ಗುರುನಾಥ ಗಾನಾಮೃತ
ಬಾರಿ ಬಾರಿಗೂ ನಿನ್ನ ಭಜಿಸುವೆ ಬಾರೈ
ರಚನೆ: ಅಂಬಾಸುತ
ಬಾರಿ ಬಾರಿಗೂ ನಿನ್ನ ಭಜಿಸುವೆ ಬಾರೈ
ಹೇ ಅವಧೂತಾ ನಿನ್ನ ವದನ ತೋರೈ |ಪ||
ಎಷ್ಟೋ ಜನುಮದಾ ಪುಣ್ಯಾ ನೀ ದೊರಕಿರುವೇ
ಮನದಿಷ್ಟ ಸಲಿಸೋ ಪ್ರಭುವೇ ನೀನೆನ್ನೊಡನಿರುವೇ
ನಿರ್ಗುಣರೂಪ ಅರಿಯದಾ ಮೂಢನೋ ನಾನೂ
ಸಗುಣನಾಗಿ ಬಾರೈ ಕಂದನಾ ಸಲಹೈ ||೧||
ನೀ ಸಾಕಾರಾ ನೀ ನಿರ್ವಿಕಾರಾ
ನೀ ಓಂಕಾರಾ ನೀ ಶಾಸ್ತ್ರಸಾರಾ
ನಾನೆಂಬುದ ಅಳಿಸೋ ನೀ ಘನ್ನಮಹಿಮಾ
ಗುರುವಾಗಿ ಬಾರೈ ಶಿಷ್ಯನ ಪೊರಯೈ ||೨||
ಕಾರುಣ್ಯಮೂರುತಿ ನೀ ಗುರುರಾಯಾ
ಕತ್ತಲ ಕಳೆಯೇ ನೀನೇ ಸೂರ್ಯಾ
ಎನ್ನ ಮನಮಂದಿರದೀ ನೀ ವಿರಾಜಿಸೋ
ತಾಯಾಗಿ ಬಾರೈ ಅಮೃತವನುಣಿಸೈ ||೩||
ಸಖರಾಯಪುರವರಾಧೀಶ್ವರಾ
ಅಂಬಾಸುತನಾ ಕುಲಸ್ವಾಮಿ ನೀನೀಶ್ವರಾ
ಅಡಿಗಡಿಗೆರಗುವೇ ಈ ಮೊರೆಯ ಆಲಿಸೈ
ಸಖನಾಗಿ ಬಾರೈ ಸರಿದಾರಿ ತೋರೈ ||೪||
No comments:
Post a Comment