ಒಟ್ಟು ನೋಟಗಳು

Sunday, February 28, 2021

ಭಾವಕೂ ಬೆಲೆಯಿಲ್ಲ ಬಕುತಿಗೂ ಬೆಲೆಯಿಲ್ಲವಿಲ್ಲಿನೀನು ನೆಪಮಾತ್ರ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಭಾವಕೂ ಬೆಲೆಯಿಲ್ಲ ಬಕುತಿಗೂ ಬೆಲೆಯಿಲ್ಲವಿಲ್ಲಿ
ನೀನು ನೆಪಮಾತ್ರ ಎಲ್ಲವೂ ತೋರಿಕೆಗೆ ಪ್ರಾಧಾನ್ಯವು|

ಗುರುವೆಂದು ಬರೀ ಮಾತಲಿ ನುಡಿಯುತ ಎನ್ನ ಸ್ವಾರ್ಥವೇ ಮೇಲಾಯಿತು
ನಿನ್ನ ನುಡಿಮುತ್ತುಗಳು ಮಾತಲೇ ಮರೆಯಾಗಿ ಎನ್ನ ಆಸೆಗಳೇ ಮುಂದಾಯಿತು|

ನೀ ನೀಡಿದ ಭಿಕ್ಷೆ ಇದು ಎನ್ನ ಸ್ವರದ ಮಧುರ ದ್ವನಿಯು ಮರೆತೇ ಹೋಯಿತು
ಬದುಕಿನ ತಾಳಗಳು ನಿನ್ನಣತಿಯಂತೆ ಇದ್ದರೂ ನಾನೆಂಬ ಭಾವವು ಮರೆಸಿತು|

ನೋಡುವ ನೋಟದಲಿ ನೀನಿರುವೆ ಗುರುವೇ ಮನ ಮರೆತು ಸಂಭ್ರಮಿಸಿತು
ಜೀವದ ಉಸಿರು ನೀನಾದರೂ ಹುಂಬನಾಗಿ ಮನ ನಿನ್ನ ಹಂಗಿಲ್ಲವೆಂದಿತು|

ನನ್ನದಲ್ಲದ ಈ ಬದುಕಿನ ಹಾದಿಯಲಿ ನಿನ್ನನೇ ಮರೆತು ಜೀವ ಮೂಡನಾಯಿತು
ನೀ ನೀಡಿದ ಪದ ಭಿಕ್ಷೆ ನನ್ನದೆನುತ ಗರ್ವದಲಿ ಈ ಕರವು ಪದವ ಗೀಚಿತು|

ದಾರಿ ತಪ್ಪಿಸಬೇಡ ನಿನ್ನ ಕಾಣಲು ಬಂದಾಗ ಮನ ಭಯದಿ ಕೂಗಿ ಬೇಡಿತು
ಸಖರಾಯಧೀಶ ದೊರೆಯೇ ನಿನ್ನ ಬೃಂದಾವನದ ಸನಿಹ ಎನ್ನ ಮನ ಕಳೆದು ಹೋಯಿತು|

Thursday, February 25, 2021

ಇದೆಂತಹ ಬದುಕೋ ಪ್ರಭುವೇ ಬರೀ ಮುಖವಾಡವೆ ಪ್ರಧಾನವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಇದೆಂತಹ ಬದುಕೋ ಪ್ರಭುವೇ ಬರೀ ಮುಖವಾಡವೆ ಪ್ರಧಾನವು
ಆಡಂಬರ ಬಣ್ಣದ ಚಿತ್ತಾರಕೆ ದೊರೆವುದು ಎಲ್ಲಾ ಮನ್ನಣೆಯೂ|

ನಿನ್ನ ಬಜಿಸುವುದರಲು ಬರೀ ತೋರಿಕೆಯ ಹುನ್ನಾರವು ಇದೆಂತೋ
ನೀ ನುಡಿದುದು ಎಂತೋ ಬಕುತನೆನುತ ನಾ ಮಾಡುವುದು ಇನ್ನೆಂತೋ|

ನಿನ್ನ ನಂಬಿದೆನೆನುತ ನಿನ್ನ ಮಾತನೇ ಮೀರುತ ಬದುಕು ನಡೆಸುವುದೆಂತೋ
ಕರ ಮುಗಿಯುತ ದೇಹ ಬಾಗುತಾ ಸ್ವಾರ್ಥದ ಬೇಡಿಕೆ ಸಲ್ಲಿಸುವುದೆಂತೋ|

ಅನ್ಯರ ವಿಷಯ ವಿಷವೆಂದರೂ ಕೂಡಿ ಆಡುವ ಬಗೆಯು ಅದೆಂತೋ
ಕರ್ಮಮಾಡುತ ನಿನ್ನನೇ ದೂರುತ ಎನ್ನ ಮನ್ನಿಸೆನ್ನುವ ಪರಿ ಅದೆಂತೋ|

ಎಲ್ಲರನೂ ಪ್ರೀತಿಸಿ ಆದರಿಸೆಂದಿರಿ ಮಳ್ಳತನದಿ ನಾ ಮಾಡುವುದು ಇನ್ನೆಂತೋ
ಆರು ಅರಿಗಳ ಗೆದ್ದು  ಈ ಜನುಮ ಸಾರ್ಥಕ ಮಾಡೆಂದಿರಿ ಇಲ್ಲಿ ನಡೆವುದೆಂತೋ|

ನಾನೆಂತೋ ಎನ್ನ ನಡೆಯಂತೋ ನಾನರಿಯೆ ಮುಸುಕು ಸರಿಸೋ ದೊರೆಯೇ
ಸಖರಾಯಪುರದ ಸಂತನು ನೀನು ನಿನ್ನಂಗಳದಿ ನಿಂತು ಬೇಡಿಹೆನು ನನ್ನ ಪ್ರಭುವೇ|

Tuesday, February 23, 2021

ಮೌನದಲಿ ಭಜಿಸುವುದೇ ಲೇಸು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮೌನದಲಿ ಭಜಿಸುವುದೇ ಲೇಸು ಮಾತಿನಲಿ ಪದ ಜಾಸ್ತಿಯಾಯಿತು
ಅಡುವುದೊಂದು ಮಾಡುವುದೊಂದು ಮನ ನೊಂದು ಬೇಸತ್ತಿದೆ ಗುರುವೇ|

ಮನದ ಭಾವನೆಗಳ ಸುಳಿಯಲಿ ನಿಜ ಭಾವದ ಭಕುತಿ ಕಳೆದು ಹೋಯಿತು
ಅಲ್ಪನು ನಾನು ಮಾತಿನಲೇ ಮೈ ಮರೆವೆನು ನೀ ಎಚ್ಚರಿಸೋ ಪ್ರಭುವೇ|

ಗೊಂದಲದ ಗೂಡಿದು ಎನ್ನ ಮನವು ಮೈಲಿಗೆಯ ಭಾವದಿ ಮಲಿನವಾಗಿಹುದು ಗುರುವೇ
ಶುದ್ಧ ಭಾವದ ಅಲೆಯ ಬಡಿದೆಬ್ಬಿಸಿ ಶುಭ್ರ ಮಾಡೋ ಎನ್ನ ಮನವ ಪ್ರಭುವೇ|

ಗಂಗೆ ತುಂಗೆಯರ ಹರಿವು ನಿನ್ನ ಪದಕಮಲದ ಸನಿಹ ಇರುವುದೋ ಗುರುವೇ
ಪಾದ ಧೂಳಿಯ ಸಿಂಚನವೇ ಸಾಕೆನಗೆ ಗಂಗೆ ತುಂಗೆಯರ ಸಮಾನವೋ ಪ್ರಭುವೇ|

ಏನಿದು ನಿನ್ನ ಲೀಲೆಯೊ ಚಂಚಲದ ಮನವಿತ್ತು ಅಮಿಷದ ಸೆರೆಹಾಸಿ ನಿಂತು ನೋಡುವೆ
ಅಂತರಂಗದಲಿ ಬಣ್ಣದಾ ಬದುಕು ಬೇಡವೆನಿಸೆ ನಿನ್ನ ನೆನೆಯುವ ಹಂಬಲ ದೊರೆಯೇ|

ಮತ್ತದೇ ಪದಬಳಸಿ  ನಿನ್ನೊಲುಮೆ ಪಡೆಯುವಾ ಪರಿ ಸರಿ ಹೇಳೋ ಗುರುವೇ
ಮತಿ ಹೀನ ಪಾಮರನು ನಾನು ನಿನ್ನ ಬೇಡುತಿಹೆನು ಸರಿ ದಾರಿ ತೋರೋ ಸಖರಾಯಪ್ರಭುವೇ|

Saturday, February 13, 2021

ಎನ್ನ ಅರಿವಿಗೆ ಬರಲಿಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎನ್ನ ಅರಿವಿಗೆ ಬರಲಿಲ್ಲ ನೀನು ಇನ್ನೆಷ್ಟು ದಿನ ಗುರುವೇ ಕಾಯಬೇಕು ನಾನು
ದೇಹ ಶುದ್ದಿ ಸಾಲದಂತೆ ಮನ ಶುದ್ದಿ ಮಾಡಿ ಕೊಳ್ಳಲಿಲ್ಲ  ಪ್ರಭುವೇ ನಾನು|

ನೋಡುವ ನೋಟದಲೂ ತುಂಬಿಹುದು ಬರೀ ಕುಹುಕದ ಭಾವವು
ಆಡುವ ಮಾತಿನಲೂ ಕಾಣಸಿಗದು ನೀ ಬಯಸುವ ಶುದ್ದ ಭಾವವು|

ಮಾಡುವ ಕರ್ಮವೂ ಬಯಸಿದೆ  ಸ್ವಾರ್ಥದಾ ಹಂಬಲವು
ನಿಷ್ಕಾಮ ಕರ್ಮಕೆ ಮನ ಹಾತೊರೆದರೂ ಬಿಡದು ಚಂಚಲ ಮನವು|

ನಾನು ನಾನೆಂಬ ಭಾವವು ಮನ ತುಂಬಿ ಸಾಗಿ ನಡೆದಿದೆ ವ್ಯರ್ಥ ಜೀವನವು
ತೋರಿಕೆಯ ಪ್ರೀತಿ ಬಕುತಿಯ ಆಟ ಮೇಲಾಯಿತು ಸೋತು ಹೋಯಿತು ಮನವು|

ಸೋತು ಬೇಡುವಾಗ ನುಡಿವುದು ಮನವು ನೀನೇ ಎನ್ನ ಸರ್ವಸ್ವವೂ
ಮರು ಗಳಿಗೆಯೇ ಹಕ್ಕಿ ಹಾರಿದಂತೆ ವಾಸನೆಯ ಅರಸಿ ಓಡುವ ಎನ್ನ ಮನವು|

ಸಾಕು ಮಾಡೆನ್ನ ಈ ಬದುಕಿನ ನಾಟಕವ ನಿನ್ನ ಹಾರೈಕೆಗೆ ಕಾದಿದೆ ಜೀವವು
ಸಾಕ್ಷರಾಯಧೀಶ ಪ್ರಭುವೇ ನಿನ್ನ ಕರುಣೆಗಾಗಿ ಹಂಬಲಿಸಿ ಕೂಗಿದೆ ಮನವು|