ಒಟ್ಟು ನೋಟಗಳು

Sunday, January 10, 2021

ಶರಣು ಶರಣು ಓ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಶರಣು ಶರಣು ಓ ಗುರುವೇ ನಿನಗೆ ಶರಣು ಶರಣು
ಪಾದಾರವಿಂದವ ನೆನೆದು ಗುರುವೇ ಶರಣು ಶರಣು|

ಎನ್ನ ಉದ್ಧಾರಕೂ ಎನ್ನ ನಿತ್ಯ ಜೀವನಕು ನೀನೇ ಕಾರಣನು ನಿನಗೆ ಶರಣು
ನಾ ಬರೆವ ಪದಗಳ ಮಾಲೆಗೆ ನಿನ್ನೊಲುಮೆಯೇ ಕಾರಣವೂ ನಿನಗೆ ಶರಣು|

ನಸುಕಿನಲಿ  ಬದುಕು ಆರಂಭಿಸೆ ನಿನ್ನ ಕೃಪೆಯಲಿ ದಿನವ ಮುಗಿಸುವೆ ನಿನಗೆ ಶರಣು
ನಿನ್ನೊಲುಮೆಯು ದಾರಿ ಸುಗಮಗೊಳಿಸೆ ಇನ್ನೇನು ಬೇಕೆನಗೆ ನಿನಗೆ ಶರಣು|

ನೀನಡೆವ ನೆಲದ ಪಾದ ಧೂಳಿಯ ತಿಲಕವೆನುತ ಶಿರದಿ ಧರಿಸಿ   ಎನ್ನುವೆ ಶರಣು
ನಿನ್ನ ನುಡಿ ಮುತ್ತುಗಳ ಆಲಿಸಿ ಮೈ ಮರೆವೆನು ನಿನಗೆ ಶರಣು ಶರಣು|

ಎಲ್ಲರಲೂ ನಿನ್ನ ಕಾಣುವ ಹಂಬಲ ಒಮ್ಮೆ ದರುಶನ ನೀಡೋ ನಿನಗೆ ಶರಣು
ಎನ್ನ ಪಾಪಗಳ ಮರೆತು ಮುನಿಸು ತೋರದೆ ಎನ್ನ ಹರಸೋ ನಿನಗೆ ಶರಣು|

ಲೌಕಿಕದ ಹಪಾಹಪಿಯ ನಡುವೆ ನಿನ್ನ ನೆನೆವ ಬುದ್ದಿ ನೀಡಿ ಎನ್ನ ತಿದ್ದೋ ನಿನಗೆ ಶರಣು
ಸಖರಾಯಪುರವೆಂಬ ದಿವ್ಯ ಮಣ್ಣಿನಲಿ ಜನಿಸಿಹ ನಿನಗೆ ಶರಣು ಶರಣು|

Monday, January 4, 2021

ನನ್ನೊಡೆಯನ ಏನೆಂದು ಬಣ್ಣಿಸಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನನ್ನೊಡೆಯನ ಏನೆಂದು ಬಣ್ಣಿಸಲಿ ಪದಕೂ ಸಿಗನು ಊಹೆಗೂ ನಿಲುಕನು ಅವನೂ
ಬಾನೆತ್ತರಕೆ ಬೆಳದಿಹ ಕರುಣಾ ಮೂರುತಿ ನನ್ನ ಒಡೆಯನು  ಗುರುವರನು|

ಸಖರಾಯಪುರವೆಂಬ ಪುಣ್ಯ ಭೂಮಿಯೊಳು ಜನಿಸಿ ಎಲ್ಲರ ಹೃದಯದಲಿ ನಿಂತನೋ
ದೇಹಿ ಎಂದು ಬಂದವರ ಭವಣೆಗಳ ಪರಿಹರಿಸಿ ಅಭಯವನಿತ್ತು ಸಲಹಿದನೋ|

ಕೀರುತಿಯ ಬಯಸದೆ ಪ್ರತಿಫಲ ಬಯಸದೆ ತನ್ನದನೆ ಹಂಚಿ ಸುಮ್ಮನಿದ್ದನೋ
ನೀಡುವುದು ತಾನಾದರೂ ತನಗರಿವಿಲ್ಲದಂತೆ ತೋರಿ ದಾರಿ ದೀಪವಾದನೋ|

ಎಲ್ಲವನು ಮೀರಿ ಮನದ ಅಳತೆಗೂ ಸಿಗದ ಸಾಧಕನು ನನ್ನ ಸದ್ಗುರುನಾಥನು
ಎಲ್ಲವನು ಮಹಾದೇವನಿಗೆ ಅರ್ಪಿಸುತ ಗುರುಒಬ್ಬನೇ ಮೇಲೆಂದನೋ|

ಆಶ್ರಮವೆಂಬ ಶ್ರಮವ ಬಯಸದೆ ಇಡೀ ಜಗವನೇ  ಕರ್ಮಭೂಮಿ ಮಾಡಿಕೊಂಡನೋ
ಸಮಸ್ಟಿಸ್ಥಿತಿ ತಲುಪಿ  ಎಲ್ಲರಿಗೂ ಅದರರಿವು ಮೂಡಿಸಿ ಬಕುತರ ಹರಸಿದನೋ|

ಅದೇನೋ ಭಾವವು ಮನತುಂಬಿ ಬರಲು ಗುರುನಾಥನ ಸದಾ ನೆನೆವೆನೋ
ಸಾಖರಾಯಧೀಶ ಸದ್ಗುರೂನಾಥ ಎನ್ನ ಜೊತೆಯಿದ್ದು ಹರಸುವನೋ|

ಶ್ರೀನಿವಾಸ ಶಾರದಮ್ಮರ ಕಂದನಾಗಿ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಶ್ರೀನಿವಾಸ ಶಾರದಮ್ಮರ ಕಂದನಾಗಿ
ಕೃಷ್ಣಯೋಗೀಶ್ವರರ ಅವತಾರವಾಗಿ |
ಭಕ್ತಜನರ ಉದ್ಧಾರಕ್ಕಾಗಿ  
 ಧರೆಗವತರಿಸಿದೆ ಮಾರ್ಗಶಿರಬಹುಳಷಷ್ಠಿಯಂದು || 

ಕಾಯಕದಲ್ಲೇ ತೃಪ್ತಿಯ ಕಾಣುತ್ತಾ
ಎಲ್ಲರಲ್ಲೂ ಭಗವಂತನ ನೋಡುತ್ತಾ |
ಮಿತಭಾಷೆಯ ಆಭರಣವ ತೊಡುತ್ತಾ 
ಜೀವಜಂತುಗಳಲಿ ಸಮತೆಯನರಸುತ್ತಾ || 1 ||

ಮೌನದ ಸಾಧನೆಯ ನಡೆಸುತ್ತಾ
ಕೃಷ್ಣಯೋಗೀಶ್ವರರ ಸಾನಿಧ್ಯದಿ ಜಪವ ಮಾಡುತ್ತಾ |
ಶೃಂಗೇರಿ ಜಗದ್ಗುರುಪೀಠಕ್ಕೆ ಭಕ್ತಿಯಲಿ ನಮಿಸುತ್ತಾ
ಆತ್ಮಜ್ಞಾನದ ಬೆಳಕಲಿ ಮೀಯುತ್ತಾ || 2 ||

ವೇದಾರ್ಥಗಳನು ಸುಲಭವಾಗಿ ತಿಳಿಸುತ್ತಾ
ಎರಡಿಲ್ಲದಂತೆ ಬದುಕಬೇಕೆಂಬುದ ಹೇಳುತ್ತಾ |
 ಮೂಕನಿಗೂ ವಾಗ್ದೇವಿಯ ಅಮೃತವನುಣಿಸುತ್ತಾ 
ಸಾಧಕರ ಹೃನ್ಮನಗಳಲಿ ವಾಸ ಮಾಡುತ್ತಾ || 3 ||

|| ಸರ್ವದಾ ಸದ್ಗುರುನಾಥೋ ವಿಜಯತೇ ||
5-1-2021