇ ಪೂಜೆ, ತಿಳೀತಾ?" ಎಂದು ಹೇಳಿ ನಸುನಕ್ಕು "ಸುಲಭ ಪೂಜೆಯ ಮಾಡಿ ಫಲವಿಲ್ಲದವರುಂಟೆ?" ಎಂದು ಪ್ರಶ್ನಿಸಿದ್ದರು.
ಅವರು ಮನೆಯಲ್ಲಿದ್ದರೆಂದರೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕನಿಷ್ಠ 15-20 ಲೀಟರ್ ಹಾಲು ತೆಗೆದುಕೊಂಡು ದಾರಿಯಲ್ಲಿ ಹೋಗುವವರಿಗೆಲ್ಲಾ ವಿತರಿಸುತ್ತಿದ್ದರು. ಎಷ್ಟೇ ಸಮಸ್ಯೆಗಳನ್ನು ಹೊತ್ತುಕೊಂಡು ಬಂದಿದ್ದರೂ, ಅವರ ಒಂದು ದರ್ಶನವಾದರೆ ಸಾಕು, ನಮ್ಮ ಸಮಸ್ಯೆಗಳೆಲ್ಲ ಮರೆತುಹೋಗಿ ಒಂದು ಅಮಿತವಾದ ಆನಂದದಲ್ಲಿ ಮುಳುಗಿದ ಅನುಭವವಾಗುತ್ತಿತ್ತು. ಇದು ಗುರುನಾಥರ ದರ್ಶನ ಮಾಡಿದ ಪ್ರತಿಯೊಬ್ಬರ ಅನುಭವ.
ಅದು ಸೀಬೆಹಣ್ಣಿನ ಫಸಲಿನ ಕಾಲ. ಗುರುನಾಥರ ಎರಡನೆಯ ಮನೆಯ ಮುಂದೆ ಸೀಬೆಯ ಹಣ್ಣಿನ ಮರವೊಂದಿತ್ತು. ದಿನವೂ ಅದೇ ದಾರಿಯಲ್ಲಿ ಹೋಗುತ್ತಿದ್ದ ಏಳನೇ ತರಗತಿಯ ಬಾಲಕನೊಬ್ಬ ಫಸಲಿನಿಂದ ತುಂಬಿ ನಿಂತಿದ್ದ ಮರವನ್ನು ಆಸೆಗಣ್ಣಿನಿಂದ ನೋಡುತ್ತಾ ಮುಂದೆ ನಡೆದನು.
ಅದೇನು ಆಶ್ಚರ್ಯ? ಮರುದಿನ ಬೆಳಿಗ್ಗೆ ಆ ಹುಡುಗ ಓದುತ್ತಿದ್ದ ಶಾಲೆಯ ಸುಮಾರು 350 ಮಕ್ಕಳಿಗೂ ಸೀಬೆ ಹಣ್ಣಿನ ವಿತರಣೆ ಆಗಿತ್ತು.
ಅದೇ ಹುಡುಗ ತನ್ನ ತಂದೆಯೊಂದಿಗೆ ಪ್ರತಿ ಶನಿವಾರ ಊರಿನಲ್ಲಿ ನಡೆಯುತ್ತಿದ್ದ ರಾಮ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದನು. ಭಜನೆ ಪ್ರತಿ ಮನೆಗೂ ತೆರಳುತ್ತಿತ್ತು. ಹಾಗೆಯೇ ಗುರುನಾಥರ ಮನೆಗೂ ಬರುತ್ತಿತ್ತು. ಗುರುನಾಥರ ಸಂಬಂಧಿಯೂ ಆಗಿದ್ದ ಅವರ ಮೇಲೆ ಗುರುನಾಥರು ವಿಶೇಷ ಅಭಿಮಾನ ಹೊಂದಿದ್ದರು.
ಒಮ್ಮೆ ಹಣಕಾಸಿನ ಭಾರಿ ಅಡಚಣೆಯಾಗಿ ಗುರುನಾಥರು ಆ ಬಾಲಕನ ತಂದೆಯಿಂದ ಕೆಲವು ಸಾವಿರ ರೂಗಳಷ್ಟು ಹಣವನ್ನು ಸಾಲ ತೆಗೆದುಕೊಂಡಿದ್ದರು. ಆದರೆ ದುರದೃಷ್ಟವಶಾತ್ ಸಕಾಲದಲ್ಲಿ ಆ ಹಣವನ್ನು ಹಿಂತಿರುಗಿಸಲು ಗುರುನಾಥರಿಗೆ ಸಾಧ್ಯವಾಗಿರಲಿಲ್ಲ. ತನಗೆ ಎಷ್ಟೇ ಕಷ್ಟವಿದ್ದರೂ ಗುರುನಾಥರ ಮೇಲೆ ಅಪಾರ ಪ್ರೀತಿ ಇದ್ದ ಆ ವ್ಯಕ್ತಿ ಎಂದೂ ಹಣ ಹಿಂತಿರುಗಿಸುವಂತೆ ಗುರುನಾಥರನ್ನು ಕೇಳಿರಲಿಲ್ಲ.
ಆದರೆ ಸಮಸ್ಯೆಯ ಒತ್ತಡದಿಂದ ಆ ಬಾಲಕನ ತಾಯಿ "ಗುರುನಾಥರಲ್ಲಿ ಹಣ ಹಿಂತಿರುಗಿಸುವಂತೆ ಕೇಳಿ" ಎಂದು ತನ್ನ ಪತಿಯನ್ನು ಪೀಡಿಸುತ್ತಿದ್ದರು.
ರಾಮಭಜನೆ ಗುರುನಾಥರ ಮನೆಗೆ ಬಂದಿದ್ದಾಗ ಗುರುನಾಥರೇ ಆ ವ್ಯಕ್ತಿಯನ್ನು ಕರೆದು "ಏನಯ್ಯಾ ನಿನ್ನ ಹೆಂಡತಿ ಹಣ ಕೇಳು ಅಂತ ಪೀಡಿಸುತ್ತಿದ್ದಾಳೆ ಅಲ್ಲವೇ?. ಇನ್ನು ಸ್ವಲ್ಪ ದಿನದಲ್ಲಿ ಹಣ ಹಿಂತಿರುಗಿಸುತ್ತೇನೆ ಆಯ್ತಾ?" ಎಂದು ನುಡಿದಿದ್ದರು.
ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳು ಗುರುನಾಥರಿಗೆ ಹೇಗೆ ಗೊತ್ತಾಗುತ್ತೆ!? ಎಂದು ಆ ಬಾಲಕ ವಿಸ್ಮಯ ಪಡುತ್ತಿದ್ದನು. ಆ ವ್ಯಕ್ತಿಯು ತನ್ನ ಸೋದರನೊಬ್ಬನಿಂದ ಕೆಲವು ಸಾವಿರ ರೂಗಳಷ್ಟು ಸಾಲ ಮಾಡಿದ್ದು ಅದನ್ನು ಸಕಾಲದಲ್ಲಿ ಹಿಂತಿರುಗಿಸಲಾಗಿರಲಿಲ್ಲ.
ಆ ಕಾರಣಕ್ಕೆ ಆ ಸಹೋದರನು ಒಂದು ದಿನ ತನ್ನ ಅಣ್ಣನೊಂದಿಗೆ ವಿಪರೀತ ಜಗಳ ಆಡಿದನು. ಮರುದಿನ ಬೆಳಿಗ್ಗೆ ಆ ಸಹೋದರನ ಮನೆಗೆ ದಿಢೀರನೆ ಬಂದ ಗುರುನಾಥರು ಅವನ ಕೈಗೆ ಹತ್ತು ಸಾವಿರ ರೂಗಳನ್ನು ನೀಡಿ ಅಲ್ಲಿಂದ ಹೊರಟರು.
ಸಖರಾಯಪಟ್ಟಣದಲ್ಲಿ ರಾಮಭಜನಾ ಮಂದಿರ ಗ್ರಾಮಸ್ಥರೆಲ್ಲರ ಸಹಕಾರದಿಂದ ನಿರ್ಮಾಣವಾಗತೊಡಗಿತ್ತು. ಪ್ರತಿದಿನ ಸಂಜೆ ಹಾಗೂ ರಜಾ ದಿನಗಳಲ್ಲಿ ವಯಸ್ಕರಲ್ಲದೆ ಶಾಲೆಗೆ ಹೋಗುವ ಮಕ್ಕಳು ಕೂಡ ಈ ಶುಭ ಕಾರ್ಯದಲ್ಲಿ ಕೈಜೋಡಿಸಿದ್ದರು. ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ಗುಂಡಿ ತೆಗೆಯುತ್ತಿದ್ದರು. ಆ ಬಾಲಕನು ಕೂಡ ತನ್ನ ಸ್ನೇಹಿತರೊಂದಿಗೆ ಈ ಕೆಲಸದಲ್ಲಿ ನಿರತನಾಗಿದ್ದನು.
ಒಂದು ದಿನ ಆ ಬಾಲಕರೆಲ್ಲರಿಗೂ ಮಸಾಲೆ ದೋಸೆ ತಿನ್ನಬೇಕೆಂಬ ಬಯಕೆಯಾಗಿ ನಿರ್ಮಾಣ ಕಾರ್ಯದ ಮುಖ್ಯಸ್ಥರನ್ನು ಪರಿಪರಿಯಾಗಿ ವಿನಂತಿಸಿಕೊಂಡರು. ಆದರೆ ಅವರು ದೋಸೆ ಕೊಡಿಸುವುದಿಲ್ಲ ಎಂದು ತಿರಸ್ಕರಿಸಿದರು. ಬೇಸರಗೊಂಡ ಈ ಬಾಲಕರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಮರುದಿನ ಸಂಜೆ ಅದೇ ಸಮಯಕ್ಕೆ ತನ್ನ ಕೆಲ ಭಕ್ತರೊಂದಿಗೆ ಅಲ್ಲಿಗೆ ಬಂದ ಗುರುನಾಥರು ಎಲ್ಲರಿಗೂ ಮಸಾಲೆದೋಸೆ ನೀಡಿ ಸಂತೋಷ ಪಡಿಸಿ ಅಲ್ಲಿಂದ ಹೊರಟರು.
ಮತ್ತೊಮ್ಮೆ ಆ ಹುಡುಗನನ್ನು ಕರೆದು "ನೀನು ಅದೃಷ್ಟವಂತ. ನೀ ಎಲ್ಲೇ ಹೋದರು ಊಟಕ್ಕೆ ಕೊರತೆ ಇಲ್ಲ ಕಣಯ್ಯಾ" ಎಂದು ಹರಸಿ ಕಳಿಸಿದರು. ಇಂದು ಆ ಬಾಲಕ ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ......,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige paadagalige nanna poojya namanagalu. Yellarigu nimma krupe haagu rakshe sadaa doreyali. Hari om tatsat.
ReplyDelete