ಒಟ್ಟು ನೋಟಗಳು

Sunday, December 25, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 82


    ಗ್ರಂಥ ರಚನೆ - ಚರಣದಾಸ 


ಗುರು ಆತ್ಮ ವಿಶ್ವಾಸದ ಗಣಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮಲೆನಾಡು ಮೂಲದ ಓರ್ವ ದಂಪತಿಗಳಿಗೆ ಮದುವೆಯಾಗಿ ಬಹಳ ಕಾಲವಾದರೂ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಹೀಗಿರಲು ಅವರನ್ನು ಪರೀಕ್ಷಿಸಿದ ವೈದ್ಯರು ಸಂತಾನಯೋಗವಿಲ್ಲವೆಂದು ತಿಳಿಸಿದರು. ಇದರಿಂದ ತೀರಾ ಆಘಾತಕ್ಕೆ ಒಳಗಾದ ದಂಪತಿಗಳು ಕೊನೆಯ ಪ್ರಯತ್ನವಾಗಿ ಗುರುನಾಥರ ಬಗ್ಗೆ ತಿಳಿದುಕೊಂಡು ದರ್ಶಿಸಲು ಅಪೇಕ್ಷಿಸಿದರು. 

ಆಗ ಅನಿರೀಕ್ಷಿತವಾಗಿ ಸಖರಾಯಪಟ್ಟಣದಲ್ಲಿರುವ ಬಂಧುಗಳ ಮನೆಗೆ ಬಂದಿದ್ದ ಅವರ ತಾಯಿ ನೇರವಾಗಿ ಗುರುನಾಥರ ದರ್ಶನ ಮಾಡಿ ಮಗಳ ದುಸ್ಥಿತಿಯನ್ನು ದೂರ ಮಾಡಬೇಕೆಂದು ಬೇಡಿಕೊಂಡರು. 

ಆಗ ಅವರಿಗೆ ಮಕ್ಕಳಾಗುವುದೆಂದು ಹೇಳಿ ಧೈರ್ಯ ತುಂಬಿದ ಗುರುನಾಥರು ಎರಡು ದ್ರಾಕ್ಷಿ ಹಣ್ಣನ್ನು ಆ ತಾಯಿಯ ಕೈಗಿತ್ತು "ನಿಮ್ಮ ಮಗಳಿಗೆ ಇದನ್ನು ತಿನ್ನಲು ಕೊಡು. ಹಾಗೂ ಇನ್ನು ಮೂರು ತಿಂಗಳ ಕಾಲ ಯಾವುದೇ ವೈದ್ಯರ ಬಳಿ ಪರೀಕ್ಷೆ ಮಾಡಿಸಬಾರದೆಂದು" ಹೇಳಿ ಕಳಿಸಿದರು. 

ಆ ಮೂರು ತಿಂಗಳಲ್ಲಿ ಈಕೆಯಲ್ಲಿ ತಾಯ್ತನದ ಎಲ್ಲ ಲಕ್ಷಣಗಳು ಗೋಚರವಾದವು. ಆದರೆ ಕೆಲವೇ ದಿನಗಳಲ್ಲಿ ಆ ಹೆಣ್ಣು ಮಗಳು ಮತ್ತೆ ರಜಸ್ವಲೆಯಾದಳು. ಮತ್ತೆ ವೈದ್ಯರಲ್ಲಿ ಪರೀಕ್ಷಿಸಲು ಹೊರಟರಾದರೂ, ಅವರ ತಾಯಿಯ ವಿನಂತಿಯ ಮೇರೆಗೆ ಮೂರು ತಿಂಗಳ ನಂತರವೇ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿದರು. ಆಗ ಆ ಮಹಿಳೆಯ ಗರ್ಭದಲ್ಲಿ ಎರಡು ಭ್ರೂಣ ನಿರ್ಜೀವವಾಗಿರುವ ವಿಷಯ ಪತ್ತೆಯಾಯಿತು. 

ಇಂದು ಆ ಮಹಿಳೆ ಒಂದು ಗಂಡು ಮಗುವಿನ ತಾಯಿಯಾಗಿದ್ದು, ಇದು ವೈದ್ಯ ಲೋಕಕ್ಕೊಂದು ಅಚ್ಚರಿ. ಗುರು ಕೃಪೆಯಿಂದ ಸಂತಾನ ಪಡೆದ ಈ ದಂಪತಿಗಳು ತಮ್ಮ ಕಂದಮ್ಮನೊಂದಿಗೆ ಬಂದು ಗುರುನಾಥರ ಆಶೀರ್ವಾದ ಪಡೆಯಲು, ಗುರುನಾಥರು "ಇನ್ನೇನು ಬೇಕಮ್ಮ ನಿಂಗೆ" ಎಂದು ಕೇಳಲು, 

ಆ ದಂಪತಿಗಳು "ನಿಮ್ಮ ಕೃಪೆ ನಮ್ಮ ಕುಟುಂಬದ ಮೇಲೆ ನಿರಂತರವಾಗಿರಲಿ" ಎಂದು ಪ್ರಾರ್ಥಿಸಿದರು. 

ಅದು ಶಿವಮೊಗ್ಗ ಮೂಲದಲ್ಲಿ ವಾಸಿಸುತ್ತಿದ್ದ ಮಾಧ್ಯಮ ವರ್ಗದ ಸುಸಂಸ್ಕೃತ ಕುಟುಂಬ. ಅವರಿಗೆ 5-6 ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿತ್ತಾದರೂ ಈ ದಂಪತಿಗಳು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಗುರುನಾಥರ ಬಗ್ಗೆ ತಿಳಿದ ಅವರು ನೇರವಾಗಿ ಗುರುನಿವಾಸಕ್ಕೆ ಬಂದು ತಮ್ಮ ಕಷ್ಟವನ್ನು ನಿವೇದಿಸಿಕೊಂಡರು. 

ಆಗ ಗುರುನಾಥರು, "ನೋಡಿ ನೀವು ಅಡಿಕೆ ವ್ಯಾಪಾರ (ಚೇಣಿ) ಮಾಡಿ ನೀವಿನ್ನು ಭಯಪಡಬೇಕಿಲ್ಲ. ಋಣಮುಕ್ತರಾಗಿ ಎಲ್ಲ ಅನುಕೂಲವಾಗುವುದು" ಎಂದು ಹಾರೈಸಿ ಕಳಿಸಿದರು. ಅಂತೇಯೆಯಿಂದು ಆ ದಂಪತಿಗಳು ಋಣಮುಕ್ತರಾಗಿರುವರು ಮಾತ್ರವಲ್ಲ. ಪರರಿಗೆ ಸಹಾಯ ಮಾಡುವಷ್ಟು ಆರ್ಥಿಕವಾಗಿ ಸದೃಢರಾಗಿರುವರು. 

ಆ ದಂಪತಿಗಳದ್ದು ಒಂದು ಮಗುವನ್ನು ಹೊಂದಿದ್ದ ಪುಟ್ಟ ಸಂಸಾರ. ಬಹಳ ಕಷ್ಟ ಪಟ್ಟು ಜೀವನದಲ್ಲಿ ಮೇಲಕ್ಕೆ ಬಂದಿದ್ದ ಆ ದಂಪತಿಗಳು ಗುರುಸೇವೆಯಲ್ಲಿ ಸದಾ ಮುಂದಿದ್ದರೂ ಯಾವುದೇ ಆಡಂಬರ, ಅತಿರೇಕವಿಲ್ಲದ ನಡವಳಿಕೆ ಹೊಂದಿದ್ದರು. 

ಗುರುನಾಥರು ಯಾವಾಗಲೂ ಅವರ ಬಗ್ಗೆ "ನೋಡಯ್ಯಾ ಎಂಥಹ ಸಾತ್ವಿಕ ಹೆಣ್ಣು ಮಗಳಾಕೆ!! ಎಂದು ಮೆಚ್ಚುಗೆ ಮಾತನಾಡುತ್ತಿದ್ದರು. ಪತಿ ಸರ್ಕಾರಿ ನೌಕರಿಯಲ್ಲಿದ್ದು ಪತ್ನಿ ಗೃಹಸ್ಥೆಯಾಗಿದ್ದರು. 

ಆ ಪತ್ನಿ ತನ್ನ ಪತಿಯ ಸಂಬಂಧಿಯೋರ್ವರು ಯಾರೊಂದಿಗೋ ಪ್ರೇಮ ಬಂಧನದಲ್ಲಿ ಸಿಲುಕಿರುವುದನ್ನು ತಿಳಿದು ಆಘಾತಗೊಂಡರು. ಹಾಗೂ ಅನಿರೀಕ್ಷಿತವಾಗಿ ಆ ಪ್ರೇಮಿಗಳ ಪ್ರೇಮ ಪತ್ರಗಳು  ಇವರ ಕೈಗೆ ಸಿಕ್ಕಿದವು. ಅದು ಬೇರೆಯವರ ಕೈಗೆ ಸೇರಿದರೆ ಕುಟುಂಬಕ್ಕೆ ಮುಜುಗರವಾದಿತೆಂದು ಭಾವಿಸಿದ ಆ ಮಹಿಳೆ ಸದುದ್ದೇಶದಿಂದ ಆ ಪತ್ರಗಳನ್ನು ಸುಟ್ಟು ಹಾಕಿದರು. 

ಅದಾಗಿ ಕೆಲವೇ ದಿನಗಳಲ್ಲಿ ಆ ಮಹಿಳೆ ವಿಪರೀತ ರಕ್ತಸ್ರಾವದಿಂದ ನಿತ್ರಾಣವಾಗತೊಡಗಿದರು. ಬರಬರುತ್ತಾ ನಡೆಯುವುದೇ ದುಸ್ತರವಾಗತೊಡಗಿತು. ಸದಾ ಗುರುನಾಥರ ಸಂಪರ್ಕದಲ್ಲಿದ್ದ ಆ ಮಹಿಳೆ ತನ್ನ ಖಾಯಿಲೆ ಬಗ್ಗೆ ಹೇಳುತ್ತಾ, ಯಾವುದೇ ಔಷಧೋಪಚಾರಗಳು ಫಲಿಸಲಿಲ್ಲ ಎಂದು ದುಃಖಿಸಿದರು. 

ಆಗ ಸಾಂತ್ವನ ಹೇಳಿದ ಗುರುನಾಥರು ಒಂದು ಕೊಡದಲ್ಲಿ ನೀರು, ಅಕ್ಕಿ, ವಿಳ್ಳೇದೆಲೆ ಹಾಕಿಸಿ ಹೊರಗೆ ಎಸೆಯುವಂತೆ ಹೇಳಿದರು. ಹೀಗೆ ಮಾಡಿದ ಕೆಲವೇ ಗಂಟೆಗಳಲ್ಲಿ, ಆರು ತಿಂಗಳಿನಿಂದ ನಿಂತಿರದ ರಕ್ತಸ್ರಾವ ಕೂಡಲೇ ನಿಂತಿತು. 

ಮತ್ತೊಂದು ದಿನ ಗುರುನಾಥರು ಆರಾಮವಾಗಿದ್ದ ಸಮಯದಲ್ಲಿ ತನಗೆ ಹೀಗಾಗಲು ಕಾರಣವೇನೆಂದು ಕೇಳಲು ಗುರುನಾಥರು "ಆ ಮಹಿಳೆ ಅವರ ಸಂಬಂಧಿಯ ಪ್ರೇಮ ಪತ್ರವನ್ನು ಸುಟ್ಟು  ಹಾಕಿದ್ದು ಹಾಗೂ ಇಲ್ಲಿ ನಿಮ್ಮ ಪಕ್ಕದ ಮನೆಯ ಹೆಂಗಸಿನ ಖಾಯಿಲೆಯ ವಿರೂಪವನ್ನು ಕಂಡು ಗಾಬರಿಯಾಗಿದ್ದೀಯಾ. ಅದಕ್ಕೆ ಹೀಗಾಯಿತು ಕಣಮ್ಮಾ... " ಎಂದು ತಿಳಿಸಿದರು. 

ಹಾಗೇ ಮತ್ತೊಮ್ಮೆ ಸಿರಿವಂತರ ಮನೆಯ ಸೊಸೆಯಾಗಿ ಬಂದ ಮಹಿಳೆಯೊಬ್ಬರಿಗೆ ಮೊದಲ ಮಗು ಹೆಣ್ಣಾಗಿದ್ದರಿಂದ ಗಂಡನ ಮನೆಯವರು ಬೇಸರಗೊಂಡಿದ್ದರು. ಎರಡನೇ ಬಾರಿ ಗರ್ಭ ಧರಿಸಿದ್ದ ಆಕೆಗೆ ಇದೂ ಹೆಣ್ಣಾದರೆ ನನ್ನ ಗತಿ ಏನಪ್ಪಾ ಎಂದು ಆತಂಕಗೊಂಡು, ಗುರುನಾಥರಲ್ಲಿ ತನ್ನ ದುಗುಡವನ್ನು ತೋಡಿಕೊಂಡರು. 

ಆಗ ಆಕೆಗೆ ಧೈರ್ಯ ತುಂಬಿದ ಗುರುನಾಥರು ಸ್ವಲ್ಪ ಅವಲಕ್ಕಿಯನ್ನು ತಿನಿಸಿದರು ಅಷ್ಟೇ... ಗುರುಕೃಪೆಯಿಂದ ಆಕೆಯ ಎರಡನೇ ಮಗು ಗಂಡಾಗಿತ್ತು. 

ದೂರದ ಇಸ್ಲಾಂ ದೇಶದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರು ಮದುವೆಯಾಗಿ ಬಹಳ ಕಾಲವಾದರೂ ಮಕ್ಕಳಾಗಿರಲಿಲ್ಲ. ಗುರುನಾಥರ ದರ್ಶನ ನಂತರ ಅವರಿಗೆ ಮಗುವಾಯಿತು. ಆತ ಇಂತಹ ಗುರುಭಕ್ತನೆಂದರೆ ಮಗು ಜನಿಸಿ ಹನ್ನೆರಡನೇ ದಿನಕ್ಕೆ ತನ್ನ ಪತಿ ಹಾಗೂ ಮಗುವನ್ನು ಕರೆದುಕೊಂಡು ದೂರದ ಇಸ್ಲಾಂ ದೇಶದಿಂದ ಗುರುವಿನ ಆಶೀರ್ವಾದ ಪಡೆಯಲೋಸುಗ ಸಖರಾಯಪಟ್ಟಣಕ್ಕೆ ಬಂದು ಗುರುದರ್ಶನ ಮಾಡಿ ಹೊರಟುಹೋದರು.....,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Parama poojya gurugalaada venkatachala Avara Divya paadagalige nanna bhakti poorvaka namanagalu. Guruvarya nimma aashirvaada sadaa kaala yellarigu doreyali. Hari om tatsat.

    ReplyDelete