ಒಟ್ಟು ನೋಟಗಳು

Tuesday, February 22, 2022

ಮರೆತು ಹೋಯಿತು ನಿನ್ನ ಇರುವಿನ ಅರಿವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮರೆತು ಹೋಯಿತು ನಿನ್ನ ಇರುವಿನ ಅರಿವು ಹಾದಿ ತಪ್ಪಿತು ಎನ್ನ ಬದುಕಿನ ಗುರಿಯು
ತಾಳ ತಪ್ಪಿದ ಭಾವವಿಲ್ಲದ ಬರೀ ನೋವುಗಳ ಗೂಡಾಯಿತು ಎನ್ನ ಮನವು|

ಬಕುತನ ಸೋಗು ಧರಿಸಿ ಬಕುತಿಯ ವೇಷ ಧರಿಸಿ ನಿನ್ನ ಮುಂದೆ ನಿಲ್ಲುವುದುಂಟೆ ನಾನು
ಬರೀ ಒಣ ಪದಗಳ ಬಳಸಿ ನಿನ್ನ ಜಪಿಸುವೆನೆನುತ ಕಾಲ ಕಳೆದು ಮೂಡನಾದೆ ನಾನು|

ನೀನೇ ಎಲ್ಲವೂ ಎನುತ ನಿಜ ಬಕುತಿಯನೇ ಮರೆಯುತ ನಾಟಕವಾಡಿಹೆನು ನಾನು
ಕಳ್ಳ ಮನಸ್ಸಿನೊಳು ಪೊಳ್ಳು ಭಾವವ ತುಂಬಿ ಮಳ್ಳನಂತೆ ಬೇಡುತಿಹೆನು ನಾನು|

ಬದುಕಿನ ಬೇಗೆಯನು ತಾಳಲಾರದೆ ನಿಜ ಬಕುತಿಯ ಮಾಡದೆ ನಿನ್ನ ಕಾಡುತಿಹೆನೋ
ಅನ್ಯರ ಸಹಿಸದೇ ಸ್ವಾರ್ಥದಿ ದುರಾಸೆಯ ಬಲೆಯಲಿ ಸಿಲುಕಿ ಬಳಲಿಹೆ ನಾನು|

ಇನ್ನೆಷ್ಟು ಕಾಯಿಸುವೆ ಇನ್ನೆಷ್ಟು ದೂರ ಇಡುವೆ ಮನವ ಮರ್ದಿಸದೆ ಇನ್ನೆಷ್ಟು ಕಾಡುವೆ
ಓ ನನ್ನ ಪ್ರಭುವೇ ನೀನಲ್ಲದೇ ಇನ್ಯಾರು ಪೊರೆವರು ಎನ್ನನು ಮನ್ನಿಸೋ ಸಖರಾಯದೊರೆಯೇ|