ಒಟ್ಟು ನೋಟಗಳು

Monday, September 28, 2020

ಮನವೆಂಬ ಮಲಿನ ಮಣ್ಣಿನೊಳು - ರಚನೆ:ಶ್ರೀ. ಆನಂದ ರಾಮ್, ಶೃಂಗೇರಿ

ಮನವೆಂಬ ಮಲಿನ ಮಣ್ಣಿನೊಳು ಬಕುತಿಯಾ ಬೀಜ ಬಿತ್ತಿ ಶ್ರದ್ದೆಯಾ ನೀರೆರೆದು ಭಜಿಸುವೆನು
ಗುರು ಕರುಣೆ ಎಂಬ ಸುಮವು ಉದಿಸಿ ನಿನ್ನ ಕಾರುಣ್ಯದ ಫಲ ನೀಡೋ ಗುರುದೇವ|

ಅಲ್ಲ ಸಲ್ಲದ ಜಗದ ವಿಷಯಗಳ ಹಳುವೆಂಬ ಮಲಿನವನು ದೂರ ಮಾಡೋ
ಪೊಳ್ಳು ಭಕುತಿಯಂಬ ಮನದ ಮಲಿನ ಜರಿಯ ಹರಿಯ ಬಿಡ ಬೇಡವೋ|

ನಾನು ತಾನೆಂಬ ಮನದ ಕೀಟವ ಹಾರಬಿಡದೆ  ಎಲ್ಲಾ ನೀನೆಂಬ ಅರಿವು ನೀಡೋ
ನಿಜ ಬಕುತಿಯ ಫಸಲು ನುಂಗುವ ಆಸೆ ಆಮಿಷಗಳ ಕೀಟವ  ನಾಶ ಮಾಡೋ|

ಮಿಥ್ಯೆಯಂಬ  ಜಂತುವ ಹತ್ತಿರ ಬಿಡದೇ ಬಕುತಿಯ ಫಸಲ ಕಾಯೋ ಗುರುದೇವ
ಸುಂದರ ಸುಮವಾಗಿ ನಿನ್ನ ಮೂರುತಿ ಮನದಿ ಕಾಣಲಿ ಮಹಾದೇವ|

ಹೂವು ಕಾಯಾಗಿ ಕಾಯಿ ಹಣ್ಣಾಗುವಂತೆ ನನ್ನ ಭಕುತಿ ಬಲಿಯಲಿ ನನ್ನ ದೇವ
ನಿನ್ನ ಚರಣಕೆ ಅರ್ಪಿಸುವೆ ನನ್ನ ಹೃದಯದ ದೈನ್ಯ ತುಂಬಿದ ಶುದ್ಧ ಭಾವವ|

ಸಕರಾಯಧೀಶನ ಆಸ್ಥಾನದಿ ಬಕುತ ಜನಗಳ ಗುಂಪಿನಲಿ ನಿನಗಾಗಿ ಕಾಯುವೆನು ನಾನು
ಎನ್ನ ಬಕುತಿಯಾ ಹೊರೆ  ಇಳಿಸಿ ಎನ್ನ ಸರಿ ತಪ್ಪುಗಳ ತಿಳಿಸೋ ಸದ್ಗುರು ದೇವಾ|

Friday, September 25, 2020

ಜಗದೊಳಿಹ ಬಕುತರಲಿ ನಾನೇ ಮೂರ್ಖನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಜಗದೊಳಿಹ ಬಕುತರಲಿ ನಾನೇ ಮೂರ್ಖನೋ ನಿನ್ನ ಸೇವಿಸದೆ ಮರುಳನಾದೆನೋ
ವಿದ ವಿಧದ ಬಕುತಿಯಾ ಮಾಡಿ ನಿನ್ನ ಪಡೆವರ ಕಂಡರೂ ಕಾಲ ಹರಣ ಮಾಡಿದೆನೋ|

ಅಂದದಾ ಪಲ್ಲಕ್ಕಿಯಲಿ ಕುಳ್ಳಿರಿಸಿ ಮುಗದ ಬಕುತಿಯ ತೋರಿ ಕುಣಿವರೋ
ಚಂದದಾ ಪದದಿಂದ ರಾಗದಾ ಮಾಲೆಮಾಡಿ  ಹಾಡಿ ಪಾಡಿ ನಲಿವರೋ|

ಬಣ್ಣದ ಪುಷ್ಪವಿರಿಸಿ ಗಂಧದಾ ಪರಿಮಳ ಸೂಸಿ ನಿನ್ನ ಸಿಂಗರಿಸಿ ನಲಿವರೋ
ಪೂರ್ಣ ಫಲ ಹಣ್ಣುಗಳಿರಿಸಿ ಧನ್ಯತಾ ಭಾವದಲಿ ಮೈ ಮರೆತು ನಮಿಪರೋ|

ಆರು ಅರಿಗಳ ಸಂಗ ಬೇಡವೆಂದು ಬೇಡುತ ನಿನ್ನ ಪದಕಮಲ ಪಿಡಿವರೋ
ಜನುಮ ಜನುಮಕೂ ನೀನೇ ಗುರುವೆಂದೆನುತ ಸಾರಿ ಸಾರಿ ಬೇಡುವರೋ|

ಭವ ಭಂದನವ ಬಿಡಿಸೆನುತ ಕರ್ಮಗಳ ಹೊರೆ ತಾಳೆನುತ ಧೈನ್ಯದಲಿ ಬೇಡುವರೋ
ಅಜ್ಞಾನ ತುಂಬಿದ ಅಂಧಕಾರದ ಬದುಕು ಸಾಕೆನುತ
ಮುಕ್ತಿ ನೀಡೆನ್ನುವರೋ|

ಮಿಥ್ಯವನೇ ಸತ್ಯವೆನುತ ತೋರಿಕೆಯನೇ ಬಕುತಿಯೆನುತ ಬಾಳಿದೆನೋ
ಎನ್ನ ಮನ್ನಿಸೆನ್ನಲು ಪದ ಸಿಗದೆ ಸೋತು ಹೋದೆನು ನಾನು ಸಖರಾಯಧೀಶನೇ|

ಏನು ಲೀಲೆಯೋ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಏನು ಲೀಲೆಯೋ ಗುರುವೇ ನಿನ್ನದು ಮರೆತು ನಡೆವಂತಿಲ್ಲ ಎಚ್ಚರಿಸುವೆ
ಆನಂದದಾ ನಡುವೆ ಆತಂಕವಾ ತೋರಿ ನಗುತ ಕಷ್ಟ ಪರಿಹರಿಸುವೇ|

ಮೆಲುದನಿಯ ನುಡಿಯ ಕೇಳಿ ಕೇಳದಂತೆ ನಟಿಸಿ ಎಲ್ಲವನು ಕರುಣಿಸುವೆ
ಅಬ್ಬರದ ಪೂಜೆಯಾ ಕೂಗಿಗೆ ಉತ್ತರಿಸದೆ ಶುದ್ಧಭಾವದ ಮನಕೆ ಒಲಿಯುವೆ|

ನಿನ್ನ ಬೇಡಲು ಕಾಡಲು ಎನ್ನ ಸಂಕಟದ ನಾಟಕಕೆ ಮುನಿದು ಸಂತೈಸುವೆ
ಹುಸಿಮುನಿಸ ತೋರಿ ಬಿರು ನುಡಿಯಂತೆ ನಟಿಸಿ ಕೈ ಎತ್ತಿ ನೀ ಹರಸುವೆ|

ಜೀವನದ ಪಾಠವ ಮಗುವಿನ ಮನ ಸೇರುವಂತೆ ತಿಳಿಸಿ ಉದ್ಧರಿಸುವೆ
ಅಗಾಧ ಶಕುತಿಯು ನೀನು ಪೊಳ್ಳು ಬಕುತನು ನಾನು ಆದರೂ ಕನಿಕರಿಸುವೆ|

ನಿರ್ಮಲ ಭಕುತಿಗೆ ಒಲಿಯುವ ಮಹದೇವ ನೀನು ಎನ್ನನೂ ಮನ್ನಿಸಿ ಪೊರೆಯುವೆ
ಸ್ವಾರ್ಥದ ಮುಖವಾಡ ಧರಿಸಿ ನಿನ್ನ ಕೂಗಿದರೂ ಬದಲಾವಣೆಗೆ ದಾರಿ ತೋರುವೇ|

ಎಲ್ಲರೂ ನಿನ್ನ ನಿಜ ಭಕುತಿ ತೋರಿ ಸೇವಿಸಿ ಧಾನ್ಯರಾದರು ಗುರುವೇ
ಮಳ್ಳ ನಾನು ಎನ್ನ ಹುಸಿ ಭಕುತಿಗೂ ಮುನಿಸು ಮಾಡದೇ ಸಲಹೋ ಸಖರಾಯಧೀಶ|

Tuesday, September 15, 2020

ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ ಆಸೆ ಆಮಿಷಗಳ ಸುಳಿಯಿಂದ ಹೊರಬರಲಾರೆ
ಉದ್ದಾರ ಮಾಡೆನ್ನನು ಎನ್ನಲು ಎನ್ನ ನಾಲಗೆ ಮಲಿನವಾಗಿದೆ ಗುರುದೇವಾ|

ಕಾಣುತಿಹದು ಕಾಮದಾಟವ ಮನಸು  ಧರಿಸಿಹುದು ಕಪಟ ವೇಷವ
ನುಡಿಯುತಿಹುದು ನಾಲಗೆಯು ನಿನ್ನ ನಾಮವ ತೋರಿಕೆಯ ಬಕುತಿ ಭಾವವ|

ಹಣದಾಸೆಯ ಅಮಲಿನಲಿ ನಾನೆಂಬ ಭಾವದಲಿ ಬಕುತಿಯೆಂದು ನಟಿಸುತಿಹೆನೋ
ಹುಂಬತನದ ಮಾತಿನಲಿ ಎಲ್ಲಾ ಬಲ್ಲೆನೆಂಬ ಗರ್ವದಲಿ ಬದುಕುತಿಹೆನೋ|

ಹಲವು ವೇಷದರಿಸಿ ಹಲವು ಮಂತ್ರ ಜಪಿಸಿ ನಾಟಕವಾಡುತ  ಉಸಿರಾಡುತಿಹೆನೋ
ಎನ್ನ ಕುಕರ್ಮಕೆ ಎನ್ನ ಅಪರಾಧಕೆ ಅನ್ಯರ      ದೂಶಿಸಿ ನಿನ್ನ ಬೇಡುತಿಹೆನೋ|

ಬದುಕಿಗಾಗಿ ಕಾಯಕ ಮಾಡುತಾ ಇತಿಮಿತಿಯ ಎಲ್ಲೆ ಮೀರುತ ನಡೆಯುತಿಹೆನೋ
ಅನ್ಯರ ಏಳಿಗೆಯ ಮಾತಿನಲಿ ಸಹಿಸುತ ಒಳಮನದಿ ಕರುಬುತ ಮುಖವಾಡ ದರಿಸಿಹೆನೋ|

ಮಾಡುವುದೆಲ್ಲ ಮಾಡಿ ಆಡುವುದೆಲ್ಲ ಆಡಿ ಮುಗಿಸಿ ದೈವವ ದೂರುತಿಹೆನೋ
ಸಖರಾಯಪುರದ ನ್ಯಾಯಾಧೀಶ ನೀನು ಎನ್ನ ಕಾರ್ಯಕೆ  ನಿನ್ನಂಗಳದ ತೀರ್ಪು ನೀಡೋ|

Thursday, September 10, 2020

ಸೇವಕನಾಗುವೆನು ನಾನು ಎನ್ನ ಗುರುವಿನ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸೇವಕನಾಗುವೆನು  ನಾನು ಎನ್ನ ಗುರುವಿನ ಪದಕಮಲ ಕಾಯ್ವ ಸೇವಕನಾಗುವೆನು
ಸೇವೆಯ ಮಾಡುವೆನು ಗುರುವಿನ ಪಾದದೂಳಿಯ ಕಣವಾಗುವೆನು|

ಎನ್ನ ಅಂತರಂಗದಿ ನೆಲೆ ನಿಲ್ಲೆನುತ ಬಕುತಿಯ ಕಾಯಕದ  ಸೇವೆ ನೀಡುವೆನು
ಮನದ ಬಕುತಿಯ ಭಾವಗಳ ಮಾಲೆ  ಮಾಡಿ ಗುರುವಿನ ಪದಕರ್ಪಿಸಿ ಸೇವೆಗೈವೆನು|

ಪಾಮರನಾನು ತೊದಲು ನುಡಿಗಳಾಡುತ ಮನ ಬಂದಂತೆ ಪಾಡುತ ನಿನ್ನ ಪಾದವ ಕಾಯುವೆನು
ಸನಿಹದಿ ಹರಿವ ನೀರನೆ ಗಂಗೆಯೆನುತ ನಿನ್ನ ಪಾದ ಪದ್ಮಗಳ ತೊಳೆದು ಸೇವೆ ಮಾಡುವೆನು|

ದೊರೆವ ಪುಷ್ಪವನೆ ಜಾಜಿ ಮಲ್ಲಿಗೆ ಎನುತ ನಿನ್ನ ಪಾದ ಕಮಲಕರ್ಪಿಸಿ ಸೇವೆ ಎನ್ನುವೆನು
ಸುಗಂಧ ದ್ರವ್ಯಗಳ ಮನದಿ ಕಲ್ಪಿಸಿ ಪಾದವ ತೊಳೆದು ಶುದ್ಧ ಭಾವದಿ ಸೇವೆ ನೀಡುವೆನು|

ಮೂಡುವ ಮಲಿನ ಭಾವಗಳ ದಮನ ಮಾಡೆನ್ನುತ ಕೂಗಿ ಬೇಡುವ ಸೇವಕನಾಗಿಹೆನು
ಮಧುರ ಮಾತುಗಳ ಕಪಟ ಆಟಗಳ ಬದುಕು ಬೇಸತ್ತು ನಿನ್ನ ಪಾದ ಪಿಡಿವೆನು|

ಸಖರಾಯಧೀಶನೆ ನಿನ್ನ ಮನ ಒಪ್ಪಿದರೆ ಎನ್ನ ಸೇವೆ ಸ್ವೀಕರಿಸಿ ಹರಸು ಎನ್ನನು
ಒಪ್ಪಿ ನೀ ಒಲಿದರೆ ಮುದದಿ ಶಿರವೆತ್ತಿ ಕೈ ಮುಗಿದು ನಿನ್ನ ದರುಶನವ ಬೇಡುತಿಹವೆನು|

Wednesday, September 9, 2020

ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು ಜಗದೊಡೆಯ ಅವನು
ತಡಮಾಡದೆ ಹರಸುವನು ಎಮ್ಮನು ಕರುಣಾಮಯ ಗುರುನಾಥನು|

ತಾನಿರುವ ಅನುಭವವ ಕಾಣದಿರು ನೀಡುತ ಗುರುವು ಸಲಹುವನು 
ನೆರಳಂತೆ ಹಿಂಬಾಲಿಸುತ ಜತನದಿ ಕಾಯುತ ಕೈ ಹಿಡಿದು ನಡೆಸುವನು|

ಮುಸುಕು ತುಂಬಿದ ಬಾಳಿನೊಳು ಆಶಾ ಕಿರಣದ ಬೆಳಕ ನೀಡುತ ಪೊರೆಯುವನು
ಮನದೊಳಿಹ ಅಲ್ಪ ಭಾವಗಳ ಅಳಿಸಿ ಜಗದರಿವ ನೀಡಿ ಕರುಣಿಸುವನು|

ಚಂದದಿ ಬದುಕಿನರ್ಥವ ತಿಳಿಸಿ  ಸ್ವಾರ್ಥವನಳಿಸಿ ಬದುಕು ಹಸನಾಗಿಸುವನು
ಅನ್ಯರ ನೋವನು ಕ್ಷಣದಿ ಪರಿಹರಿಸಿ ಮಾದರಿಯ ಬದುಕು ನೆಡೆಸೆನ್ನುವನು|

ನಿತ್ಯವೂ ಬದುಕೊಂದು ಯಜ್ಞವೆನುತ ಸಾಧಿಸಿ ಗುರುವು ದಾರಿ ದೀಪವಾಗಿಹನು
ಹಣದಾಸೆಯ ಮೋಹದ ಬಲೆಯ ಕಿತ್ತೊಗೆದು ನಂಬಿದವರ ಪೊರೆಯುತಿಹನು|

ಮಂತ್ರ ತಂತ್ರದ ಅರಿವಿಲ್ಲದ ಪಾಮರ ಬಕುತ  ನಾನೂ ನಿನ್ನ ಸ್ಮರಿಸೆ ಅಭಯ ಪಡೆವೆನು
ಸಖರಾಯಪುರದ ಮಹದೇವನವನು ಗುರುವು ಬಕುತರ ಭಗವಂತನವನು|