ಒಟ್ಟು ನೋಟಗಳು

Sunday, December 27, 2020

ಸಾಧನೆಯ ಹಾದಿಯೊಳು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸಾಧನೆಯ ಹಾದಿಯೊಳು ಭಾದಕಗಳ ಕಾಟವ  ದೂರ ಮಾಡೋ ನನ್ನ ದೊರೆಯೇ
ಮೂಡುವ ಭಾವನೆಯ ಅಲೆಗಳ ಶಾಂತಗೊಳಿಸಿ ಸ್ಥಿರ ಮನ ನೀಡೋ ನನ್ನ ಗುರುವೇ|

ಆಸೆಗಳ ಅಲೆಗಳ ಮೇಲೆ ತೇಲುತ ನಿನ್ನ ನೆನೆವುದೇ ಮರೆತನಯ್ಯ ಗುರುವೇ
ಗೊಂದಲದ ಗೂಡಾಗಿರುವ ಮನಕೆ ಸತ್ಯದ ಅರಿವು ನೀಡಿ ಹರಸೋ ಪ್ರಭುವೇ|

ಎಲ್ಲರಂತಲ್ಲ ಎನ್ನ ಮನವು ಮರ್ಕಟದ ಮತಿಯಂತೆ ಕುಣಿವುದು ನೋಡೋ ಪ್ರಭುವೇ
ಚಂಚಲತೆಯ  ಹೊಡೆತಕೆ ತತ್ತರಿಸಿ ಮನವು ಬರಿದಾಗಿ ಬೆದರಿತೋ ಗುರುವೇ|

ಕಾಮದಾ ಕಾಟಕೆ ಮನವು ಸೋತು ಸುಣ್ಣವಾಗಿ  ಮರುಗಿ ಮುದುಡಿತೋ ಮನವೇ
ನಾನೆಂಬ ಭಾವವು ಮನವ ಆವರಿಸಿ ದಾರಿ ತಪ್ಪಿಸಿ ಪಾಪದ ಹಾದಿ  ತುಳಿಯಿತೋ ಗುರುವೇ|

ಪರರ ಸೊತ್ತು ಅನ್ಯರಾ ವಿಷಯಗಳಿಗೆ ಮನವು ಹಂಬಲಿಸಿ ಬದುಕು ಬರಡಾಯಿತೋ
ಉಳಿದ ದಿನಗಳಾ ಬದುಕು ವ್ಯರ್ಥಮಾಡದೆ  ನಿನ್ನ ಸೇವಿಸುವ ಮನ ನೀಡೋ ಪ್ರಭುವೇ|

ಎಲ್ಲರೊಳು ಎನ್ನ ಸೇರಿಸಿ ನಿನ್ನವನೆಂದು ಪರಿಗಣಿಸಿ ಎನ್ನ ಕರುಣಿಸೋ ಗುರುವೇ
ನೀ ಎನ್ನ ಹರಸಲು ಇನ್ನೆಲ್ಲಿಯಾ ಭಯ ಎನಗೆ ಕರುನಾಳು ಎನ್ನ ಸಖರಾಯ ಪ್ರಭುವೇ|

Thursday, December 17, 2020

ನನ್ನದೆನ್ನಲು ಏನುಂಟೋ ಎಲ್ಲಾ ನೀಡುವವ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ನನ್ನದೆನ್ನಲು ಏನುಂಟೋ ಎಲ್ಲಾ ನೀಡುವವ ಗುರುವೇ ನೀನೇ ಭಗವಂತನಂತೋ
ನಿನ್ನ ಮರೆತರೆ ನಾನೆಂತೋ ಬದುಕು ನಡೆಸುವ ಮಾತು ಇನ್ನೆಂತೋ|

ನಾನ್ಯಾರೋ ಗುರುವೇ ಸರಿ ತಪ್ಪು ಎನಲು ಎನ್ನ ದಾರಿಯೇ ಸರಿಯಿಲ್ಲವಂತೋ
ನಾನಾಡಿದ ಮಾತದು ಅಲಿಪರ ಮನಕೆ ನೋವು ನೀಡಿರೆ  ನಿನ್ನ ಮುಂದೆ ಸಲ್ಲುವುದೆಂತೋ|

ಮೆಲು ದನಿಯಲಿ ಪರರ ಜರಿದು ಮಡಿಯುಟ್ಟು ನಿನ್ನ ಭಜಿಸೆ  ಫಲವೇನುಂಟೋ
ಮನದೊಳು ಮಲಿನ ತುಂಬಿ ತುಟಿಯೊಳು ನಾಮಜಪಿಸಿರೆ ಸುಖವೇನುಂಟೋ|

ಅನ್ಯರ ಬದುಕ ಹಸನಾಗಿಸದೆ ದುರುಳ ಮಾತೊಳು ಹಂಗಿಸೆ ಏನು ಸುಖವುಂಟೋ
ನಾ ಮಾಡಿದೆನೆಂಬ ಬಕುತಿಯೊಳು ನಿನ್ನನೇ ಮರೆತಿರಲು ನಿನ್ನ ಪಡೆಯುವುದೆಂತೋ|

ಸಾಕು ಮಾಡೆನ್ನ ಬಕುತಿಯ ನಾಟಕವ ನೀ ಒಲಿಯದೆ ಬೇರೆ ದಾರಿ ಎಲ್ಲುಂಟೋ
ಸಖರಾಯಪುರವಾಸಿ ಎಲ್ಲರ ಮಹಾದೇವ ನೀ ಹರಸದೇ ಬಾಳು ಬೆಳಗುವುದೆಂತೋ|

Saturday, December 5, 2020

ಅವಧೂತನೆಂದರೆ ಅವ ಪರಮಾತ್ಮನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಅವಧೂತನೆಂದರೆ ಅವ ಪರಮಾತ್ಮನು ಸಖರಾಯಧೀಶನು ಭಕ್ತ ಜನ ಪೋಷಿತನು
ನಿತ್ಯ ನಿರಂತರ ಭಜಿಪರ ಕಾಯ್ವನು ಕರುಣಾಪೂರಿತ ನಮ್ಮ ಗುರುನಾಥನು|

ತೋರುವನು ಜಗದಾಟವ ಮೈ ಮರೆಸಿ ಚಿತ್ತವ ಬ್ರಮೆಯೊಳಿರಿಸಿ
ಮನವ ಕುಣಿಸಿ ಬಣ್ಣದ ಬದುಕ ನಿಜವೆನಿಸಿ ಜೀವವ ಭಾವದೊಳಿರಿಸಿ|

ಕಾಯೋ ಎಂದೆನೆಲು ಕರುಣೆಯ ತೋರುತ  ಮನದ ಸೋಲನು ಎತ್ತಿ ತೋರುತ
ಮುನ್ನೆಡೆವ ಹಾದಿಯೊಳು ಆಸೆ ಆಮಿಷ ತಂದಿರಿಸಿ ಗಟ್ಟಿ ಮನವ ಬಯಸುತ|

ಮನದೊಳು ಜ್ಯೋತಿ ಬೆಳಗಿಸೆ ನಿತ್ಯ ಬದುಕಿನ ಕತ್ತಲ ಕಳೆವನು ಅವಧೂತ
ಸತ್ಯವಾಗಿಹ ಜೀವಕೆ  ಜೊತೆಯಿರೆ  ಮುಕ್ತಿಪಥದ ಸಾರಥಿಯಾದನೋ ಭಗವಂತ I

ತನ್ನೊಳಗಿಹ ಆರು ಅರಿಗಳ ಭಯದಿಂದ ದೂರವಿರಿಸೆಂದು ಕೂಗಿ ಬೇಡುತಾ
ಧರೆಯೊಳು ಸಖರಾಯಪುರವೆಂಬ ವೈಕುಂಠದ ದೇವ ಗುರನಾಥನ ಬೇಡುತಾ|