ಒಟ್ಟು ನೋಟಗಳು

Thursday, March 26, 2020

ನಿನ್ನಲ್ಲೊಂದು ಅರಿಕೆಯು ನನ್ನದು ಗುರುನಾಥನೇ ಕೇಳುವೆಯಾ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನಲ್ಲೊಂದು ಅರಿಕೆಯು ನನ್ನದು ಗುರುನಾಥನೇ ಕೇಳುವೆಯಾ
ಮಹಾಮಾರಿಯೊಂದು ಅವರಿಸಿಹುದು ನಿನ್ನ ಬಕುತರಿರುವ ಜಗದಲಿಂದು|

ಎಲ್ಲಾ ನಾನೆಂಬ ಬಾವದೊಳು ಬದುಕು ನಡೆಸುವ ಮನುಜಗೆ ಪಾಠವೇ ಇದು
ಇನ್ನೂ ಬೇಕೆಂಬ ದುರಾಸೆಯು ಕರ್ಮ ಕೂಪಕೆ ದಾರಿ ತೋರಿಹಿದೋ|

ಗುರುಹಿರಿಯರ ಸಾದುಸಂತರ ಸೇವೆ ಸಲ್ಲಿಸದ ಮೋಜು ಮಸ್ತಿಗೆ ಇದು ಉತ್ತರವೇ
ಎಲ್ಲಾ ಪಡೆವೆನೆಂಬ ಧಾವಂತದ ಓಟಕೆ ನಿನ್ನ ಮೌನದ ಕಡಿವಾಣವೇ|

ಮಲಿನ ಮನದ ದುರಂಹಕಾರದ ನಡೆ ನುಡಿಗೆ ಮನುಜ ತೆರುತಿರುವ ದಂಡವೇ
ಮಾತೆ ಭಗಿನಿಯರ ನೋವು ನಿಟ್ಟಿಸುರಿಗೆ ಲೋಕ ಕೊಡುತಿಹ ತೆರಿಗೆಯೇ|

ಗುರುವೇ ನಿನ್ನಲೊಂದು ಮನವಿಯು ಎಲ್ಲರನು ಮನ್ನಿಸಿ ಪೊರೆಯೋ  ದೊರೆಯೇ
ನಿನ್ನ ಮಕ್ಕಳ ತಪ್ಪು ಒಪ್ಪುಗಳ ಗಣನೆ ಮಾಡದೆ ಎಚ್ಚರಿಕೆ ನೀಡಿ ಸಲಹೋ ಪ್ರಭುವೇ|

Thursday, March 12, 2020

ಗುರುನಾಥ ಒಲಿದರೆಂದರೆ ಯಾತರ ಭಯವೋ ಇನ್ಯಾತರ ಭಯವೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಗುರುನಾಥ ಒಲಿದರೆಂದರೆ ಯಾತರ ಭಯವೋ ಇನ್ಯಾತರ ಭಯವೋ
ಸದ್ಗುರು ಹರಸಿದೆನೆಂದರೆ ಬದುಕೆಲ್ಲಾ ಸುಂದರವೋ ಬಲು ಸುಂದರವೋ|

ಬೇಡುವ ಬಕುತನ ಮನವನು ಅರಿತು ದುರಿತಗಳ ದೂರ ಮಾಡುವ ಗುರುನಾಥ
ಮನದಲೇ ನೆನೆದು ಬಕುತಿಯ ತೋರಿರೆ ದಾರಿಯ ತೋರುವ ಗುರುನಾಥ|

ಸಂತನ ಸನಿಹದಿ ಮಧುರ ನುಡಿಗಳ ಅಲಿಸೆ ದೊರೆವುದು ಮನಕೆ ನೆಮ್ಮದಿಯು
ಬಿರುನುಡಿಯನಾಡದೆ ಸಲಹುವ ತಂದೆಯು ಸಕರಾಯಪುರದ ನಮ್ಮ ಗುರುವು|

ತುಪ್ಪದ ದೀಪಕೆ ತಾ ಒಲಿದು ಬಕುತನ ಕರುಣಿಸೆ ಹರಸುವ ಸಖರಾಯದೀಶನೋ
ಆತಂಕವ ದೂರಮಾಡುತ ಮನದ ಭಯವ ನಾಶಮಾಡುವ ಮಹಾದೇವನೋ|

ಮನದ ಭಾವಗಳ ಮಲಿನ ತೊಳೆಯುತ ಶುದ್ಧ ಅಂತಃಕರಣ ಕರುಣಿಸುವ ಗುರುದೇವ
ಬೃಂದಾವನ ಸನಿಹ ನಿಜ ಬಕುತಿಯ ತೋರಲು ಹರಸುವ ಸಖರಾಯಪುರದ ಮಹಾದೇವ|

ಏನು ಬೇಡಲಿ ಗುರುವೇ ಹೇಗೆ ಬಜಿಸಲಿ ಪ್ರಭುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಏನು ಬೇಡಲಿ ಗುರುವೇ ಹೇಗೆ ಬಜಿಸಲಿ ಪ್ರಭುವೇ
ಎನ್ನ ಕಡೆಗಣಿಸದೇ ಸಲಹು ಎನ್ನಗೆ ಮತಿ ನೀಡಿ ಹರಸು ಎನ್ನಲೇ|

ನಾನು ಬೇಡುವ ಪರಿಯೆಲ್ಲಾ ನಿನ್ನ ಪಡೆಯಲು ಸೋತಿತು ದೊರೆಯೇ
ಇನ್ನಾದರೂ ನಿಜ ಅರಿವ ನೀಡಿ ಸರಿ ದಾರಿಯಲಿ ನಡೆಸಿ ಕನಿಕರಿಸೋ ಗುರುವೇ|

ಅಂಧಕಾರವೇ ತುಂಬಿಹ ಮನದ ಒಳ ಹೊರಗು ಶುದ್ಧ ಮಾಡೋ ಪ್ರಭುವೇ
ಜ್ಞಾನಬೆಳಕಿನ ಕಿಡಿಯ ಹೊತ್ತಿಸಿ ಹೃದಯದ ಮಲಿನವ ನಾಶ ಗೊಳಿಸೋ ಸದ್ಗುರುವೆ|

ಎಲ್ಲರನು ಸಲಹುವ ತಂದೆ ನೀನು ಈ ಪಾಮರನ ದೂರ ತಳ್ಳಬೇಡ ಗುರುವೇ
ಕಳ್ಳ ಮನಸಿನ ಸುಳ್ಳು ನುಡಿಗಳೇ ಬದುಕೆಂದು ನಂಬಿಹಾ ನನ್ನ  ತಿದ್ದಿ ಉದ್ಧರಿಸೋ ದೊರೆಯೇ|

ನಿನ್ನ ಕಾಣುವ ಹಂಬಲ ಯಾಕೋ ನಾನರಿಯೆ ಸ್ವಾರ್ಥವಿರಬಹುದು ನಾ ತಿಳಿಯೇ
ನಿನ್ನ ನೆನೆವ ಮನಸೇಕೋ ಮೂಡಿತು ಅದು ನಿನ್ನ ಲೀಲೆಯ ಪರಿಯಲ್ಲವೇ ದೊರೆಯೇ|

Tuesday, March 10, 2020

ಸಕಲಗ್ರಹಬಲ ನೀನೇ ಸಖರಾಯಾಧೀಶ - ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಸಕಲಗ್ರಹಬಲ ನೀನೇ ಸಖರಾಯಾಧೀಶ
ನಿನ್ನ ನಂಬಿದವಗೆ ಕಷ್ಟವೆಲ್ಲಿದೆ ಅಮೃತಪುರೀಶ !

ದುರಿತವ ಸುಡುವ ಸೂರ್ಯನು ನೀನು
ಮಂಗಳವ ತರುವ ಮಂಗಳವೂ ನೀನು !
ಬುದ್ಧಿಯನು ಪ್ರಚೋದಿಪ ಬುಧನೇ ನೀನು
ಮನದಲಿ ಚೈತನ್ಯ ನೀಡುವ ಗುರುವೇ ನೀನು !! ೧!!

ಮನೋಮಯದಲಿ ಹೊಳೆವ ಶುಕ್ರನೇ ನೀನು 
ಕರ್ಮಗಳ ಕಳೆಯುವ ಶನಿಗ್ರಹವೂ ನೀನೇ !
ದೀನನಿಗುಣಿಸಿಹ ಶಶಿಯ ಕಿರಣವೂ ನೀನು
ಮನದ ಛಾಯೆಯ ಶುದ್ಧಿಗೈವ ರಾಹುಕೇತುವೂ ನೀನು !! ೨ !!

ಚಿತ್ತಾಕಾಶದಿ ಮಿನುಗುವ ತಾರೆಯೂ ನೀನು 
ಹೃನ್ಮಂದಿರದಿ ಬೆಳಗುವ ಅರುಣನೂ ನೀನೇ !
ಎಮ್ಮ ಜೀವನ ಬೆಳಗುವ ತೇಜೋರಾಶಿಯೂ ನೀನು 
ಗ್ರಹರಾಶಿಯನು ಆಳ್ವ ಪರಂಜ್ಯೋತಿಯೇ ನೀನು !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೯-೩-೨೦೨೦