ಒಟ್ಟು ನೋಟಗಳು

Saturday, December 31, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 88


    ಗ್ರಂಥ ರಚನೆ - ಚರಣದಾಸ 


ತಲೆದಿಂಬು 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುವೆಂದರೆ ಕೇವಲ ಆಧ್ಯಾತ್ಮವೆಂದರ್ಥ ಮಾತ್ರವಲ್ಲ. ಆತ ಬದುಕಿನ ದಾರಿದೀಪ. ಜೀವನದಲ್ಲಿ ಬಸವಳಿದು ಬಂದ ಭಕ್ತರ ಪಾಲಿನ ಸಂಜೀವಿನಿ. 

ಒಮ್ಮೆ ಗುರುನಾಥರು ತಮ್ಮ ಹೊಸ ಮನೆಯ ಮುಂಭಾಗದಲ್ಲಿ ಕುಳಿತಿದ್ದರು. ಎಂದಿನಂತೆಯೇ ಜನಜಂಗುಳಿ ಇದ್ದಿತು. 

ಆಗ ಸುಮಾರು 45-50 ರ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ಬಂದು ಗುರುನಾಥರಿಗೆ ನಮಸ್ಕರಿಸಿ ಕುಳಿತರು. 

ಗುರುನಾಥರು ಎಂದಿನಂತೆ "ಏನಾಗಬೇಕು ನನ್ನಿಂದ?" ಎಂದು ಪ್ರಶ್ನಿಸಲು ಆತ ಹೀಗೆ ಹೇಳತೊಡಗಿದನು. 

"ಸ್ವಾಮಿ ನನ್ನ ಕಣ್ಣುಗಳು ಇದ್ದಕ್ಕಿದ್ದಂತೆಯೇ ಮಂಜಾಗಿ, ದೃಷ್ಠಿ ಸರಿಯಾಗಿ ಕಾಣುತ್ತಿಲ್ಲ. ಕಳೆದ 5-6 ತಿಂಗಳಿನಿಂದ ನನಗೆ ಗೊತ್ತಿರುವ ಎಲ್ಲಾ ವೈದ್ಯರಲ್ಲೂ ಪರೀಕ್ಷಿಸಿಯಾಯಿತು. ಅಲ್ಲಿ ಯಾವುದೇ ಸಮಸ್ಯೆಗಳು ಇಲ್ಲವೆಂದರು. ಏನಾದರೂ ಆಗಲಿ ಎಂದು ಜ್ಯೋತಿಷ್ಯ, ಶಾಸ್ತ್ರ, ಹೋಮ-ಹವನಗಳೆಲ್ಲವನ್ನೂ ಮಾಡಿಸಿಯಾಯ್ತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಯಾರೋ ತಮ್ಮ ಬಗ್ಗೆ ಹೇಳಿದರು. ಈಗ ಕೊನೆಯ ಪ್ರಯತ್ನವಾಗಿ ಇಲ್ಲಿಗೆ ಬಂದಿರುವೆ" ಎಂದನು. 

ಆಗ ಗುರುನಾಥರು "ಈಗ ನನ್ನನ್ನು ಪರೀಕ್ಷಿಸಲು ಬಂದ್ರೆ ಏನು ಪ್ರಯೋಜನ? ನಿಂಗೆ ನಂಬಿಕೆ ಇದ್ರೆ ಔಷಧಿ ನೀಡುತ್ತೇನೆ ತಿಳೀತಾ?" ಎನ್ನಲು ಆತ ಆಗಬಹುದೆಂದನು. 

ಮಾತ್ರವಲ್ಲ ಗುರುನಾಥರಿಗೆ ಕೈಮುಗಿದು ಬೆನ್ನು ತೋರಿಸದಂತೆ ಹಿಮ್ಮುಖವಾಗಿ ಕೆಲ ಹೆಜ್ಜೆ ನಡೆದು ನಿಂತುಕೊಂಡನು. 

ಆಗ ಗುರುನಾಥರು "ಯಾಕೆ ಹಿಮ್ಮುಖವಾಗಿ ನಡೆದೆ " ಎಂದು ಪ್ರಶ್ನಿಸಲು 

ಆತ ಸ್ವಾಮಿ ನಾನು ಈವರೆಗೆ ಯಾವ ಪೀಠಾಧಿಪತಿ ಸನ್ಯಾಸಿಗಳನ್ನು ದರ್ಶನ ಪಡೆದ ಮೇಲೆ ಎಂದೂ ಅವರಿಗೆ ನನ್ನ ಬೆನ್ನು ತೋರಿಸಿಲ್ಲ" ಎಂದನು. 

ಆಗ ಗುರುನಾಥರು ತನ್ನ ಪಕ್ಕದಲ್ಲಿದ್ದ ವ್ಯಕ್ತಿಯನ್ನು ಕರೆದು ಒಂದು ದಿಂಬನ್ನು ಅವರ ಕೈಗೆ ನೀಡಿ, ಆ ಮಧ್ಯ ವಯಸ್ಕನನ್ನು ಕುರಿತು, "ಅಯ್ಯಾ ಈ ವ್ಯಕ್ತಿಯ ಜೊತೆ ಕೆಳಗೆ ಹೋಗು. ಅಲ್ಲಿ ಒಂದು ಅರಳೀ ಮರದ ಸಮೀಪ ನೀನು ಹೋದ ಕೂಡಲೇ ಹಣ್ಣಾದ ಐದು ಅರಳೀ ಎಲೆಗಳು ಉದುರಿ ಬೀಳುವವು. ಅವನ್ನು ತೆಗೆದುಕೊಂಡು ಬಾ. ಆದರೆ ಈ ತಲೆದಿಂಬನ್ನು ಮಾತ್ರ ಕೈ ಬಿಡಬೇಡ. ಬಿಟ್ಟರೆ ಮುಂದೆ ನನಗೆ ಗೊತ್ತಿಲ್ಲ ಎಚ್ಚರ, ಎಚ್ಚರ" ಎಂದರು. 

ಆ ಮಧ್ಯವಯಸ್ಕ  ಹಿಡಿದ ಆ ವ್ಯಕ್ತಿಯೊಂದಿಗೆ ಈಶ್ವರ ದೇಗುಲದ ಮಂದಿರವಿರುವ ಅರಳೀ ಮರದ ಬಳಿ ಬಂದೊಡನೆ ಗುರುನಾಥರು ಹೇಳಿದಂತೆಯೇ ಸರಿಯಾಗಿ ಐದು ಹಣ್ಣಾದ ಅರಳೀ ಎಲೆಗಳು ಕೆಳಗೆ ಬಿದ್ದವು. ಅವನ್ನು ಜೋಪಾನವಾಗಿ ಆಯ್ದುಕೊಂಡ ಆತ ನೇರವಾಗಿ ಬಂದು ಗುರುನಾಥರ ಮುಂದೆ ನಿಂತರು. 

ಆಗ ಗುರುನಾಥರು "ಇನ್ನು ನಿನ್ನ ಕಣ್ಣಿನ ಸಮಸ್ಯೆ ಪರಿಹಾರವಾಯಿತೆಂದು ತಿಳಿ". ನೀನು ಪ್ರತಿದಿನ ಮಲಗುವ ದಿಂಬಿನ ಕೆಳಗೆ ಇದನ್ನಿಟ್ಟು ಅಲ್ಲಿಯೇ ಮಲಗಿದರೆ ಸಾಕು ನಿನ್ನ ಖಾಯಿಲೆ ವಾಸಿಯಾಗುವುದು" ಎಂದರು. 

ಆತ "ಸ್ವಾಮಿ ನನ್ನ ಕಣ್ಣಿಗೆ ಉಂಟಾದ ಸಮಸ್ಯೆಯಾದರೂ ಏನು?" ಎಂದು ಕೇಳಿದನು. 

ಅದಕ್ಕೆ ಗುರುನಾಥರು "ಅಯ್ಯಾ ನಿನಗೆ ಆಗಾಗ್ಗೆ ಮೊಣಕಾಲು ಗಂಟು ನೋವು ಬರುತ್ತೆ ಅಲ್ವೇ?" ಅಂದ್ರು. ಅದಕ್ಕೆ ಆತ ಹೂಂ... ಎಂದರು. 

ಗುರುನಾಥರು "ಅಯ್ಯಾ ನಿನ್ನ ಹೃದಯಕ್ಕೆ ರಕ್ತ ಸಂಚಾರವಾಗುವಾಗ ಕೆಲವೊಮ್ಮೆ ಶುದ್ಧವಾಗದ ರಕ್ತ ನೇರವಾಗಿ ಹೃದಯಕ್ಕೆ ಚಲಿಸುತ್ತಿದ್ದು, ಅದೇ ಅಶುದ್ಧ ರಕ್ತ ನೇತ್ರಗಳ ಸಮೀಪ ಬಂದಾಗ ಕಣ್ಣು ಮಂಜಾಗುವುದು, ಮೊಣಕಾಲು ಬಳಿ ಸಂಚರಿಸಿದಾಗ ಕಾಲು ನೋವಾಗುತ್ತಿತ್ತು ಅಷ್ಟೇ..... ಇನ್ನು ನಿನಗೆ ಈ ಸಮಸ್ಯೆ ಬಾಧಿಸುವುದಿಲ್ಲ" ಎಂದರು. ಆ ವ್ಯಕ್ತಿ ಧನ್ಯತೆಯ ಭಾವದಿಂದ ನಮಸ್ಕರಿಸಿ ಅಲ್ಲಿಂದ ತೆರಳಿದನು. ಗುರು ವಾಕ್ಯದಂತೆಯೇ ಮುಂದೆ ಆತನ ಸಮಸ್ಯೆ ಪರಿಹಾರವಾಯಿತು.........,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, December 30, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 87


    ಗ್ರಂಥ ರಚನೆ - ಚರಣದಾಸ 


ಗುರು ಗುಂಪಿಗಲ್ಲ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಮೂಲತಃ ಸೇನೆಯಲ್ಲಿದ್ದ ಆ ವ್ಯಕ್ತಿ ಗುರುನಾಥರ ಬಗ್ಗೆ ಸಂಬಂಧಿಯೊಬ್ಬರಿಂದ ತಿಳಿದು ಅವರನ್ನು ನೋಡಲೇಬೇಕೆಂಬ ಹಂಬಲದಿಂದ ಮಧ್ಯರಾತ್ರಿ ಒಂದೂವರೆಗೆ ಗುರುನಿವಾಸದ ಕದ ತಟ್ಟಿದರು. 

ಲಾಟೀನು ಹಿಡಿದು "ಯಾರಯ್ಯ ಅದು" ಎಂದು ಕೇಳುತ್ತಾ ಬಾಗಿಲ ತೆಗೆದ ಗುರುನಾಥರು ಅವರಿಗೆ ಮಲಗಲು ವ್ಯವಸ್ಥೆ ಮಾಡಿ, "ಬೆಳಿಗ್ಗೆ ಮಾತನಾಡುವ ಆಯ್ತಾ" ಎಂದು ನುಡಿದು ಒಳ ನಡೆದರು. ಆಗಿನ್ನೂ ಜನಜಂಗುಳಿ ಅಷ್ಟಾಗಿ ಇರಲಿಲ್ಲ. 

ಗುರುನಾಥರು ಇವರೊಂದಿಗೆ ಊರೊಳಗೆ ಹೋಗಿ ಎಲ್ಲರಿಗೂ ಪರಿಚಯ ಮಾಡಿಕೊಟ್ಟು ಎರಡು ದಿನಗಳ ಕಾಲ ಜೊತೆಯಲ್ಲಿ ಇರಿಸಿಕೊಂಡರು. ಆ ಎರಡು ದಿನವೂ "ಗುರು ಶುದ್ಧ ಭಾವನೆಗೆ ಮಾತ್ರ ಸಿಗುವನು" ಎಂದು ಅವರನ್ನೇ ಉದ್ದೇಶಿಸಿ ಮಾತನಾಡುತ್ತಿದ್ದರು. 

ಜೊತೆಗೆ "ನೋಡಿ ನನ್ನ ಮಾತನಾಡಿಸೋಕೆ ಅಂತ ಬೆಂಗಳೂರಿನಿಂದ ಬಂದಿದ್ದಾರೆ" ಅಂತ ಸುತ್ತಲಿದ್ದ ಜನತೆಗೆ ಇವರ ಬಗ್ಗೆ ಹೇಳುತ್ತಿದ್ದ ರೀತಿ ಅಷ್ಟು ಮುಗ್ಧವಾಗಿರುತ್ತಿತ್ತು. ಆ ನಂತರ ಸಂಜೆ ಹೊರಡುವ ಮುನ್ನ ಅವರನ್ನು ಕರೆದು "ಗುರು ಗುಂಪಿಗಲ್ಲ ಕಣಯ್ಯಾ. ನಿನಗೆ ಬೇಕಾದರೆ ಒಬ್ಬನೇ ಬಾ" ಎಂದು ಹೇಳಿ ಕಳಿಸಿದರು. 

ಆ ನಂತರ ಗುರುವಿನ ಆಕರ್ಷಣೆಗೆ ಒಳಗಾದ ಆ ವ್ಯಕ್ತಿ ಪದೇ ಪದೇ ಬರತೊಡಗಿದರು. ಗುರುವಿನ ಅನುಗ್ರಹದಿಂದಾಗಿ ಕೇಂದ್ರ ಸರ್ಕಾರಿ ನೌಕರಿಗೆ ಸೇರಿ ಮೈಸೂರಿನಲ್ಲಿ ಸೇವೆ ಸಲ್ಲಿಸಲು ಆರಂಭಿಸಿದರು. ನಾನು ಗುರುವಿನ ಸಂಪರ್ಕಕ್ಕೆ ಬಂದ ನಂತರವೂ ಅವರು ಹಾಗೆ ನಿರಂತರವಾಗಿ ರಜೆ ಇದ್ದಾಗಲೆಲ್ಲ ಇಲ್ಲಿಗೆ ಬಂದು ಕೈಲಾದಷ್ಟು ಗುರು ಸೇವೆ ಮಾಡಿ ತೆರಳುತ್ತಿದ್ದರು. 

ಒಮ್ಮೆ ಹೀಗೆಯೇ ಬಂದು ಹೊರಡುವಾಗ ಕರೆದ ಗುರುನಾಥರು "ಬಸ್ಸಿನಲ್ಲಿ ಮುಂದೆ ಒಂದೇ ಸೀಟು ಇರುತ್ತೆ ಅಲ್ಲೇ ಕೂತ್ಕೋ" ಎಂದು ನುಡಿದು ಆಶೀರ್ವದಿಸಿ ಕಳಿಸಿಕೊಟ್ಟರು. ಆಗ ತಡರಾತ್ರಿಯಾಗಿತ್ತು. ಬಸ್ಸನ್ನೇರಿದ ಅವರಿಗೆ ಗುರುನಾಥರು ಹೇಳಿದ ಮಾತಿಗೆ ವ್ಯತಿರಿಕ್ತವಾಗಿ ಹಿಂದುಗಡೆಯ ಕೊನೆಯ ಸೀಟು ಸಿಕ್ಕಿತು. 

"ಇದೇಕೆ ಹೀಗೆ" ಎಂದು ಯೋಚಿಸುತ್ತಾ ಅವರು ಅದೇ ಸೀಟಿನಲ್ಲಿ ಕುಳಿತುಕೊಂಡರು. ಬಸ್ಸು ಮುಂದಿನ ನಿಲ್ದಾಣದಲ್ಲಿ ನಿಂತಾಗ ಗುರುನಾಥರು ಹೇಳಿದ್ದಂತೆಯೇ ಮುಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಇಳಿದು ಹೋದರು. ಕೂಡಲೇ ಇವರು ಗುರುವನ್ನು ಸ್ಮರಿಸುತ್ತಾ ಮುಂದುಗಡೆ ಬಂದು ಕುಳಿತರು. ಆ ನಂತರ ಇವರು ಮೊದಲು ಕುಳಿತಿದ್ದ ಜಾಗದಲ್ಲಿ ಬೇರೊಬ್ಬರು ಆಸೀನರಾದರು. ಬಸ್ಸು ಸಾಗುತ್ತಿರುವಾಗ ಹಿಂದಿನಿಂದ ಬಂದ  ವಾಹನವೊಂದುಇವರು ಹೋಗುತ್ತಿದ್ದ ಬಸ್ಸಿಗೆ ಗುದ್ದಿತು. ಆ ಅಪಘಾತದಲ್ಲಿ ಇವರು ಮೊದಲು ಕುಳಿತಿದ್ದ ಜಾಗದಲ್ಲಿ ಆ ನಂತರ ಬಂದು ಕುಳಿತ ವ್ಯಕ್ತಿ ಮೃತಪಟ್ಟನು. 

ಇದನ್ನು ಕಣ್ಣಾರೆ ಕಂಡ ಅವರು ಗುರು ಕರುಣೆಯನ್ನು ನೆನೆದು ಆ ಸದ್ಗುರುವಿಗೆ ಮನಸಾರೆ ವಂದಿಸಿದರು. ತೀರಾ ಇತ್ತೀಚೆಗೆ ನನಗೆ ಸಿಕ್ಕ ಇವರು ಈ ಘಟನೆಯನ್ನು ವಿವರಿಸುತ್ತಾ ಭಾವಪರವಶರಾದರು. 

ಅಪಾರ ಗುರುಭಕ್ತಿ, ಶ್ರದ್ಧೆ ಹಾಗೂ ಇನ್ನೊಂದು ವಿಚಾರಕ್ಕೆ ಮೂಗು ತೋರಿಸದ ಭಾವ ಪರಿಶುದ್ಧತೆ - ಇದು ನಾನು ಈ ವ್ಯಕ್ತಿಯಿಂದ ಕಲಿತುಕೊಂಡ ಗುಣಗಳು....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Thursday, December 29, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 86


    ಗ್ರಂಥ ರಚನೆ - ಚರಣದಾಸ 


ಸಮಾಜ ಸೇವೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ಒಂದು ಕಾಲೇಜಿನ ಉಪನ್ಯಾಸಕರೊಬ್ಬರು ಗುರುದರ್ಶನಕ್ಕಾಗಿ ಬಂದಿದ್ದರು. ಅವರು ಒಂದು ಸಂಘಟನೆಯಲ್ಲಿ ತನ್ನನ್ನು ಸಕ್ರೀಯವಾಗಿ  ಗುರುತಿಸಿಕೊಂಡಿದ್ದರು. ಅವರು ಗುರುನಾಥರೊಂದಿಗೆ ಮಾತನಾಡುತ್ತಾ "ಗುರುಗಳೇ ತಾವು ಗೋಹತ್ಯೆ ನಿಷೇಧಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು" ಅಂದ್ರು. 

ಆಗ ಗುರುನಾಥರು "ಸ್ವಾಮಿ, ನೀವು ಮಾಡುತ್ತಿರುವ ಕಾರ್ಯದ ಉದ್ದೇಶ ನಿಜಕ್ಕೂ ಒಳ್ಳೆಯದೇ. ಆದರೆ ಒಂದೊಮ್ಮೆ ನಿಷೇಧಿಸಿದರೆ ಒಂದು ಹೊತ್ತಿನ ಊಟಕ್ಕೂ ಗತಿಯಿರದ ಕೆಲವರು ಅದರಿಂದಲೇ ಜೀವನ ಕಂಡುಕೊಂಡಿದ್ದಾರೆ. ಅವರ ಬದುಕಿನ ಕತೆಯನ್ನು ಯೋಚಿಸಿದ್ದೀರಾ? ಹೀ ಮಾಡಬೇಡಿ ಅನ್ನೋ ಮೊದಲು ಅವರು ಏನು ಮಾಡಬೇಕು ಅಂತ ತಿಳಿಸಿದ್ರೆ ಒಳ್ಳೆಯದಲ್ಲವೇ?". 

"ಒಂದು ಕೆಲಸ ಮಾಡಿ. ತಾವು ಬ್ಯಾಂಕ್ ನಲ್ಲಿ 16 ಲಕ್ಷ ಇಟ್ಟಿದ್ದೀರಲ್ಲ... ಅದನ್ನ ತೆಗೆದು ಆ ಬಡ ಜನರಿಗೆಲ್ಲ ಹಂಚಿ. ಜೀವನಕ್ಕೊಂದು ದಾರಿ ಮಾಡಿ ಅದು ಸಮಾಜ ಸೇವೆ" ಅಂದ್ರು. ಇದನ್ನು ಕೇಳಿದ ಮೇಲೆ ಆ ವ್ಯಕ್ತಿ ನಿರುತ್ತರರಾದರು. 

ಅದಕ್ಕೆ ಗುರುನಾಥರು ಆಗಾಗ್ಗೆ ಹೀಗೆ ಹೇಳುತ್ತಿದ್ದರು. ಬ್ಯಾಂಕ್ ನಲ್ಲಿ ಲಕ್ಷ-ಲಕ್ಷ ಇಟ್ಟೊರೆಲ್ಲಾ ನೆಮ್ಮದಿಯಾಗಿ ಇರುತ್ತಾರೆ ಅನ್ನೋದು ಸುಳ್ಳು. ನೆಮ್ಮದಿ ಅನ್ನೋದು ಒಳಗಿನಿಂದ ತಿಳಿದುಕೊಳ್ಳಬೇಕಾದ ವಸ್ತು ವಿಚಾರವೇ ವಿನಃ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ಎಷ್ಟು ಹಣ ಮಾಡಿದ್ರೂ, ತಿನ್ನೋದು ಮೂರು ಮುಷ್ಠಿ ಅನ್ನವೇ ವಿನಃ ಹಣ ತಿನ್ನೋಕೆ ಆಗಲ್ಲ. 

ಒಮ್ಮೆ ಒಬ್ಬ ಜೀವವಿಮಾ ನಿಗಮದ ಸದಸ್ಯರು ಗುರುನಾಥರನ್ನು ಸಂದರ್ಶಿಸಿ ಜೀವವಿಮೆ ಮಾಡಿಸಿ ಅಂದ್ರು. 

ಅದಕ್ಕೆ ಗುರುನಾಥರು "ನನ್ನ ಜೀವಕ್ಕೆ ಶ್ಯೂರಿಟಿ ಇಲ್ಲ ಅಂದ ಮೇಲೆ ಇನ್ಸೂರೆನ್ಸ್ ಹೆಂಗಪ್ಪಾ ಮಾಡಲಿ? ಆ ಈಶ್ವರ ಇದಕ್ಕೆ (ತನ್ನ ದೇಹವನ್ನು ತೋರಿಸುತ್ತಾ) ಯಾವಾಗ ಚೀಟಿ ಕೊಡುತ್ತಾನೋ ಗೊತ್ತಿಲ್ಲ. ಆಪತ್ಕಾಲಕ್ಕೆ ಆಗ್ಲಿ ಅಂತ ಹಣ ಇಟ್ರೆ ನಾವಾಗಿಯೇ ಆಪತ್ತನ್ನು ರತ್ನಗಂಬಳಿ ಹಾಕಿ ಆಹ್ವಾನಿಸಿದಂತೆ ಅಲ್ಲವೇ?" 

ಅದಕ್ಕೆ "ಠೇವಣಿ ಇಡೋದಾದ್ರೆ ಭಗವಂತನ ಬ್ಯಾಂಕ್ ನಲ್ಲಿ ಅವನ ನಾಮ ಸ್ಮರಣೆ ಹಾಗೂ ನಿಮ್ಮ ಉತ್ತಮ ನಡವಳಿಕೆ ಎಂಬ ಹಣವನ್ನು ಠೇವಣಿ ಮಾಡಿ. ಆಗ ಆ ಸದ್ಗುರು ನಿಮ್ಮ ಜೀವನಕ್ಕೆ ಎಲ್ಲೂ ಆಪತ್ತು ಬರದಂತೆ ನಿಮ್ಮನ್ನು ಕರೆದೊಯ್ಯುವನು" ಅಂದರು. 

ಒಮ್ಮೆ ಚರಣದಾಸನಾದ ನಾನು ಜನರ ಮಧ್ಯೆ ಸುತ್ತಾಡುತ್ತಿದ್ದ ಆ ನಾಲ್ಕು ನಾಯಿಗಳನ್ನು ಓಡಿಸಲು ಹೋದೆ. ಆಗ ನನ್ನನ್ನು ತಡೆದ ಗುರುನಾಥರು "ಯಾಕಯ್ಯಾ ಓಡಿಸ್ತೀಯಾ?. ಈ ಮನೆ ನಂದು ಅಲ್ಲ ನಿಂದು ಅಲ್ಲ. ನಾವಾದ್ರೆ ಬೇಜಾರಾಯಿತು ಅಂತ ಬೇರೆ ಕಡೆಗೆ ಹೋಗ್ತೀವಿ. ಇನ್ನೊಬ್ಬರ ವಿಚಾರ ಮಾತಾಡುತ್ತೀವಿ, ಚಾಡಿ ಹೇಳ್ತೀವಿ. ಆದರೆ, ಈ ನಾಯಿಗಳು ಹಾಗೆ ಮಾಡಲ್ವಲ್ಲಾ? ನಮಗಿಂತ ಹೆಚ್ಚಾಗಿ ಈ ಮನೆಯಲ್ಲಿ ಅವೇ ಇರುತ್ತವೆ. ಅಂದ ಮೇಲೆ ಈ ಮನೆ ಅವುಗಳದ್ದೇ ಅಲ್ಲವೇ?" ಅಂದ್ರು. ಅವರ ಈ ಸಮಾನತೆಯ ಮಾತು ನನ್ನ ಜೀವನಕ್ಕೂ ಒಂದು ಪಾಠ ಕಲಿಸಿತ್ತು. 

ಇನ್ನೂ ಮುಂದುವರೆದ ಗುರುನಾಥರು "ನಾಯಿಗೆ ಜೊಲ್ಲಿನಲ್ಲಿ ವಿಷ, ಹಾವಿಗೆ ಹಲ್ಲಲ್ಲಿ ವಿಷ. ಆದರೆ, ಮನುಷ್ಯನಿಗೆ ಮೈಯೆಲ್ಲ ವಿಷ, ಅಲ್ಲವೇ? ಅವನ ಅಸೂಯೆ, ದ್ವೇಷ, ದುರಹಂಕಾರ, ಇಡೀ ಸಮಾಜದ ಆರೋಗ್ಯವನ್ನೇ ಹಾಲು ಮಾಡುತ್ತಿದೆ. ಒಂದು ಕೆಲಸ ಮಾಡು. ಕೆಲವು ದಿನ ಸ್ನಾನ ಮಾಡುವುದನ್ನು ನಿಲ್ಲಿಸು. ಆಗ ದೇಹ ಎಷ್ಟು ಸುಂದರ ಅಂತ ತಿಳಿಯುತ್ತೆ". 

"ಆದ್ರೆ ಅದೇ ನಾಯಿ, ಜಾನುವಾರುಗಳು ಸ್ನಾನಾನೇ ಮಾಡಲ್ಲ. ಆದರೆ ಹಸುವಿನ ಗಂಜಲ, ಸಗಣಿ ಎಲ್ಲವೂ ಉಪಯುಕ್ತ. ಮನುಷ್ಯನ ಯಾವ ಭಾಗ ಉಪಯುಕ್ತವಾದುದು ತಿಳಿಸ್ತೀರಾ? ಆದ್ರೆ ಸಾಧನೆಗೆ ಮನುಷ್ಯ ಜನ್ಮ ಬಿಟ್ಟರೆ ಇನ್ನೊಂದು ಶ್ರೇಷ್ಠ ಜನ್ಮವಿಲ್ಲ ತಿಳೀತೇ?" ಅಂತಿದ್ರು.......,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Wednesday, December 28, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 85


    ಗ್ರಂಥ ರಚನೆ - ಚರಣದಾಸ 


ಹೀಗಿದ್ದರು ನಮ್ಮ ಗುರುನಾಥರು 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೊಮ್ಮೆ ಮಗುವಿನಂತೆಯೇ ಮುಗ್ಧವಾಗಿ, ತಾಯಿಯಂತೆ ಕರುಣಾಳುವಾಗಿ ಇದ್ದಕ್ಕಿದಂತೆಯೇ ಕುಡಿದ ಅಮಲಿನ ವ್ಯಕ್ತಿಯಂತೆ, ಮತ್ತೊಮ್ಮೆ ಜ್ಞಾನಿಯಂತೆ ಕಂಗೊಳಿಸುತ್ತಿದ್ದ ಗುರುನಾಥರು ಭಕ್ತರ ಪಾಲಿನ ಆಶಾಕಿರಣವಾಗಿದ್ದರು. ಕಷ್ಟಕಾರ್ಪಣ್ಯದಿಂದ ಕೆಂಗೆಟ್ಟು ಬಂದ ಭಕ್ತರ ಕೂಗಿಗೆ ದನಿಯಾಗಿ ಎಲ್ಲಿದ್ದರೂ ಪ್ರತ್ಯಕ್ಷವಾಗಿ ಅವರ ಈತಿಯನ್ನು  ಪರಿಹರಿಸಿ, ಪರೀಕ್ಷಿಸಲು ಬರುವವರ ಕಣ್ಣು ತಪ್ಪಿಸಿ ಹೋಗುತ್ತಿದ್ದ ಗುರುನಾಥರು ಗಾಳಿಯ ತರಹ. 

"ಇದೋ ಊರಿನಲಿಲ್ಲ, ಇಂದು ಬರುವರೋ ತಿಳಿಯದು" ಎಂದು ಉತ್ತರಿಸಿ ಮುಗಿಸುವ ಮುನ್ನ ಎಲ್ಲಿಂದಲೋ ಬಂದಿಳಿದಿರುತ್ತಿದ್ದರು. 

ಹಾಗೆಯೇ ಜನರೆಲ್ಲರೂ ಮುತ್ತಿಕೊಂಡಾಗ ಯಾರಿಗೂ ಕಾಣದಂತೆ ಇನ್ನೆಲ್ಲೋ ಹೋಗಿ ಬಿಡುತ್ತಿದ್ದರು. ಸದಾ ಮನೆಯ ಮುಂದೆ ಹಸುಗಳು, ಕಟ್ಟೆಗಳು ತನ್ನ ಸುತ್ತ ನಾಲ್ಕು ನಾಯಿಗಳು, ಇವು ಅವರ ಜೀವನದುದ್ದಕ್ಕೂ ಭೂಷಣದಂತೆ ಇರುತ್ತಿದ್ದವು. 

ಸದಾ ಒಂದು ದೊಡ್ಡ ಟವೆಲ್ ಅಥವಾ ಒಂದು ಮಾಸಿದ ಪಂಚೆ ಹೆಗಲ ಮೇಲೆ ಒಂದು ಟವೆಲ್, ಕಾಲಿಗೊಂದು ಜೊತೆ ಹವಾಯಿ ಚಪ್ಪಲಿ; ಕೈಯಲ್ಲೊಂದು ಹೂವು, ಹಣ್ಣು, ತಿಂಡಿ ತುಂಬಿದ ಚೀಲ ಇವು ಅವರ ನಿತ್ಯ ಬಳಕೆಯ ವಸ್ತುಗಳಾಗಿದ್ದವು. 

ಸಂಕಲ್ಪ ಮಾಡಿದರೆ ಕ್ಷಣಾರ್ಧದಲ್ಲಿ ಏನನ್ನು ಬೇಕಾದರೂ ಪಡೆವ ತಾಕತ್ತಿದ್ದರೂ "ವೇದಾಂತೇ ಚ ಪ್ರತಿಷ್ಠಿತಃ" ಎಂಬಂತೆ ಎಲ್ಲವನ್ನು ಜಾಡಿಸಿ ನಿಂತಿದ್ದ ಗುರುನಾಥರು ಉಂಡು ಉಪವಾಸಿ, ಬಳಸೀ ಬ್ರಹ್ಮಚಾರಿ ಎಂಬಂತಹ ಸ್ಥಿತಿಯಲ್ಲಿ ಇರುತ್ತಿದ್ದರು. 

ಸದಾ ಸಂಸಾರದಲ್ಲಿ ಮುಳುಗಿ ಮಕ್ಕಳು, ಮೊಮ್ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪ ಇತ್ಯಾದಿಯಾಗಿ ಎಲ್ಲ ಸಂಬಂಧ ಇಟ್ಟುಕೊಂಡಿದ್ದರೂ ಅದು ಕರ್ತವ್ಯ ನಿರತ ಸಂಬಂಧವಾಗಿತ್ತೇ ವಿನಃ ಮೋಹ ಸಂಬಂಧವಾಗಿರಲಿಲ್ಲ. 

ಕ್ಷಮೆ ಅವರಲ್ಲಿದ್ದ ದೊಡ್ಡ ಗುಣ. ತನಗೆಷ್ಟೇ ಅವಮಾನ ಮಾಡಿದರೂ ತಾಯಿ ಮಕ್ಕಳನ್ನು ಕ್ಷಮಿಸುವಂತೆ ಕ್ಷಮಿಸಿ ಮುನ್ನಡೆಯುತ್ತಿದ್ದರು. ತಪ್ಪನ್ನೆಲ್ಲ ಒಪ್ಪಿ ಸರಿ ದಾರಿಯಲ್ಲಿ ನಡೆಯಲಿಚ್ಚಿಸಿ ಬಂದ ಭಕ್ತರಿಗೆ ಏನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದ್ದ ಗುರುನಾಥರು ಪರೀಕ್ಷಿಸಲು ಬಂದ ದುರಹಂಕಾರಿಗಳಿಗೆ ಜನ್ಮ ಜಾಲಾಡುತ್ತಿದ್ದ ರೀತಿ ನಿಜಕ್ಕೂ ರೋಚಕ. ಆದರೆ ಅದರ ಉದ್ದೇಶ ಅವರಿಗೆ ತಪ್ಪಿನ ಅರಿವು ಮೂಡಿಸುವುದಾಗಿತ್ತೇ ವಿನಃ ಹಿಂಸಿಸುವುದಾಗಿರಲಿಲ್ಲ. 

ಊರಿನಲ್ಲಿದ್ದಾಗ ಪ್ರತಿದಿನ ಬೆಳಿಗ್ಗೆ ಊರೊಳಗೆ ಹೋಗಿ ಈಶ್ವರ ದರ್ಶನ ಮಾಡಿ ಅದರ ಹಿಂದಿದ್ದ ಮಜ್ಜಿಗೆ ಹಳ್ಳಿ ಮಠದ ಯತೀಶ್ವರರ ಸಮಾಧಿಯ ಸಮೀಪವೋ ಅಥವಾ ಅರಳೀ ಮರದ ಕೆಳಗೆ ಕುಳಿತಿರುತ್ತಿದ್ದ ಅವರಿಗೆ ಆ ಜಾಗವೇ ದರ್ಬಾರ್ ಹಾಲ್ ಕೂಡಾ ಆಗಿರುತ್ತಿತ್ತು. ಎದುರಿದ್ದ ಈಶ್ವರನಿಗೆ ಎಷ್ಟು ಹಾಲು ಅಭಿಷೇಕ ಮಾಡಿದರೂ, ಎಷ್ಟು ಹೂವು ಹಾಕಿದರೂ ಗುರುನಾಥರಿಗೆ ತೃಪ್ತಿಯಾಗುತ್ತಿರಲಿಲ್ಲ. ಬಂದವರ ಹತ್ತಿರವೆಲ್ಲ ಈಶ್ವರನಿಗೆ ಹಾಲು, ನೀರಿನ ಅಭಿಷೇಕ ಮಾಡಿಸುತ್ತಿದ್ದರು. 

ದಾರಿಯಲ್ಲಿ ಎದುರು ಸಿಗುವ ಪ್ರತಿಯೊಬ್ಬರೂ ಗುರುನಾಥರನ್ನು "ನರವೇಷಧಾರಿ ಹರ" ನೆಂದೇ ನಂಬಿ ನಮಸ್ಕರಿಸಿ ಹೋಗುತ್ತಿದ್ದರೆ, ಗುರುನಾಥರು ಮಾತ್ರ ಎಲ್ಲರನ್ನು "ಅಣ್ಣ, ಅಯ್ಯಾ, ಅಮ್ಮ" ಎಂದು ಸಂಬೋಧಿಸುತ್ತಾ ಕೈಯಲ್ಲಿದ್ದ ಹಣ್ಣು, ಬಟ್ಟೆ ಎಲ್ಲವನ್ನು ನೀಡಿ ನಮಸ್ಕರಿಸಿ "ನಂಗೆ ಯಾಕಪ್ಪ ನಮಸ್ಕರಿಸುತ್ತೀರಾ? ಮನೆಯಲ್ಲಿರುವ ಅಪ್ಪ-ಅಮ್ಮನ ಚಂದಾಗಿ ನೋಡಿಕೊಳ್ಳಿ. ಒಡಹುಟ್ಟಿದವರಿಗೆ ಮೋಸ ಮಾಡಬೇಡಿ. ಗುರು ಹಿರಿಯರನ್ನು ಗೌರವಿಸಿ. ಯಾರಲೂ ಎರಡು ಎಣಿಸದಂತೆ ಬದುಕಿ. ಸದಾ ಕರ್ತವ್ಯ ನಿರತರಾಗಿರಿ" ಎಂದು ಮುಂತಾಗಿ ಅವರವರಿಗೆ ಬೇಕಾದ ತಿಳವಳಿಕೆಯನ್ನು ಹೇಳುತ್ತಾ, "ಅದುವೇ ಗುರು ಕಂಡ್ರಪ್ಪಾ" ಅಂತ ಆಧ್ಯಾತ್ಮವನ್ನು ಹೇಳುತ್ತಿದ್ದ ರೀತಿ ನಿಜಕ್ಕೂ ವಿಶಿಷ್ಟವಾಗಿರುತ್ತಿತ್ತು. 

ಸಾಮಾನ್ಯವಾಗಿ ಗುರುನಾಥರು ಸದಾ ಕರ್ತವ್ಯ ನಿರತರಾಗಿರುತ್ತಿದ್ದು ಒಂದು ಕ್ಷಣವನ್ನು ಹಾಲು ಮಾಡುತ್ತಿರಲಿಲ್ಲ. ಹಾಗೂ ಜೊತೆಗಿದ್ದ ನಮ್ಮಲ್ಲೂ ಅದೇ ಗುಣವಿರಬೇಕೆಂದು ಹೇಳುತ್ತಿದ್ದರು. ಆದರೆ ಯಾವುದೇ ಒಂದು ಕೆಲಸವನ್ನು "ಯಾರಿಗಾಗಿಯೂ, ಯಾರ ಹೆದರಿಕೆಗಾಗಿಯೂ ಮಾಡಬೇಡ. ನೀನೆ ಒಪ್ಪಿ ಮನಃ ಪೂರ್ವಕವಾಗಿ ಮಾಡು. ಅದುವೇ ನಿಜವಾದ ಪೂಜೆ. ಎಂದೂ ಯಾರನ್ನೂ ನೋಯಿಸಬೇಡ. ನೀನು ನೋವು ಮಾಡಿಕೊಳ್ಳಬೇಡ. ಅದೇ ನಿಜವಾದ ಪೂಜೆ, ಮತ್ಯಾವ ಪೂಜೆಯೂ ಬೇಡ" ಅಂತಿದ್ರು. 

ಈ ದೇಹ ತಂದೆ-ತಾಯಿಯಿಂದ ಬಂದಿದ್ದು. ನಾವು ಅವರು ನೀಡಿದ ಬಾಡಿಗೆ ಮನೆಯಲ್ಲಿ (ದೇಹ) ಇದ್ದೀವಿ. ಈ ದೇಹವೆಂಬ ಬಾಡಿಗೆ ಮನೆಯಲ್ಲಿರುವ "ಆ ನಾನು ಯಾರು?" ಅಂತ ಹುಡುಕಬೇಕು. ಈ ಬಾಡಿಗೆ ಮನೇನ ಹಾಳಾಗದಂತೆ ಸ್ವಚ್ಛವಾಗಿ ಇಟ್ಟುಕೊಂಡು, ನಮ್ಮ ಒಳ್ಳೆಯತನ, ಮಾತು, ನಡವಳಿಕೆಗಳಿಂದ ಬೆಲೆಯಾಗಿ ಬಾಳಿ ಮತ್ತೆ ತಂದೆ-ತಾಯಿಗಳಿಗೆ ಬಿಟ್ಟುಕೊಡಬೇಕು". 

"ದುಶ್ಚಟಗಳ ಆಕರ್ಷಣೆ ತಪ್ಪಲ್ಲ. ಆದರೆ, ಅದೇನೆಂದು ತಿಳಿದ ಬಳಿಕ ಬಿಟ್ಟು ಬಿಡಿ. ಅದಕ್ಕೆ ದಾಸರಾಗಿ ಜೀವನ ಹಾಲು ಮಾಡಿಕೊಳ್ಳಬಾರದು ಅಲ್ಲವೇ?" ಎಂದು ನಸುನಗುತ್ತಾ ಕೇಳುತ್ತಿದ್ದ ಗುರುನಾಥರ ಮಾತು ಎಲ್ಲ ಜನಾಂಗದವರಿಗೂ ತಿಳವಳಿಕೆ ಆಗಿರುತ್ತಿತ್ತು. 

"ಇನ್ನೊಂದು ವಿಚಾರಕ್ಕೆ ಹೋಗುವುದೇ ಮೈಲಿಗೆ. ಯಾವ ವಿಚಾರಕ್ಕೂ ಹೋಗದೇ ತನ್ನಲ್ಲಿ ತಾನು ನೆಲೆ ನಿಲ್ಲುವುದೇ ನಿಜವಾದ ಮಡಿ" ಎನ್ನುತ್ತಿದ್ದ "ಅಣ್ಣ" ನ (ಆ ಸೀಮೆಯಲ್ಲಿ ತಂದೆಯನ್ನು ಅಣ್ಣಾ ಎಂದು ಕರೆಯುವ ಪದ್ಧತಿಯಿದ್ದು, "ನಾನೇ ಅವನಿಗೆ ತಂದೆ ಸ್ಥಾನದಲ್ಲಿದ್ದೀನಿ. ಅಂತ ಆಗಾಗ್ಗೆ ನನ್ನ ಬಗ್ಗೆ ಹೇಳುತ್ತಿದ್ದರು. ಚರಣದಾಸನಾದ ನಾನು ಕೂಡಾ ಅವರನ್ನು ಅಣ್ಣಾ ಎಂದೇ ಕರೆಯುತ್ತಿದ್ದೆ). ಮಾತು, ಮಡಿ, ಮೈಲಿಗೆಗಳ ಮೌಢ್ಯಾರ್ಥವನ್ನು  ಬಯಲಿಗೆಳೆಯುವಂತಿತ್ತು. 

"ಎಂತದಯ್ಯಾ ಸ್ನಾನ? ಈ ಬಿಳಿ ಬಟ್ಟೆ? ಈ ಸ್ನಾನ ವಸ್ತ್ರಗಳು ನಿನ್ನೊಳಗಿನ ಮತ್ಸರ-ಮೋಸ, ಕೊಳಕುತನವನ್ನು ಶುದ್ಧಗೊಳಿಸ್ತಾವ? ಹಾಗಾದ್ರೆ ಇವನ್ನೆಲ್ಲಾ ಮಾಡಿ. ಇಲ್ಲಾಂದ್ರೆ ಆಡಂಬರಕ್ಕಾಗಿ ಯಾರನ್ನೋ ಮೆಚ್ಚಿಸೋಕೆ ಮಾಡಬೇಡಿ" ಅಂತಿದ್ದ ಮಾತುಗಳು ಶುದ್ಧ-ಅಶುದ್ಧದ ನಿಜಾರ್ಥವನ್ನು ತಿಳಿಸುತ್ತಿತ್ತು. 

"ಯಾವುದಯ್ಯಾ ಜಾತಿ? ನಂಗೆಂತ ಜಾತಿ? ನಿನ್ನ ನಡವಳಿಕೆನೇ ಜಾತಿ" ಎನ್ನುವಾಗ ಅವರ ಮನದಲ್ಲಿ ಎಲ್ಲರೂ ಬದಲಾಗಿ ಸಮಾನವಾಗಿ ಬಾಳಿ ಎಂಬ ಕಾಳಜಿ ಎದ್ದು ಕಾಣುತ್ತಿತ್ತು. ನಿನ್ನ ತಂದೆ-ತಾಯಿ ಯಾರೂಂತ ತಿಳಿಯುವುದು ಬಹಳ ಸುಲಭನಪ್ಪಾ, ನಿನ್ನ ಮಾತು, ನಡವಳಿಕೆ, ಆಚಾರ-ವಿಚಾರಗಳೇ ನಿಮ್ಮ ತಂದೆ-ತಾಯಿ ತಿಳೀತಾ?. ಅದಕ್ಕೆ ಈ ಜನ್ಮಕ್ಕೆ ಕಾರಣರಾದ ತಂದೆ-ತಾಯಿಗಳ ಗೌರವಕ್ಕೆ ಧಕ್ಕೆಯಾಗದಂತೆ, ನೋವಾಗದಂತೆ ಬಾಳಿ" ಎಂಬ ಅವರ ಮಾತು ಸಾರ್ವಕಾಲಿಕ ಸತ್ಯವನ್ನು ಸಾರಿ ಸಾರಿ ಹೇಳುತ್ತದೆ. 

"ಅಪ್ಪ ಬಿಟ್ಟು ಹೋದ ಆಸ್ತಿಯೆಂದರೆ ಅಡಿಕೆ ಮರ, ಕಾಫಿ ಗಿಡ ಮಾತ್ರವಲ್ಲಪ್ಪಾ... ನಿನ್ನ ಒಡ ಹುಟ್ಟಿದವರು, ನಿನ್ನ ತಾಯಿ, ಬಂಧುಗಳು ನಿಜವಾದ ಆಸ್ತಿಯಪ್ಪಾ. ಎಂದೂ ಇವರು ಯಾರಿಗೂ ದ್ರೋಹ ಮಾಡಬೇಡಿ. ಮನೆ  ಬಾಗಿಲಿಗೆ ಬಂದ ಯಾವ ಜೀವಿಗಳಿಗೂ ಅವಮಾನ ಮಾಡಿ ಬರಿಗೈಯಲ್ಲಿ ಕಲಿಸಬೇಡಿ. ಅದುವೇ ನಿಜವಾದ ಹೋಮ-ಹವನ" ಎನ್ನುತ್ತಾ ಅಲ್ಲಿದ್ದ ನಮ್ಮೆಲ್ಲರ ಮೌಢ್ಯಗಳನ್ನು ಮಟ್ಟ ಹಾಕಿಬಿಡುತ್ತಿದ್ದರು. 

ನಾವುಗಳು ಯಾರಾದರೂ ಏನು ತಪ್ಪು ಮಾಡಿದರೂ ಎಂದೂ ಬಯ್ಯುತ್ತಿರಲಿಲ್ಲ. ಬದಲಿಗೆ ಮೌನವಾಗಿಬಿಡುತ್ತಿದ್ದರು. ಒಮ್ಮೆ ಯಾರೋ ಒಬ್ಬರಿಗೆ ಬಹಳ ದಿನಗಳಿಂದ ಹಣ್ಣು, ಆಹಾರ ಕಲಿಸುತ್ತಿದ್ದರು. ಆದರೆ, ಆ ವ್ಯಕ್ತಿಯು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದರು. 

ಅದನ್ನು ತಿಳಿದ ನಾನು ಉದ್ವೇಗದಿಂದ, "ಅಲ್ಲಾ ಸಾರ್, ನೀವು ಅಷ್ಟೆಲ್ಲ ಮಾಡಿದ್ರು ಆತ ಬದಲಾಗಲಿಲ್ಲ ಅಂದ ಮೇಲೆ ನೀವು ಮಾಡಿದ ಕೆಲಸಕ್ಕೆ ಬೆಲೆ ಏನು ಬಂತು? ಏನು ಉದ್ದೇಶ ಸಾಧನೆಯಾಯಿತು" ಎಂದು ಅಸಹನೆಯಿಂದ ಕೇಳಿದೆ. 

ಅದಕ್ಕವರು "ಅಯ್ಯಾ ಯಾರೋ ತಪ್ಪು ಮಾಡುತ್ತಾರೆ ಅಂತ ನಾನು ನನ್ನ ಕರ್ತವ್ಯ ಬಿಡೋಕಾಗಲ್ಲ. ನಾನು ಸದಾ ನನ್ನ ದಾರೀಲೇ ಇರುತ್ತೇನೆ. ಬಲವಂತದಿಂದ ನಡೆಯುವುದು ಬದಲಾವಣೆಯಾಗೋಲ್ಲ, ಎಂದೋ ಒಂದು ದಿನ ದಿನ ಆತ ಹಿಂತಿರುಗಿ ನೋಡಿ, ಹೋ ನಾ ತಪ್ಪಿ ನಡೆದೆ ಎಂದು ತಿಳಿದು, ಸರಿ ದಾರಿಗೆ ಬರ್ತಾನಲ್ಲಾ ಅದು ನಿಜವಾದ ಬದಲಾವಣೆ". ಹೀಗೆ ಪ್ರತಿಯೊಬ್ಬರೂ ನಡೆದು ಪಥ ನಿರ್ಮಾಣ ಮಾಡಬೇಕು. ಅದುವೇ ಪರಿವರ್ತನೆ" ಎಂದರು. 

ವಿಪರೀತ ಅಲಂಕಾರ, ವೇಷ-ಭೂಷಣವನ್ನು ಗುರುನಾಥರು ಎಂದೂ ಒಪ್ಪುತ್ತಿರಲಿಲ್ಲ. ಒಮ್ಮೆ ಒಬ್ಬ ವ್ಯಕ್ತಿ ಕೈಗೆ ವಾಚು, ಕುತ್ತಿಗೆಗೆ ಚಿನ್ನದ ಸರ, ಬೆರಳಿಗೆ ಉಂಗುರ ಹಾಕಿಕೊಂಡು ತನಗೆ ಸಮಸ್ಯೆ ಉಂಟು ಎಂದು ಗುರುನಾಥರಿಗೆ ನಮಸ್ಕರಿಸಿ ನಿಂತ. 

ಆಗ ಗುರುನಾಥರು "ನಿಂಗೆಂತದಯ್ಯಾ ಸಮಸ್ಯೆ? ಪ್ಯಾಂಟ್ ಹಾಕಿದ್ಯಾ , ಸೂಟ್ ಇದೆ, ಉಂಗುರ, ಚೈನ್, ವಾಚು ಎಲ್ಲ ಉಂಟು. ಸಮಸ್ಯೆ ಹೆಂಗಯ್ಯಾ ಬರುತ್ತೆ? ಸಮಸ್ಯೆ ಇದ್ದಿದ್ರೆ ನನ್ನ ಹಂಗೆ ಇರುತ್ತಿದ್ದೆ ಅಲ್ಲವೇ?" ಎಂದು ಗದರಿಸಿದರು. 

"ನೀವಾಡುವ ಮಾತು, ಕೆಲಸಗಳೇ ನಿಮಗೆ ಆಭರಣವಾಗಬೇಕಪ್ಪ. ಬಾಹ್ಯಾಡಂಬರದಿಂದ ಯಾರಿಗೂ ಪ್ರಯೋಜನವಿಲ್ಲ. ನಿನ್ನ ಹತ್ತಿರ ಎಂತಹ ವಸ್ತುಗಳಿವೆ ಎಂದು ನಾಲ್ಕು ಜನಕ್ಕೆ ತಿಳಿಯುತ್ತೆ. ನಿನ್ನ ಆರ್ಥಿಕ ಸ್ಥಿತಿ ತಿಳಿಯುತ್ತೆ ವಿನಃ ನಿನ್ನೊಳಗಿನ ನಿನ್ನನ್ನು ತಿಳಿಯೋಕೆ ಈ ಯಾವ ಅಲಂಕಾರಗಳೂ ಸಹಕರಿಸೋಲ್ಲ" ಎಂದರು. 

ಸದಾ ಅನುಕೂಲವಾಗಿ, ವ್ಯವಸ್ಥಿತವಾಗಿ, ನೆಮ್ಮದಿಯಾಗಿ ಬದುಕಬೇಕಾದದ್ದು ನಮ್ಮ ಉದ್ದೇಶವಾಗಬೇಕೇ ವಿನಃ ನಮ್ಮ ಸಿರಿವಂತಿಕೆಯ ಪ್ರದರ್ಶನವಾಗಬಾರದು. ಅದರಿಂದ ನಮ್ಮ ಮೇಲೆ ಜನರ ವಕ್ರ ದೃಷ್ಠಿ ಬಿದ್ದು ಅಸೂಯೆ, ಮತ್ಸರಕ್ಕೆ ಕಾರಣವಾಗುತ್ತೆ ಅಲ್ಲವೇ?..... ಮನುಷ್ಯನ ಕಣ್ಣಿಗೆ ಮರವೇ ಸಿಡಿದು ಹೋಗುತ್ತದೆ ಅಪ್ಪಾ, ಅದಕ್ಕೆ ಎರಡು ಕಣ್ಣಾಗುವಂತೆ ಬಾಳಬೇಡಿ. ಬದಲಿಗೆ ಸಮಾಜದ ಕಣ್ಣಾಗಿ ಬಾಳಿ" ಎನ್ನುತ್ತಿದ್ದರು. 

"ಯಾರನ್ನೂ, ಯಾರೂ ಬಲವಂತವಾಗಿ ಬದಲಿಸಲಾಗದು. ಆದರೆ ನಿಮ್ಮ ಒಳ್ಳೆಯ ಆಚರಣೆ ನಡವಳಿಕೆಯಿಂದ ಮೌನವಾಗಿ ಅವರು ಕೂಡಾ ನಿಮ್ಮನ್ನು ಅನುಸರಿಸುವಂತೆ ಮಾಡಿ. ಅದುವೇ ನಿಜವಾದ ಸಮಾಜ ಸೇವೆ" ಅಂತಿದ್ರು. 

"ಮುತ್ತೈದೆ ಅಂದರೆ ರೇಷ್ಮೆ ಸೀರೆ ಉಟ್ಟು, ಮೈತುಂಬಾ ಬಂಗಾರ ಹೇರಿಕೊಂಡು ಇರೋದಲ್ಲ ಕಂಡ್ರಪ್ಪಾ. ಯಾವ ಸ್ಥಿತಿಯಲ್ಲಿ 'ತ್ಯಾಗ, ಸಹನೆ, ಕರುಣೆ, ಕ್ಷಮೆ ಹಾಗೂ ದಯೆ' ಈ ಐದು ಮುತ್ತಿನಂಥ ಗುಣವಿರುವುದೋ ಅವಳನ್ನ ಮುತ್ತೈದೆ ಅಂತಾರಪ್ಪಾ. ಮೈತುಂಬಾ ಬಂಗಾರ ಹೇರಿಕೊಂಡೋರೆಲ್ಲಾ ಮುತ್ತೈದೆ ಆಗಲ್ಲ" ಎನ್ನುತ್ತಿದ್ದರು. 

"ದೇಹಕ್ಕೆ ಬಂಗಾರ ಹಾಕೋದ್ಯಾಕೆ ಗೊತ್ತೇ? ಬಂಗಾರದಂತಹ ನಡವಳಿಕೆ ಇಟ್ಕೋಬೇಕು ಅನ್ನೋದಕ್ಕೆ ಸೂಚ್ಯವಾಗಿ ಬಂಗಾರ ಹಾಕಬೇಕೆ ವಿನಃ ಪ್ರದರ್ಶನಕ್ಕಾಗಿ ಅಲ್ಲ" ಎನ್ನುತ್ತಿದ್ದರು. 

ಹೆಂಡತಿ ಗಂಡನಿಗೆ ಚಂದ ಕಾಣಬೇಕೇ ವಿನಃ ಊರವರಿಗಲ್ಲ. ಈ ಕಾಲ ಹೇಗೆ ಬಂದಿದೆಯಪ್ಪಾ ಅಂದ್ರೆ ಹೆಣ್ಣು ಮಕ್ಕಳು ಗಂಡನ ಮುಂದೆ ಹರುಕು ಸೀರೆ ಉಟ್ಕೋತಾರೆ. ಪುರೋಹಿತರಉ ಬಂದರೆ ರೇಷ್ಮೆ ಸೀರೆ ಉಟ್ಕೋತಾರೆ. ಅದರ ಬದಲು ಗಂಡನ ಮುಂದೆ ಚಂದಾಗಿ ಕಂಡ್ರೆ ಆ ಗಂಡಸರು ಬೇರೆ ಕಡೆ ಯಾಕೆ ತಿರುಗುತ್ತಾರೆ?" ಎಂದು ಸಮಾಜದ ಓರೆ-ಕೋರೆಯನ್ನು ನೇರವಾಗಿ ಚುಚ್ಚುತ್ತಿದ್ದರು.....,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Tuesday, December 27, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 84


    ಗ್ರಂಥ ರಚನೆ - ಚರಣದಾಸ 


ಸುಲಭ ಪೂಜೆಯ ಮಾಡಿ..... 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುನಾಥರು ಮನೆಯಲ್ಲಿದ್ದರೆ ಆ ರಸ್ತೆಯಲ್ಲಿ ಓಡಾಡುವ ಯಾವುದೇ ಜೀವಿಯೂ ಉಪವಾಸ ಹೋದ ಉದಾಹರಣೆ ಇಲ್ಲ. ಜಾನುವಾರುಗಳಿಗೆ ರಸ್ತೆ ಬದಿಯಲ್ಲಿ ಮೇವು ಹಾಕಿ ಮನೆ ಮುಂದೆ ಕುಡಿಯಲು ನೀರಿನ ತೊಟ್ಟಿ ಇಟ್ಟಿರುತ್ತಿದ್ದರು. ಸದಾ ಕಾಲ ಹಣ್ಣು, ಹಂಪಲು, ಸಿಹಿ ತಿನಿಸುಗಳನ್ನು ವಿತರಿಸುತ್ತಿದ್ದರು. ಬಿಸಿಲ ಕಾಲದಲ್ಲಿ ದಾರಿಯಲ್ಲಿ ಹೋಗುವವರಿಗೆಲ್ಲ ತಂಪಾದ ಮಜ್ಜಿಗೆ ವಿತರಿಸುತ್ತಿದ್ದರು. 

ಯಾರೋ ಒಬ್ಬರು "ಸ್ವಾಮಿ, ತಾವು ಏನು ಪೂಜೆ ಮಾಡ್ತೀರಾ?" ಅಂತ ಕೇಳಿದ್ದಕ್ಕೆ, "ನಂಗೆಂತದಯ್ಯಾ ಪೂಜೆ? ಈಗ ಮಾಡ್ತಿದೀನಲ್ಲ ಇದೇ ಹೋಮ, ಇದೇ ಪೂಜೆ, ತಿಳೀತಾ?" ಎಂದು ಹೇಳಿ ನಸುನಕ್ಕು "ಸುಲಭ ಪೂಜೆಯ ಮಾಡಿ ಫಲವಿಲ್ಲದವರುಂಟೆ?" ಎಂದು ಪ್ರಶ್ನಿಸಿದ್ದರು. 

ಅವರು ಮನೆಯಲ್ಲಿದ್ದರೆಂದರೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕನಿಷ್ಠ 15-20 ಲೀಟರ್ ಹಾಲು ತೆಗೆದುಕೊಂಡು ದಾರಿಯಲ್ಲಿ ಹೋಗುವವರಿಗೆಲ್ಲಾ ವಿತರಿಸುತ್ತಿದ್ದರು. ಎಷ್ಟೇ ಸಮಸ್ಯೆಗಳನ್ನು ಹೊತ್ತುಕೊಂಡು ಬಂದಿದ್ದರೂ, ಅವರ ಒಂದು ದರ್ಶನವಾದರೆ ಸಾಕು, ನಮ್ಮ ಸಮಸ್ಯೆಗಳೆಲ್ಲ ಮರೆತುಹೋಗಿ ಒಂದು ಅಮಿತವಾದ ಆನಂದದಲ್ಲಿ ಮುಳುಗಿದ ಅನುಭವವಾಗುತ್ತಿತ್ತು. ಇದು ಗುರುನಾಥರ ದರ್ಶನ ಮಾಡಿದ ಪ್ರತಿಯೊಬ್ಬರ ಅನುಭವ. 

ಅದು ಸೀಬೆಹಣ್ಣಿನ ಫಸಲಿನ ಕಾಲ. ಗುರುನಾಥರ ಎರಡನೆಯ ಮನೆಯ ಮುಂದೆ ಸೀಬೆಯ ಹಣ್ಣಿನ ಮರವೊಂದಿತ್ತು. ದಿನವೂ ಅದೇ ದಾರಿಯಲ್ಲಿ ಹೋಗುತ್ತಿದ್ದ ಏಳನೇ ತರಗತಿಯ ಬಾಲಕನೊಬ್ಬ ಫಸಲಿನಿಂದ ತುಂಬಿ ನಿಂತಿದ್ದ ಮರವನ್ನು ಆಸೆಗಣ್ಣಿನಿಂದ ನೋಡುತ್ತಾ ಮುಂದೆ ನಡೆದನು. 

ಅದೇನು ಆಶ್ಚರ್ಯ? ಮರುದಿನ ಬೆಳಿಗ್ಗೆ ಆ ಹುಡುಗ ಓದುತ್ತಿದ್ದ ಶಾಲೆಯ ಸುಮಾರು 350 ಮಕ್ಕಳಿಗೂ ಸೀಬೆ ಹಣ್ಣಿನ ವಿತರಣೆ ಆಗಿತ್ತು. 

ಅದೇ ಹುಡುಗ ತನ್ನ ತಂದೆಯೊಂದಿಗೆ ಪ್ರತಿ ಶನಿವಾರ ಊರಿನಲ್ಲಿ ನಡೆಯುತ್ತಿದ್ದ ರಾಮ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದನು. ಭಜನೆ ಪ್ರತಿ ಮನೆಗೂ ತೆರಳುತ್ತಿತ್ತು. ಹಾಗೆಯೇ ಗುರುನಾಥರ ಮನೆಗೂ ಬರುತ್ತಿತ್ತು. ಗುರುನಾಥರ ಸಂಬಂಧಿಯೂ ಆಗಿದ್ದ ಅವರ ಮೇಲೆ ಗುರುನಾಥರು ವಿಶೇಷ ಅಭಿಮಾನ ಹೊಂದಿದ್ದರು. 

ಒಮ್ಮೆ ಹಣಕಾಸಿನ ಭಾರಿ ಅಡಚಣೆಯಾಗಿ ಗುರುನಾಥರು ಆ ಬಾಲಕನ ತಂದೆಯಿಂದ ಕೆಲವು ಸಾವಿರ ರೂಗಳಷ್ಟು ಹಣವನ್ನು ಸಾಲ ತೆಗೆದುಕೊಂಡಿದ್ದರು. ಆದರೆ ದುರದೃಷ್ಟವಶಾತ್ ಸಕಾಲದಲ್ಲಿ ಆ ಹಣವನ್ನು ಹಿಂತಿರುಗಿಸಲು ಗುರುನಾಥರಿಗೆ ಸಾಧ್ಯವಾಗಿರಲಿಲ್ಲ. ತನಗೆ ಎಷ್ಟೇ ಕಷ್ಟವಿದ್ದರೂ ಗುರುನಾಥರ ಮೇಲೆ ಅಪಾರ ಪ್ರೀತಿ ಇದ್ದ ಆ ವ್ಯಕ್ತಿ ಎಂದೂ ಹಣ ಹಿಂತಿರುಗಿಸುವಂತೆ ಗುರುನಾಥರನ್ನು ಕೇಳಿರಲಿಲ್ಲ. 

ಆದರೆ ಸಮಸ್ಯೆಯ ಒತ್ತಡದಿಂದ ಆ ಬಾಲಕನ ತಾಯಿ "ಗುರುನಾಥರಲ್ಲಿ ಹಣ ಹಿಂತಿರುಗಿಸುವಂತೆ ಕೇಳಿ" ಎಂದು ತನ್ನ ಪತಿಯನ್ನು ಪೀಡಿಸುತ್ತಿದ್ದರು. 

ರಾಮಭಜನೆ ಗುರುನಾಥರ ಮನೆಗೆ ಬಂದಿದ್ದಾಗ ಗುರುನಾಥರೇ ಆ ವ್ಯಕ್ತಿಯನ್ನು ಕರೆದು "ಏನಯ್ಯಾ ನಿನ್ನ ಹೆಂಡತಿ ಹಣ ಕೇಳು ಅಂತ ಪೀಡಿಸುತ್ತಿದ್ದಾಳೆ ಅಲ್ಲವೇ?. ಇನ್ನು ಸ್ವಲ್ಪ ದಿನದಲ್ಲಿ ಹಣ ಹಿಂತಿರುಗಿಸುತ್ತೇನೆ ಆಯ್ತಾ?" ಎಂದು ನುಡಿದಿದ್ದರು. 

ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳು ಗುರುನಾಥರಿಗೆ ಹೇಗೆ ಗೊತ್ತಾಗುತ್ತೆ!? ಎಂದು ಆ ಬಾಲಕ ವಿಸ್ಮಯ ಪಡುತ್ತಿದ್ದನು. ಆ ವ್ಯಕ್ತಿಯು ತನ್ನ ಸೋದರನೊಬ್ಬನಿಂದ ಕೆಲವು ಸಾವಿರ ರೂಗಳಷ್ಟು ಸಾಲ ಮಾಡಿದ್ದು ಅದನ್ನು ಸಕಾಲದಲ್ಲಿ ಹಿಂತಿರುಗಿಸಲಾಗಿರಲಿಲ್ಲ. 

ಆ ಕಾರಣಕ್ಕೆ ಆ ಸಹೋದರನು ಒಂದು ದಿನ ತನ್ನ ಅಣ್ಣನೊಂದಿಗೆ ವಿಪರೀತ ಜಗಳ ಆಡಿದನು. ಮರುದಿನ ಬೆಳಿಗ್ಗೆ ಆ ಸಹೋದರನ ಮನೆಗೆ ದಿಢೀರನೆ ಬಂದ ಗುರುನಾಥರು ಅವನ ಕೈಗೆ ಹತ್ತು ಸಾವಿರ ರೂಗಳನ್ನು ನೀಡಿ ಅಲ್ಲಿಂದ ಹೊರಟರು. 

ಸಖರಾಯಪಟ್ಟಣದಲ್ಲಿ ರಾಮಭಜನಾ ಮಂದಿರ ಗ್ರಾಮಸ್ಥರೆಲ್ಲರ ಸಹಕಾರದಿಂದ ನಿರ್ಮಾಣವಾಗತೊಡಗಿತ್ತು. ಪ್ರತಿದಿನ ಸಂಜೆ ಹಾಗೂ ರಜಾ ದಿನಗಳಲ್ಲಿ ವಯಸ್ಕರಲ್ಲದೆ ಶಾಲೆಗೆ ಹೋಗುವ ಮಕ್ಕಳು ಕೂಡ ಈ ಶುಭ ಕಾರ್ಯದಲ್ಲಿ ಕೈಜೋಡಿಸಿದ್ದರು. ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ಗುಂಡಿ ತೆಗೆಯುತ್ತಿದ್ದರು. ಆ ಬಾಲಕನು ಕೂಡ ತನ್ನ ಸ್ನೇಹಿತರೊಂದಿಗೆ ಈ ಕೆಲಸದಲ್ಲಿ ನಿರತನಾಗಿದ್ದನು. 

ಒಂದು ದಿನ ಆ ಬಾಲಕರೆಲ್ಲರಿಗೂ ಮಸಾಲೆ ದೋಸೆ ತಿನ್ನಬೇಕೆಂಬ ಬಯಕೆಯಾಗಿ ನಿರ್ಮಾಣ ಕಾರ್ಯದ ಮುಖ್ಯಸ್ಥರನ್ನು ಪರಿಪರಿಯಾಗಿ ವಿನಂತಿಸಿಕೊಂಡರು. ಆದರೆ ಅವರು ದೋಸೆ ಕೊಡಿಸುವುದಿಲ್ಲ ಎಂದು ತಿರಸ್ಕರಿಸಿದರು. ಬೇಸರಗೊಂಡ ಈ ಬಾಲಕರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಮರುದಿನ ಸಂಜೆ ಅದೇ ಸಮಯಕ್ಕೆ ತನ್ನ ಕೆಲ ಭಕ್ತರೊಂದಿಗೆ ಅಲ್ಲಿಗೆ ಬಂದ ಗುರುನಾಥರು ಎಲ್ಲರಿಗೂ ಮಸಾಲೆದೋಸೆ ನೀಡಿ ಸಂತೋಷ ಪಡಿಸಿ ಅಲ್ಲಿಂದ ಹೊರಟರು. 

ಮತ್ತೊಮ್ಮೆ ಆ ಹುಡುಗನನ್ನು ಕರೆದು "ನೀನು ಅದೃಷ್ಟವಂತ. ನೀ ಎಲ್ಲೇ ಹೋದರು ಊಟಕ್ಕೆ ಕೊರತೆ ಇಲ್ಲ ಕಣಯ್ಯಾ" ಎಂದು ಹರಸಿ ಕಳಿಸಿದರು. ಇಂದು ಆ ಬಾಲಕ ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ......,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Monday, December 26, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 83


    ಗ್ರಂಥ ರಚನೆ - ಚರಣದಾಸ 


ಗಡಿಯಾರ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುನಾಥರು "ನಾನು ಅಷ್ಟು ಸುಲಭವಾಗಿ ಯಾರನ್ನೂ ಒಪ್ಪುವುದಿಲ್ಲ. ನನ್ನನ್ನೇ ನಾನು ಒಪ್ಪುವುದಿಲ್ಲ ಕಣಯ್ಯಾ" ಎಂದು ಆಗಾಗ್ಗೆ ಹೇಳುತ್ತಿದ್ದರು. ಯಾವುದನ್ನೂ ಪರೀಕ್ಷಿಸದೇ ಏಕಾಏಕಿ ಒಪ್ಪಬಾರದೆಂಬುದು ಅವರ ಮಾತಿನ ಅರ್ಥವಾಗಿತ್ತು. 

ಸಾಮಾನ್ಯವಾಗಿ ತನ್ನನ್ನು ಕಾಣಲು ಬರುವ ಭಕ್ತರ ತಾಳ್ಮೆ ಪರೀಕ್ಷಿಸಿ ಆನಂತರವಷ್ಟೇ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದ ಗುರುನಾಥರು ಅಷ್ಟು ಸುಲಭವಾಗಿ ಯಾರನ್ನೂ, ಯಾವುದನ್ನೂ ಒಪ್ಪುತ್ತಿರಲಿಲ್ಲ. ಚರಣದಾಸನಾದ ನನ್ನನ್ನೂ ಕೂಡಾ ಹಲವು ಭಾರಿ ಕಠಿಣ ಪರೀಕ್ಷೆಗೆ ಒಳಪಡಿಸಿದ್ದರು. ಒಮ್ಮೆ ಅಲ್ಲಿಯೇ ಇದ್ದ ವ್ಯಕ್ತಿಗೆ ನನ್ನನ್ನು ತೋರಿಸಿ, "ಅಯ್ಯಾ ಅವನಿಗೆ (ಅಂದರೆ ನನಗೆ) ಮಾಡಿದ ಒಂದು ಪರೀಕ್ಷೆ ಮಾಡಿದ್ರೂ ನೀನು ಇಲ್ಲಿ ಇರುತ್ತಿರಲಿಲ್ಲ. ಓದಿ ಹೋಗುತ್ತಿದ್ದಿ" ಎಂದಿದ್ದರು. 

ಒಮ್ಮೆ ಆಸ್ಟ್ರೇಲಿಯಾದ ಪ್ರಜೆಯೊಬ್ಬರು ಗುರುನಾಥರ ದರ್ಶನಕ್ಕಾಗಿ ಬಂದಿದ್ದರು. ಅದು ಮಳೆಗಾಲ. ಗುರುನಾಥರು ಆ ವ್ಯಕ್ತಿಯನ್ನು ಸುಮಾರು ಮೂರು ದಿನಗಳ ಕಾಲ ಮನೆಯ ಹೊರಗೆ ನಿಲ್ಲಿಸಿದ್ದರು. ಬೇರೆ ಭಾಷೆಯೂ ತಿಳಿದಿರದ ಆತ ಗುರುನಾಥರು "ಹೋಗು" ಎನ್ನುವವರೆಗೂ ಮಳೆಯಲ್ಲೇ ನೆನೆದುಕೊಂಡು ಅಲ್ಲಿಯೇ ನಿಂತಿರುತ್ತಿದ್ದರು. ಹೀಗೆ ಮೂರು ದಿನ ಕಳೆಯಿತು. ನಾಲ್ಕನೆಯ ದಿನ ಒಂದು ಕುರ್ಚಿ ತರಿಸಿ ಆ ವ್ಯಕ್ತಿಯನ್ನು ಆದರದಿಂದ ಒಳ ಕರೆತಂದು ಕೂರಿಸಿ ಊಟ ಬಡಿಸಿ, ಆರತಿ ಮಾಡಿದ ಗುರುನಾಥರು ಅವರಿಗೆ "ನಿನ್ನ ಅಭೀಷ್ಟ ಸಿದ್ಧಿಸುವುದು. ನಿನಗೆ ಅವಲೋಕನ ಪ್ರಾಪ್ತಿಯಾಗುವುದು" ಎಂದು ಆಶೀರ್ವದಿಸಿ ಕಳಿಸಿಕೊಟ್ಟರು. 

ಚರಣದಾಸನಾದ ನನ್ನ ನಡವಳಿಕೆಯ ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ಪರೀಕ್ಷಿಸುತ್ತಿದ್ದ ಗುರುನಾಥರು ನನ್ನಿಂದ ಒಂದು ಸಣ್ಣ ತಪ್ಪಾಗುವುದನ್ನೂ ಸಹಿಸುತ್ತಿರಲಿಲ್ಲ. ತಪ್ಪಾದಲ್ಲಿ ಕೂಡಲೇ ಯಾವುದೇ ಮಾತಿಲ್ಲದೇ ನನಗೆ ಪರೀಕ್ಷೆ ನಡೆಯುತ್ತಿತ್ತು. ಬೇರೆಯವರಿಗೆ ಅಥವಾ ಮನೆಯವರಿಗೆ ಬೈಯುವುದಿರಲಿ, ಯಾರನ್ನಾದರೂ ದಿಟ್ಟಿಸಿ ನೋಡಿದರೂ ನನಗೆ ಪರೀಕ್ಷೆ ಕಟ್ಟಿಟ್ಟ ಬುತ್ತಿಯಾಗಿತ್ತು. 

ಒಂದು ದಿನ ಅನ್ನ ಮಾಡಿ ಹರಡಲು ಬಳಸುವ ಚಾಪೆಯನ್ನು ತರಲು ಹೇಳಿದರು. ನಾನು ಮನೆಯ ಮೂರನೇ ಮಹಡಿ (ಅಟ್ಟ) ಏರಿ ತಂದು ಕಾರಿಗೆ ಹಾಕಿದೆ. ನಂತರ ಅದನ್ನು ತಂದು ತೋರಿಸಲು ಹೇಳಿದರು. 

ನಾನು ತಂದು ಅವರಿಗೆ ತೋರಿಸಲು, "ಅದಲ್ಲ ಕಣಯ್ಯಾ, ಇನ್ನೊಂದು ತಾ. ಏನು ಕೆಲಸ ಮಾಡ್ತಿದ್ದೀಯಾ ನೀನು?" ಎಂದು ಗದರಿಸಿದರು. ಹೀಗೆ ಏಳು ಬಾರಿ ಓಡಾಡಿಸಿ ನನ್ನ ತಾಳ್ಮೆ ಪರೀಕ್ಷಿಸಿದ ಗುರುನಾಥರು ಕಾರನ್ನೇರಿ ಕುಳಿತು ನನ್ನ ಕರೆದು ನಗುತ್ತಾ "ಸುಸ್ತಾಯಿತೇನಪ್ಪಾ.. ಮನೆ ಕಡೆ ಜೋಪಾನ ಆಯ್ತಾ" ಎಂದು ಹೇಳಿ ಹೊರಟುಹೋದರು. 

ಮತ್ತೊಮ್ಮೆ ಇಂಜಿನೀಯರಿಂಗ್ ಓದಿ ಗುರುಕೃಪೆಯಿಂದ ಉತ್ತಮ ಕೆಲಸದಲ್ಲಿದ್ದ ಹುಡುಗನೊಬ್ಬ ಬಸ್ಸನ್ನೇರಿ ಬರುವಾಗ ಅಲ್ಲಿ ಪಕ್ಕದ ಸೀಟಿನಲ್ಲಿ ಸುಂದರವಾದ ಹುಡುಗಿಯೊಬ್ಬಳನ್ನು ಕೆಲಕಾಲ ದಿಟ್ಟಿಸಿ ನೋಡಿ ಆ ನಂತರ ನೇರವಾಗಿ ಗುರುನಿವಾಸಕ್ಕೆ ಬಂದನು. ಕೂಡಲೇ ಗುರುನಾಥರು ಅವನು ಆ ಹುಡುಗಿಯನ್ನು ದಿಟ್ಟಿಸಿ ನೋಡಿದ ಪರಿ ಹಾಗೂ ಆ ಹುಡುಗಿಯ ವೇಷ-ಭೂಷಣದ ವಿವರವನ್ನು ಇವನ ಮುಂದಿಟ್ಟರು. ಇದರಿಂದ ಆ ಹುಡುಗ ಗಾಬರಿಗೊಂಡನು. 

ಮತ್ತೊಮ್ಮೆ ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಶೃಂಗೇರಿಯ ಜಗದ್ಗುರುಗಳ ದರ್ಶನ ಮಾಡಿಕೊಂಡು ಅಲ್ಲಿಂದ ನೇರವಾಗಿ ಶಿವಮೊಗ್ಗ ಜಿಲ್ಲೆಯಲ್ಲಿರುವ ಕೂಡಲೀ ಶೃಂಗೇರಿ ಮಠದ ಯತಿಗಳ ದರ್ಶನ ಮಾಡಿ ಬರುವಂತೆ ಹೇಳಿ ಕಳುಹಿಸಿದರು. 

ಆತ ತನ್ನದೇ ಕಾರಿನಲ್ಲಿ ಶೃಂಗೇರಿ ತಲುಪಿ ಗುರುದರ್ಶನ ಮಾಡಿ ಅಲ್ಲಿಂದ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗದ ಕಡೆ ಹೋಗುತ್ತಿದ್ದರು. ತೀರ್ಥಹಳ್ಳಿಯಲ್ಲಿ ಕಾಲೇಜು ಸಮೀಪ ಹೋಗುತ್ತಿದ್ದಾಗ ಅಲ್ಲಿ ನಿಂತಿದ್ದ ಹುಡುಗಿಯರನ್ನು ನೋಡುತ್ತಾ ಮುಂದುವರೆದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಆ ವ್ಯಕ್ತಿಗೆ ಕರೆ ಮಾಡಿದ ಗುರುನಾಥರು "ಅಕ್ಕ-ಪಕ್ಕದ ಆಕರ್ಷಣೆ ಅಪಘಾತದ ಮುನ್ಸೂಚನೆ ಅಲ್ವೇನಯ್ಯಾ?" ಎಂದು ಹೇಳಿ ಅವರು ಏನೇನು ನೋಡಿದರು ಎಂಬ ವಿವರವನ್ನು ಹೇಳಿದರು.

ಈ ಎಲ್ಲ ಘಟನೆಗಳು ಗುರು ಸರ್ವಾಂತರ್ಯಾಮಿಯಾಗಿದ್ದು ತನ್ನ ಭಕ್ತರ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಿರುವರೆಂದು ಸಾರಿ ಸಾರಿ ಹೇಳುತ್ತಿದೆ.

ಈ ಎಲ್ಲ ಘಟನೆಗಳನ್ನು ಗಮನಿಸಿದಾಗ ಗುರುನಾಥರ ಬಂಧುಗಳ ಮನೆಯ ಗೃಹಪ್ರವೇಶ ಸಂದರ್ಭದಲ್ಲಿ ಗುರುನಾಥರು ನುಡಿದ ಈ ಕೆಳಗಿನ ಮಾತು ನೆನಪಿಗೆ ಬರುತ್ತದೆ. "ಅಂದು ಸುಮಾರು ಇನ್ನೂರು ಕೈಗಡಿಯಾರಗಳನ್ನು ತರಿಸಿ ನಮ್ಮೆಲ್ಲರಿಗೂ ನೀಡಿ, ಈ ಕೈಗಡಿಯಾರವನ್ನು ನಿಮ್ಮೆಲ್ಲರಿಗೂ ಏಕೆ ಕೊಟ್ಟೆ ಗೊತ್ತಾ?" ಅಂದ್ರು. ಗೊತ್ತಿಲ್ಲದ ನಾವು ತಲೆ ಆಡಿಸಲು ಗುರುನಾಥರು, "ನಾನು ನಿಮ್ಮನ್ನು ಸದಾ ಗಮನಿಸುತ್ತಿದ್ದೇನೆ ನೆನಪಿರಲಿ" ಎಂದರು. ಸದಾ ತಪ್ಪು ತರಲೆಗಳನ್ನೇ ಮಾಡುತ್ತಿದ್ದ ನನಗೆ ಆ ಗಡಿಯಾರವನ್ನು ಬಳಸಲು ಭಯವಾಯ್ತು.....,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Sunday, December 25, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 82


    ಗ್ರಂಥ ರಚನೆ - ಚರಣದಾಸ 


ಗುರು ಆತ್ಮ ವಿಶ್ವಾಸದ ಗಣಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮಲೆನಾಡು ಮೂಲದ ಓರ್ವ ದಂಪತಿಗಳಿಗೆ ಮದುವೆಯಾಗಿ ಬಹಳ ಕಾಲವಾದರೂ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಹೀಗಿರಲು ಅವರನ್ನು ಪರೀಕ್ಷಿಸಿದ ವೈದ್ಯರು ಸಂತಾನಯೋಗವಿಲ್ಲವೆಂದು ತಿಳಿಸಿದರು. ಇದರಿಂದ ತೀರಾ ಆಘಾತಕ್ಕೆ ಒಳಗಾದ ದಂಪತಿಗಳು ಕೊನೆಯ ಪ್ರಯತ್ನವಾಗಿ ಗುರುನಾಥರ ಬಗ್ಗೆ ತಿಳಿದುಕೊಂಡು ದರ್ಶಿಸಲು ಅಪೇಕ್ಷಿಸಿದರು. 

ಆಗ ಅನಿರೀಕ್ಷಿತವಾಗಿ ಸಖರಾಯಪಟ್ಟಣದಲ್ಲಿರುವ ಬಂಧುಗಳ ಮನೆಗೆ ಬಂದಿದ್ದ ಅವರ ತಾಯಿ ನೇರವಾಗಿ ಗುರುನಾಥರ ದರ್ಶನ ಮಾಡಿ ಮಗಳ ದುಸ್ಥಿತಿಯನ್ನು ದೂರ ಮಾಡಬೇಕೆಂದು ಬೇಡಿಕೊಂಡರು. 

ಆಗ ಅವರಿಗೆ ಮಕ್ಕಳಾಗುವುದೆಂದು ಹೇಳಿ ಧೈರ್ಯ ತುಂಬಿದ ಗುರುನಾಥರು ಎರಡು ದ್ರಾಕ್ಷಿ ಹಣ್ಣನ್ನು ಆ ತಾಯಿಯ ಕೈಗಿತ್ತು "ನಿಮ್ಮ ಮಗಳಿಗೆ ಇದನ್ನು ತಿನ್ನಲು ಕೊಡು. ಹಾಗೂ ಇನ್ನು ಮೂರು ತಿಂಗಳ ಕಾಲ ಯಾವುದೇ ವೈದ್ಯರ ಬಳಿ ಪರೀಕ್ಷೆ ಮಾಡಿಸಬಾರದೆಂದು" ಹೇಳಿ ಕಳಿಸಿದರು. 

ಆ ಮೂರು ತಿಂಗಳಲ್ಲಿ ಈಕೆಯಲ್ಲಿ ತಾಯ್ತನದ ಎಲ್ಲ ಲಕ್ಷಣಗಳು ಗೋಚರವಾದವು. ಆದರೆ ಕೆಲವೇ ದಿನಗಳಲ್ಲಿ ಆ ಹೆಣ್ಣು ಮಗಳು ಮತ್ತೆ ರಜಸ್ವಲೆಯಾದಳು. ಮತ್ತೆ ವೈದ್ಯರಲ್ಲಿ ಪರೀಕ್ಷಿಸಲು ಹೊರಟರಾದರೂ, ಅವರ ತಾಯಿಯ ವಿನಂತಿಯ ಮೇರೆಗೆ ಮೂರು ತಿಂಗಳ ನಂತರವೇ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿದರು. ಆಗ ಆ ಮಹಿಳೆಯ ಗರ್ಭದಲ್ಲಿ ಎರಡು ಭ್ರೂಣ ನಿರ್ಜೀವವಾಗಿರುವ ವಿಷಯ ಪತ್ತೆಯಾಯಿತು. 

ಇಂದು ಆ ಮಹಿಳೆ ಒಂದು ಗಂಡು ಮಗುವಿನ ತಾಯಿಯಾಗಿದ್ದು, ಇದು ವೈದ್ಯ ಲೋಕಕ್ಕೊಂದು ಅಚ್ಚರಿ. ಗುರು ಕೃಪೆಯಿಂದ ಸಂತಾನ ಪಡೆದ ಈ ದಂಪತಿಗಳು ತಮ್ಮ ಕಂದಮ್ಮನೊಂದಿಗೆ ಬಂದು ಗುರುನಾಥರ ಆಶೀರ್ವಾದ ಪಡೆಯಲು, ಗುರುನಾಥರು "ಇನ್ನೇನು ಬೇಕಮ್ಮ ನಿಂಗೆ" ಎಂದು ಕೇಳಲು, 

ಆ ದಂಪತಿಗಳು "ನಿಮ್ಮ ಕೃಪೆ ನಮ್ಮ ಕುಟುಂಬದ ಮೇಲೆ ನಿರಂತರವಾಗಿರಲಿ" ಎಂದು ಪ್ರಾರ್ಥಿಸಿದರು. 

ಅದು ಶಿವಮೊಗ್ಗ ಮೂಲದಲ್ಲಿ ವಾಸಿಸುತ್ತಿದ್ದ ಮಾಧ್ಯಮ ವರ್ಗದ ಸುಸಂಸ್ಕೃತ ಕುಟುಂಬ. ಅವರಿಗೆ 5-6 ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿತ್ತಾದರೂ ಈ ದಂಪತಿಗಳು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಗುರುನಾಥರ ಬಗ್ಗೆ ತಿಳಿದ ಅವರು ನೇರವಾಗಿ ಗುರುನಿವಾಸಕ್ಕೆ ಬಂದು ತಮ್ಮ ಕಷ್ಟವನ್ನು ನಿವೇದಿಸಿಕೊಂಡರು. 

ಆಗ ಗುರುನಾಥರು, "ನೋಡಿ ನೀವು ಅಡಿಕೆ ವ್ಯಾಪಾರ (ಚೇಣಿ) ಮಾಡಿ ನೀವಿನ್ನು ಭಯಪಡಬೇಕಿಲ್ಲ. ಋಣಮುಕ್ತರಾಗಿ ಎಲ್ಲ ಅನುಕೂಲವಾಗುವುದು" ಎಂದು ಹಾರೈಸಿ ಕಳಿಸಿದರು. ಅಂತೇಯೆಯಿಂದು ಆ ದಂಪತಿಗಳು ಋಣಮುಕ್ತರಾಗಿರುವರು ಮಾತ್ರವಲ್ಲ. ಪರರಿಗೆ ಸಹಾಯ ಮಾಡುವಷ್ಟು ಆರ್ಥಿಕವಾಗಿ ಸದೃಢರಾಗಿರುವರು. 

ಆ ದಂಪತಿಗಳದ್ದು ಒಂದು ಮಗುವನ್ನು ಹೊಂದಿದ್ದ ಪುಟ್ಟ ಸಂಸಾರ. ಬಹಳ ಕಷ್ಟ ಪಟ್ಟು ಜೀವನದಲ್ಲಿ ಮೇಲಕ್ಕೆ ಬಂದಿದ್ದ ಆ ದಂಪತಿಗಳು ಗುರುಸೇವೆಯಲ್ಲಿ ಸದಾ ಮುಂದಿದ್ದರೂ ಯಾವುದೇ ಆಡಂಬರ, ಅತಿರೇಕವಿಲ್ಲದ ನಡವಳಿಕೆ ಹೊಂದಿದ್ದರು. 

ಗುರುನಾಥರು ಯಾವಾಗಲೂ ಅವರ ಬಗ್ಗೆ "ನೋಡಯ್ಯಾ ಎಂಥಹ ಸಾತ್ವಿಕ ಹೆಣ್ಣು ಮಗಳಾಕೆ!! ಎಂದು ಮೆಚ್ಚುಗೆ ಮಾತನಾಡುತ್ತಿದ್ದರು. ಪತಿ ಸರ್ಕಾರಿ ನೌಕರಿಯಲ್ಲಿದ್ದು ಪತ್ನಿ ಗೃಹಸ್ಥೆಯಾಗಿದ್ದರು. 

ಆ ಪತ್ನಿ ತನ್ನ ಪತಿಯ ಸಂಬಂಧಿಯೋರ್ವರು ಯಾರೊಂದಿಗೋ ಪ್ರೇಮ ಬಂಧನದಲ್ಲಿ ಸಿಲುಕಿರುವುದನ್ನು ತಿಳಿದು ಆಘಾತಗೊಂಡರು. ಹಾಗೂ ಅನಿರೀಕ್ಷಿತವಾಗಿ ಆ ಪ್ರೇಮಿಗಳ ಪ್ರೇಮ ಪತ್ರಗಳು  ಇವರ ಕೈಗೆ ಸಿಕ್ಕಿದವು. ಅದು ಬೇರೆಯವರ ಕೈಗೆ ಸೇರಿದರೆ ಕುಟುಂಬಕ್ಕೆ ಮುಜುಗರವಾದಿತೆಂದು ಭಾವಿಸಿದ ಆ ಮಹಿಳೆ ಸದುದ್ದೇಶದಿಂದ ಆ ಪತ್ರಗಳನ್ನು ಸುಟ್ಟು ಹಾಕಿದರು. 

ಅದಾಗಿ ಕೆಲವೇ ದಿನಗಳಲ್ಲಿ ಆ ಮಹಿಳೆ ವಿಪರೀತ ರಕ್ತಸ್ರಾವದಿಂದ ನಿತ್ರಾಣವಾಗತೊಡಗಿದರು. ಬರಬರುತ್ತಾ ನಡೆಯುವುದೇ ದುಸ್ತರವಾಗತೊಡಗಿತು. ಸದಾ ಗುರುನಾಥರ ಸಂಪರ್ಕದಲ್ಲಿದ್ದ ಆ ಮಹಿಳೆ ತನ್ನ ಖಾಯಿಲೆ ಬಗ್ಗೆ ಹೇಳುತ್ತಾ, ಯಾವುದೇ ಔಷಧೋಪಚಾರಗಳು ಫಲಿಸಲಿಲ್ಲ ಎಂದು ದುಃಖಿಸಿದರು. 

ಆಗ ಸಾಂತ್ವನ ಹೇಳಿದ ಗುರುನಾಥರು ಒಂದು ಕೊಡದಲ್ಲಿ ನೀರು, ಅಕ್ಕಿ, ವಿಳ್ಳೇದೆಲೆ ಹಾಕಿಸಿ ಹೊರಗೆ ಎಸೆಯುವಂತೆ ಹೇಳಿದರು. ಹೀಗೆ ಮಾಡಿದ ಕೆಲವೇ ಗಂಟೆಗಳಲ್ಲಿ, ಆರು ತಿಂಗಳಿನಿಂದ ನಿಂತಿರದ ರಕ್ತಸ್ರಾವ ಕೂಡಲೇ ನಿಂತಿತು. 

ಮತ್ತೊಂದು ದಿನ ಗುರುನಾಥರು ಆರಾಮವಾಗಿದ್ದ ಸಮಯದಲ್ಲಿ ತನಗೆ ಹೀಗಾಗಲು ಕಾರಣವೇನೆಂದು ಕೇಳಲು ಗುರುನಾಥರು "ಆ ಮಹಿಳೆ ಅವರ ಸಂಬಂಧಿಯ ಪ್ರೇಮ ಪತ್ರವನ್ನು ಸುಟ್ಟು  ಹಾಕಿದ್ದು ಹಾಗೂ ಇಲ್ಲಿ ನಿಮ್ಮ ಪಕ್ಕದ ಮನೆಯ ಹೆಂಗಸಿನ ಖಾಯಿಲೆಯ ವಿರೂಪವನ್ನು ಕಂಡು ಗಾಬರಿಯಾಗಿದ್ದೀಯಾ. ಅದಕ್ಕೆ ಹೀಗಾಯಿತು ಕಣಮ್ಮಾ... " ಎಂದು ತಿಳಿಸಿದರು. 

ಹಾಗೇ ಮತ್ತೊಮ್ಮೆ ಸಿರಿವಂತರ ಮನೆಯ ಸೊಸೆಯಾಗಿ ಬಂದ ಮಹಿಳೆಯೊಬ್ಬರಿಗೆ ಮೊದಲ ಮಗು ಹೆಣ್ಣಾಗಿದ್ದರಿಂದ ಗಂಡನ ಮನೆಯವರು ಬೇಸರಗೊಂಡಿದ್ದರು. ಎರಡನೇ ಬಾರಿ ಗರ್ಭ ಧರಿಸಿದ್ದ ಆಕೆಗೆ ಇದೂ ಹೆಣ್ಣಾದರೆ ನನ್ನ ಗತಿ ಏನಪ್ಪಾ ಎಂದು ಆತಂಕಗೊಂಡು, ಗುರುನಾಥರಲ್ಲಿ ತನ್ನ ದುಗುಡವನ್ನು ತೋಡಿಕೊಂಡರು. 

ಆಗ ಆಕೆಗೆ ಧೈರ್ಯ ತುಂಬಿದ ಗುರುನಾಥರು ಸ್ವಲ್ಪ ಅವಲಕ್ಕಿಯನ್ನು ತಿನಿಸಿದರು ಅಷ್ಟೇ... ಗುರುಕೃಪೆಯಿಂದ ಆಕೆಯ ಎರಡನೇ ಮಗು ಗಂಡಾಗಿತ್ತು. 

ದೂರದ ಇಸ್ಲಾಂ ದೇಶದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರು ಮದುವೆಯಾಗಿ ಬಹಳ ಕಾಲವಾದರೂ ಮಕ್ಕಳಾಗಿರಲಿಲ್ಲ. ಗುರುನಾಥರ ದರ್ಶನ ನಂತರ ಅವರಿಗೆ ಮಗುವಾಯಿತು. ಆತ ಇಂತಹ ಗುರುಭಕ್ತನೆಂದರೆ ಮಗು ಜನಿಸಿ ಹನ್ನೆರಡನೇ ದಿನಕ್ಕೆ ತನ್ನ ಪತಿ ಹಾಗೂ ಮಗುವನ್ನು ಕರೆದುಕೊಂಡು ದೂರದ ಇಸ್ಲಾಂ ದೇಶದಿಂದ ಗುರುವಿನ ಆಶೀರ್ವಾದ ಪಡೆಯಲೋಸುಗ ಸಖರಾಯಪಟ್ಟಣಕ್ಕೆ ಬಂದು ಗುರುದರ್ಶನ ಮಾಡಿ ಹೊರಟುಹೋದರು.....,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, December 23, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 81


    ಗ್ರಂಥ ರಚನೆ - ಚರಣದಾಸ 


ಭವಿಷ್ಯ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


2014 ರ ಜುಲೈ ನಂತರ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ಗುರುನಾಥರು ಸುಮಾರು 6-7 ವರ್ಷಗಳ ಮೊದಲೇ ತಿಳಿಸಿದ್ದರು. ಅಮೇರಿಕಾದ ಮೇಲೆ ನಡೆದ ಉಗ್ರರ ವೈಮಾನಿಕ ದಾಳಿಯನ್ನು (ಬಹುಮಹಡಿ ಕಟ್ಟಡ) ಕೂಡಾ ಮುಂಚಿತವಾಗಿ ತಿಳಿಸಿದ್ದರು. ತನ್ನ ಕಾಲಾನಂತರ ತನ್ನ ಭಕ್ತರಲ್ಲಿ ಎರಡು ಗುಂಪಾಗುವುದೆಂದೂ, ಬಾಣಾರವರದ ಯತಿಗಳ ಜಯಂತಿಗೆ ಆನೆ ಅಂಬಾರಿ ಬರುವುದು ಎಂದೂ ತಿಳಿಸಿದ್ದರು. ಏಳು ಜನ ಯೋಗಿಗಳು ಭಾರತವನ್ನು ತಮ್ಮ ತಪಃ ಶಕ್ತಿಯಿಂದ ಕಾಯುತ್ತಿರುವರೆಂದೂ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದೂ ಹೇಳುತ್ತಿದ್ದರು. ನನ್ನ ಮರಣದ ನಂತರ ಏಳು ಜನ ನನ್ನ ಹೆಸರಿನಲ್ಲಿ ಭವಿಷ್ಯ ನುಡಿಯುವರು ಎಂದಿದ್ದರು. ಅದು ಹಾಗೆಯೇ ಆಗಿದೆ. 

ಈ ಐಟಿ-ಬಿಟಿಗಳು ಜಾಸ್ತಿ ವರ್ಷ ಇರಲ್ಲಪ್ಪಾ.... ಕೆಲವೇ ವರ್ಷದಲ್ಲಿ ಈಗಿನ ಮಾಹಿತಿ ತಂತ್ರಜ್ಞಾನವೆಲ್ಲವೂ ಅಳಿದು ಹೋಗಿ ಮೊದಲಿನ ಕಾಲವೇ ಬರುವುದು. ಮತ್ತೆ ರಾಜಾಡಳಿತ ಬರುವುದು ಎಂದಿರುವರು.......,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।