ಒಟ್ಟು ನೋಟಗಳು

Thursday, August 25, 2016

ಬಾಣಾವರದ ಶ್ರೀ.ವೆಂಕಟಾಚಲ ಅವಧೂತರ ವೇದಿಕೆ 

 

  !!ಸ್ವಾತ್ಮಾರಾಮಂ ನಿಜಾನಂದಂ ಶೋಕ ಮೋಹ ವಿವರ್ಜಿತಂ

  ಸ್ಮರಾಮಿ ಮನಸಾನಿತ್ಯಂ ಶ್ರೀ ವೆಂಕಟಾಚಲ ದೇಶಿಕಂ!!  


ಭಾರತ ಒಂದು ಪುಣ್ಯ ಭೂಮಿ. ಇಲ್ಲಿ ಅನೇಕ ಸಾಧಕರು, ಸತ್ಪುರುಷರು, ಅವಧೂತರು ನೆಲೆಗೊಂಡಿರುವ ದೇಶ. ನಮ್ಮ ಗುರುಗಳ ವಾಕ್ಯದ ಪ್ರಕಾರ ಪ್ರತಿ 60 ಕಿಲೋಮೀಟರ್,ಗಳಿಗೆ ಒಬ್ಬರು ಸತ್ಪುರಷರು ಇದ್ದಾರಂತೆ. ಕೆಲವರು ಪ್ರಕಟರಾಗಿದ್ದಾರೆ.  ಕೆಲವರು ಹಾಗೆ ತಮ್ಮ ಸಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಅವತರಿಸಿರುವ ಸತ್ಪುರಷರಲ್ಲಿ ಇವರೂ ಕೂಡ ಒಬ್ಬರು.

ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರು ಸುಮಾರು 475 ವರ್ಷಗಳ ಹಿಂದೆ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಜೇಷ್ಠ ಬಹುಳ ಬಿದಿಗೆಯಂದು ಅವತಾರವನ್ನು ಮಾಡಿದರು. ಸದ್ಗುರುಗಳಿಗೆ ಜನನದಿಂದಲೇ ಆಧ್ಯಾತ್ಮದ ಕಡೆ ಒಲವಿರುತ್ತದೆ. ಇವರಿಗೆ 8ನೇ ವಯಸ್ಸಿನಲ್ಲಿ ಉಪನಯನ ಸಂಸ್ಕಾರವಾದ ನಂತರ ಗುರುಕುಲ ಪದ್ದತಿಯಲ್ಲಿ ಶೃತಿ  ಶಾಸ್ತ್ರಗಳ ಅಧ್ಯಯನ ಮಾಡಿ ಅದನ್ನು ಅಂತರ್ಗತ ಮಾಡಿಕೊಂಡು ಸಾಧನಾ ಮಾರ್ಗದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಾರೆ. ಅವರು ತಮ್ಮ 17ನೇ ವಯಸ್ಸಿಗೆ ಶೃತಿ ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಹೊಂದಿರುತ್ತಾರೆ.

ಇವರು ಗಾಯತ್ರಿ ಪುರಶ್ಚರಣೆ  ಹಾಗೂ ಅರುಣಪೂರ್ವಕ ಸೂರ್ಯನಮಸ್ಕಾರದಲ್ಲಿ ತಮ್ಮ ಸಾಧನಾ ಬಲವನ್ನು ಹೆಚ್ಚಿಸಿಕೊಂಡು
19ನೇ ವಯಸ್ಸಿಗೆ ಆತ್ಮಜ್ಞಾನಿಗಳಾಗಿರುತ್ತಾರೆ. ನಂತರ ಏಕಾದಶ ವರ್ಷಗಳ ಕಾಲ ಅಖಂಡವಾದ ಮೌನದಲ್ಲಿ ನೆಲೆ ನಿಂತು ನಂತರ ಶೋಡಷ ವರ್ಷಗಳ ಕಾಲ ಭರತ ಖಂಡದಲ್ಲಿ ಸಂಚಾರ ಮಾಡಿ ಮತ್ತೆ ಯಳ್ಳಂಬಳಸೆ ಗ್ರಾಮಕ್ಕೆ ಪುನಃ ಆಗಮಿಸುತ್ತಾರೆ. ಆಗ ಅವರಿಗೆ 44 ವರ್ಷಗಳಾಗಿರುತ್ತದೆ.

ಇವರು ತಮ್ಮ ಆಧ್ಯಾತ್ಮಿಕ ಸಾಧನೆಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿರುತ್ತಾರೆ. ತಮ್ಮಲ್ಲಿರುವ ಜ್ಞಾನ ಸಂಪತ್ತನ್ನು ಅಲೌಕಿಕ ಭಕ್ತರ ಸಾಧನೆಗೆ ಹಾಗೂ ಲೌಕಿಕ ಭಕ್ತರ ಉದ್ಧಾರಕ್ಕಾಗಿ ಅವರು ಯಳ್ಳಂಬಳಸೆಯಿಂದ ಬಾಣಾವರ ಎಂಬ ಗ್ರಾಮಕ್ಕೆ ತಮ್ಮ ತಾಯಿಯೊಂದಿಗೆ ಬಂದು ನೆಲೆ ನಿಲ್ಲುತ್ತಾರೆ. ತಮ್ಮ ಕುಲದೇವತೆಯಾದ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀ ವೆಂಕಟೇಶ್ವರನ ಆರಾಧನೆಯೊಂದಿಗೆ ತಮ್ಮ ಆರಾಧ್ಯ ದೇವರುಗಳಾದ ಶ್ರೀಕೃಷ್ಣ, ಶ್ರೀದೇವಿ, ಭೂದೇವಿಯರ ಉಪಾಸನೆ ಮಾಡುತ್ತಾ ತಮ್ಮ ಸಾಧನೆಯಲ್ಲಿ ತೊಡಗಿಕೊಂಡಿರುತ್ತಾರೆ.

ಇಂತಹ ಸತ್ಪುರುಷರಾದ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರು ತಮ್ಮ ತಾಯಿ ಕಾಶಿ ವಿಶ್ವೇಶ್ವರನ ದರ್ಶನ ಹಾಗೂ ಗಂಗಾ ಸ್ನಾನವನ್ನು ಅಪೇಕ್ಷಿಸಿದಾಗ ತಾವಿರುವ ಸ್ಥಳದಲ್ಲೇ ಗಂಗೆಯನ್ನು ಉದ್ಭವ ಮಾಡಿ ತಾಯಿಗೆ ಗಂಗಾ ಸ್ನಾನ ಮಾಡಿಸಿ ದಿವ್ಯದೃಷ್ಠಿ ಕೊಟ್ಟು ತಾವಿರುವ ಸ್ಥಳದಿಂದಲೇ ಕಾಶಿ ವಿಶ್ವೇಶ್ವರನ ದರ್ಶನವನ್ನು ಬಾಣಾವರದಲ್ಲೇ ಮಾಡಿಸುತ್ತಾರೆ ಎಂಬ ಪ್ರತೀತಿ ಇದೆ. ಇಂತಹ ಸಂದರ್ಭದಲ್ಲಿ ಸದ್ಗುರುವಾಗಿ ಸಾಮಾಜಿಕ ಪ್ರಪಂಚಕ್ಕೆ ಪ್ರಕಟವಾಗುತ್ತಾರೆ. ಆಗ ಅವರ ವಯಸ್ಸು 48 ವರ್ಷ.ಮುಂದೆ ತಾಯಿಯ ಮೋಕ್ಷಾ ನಂತರ ತಮ್ಮ ಎಲ್ಲಾ ಲೌಕಿಕ ಸಂಕೋಲೆಗಳನ್ನು ಕಳಚಿಕೊಂಡು ತುರ್ಯಾಶ್ರಮವನ್ನು ಸ್ವೀಕಾರ ಮಾಡಿ ಭಕ್ತರ ಉದ್ಧಾರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇಂತಹ ಸಮಯದಲ್ಲಿ ಇವರು  ಲೀಲಾತ್ಮಕವಾದ ಬೇಕಾದಷ್ಟು ಸಂದರ್ಭಗಳನ್ನು ಸೃಷ್ಟಿಸಿದರು. ಮಾಲೇಕಲ್ಲು ತಿರುಪತಿಯ ದೇವಸ್ಥಾನದಲ್ಲಿ ನಿತ್ಯವೂ ಕೂಡ ಉಷಃಕಾಲದಲ್ಲಿ ನೈವೇದ್ಯ,  ಅಲಂಕಾರ, ಧೂಪ, ದೀಪಗಳು ನೆರವೇರುತ್ತಿದ್ದವು. ಈ ಒಂದು ಘಟನೆಯನ್ನು ಅರಿತ ಅಲ್ಲಿಯ ಸ್ಥಳೀಯ ಅರ್ಚಕರು ಇದರ ನಿಗೂಢತೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಒಂದು ದಿನ ಪೂರ್ವದಲ್ಲೇ ದೇವಸ್ಥಾನಕ್ಕೆ ಬಂದು ನೋಡಿದಾಗ ಗರ್ಭಾಂಗಣದಲ್ಲಿ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರು ಧ್ಯಾನಾಸಕ್ತರಾಗಿರುತ್ತಾರೆ. ಇಂತಹ ಲೀಲಾತ್ಮಕವಾದ ದೃಶ್ಯವನ್ನು ನೋಡಿದ ಮೇಲೆ ಸ್ವಾಮಿಗೆ ನಿತ್ಯ ಯಾರು ಪೂಜೆ ಮಾಡುತ್ತಿದ್ದರೆಂದು ತಿಳಿಯಿತು.

ಇಂತಹ ಸಾಧಾನಾ ಮಾರ್ಗದಲ್ಲಿ ತೊಡಗಿಕೊಂಡಿದ್ದ ಸತ್ಪುರುಷರು ಸಹಸ್ರಾರು ಭಕ್ತ ವೃಂದವನ್ನು ಹೊಂದಿದ್ದರು ಹಾಗೂ ತಮ್ಮ ಅಲೌಕಿಕ ಜ್ಞಾನವನ್ನು ಹರಿಸುವ ಸಲುವಾಗಿ 24 ಜನ ಶಿಷ್ಯರನ್ನು ಸ್ವೀಕರಿಸಿದ್ದರು. ಈ 24 ಜನ ಶಿಷ್ಯರೂ ಕೂಡ ಅಂಬಿಕಾ ಯೋಗದಲ್ಲಿ ಪರಿಣಿತರಾಗಿದ್ದರು ಹಾಗೂ ಗುರುವಿನಷ್ಟೇ ಸಮರ್ಥರಾಗಿದ್ದರು.

ಶ್ರೀ ಗುರುಗಳು ಅಂಬಿಕಾ ಯೋಗದಲ್ಲಿ ನೆಲೆ ನಿಂತವರು. ಇವರು ಶ್ರೀ  ಮಾಲೇಕಲ್ಲು ತಿರುಪತಿ ದೇವಸ್ಥಾನವನ್ನು ಸಂರಕ್ಷಿಸಿ ಮುಸಲ್ಮಾನರ ದಾಳಿಯಿಂದ ಅನೇಕ ಬಾರಿ ದೇಗುಲವನ್ನು ರಕ್ಷಿಸಿದ್ದರು. ಕೆಲವು ಬಾರಿ ದಾಳಿ ಮಾಡಲು ಬಂದವರಿಗೆ ದೇವಸ್ಥಾನವೇ ಗೋಚರಿಸದಂತೆ ಅದೃಶ್ಯ ಮಾಡಿ ಬಿಡುತ್ತಿದ್ದರು. ಹೀಗೆ ದೇವಸ್ಥಾನದ ಸಂರಕ್ಷಣೆಯ ಸಲುವಾಗಿ ಹಳ್ಳಿ ಹಳ್ಳಿಗೆ ಸಂಚಾರ ಮಾಡಿ ಧರ್ಮ ಜಾಗೃತಿ ಮಾಡಿ, ಬಂಡಿಯಲ್ಲಿ ದೇವರ ಉತ್ಸವ ಮಾಡಿ ಆ ಸ್ವಾಮಿಗೆ ಒಕ್ಕಲುಗಳನ್ನು ಸೃಷ್ಟಿ ಮಾಡಿದರು. ಬೆಟ್ಟದ ಮೇಲೆ ನೆಲೆ ನಿಂತಿರುವ ಸ್ವಾಮಿಯ ದರ್ಶನಕ್ಕೆಂದು 1250 ಮೆಟ್ಟಿಲುಗಳನ್ನು ಕಟ್ಟಿಸಿದರು. ದೇವಸ್ಥಾನದ ರಕ್ಷಣೆಗಾಗಿ ಸುತ್ತಲೂ ಪ್ರಾಂಗಣ, ತಡೆಗೋಡೆ ನಿರ್ಮಿಸಿದರು. ಇಂದಿಗೂ ಕೂಡ ದೇವಸ್ಥಾನದಲ್ಲಿ ಶ್ರೀಗಳ ಹೆಸರಿನಲ್ಲೇ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಶ್ರೀಗಳು ಮತ್ತೆ  ತಮ್ಮ ಸಾಧನಾ ಕ್ಷೇತ್ರವಾದ ಬಾಣಾವರಕ್ಕೆ ಬಂದು ನೆಲೆ ನಿಲ್ಲುತ್ತಾರೆ. ತಮ್ಮ ನಿತ್ಯ ಪೂಜೆ, ಉಪಾಸನೆ, ಅನುಷ್ಟಾನ, ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರು ಅಂಬಿಕಾ ಯೋಗದಲ್ಲಿ ಪರಿಣತರಾಗಿದ್ದರಿಂದ ಸಜೀವ ವೃಂದಾವನಸ್ಥರಾಗಲು ನಿರ್ಧರಿಸುತ್ತಾರೆ. ತಮ್ಮ 24 ಜನ ಶಿಷ್ಯರಿಗೆ ಉಪದೇಶ ನೀಡಿ ಬಾಣಾವರದಲ್ಲೆ ಆಷಾಢ ಶುದ್ಧ ಪೂರ್ಣಮಿಯಂದು ಸಜೀವವಾಗಿ ವೃಂದಾವನ ಪ್ರವೇಶಿಸುತ್ತಾರೆ. ಮುಂದಿನ ದಿನಗಳಲ್ಲಿ ಅವರ 24 ಜನ ಶಿಷ್ಯರೂ ಕೂಡ ಸಜೀವವಾಗಿ ವೃಂದಾವನ ಪ್ರವೇಶಿಸುತ್ತಾರೆ. 

ಇಂತಹ ಸತ್ಪುರುಷರ ವೃಂದಾವನವಿರುವ ಬಾಣಾವರದಲ್ಲಿ ಈಗಲೂ ಕೂಡ ಶ್ರೀಗಳು ನೆಲೆಸಿದ್ದಾರೆ ಹಾಗೂ ಭಕ್ತರ ಆಶೋತ್ತರಗಳನ್ನು ಈಡೇರಿಸುತ್ತಿದ್ದಾರೆ. ಇಂದಿಗೂ ಕೂಡ ಶ್ರೀಗಳ ಸಾನಿಧ್ಯದೊಂದಿಗೆ ಅವರ 24 ಜನ ಶಿಷ್ಯರೂ ಕೂಡ ನಿತ್ಯ ಗುರುಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ನಾವು ಬಾಣಾವರದಲ್ಲಿ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರು ಹಾಗೂ ಅವರ 4 ಜನ ಶಿಷ್ಯರ ವೃಂದಾವನಗಳನ್ನು ನೋಡಬಹುದು.

ಇದೇ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರು ಮತ್ತೆ  ಸಖರಾಯಪಟ್ಟಣದಲ್ಲಿ ಶ್ರೀ ವೆಂಕಟಾಚಲ ಅವಧೂತರಾಗಿ  ಪುನಃ ತಮ್ಮ ಇರುವಿಕೆಯನ್ನು ಭಕ್ತರಲ್ಲಿ ಮೂಡಿಸಿದರು. ತಮ್ಮ 5ನೇ ವಯಸ್ಸಿನಿಂದಲೇ ತಮ್ಮ ಪೂರ್ವ ಅವತಾರವಾದ ಬಾಣಾವರದ ವೃಂದಾವನದ ಬಳಿಯಲ್ಲಿ ಸಾಧನೆಯನ್ನು ಪ್ರಾರಂಭಿಸಿದರು. ಇವರೂ ಕೂಡ ಗಾಯತ್ರಿ ಪುರಶ್ಚರಣೆ ಹಾಗೂ ಅರುಣ ಪೂರ್ವಕ ಸೂರ್ಯ ನಮಸ್ಕಾರದಲ್ಲಿ ಸಾಧನೆಯನ್ನು ಮಾಡಿದ್ದರು.

ಇವರು ತಮ್ಮ 48ನೇ ವಯಸ್ಸಿಗೆ ಬಾಹ್ಯ ಪ್ರಪಂಚಕ್ಕೆ ಸದ್ಗುರುವಾಗಿ ಪ್ರಕಟರಾದರು. ಆ ನಂತರ ಅಪಾರ ಭಕ್ತ ವೃಂದವನ್ನು ಹೊಂದಿದ್ದರು. ಶೃಂಗೇರಿಯ ಶಾರದಾ ಪೀಠದ 34ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತಿಗಳಿಂದ ಭಾರೀ ಪ್ರಭಾವಿತರಾಗಿದ್ದರು.

ಗುರು ಎಂಬುದು ಏನು? ಗುರುವಿನ ಮಹತ್ವ ಏನು?  ಸದ್ಗುರುವಿನ ಸೇವೆ ಹೇಗೆ ಮಾಡಬೇಕು, ಗುರುವಿನ ಕೃಪೆಗೆ ಹೇಗೆ ಪಾತ್ರರಾಗಬೇಕು ಎಂಬುದನ್ನು ಭಕ್ತವೃಂದಕ್ಕೆ ಉಪದೇಶಿಸುತ್ತಿದ್ದರು. 

ಶೃಂಗೇರಿ ಶಾರದಾ ಪೀಠದ ನಿಕಟ ಸಂಪರ್ಕವನ್ನು ಹೊಂದಿದ್ದ ಇವರು ಗುರುವಿನ ಪೂರ್ಣಾಶೀರ್ವಾದವನ್ನು ಹೊಂದಿದ್ದರು. ಇವರು ಸ್ವಯಂಘೋಷಿತ ಅವಧೂತರಲ್ಲ. ಪ್ರಪ್ರಥಮ ಬಾರಿಗೆ ಶ್ರೀ  ಶೃಂಗೇರಿ ಶಾರದಾ ಪೀಠದ 36ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಇವರನ್ನು ಅವಧೂತರೆಂದು ಕರೆದರು. ಆನಂತರ ಇವರು ಶ್ರೀ ವೆಂಕಟಾಚಲ ಅವಧೂತರೆಂದು ಪ್ರಕಟವಾದರು. ಪ್ರತಿನಿತ್ಯ ತಪ್ಪದೆ ಸಖರಾಯಪಟ್ಟಣದಿಂದ ಶೃಂಗೇರಿ ಗುರುಗಳಿಗೆ ಭಿಕ್ಷೆ ಹೋಗುತ್ತಿತ್ತು.

ಇವರೇ ಬಾಣಾವರದ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರ ವೃಂದಾವನವನ್ನು ಗುರುತಿಸಿ ಅವರ ವಿಚಾರಧಾರೆಗಳನ್ನು ಭಕ್ತರಿಗೆ ತಿಳಿಸಿ ಅಲ್ಲಿ ನಿತ್ಯ ಪೂಜೆ, ಆರತಿ, ಭಜನೆ ನಡೆಯುವಂತೆ ಉಪದೇಶಿಸಿದ್ದಾರೆ. ಇವರು ತಮ್ಮ 73ನೇ ವಯಸ್ಸಿನಲ್ಲಿ ಮುಕ್ತರಾಗುತ್ತಾರೆ. 

 ನಮ್ಮ ಗುರುಗಳಾದ ವೆಂಕಟಾಚಲ ಅವಧೂತರ ಕೆಲವು ಪ್ರಮುಖ ನುಡಿ ಮುತ್ತುಗಳು ಈ ಕೆಳಕಂಡಂತೆ ಇವೆ:  

* ದೇಹಕ್ಕೇ ಗುರುವಲ್ಲಯ್ಯಾ ವಿಚಾರ ಜ್ಞಾನಕ್ಕೇ ಗುರು.
* ನಮಸ್ಕಾರಕ್ಕಲ್ಲಯ್ಯಾ ಗುರು ನಿನ್ನ ನಿತ್ಯ ಸಾಧನೆಗೆ ಗುರು.
* ತಾಯಿಯೇ ಮೊದಲ ಗುರು.
* ಮೊದಲು ತಂದೆ ತಾಯಿಯರ ಸೇವೆ ಮಾಡಿ ಆನಂತರ ಗುರುವಿನ  ಸೇವೆ ಮಾಡು. 
* ಹಸಿದವರಿಗೆ ಊಟವನ್ನು ಹಾಕಿ ಅವನು ಯಾವ ಜಾತಿಯವನೆಂದು ನೋಡಬೇಡಿ.
* ಗುರುವಿನ ನಾಮಸ್ಮರಣೆ ಬಿಡಬೇಡಿ.

 ಶ್ರೀ ಕೃಷ್ಣ ಯೋಗೇಂದ್ರ ಪರಮಹಂಸರ ಬೃಂದಾವನ 

ಶ್ರೀ.ಚಂದ್ರಶೇಖರ ಭಾರತಿ ಪರಮಹಂಸರ ಬೃಂದಾವನ

 ಶ್ರೀ.ವೆಂಕಟಾಚಲ ಅವಧೂತರ ವೇದಿಕೆ 

ಶ್ರೀ.ವೆಂಕಟಾಚಲ ಅವಧೂತರು

ಶ್ರೀ.ವೆಂಕಟಾಚಲ ಅವಧೂತರ ವೇದಿಕೆ 

ಶ್ರೀ.ವೆಂಕಟಾಚಲ ಅವಧೂತರು

ಬಾಣಾವರ ವೇದಿಕೆ ವಿಳಾಸ: 

ಶ್ರೀ.ವೆಂಕಟಾಚಲ ಅವಧೂತರ ವೇದಿಕೆ 
ಬಾಣಾವರ, ಹಾಸನ  ಜಿಲ್ಲೆ,
ಕರ್ನಾಟಕ ,ಭಾರತ .

ಶ್ರೀ.ವೆಂಕಟಾಚಲ ಅವಧೂತರ ನುಡಿಮುತ್ತುಗಳು