ಒಟ್ಟು ನೋಟಗಳು

Monday, July 10, 2023

ನಮಿಸುವೆ ನಿನಗೆ ಗುರುದೇವ - ಶ್ರೀ. ಆನಂದ ರಾಮ್, ಶೃಂಗೇರಿ

ನಮಿಸುವೆ ನಿನಗೆ ಗುರುದೇವ ನೀನೇ ಅಲ್ಲವೇ ನಮ್ಮೆಲರ ಮಹಾದೇವ
ಬವಣೆ ನೀಗಿಸಿ ಬದುಕಿನ ಹಾದಿ ಸುಗಮ ಮಾಡೋ  ಬೇಡುವೆವು ಗುರುದೇವ.

ಎಲ್ಲಿ ಹುಡುಕಲಿ ನಿನ್ನ ಗುರುವೇ ಹೇಗೆ ಬೇಡಲಿ ನಿನ್ನ ಮುನಿಯದೆ ಹರಸೆನ್ನಾ
ಆಲಿಸೋ ಕರುಣದಿ ಗುರುವೇ ಈ ನಿನ್ನ ಪಾಮರ ಬಕುತನ ಮೊರೆಯನ್ನ.

ಅಂತರಾಳದಲಿಹ ಅಹಂ ಅಳಿಸಿ ಏನೂ ಅಲ್ಲದ ಈ ಜೀವಕೆ ದಾರಿ ತೋರೋ
ಬರೀ ಬೂಟಾಟಿಕೆಯ ಬದುಕು ನಡೆಸೋ ನಿನ್ನ ಸೇವಕನ ಮನ್ನಿಸೋ .

ಭ್ರಮೆಯ ಸಿಂಗಾರಕೆ ತೋರಿಕೆಯ ಆಡಂಬರಕೆ ನೀ ಒಲಿಯಲಾರೆ ಗುರುವೇ
ಒಳ ಹೊರಗೂ ಶುದ್ಧ ಭಾವದ ಕೊರತೆ ನಿನ್ನ ದರುಶನ ದೂರವಂತೆ ನಿಜವೇ.

ಎಲ್ಲಿದ್ದೆನೋ ಹೇಗಿದ್ದೆನೋ ಅದುವೇ ನನ್ನ ಕರ್ಮದ ಫಲವಲ್ಲವೇನೋ
ನಿನ್ನ ನಂಬಿದೊಡೆ ನಿನ್ನ ಬೇಡಿದೊಡೆ ಕರ್ಮ ಕಳೆದು ಶಾಂತಿ ನೀ ನೀಡಿದೆ.

ಅರಿವು ಮೂಡಿಸಿ ಆರು ಅರಿಗಳಿಂದ ದೂರವಿರಿಸಿ ನಮ್ಮ ಪೊರೆಯೋ ದೊರೆಯೇ
ನುಡಿಯು  ನಡೆಯು ಅನ್ಯರಿಗೆ ಆನಂದ ನೀಡುವ ಪರಿ ತೋರೋ ಗುರುವೇ.

ನಾ ಬೇಡುತಿಹೆನೆಂದು ಬರೀ ಪೊಳ್ಳು ಬಕುತಿಯೆಂದು ದೂರ ಮಾಡಬೇಡ ದೊರೆಯೇ
ಸಖಾರಾಯದೀಷ ಪ್ರಭುವೇ ಬೇಡುವೆನು ನಿನ್ನ ಬೇರೆ ದಾರಿ ಅರಿತಿಲ್ಲ ಗುರುವೇ.

Wednesday, May 24, 2023

ಬದುಕಿನ ಉದ್ದಗಲಕು ಏನನ್ನೋ ಹುಡುಕಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬದುಕಿನ ಉದ್ದಗಲಕು ಏನನ್ನೋ ಹುಡುಕಿ ಸೋತು ನಿಂತಾಯಿತು ಗುರುವೇ
ಇನ್ನು ನೆಮ್ಮದಿಯ ಅರಸಿ ನಿನ್ನ ನಂಬಿ ನಿನ್ನ ಪಾದದ ಬಳಿ ನಿಂತಾಯಿತು ಪ್ರಭುವೇ.

ಕಾಣದಾ ಸುಖವ  ವಿಷಯ ವಸ್ತುವಿನಲಿ ಹುಡುಕೆ ಸಿಗುವುದೇ ದೊರೆಯೇ
ಕಂಡರೂ ಕಾಣದಂತೆ ಮಾಡುವ ಮಾಯೆಯ ಲೀಲೆಗೆ ಸಿಕ್ಕಿ ಬಸವಳಿದೆ ಗುರುವೇ.

ಇಲ್ಲೇ ಇರುವೆ ಎಂದೆನಿಸುತಿದೆ ಒಳ ಮನಸಿನ ಭಾವಕೆ ಹುಡುಕೆ ನೀ ಸಿಗಲಿಲ್ಲ ಗುರುವೇ
ಶುದ್ದ ಭಾವಕೆ ನೀ ಒಲಿವೆ ಎನ್ನುವರು ಅದರ ಕೊರತೆ ಎನ್ನ ಸೋಲಿಗೆ ಕಾರಣವೇ.

ಬಡ ಬಡಿಸುವೆ ಬರೀ ಪದಗಳ ಜೋಡನೆಯಲಿ ಭಕ್ತಿಯಾ ಕೊರತೆ ಕಾರಣವೇ
ನೀನಿಲ್ಲದ ಬದುಕು ಅಸಹನೀಯ ಎನ್ನುವುದು ಬರೀ ತೋರಿಕೆಯ ಬೂಟಾಟಿಕೆಯೇ.

ಒಳಗೆ ಮನದೊಳು ಬಯಕೆಗಳ ಮಹಾ ಪೂರವು ತೋರಿಕೆಗೆ ಭಕ್ತಿಯ ಆಚರಣೆಯೇ
ಸುಪ್ತ ಮನದ ಆಳದಲಿ ತುಂಬಿಹ ಮಲಿನ ಭಾವಗಳ ಎಡ ಬಿಡದ ತಾಕಲಾಟವೇ.

ಬಯಸುವೆ ಗುರುವೇ ನಿತ್ಯ  ನಿನ್ನ ಭಜಿಸುವ ನಿರಂತರ ನಿರ್ಮಲ ಭಾವವೇ 
ನನ್ನ ಸಲಹಿ ಹರಸಲು ತಡವೇಕೆ ಮಾಡುತಿಹೆ ಓ ನನ್ನ ಸಖರಾಯ ಪ್ರಭುವೇ.

Saturday, March 11, 2023

ನಿನ್ನ ನಂಬಿಹೆನೋ ಗುರುವೇ ಎನ್ನ ಪೊರೆಯುವ ಹೊಣೆ ನಿನ್ನದೋ ದೊರೆಯೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ನಂಬಿಹೆನೋ ಗುರುವೇ ಎನ್ನ ಪೊರೆಯುವ ಹೊಣೆ ನಿನ್ನದೋ ದೊರೆಯೇ
ಕೂಗಿ ಕರೆಯಲು ದ್ವನಿಯು ಕೇಳದೆ ಎನ್ನ ಕಡೆಗಣಿಸಿ ಹೋದೆಯಾ ಪ್ರಭುವೇ.

 ನಿನ್ನ ಬಕುತನೆನುತ ವೇಷ ಧರಿಸಿ ಪರಿ ಪರಿಯ ನಾಟಕ ಆಡಿಹೆನೋ 
ಒಳಗೊಂದು ಹೊರಗೊಂದು ಮಲಿನ ಭಾವ ಹೊತ್ತು ನಿನ್ನ ಕಾಡಿ ಬೇಡುತಿಹೆನೋ.

ತೋರಿಕೆಯ ಬಕುತಿ ಆಡಂಬರದ ಆರಾಧನೆ ನೀನು ಒಪ್ಪಲಿಲ್ಲವೋ ಗುರುವೇ
ನೋಡುಗರ ಕಣ್ಣಿನಲಿ ಈ ಪರಿಯ ಬಕುತಿಯ ತೋರಿ ಮರಳು ಮಾಡಿಹೆನೋ.

ನಿನ್ನ ಕೃಪೆ ಪಡೆದವರ ಕಂಡು ಕರುಬಿ ಎನ್ನ ಕರ್ಮವ ನೆನೆದು ಸೋತು ನಿಂತಿಹೆನೋ
ಸಾಧನೆಯ ಹಾದಿಯಲಿಹ ನಿನ್ನ ನಿಜಬಕುತರ ಅರಿಯದೇ ನಿಂದಿಸುತಿಹೆನೋ.

ವಾಸನೆಗಳಿಗೆ ಮಾರು ಹೋಗಿ ಕುಕರ್ಮದ ಅರಿವಿದ್ದರೂ ದೂರ ನಿಲ್ಲಲಾರೆನೋ
ಭಾವ ಶುದ್ಧಗೊಳಿಸಿ ಈ ಜೀವ ದಂಡಿಸಿ ಪೋರೆಯೋ ಎನ್ನ ಸಖರಾಯ ಪ್ರಭುವೇ.