ಒಟ್ಟು ನೋಟಗಳು

Monday, November 23, 2020

ಮನದಿ ಭಯವೇತಕೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಮನದಿ ಭಯವೇತಕೋ  ನಿನ್ನ ಇರುವಿನ ಅರಿವು ಮೂಡಿಸೇ ದೂರಾಗುವುದು ಗುರುವೇ
ಸುಪ್ತ ಮನದೊಳು ಗುಪ್ತವಾಗಿಹ ಅರಿಗಳ ಕಾಟವೋ ಅದು ಪ್ರಭುವೇ|

ಬೇಡಿದೊಡೆ ನೀ ಸಲಹುವೆಂದೆನುತ ನಾ ಮಾಡಿದ ಕಾರ್ಯಗಳು ಮನ್ನವಾಗುವುದೇ
ಮನವ ಮನ ಬಂದಂತೆ ಓಡಲು ಬಿಡದೆ ನಿನ್ನ ಅಂಕೆಯಲಿ ನಿಲಿಸೋ  ಗುರುವೇ|

ನಡೆವುದಾ ನಡೆಸಿಹನು ಕಾಲನು ನಿನ್ನ ಅಭಯ ಸದಾ ಇದೆಯೆಂಬ ಭಾವ ನೀಡೋ 
ನನ್ನೊಡೆಯನಾ ಸನಿಹದಿ ಸುಳಿಯದಿರಲಿ ಹುಂಬತನದ ಭಾವವೋ|

ಮರೆತು ಮತ್ತಿನಲಿ ನಡೆದೊಡೆ ಬರಲಿ ಮನದೊಳು ಭಯದ ಭಾವವು
ಎನ್ನ ಇತಿಮಿತಿಯೊಳು ಮೈಮನಸ ಬಿಗಿದಿರಿಸಿ ಪೊರೆಯೋ ಪ್ರಭುವೇ|

ಆಡಿ ನಡೆಯಲಾಗದ ಪದವ ನುಡಿಸಬೇಡ ಅಲ್ಪ ಮತಿಯವನು ನಾನಲ್ಲವೇ
ನಿನ್ನ ಪದತಳದ ಸೇವಕನ ಕಾಯುವವ ನೀನೆಂದು ನಂಬಿ ಬಂದೆನೋ ಸಖರಯಾಧೀಶನೇ|

Thursday, November 19, 2020

ತೃಣ ಮಾತ್ರದ ಯೋಗ್ಯತೆಯಿರದೆ ನಿನ್ನ ಸ್ತುತಿಸಿಹೆನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ತೃಣ ಮಾತ್ರದ ಯೋಗ್ಯತೆಯಿರದೆ ನಿನ್ನ ಸ್ತುತಿಸಿಹೆನು ಪಾಮರನು ನಾನು
ಪಾಪದ ಹೊರೆ ಹೊತ್ತು ನಡೆಯಲಾರದೆ ತಲೆ ಎತ್ತದೆ ಬೇಡುತಿಹೆನು ನಾನು|

ಅಂತರಾಳದ ಅಳದಲಿ ಬರೀ ಸುಳ್ಳುಕಪಟದ ಬಕುತಿಯ ಅಲೆಗಳು
ತೋರಿಕೆಯ  ನಿತ್ಯ ಬದುಕಿನಲಿ ಆಡಂಬರದ ಹುಸಿ ತಂತ್ರಮಂತ್ರಗಳು|

ಅಂಜಿಕೆಯ ಮನಹೊತ್ತು ತನುವ ಬಾಗಿಸಿ ಬೇಡುವಾಪರಿ  ಟೊಳ್ಳು ಭಾವಗಳು
ಮನದ ತುಂಬಾ ತುಂಬಿಹಾ ಮೆಟ್ಟಿ ನಿಲ್ಲದಾ ಕಾಮನೆಗಳ ಅಲೆಗಳು|

ನಾನು ನಾನೆಂಬ ಭಾವವ ಮನದಿಂದ ಕಳಚದೆ ಮಾಡುವಾ ಸೇವೆಗಳು
ಅನ್ಯರಿಗಿಂತ ಮಿಗಿಲೆಂಬ ಭಾವದಿ ಸಲ್ಲಿಪ ಧಾನ ಧರ್ಮದ ಮುಖವಾಡಗಳು|

ಯಾರಿಗೂ ತೋರಿಪದೇ ನಿನ್ನ ಸೇವೆಯೊಳು ಮನ ನಿಲ್ಲಿಸೆಂಬ ಕೋರಿಕೆಯೊಳು
ಎಲ್ಲಾ ಬಲ್ಲ ಭಗವಂತನು ಸಖರಾಯಧೀಶನು ಎನ್ನ ಮನ್ನಿಸುವನೆಂಬ  ಬಯಕೆಯೊಳು|

ನಡೆ ನಡೆಯಲೂ ಅವನ ಇರುವಿನ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ನಡೆ ನಡೆಯಲೂ ಅವನ ಇರುವಿನ ಅರಿವಾದಾಗ ಬದುಕಿನ ನಡೆ ಸುಲಭವೋ
ಮನದೊಳು ಅವನ ಮೂರುತಿ ನೆಲೆ ನಿಂತರೆ ದರುಶನ ಸುಲಭವೋ|

ಅವನಾಡುವ ಪ್ರತೀ ಪದವ ಅರಿತರೆ ಬದುಕಿನ ಪಾಠ ಬಲು ಹಗುರವೋ
ಮಾತು ಮನನ ಮಾಡಿ ನಡೆದು ತೋರಿದರೆ ಅವನ ಕರುಣೆ ನಿರಂತರವೋ|

ಅವನ ಆಸ್ಥಾನದಿ ಯಾರೂ ಮೇಲು ಕೀಳೆಂಬ ಭಾವಕೆ ಸ್ಥಳವಿಲ್ಲವೋ
ಸಭೆಯೊಳು ನುಡಿವ ಮಾತದು ಎಲ್ಲರ ಬದುಕಿಗೆ ಸೇರುವಂತಿಹುದೋ|

ಮುಚ್ಚು ಮರೆಎಂಬ ಪದಕಿಲ್ಲಿ ಸ್ಥಳವಿಲ್ಲವೋ ಅದು ಸರ್ವ ವಿದಿತವೋ
ಒಳಗಿಹ ಭಾವಗಳ ಬಡಿದೆಬ್ಬಿಸಿ ತಪ್ಪಿನರಿವ ನಯವಾಗಿ ತಿಳಿಸಿಹದೋ|

ಪ್ರಿಯ ಬಕುತನಿಗರಿವಿಲ್ಲದೆ ಬಂದು ಒದಗುವ ಗುರು ಕಾರುಣ್ಯವೋ
ನೋವ ನೀಗಿ ಬಲವ ನೀಡಿ ಸಂತೈಸುವ ಈ ಗುರುವಿನ ಪರಿ ಅತೀ ದುರ್ಲಭವೋ|

ಓಡುವ ಮನಕೆ ಕಡಿವಾಣ ಹಾಕಿ ಸಾಧನೆಯ ದಾರಿ ತೋರೋ ನನ್ನ ಗುರುವೇ
ಇನ್ನು ತಡಮಾಡದೆ ಎನ್ನ ಕುಕರ್ಮಗಳ ಗಣನೆ ಮಾಡದೆ ಹರಸೋ ಸಖರಾಯಪ್ರಭುವೇ|

Wednesday, November 18, 2020

ಶ್ರೀ ಸದ್ಗುರು ಮಹಿಮೆ ಗ್ರಂಥ ದೊರೆಯುವ ಸ್ಥಳ

ಆತ್ಮೀಯ ಗುರು ಬಂಧುಗಳೆ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಸುಪ್ರಸಿದ್ಧ ಅವಧೂತರಾದ ಶ್ರೀ. ವೆಂಕಟಾಚಲ ಅವಧೂತರ ದಿವ್ಯ ಮಹಿಮೆಗಳನ್ನು ಒಳಗೊಂಡ  "ಸದ್ಗುರು ಮಹಿಮೆ" ಉದ್ಗ್ರಂಥವು ಈಗ ಬೆಂಗಳೂರಿನ ಚಾಮರಾಜಪೇಟೆಯ ವೇದಾಂತ ಬುಕ್ ಹೌಸ್ ನಲ್ಲಿ ಲಭ್ಯವಿದೆ. ಪುಸ್ತಕದ ಬೆಲೆಯನ್ನು 300 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಆಸಕ್ತ ಗುರು ಬಂಧುಗಳು ಗ್ರಂಥವನ್ನು ವೇದಾಂತ ಬುಕ್ ಹೌಸ್ ನಿಂದ  ಖರೀದಿಸಬಹುದು.

ಸೇವೆಯೊಳು ಮನ ನಿಲ್ಲಿಸಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಸೇವೆಯೊಳು ಮನ ನಿಲ್ಲಿಸಿ ನಿನ್ನ ನಾಮವನೇ ಉಸಿರಾಗಿಸಿ ಎನ್ನ ಪೊರೆಯೋ ಪ್ರಭುವೇ
ಜಗದೊಳು ತುಂಬಿಹಾ ವಿಷಯ ವಾಸನೆಗಳ ಮನ ಬಯಸದಿರಲಿ ನನ್ನ  ಗುರುವೇ|

ಇಂದು ಜನಿಸಿದ ಹಸುಗೂಸಿನ ಮನದಂತಿರಲಿ ಎನ್ನ ಮನವು  ಸದಾ ಕಾಲವು
ನೀನೇ ತಿದ್ದಿತೀಡಿ ಮುನ್ನಡೆಸು ಮಾತೆಯಂತೆ ಈ ನನ್ನ  ಬದುಕು  ನಾಳೆಯು|

ಸುಮ್ಮನೆ ಕಾಲ ಕಳೆಯದೆ ಲೌಕಿಕದ ಬಲೆಯೊಳು ಸಿಲುಕದೆ ಈ ನನ್ನ ಮನವು
ನನ್ನೊಡೆಯನ ಅನುಗಾಲವು ಬಜಿಸುತ ಧರೆಗೆ ಭಾರವಾಗದೆ ಇರಲಿ ಈ ಜೀವವು|

ಕರ್ಮದ ಫಲವು ಕಣ್ಣ ಮುಂದೆ ನಿಂತಿರಲು ನೀನಿಲ್ಲದೆ ಬದುಕು ಅಂತ್ಯವು
ಮಿಥ್ಯವನು ಸತ್ಯವೆನುತ ಅನಿತ್ಯದೆಡೆ ಬದುಕುಸಾಗಿಸೆ ಎಚ್ಚರಿಸಿದನು ಗುರುವು|

ಸಾಧಿಸಲು ಮನವ ಹದಗೊಳಿಸಿ ಮಧುರ ಭಾವಗಳ ನಿರಂತರ ಸ್ಫುರಿಸೋ
ಸಖರಾಯಧೀಶನೇ ಒಮ್ಮೆ ಕರುಣದಿ ಮನತುಂಬಿ ಪಾಮರನ ಹರಸೋ|

Tuesday, November 17, 2020

ವರವ ನೀಡು ವರದಾತ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ವರವ ನೀಡು ವರದಾತ
ಅಭಯ ನೀಡು ಅಭಯಧಾತ 
ಬೇಡುತಿಹೆ ನಿನ್ನ ಅವಧೂತ ||

ನಿರ್ಮಲತೆಯು ತುಂಬುವಂತೆ
ಶಾಂತಮನವು ಕದಡದಂತೆ |
ದ್ವಂದ್ವಗಳು ಕಾಡದಂತೆ
ಭಕ್ತಿಭಾವ ಮೂಡುವಂತೆ || 1 ||

ಚಂಚಲತೆಯು  ಹೋಗುವಂತೆ
ದೃಢತೆಯು ಬರುವಂತೆ‌ |
ದಿವ್ಯತೆಯು ಬೆಳಗುವಂತೆ
ಮೌಢ್ಯಭಾವ ತೊಲಗುವಂತೆ || 2 ||

ನ್ಯಾಯಧರ್ಮ ಹಿಡಿಯುವಂತೆ
ದಯೆಯ ಮರ್ಮ ತಿಳಿಯುವಂತೆ |
ಸಕಲಜೀವಿಗಳಲು ನಿನ್ನ ಕಾಣುವಂತೆ
ಸಹನೆಯ ಸಿರಿಯ ಅರಿಯುವಂತೆ || 3 ||

|| ಸರ್ವದಾ ಸದ್ಗುರುನಾಥೋ ವಿಜಯತೇ ||
17-11-2020

Sunday, November 15, 2020

ದೀಪದ ಹಬ್ಬದ ಈ ಶುಭ ದಿನದಿ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ದೀಪದ ಹಬ್ಬದ ಈ ಶುಭ ದಿನದಿ ದೀಪವಾಗಿ ದಾರಿ. ತೋರೋ ಗುರುವೇ
ತಮವನೆಲ್ಲ ಸರಿಸಿ ಮನದೊಳು ಜ್ಞಾನನೀಡುವ ಬೆಳಕಾಗಿ ಬಾರೋ ಗುರುವೇ|

ಇಷ್ಟು ದಿನ ಕತ್ತಲೆಯ ಕೂಪದೊಳು ಮಿಂದೆದ್ದು ಮಂದ ಮತಿಗಳಾದೆವೋ
ಇನ್ನಾದರೂ ಮತಿಯೊಳು ಬೆಳಕ ತುಂಬಿ ನೀ ನಡೆದ ಹಾದಿಯೊಳು ನಡೆಸೋ ದೊರೆಯೇ|

ಬೆಳಕಿನ ಚಿತ್ತಾರವ ಬದುಕಲಿ ಮೂಡಿಸಿ ಮನವ ಅರಳಿಸಿ ಹರಸೋ ಪ್ರಭುವೇ
ಮದ ಮತ್ಸರವೆಂಬ ಧೂಮವ  ತೊಳೆದು ಸಾತ್ವಿಕತೆಯ ತುಂಬೋ  ಗುರುವೇ|

ಲೋಭ ಮೋಹಗಳ ಒಡನಾಟ ನೀಡದೆ ಮನವ ಶುದ್ಧಗೊಳಿಸೋ ಗುರುವೇ
ಕಾಮ ಪ್ರೇಮದೊಳು ಮನ ತೋಯದೆ ನಿಜ ಭಕುತಿ ಪ್ರೇಮ ನೀಡೋ ಪ್ರಭುವೇ|

ಆರು ಅರಿಗಳ ಜಯಿಸಿ ಸದಾ ಮನವ ನಿನ್ನಲಿರಿಸಿ ಎನ್ನ ಕಾಯೋ ಸದ್ಗುರುವೇ
ಸಾಕ್ಷರಾಯಧೀಶನೇ ನಿನ್ನ ಪದಕಮಲದ ಸನಿಹ ಉರಿವ ದೀಪದ ಬತ್ತಿ ನಾನಾಗುವೇ|

Thursday, November 12, 2020

ಬೆಚ್ಚಿ ಬಿದ್ದೆನೋ ಬೆವೆತು ಹೋದೆನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೆಚ್ಚಿ ಬಿದ್ದೆನೋ  ಬೆವೆತು ಹೋದೆನೋ ನಿನ್ನ ನಾಮ ಮರೆತು ಮೂಡನಾದೆನೋ
ಇನ್ನು ತಾಳಲಾರೆನೋ ಗುರುವೇ  ಕಾಯಲಾರೆನೋ ನಿನ್ನ ದರುಷನಕೆ ಬೇಡಿ ಬಂದೆನೋ|

ಭಕುತಿ ಗೊತ್ತಿಲ್ಲ ನೀತಿ ನಿಯಮದ ಅರಿವಿಲ್ಲದವ  ನಿನ್ನ ಬೇಡುತಿಹೆನೋ
ಕೈ ಜೋಡಿಸದೆ ತನುವು ಬಾಗಿಸದೆ  ನಿನ್ನ ಶಕುತಿಯ ಅರಿವಿಲ್ಲದೇ ಕೇಳುತಿಹೆನೋ|

ನಿನ್ನ ನಾಮವ ಸೇವಿಸದೇ ನಿನ್ನ ಪಾದಪದುಮ  ಪಿಡಿಯದೆ ಸಲಹು ಎಂದೆನೋ
ಮನದೊಳು ನಿನ್ನ ಮೂರುತಿ ನಿಲಿಸದೆ ಹೃದಯದಿ ನಿನ್ನ ನಾಮವಿಲ್ಲದೆ ಹರಸು ಎಂದೆನೋ|

ಲೌಕಿಕ ಬದುಕಿನ ವಾಸನೆಗಳ ಜೊತೆ ಕಾಲ ಕಳೆದು ಕಾಲಹರಣ ಮಾಡಿ ಮೂಡನಾದೆನೋ
ಅಲ್ಪ ಮತಿಯಹೊತ್ತು ಅಲ್ಪ ಸಂಗಗಳಿಸಿ ಬದುಕ ಬರಡು ಮಾಡಿಕೊಂಡೆನೋ|

ಲೋಭಿಯಂತೆ ಆಸೆ ಹೊತ್ತು ನಿತ್ಯ ಬದುಕಿನಾ ನರಕದಲ್ಲಿ  ಎಡವಿ ಬಿದ್ದೆನೋ
ಅಲ್ಪ ಸುಖದ ಬೆನ್ನಹತ್ತಿ ಮುಸುಕು ಕವಿದ ಬಾಳಿನಲ್ಲಿ ಕಳೆದು ಹೋದೆನೋ|

ನೀನೇ ಗುರುವು ನೀನೇ ಸರ್ವವೂ ಎಂದು ನುಡಿಯಲು ನಾನು ಅರ್ಹನಲ್ಲವೋ
ಸಖರಾಯಪುರದ ಮಹಾದೇವನೇ ಬೇಡದಲೇ ಎಲ್ಲವನೂ ಅರಿಯುವನೋ|

Tuesday, November 3, 2020

ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ ದಣಿವಾಗಿದೆ ಗುರುವೇ 
ಮೂಡನು ನಾನು ಎನ್ನ ಮತಿಯ ಬೆಳಗಿ ನಿತ್ಯ ಸತ್ಯವ ತೋರೋ ಪ್ರಭುವೇ|

ಎನ್ನ ಬದುಕಿನ ಸುತ್ತಲೂ ಆಮಿಷಗಳಿರಿಸಿ ಮನವ ದುರ್ಭಲ ಮಾಡಬೇಡವೋ
ಕಷ್ಟ ಕೋಟಲೆಗಳ ನಡುವೆ ನಿಲ್ಲಿಸಿ ಎನ್ನ ದೂರ ಮಾಡಬೇಡವೋ ದೊರೆಯೇ|

ಬಣ್ಣದ ಚಿತ್ತಾರದ ನಡುವೆ ನಿಂತ ಮಾತು ಬಾರದ ಮನುಜನಾದೆನೋ
ಎತ್ತ ನೋಡಿದರೆತ್ತ  ಚಿತ್ತ ಕೆಡಿಸುವ ವಿಷಯ ವಾಸನೆಗಳ ದಾಸನದೆನೋ|

ಮತ್ತು ಬಂದಂತೆ ಬಕುತಿಯ ನಾಟಕವಾಡಿ ನಿನ್ನ ಅಂಗಳದಿ ಆಡಿಹೆನೋ
ಸುತ್ತಮುತ್ತಲ ನೋಟ ಎನ್ನ ಕಡೆಗಿರಲೆಂದು ಕಣ್ಮುಚ್ಚಿ ಕುಳಿತು ನಾಟಕವಾಡಿಹೆನೋ|

ಸಖರಾಯಧೀಶನೆ ನೀನು ಮನದೊಳಗಿಹ ಭಾವ ಬದಲಿಸಿ ಹರಸುವೆಯೇನೋ
ಉಸಿರುಗಟ್ಟಿಸುವ ಮನದ ಗೊಂದಲವ ದೂರಮಾಡಿ ಕಾಪಡೋ ಎನ್ನನು|