ಒಟ್ಟು ನೋಟಗಳು

Wednesday, February 28, 2018

ಗುರುನಾಥ ಗಾನಾಮೃತ 
ನಿಸ್ಸಂಗಿಯಾಗು ಮನವೇ
ರಚನೆ: ಅಂಬಾಸುತ 

ನಿಸ್ಸಂಗಿಯಾಗು ಮನವೇ
ಸತ್ಸಂಗದಿ ಪರಮಾನಂದವ ಪಡೆದೂ ||

ಬೆಟ್ಟ ಅಡವಿಯ ಹೊಕ್ಕು ಕೂರದೇ
ಜಪಮಾಲೆ ಕಾಷಾಯ ಭೂಷಣ ತೊಡದೇ
ಬಂಧು ಬಾಂಧವರಾ ನಡುವಿದ್ದೂ
ಭೋಗಭಾಗ್ಯದ ವಾಸನೆಗಳಾ ಸುಟ್ಟೂ ||೧||

ಸ್ವಂತವಿರದಾ ಸ್ವತಂತ್ರನಾಗೀ
ಸಾಧು ಸಂತರಾ ಸೇವಕ ನೀನಾಗೀ
ಸಮಚಿತ್ತದಿ ಸತ್ಯಾವ ಹುಡುಕೀ
ಅನಿತ್ಯಾದ ಬಯಕೆಗಳ ಬದಿಗೊತ್ತೀ ||೨||

ಸದ್ಗುರು ಪದ ಪಾದ ಪಿಡಿದೂ
ಸತ್ಚಿಂತನೆ ಇಂದಲಿ ಸಮಯ ಕಳೆದೂ
ಸಾಯುಜ್ಯ ಸಾಮೀಪ್ಯ ಸಾರೋಪ್ಯವೆಂಬಾ
ಪದದೊಳಡಗೀಹಾ ತತ್ವಾವ ಅರಿತೂ ||೩||

ಅಂಬಾಸುತನಾ ಅರಿಕೆ ಇದೂ
ಆದ್ಯಂತ ರಹಿತನೊಳು ಒಂದಾಗೂ
ಘನ ಸಖರಾಯನ ನಂಬೀ
ಜ್ಞಾನ ದೀವಿಗೆಯಾ ಮನದೊಳು ಪೊಂದೀ ||೪||
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸುದುರ್ಲಭಂ ಹಿ ಸರ್ವತ್ರ 
ಗುರುವಾಕ್ಯಾನುಸಂಧಾನಮ್ |
ತಥಾಪಿ ಯೋನುಸರತಿ 
ನೂನಂ ಸ ಸಾಧಕಃ ಸ್ಮೃತಃ ||

ಗುರುವಿನ ವಾಕ್ಯವನ್ನು ಜೀವನದಲ್ಲಿ ಅನುಸಂಧಾನ ಮಾಡುವುದು ಅತ್ಯಂತ  ಕಷ್ಟಕರವಾದುದು..ಆದರೂ ಯಾರು ಸದ್ಗುರು ಹೇಳಿದ ಮಾರ್ಗವನ್ನು ಅನುಸರಿಸುವರೋ ಅವರೇ ನಿಜವಾದ ಸಾಧಕರು .

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Monday, February 26, 2018

ಗುರುನಾಥ ಗಾನಾಮೃತ 
ದಿಕ್ಕು ಕಾಣದೆ ನಿಂತಿಹೆನೋ
ರಚನೆ: ಅಂಬಾಸುತ 

ದಿಕ್ಕು ಕಾಣದೆ ನಿಂತಿಹೆನೋ
ಚೊಕ್ಕದಾರಿಯ ತೋರಿಸೋ||ಪ||

ಅಕ್ಕರೆಯ ಮಗುವೆಂದು ಭಾವಿಸೋ
ಸಕ್ಕರೆಯ ನಾಲಿಗೆಯೊಳಿರಿಸೋ ಅವಧೂತನೇ ||ಅ.ಪ||

ದರ್ಪವೆಂಬುವ ಸರ್ಪ ಓಡಿಸೋ
ಜ್ಞಾನ ದಾರಿದ್ರ್ಯವನು ಅಳಿಸೋ
ಭವದ ಬಂಧನ ಬಿಡಿಸಿ ಎನ್ನನ್ನು
ನಿನ್ನ ಅಂಕೆಯೊಳಾಗಿರಿಸೋ ಅವಧೂತನೇ ||೧||

ಮಾತು ಕೆಡಿಸೋ ಮೌನ ಕಲಿಸೋ
ದುಷ್ಟ ಚಿಂತೆಯಾ ಮರೆಸೋ
ಸಾಧು ಸಜ್ಜನರಾ ಸಂಘವಾ
ಇತ್ತು ಎನ್ನನುದ್ಧರಿಸೋ  ಅವಧೂತನೇ||೨||

ನಿನ್ನ ದಾಸನನ್ನಾಗಿಸೋ
ನಿನ್ನ ಮನೆಯೊಳಗೆನ್ನನಿರಿಸೋ
ಕಾಂಚಾಣಾ ಕಾಮಭೋಗವಾ
ಎನ್ನ ಮನದಿಂದ ಮರೆಮಾಡೋ ಅವಧೂತನೇ||೩||

ನೀನೇ ಅಂಬಾ ಸುತನು ನಾನು
ನನ್ನತನವನು ದಹಿಸೋ
ಮೋಕ್ಷಾದೀ ಬಯಕೆಗಳನು
ಬಯಸದಂತೆ ಹರಸೋ  ಅವಧೂತನೇ||೪||

Sunday, February 25, 2018

ಗುರುನಾಥ ಗಾನಾಮೃತ 
ದಟ್ಟಿಯ ಸುತ್ತಿಕೊಂಡವನಂತೆ
ರಚನೆ: ಅಂಬಾಸುತ 

ದಟ್ಟಿಯ ಸುತ್ತಿಕೊಂಡವನಂತೆ
ದಿಟ್ಟನಿವ ಗಡ್ಡಾಧಾರಿಯಂತೆ
ನಗುತಲೇ ನರರಾ ಉದ್ಧರಿಸುವವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ||

ಧರ್ಮದ ಹಾದಿ ತೋರುವನಂತೆ
ಅಧರ್ಮಿಗೆ ಬಲು ಘೋರನಿವನಂತೆ
ಆಡುಮಾತಿನಲ್ಲೇ ಮಂತ್ರಾರ್ಥ ಪೇಳ್ವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||

ಬಂಜೆಯರ ಮಡಿಲೊಳು ಮಗುವಾದವನಂತೆ
ದಿಕ್ಕೆಟ್ಟ ಮಕ್ಕಳಾ ತಾಯ್ತಂದೆ ಇವನಂತೆ
ಗುರುಮನೆಯ ತವರು ಮನೆಯಾಗಿಸಿದವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||

ಆಶ್ರಮದಾ ಶ್ರಮ ಬೇಡ ಎಂದವನಂತೆ
ಹೆತ್ತವರಾ ಹಿರಿತನವಾ ಸಾರಿ ನಿಂತವನಂತೆ
ವಿತ್ತದಾಸೆಯ ಅಳಿಸಿ ಚಿತ್ತದೊಳಿಹನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||

ದೇಹಭಾವವ ಅಳಿಸಿ ಆತ್ಮತೋರಿದನಂತೆ
ಪರಮಹಂಸರ ಪಾದ ಸೇವಿಸಿರೆಂದವನಂತೆ
ಪರತರ ಪರಬ್ರಹ್ಮ ಗುರು ಎಂದವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||

ಕಟ್ಟುಪಾಡುಗಳಾ ಮೀರಿದವನಂತೆ
ಗೀತೆ ಬೋಧಿಸಿದಾ ಕೃಷ್ಣ ಇವನಂತೆ
ಭಕುತರ ಮನಸಂಚಾರಿಯೂ ಅಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||

ಕರ್ಮದ ಹಿಂದಿನ ಮರ್ಮ ತಿಳಿಸಿದವನಂತೆ
ಕಣ್ಣಲ್ಲೇ ಕಾರುಣ್ಯ ತುಂಬಿಕೊಂಡವನಂತೆ
ಅಷ್ಟಸಿದ್ದಿಗಳಾ ಬಲಹೊಂದಿರುವವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||

ಆದ್ಯಂತರಹಿತ ಪರಿಪೂರ್ಣನಿವನಂತೆ
ಆನಂದರೂಪಿ ಅಪ್ರಮೇಯನಂತೆ
ಅಂಬಾಸುತನಾ ಸದ್ಗುರು ಇವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||

Thursday, February 22, 2018

ಗುರುನಾಥ ಗಾನಾಮೃತ 
ಅಖಿಲಗ್ರಹಬಲನೀನೇ ಸಖರಾಯಪುರೀಶ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಅಖಿಲಗ್ರಹಬಲನೀನೇ ಸಖರಾಯಪುರೀಶ 
ಎಲ್ಲರನು ಪೊರೆಯುವ ಗುರುವೇ ಜಗದೀಶ || 

ಗುರುಬಲವು ನೀನು ಶುಕ್ರಕಾಂತಿಯು ನೀನು
ಸೂರ್ಯತೇಜನು ನೀನು ಇಂದುಶೀತಲ ‌ನೀನೇ |
ಮಂಗಳಕರ ನೀನೇ ಬುಧಮತಿಯು ನೀನೇ
ಶನಿಗತಿಯು ನೀನು ಮನದ ಛಾಯೆಯು ನೀನೇ || ೧ ||

ಕರುಣೆಯ ವರ್ಷಿಸುವ ಇಂದ್ರದೇವನು ನೀನು
ಕರ್ಮಗಳ ದಹಿಸುವ ವೈಶ್ವಾನರನು  ನೀನೇ |
ಭವಭೀತಿ ಭಂಜಿಸುವ ಯಮಧರ್ಮನೂ ನೀನು 
ಹೃದಯದಿ ಸಂಚರಿಪ ವಾಯುದೇವನೂ ನೀನೇ || ೨ ||
ಗುರುನಾಥ ಗಾನಾಮೃತ 
ದಿಟ್ಟತನದಿ ಕುಳಿತ ಇವನು ಸಿಗುವುದೇ ಕಷ್ಟ
ರಚನೆ: ಅಂಬಾಸುತ 

ದಿಟ್ಟತನದಿ ಕುಳಿತ ಇವನು ಸಿಗುವುದೇ ಕಷ್ಟ
ಕಷ್ಟವೆನುತ ದೂರ ಸರಿಯೇ ಅದುವೆ ನಿನಗೆ ನಷ್ಟ
ಕಷ್ಟ ನಷ್ಟ ಬದಿಗೊತ್ತೇ ಪೂರೈಸುವ ನಿನ್ನಿಷ್ಟ
ಮರೆಯಬೇಡ ಅವನೊಳು ಇಹುದು ಸಿದ್ದಿ ಅಷ್ಟ ||

ಬಂದು ಬಿಟ್ಟು ಹೋದರೆ ನೀನಾಗುವೆ ಭ್ರಷ್ಟ
ಕಳೆವನವನು ಭವದ ಈ ಬಾಧೆಯಾ ಅನಿಷ್ಟ
ಅವ ತೋರಿದ ದಾರಿ ಪಿಡಿಯೆ ನೀನಾಗುವೆ ಗರಿಷ್ಟ
ಅವನ ಮಾತ ಮೀರಿದರೆ ನೀನೆಂದಿಗೂ ಕನಿಷ್ಟ ||

ಗುರುನಾಥನ ನಾಮವೇ ಎಂದಿಗೂ ಉತ್ಕೃಷ್ಟ
ಅಮೃತಕೆ ಸಮಾನ ಅವನಾ ಉಚ್ಚಿಷ್ಟ
ಗುರುನಾಥನ ಈ ಪದ ಕಳೆವುದೂ ಅರಿಷ್ಟ
ಅಂಬಾಸುತನಾ ಸದ್ಗುರು ದೇವನೆಂಬುದು ಸ್ಪಷ್ಟ ||

Sunday, February 18, 2018

ಗುರುನಾಥ ಗಾನಾಮೃತ 
ಶರಣಾದೇ ನಿನಗೆ ಗುರುವೆ
ರಚನೆ: ಅಂಬಾಸುತ 

ಶರಣಾದೇ ನಿನಗೆ ಗುರುವೆ
ಕರುಣದಿ ಎನ್ನನು ಪೊರೆಯೋ ಪ್ರಭುವೆ||ಪ||

ನಿನ್ನ ಹೊರತು ಎನಗ್ಯಾರಿಲ್ಲ
ನೀನೇ ಗತಿ ಎಂದು ನಂಬಿಹೆನಲ್ಲಾ
ಕಾಮಧೇನು ಕಲ್ಪವೃಕ್ಷ
ಕಲಿಯುಗದಿ ಸದ್ಗುರುವೇ ಎಲ್ಲಾ ||೧||

ನೀನೇ ಸುಖದ ಸಾಗರವಯ್ಯ
ನೀನೇ ಪ್ರೇಮದ ಆಗರವಯ್ಯ
ನೀನೇ ಕರುಣೆಯ ಆಗಸವಯ್ಯ
ನೀನೇ ಹರಿಹರ ಬ್ರಹ್ಮನಯ್ಯ ||೨||

ಅರಿವಿನ ಮನೆಯ ದೊರೆ ನೀನಯ್ಯ
ಅಂಧಕಾರವ ಅಳಿಸುವ ಜೀಯ
ಆತ್ಮಭಾವವ ಬೇಡಿಹೆನಯ್ಯ
ದೇಹಭಾವವ ಕಳೆಯಯ್ಯ ||೩||

ನನ್ನಂಥಾ ಪಾಪಿ ಯಾರಿಲ್ಲ
ನಿನ್ನಂಥ ಪುರುಷೋತ್ತಮನಿಲ್ಲ
ಯೋಗಯೋಗ್ಯತೆ ನೋಡಬೇಡಯ್ಯ
ನಿನ್ನ ಪದತಲದಿ ಎನ್ನನಿರಿಸಯ್ಯ ||೪||

ನೀನಿಟ್ಟಂತೇ ನಾನಿರುವೆ
ನೀ ಕೊಟ್ಟಿದ್ದನೇ ಉಣುವೆ
ನೀ ಕರೆದಾಗ ನಾ ಬರುವೆ
ನೀ ನುಡಿದಂತೆ ನಾ ನೆಡೆವೆ ||೫||

ಸಖರಾಯ ಪಟ್ಟಣವಾಸ
ಶ್ರೀವೇಂಕಟಾಚಲ ಅವಧೂತ
ಅಂಬಾಸುತನಾ ಆತ್ಮಬಂಧು ನೀನೇ
ಅವನನ್ನುದ್ಧರಿಸೋ ಮಹಾದೇವನೇ ||೬||

Saturday, February 10, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಭಾವಿಕಾನಾಂ ಪರೀಕ್ಷತಿ
ಸಂಕಷ್ಟಸುಖಮಾಯಯಾ |
 ಗುರುಭಕ್ತ್ಯುಡುಪೇ‌ನ ಸ
ತೀರ್ತ್ವಾ ವಿಂದತಿ ಸಾಮೀಪ್ಯಮ್ ||

ಗುರುವು ಭಕ್ತರಿಗೆ ಕಷ್ಟ ಸುಖವೆಂಬ ಮಾಯೆಯಿಂದ ಪರೀಕ್ಷಿಸುತ್ತಾನೆ.ದೃಢಭಕ್ತನು ಗುರುನಿಷ್ಠೆಯೆಂಬ ದೋಣಿಯಿಂದ ಆ ಮಾಯೆಯನ್ನು ದಾಟಿ ಸದ್ಗುರುವು ಸದಾ ಜೊತೆಗಿರುವನೆಂಬ  ಭಾವವನ್ನು ಹೊಂದುತ್ತಾನೆ .

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Thursday, February 8, 2018

ಗುರುನಾಥ ಗಾನಾಮೃತ 
ಧರ್ಮದಿಂದ ಕರ್ಮಮಾಡೋ
ರಚನೆ: ಅಂಬಾಸುತ 

ಧರ್ಮದಿಂದ ಕರ್ಮಮಾಡೋ
ಮರ್ಮ ಅದರೊಳಗಿಹುದೋ
ಫಲವನೀವನು ಭಗವಂತನೂ
ಚಿಂತೆ ನಿನಗಿನ್ನೇತಕೋ ||

ನಾನು ನನ್ನದು ನನಗಾಗೀ
ಎಂಬ ಭಾವವ ತ್ಯಜಿಸೀ
ನೀನಿಟ್ಟ ಹಾಗೇ ನಾನಿರುವೇ
ಕಾಯೋ ಪ್ರಭುವೇ ಎನುತಾ ||

ಹೊತ್ತು ತಂದವನವನೂ
ಹುಲ್ಲು ನೀಡದೆ ಇರನೂ
ಕಲ್ಲಿನೊಳಗೂ ಬೆಳೆಯ ಬೆಳೆದೂ
ತನ್ನ ಮಹಿಮೆಯ ತೋರ್ವನೂ ||

ಸತಿಯು ಸುತರೂ ಒಡವೆ ವಸ್ತ್ರವು
ಕ್ಷಣಿಕ ನೀ ಮರೆಯದಿರೋ
ಕರೆಯು ಬಂದಾ ಕೂಡಲೇ
ನೀ ಮರಳಬೇಕೋ ಅರಿಯೋ ||

ಪಟ್ಟ ಪದವಿ ದಿಟ್ಟತನವದು
ಅವನ ಭಿಕ್ಷೆ ತಿಳಿಯೋ
ಕಟ್ಟಕಡೆಯಲಿ ಚಟ್ಟವೇರಿಸಿ
ಸರ್ವಸಮ ಎನಿಸುವನೋ ||
ಗುರುನಾಥ ಗಾನಾಮೃತ 
ಭಕುತಿ ಇರಲಿ ಮುಕುತಿಯ ಆಸೆ ನಿನಗೇಕೋ
ರಚನೆ: ಅಂಬಾಸುತ 

ಭಕುತಿ ಇರಲಿ ಮುಕುತಿಯ ಆಸೆ ನಿನಗೇಕೋ
ಸದ್ಗುರು ಸಾಮೀಪ್ಯಕೇ ಸರಿಸಮವಿನ್ನೇನೋ ||ಪ||

ಅನವರತಾ ಗುರು ಸೇವೆಯ ಮಾಡುತಾ
ಅತಿಷಯ ಪ್ರೇಮದೀ ಅವನನೇ ಭಜಿಸುತಾ
ಅಂತರಂಗದೊಳೂ ಅವನ ಮೂರುತಿ ಇಟ್ಟೂ
ಆನಂದ ಆನಂದ ಆನಂದದಿಂದಿರಲೂ ||೧||

ಗುರು ತಾಯಿ ತಂದೆಯೂ ಗುರು ಬಂಧುಬಳಗವೂ
ಗುರು ನಿಜದೈವವೂ ಗುರುವೇ ಸಕಲವೂ
ಗುರು ನೀನೆ ಗತಿ ಎಂದೂ ಶರಣಾಗತನಾಗಲೂ
ಓಡಿ ಬರುವ ಪ್ರೇಮ ಮೂರುತಿ ಇರಲೂ ||೨||

ಸಖರಾಯಪಟ್ಟಣದ ಸದ್ಗುರುನಾಥಾ
ಅಂಬಾಸುತನಾ ನಿಜಪಾಲಕನೀತಾ
ಅನವರತ ಶುಧ್ಧ ಭಕ್ತಿ ಭಾವ ತುಂಬುತಾ
ನಿನ್ನಡಿಯೊಳಗಿರಿಸೋ ಮುಕುತಿಯದೇತಕೋ ||೩||
ಗುರುನಾಥ ಗಾನಾಮೃತ 
ನಾ ಮರೆತೆ ಎನ್ನ ನಿಜ ಕಾಯಕ
ರಚನೆ: ಅಂಬಾಸುತ 

ನಾ ಮರೆತೆ ಎನ್ನ ನಿಜ ಕಾಯಕ
ಆಗಲಿಲ್ಲ ಸದ್ಗುರು ಸೇವಕ
ಬಯಸಿದೆನೋ ಲೌಕಿಕದಾ ಸುಖ
ಅನುಭವಿಸಿದೆನಿಲ್ಲೇ ನರಕ  ||

ನಂಬಿದೆನೋ ಜಾತಕ
ಕೈಕಟ್ಟಿ ಕೂರುವುದೇ ಘಾತುಕ
ನೋಡಲಿಲ್ಲ ಸಜ್ಜನರಾ ಮುಖ
ನನಗುಳಿದುದು ಬರೀ ದುಖಃ ||

ಅರಿಯಲಿಲ್ಲಾ ಜಗವಿದು ನಾಟಕ
ಅದರಿಂದ ನಾನಾದೆ ಮೂರ್ಖ
ಅರಿಷಡ್ವರ್ಗಗಳೇ ಬಾಧಕ
ಅದ ಮೆಟ್ಟಿ ನಿಂತವನೇ ಸಾಧಕ ||

ಬೇಧ ಬಿಟ್ಟವ ಹೇಳಿದ ಏಕ
ಲೋಕವ್ಯವಹಾರಿಗದು ಅನೇಕ
ಗುರುನಾಮವೊಂದೇ ತಾರಕ
ಅದ ನಂಬಿದರೆ ನೀ ಕಲ್ಯಾಣಕಾರಕ ||

Friday, February 2, 2018

ಗುರುನಾಥ ಗಾನಾಮೃತ 
ಸದ್ಗುರು ನಾಮಸ್ಮರಣಾ
ರಚನೆ: ಅಂಬಾಸುತ 

ಸದ್ಗುರು ನಾಮಸ್ಮರಣಾ
ಮನಕ್ಲೇಶ ಹರಣಾ
ಆತ್ಮಜ್ಞಾನ ಸ್ಪುರಣಾ
ಆನಂದ ಸಂಜೀವನಾ ||

ಸಾತ್ವಿಕತೆಯ ಆವರಣಾ
ನಾಮವೇ ಮನದಾಭರಣಾ
ಗುರುಪದವೆಮಗೇ ಕಿರಣಾ
ಅಜ್ಞಾನಕೆ ಇಲ್ಲಿ ಮರಣಾ ||

ಮೌನವೇ ಇಲ್ಲಿ ವಿವರಣಾ
ಹಿಡಿ ಸದ್ಗುರು ಚರಣಾ
ಲೋಕವಾಗುವುದು ಭಣಭಣಾ
ಗುರುವಿರುವನು ಪ್ರತಿ ಕಣಕಣಾ ||
ಗುರುನಾಥ ಗಾನಾಮೃತ 
ಸಖರಾಯಪುರವಾಸಿ ಗುರುನಾಥನಾ ಅವಧೂತನಾ
ರಚನೆ: ಅಂಬಾಸುತ 

ಸಖರಾಯಪುರವಾಸಿ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||ಪ||

ಮಾತಿನಲ್ಲೇ ಮನಕ್ಲೇಶವಾ ಹರಿಸಿದಾ
ಮಂಗಳ ಮೂರುತಿ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೧||

ಜಲಕ್ಷಾಮದೊಳು ಮೇಘವೆಲ್ಲಾವ ಆಕರ್ಶಿಸಿ
ಮಳೆ ಸುರುಸಿದಾ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೨||

ಸತಿಹೊರಟ ಸ್ತ್ರೀ ಗೆ ಸತ್ಯಾವ ತಿಳಿಸುತಾ
ದತ್ತನಾಗಿ ಕಂಡ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೩||

ದುಷ್ಟಾರ ಶಿಕ್ಷಿಸಿ ಶಿಷ್ಟಾರ ರಕ್ಷಿಸೋ
ಚಿತ್ತವಾಸಿ ನಮ್ಮ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೪||

ಕರ್ಮ ಕಳೆದೂ ಧರ್ಮ ಹಾದಿಯ ತೋರಿಸೋ
ಕಾಮಧೇನು ನಮ್ಮ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೫||

ಹಿಡಿರಾಗಿಯಿಂದ ದೇಹ ರೋಗವಾ ಕಳೆದಾ
ನಿಜವೈರಾಗಿ ನಮ್ಮ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೬||

ಸಾತ್ವಿಕರ ಸಂಕಷ್ಟವೆಲ್ಲವ ಸರಿಸೀ
ಸಾಯುಜ್ಯ ನೀಡುವಾ ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೭||

ಮಂಗಳ ರೂಪನಿಗೆ ಮಂಗಳಕಾರಕಗೇ
ಅಂಬಾಸುತ ಸದ್ಗುರು ಗುರುನಾಥನಾ ಅವಧೂತನಾ
ಅತಿ ಮೋದದಿಂದಲೇ ಭಜಿಸೋಣಾ ||೮||