ಒಟ್ಟು ನೋಟಗಳು

Monday, May 28, 2018

ಗುರುನಾಥ ಗಾನಾಮೃತ 
ಲಾಲಿ ಹಾಡುವೆ ಮಲಗು ಬಾರೊ ಮಗುವಾಗಿ
ರಚನೆ: ಅಂಬಾಸುತ 


ಲಾಲಿ ಹಾಡುವೆ ಮಲಗು ಬಾರೊ ಮಗುವಾಗಿ
ಲೀಲೆ ತೋರಿಹ ಅವಧೂತನೆ ಎನ್ನೊಡಲೊಳು ನಗುವಾಗಿ ||ಪ||

ಭಕ್ತ ಜನರಿಗೆ ಮಾತೆಯಾಗಿ ಮಮತೆಯುಣಿಸಿದೆ
ಕಷ್ಟಕಾಲದಿ ಕರಪಿಡಿದು ಕಣ್ಣೀರು ಒರೆಸಿದೆ
ಇಷ್ಟು ದಣಿದಿಹ ಧಣಿಯೆ ನಿನಗೆ ನಾನೀಗಾ
ಪಾದವೊತ್ತಿ ಪವಡಿಸೆನ್ನುವೆ ಬಾ ಬೇಗಾ ||೧||

ಜಗಕೆ ಅನ್ನವ ಇತ್ತವನೆ ನಿನಗೆ ನಾನೀಗ
ತುತ್ತು ಮಾಡಿ ಉಣಿಸುವೆ ಪರಮಾನ್ನವ
ಕಷ್ಟ ಹರಿಸುವ ದೊರೆಯೆ ನಿನಗೆ ದೃಷ್ಟಿ ತೆಗೆದು
ಇಷ್ಟದಿಂದಲಿ ಈಶ್ವರ ನೀನೇ ಎಂದು ||೨||

ಸಖರಾಯಪಟ್ಟಣದ ಗುರುನಾಥನೇ
ನಿಜಸುಖವೀವಾ ಅವಧೂತನೇ
ಅಂಬಾಸುತನಾ ಮಡಿಲೇರು ಬಾರೊ
ಈ ಲಾಲೀಯ ಕೇಳುತ ಮಲಗು ಬಾರೊ ||೩||

Sunday, May 27, 2018

ಗುರುನಾಥ ಗಾನಾಮೃತ 
ದೇವದೇವನೇ ಸಖರಾಯಾಧೀಶನೇ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ದೇವದೇವನೇ ಸಖರಾಯಾಧೀಶನೇ 
ದಾರಿತೋರೆಮಗೆ ಅನವರತ ಅವಧೂತನೇ ||

ಈ ಮನೆಯ ನೀನೆಲೆಸೋ ಗುಡಿಯಾಗಲಿ
ಈ ಪದವು ನಿನ್ನ ಜಪಿಸೋ ಹಾಡಾಗಲಿ  |
ಗುರುಭಕ್ತಿ ಮನದಲ್ಲಿ ಸದಾ ಹಸಿರಾಗಿರಲೀ 
ಗುರುಸೇವೆಗೆ ಸತತವೂ ಸಿದ್ಧವಾಗಲೀ || ೧ ||

ಕಾಯುತಿಹೆ ನಿನ್ನಾಗಮನಕೆ ಪ್ರತಿ ಕ್ಷಣವೂ
ಜಪಿಸುತಿಹೆ ನಿನ್ನ ನಾಮವೇ ಅನುಕ್ಷಣವೂ |
ಗುರುತತ್ತ್ವವು ಹೃದಯದಲಿ ಅಚ್ಚೊತ್ತಿರಲಿ
ಗುರುವಾಕ್ಯಗಳ ಸದಾ  ಅನುಸರಣೆಯಿರಲೀ || ೨ ||

ನಿನ್ನ ಹಾರೈಕೆಯೇ ನಮ್ಮ ಬದುಕು‌‌
ನಿನ್ನ ಸಂತೋಷವೇ ನಮಗೆ ಬೆಳಕು |
ಗುರುನಿಷ್ಠೆಯು ಸದಾ ಎನ್ನ ಜೊತೆಯಿರಲಿ 
ಗುರುಪಾದದಲಿ ಮನವೆನ್ನ ಲೀನವಾಗಲಿ || ೩ ||

Saturday, May 26, 2018

ಗುರುನಾಥ ಗಾನಾಮೃತ 
ಹರಸುವ ಹರನೇ ಬಂದ ಭುವಿಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಹರಸುವ ಹರನೇ ಬಂದ ಭುವಿಗೆ
ಹರನೇ ನರನಾಗಿ ಬಂದ ಧರೆಗೆ |
ಆ ನರನೇ ಗುರುವಾಗಿ ಒಲಿದ ಮನೆಗೆ 
ಗುರುವೇ ಆನಂದ ತಂದ ಬಾಳಿಗೆ ||

ಮಾತೆಯ ಮಮತೆಯ ತೋರುತಾ
ನಗುತಲೆ ತಪ್ಪನು ತಿದ್ದುತಾ |
ಜನರ ಮುಗ್ಧಭಕ್ತಿಯಾ ನೋಡುತಾ
ಭಕ್ತರ  ಸಂಕಷ್ಟಗಳ ಪರಿಹರಿಸುತಾ || ೧ ||

ಮನಶುದ್ಧಿಯಿಂದ ಬಾಳುವೆ ಮಾಡಿರೆನ್ನುತಾ
ಒಮ್ಮನದಿಂದ ಗುರುವನು ಸೇವಿಸಿರೆನ್ನುತಾ |
ಭಾವಶುದ್ಧಿಯಲಿ ಬದುಕನು ಕಳೆಯಿರೆನ್ನತಾ 
ಕರ್ತವ್ಯದಲ್ಲಿ ದೈವವನು ಕಾಣಿರೆನ್ನುತಾ || ೨ ||

ಸಾತ್ವಿಕರಲ್ಲಿ ನಾನಿಹೆ ಎನ್ನುತಾ
ದುರುಳರಿಗೆ ಮನವ ಶುದ್ಧಿಮಾಡಿರೆನ್ನುತಾ |
ಭವದ ಬದುಕನು ಭಕ್ತಿಯ ತೈಲದಿ ಉರಿಸಿರೆನ್ನುತಾ
ಆತ್ಮಸಾಕ್ಷಾತ್ಕಾರದ ‌ದಾರಿಯ ತೋರುತಾ || ೩ ||
ಗುರುನಾಥ ಗಾನಾಮೃತ 
ವೇಂಕಟಾಚಲನೆಂಬೊ ಗುರು ಸಂಕಟ ಹರಿಸಲು ಬಂದಾನೊ
ರಚನೆ: ಅಂಬಾಸುತ 


ವೇಂಕಟಾಚಲನೆಂಬೊ ಗುರು ಸಂಕಟ ಹರಿಸಲು ಬಂದಾನೊ
ಜಗಕಂಟಕರೆಲ್ಲರ ತುಳಿದಾನೊ ಸಖರಾಯಪುರದೊಳು ನಿಂತಾನೊ ||ಪ||

ಶ್ರೀನಿವಾಸ ಶಾರದಾಸುತನಾಗಿ ಭುವಿಯೊಳು ಜನಿಸ್ಯಾನೊ
ಭಾವಿಕ ಭಕುತರ ಭಾರವ ಕಳೆಯೇ ಭಗವಂತ ಹೀಗೆ ಇಳಿದ್ಯಾನೊ ||೧||

ನಕ್ಕಾನೊಮ್ಮೆ ಸಿಡಿದಾನೊಮ್ಮೆ  ಒಕ್ಕಲ ಮನಕೆ ವರವಾಗ್ಯಾನೆ
ಬೆಕ್ಕಸ ಬೆರಗಾಗೊ ಮಾತಾಡ್ಯಾನೆ ದತ್ತನಾಗಿಯೇ ತಾ ಕಂಡಾನೆ     ||೨||

ಸಾಧು ಪೂಜೆಯ ಮಾಡ್ಯಾನೊ ಸಜ್ಜನರ ಸಂಘವ ನೀಡ್ಯಾನೊ
ಲಜ್ಜೆ ಬಿಟ್ಟು ಭಜಿಸಿರಿ ಗುರು ಒಲಿವನು ನಿಮಗೆ ಎಂದಾನೊ ||೩||

ವೇದ ಬೋಧೆ ಮಾಡ್ಯಾನೊ ವಾದ ಬೇಡ ಎಂದಾನೊ
ಗಾದಿಗೆ ಎಂದೂ ಏರಾನೋ ಗುರು ಗೂಢ ತಿಳಿಯಿರಿ ಅಂದಾನೊ ||೪||

ಅಂಬಾಸುತನಾ ಮನದಾಗೆ ಎಂದೂ ಪದವಾಗಿ ನಲಿದು ಕುಣಿದ್ಯಾನೊ
ಪದಗಳ ಮೂಲಕ ಪಾದಪೂಜೆಯ ನಿತ್ಯ ಪಡೆಯುತ ಮೆರೆದಾನೊ ||೫||
ಗುರುನಾಥ ಗಾನಾಮೃತ 
ಸುಲಭಸಾಧ್ಯನು ಇವನು ಕಾಣಿರೊ
ರಚನೆ: ಅಂಬಾಸುತ 


ಸುಲಭಸಾಧ್ಯನು ಇವನು ಕಾಣಿರೊ
ಸಲಹುವನು ಇವನಲ್ಲಿ ಬೇಡಿರೊ
ಗುರುವರನು ಗುರುತರದ ಭಾಗ್ಯವನ್ನೀಯುವನೋ ||ಪ||

ಜಪವ ಕೇಳನೊ ತಪವ ಕೇಳನೊ
ಪೂಜೆಪುನಸ್ಕಾರವ ತಾನೆಂದು ಕೇಳನೊ
ಸತ್ಯಮಾರ್ಗದಿ ನೆಡೆಯೆ ನಿತ್ಯ ನಿರುತವು ಗುರುವು
ನಿನ್ನೊಡನೆ ಇರುವನೊ ನಿನ್ನನುದ್ಧರಿಸುವನೊ ||೧||

ಮಡಿಯ ಬೇಡನೊ ಮಾಲೆ ಬೇಡನೊ
ಆರತಿ ಗಂಧಾಕ್ಷತೆ ಬೇಡನೊ
ಭಕ್ತಿಯಾಳಕ್ಕಿಳಿದು ಸ್ಮರಿಸೆ ಗುರುವಾ
ಶಕ್ತಿ ನೀಡುವನೊ ನಿನಗೆ ಮುಕ್ತಿಯನ್ನೀಯುವನೊ ||೨||

ಪಾದಪೂಜೆ ಬದಲು ಪದಗಳಾ
ಪಾಲಿಸಿರಿ ಎನ್ನುವನೊ
ಪರಮಪುರುಷನೊ ಇವನು ಪರಮಾತ್ಮನೇ ಆಗಿಹನೊ
ಭುವಿಯ ಭಾರ ಇಳಿಸಲೆಂದೆ ತಾನವತರಿಸಿಹನೊ ||೩||

ಸಖರಾಯಪುರದ ಈ ಸಂತ ಮಹಾಂತ
ಸದ್ಭಕ್ತ ಪಾಲಕ ಅನಂತಾ
ಅಂಬಾಸುತನ ಅನವರತ ಆನಂದನೀತ
ಶ್ರೀವೇಂಕಟಾಚಲ ನಾಮಾಂಕಿತಾ||೪||

Thursday, May 24, 2018

ಗುರುನಾಥ ಗಾನಾಮೃತ 
ಸಖರಾಯಪುರದಿಂದಾ ಸದ್ಗುರು ಸಖರಾಯಪುರದಿಂದಾ
ರಚನೆ: ಅಂಬಾಸುತ 


ಸಖರಾಯಪುರದಿಂದಾ ಸದ್ಗುರು ಸಖರಾಯಪುರದಿಂದಾ
ಬಂದಾ ನೋಡಿರೊ ನಿಂದಾ ನೋಡಿರೊ
ಬೇಡಿದವರ ಮನೆ ಮುಂದೆ ತಾನಿಂದು ||ಪ||

ದಟ್ಟಿ ಸುತ್ತಿಕೊಂಡು ದಿಟ್ಟನಾಗಿ ತಾ
ಗಟ್ಟಿಯಾಗಿ ಪಾದ ಪಿಡಿದವರೆಡೆಗೆ
ಇಷ್ಟ ಪೂರೈಸುವೆ ಕಷ್ಟವ ಕಳೆಯುತಾ
ನಷ್ಟಾದ ಭಯವೇಕೆ ನಾನಿರುವೆ ಎನುತಾ ||೧||

ಆರನೇರಿದವ ಮೂರು ಮೀರಿದವ
ಘನ್ನಪೀಠದಿ ಗುಣಪೂರ್ಣನಾದವ
ಚಾತುರ್ತಾಶ್ರಮವ ಏರಿ ಕುಳಿತವ
ಚಿತ್ತದ ವಿತ್ತದ ಭ್ರಾಂತಿಯ ಕಳೆವವಾ ||೨||

ನೋಟದೆ ನಾಟುವ ಈಟಿಯ ಬೀಸುವವ
ಸತ್ಯಕೂಟದೆ ಸದಾ ವಿಹರಿಸುವವ
ಮನ ರೂಢಿಯ ರಾಡಿಯ ತೊಳೆದು ನಿಂತವ
ಲೋಕ ಗೂಢತೆ ಎಲ್ಲವ ಬಿಡಿಸಿ ತಿಳಿಸಿದವ ||೩||

ವೇಂಕಟಾಚಲನೆಂಬ ನಾಮದಿ ಇರುವವ
ಲೋಕ ಕಂಟಕಕೆ ವಿಷಕಂಠ ತಾನದವ
ಅಂಬಾಸುತನಾ ಅನವರತ ಕಾಯ್ದಿಹಾ
ಅವಧೂತ ಗುರುನಾಥ ಆದ್ಯಂತರಹಿತಾ ||೪||
ಗುರುನಾಥ ಗಾನಾಮೃತ 
ನೀ ‌ ಬಂದೆ ಗುರುನಾಥ ನಿನ್ನಯ ಮನೆಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ನೀ ‌ ಬಂದೆ ಗುರುನಾಥ ನಿನ್ನಯ ಮನೆಗೆ
ನೆನೆದರೇ ಸಂತೋಷ ನಮ್ಮಯ ಮನಕೆ ||

ಮಧುರ ಮಲ್ಲಿಗೆಯ ರೂಪವಾಗಿ
ಮನದ ಭಾವದ ಬಿಂಬವಾಗಿ |
ಗುರುವಾಕ್ಯಕೆ ಒಲಿದ ಬಂಧುವಾಗಿ
ಜನ್ಮಜನ್ಮಗಳ ಪುಣ್ಯದ ಫಲವಾಗಿ ||೧ ||

ನಿರ್ಮಲ ಭಕುತಿಗೆ ನೀ ಒಲಿದೆ
ಪರಾಜ್ಞಾನವ ನೀಡಲು ನೀ ಬಂದೆ |
ಭವದಿ ಕನಿಕರಿಸಿ ಕೈಹಿಡಿದೆ 
ಮುಕ್ತಿಯ ಮಾರ್ಗವ ನೀ ತೋರಿದೆ || ೨ ||

ಜನ್ಮಜನ್ಮಗಳ ತಪಸಿನ ಫಲವೋ
ತಾಯ್ತಂದೆಯರು ಮಾಡಿದ ಪುಣ್ಯವೋ |
ಬಹುದಿನದ ನಿರೀಕ್ಷೆಯ ಕಾರಣವೋ
ಶರಣಾಗತಿಯ ಕಣ್ಣೀರಿಗೆ ಸಂದ ವರವೋ || ೩ ||

Tuesday, May 22, 2018

ಗುರುನಾಥ ಗಾನಾಮೃತ 
ಅರಿವು ನೀಡೊ ಗುರುವು ಬಂದಾ ಅರಿತು ನೆಡೆಯಿರೊ
ರಚನೆ: ಅಂಬಾಸುತ 


ಅರಿವು ನೀಡೊ ಗುರುವು ಬಂದಾ ಅರಿತು ನೆಡೆಯಿರೊ
ಮರೆತು ಮರೆವು ಎನ್ನದಿರಿ ಗುರುವ ಅರಿಯಿರೊ ||ಪ||

ಆಡಂಬರದ ಪೂಜೆ ಬಿಟ್ಟು  ಆರತಿ ಮಾಡಿರೊ
ನಿರ್ಮಲ ಮನದಿ ಅವನ ಚರಣಕ್ಕೆರಗಿ ನಮಿಸಿರೊ ||೧||

ಆತ್ಮೋದ್ಧಾರದ ವರವ ಬೇಡಿ ಆನಂದ ಪಡೆಯಿರೊ
ಶಂಕೆ ಬಿಟ್ಟು ಶರಣು ಎನುತ ಅವನ ಭಜಿಸಿರೊ ||೨||

ತಮವ ಕಳೆವ ಜ್ಯೋತಿ ರೂಪ ಗುರುವು ಕಾಣಿರೊ
ತನ್ಮಯದಿ ಕೂಗೆ ಓಡಿ ಬರುವ ನೋಡಿರೊ ||೩||

ಹರಿಯು ಹರನು ಅಜನು ಭವನು ಗುರುವು ನಮಿಸಿರೊ
ಭಕ್ತಿ ಇತ್ತು ಮುಕ್ತಿವೀವ ಗುರುವ ಸ್ಮರಿಸಿರೊ ||೪||

ನಿಜಾನಂದ ನೀಡುವನು ಗುರುವು ಹರಸುತಾ
ನಾವೀಕನಾಗಿ ಭವ ಸಾಗರ ದಾಟಿಸುತಾ ||೫||

ಸಖರಾಯಪುರವಾಸಿ ಗುರುವಾ ಬೇಡಿರೊ
ಅಂಬಾಸುತನ ಪೊರೆವಾತನ ನಿತ್ಯ  ಕಾಣಿರೊ ||೬||
ಗುರುನಾಥ ಲೀಲಾಮೃತ 
ಸದ್ಗುರುವೇ ತಾಯಿ
ರಚನೆ: ಅಂಬಾಸುತ 


ಆಕೆ ಅಖಂಡವಾಗಿ ಹಲವಾರು ವರ್ಷಗಳಿಂದ ಸದ್ಗುರು ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಳು. ಗುರುನಾಥನೇ ಸರ್ವಸ್ವ ಎಂದುಕೊಂಡವಳು. ಮದುವೆಯಾಗಿ ಹಲವಾರು ವರ್ಷಗಳೇ ಕಳೆದರೂ ಆಕೆಗೆ ಸಂತಾನ ಭಾಗ್ಯವಿರಲಿಲ್ಲ. ಈ ನೋವು ಆಗಾಗ ಕಾಡುತ್ತಿದ್ದರೂ ಸಹಾ ಆಕೆ ಗುರುಸೇವೆಯಲ್ಲಿ ಅದನ್ನು ಮರೆಯುತಿದ್ದಳು. ಒಮ್ಮೆ ಆಕೆಯ ಜೊತೆಗಾರರು " ನೀನು ಇಷ್ಟೊಂದು ಭಕ್ತಿಯಿಂದ ಗುರುಸೇವೆ ಮಾಡಿತ್ತಿದ್ದೀಯಲ್ಲಾ, ಆ ಗುರುನಾಥನನ್ನೇ ಕೇಳು, ನನ್ನನ್ನು ಅನುಗ್ರಹಿಸು ಎಂದು" ಎನ್ನುತ್ತಾರೆ. ಏನೇ ಆದರೂ ಹೆಣ್ಣಿಗೆ ತಾಯ್ತನದ ಬಯಕೆ ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ, ಹಾಗು ಹೋಗುವುದೂ ಇಲ್ಲ. ಈಕೆಯೂ ನಿಜ ನಾನ್ಯಾಕೆ ನನ್ನ ಗುರುನಾಥರಲ್ಲಿ ಇದನ್ನು ಬೇಡಬಾರದು ಎಂದು ಗುರುನಾಥರಿದ್ದಲ್ಲಿಗೆ ಹೋಗುತ್ತಾಳೆ.

ಈಕೆಯನ್ನು ಕಂಡೊಡನೆ ಆ ಗುರುನಾಥನು, " ಅಮ್ಮಾ ಬಾ , ನಾನೂ ನಿನ್ನ ಮಗನೇ ಅಲ್ವಾ" ಎಂದು ಮಗುವಿನಂತೆ ಮುದ್ದಾಗಿ ಮಾತಾಡುತ್ತಾರೆ. ಈಕೆಯ ಆನಂದಕ್ಕೆ ಪಾರವೇ ಇಲ್ಲದಂತಾಗುತ್ತದೆ. ಗುರುನಾಥನೇ ನನ್ನನ್ನು ತಾಯಿ ಅಂದ ಮೇಲೆ, ಇದಕಿಂತ ಸೌಭಾಗ್ಯ ನನಗೆಲ್ಲಿ, ನಾನೇ ಪುಣ್ಯವತಿ, ನಾನೇ ಪುಣ್ಯವತಿ ಎನ್ನುತ್ತಾ ಆನಂದಾಶ್ರುಗಳನ್ನು ಸುರಿಸುತ್ತಾ ಗುರುನಾಥನಿಗೆ ನಮಸ್ಕರಿಸುತ್ತಾಳೆ.

ಗುರುಶಿಷ್ಯರ ನಡುವೆ ಮಾತು ಇರಲೇ ಬೇಕೆಂದಿಲ್ಲ, ಭಾವ ಸಂವಹನ ಇಲ್ಲಿ ಸೇತುವೆಯಾಗಿರುತ್ತದೆ. ಮತ್ತು ಶಿಷ್ಯನ ಪ್ರಶ್ನೆಗಳಿಗೆ ಅವನ  ಹೃದಯದೊಳಗೇ ಕುಳಿತು ಗುರು ಉತ್ತರಿಸುತ್ತಾನೆ. ಅಂತಃಶ್ರದ್ಧೆ ಇರಬೇಕಷ್ಟೇ....


ಸದ್ಗುರು ಚರಣಾರವಿಂದಾರ್ಪಣಮಸ್ತು

Monday, May 21, 2018

ಗುರುನಾಥ ಗಾನಾಮೃತ 
ಗುರುನಾಥ ನೀ ಬೆಳಗಿದೆ ಈ ಬಾಳನು
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುನಾಥ ನೀ ಬೆಳಗಿದೆ ಈ ಬಾಳನು
ಮಾತೆಯಾಗಿ ನೀ ಸಲಹಿದೆ ನಮ್ಮನು ||

ಅಜ್ಞಾನದ ಅಂಧಕಾರದಿ ನಾ ಅಡಗಿದ್ದೆ
ಮೋಹದಾ ಮುಸುಕಿನಲಿ ನಾ ಮುಳುಗಿದ್ದೆ |
ಮಿಂಚಾಗಿ ಬಂದೆ ನೀ ನನ್ನ ಮನದಲಿ
ಆಸರೆಯಾಗಿ ನಿಂತೆ ಜೊತೆಯಲಿ || ೧ ||

ಕಲೆತೆ ನಮ್ಮ ವಾಗರ್ಥಗಳಲಿ
ಬೆರೆತೆ ನನ್ನ ಮನೆಮನಗಳಲೀ |
ಬೆಳಗಿದೆ ಸುಜ್ಞಾನದಾ ಜ್ಯೋತಿಯ
ತೋರಿಸಿದೆ ಅರಿವಿನಾ ಮನೆಯ  || ೨ ||

ಅಮಿತಜ್ಞಾನದಾ ಆಗರವಾಗಿಹೆ
ಸ್ವಾತ್ಮಬೋಧದ ಬೋಧಕವಾಗಿಹೆ |
ಮನೋವ್ಯಾಪಾರದಾ ದರ್ಪಣವಾಗಿ
ಆತ್ಮಜ್ಞಾನಪಡೆಯಲು  ಸ್ಫೂರ್ತಿಯಾಗಿ || ೩ ||
ಗುರುನಾಥ ಗಾನಾಮೃತ 
ಪಾಲಿಸಿ ಅವನಾ ಪದಗಳನು
ರಚನೆ: ಅಂಬಾಸುತ 


ಪಾಲಿಸಿ ಅವನಾ ಪದಗಳನು
ಪೂಜಿಸಿರೆಮ್ಮ ಗುರುನಾಥನಾ ||ಪ||
ಪರಮಪಾವನ ಪುಣ್ಯ ಪುರುಷನಾ
ಪರಂಧಾಮ ಅವಧೂತನಾ ||ಅ.ಪ||

ಮಾತಾಪಿತರೆ ಮಹಾದೇವ ದೇವಿಯರು
ಗುರುಹಿರಿಯರೆ ಪರಬ್ರಹ್ಮ ಸ್ವರೂಪರು
ಗುರುತರ ಭಾಗ್ಯವಿದು ಸೇವಿಸೊ ಅವರನು
ಎನುತ ಎಮ್ಮನುದ್ಧರಿಸಿಹ ಗುರುವರನು ||೧||

ಬಯಸಬೇಡ ಭಾವ ಹೊರಹಾಕಬೇಡ
ಆಡಬೇಡ ಮೌನ ನೀ ಬಿಡಬೇಡ
ಹೇಳಬೇಡ ಕಲಿವುದ ನಿಲಿಸಬೇಡ
ಎನುತ ಎಮ್ಮನುದ್ಧರಿಸಿಹ ಗುರುವರನು ||೨||

ನುಡಿಯೊಳು ಮಡಿ ಇರಲಿ ಸದಾ
ಮನದೊಳು ದೈವದ ಗುಡಿ ಇರಲಿ
ದೇಹ ಗುರುವಲ್ಲ ದಾಹ ತರವಲ್ಲ
ಎನುತ ಎಮ್ಮನುದ್ಧರಿಸಿಹ ಗುರುವರನು ||೩||

ಇಚ್ಚೆ ಅವನದು ಚರ್ಚೆ ಅವನದು
ಸ್ವೇಚ್ಚೆಯಿಂದಲಿ ನೀನಿರಬೇಡ
ಕೂಡಿಡಬೇಡ ಅದ ಕೆಡಿಸಬೇಡ
ಎನುತ ಎಮ್ಮನುದ್ಧರಿಸಿಹ ಗುರುವರನು ||೪||

ಕರ್ಮದ ಮರ್ಮವ ನೀನರಿಯೊ
ಧರ್ಮದಿಂದಲೇ ನೀ ನೆಡೆಯೊ
ಶರ್ಮತನದ ಶಕ್ತಿಯ ಅನುಭವಿಸೋ
ಎನುತ ಎಮ್ಮನುದ್ಧರಿಸಿಹ ಗುರುವರನು ||೫||

ಸಖರಾಯಪಟ್ಟಣದ ಗುರುನಾಥ
ಅಂಬಾಸುತನ ಅನವರತ ಪೊರೆವಾತ
ನಿಜಧಾತ ಮುಕ್ತಿದಾತ ಈತ ಶಕ್ತಿಧಾತ
ಅವಧೂತ ಗುರುನಾಥ ಸದ್ಗುರುನಾಥ ||೬||
ಗುರುನಾಥ ಗಾನಾಮೃತ 
ಅತಿಷಯ ಪ್ರೇಮದಿ ಆದರದಿಂದಲಿ ಕೂಗಿಹೆ ಬಾರೊ ಅವಧೂತ
ರಚನೆ: ಅಂಬಾಸುತ 


ಅತಿಷಯ ಪ್ರೇಮದಿ ಆದರದಿಂದಲಿ ಕೂಗಿಹೆ ಬಾರೊ ಅವಧೂತ
ಆದ್ಯಂತರಹಿತ ಅಪ್ರಮೇಯ ಆನಂದ ರೂಪ ನೀ ಅವಧೂತ ||ಪ||

ಅಹಂಕಾರದ ಅಜ್ಞಾನವನು ಅಳಿಸಲು ಬಾರೋ ಅವಧೂತ
ಸೋಹಂ ಪದವಾ ಮನದೊಳು ನಿಲಿಸಿ ಉದ್ಧರಿಸೆಮ್ಮನು ಅವಧೂತ ||೧||

ಅಂತರಂಗದ ಅರಿಗಳನೆಲ್ಲಾ ದೂರ ಮಾಡೊ ನೀ ಅವಧೂತ
ಸಂಭ್ರಮದಿಂದಲಿ ಸಡಗರದಿಂದಲಿ ನೀನೆಲೆಸಲ್ಲಿ ಅವಧೂತ ||೨||

ಅಣು ಅಣುವಿನಲೂ ಕಣಕಣದಲ್ಲೂ ನೀ ಕಾಣೆನಗೆ ಅವಧೂತ
ಅಚ್ಯುತ ಅನಂತ  ಅಜ ಹರ ನೀನೆಂದು ಭಜಿಸುವೆ ನಿತ್ಯ ಅವಧೂತ ||೩||

ಸತ್ಯ ಮಿಥ್ಯದಾ ಭೇಧವ ತೋರಿ ಸಲಹೋ ಎಮ್ಮನು ಅವಧೂತ
ಸಹನೆ ಸರಳತೆ ತುಂಬಿಹ ಬದುಕನು ಎಮಗೀಯೋ ನೀ ಅವಧೂತ ||೪||

ಸಂತ ಸಂಘ ಸಜ್ಜನರ ಸ್ನೇಹ ಗುರು ಹಿರಿಯರ ಸೇವೆಯ ಅವಧೂತ
ನಿರುತವು ನಿರ್ಮಲ ಮನದಲಿ ಮಾಡುವ ಭಕುತಿಯ ನೀಡೊ ಅವಧೂತ ||೫||

ನೀಡೊ ಮನವ ನೀ ನೀಡೊ ಕಾಡುತಾ ಬೇಡುವೆ ನಿನ್ನಲಿ ಅವಧೂತ
ಅಂಬಾಸುತನ ಅರಿವಿನದೊರೆ ಸಖರಾಯಪುರವಾಸಿ ಅವಧೂತ ||೬||

Saturday, May 19, 2018

ಗುರುನಾಥ ಗಾನಾಮೃತ 
ತಡಮಾಡದೆ ನಡಿ ಗುರುಮನೆಗೆ
ರಚನೆ: ಅಂಬಾಸುತ 


ಹೆಕ್ಕಬೇಡ ಹುಳವ ಅಕ್ಕ ಪಕ್ಕದವರ ತಟ್ಟೆಯಲ್ಲಿ
ಪುಕ್ಕಭರಿತ ಕೆಟ್ಟ ಹುಳ ನಿನ್ನ ತಟ್ಟೆಯೊಳಗೆ ಇಹುದು ||ಪ||

ದಾಸರಂತೆ ಬೀದಿ ಬೀದಿ ತಿರುಗಿ ಬಂದೆಯಲ್ಲವೇ
ದಾಸತನದಿ ದೈವ ನಾಮ ನೀ ಪಾಡಿದೆ ಏನೂ
ದೋಸೆ ತೂತು ದದ್ದು ಮಡಿಕೆ ಎನುತ ದೊಡ್ಡಮನೆಯ ಮಾತ
ಚಿಕ್ಕತನದಿ ಆಡಿ ಚೊಕ್ಕತನವ ಕಳೆದುಕೊಂಡೆಯಲ್ಲೇ ||೧||

ಗರತಿಯಂತೆ ಅಲಂಕಾರಗೊಂಡು ತುಳಸಿ ಮುಂದೆ ನಿಂತು
ಆಲಾಪದಿ ಹಾಡುತಾ ಆರತಿ ಮಾಡಿದೆಯಲ್ಲೇ
ಹಸಿದು ನಿಂತ ಸುತನ ಪತಿಯ ಗತಿಯ ಕೇಳದಿರುವ ನೀನು
ಗೊಲ್ಲನರಸಿಯನ್ನು ಸುತ್ತಿ ಗೂಢಾಚಾರ ಮಾಡಿದೆಯಲ್ಲೇ ||೨||

ಎಂಟಾಣೆಯ ಕಣಕೆ ಆಸೆ ಪಟ್ಟು ಕುಣಿದು ಹೋದೆಯಲ್ಲೇ
ಕುಂಕುಮವಿತ್ತವರ ಮನೆಗೆ ಕನ್ನ ಹಾಕಿ ಬಂದೆಯಲ್ಲೇ
ಕೋಡಂಗಿಯ ಮಗನೆ ಎಂದು ಬೀದಿ ಮಕ್ಕಳ ಹೀಯಾಳಿಸಿ
ಬೊಗಳೆಯಾಡೊ ನಿನ್ನ ಮಗನ ಭಾಗ್ಯವಂತನೆಂದೆಯಲ್ಲೇ ||೩||

ಪತಿಯು ಗತಿಸಿ ಹೋದ ಮೇಲೆ ಅನ್ಯ ಸುಮತಿಯರನು ಕಂಡು
ನಾಕಾಣೆ ಕುಂಕುಮ ನಿನಗಿಹುದು ಎಂದೆಯಲ್ಲೇ
ಪತಿತ ಪಾವನ ಎಮ್ಮ ಗುರುನಾಥನನ್ನು ದೂಷಿಸುತಲಿ
ಅಂಬಾಸುತನಾ ಪದಕೆ ಆಹಾರ ಆದೆಯಲ್ಲೇ ||೪||

ಗುರುನಾಥ ಗಾನಾಮೃತ 
ತಡಮಾಡದೆ ನಡಿ ಗುರುಮನೆಗೆ
ರಚನೆ: ಅಂಬಾಸುತ 


ತಡಮಾಡದೆ ನಡಿ ಗುರುಮನೆಗೆ
ರೂಢಿಗುತ್ತಮ ನಮ್ಮ ಅವಧೂತನ ಅರಮನೆಗೆ ||ಪ||

ತುಡುಕುತನವೆಲ್ಲವ ಸುಟ್ಟು
ಬಲು ಕಟಕಟಿ ಎನ್ನೋ ಸಂಸಾರವ ಬಿಟ್ಟು
ಕುಟಿಲತನದಾ ಸ್ನೇಹವ ಬದಿಗಿಟ್ಟು
ಗತಿ ನೀನೇ ಗುರುನಾಥಾ ಎನ್ನುತ ಇನ್ನೂ ||೧||

ಕೂಡಿಟ್ಟ ಧನಕನಕವ ಕೊಟ್ಟು
ಕಾಮಾದಿ ಬಯಕೆಗಳಾ ಹೊರಗಿಟ್ಟು
ನಾನೆಂಬುದನಲ್ಲೇ ಕಳಚಿಟ್ಟು
ಮತಿ ನೀಡೋ ಗುರುನಾಥ ಎನ್ನುತ ಇನ್ನೂ ||೨||

ಕಷ್ಟವೆಂಬುದೇ ಇಲ್ಲದ ಮನೆಗೆ
ನಿಕೃಷ್ಟದಿಂ ಕಾಣುವರಿಲ್ಲದ ಮನೆಗೆ
ಉತ್ಕೃಷ್ಟತೆ ಉಣಿಸೋ ಆ ಮನೆಗೆ
ಲೋಕ ವಂದಿತ ನಮ್ಮ ಗುರುನಾಥನ ಮನೆಗೆ ||೩||

ಆನಂದ ತುಂಬಿಹ ಮನೆಗೆ
ಆತಗಮಾನಂದವ ನೀಡುವಾ ನಿಜಮನೆಗೆ
ಸಖರಾಯಪುರವಾಸಿ ಗುರುನಾಥನ ಮನೆಗೆ
ಅಂಬಾಸುತನಾ ಸಿರಿ ಹಿರಿ ಗುರುಮನೆಗೆ ||೪||

Friday, May 18, 2018

ಗುರುನಾಥ ಗಾನಾಮೃತ 
ಯೋಗನಿದ್ರೆಯ ಮಾಡೊ ಯೋಗಿವರ್ಯಾ
ರಚನೆ: ಅಂಬಾಸುತ 


ಯೋಗನಿದ್ರೆಯ ಮಾಡೊ ಯೋಗಿವರ್ಯಾ
ಬಹು ರಾಗದಿ ಜೋಗುಳ ಪಾಡುವೆವೊ ಗುರುವರ್ಯಾ ||ಪ||

ಮನದ ತೊಟ್ಟಿಲ ಮುದದಿಂದ ಅಲಂಕರಿಸಿ
ನಿನ್ನ ಮುದ್ದು ಮೂರುತಿಯಾ ಇರಿಸಿ ತೂಗುವೆ ||೧||

ಸದ್ದಾಗದಂತೆ ಅರಿಗಳನ್ನೆಲ್ಲಾ ನಿಗ್ರಹಿಸಿ
ಭಕ್ತಿ ರಸವಾ ಉಕ್ಕಿಸಿ ಪ್ರೇಮದಿ ತೂಗುವೆ ||೨||

ಸಾತ್ವಿಕತೆಯಾ ಸರಪಳಿ ಸಮನಾಗಿ ಬಿಗಿದು
ಆನಂದವೆಂಬೊ ಸುಪ್ಪತ್ತಿಗೆ ಹಾಸಿ ತೂಗುವೆ ||೩||

ಸಖರಾಯಪುರವಾಸಿ ಜೋ ಜೋ
ಅವಧೂತ ಗುರುನಾಥ ಜೋ ಜೋ
ಅಂಬಾಸುತನಾ ಒಡೆಯಾ ಜೋ ಜೋ
ಶ್ರೀವೇಂಕಟಾಚಲನೆ ಜೋ ಜೋ ||೪||
ಗುರುನಾಥ ಗಾನಾಮೃತ 
ಗುರುವು ಬಂದ ಗುಣಪೂರ್ಣ ಬಂದಾ
ರಚನೆ: ಅಂಬಾಸುತ 


ಗುರುವು ಬಂದ ಗುಣಪೂರ್ಣ ಬಂದಾ
ಘನ್ನಮಹಿಮ ಗುರುನಾಥ ಮನೆಗೆ ಬಂದಾ ||ಪ||

ನೀಡಿರೆಂದಾ ಮನವ ನೀಡಿರೆಂದಾ
ಬೇಡಿರೆಂದಾ ವರವ ಬೇಡಿರೆಂದಾ
ನೋಡಿರೆಂದ ಮಹಿಮೆ ತೋರಿ ನಿಂದಾ
ನಕ್ಕು ಬಂದಾ ನಾನೆ ಗತಿಯು ಎಂದಾ ||೧||

ಕಾಯಿರೆಂದಾ ಕರ್ಮ ಕಳೆಯಲೆಂದಾ
ಕರುಣೆ ತೋರಿ ಬಂದಾ ಕಂದ ಬಾ ಎಂದಾ
ಸತ್ಯವೆಂದಾ ಬ್ರಹ್ಮ ನಿತ್ಯವೆಂದಾ
ಜಗ ಮಿಥ್ಯವೆಂದಾ ನಾಳೆ ಮಾಯೆ ಎಂದಾ ||೨||

ಕೂಡಿರೆಂದಾ ಮುಂದೆ ನೀಡಿರೆಂದಾ
ಕೂಡಿ ಕಳೆದು ಬೇಡಿ ಬಾಗಿ ಬದುಕಿರೆಂದಾ
ಹಾಡಿರೆಂದಾ ನಾಮ ಪಾಡಿರೆಂದಾ
ನೇಮ ಮಾಡಿರೆಂದಾ ನೋವ ಕಳೆಯಿರೆಂದಾ ||೩||

ಹರಡಿರೆಂದಾ ಧರ್ಮ ಉಳಿಸಿರೆಂದಾ
ದ್ರೋಹ ದಹಿಸಿ ಎಂದಾ ದಾರಿ ತೋರೆ ಬಂದಾ
ಸುಮತಿಗೆಂದಾ ಪತಿಯೆ ಪರಮವೆಂದಾ
ಭಾವ ಸಮತವೆಂದಾ ಭೋಗ ಕ್ಷಣಿಕವೆಂದಾ ||೪||

ಲೋಕ ಕಲ್ಪವೆಂದಾ ನರ ಅಲ್ಪನೆಂದಾ
ನಾರಿ ಶಕ್ತಿ ಎಂದಾ ನಾನು ಬಿಡಿರಿ ಎಂದಾ
ಮೌನ ಮಹಿಮೆಯೆಂದಾ ಮಾತು  ಮೃತ್ಯುವೆಂದಾ
ಕಾರ್ಯ ಹಿರಿದು ಎಂದಾ ಕರ್ತೃ ದೇವನೆಂದಾ ||೫||

ಗುರುವು ಅಂಬಾ ಎಂದಾ ಸುತನು ನೀನೆಂದಾ
ಸತತ ಭಜಿಸಿರೆಂದಾ ಗುರುವೇ ಸತ್ಯವೆಂದಾ
ಸಖರಾಯ ಎಂದಾ ಸಹನೆ ಬೆಳೆಸಿರೆಂದಾ
ಸಂತ ಹರನು ಎಂದಾ ಅವನೆ ಹರಿಯು ಎಂದಾ ||೬|||
ಗುರುನಾಥ ಗಾನಾಮೃತ 
ಬೃಂದಾವನದಿ ಜಗವಂದ್ಯನಾಗಿ ಕುಳಿತಿಹ ನೋಡೆ
ರಚನೆ: ಅಂಬಾಸುತ 


ಬೃಂದಾವನದಿ ಜಗವಂದ್ಯನಾಗಿ ಕುಳಿತಿಹ ನೋಡೆ
ಅಲ್ಲಿ ಕಂಗೊಳಿಸುತಿಹ ಎಮ್ಮ ಗುರುಗಳಾ ನಾಮ ಪಾಡೆ ||ಪ||

ತುಳಸಿ ಬಿಲ್ವಪತ್ರೆ ಮಲ್ಲಿಗೆ ಸಂಪಿಗೆಯಾ ದಂಡೆಗಳಾ
ಸರಳವಾಗಿ ಸರಗಳಾಗಿ ಧರಿಸಿಹನು ನೋಡೆ ||೧||

ಶ್ವೇತವಸ್ತ್ರ ಉಟ್ಟು ಶಾಸ್ತ್ರರೀತಿ ಪೂಜೆ ಪಡೆಯುತಾ
ಶಿವನಾಗಿ ಶಾಮನಾಗಿ ಶಾರದಾಪತಿಯಾಗಿ ಕಾಣುತಾ ||೨||

ಶಾಂತನಾಗಿ ಶರಣಾಗತರಿಗೆ ರುದ್ರನಾಗಿ ಉಗ್ರರಿಗೆ
ಭದ್ರಾಸನದಿ ಕುಳಿತು ಭಾವದಂತೆ ಭಾಗ್ಯ ನೀಡುತಾ ||೩||

ಪ್ರೇಮ ತುಂಬಿದ ವದನದೊಳಗೆ ಕರುಣೆಯಾ ಕಂಗಳು
ಎಮ್ಮನುದ್ಧರಿಸುವಾ ಪದಗಳೇ ಅವನ ನಾಲಿಗೆಯೊಳು ||೪||

ಅಚಿಂತ್ಯನಿವನು ಅಮೋಘನಿವನು ಪೂರ್ಣನಿವ ಪರಬ್ರಹ್ಮನು
ಎಮ್ಮ ಪಾರುಗಾಣಿಸೇ ಅವತರಿಸಿಹ ಅವಧೂತನು ||೫||

ಸಖರಾಯಪುರದೊಳು ಸಾತ್ವಿಕ ಕಾನನದೊಳು
ಅಂಬಾಸುತನ ಮನದ ಒಡೆಯಾ ಅರಿವಿನಾಲಯದ ಹಿರಿಯಾ ||೬||