ಒಟ್ಟು ನೋಟಗಳು

Thursday, November 30, 2017

ಗುರುನಾಥ ಗಾನಾಮೃತ 
ದಯೆ ತೋರಿ ಬಾರೋ ಗುರುವೇ
ರಚನೆ: ಅಂಬಾಸುತ 


ದಯೆ ತೋರಿ ಬಾರೋ ಗುರುವೇ
ದೀನನಾಗಿ ಬೇಡಿಹೆ ಪೋರೆಯೋ ಪ್ರಭುವೇ ||ಪ||

ವೈಭವವಾಗೀ ಸ್ವಾಗತಿಸಲರಿಯೇ
ವೇದಘೋಷಗಳಾ ಮಾಡಲರಿಯೇ
ಪೂರ್ಣಕುಂಭವಾಗಲೀ ನನ್ನೀ ತನುವೂ
ಫಲಪುಷ್ಪಗಳೇ ಈ ನನ್ನ ಮನವೂ ||೧||

ಈ ಪದಗಳೇ ತಳಿರು ತೋರಣವೂ
ಎನ್ನೀ ಬರವಣಿಗೆ ನಿನಗೆ ಚಿತ್ತಾರವೂ
ಕಂಬನಿಯಿಂದಲೇ ನಿನ್ನ ಪಾದಪೂಜೆಯೂ
ಕಣ್ಣೋಟಗಳೇ ನಿನಗಾರತಿಯೂ ||೨||

ಎನ್ನ ಹೃದಯವೇ ಸಿಂಹಾಸನಾ
ಸ್ವೀಕರಿಸಿ ಹರಸೊ ಕಂದನಾ
ಸಖರಾಯಪುರವರಾಧೀಶ್ವರಾ
ಅಂಬಾಸುತನ ಅಂತರಂಗದ ಮನೆಗೇ ||೩||

Wednesday, November 29, 2017

ಗುರುನಾಥ ಗಾನಾಮೃತ 
ಗುರುವರ್ಯಾ ಗುರುವರ್ಯಾ
ರಚನೆ: ಅಂಬಾಸುತ 


ಗುರುವರ್ಯಾ ಗುರುವರ್ಯಾ
ಗುರುವರ್ಯಾ ಗುರುವರ್ಯಾ 
ಭಜಿಸುವೆ ನಿನ್ನನು ಭಜಕ ಜನ ಪಾಲಕಾ
ಆಶ್ರಯದಾತ ಅಮಿತವರದಾತ ||ಪ||

ಕಾಣೆನೋ ಅನ್ಯರಾ ನಿನ್ನ ಹೊರತಿನ್ನು
ಕರ ಪಿಡಿದು ಕಾಯುವವರಾ ಈ ಜಗದೊಳು ||೧||

ಅನಾಥರಕ್ಷಕ ಆಪದ್ಭಾಂಧವಾ
ಈ ಬಿರುದಿಗೆ ದೋಷ ನೀನೆನ್ನ ಪೊರೆಯದಿರೇ ||೨||

ಹುಲ್ಲುಕಡ್ಡಿ ಅಲ್ಲಾಡದು ನೀ ಹೂಂಕರಿಸದೇ
ಎನ್ನ ಪಾಡಿನ್ನೇನೋ ಪಾಮರನು ನಾನೋ ||೩||

ನನ್ನದೆಂಬುದೇನಿಲ್ಲ ನಿನ್ನದಹುದಿಹುದೆಲ್ಲಾ
ಎನ್ನ ಮನ ಶುಚಿಗೊಳಿಸೋ ನೀ ಬಂದು ನೆಲೆಸೋ ||೪||

ಆಸೆಗಳ ದೂರಿರಿಸಿ ಅಲ್ಪತೆಗೆ ಎನ್ನನೊಗ್ಗಿಸೀ
ಎನ್ನನಿರಿಸೋ ಎಚ್ಚರದ ಮನೆಯೊಳಗೇ ||೫||

ಸಖರಾಯಪುರಾಧೀಶಾ ಹೇ ಸದ್ಗುರುನಾಥಾ
ನಿನ್ನ ಪಾದಧೂಳಿನ ಮೇಲೆ ಅಂಬಾಸುತನಾ ಶಿರವನ್ನಿರಿಸೋ ||೬||
ಗುರುನಾಥ ಗಾನಾಮೃತ 
ನಮಿಸುವೆ ಗುರುರಾಯ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ನಮಿಸುವೆ ಗುರುರಾಯ
ನಿನ್ನಡಿದಾವರೆಯಲಿ 
ಕರಪಿಡಿಯೋ ಗುರುನಾಥ
ನಿನ್ನಂಘ್ರಿಕಮಲದಲಿ ||

ನಮ್ಮ ಕಾಯಸವೆಯಲಿ
ನಿನ್ನ ಪದಸೇವೆಯಲಿ
ನಮ್ಮ ಮನವರಳಲಿ
ನಿನ್ನ ದರ್ಶನಭಾಗ್ಯದಲೀ

ಎಮ್ಮ ಭ್ರಾಂತಿ ದೂರಾಗಲೀ
ನಿನ್ನ ವಚನಾಮೃತದಲೀ
ನಮ್ಮ ಕರ್ಮ ಕಳೆಯಲಿ
ನಿನ್ನ ನಾಮಸ್ಮರಣೆಯಲೀ

ಚಿತ್ತಶುದ್ಧಿಯಾಗಲಿ
ನಿನ್ನ ಅನುಗ್ರಹದಿಂದಲಿ 
ಬದುಕು ಪಕ್ವವಾಗಲೀ 
ನಿನ್ನ ಕೃಪಾಛತ್ರಿಯಲೀ
ಶ್ರೀ ನಾರಾಯಣ ಯೋಗೀಂದ್ರ ಸರಸತಿ ಪರಮಹಂಸರ ಅಧಿಷ್ಠಾನ, ಹುಳಿಯಾರು ರಸ್ತೆ, ಬಾಣಾವರ ವತಿಯಿಂದ  ಸದ್ಗುರು ಶ್ರೀ ಅವಧೂತ ವೇಂಕಟಾಚಲ ಗುರುಮಹಾರಾಜರ ಜನ್ಮೋತ್ಸವದ ಆಯೋಜನೆ - ಕೃಪೆ: ಶ್ರೀಹರ್ಷ ಹರಿಹರಪುರ, ಬೆಂಗಳೂರು 

ಕಾರ್ಯಕ್ರಮ: ಸದ್ಗುರು ಶ್ರೀ ಅವಧೂತ ವೇಂಕಟಾಚಲ ಗುರುಮಹಾರಾಜರ ಜನ್ಮೋತ್ಸವ.
ದಿನಾಂಕ: 9ನೇ ಮತ್ತು 10ನೇ ಡಿಸೆಂಬರ್
ಸ್ಥಳ: ಶ್ರೀ ನಾರಾಯಣ ಯೋಗೀಂದ್ರ ಸರಸತಿ ಪರಮಹಂಸರ ಅಧಿಷ್ಠಾನ, ಹುಳಿಯಾರು ರಸ್ತೆ, ಬಾಣಾವರ
ಕಾರ್ಯಕ್ರಮದ ವಿವರ:
* ಕಾಖಡಾರತಿ
*ಅಖಂಡ ವೀಣಾ ಸದ್ಗುರು ನಾಮಸ್ಮರಣೆ
*ಪಾರ್ಥಿವೇಶ್ವರ ಪೂಜೆ
*ರುದ್ರಾಭಿಷೇಕ
* ಪಾದುಕಾಪೂಜೆ
*ಶನಿವಾರ ರಾತ್ರಿ ತೊಟ್ಟಿಲೋತ್ಸವ
* ಸಮರ್ಥ ಸದ್ಗುರು ಭಜನೆ
* ರುದ್ರಹೋಮ
* ಮಹಾಪ್ರಸಾದ
ಈ ಎಲ್ಲಾ ಕಾರ್ಯಕ್ರಮಗಳು ಶನಿವಾರ ಮತ್ತು ಭಾನುವಾರ ಆಯೋಜನೆಗೊಂಡಿದ್ದು ಆಸಕ್ತ ಸದ್ಗುರು ಭಕ್ತರೆಲ್ಲಾ ಸದ್ಗುರು ಸೇವೆಯಲ್ಲಿ ಭಾಗವಹಿಸಿ ಸದ್ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಶ್ರೀಹರ್ಷ ಹರಿಹರಪುರ: 8971125996
ಜಾವಗಲ್ ನಾಗರಾಜ್: 9945630162
ಸದ್ಗುರುನಾಥ ಮಹಾರಾಜ್ ಕೀ ಜೈ

Tuesday, November 28, 2017

ಗುರುನಾಥ ಗಾನಾಮೃತ 
ಭಾಗ್ಯವಿದು ಭಾಗ್ಯವಿದೂ
ರಚನೆ: ಅಂಬಾಸುತ 


ಭಾಗ್ಯವಿದು ಭಾಗ್ಯವಿದೂ
ಎಲ್ಲರಿಗು ದೊರಕದೂ
ಗುರುವರನ ಪಾದ 
ಪದುಮಗಳ ಕಾಂಬುದೂ ||ಪ||

ಸಾತ್ವಿಕಾ ದೃಷ್ಟಿಯಲೀ
ಸಮಚಿತ್ತದಿಂದಲೀ
ಸಧೃಡಾ ಭಾವದಲೀ
ಸಲಹೆಂದು ಬೇಡಿದವಗೇ ||೧||

ಪುಣ್ಯದಾ ಹೊರೆ ಹೊತ್ತವಗೇ
ಪಾವನನಾಗಿ ಬಂದವಗೇ
ಗತಿ ನೀನೇ ಗುರುದೇವಾ
ಎಂದು ಮೊರೆಯಿಟ್ಟವಗೇ ||೨||

ಸಂತರಾ ಸೇವೆಗೈದವಗೇ
ಎರಡೆಂಬುದಾ ಬಿಟ್ಟವಗೇ
ಅಹಂಕಾರವಾ ಅಳಿಸಿಕೊಂಡವಗೇ
ಆರು ಅರಿಗಳ ಮೆಟ್ಟುವವಗೇ ||೩||

ಸಖರಾಯಪುರಾಧೀಶಾ
ಸದ್ಗುರುನಾಥನಾ
ದಾಸರಾ ದಾಸರಾ ದಾಸ
ಅಂಬಾಸುತಗೇ ||೪|||

Monday, November 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸೂರ್ಯೋ ನಾಶಯತಿ ತಮಃ
ಗುರುರ್ನಾಶಯತ್ಯಜ್ಞಾನಂ |
ಜಲದೋ ವರ್ಷತಿ ವರ್ಷಾಂ 
ಗುರುಃ ಸಿಂಚಯತ್ಯಮೃತಮ್ ||


ಹೇಗೆ ಸೂರ್ಯನು ಅಂಧಕಾರವನ್ನು ನಾಶಪಡಿಸಿ ಪ್ರಕಾಶವನ್ನು ಕೊಡುತ್ತಾನೋ,  ಹಾಗೆಯೇ ಗುರುವು ಅಜ್ಞಾನವನ್ನು ದೂರಮಾಡಿ ಸುಜ್ಞಾನವನ್ನು ಕರುಣಿಸುತ್ತಾನೆ.. ಮೋಡವು ಹೇಗೆ ಮಳೆ ಸುರಿಸುವುದೋ ಹಾಗೆ ಗುರುವು ಅನುಗ್ರಹವೆಂಬ ಅಮೃತವನ್ನು ಉಣಿಸುತ್ತಾನೆ‌..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಶ್ರೀನಿನ್ನ ನಾಮ ಸ್ಮರಿಸುತ
ರಚನೆ: ಅಂಬಾಸುತ 


ಶ್ರೀ ನಿನ್ನ ನಾಮ ಸ್ಮರಿಸುತ
ನಿನ್ನ ಕಾಣೊ ಹಂಬಲದಿಂದಾ
ನಿನ್ನಲ್ಲಿಗೆ ಬಂದಿಹೆವೊ ಗುರುನಾಥಾ
ಪಾದಯಾತ್ರೆಯ ಮಾಡಿಹೆವೊ ಅವಧೂತಾ ||ಪ||

ತನು ಮನದಿ ನಿನ್ನನ್ನೇ
ತುಂಬಿಕೊಳ್ಳೋ ಆಸೆಯಿಂದಾ
ನಿನ್ನಡಿಗೆ ಬಂದಿಹೆವೊ ಗುರುನಾಥಾ
ಪಾದಯಾತ್ರೆಯ ಮಾಡಿಹೆವೊ ಅವಧೂತಾ ||೧||

ಕೃಷ್ಣಯೋಗೀಂದ್ರರ ಕೃಪೆಯಿಂದ
ನಾರಾಯಣ ಯೋಗೀಂದ್ರರ ದರುಶನಗೈದೂ
ನಿನ್ನ ಕಾಣಲು ಬಂದಿಹೆವೊ ಗುರುನಾಥಾ
ಪಾದಯಾತ್ರೆಯ ಮಾಡಿಹೆವೋ ಅವಧೂತಾ ||೨||

ತನುವನ್ನು ದಂಡಿಸಿ
ಮನವಾ ನಿನ್ನಲಿರಿಸಿ
ದಯೆ ಬೇಡಿ ಬಂದಿಹೆವೊ ಗುರುನಾಥಾ
ಪಾದಯಾತ್ರೆಯ ಮಾಡಿಹೆವೊ ಅವಧೂತಾ ||೩||

ಸುಖ ನೀಡೊ ಮಹನೀಯ
ಸದ್ಗುರುನಾಥಾ ನೀನೇ ಎಂದೂ
ಆಶ್ರಯ ಬೇಡಿ ಬಂದಿಹೆವೊ ಗುರುನಾಥಾ
ಪಾದಯಾತ್ರೆಯ ಮಾಡಿಹೆವೊ ಅವಧೂತಾ ||೪||

ಶ್ರೀ ಗುರುನಾಥ ಸದ್ಗುರುನಾಥಾ
ಶ್ರೀವೇಂಕಟಾಚಲ ಅವಧೂತಾ
ಎನ್ನುತ್ತಾ ಬಂದಿಹೆವೊ ಗುರುನಾಥಾ
ಪಾದಯಾತ್ರೆಯ ಮಾಡಿಹೆವೊ ಅವಧೂತಾ ||೫||

ಕಣಕಣದಿ ನಿನ್ನನ್ನೇ
ಕಣ್ತುಂಬಿಕೊಳ್ಳುವಂತೆ
ನಮ್ಮೆಲ್ಲರ ಹರಸೋ ಗುರುನಾಥಾ
ಅಂಬಾಸುತನಾ ಉದ್ದಾರಕ ಗುರುನಾಥಾ
ಪಾದಯಾತ್ರೆಯ ಮಾಡಿಹೆವೊ ಅವಧೂತಾ ||೬||
ಗುರುನಾಥ ಗಾನಾಮೃತ 
ದೈವವಂತೆ ದೇವತೆಯಂತೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ದೈವವಂತೆ ದೇವತೆಯಂತೆ
ಏನೂ ಕಾಣೆನು ನಾ
ಮನದಲ್ಲೇ ಬಿಂಬವ ಕಂಡು  ನಿತ್ಯ ಪೂಜಿಪೆನಯ್ಯಾ
ಪೂಜೆಯಂತೆ ಅರ್ಚನೆಯಂತೆ 
ಏನೂ ತಿಳಿಯೆ ನಾ 
ಹೃದಯದಲೇ ಗುರುನಾಥನಿಗೆ ಸದಾ ಅರ್ಚಿಪೆನಯ್ಯಾ ।।

ರಾಗವಂತೆ ತಾಳವಂತೆ 
ಏನೂ ಅರಿಯೆ ನಾ
ಭಕ್ತಿರಸದಿ ಅಕ್ಷರವನದ್ದಿ
ಗೀತೆ ಹೇಳ್ವೆನಯ್ಯಾ 
ಬಂಧವಂತೆ ಮೋಕ್ಷವಂತೆ
ಏನನು ಬೇಡೆನು ನಾ
ನಿನ್ನ ಸಾನಿಧ್ಯದ ಪಾದಧೂಳಿಯಷ್ಟೆ ಕೇಳ್ವೆನಯ್ಯಾ ।।

ತಮವಂತೆ ಜ್ಯೋತಿಯಂತೆ
ಏನೂ ಕಾಣೆನು ನಾ
ಕಣ್ಬೆಳಕಹೊಳಪಲ್ಲಿ ನಿನ್ನನೇ ಕಾಣ್ವೆನಯ್ಯಾ
ಜ್ಞಾನವಂತೆ ಅರಿವಂತೆ
ಒಂದೂ ಅರಿಯೆ ನಾ
ಹೃದ್ದೀಪದ ಸೊಡರಿನಲ್ಲಿ ನೀನೇ ಬೆಳಕಾಗಿರುವೆಯಯ್ಯಾ ।।
ಗುರುನಾಥ ಗಾನಾಮೃತ 
ಗತಿ ನೀನೇ ಗುರುನಾಥಾ
ರಚನೆ: ಅಂಬಾಸುತ 


ಗತಿ ನೀನೇ ಗುರುನಾಥಾ
ಸನ್ಮತಿ ಪಾಲಿಸ ಬೇಕೋ ಅವಧೂತಾ ||ಪ||

ಅರಿಯದೆ ಹೋದೇ ನಿನ್ನನು ನಾನು 
ಅರಿವಿನ ದೊರೆಯೇ ಅಪ್ರಮೇಯನೇ ||೧||

ಗಣನೆಗೆ ನಿಲುಕದ ಮಹಿಮೆಯ ತೋರಿದೆ
ಗಾಢಾಂಧಕಾರವ ನೀನು ಕಳೆದೆ  ||೨||

ರಾಮ ಕೃಷ್ಣಾ ಹರನೂ ನೀನೇ
ಬ್ರಹ್ಮಸ್ವರೂಪ ಗುರುದೇವಾ ||೩||

ನಮ್ಮ ಪಾಲಿಗೆ ನೀ ಸರ್ವಸ್ವ 
ನಿನ್ನ ಸಾನಿಧ್ಯವದೇ ಸ್ವರ್ಗ  ||೪||

ಮೋಹ ದಾಹದ ಭ್ರಾಂತಿಯ ಬಿಡಿಸೋ
ನಿನ್ನ ನಾಮದಿ ಎನ್ನ ಮನವಿರಿಸೋ ||೫||

ಸಖರಾಯಪುರವಾಸಾ ಹೇ ಗುರುನಾಥಾ
ಅಂಬಾಸುತ ನಿನ್ನ ದಾಸರ ದಾಸ  ||೬||