ಒಟ್ಟು ನೋಟಗಳು

Wednesday, September 13, 2017

ಗುರುನಾಥ ಗಾನಾಮೃತ 
ನಾ ಮಾಡಿದ ತಪ್ಪುಗಳನೆಲ್ಲಾ ಒಪ್ಪಿಕೊಳ್ಳೋ ಗುರುವೇ ಒಪ್ಪೊಕೊಳ್ಳೋ
ರಚನೆ: ಅಂಬಾಸುತ 


ನಾ ಮಾಡಿದ ತಪ್ಪುಗಳನೆಲ್ಲಾ ಒಪ್ಪಿಕೊಳ್ಳೋ ಗುರುವೇ ಒಪ್ಪೊಕೊಳ್ಳೋ
ಸುತ ನೀ ಪಿತ ನಾ ಎನ್ನುತ್ತಾ ಅಪ್ಪಿಕೊಳ್ಳೋ ಎನ್ನ ಅಪ್ಪಿಕೊಳ್ಳೋ ||ಪ||

ನಿತ್ಯಾನುಷ್ಟಾನ ಕರ್ಮವಾ ಮಾಡಲಿಲ್ಲವೋ ನಾ ಮಾಡಲಿಲ್ಲವೋ
ನಿನ್ನ ಪಾದುಕೆಯಾ ಮೇಲೇ ಮನಪುಷ್ಪವಾ ನಾನಿಡಲಿಲ್ಲವೋ
ಮಾತಾಪಿತರನು ನಿಂಧಿಸುತಾ ಮಂದನಾದೆನೋ ನಾ ಮಂದನಾದೆನೋ
ಸಾಧುಸಂತರ ಸೇವೆ ಮಾಡದೇ ನಿಂಧ್ಯನಾದೆನೋ ನಾ ನಿಂಧ್ಯನಾದೆನೋ ||೧||

ವ್ರತನೇಮಗಳನ್ನೆಲ್ಲಾ ವರ್ಜಿಸಿದೆನೋ ನಾ ವರ್ಜಿಸಿದೆನೋ
ಹಸಿದು ಧೇಹಿ ಎಂದವಗೇ ಅನ್ನವ ನಾ ನೀಡಲಿಲ್ಲವೋ
ಗುರುವೇ ನಿನ್ನ ಪದವನ್ನೂ ಮರೆತುಬಿಟ್ಟೆನೋ ನಾ ಮರೆತುಬಿಟ್ಟೆನೋ
ಗುರುವೇ ನೀ ಅರಿವೆಂದೂ ತಿಳಿಯಲಿಲ್ಲವೋ ಎನಗೆ ತಿಳಿಯಲಿಲ್ಲವೋ ||೨||

ಕಾಮಾಧಿ ಕರ್ಮಗಳಲ್ಲೇ ಕಾಲವ ನಾ ಕಳೆದಿಹೆನಲ್ಲೋ
ಸೋಮಶೇಖರನೂ ನೀನೇ ಎಂಬುದ ನಾನರಿಯಲಿಲ್ಲವೋ
ಹೊಟ್ಟೆ ತುಂಬಿಸುವಾ ಭರದೀ ಪಾಪಕೃತ್ಯವ ನಾ ಗೈದೆನೋ
ಇಷ್ಟಮೂರುತಿ ಸದ್ಗುರುವಾ ಕಾಣದೇ ಕುರುಡಾಗಿ ನಿಂತೆನೋ ||೩||

ಸಖರಾಯಪುರವಾಸನಾ ಸಂಧಿಸುವ ಭಾಗ್ಯವ ಬಿಟ್ಟೆನೋ
ಸೋಹಂ ಎಂಬುದನೇ ಮರೆತೂ ಅಹಂಕಾರದೀ ಮೆರೆದೆನೋ
ಅಂಬಾಸುತನ ಈ ತಪ್ಪುಗಳನ್ನು ಒಪ್ಪಿಕೊಳ್ಳೋ ಗುರುವೇ ಒಪ್ಪಿಕೊಳ್ಳೋ
ಸುತ ನೀ ಪಿತ ನಾ ಎನ್ನುತಾ ಅಪ್ಪಿಕೊಳ್ಳೋ ಎನ್ನ ಅಪ್ಪಿಕೊಳ್ಳೋ ||೪||

No comments:

Post a Comment