ಗುರುನಾಥ ಗಾನಾಮೃತ
ಎಚ್ಚರಗೊಳ್ಳೋ ಗುರುವೇ ಎಮ್ಮನು ಎಚ್ಚರಿಸೋ ಪ್ರಭುವೇ
ರಚನೆ: ಅಂಬಾಸುತ
ಎಚ್ಚರಗೊಳ್ಳೋ ಗುರುವೇ ಎಮ್ಮನು ಎಚ್ಚರಿಸೋ ಪ್ರಭುವೇ
ಅಚ್ಚರಿಯಲ್ಲವೋ ನಿನ್ನೀ ಎಚ್ಚರಾ ಜಗದೋದ್ಧಾರಕೆ ಅದುವೇ ಸಾಕಾರಾ ||ಪ||
ಮೂಡಣದೊಳು ರವಿಯೂ ಮೂಡೀ ಬರುತಿಹನೂ
ಆರತಿಯ ಬೆಳಗಲೂ ಕಾದೂ ನಿಂತಿಹನೂ
ನಕ್ಷತ್ರದ ಸಾಲೊಂದೂ ನಿನ್ನಡಿಯ ಸೇರಲೂ
ನಾಮುಂದು ತಾಮುಂದೂ ಎನುತಾ ಬೆಳಗಿಹವೂ||೧||
ಭೂಸುರರೂ ವೇದದ ಪಠಣವಗೈದಿಹರೂ
ಸೌಮಂಗಲ್ಯೆಯರೆಲ್ಲರು ರಂಗೋಲಿಯ ಹಾಕಿಹರೂ
ಭಾವುಕ ಭಕುತರು ಭಜನೆಯ ಮಾಡಿಹರೂ
ಏಳಯ್ಯಾ ಏಳಯ್ಯಾ ಗುರುನಾಥಾ ಎನುತಿಹರೂ ||೨||
ಗಂಗಾದಿ ತೀರ್ಥಗಳೂ ನಿನ್ನಡಿಯಲಿ ಕಾದಿಹವೂ
ನಿನ್ನ ಪಾದವ ತೊಳೆದೂ ಪರಿಶುದ್ಧರೆನಿಸಲೂ
ಮಲ್ಲಿಗೆ ಸಂಪಿಗೆ ಕೇದಿಗೆ ಪುಷ್ಪಗಳೂ
ನಿನ್ನ ಕೊರಳನು ಸೇರಲೂ ಹಂಬಲಿಸಿಹವೂ ||೩||
ಎಚ್ಚರಗೊಳ್ಳೋ ಸಖರಾಯಪುರವಾಸಾ
ಎಚ್ಚರಗೊಳ್ಳೋ ಶ್ರೀವೇಂಕಟಾಚಲ
ಎಚ್ಚರಗೊಳ್ಳೋ ಅಂಬಾಸುತನಾ ಪ್ರಭುವೇ
ಎಚ್ಚರಗೊಳ್ಳೋ ನೀ ಯೋಗನಿದ್ರೆಯಿಂದಾ ||೪||
No comments:
Post a Comment