ಒಟ್ಟು ನೋಟಗಳು

Tuesday, January 31, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 119


    ಗ್ರಂಥ ರಚನೆ - ಚರಣದಾಸ 


ಅಮ್ಮನ ಕಾಳಜಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ನಾನು ಆ ಪ್ರಾಂಶುಪಾಲರ ಮಾತನ್ನು ಶ್ರದ್ಧೆಯಿಂದ ಆಲಿಸುತ್ತಿದ್ದಾಗ ಅವರ ಧರ್ಮಪತ್ನಿ ಕುತೂಹಲದಿಂದ ಇನ್ನಷ್ಟು ವಿಚಾರಗಳನ್ನು ಹೇಳತೊಡಗಿದರು. 

ನೋಡಿ ನಾವು ಅಪರೂಪಕ್ಕೊಮ್ಮೆ ಸಖರಾಯಪಟ್ಟಣಕ್ಕೆ ಬರುತ್ತಿದ್ದೆವಾದರೂ ಆ ಗುರುವಿನ ಕೃಪೆ ಸದಾ ನಮ್ಮ ಮೇಲಿರುವ ಅನುಭವ ನಮಗಾಗಿದೆ. 

ನಾವು ಚರಣದಾಸನಾದ ನಿಮ್ಮ ಹೆಸರನ್ನು ಆಗಾಗ್ಗೆ ಕೇಳುತ್ತಿದ್ದೆವು. ಇಂದು ನಿಮ್ಮನ್ನು ನೋಡುವ ಅವಕಾಶ ಬಂದಿದೆ. ಅದೂ ನಮ್ಮ ಗುರುಗಳ ಚರಿತ್ರೆ ನಿಮ್ಮ ಕೈಯಿಂದ ಬರೆಸಲ್ಪಡುತ್ತಿದೆ ಎಂದರೆ "ಅದು ಆ ಸದ್ಗುರು ನಿಮಗೆ ನೀಡಿದ ಭಿಕ್ಷೆ ಎಂದುಕೊಳ್ಳಿ" ಎಂದು ನುಡಿದು ತನ್ನ ಅನುಭವವನ್ನು ಹೀಗೆ ಹೇಳತೊಡಗಿದರು. 

ನಾವು ಸಾಗರ ಮೂಲದವರಾಗಿದ್ದು ನಮ್ಮ ತಂದೆ ತೀರಿಕೊಂಡ ಮೇಲೆ ನಮ್ಮ ತಾಯಿಯನ್ನು ನಮ್ಮೊಂದಿಗೆ ಕರೆದುಕೊಂಡು ಹೋಗ ಬಯಸಿದೆವು ಆದರೆ ಅಮ್ಮ ನಮ್ಮೊಂದಿಗೆ ಬರಲಿಲ್ಲ. ಮಾತ್ರವಲ್ಲ ನನ್ನ ಅಣ್ಣ ತಮ್ಮೊಂದಿರೊಂದಿಗೂ ಹೋಗಲಿಲ್ಲ. ಆ ಇಳಿ ವಯಸ್ಸಿನಲ್ಲಿ ತಾವೊಬ್ಬರೇ ಆ ಮನೆಯಲ್ಲಿ ಇರುತ್ತಿದ್ದರು. ಆ ವಯಸ್ಸಿನಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೇನು ಗತಿ ಎಂಬುದು ನಮಗೆ ಆತಂಕ ಉಂಟು ಮಾಡಿತ್ತು. 

ಒಮ್ಮೆ ಸಖರಾಯಪಟ್ಟಣಕ್ಕೆ ಹೋದಾಗ ನಮ್ಮ ತಾಯಿಯವರ ಬಗೆಗಿನ ನಮ್ಮ ಕಾಳಜಿ, ಆತಂಕವನ್ನು ಗುರುನಾಥರಲ್ಲಿ ಹೇಳಿದೆವು. ಆಗ ಗುರುನಾಥರು ಕೆಲಕಾಲ ಸುಮ್ಮನಿದ್ದು ತಟ್ಟನೆ ಹೀಗೆ ಹೇಳಿದರು. 

"ನೋಡಿ ನಿಮ್ಮ ತಾಯಿ ಸಧ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ನಿಮ್ಮ ಬಂಧು ಒಬ್ಬರ ವಿವಾಹ ಸಮಾರಂಭಕ್ಕೆ ಬರುವರು. ಆಗ ಅವರನ್ನು ಕರೆದುಕೊಂಡು ಹೋಗಿ ದ್ರಾಕ್ಷಿ ಹಣ್ಣಿನ ರಸ ಕುಡಿಸಿಬಿಡಿ ಸಾಕು. ಆಮೇಲೆ ಅವರೇ ನಿಮ್ಮೊಂದಿಗೆ ಬರುವರು. ಒಂಟಿಯಾಗಿ ಇರಬಯಸುವುದಿಲ್ಲ" ಎಂದರು. 

ಆಶ್ಚರ್ಯವೆಂದರೆ ನಮ್ಮ ಬಂಧುಗಳ ವಿವಾಹ ಸಮಾರಂಭದ ಬಗ್ಗೆ ನಾವು ಗುರುನಾಥರಲ್ಲಿ ಎಂದೂ ಹೇಳಿರಲಿಲ್ಲ. ಈಗ ನಮಗೆ ಮತ್ತೊಂದು ಸಮಸ್ಯೆ ಎದುರಾಯಿತು. ಅದೇನೆಂದರೆ ನಮ್ಮ ತಾಯಿ ಜನಿಸಿದಾರಭ್ಯ ಇಂದಿಗೂ ದ್ರಾಕ್ಷಿ ಹಣ್ಣಿನ ರಸ ಕುಡಿದವರಲ್ಲ. ಈಗ ಹೇಗೆ ಕುಡಿಯಲು ಸಾಧ್ಯವೆಂಬುದು ಪ್ರಶ್ನೆಯಾಗಿತ್ತು. 

ಈ ಕುರಿತು ಗುರುನಾಥರನ್ನು ವಿಚಾರಿಸಲಾಗಿ ಗುರುನಾಥರು "ಹೌದು ಅದು ನಿಜ. ಆದರೆ ಈ ಬಾರಿ ಅವರು ದ್ರಾಕ್ಷಿ ಹಣ್ಣಿನ ರಸವನ್ನು ಕುಡಿಯುವರು" ಎಂದು ಅಭಯ ನೀಡಿ ಕಳಿಸಿದರು. 

ನಿಗದಿಯಾದಂತೆಯೇ ವಿವಾಹ ಸಮಾರಂಭದ ದಿನ ಬಂದಿತು. ನಮ್ಮ ತಾಯಿಯವರೂ ಆ ಕಾರ್ಯಕ್ರಮಕ್ಕೆ ಬಂದರು. ನಾವೂ ಹೋದೆವು. ಕುಶಲೋಪರಿ ಮಾತನಾಡುತ್ತಾ , ಬಿಸಿಲು ಕಾಲ, ತಂಪು ಪಾನೀಯ ಕುಡಿಯಲು ಅಂಗಡಿಗೆ ಹೋದೆವು. ಅಮ್ಮನಿಗೆ ದ್ರಾಕ್ಷಿ ರಸ ಕುಡಿಯಲು ಹೇಳಿದೆ. ಒಮ್ಮೆ ಬೇಡವೆಂದವರು ಇದ್ದಕ್ಕಿದ್ದಂತೆಯೇ ಆಯಿತು, ಅದನ್ನೇ ಕೊಡಿಸು ಎಂದರು. ಇದನ್ನು ಕಂಡು ನಮಗೆ ಆಶ್ಚರ್ಯವಾಯಿತು. ಆದರೂ ಏನನ್ನೂ ತೋರಿಸಿಕೊಳ್ಳದೇ ಅಮ್ಮನಿಗೆ ದ್ರಾಕ್ಷಿ ರಸ ಕುಡಿಸಿದೆ. ಅಮ್ಮ ಕುಡಿದರು. ಆನಂತರ ಕಾರ್ಯಕ್ರಮ ಮುಗಿಸಿ ಅಮ್ಮ ಸಾಗರದ ತಮ್ಮ ಮನೆಗೆ ಹೋದರು. 

ನಮಗೆ "ಏನಪ್ಪಾ ಅಮ್ಮ ನಮ್ಮ ಜೊತೆ ಬರಲಿಲ್ಲವಲ್ಲ ಅಂತ ಆತಂಕವಾಗಿತ್ತು. ಆದರೆ, ಮನೆ ಸೇರಿದ ಅಮ್ಮ ಮತ್ತೆ ಅಲ್ಲಿ ಹೆಚ್ಚು ದಿನ ಇರಲು ಬಯಸಲಿಲ್ಲ. ನೇರವಾಗಿ ನಮ್ಮ ಮನೆಗೆ ಬಂದರು. ಆನಂತರ ಗಂಡು ಮಕ್ಕಳ ಮನೆಗೆ ತೆರಳಿದರು. ಇದೀಗ ಗುರುಕೃಪೆಯಿಂದಾಗಿ ನಮಗೆ ಅಮ್ಮ ಒಂಟಿಯಾಗಿದ್ದಾಳೆ ಎಂಬ ಭಾವವಿಲ್ಲ ಎಂದು ಹೇಳಿ ಗುರುಕೃಪೆಯನ್ನು ಕೊಂಡಾಡಿದರು.....,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Monday, January 30, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 118


    ಗ್ರಂಥ ರಚನೆ - ಚರಣದಾಸ 


ಮೊಂಬತ್ತಿಯ ಕತೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಆ ಪ್ರಾಂಶುಪಾಲರನ್ನು ಇನ್ನಷ್ಟು ವಿಚಾರವನ್ನು ತಿಳಿಸಬೇಕೆಂದು ವಿನಂತಿಸಲು ಅವರು ಹೀಗೆ ಹೇಳತೊಡಗಿದರು. 

ನಾವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆಯಲ್ಲಿದ್ದಾಗ ನಮ್ಮ ಮನೆ ಬದಲಿಸಬೇಕಾದ ಸಂದರ್ಭ ಬಂತು. 

ಆ ವಿಚಾರವನ್ನು ಗುರುಗಳಿಗೆ ತಿಳಿಸಲಾಗಿ ಗುರುನಾಥರು, "ಆಗಬಹುದು ಒಳ್ಳೆಯದಾಗುವುದು. ಆದರೆ ನಿಮ್ಮ ಮನೆಯ ಮುಂದಿರುವ ಮುಖ್ಯ ರಸ್ತೆಯಲ್ಲಿರುವ ಒಂದು ದೊಡ್ಡ ತಿರುವಿನಲ್ಲಿ ಹೋಗುವಾಗ ಜೋಪಾನವಾಗಿರಿ" ಎಂದು ತಿಳಿಸಿದರು. 

ಗುರುನಾಥರೆಂದಂತೆಯೇ ನಮ್ಮ ಮನೆಯ ಮೊಂದೊಂದು ದೊಡ್ಡ ತಿರುವಿದ್ದು ಅದು ಅಪಘಾತದ ಕೇಂದ್ರವೂ ಆಗಿದ್ದಿತು. ಗುರುನಾಥರು ನಾವು ಪ್ರತಿ ಹೆಜ್ಜೆ ಇಡುವಾಗಲೂ ನಮ್ಮನ್ನು ಕಾಯುತ್ತಿರುವರೆಂಬ ನಂಬಿಕೆ ನಮಗೆ ಇನ್ನಷ್ಟು ದೃಢವಾಯಿತು. 

ಮತ್ತೊಂದು ಸಂದರ್ಭದಲ್ಲಿ ನಮ್ಮ ವಿದ್ಯಾ ಸಂಸ್ಥೆಗೆ ಸೇರಿದ್ದ ಆ ಹುಡುಗನಲ್ಲಿ ಗುರುನಾಥರು ಹೀಗೆ ಹೇಳಿ ಕಳಿಸಿದ್ದರು. ಆ ಸಮಯದಲ್ಲಿ ನನ್ನ ಸಹವರ್ತಿಗಳೇ ನನ್ನ ಏಳಿಗೆಯನ್ನು ಸಹಿಸದೆ ಪಿತೂರಿಗಳನ್ನು ಮಾಡುತ್ತಿದ್ದರು. ನನಗೂ ಮಾನಸಿಕ ಹಿಂಸೆಯಾಗಿತ್ತು. 

ಆ ಹುಡುಗ ನನ್ನಲ್ಲಿಗೆ ಬಂದು ಹೀಗೆ ಹೇಳಿದ. "ಗುರುಗಳು ಹೇಳಿದ್ದು ನೀವು ಈಗ ಬಳಸುತ್ತಿರುವ ಕನ್ನಡಕ ಬದಲಾಯಿಸಬೇಕಂತೆ. ಹೊಸ ಕನ್ನಡಕ ಧರಿಸಬೇಕೆಂತೆ. ಜನರ ದೃಷ್ಠಿಯಿಂದಾಗಿ ನಿಮಗೆ ಹಿಂಸೆಯಾಗುತ್ತಿದೆಯಂತೆ" ಎಂದನು. 

ಮತ್ತೂ ಮುಂದುವರೆದು "ನೀವು ಕುಳಿತುಕೊಳ್ಳುವ ಛೇಂಬರ್ ನ ಮೇಜಿನ ಕವಾಟಿನ ಒಳಗೆ ಕೆಲವು ಮೊಂಬತ್ತಿಯನ್ನು ತಂದಿಡಬೇಕಂತೆ. ಅದರಿಂದ ಜನರ ದೃಷ್ಠಿ ದೂರವಾಗುವುದಂತೆ" ಎಂದು ತಿಳಿಸಿದನು. 

ಆತ ಹೇಳಿದಂತೆಯೇ ಮಾಡಲಾಗಿ ನನ್ನನು ಬಾಧಿಸುತ್ತಿದ್ದ ಹಿಂಸೆಗಳೆಲ್ಲವೂ ಆಶ್ಚರ್ಯಕರ ರೀತಿಯಲ್ಲಿ ಪರಿಹಾರವಾದವು. ಮಾತ್ರವಲ್ಲ ಇಂದಿಗೂ ಆ ಮೊಂಬತ್ತಿಯ ಕಟ್ಟನ್ನು ನಾನು ಕೆಲಸ ಮಾಡುವ ಕಚೇರಿಯಲ್ಲಿಟ್ಟುಕೊಂಡಿದ್ದು ನನಗೆ ಯಾವುದೇ ಹಿಂಸೆ ಪಿತೂರಿಗಳು ಸಮಸ್ಯೆ ಎದುರಾದರೂ ತಾನೇ ತಾನಾಗಿ ಪರಿಹಾರವಾಗುತ್ತದೆ. ನಮ್ಮ ಕುಟುಂಬದ ಪ್ರತಿಯೊಬ್ಬರ ಮನವೂ ಆ ಸಖರಾಯನ ಕೃಪೆ ಕರುಣೆಯಿಂದ ತುಂಬಿದೆ ಎಂದು ಮನದುಂಬಿ ನುಡಿದರು......,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 117


    ಗ್ರಂಥ ರಚನೆ - ಚರಣದಾಸ 


ಗುರು ವಂದನೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮತ್ತೂ ಮುಂದುವರೆದ ಆ ವ್ಯಕ್ತಿ ತನ್ನ ಜೀವನದಲ್ಲಿ ನಡೆದ ಗುರುವಿನ ಲೀಲಾಮೃತವನ್ನು ಹೀಗೆ ಹೇಳತೊಡಗಿದರು. 

ಸ್ವಾಮಿ ನಾನು ಸುಮಾರು 2007-08ರವರೆಗೂ ಅದೇ ವಿದ್ಯಾಲಯದಲ್ಲಿ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿತ್ತು. ಈ ನಡುವೆ ಓರ್ವ ವಿದ್ಯಾರ್ಥಿ ತನ್ನ ತಂದೆಯೊಡನೆ ಪ್ರವೇಶಕ್ಕಾಗಿ ನಮ್ಮ ವಿದ್ಯಾಸಂಸ್ಥೆಗೆ ಬಂದರು. 

ಅವರು ಸಖರಾಯಪಟ್ಟಣಕ್ಕೆ ಸಂಬಂಧಿಸಿದವರೆಂಬುದನ್ನು ತಿಳಿದ ನಾನು ಅವರನ್ನು ನನ್ನ ಚೇಂಬರ್ ಗೆ ಕರೆಸಿದೆ. ಮಾತ್ರವಲ್ಲ ಎಂದೂ ಎಲ್ಲಾ ವಿದ್ಯಾರ್ಥಿಗಳಿಗೂ ಕಾರ್ಯಾಲಯದಲ್ಲೇ ಪ್ರವೇಶ ಪ್ರಕ್ರಿಯೆ ಮಾಡಿಸುತ್ತಿದ್ದ ನಾನು ಅವರಿಬ್ಬರಿಗೆ ನನ್ನ ಕಚೇರಿಯಲ್ಲಿಯೇ ಪ್ರವೇಶ ಪ್ರಕ್ರಿಯೆ ಮುಗಿಸಿದೆ. ಕಾರಣ ಸಖರಾಯಪಟ್ಟಣ ಎಂಬ ಹೆಸರೇ ಚೈತನ್ಯದಾಯಕವಾದುದು. 

ಆ ಹುಡುಗನನ್ನು ಕರೆದು ಕೂರಿಸಿ ಸಖರಾಯಪಟ್ಟಣದ ವಿಚಾರವಾಗಿ ತಿಳಿಸುವಂತೆ ವಿನಂತಿಸಿಕೊಂಡೆ. 

ಆತ ಹಾಗೂ ಅವರ ತಂದೆ ಗುರುನಾಥರ ಬಗೆಗಿನ ತಮ್ಮ ಅನುಭವವನ್ನು ತಿಳಿಸಿದರು. ಜೊತೆಗೆ ಗುರುನಾಥರೇ ನನಗೆ "ನೀನು ದಕ್ಷಿಣ ಕನ್ನಡ ಜಿಲ್ಲೆಯ ಈ ವಿದ್ಯಾಸಂಸ್ಥೆಗೆ ಸೇರು. ಅಲ್ಲಿರುವ ಪ್ರಾಂಶುಪಾಲರು ನಮ್ಮವರು. ನಾನು ಕಳಿಸಿದೆ ಎಂದು ತಿಳಿಸು" ಎಂದು ಹೇಳಿದರು ಎಂಬ ವಿಷಯ ತಿಳಿದು ಗುರು ನನ್ನ ಮೇಲಿಟ್ಟ ಅಭಿಮಾನಕ್ಕೆ ನಾನು ಆನಂದ ತುಂದಿಲನಾದೆ ಎಂದರು. ನಾನು ಆ ವಿದ್ಯಾಸಂಸ್ಥೆಯಲ್ಲಿ ಇದ್ದಷ್ಟು ಕಾಲವೂ ಆ ಹುಡುಗನನ್ನು ನಮ್ಮವನಂತೆಯೇ ನಡೆಸಿಕೊಂಡಿರುವೆ. ಅದಕ್ಕೆ ಕಾರಣ ಆತ ನನಗೆ ಸಖರಾಯಪಟ್ಟಣದ ಪ್ರತಿನಿಧಿಯಾಗಿದ್ದ ಮತ್ತು ಆಧ್ಯಾತ್ಮದ ಚೈತನ್ಯ ತುಂಬಿರುವುದನ್ನು ನಾನು ಗಮನಿಸಿದ್ದೆ. 

ಆ ಹುಡುಗ ಸದಾ ಸಾಧು ಸಂತರ ದರ್ಶನ ಮುಂತಾದ ಆಧ್ಯಾತ್ಮ ಚಟುವಟಿಕೆಯಲ್ಲಿ ತೊಡಗಿದ್ದು ಕಾಲೇಜಿನ ಹಾಜರಿ ಪ್ರಮಾಣ ಕಡಿಮೆ ಇರುತ್ತಿತ್ತು. ಆಗ ನಾನು ಕಾಲೇಜಿನ ಉಪನ್ಯಾಸಕರನ್ನು ಕರೆದು, ನೋಡಿ ಈ ಹುಡುಗ ದೇವರ ಸೇವೆಯಲ್ಲಿರುವನು. ಕೇವಲ ಹಾಜರಿ ಕಾರಣವಾಗಿ ಅವನ ಪರೀಕ್ಷಾ ಪ್ರವೇಶವನ್ನು ತಡೆಯಬೇಡಿ ಎಂದು ಹೇಳಿ ಆತ ಪರೀಕ್ಷೆಗೆ ಕೂರಲು ಅನುವು ಮಾಡಿಕೊಟ್ಟೆ. 

ಇಂದು ಆ ವಿದ್ಯಾರ್ಥಿ ಇಂಜಿನೀಯರ್ ಆಗಿರುವನು. ಮಾತ್ರವಲ್ಲ ಸದ್ಗುರುವಿನ ದಾರಿಯಲ್ಲೇ ಸಾಗಿ ತನ್ನ ಸರಳತೆ ಹಾಗೂ ಅಹಿಂಸಾ ಮಾರ್ಗದಿಂದ ನಾಡಿನಲ್ಲೇ ಉತ್ತಮ ಹೆಸರು ಪಡೆದಿರುವನು. ಇದು ನಾನು ನನ್ನ ಗುರುವಿಗೆ ಸಲ್ಲಿಸಬಹುದಾದ ಚಿಕ್ಕ ಗುರು ವಂದನೆ ಎಂದು ಅಭಿಮಾನದಿಂದ ನುಡಿದರು......,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Saturday, January 28, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 116


    ಗ್ರಂಥ ರಚನೆ - ಚರಣದಾಸ 


ಶ್ರೀರಕ್ಷೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಇತ್ತೀಚೆಗೆ ದಕ್ಷಿಣ ಕನ್ನಡದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯೊಂದರಲ್ಲಿ ಪ್ರಾಂಶುಪಾಲರಾಗಿದ್ದ ಓರ್ವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. 

ಬಹಳ ಹಿಂದಿನಿಂದ ಗುರುನಾಥರ ಸಂಪರ್ಕದಲ್ಲಿದ್ದ ವಿಷಯ ತಿಳಿದಿದ್ದ ಚರಣದಾಸನಾದ ನಾನು ಸಂತೋಷದಿಂದ ಅವರಲ್ಲಿ ನನಗೆ ಗುರುನಾಥರ ಬಗ್ಗೆ ಏನಾದರೂ ಅನುಭವವನ್ನು ತಿಳಿಸಬೇಕೆಂದು ವಿನಂತಿಸಿದೆ. 

ಅವರು ಸಂತೋಷದಿಂದ ಹೀಗೆ ಹೇಳತೊಡಗಿದರು. ನೋಡಿ ನಮಗೆ ಮೊದಲ ಬಾರಿ ಗುರುನಾಥರ ದರುಶನವಾಗಿದ್ದು 1990ರಲ್ಲಿ. ಆ ಸಮಯ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾ ಸಂಸ್ಥೆಯ ಉಪನ್ಯಾಸಕನಾಗಿ ಆಯ್ಕೆಯಾಗಿದ್ದೆ. 

ಆದರೆ ಆ ಊರು ನನಗೆ ಹೊಸತಾಗಿದ್ದರಿಂದ ಅಲ್ಲಿ ಹೇಗೋ ಏನೋ ಎಂಬ ಆತಂಕವಿತ್ತು. ಗುರುನಿವಾಸಕ್ಕೆ ಬಂಡ ನಮ್ಮನ್ನು ಆಶೀರ್ವದಿಸಿದ  ಗುರುನಾಥರು "ನೀವು ಅಲ್ಲಿಗೆ ಹೋಗಿ ಎಲ್ಲವೂ ಒಳ್ಳೆಯದಾಗುತ್ತದೆ" ಎಂದರು. 

ಆ ಸಮಯದಲ್ಲಿ ನಾವು ಆರ್ಥಿಕ ಸಂಕಷ್ಟದಲ್ಲಿದ್ದೆವು. ಮಾತ್ರವಲ್ಲ ಓರ್ವ ವ್ಯಕ್ತಿ ನಮ್ಮಿಂದ ಹಣ ಸಾಲವಾಗಿ ತೆಗೆದುಕೊಂಡಿದ್ದು ಅದನ್ನು ಸಕಾಲದಲ್ಲಿ ಹಿಂತಿರುಗಿಸದೇ ಆಟವಾಡಿಸುತ್ತಿದ್ದ. 

ಈ ವಿಚಾರವನ್ನು ಗುರುಗಳಲ್ಲಿ ವಿಚಾರಿಸಲಾಗಿ ಗುರುನಾಥರು "ಹಣ ಹಿಂತಿರುಗಿ ಬರುವುದು. ಎಲ್ಲ ಚಿಂತೆಗಳೂ ದೂರವಾಗುವುದು" ಎಂದು ಅಭಯ ನೀಡಿ ಕಳಿಸಿದರು. 

ಗುರುವಾಕ್ಯದಂತೆಯೇ ದಕ್ಷಿಣ ಕನ್ನಡ ಜಿಲ್ಲೆಗೆ ಹೋದ ಮೇಲೆ ನಮಗೆ ಎಲ್ಲವೂ ಒಳ್ಳೆಯದಾಯಿತು. ಮಾತ್ರವಲ್ಲ ಅಲ್ಲಿಗೆ ಬಂದು ಐದಾರು ವರ್ಷಗಳಲ್ಲಿ ನಾನು ಪ್ರಾಂಶುಪಾಲನೂ ಆದೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದು ಅಲ್ಲಿಯೇ ವೃತ್ತಿ ಮುಂದುವರೆಸಿರುವೆ. 

ಮಾತ್ರವಲ್ಲ ನಾವು ದಕ್ಷಿಣ ಕನ್ನಡದಿಂದ ಬೆಂಗಳೂರಿನ ಕಡೆ ಹೊರಡುವಾಗಲೂ ನಾವು ಮೊದಲು ಸಖರಾಯಪಟ್ಟಣಕ್ಕೆ ಹೋದೆವು. 

ವಿಷಯ ತಿಳಿದ ಗುರುನಾಥರು ನಮಗೆ ಆಶೀರ್ವದಿಸಿ ಹೋಗಿ ಬನ್ನಿ ಎಂದು ಹರಸಿ ಕಳುಹಿಸಿಕೊಟ್ಟರು. ಆ ನಂತರವೇ ನಾವು ಬೆಂಗಳೂರಿಗೆ ಬಂದು ನೆಲೆಸಿದೆವು ಎಂದರು. 

ಗುರುನಾಥರು ನಮಗೆ ಹೇಳಿದಂತೆ ನಮ್ಮಿಂದ ಹಣವನ್ನು ಸಾಲ ಪಡೆದ ವ್ಯಕ್ತಿ ನಮಗೆ ಹಣ ಹಿಂತಿರುಗಿಸಲಿಲ್ಲ. ಆದರೆ ನಾವು ಆತನಿಗೆ ನೀಡಿದ್ದ ಹಣದ ದುಪ್ಪಟ್ಟು ಹಣ ನಮಗೆ ಒದಗಿ ಬಂತು. ಮತ್ತು ನಮಗೆ ಆರೋಗ್ಯ, ನೆಮ್ಮದಿ ಎಲ್ಲವೂ ಆ ಸದ್ಗುರುವಿನ ಕೃಪೆಯಿಂದ ಒದಗಿ ಬಂದಿದೆ. 

ಇಂದಿಗೂ ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಆ ಚೈತನ್ಯ ನಮ್ಮನ್ನು ಕಾಯುತ್ತಿರುವ ಅನುಭವ ನಮಗೆ ಆಗಿದೆ. ಆದರೆ ಆ ಗುರುವಿನ ಋಣ ತೀರಿಸಲು ಜನ್ಮ ಜನ್ಮಾಂತರಗಳು ಸಾಕಾಗುವುದಿಲ್ಲ ಎಂದು ಕಣ್ತುಂಬಿಕೊಂಡರು. 

ಮತ್ತೂ ಮುಂದುವರೆದು ಅಂದು ಗುರುನಾಥರು ನೀಡಿದ್ದ ಮಂತ್ರಾಕ್ಷತೆಯನ್ನು ಇಂದಿಗೂ ನಮ್ಮ ಬಳಿ ಇಟ್ಟುಕೊಂಡಿದ್ದೇವೆ. ಅದೇ ನಮಗೆ ಶ್ರೀರಕ್ಷೆ ಎಂದು ನುಡಿದರು.......,,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, January 27, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 115


    ಗ್ರಂಥ ರಚನೆ - ಚರಣದಾಸ 


ಕರ್ಮದಂತೆ ಫಲ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಾಮಾನ್ಯವಾಗಿ ಚುನಾವಣಾ ಕಾಲದಲ್ಲಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರುಗಳು, ಗುರುನಾಥರ ಆಶೀರ್ವಾದ ಪಡೆಯಲು ಬರುವುದು ಮಾಮೂಲಿಯಾಗಿತ್ತು. 

ಹೀಗೆ ಒಮ್ಮೆ ರಾಷ್ಟ್ರೀಯ ಚುನಾವಣಾ ಸಂದರ್ಭ. ರಾಷ್ಟ್ರೀಯ ಪಕ್ಷದ ಸ್ಥಳೀಯ ಮುಖಂಡರುಗಳು ಒಟ್ಟಾಗಿ ರಾಜಕೀಯ ಭವಿಷ್ಯ ತಿಳಿಯಲು ಹಾಗೂ ಆಶೀರ್ವಾದ ಪಡೆಯಲು ಗುರುನಿವಾಸಕ್ಕೆ ಬಂದರು. 

ಸಾಮಾನ್ಯವಾಗಿ ಗುರುನಾಥರು ಭಾವ ಪರಿಶುದ್ಧತೆಗೆ ಪ್ರಾಮುಖ್ಯತೆ ನೀಡುತ್ತಿದ್ದರೇ ಹೊರತು ಬಾಹ್ಯ ಶುದ್ಧತೆ ಹಾಗೂ ಸ್ಥಾನಮಾನಗಳಿಗಲ್ಲ. 

ಅಂದು ಬಂದ ಜನರು ಗುರುನಾಥರಲ್ಲಿ ಹೀಗೆ ಕೇಳಿದರು: "ಗುರುಗಳೇ ನಮ್ಮ ಪಕ್ಷದ ಗೆಲುವು ನಿಶ್ಚಿತವೇ? ಹಾಗೂ ನಮ್ಮ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರಧಾನಿಯಾಗುವುದು ಖಂಡಿತವಲ್ಲವೇ? ನಾವು ವಿಜಯಯಾತ್ರೆಗೆ ಸಿದ್ಧ ಮಾಡಿಕೊಳ್ಳಬಹುದಲ್ಲವೇ?" . 

ಆಗ ಗುರುನಾಥರು "ನೋಡ್ರಯ್ಯಾ, ನೀವಂದಂತೆ ನಿಮ್ಮ ಪಕ್ಷವೇ ಗೆಲ್ಲುತ್ತದೆ. ನಿಮ್ಮ ನಿಯೋಜಿತ ಅಭ್ಯರ್ಥಿಯೇ ಪ್ರಧಾನಿಯಾಗಿ ಆಯ್ಕೆಯಾಗುವರು. ಆದರೆ ಆತ ಪಕ್ಷದ ಸಭೆಯೊಂದರಲ್ಲಿ ಮಾನವ ಬಾಂಬ್ ದಾಳಿಗೆ ಆಹುತಿಯಾಗುವರು. ನೀವು ಶೋಕಯಾತ್ರೆಗೆ ಸಿದ್ಧಮಾಡಿಕೊಳ್ಳುವುದು ಒಳಿತು" ಎಂದರು. 

ಗುರುನಾಥರ ನೇರ ನಡೆ ನುಡಿಯ ಅರಿವಿದ್ದ ಅವರು ಎದುರು ಮಾತಾಡಲು ಅಥವಾ ಪ್ರಶ್ನಿಸಲು ಧೈರ್ಯ ಸಾಲದೇ ಅಲ್ಲಿಂದ ಹೊರಟು ಹೋದರು. 

ಚುನಾವಣಾ ಫಲಿತಾಂಶ ಬಂತು. ಗುರುವಾಕ್ಯದಂತೆಯೇ ಆ ಪಕ್ಷವು ಬಹುಮತ ಪಡೆದು ನಿಯೋಜಿತ ಅಭ್ಯರ್ಥಿಯೇ ಪ್ರಧಾನಿಯೂ ಆದರು. ಆದರೆ ಕೆಲವು ತಿಂಗಳಲ್ಲಿ ಆ ಪ್ರಧಾನಿಗಳು ಭಾಗವಹಿಸಿದ್ದ ಸಭೆಯೊಂದರಲ್ಲಿ ಮಾನವ ಬಾಂಬ್ ಸ್ಫೋಟಗೊಂಡು ಆ ಪ್ರಧಾನಿಗಳ ದೇಹ ಗುರುತೇ ಸಿಗದಂತೆ ಛಿದ್ರ ಛಿದ್ರವಾಗಿ ಹೋಯಿತು. ಗುರುವಾಕ್ಯ ನಡೆದಿತ್ತು. 

ಗುರುನಾಥರು ಬೆಂಗಳೂರು ಸಮೀಪವಿರುವ ಒಂದು ಅದ್ವೈತ ಮಠಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು. 

ಒಮ್ಮೆ ಹೀಗೆ ಹೋಗಿದ್ದಾಗ ಆ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಬಂದು ಗುರುನಾಥರಿಗೆ ನಮಸ್ಕರಿಸಿ ಹೀಗೆ ಕೇಳಿದರು. "ಗುರುಗಳೇ ನಮ್ಮ ಮಠದಲ್ಲಿ ನಾಲ್ಕು ನಾಯಿಗಳಿವೆ. ಪೂಜೆಯಾಗಿ ಮಂಗಳಾರತಿಯ ಹೊತ್ತಿಗೆ ಸರಿಯಾಗಿ ಆ ನಾಲ್ಕು ನಾಯಿಗಳು ಜೋರಾಗಿ ಊಳಿಡುತ್ತವೆ. ಏನು ಮಾಡಿದರೂ ಅವನ್ನು ತಡೆಯಲಾಗುತ್ತಿಲ್ಲ" ಎಂದರು. 

ಆಗ ಗುರುನಾಥರು ನಗುತ್ತಾ: "ನಾವು ಮಾಡಿದ ಕರ್ಮಕ್ಕೆ ಅನುಸಾರವಾಗಿ ನಮ್ಮ ಜನನವಾಗುತ್ತದೆ. ಹೇಗೆ ನನ್ನ ಹಿಂದೆ ನನ್ನ ನೆರಳು ಬರುತ್ತದೆಯೇ ವಿನಃ ಇನ್ನೊಬ್ಬರ ನೆರಳಲ್ಲ. ಹಾಗೆಯೇ ಕರ್ಮವೂ ಕೂಡ. ಅಂತೆಯೇ ಆ ನಾಯಿಗಳು ಬೇರಾರೂ ಅಲ್ಲ. ಹಿಂದೆ ಇದೆ ಮಠದಲ್ಲಿ ಸೇವೆಯಲ್ಲಿದ್ದವರು (ಅವರ ಹೆಸರನ್ನು ಹಾಗೂ ಮಾಡಿದ ತಪ್ಪನ್ನು ವಿವರಿಸಿದರು). 

"ಅಂದು ಮಾಡಿದ ತಪ್ಪಿಗಾಗಿ ಇಂದು ಈ ಜನ್ಮ ಬಂದಿದೆ. ಅದರಲ್ಲೊಬ್ಬರು ಈ ಮಠದ ಹಂಡೆ ಕದ್ದವರು. ಮತ್ತೊಬ್ಬರು ಬೆಳ್ಳಿ ಚೊಂಬು ಕದ್ದವರು. ಮತ್ತೊಬ್ಬರು ತಟ್ಟೆ ಕದ್ದವರು. ಮತ್ತೊಬ್ಬರು ಆಭರಣ ಕದ್ದವರು. ಅದಕ್ಕೆ ಇಂದು ಈ ಗತಿ ಬಂದಿದೆ" ಎಂದು ನುಡಿದು ಮಾತು ಮುಗಿಸಿದರು. ಕರ್ಮದ ಸೂಕ್ಷ್ಮತೆಯ ಈ ಗಂಭೀರತೆಯನ್ನು ತಿಳಿದ ನಾವು ನಮ್ಮ ನಡವಳಿಕೆಯನ್ನು ಅವಲೋಕಿಸತೊಡಗಿದೆವು....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Thursday, January 26, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 114


    ಗ್ರಂಥ ರಚನೆ - ಚರಣದಾಸ 


ಮಹಾಚೇತನ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರು ಕರುಣಾಮೂರ್ತಿ, ನಂಬಿದ ಭಕ್ತರ ಭಾವ ಬಂಧನದಿಂದ ಬಿಡಿಸಲು ಸದ್ಗುರು ಸದಾ ಕಾಯುತ್ತಿರುವನು. ಕರ್ಮ ಕ್ಷಯವಾಗದೇ ಗುರು ದರ್ಶನ ದುರ್ಲಭವು. 

ಒಮ್ಮೆ ಗುರುನಾಥರು ಇದ್ದಕ್ಕಿದ್ದಂತೆಯೇ ಮನೆಯಿಂದ ಹೊರಟು ಊರೊಳಗಿನ ಒಬ್ಬ ಭಕ್ತರ ಮನೆಗೆ ಹೋದರು. ಅಲ್ಲಿದ್ದ ವಯೋವೃದ್ಧ ಮಹಿಳೆಯನ್ನು ಕರೆದು ಹೀಗೆ ಹೇಳಿದರು. 

"ಅಮ್ಮಾ, ನಿನ್ನ ಕೈಯಿಂದ ಊಟ ಮಾಡುವ ಬಯಕೆಯಾಗಿದೆ. ನನಗೆ ಹಸಿವಾಗುತ್ತಿದೆ. ಊಟ ಹಾಕು" ಎಂದು ಹೇಳಿ ತಟ್ಟೆ ತೆಗೆದುಕೊಂಡು ಆ ಮಹಿಳೆಯ ಕೈಯಿಂದ ಊಟ ಹಾಕಿಸಿಕೊಂಡು ಊಟ ಮಾಡಿ ಕೈಮುಗಿದು ಅಲ್ಲಿಂದ ಹೊರಟು ಮನೆ ಸೇರಿದರು. 

ಅದಾಗಿ ಹತ್ತು ನಿಮಿಷಗಳಲ್ಲಿ ಆ ಮನೆಯಿಂದ ಆ ವಯೋವೃದ್ಧೆ ದೇಹ ಬಿಟ್ಟರು ಎಂಬ ವಿಷಯ ತಿಳಿದು ಬಂತು. 

ಆಗ ಜೊತೆಯಲ್ಲಿದ್ದ ಭಕ್ತರು ಹೀಗೆ ಕೇಳಿದರು. "ಗುರುನಾಥರೇ ಇದೇನಿದು? ಈ ವಿಚಾರ ನಿಮಗೆ ಮೊದಲೇ ತಿಳಿದಿತ್ತೇ?". 

ಗುರುನಾಥರು "ಹೌದಯ್ಯಾ ಗೊತ್ತಿತ್ತು. ಆಕೆಗೆ ಸದ್ಗತಿ ಕಾಣಿಸಬೇಕಿತ್ತು. ಅದಕ್ಕಾಗಿ ಆಕೆಯ ಕೈಯಿಂದ ಊಟ ಮಾಡಿ ಬಂದೆ" ಎಂದರು. 

ಮತ್ತೊಮ್ಮೆ ಇಬ್ಬರು ಸ್ನೇಹಿತರು ಬೆಂಗಳೂರಿನಿಂದ ಅದ್ವೈತ ಪೀಠದ ಯತಿಗಳ ದರ್ಶನಕ್ಕಾಗಿ ಹೊರಟಿದ್ದರು. ಬಸ್ಸಿನಲ್ಲಿ ಸ್ನೇಹಿತರಿಂದ ಗುರುನಾಥರ ಬಗ್ಗೆ ತಿಳಿದು ಮಾರ್ಗ ಮಧ್ಯದಲ್ಲಿ ಅಂದರೆ ಸಖರಾಯಪಟ್ಟಣದಲ್ಲಿ ಇಳಿದು ನೇರವಾಗಿ ಗುರುನಿವಾಸಕ್ಕೆ ಬಂದರು. 

ಅವರು ಮನೆ ಬಾಗಿಲು ಪ್ರವೇಶಿಸುವ ಮೊದಲೇ ಗುರುನಾಥರು ಅವರಿಗೆ ಹೀಗೆ ಹೇಳಿದರು. "ನೀವು ಅದ್ವೈತ ಪೀಠದ ದರ್ಶನಕ್ಕಾಗಿ ಹೊರಟವರು. ಅರ್ಧದಲ್ಲಿ ಇಳಿದು ಇಲ್ಲಿಗೆ ಬಂದಿರುವಿರಿ. ಅದು ಕೂಡದು. ಮೊದಲು ಆ ಯತಿಗಳ ದರ್ಶನವಾಗಬೇಕು. ಆ ನಂತರ ಇಲ್ಲಿಗೆ ಬನ್ನಿ. ನಾನು ಸಿಗುತ್ತೇನೆ" ಎಂದರು. 

ತನ್ನ ಪ್ರತೀ ನಡೆಯನ್ನು ನೋಡಿದಾಕ್ಷಣವೇ ಹೇಳಿದ ಗುರುನಾಥರನ್ನು ಕಂಡು ಆ ವ್ಯಕ್ತಿ ಆಶ್ಚರ್ಯಚಕಿತರಾದರು. ನಂತರ ಗುರುನಿವಾಸದಲ್ಲಿ ಆಹಾರ ಸೇವಿಸಿ, ಅಲ್ಲಿಂದ ಮೊದಲು ನಿಗದಿಯಾದಂತೆ ಅದ್ವೈತ ಪೀಠದ ಗುರುಗಳ ದರ್ಶನ ಮಾಡಿ ಮರುದಿನ ಸಖರಾಯಪಟ್ಟಣಕ್ಕೆ ಬಂದರು. 

ಆದರೆ ಅದೇನು ವಿಧಿಯೋ ಅವರಿಗೆ ಗುರುನಾಥರ ದರ್ಶನವಾಗಲೇ ಇಲ್ಲ. 

ಗುರುನಾಥರು ಯಾವುದೇ ಸಮಸ್ಯೆಯನ್ನು ತಾನು ಪರಿಹರಿಸಿದೆ ಎಂದು ಎಂದಿಗೂ ಹೇಳಿರಲಿಲ್ಲ. ಎಲ್ಲವನ್ನು ಗುರುವಿಗೆ ಸಮರ್ಪಿಸಿ ಬದುಕಿದ್ದರು. ಇಲ್ಲಿ ಆ ಮಹಾಚೇತನದ ವಿನಯ ಹಾಗೂ ಸರಳತೆ ಎಲ್ಲ ಕಾಲಕ್ಕೂ ಮಾದರಿಯಾಗಿ ನಿಲ್ಲುತ್ತದೆ....,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 113


    ಗ್ರಂಥ ರಚನೆ - ಚರಣದಾಸ 


ಶಬ್ಧ ಬ್ರಹ್ಮ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರು ದೇಹ ಬಿಡುವ ಸುಮಾರು ಒಂದೆರಡು ತಿಂಗಳಿನಿಂದ ಆಗಾಗ್ಗೆ ಹೀಗೆ ಹೇಳುತ್ತಿದ್ದರು. "ಇನ್ನೊಂದು ತಿಂಗಳು ಕಣಯ್ಯಾ.. ಆಮೇಲೆ ನಾನು ಇರೋದಿಲ್ಲ. ಇನ್ನು ಈ ದೇಹ ಇಟ್ಕೊಂಡು ಕೆಲಸ ಮಾಡಕ್ಕಾಗೋಲ್ಲ" ಅಂತಿದ್ರು. ಜೊತೆಗೆ ಮನೆಯಿಂದ ಹೆಚ್ಚು ದೂರ ಪ್ರಯಾಣ ಹೋಗುತ್ತಿರಲಿಲ್ಲ. ಎಲ್ಲೇ ಹೋದರೂ ರಾತ್ರಿ 10:30 ರ ಒಳಗೆ ಮನೆ ಸೇರಿಕೊಳ್ಳುತ್ತಿದ್ದರು. 

ಇದಕ್ಕೂ ಮೊದಲು ಎಂದರೆ ಸರಿಯಾಗಿ ಒಂದು ವಾರ ಮೊದಲು ಗುರುನಾಥರು ಊರ ಮಹಿಳೆಯರನ್ನು ಕರೆಸಿ "ಸೌಂದರ್ಯಲಹರಿ" ಹೇಳಿಸಿ ಮುತ್ತೈದೆಯರಿಗೆ ಹೂವು, ಹಣ್ಣು, ಬಟ್ಟೆ ನೀಡಿ ಗೌರವಿಸಿದರು. ನಂತರ ಅಲ್ಲಿದ್ದ ಅದೇ ಊರಿನ ಓರ್ವ ಮಹಿಳೆಗೆ ಹೀಗೆ ಹೇಳಿದರು. "ನೋಡು ಇಂದಿಗೆ ಸರಿಯಾಗಿ ಒಂದು ವಾರ. ನಾನಿರೋದಿಲ್ಲ. ಬೆಳಗಿನ ಜಾವ ಎರಡು ಗಂಟೆಗೆ (ನನ್ನ ಹೆಸರನ್ನು ಹೇಳಿ) ಚರಣದಾಸನನ್ನು ಇಂಥ ವ್ಯಕ್ತಿ ಬಂದು, ಅಮ್ಮನನ್ನು ಸಮಾಧಾನ ಮಾಡುವ ಗಟ್ಟಿ ಜನ ಯಾರಿರುವರು? ಎಂದು ಚರಣದಾಸನನ್ನು (ನನ್ನನ್ನು) ಕೇಳುವರು. ಆಗ ಇವನು (ನಾನು) ನಿಮ್ಮ ಹೆಸರನ್ನು ಹೇಳುವನು. ಹಾಗೂ ಇವನೇ (ನಾನು) ನಿಮ್ಮನ್ನು ಕರೆಯಲು ಬರುವನು. ಸಿದ್ಧವಾಗಿರಿ" ಎಂದು ಹೇಳಿದರು. ಈ ಮಾತು ನನಗೆ ವಿಚಿತ್ರವೆನಿಸಿತು. 

ಈ ಮಧ್ಯೆ ಚಿಕ್ಕಮಗಳೂರಿನ ಒಬ್ಬರ ಮನೆಯಲ್ಲಿ ಪಾದುಕಾಪೂಜೆ ಮಾಡಿದ್ದ ಗುರುನಾಥರು ಆ ಮನೆಯಾಕೆಯನ್ನು "ಪ್ರಸಾದ ತಂದು ಕೊಡು" ಎಂದು ವಿನಂತಿಸಿದ್ದರೂ ಆಕೆ ಬಂದಿರಲಿಲ್ಲ. 

ಕೊನೆಗೆ ದೇಹ ಬಿಡುವ ನಲವತ್ತೆಂಟು ಗಂಟೆ ಮೊದಲು ನನ್ನ ಕೈಯಿಂದ ಆಕೆಗೆ ಕರೆ ಮಾಡಿಸಿದ ಗುರುನಾಥರು ಹೀಗೆ ವಿನಂತಿಸಿದರು. "ಅಮ್ಮ, ನೀ ಬರಲು ಕಾರನ್ನು ಕಳಿಸುತ್ತೇನೆ. ನಿನ್ನ ಬಲದ ಮೇಲೆ ನಾನು ಇನ್ನೂ ಒಂದು ವರ್ಷ ಬದುಕಬಹುದು. ನನಗಿನ್ನೂ ಕೆಲಸ ಮಾಡುವುದಿದೆ. ಎಂಟು ಮದುವೆ ಮಾಡಿಸುವುದಿದೆ. ದಯಮಾಡಿ ಬಂದು ಹೋಗು" ಎಂದರು. 

ಆದರೆ ಆಕೆ ಸರಿಯಾಗಿ ಉತ್ತರಿಸಲಿಲ್ಲ. ಆಗ ಗುರುನಾಥರು "ನೋಡು. ಈಗ ಬರದಿದ್ದಲ್ಲಿ ಇನ್ನು ನಲವತ್ತೆಂಟು ಗಂಟೆ ನಂತರ ನಾನು ನಿನಗೆ ಜೀವಂತವಾಗಿ ಸಿಗೋಲ್ಲ" ಎಂದು ನುಡಿದು ಫೋನಿಟ್ಟರು. 

ಈ ಮಾತನ್ನು ಕೇಳಿ ವಿಚಿತ್ರವೆನಿಸಿದ ಚರಣದಾಸನಾದ ನಾನು ಗುರುನಾಥರ ಕಡೆ ಏನದು? ಎಂಬಂತೆ ನೋಡಲು, ಗುರುನಾಥರು "ಏನಿಲ್ಲ ಹೆದರಿಸಬೇಕು ಕಣಯ್ಯಾ" ಅಂದ್ರು. ಆದರೆ ಆ ಮುಖದಲ್ಲಿ ನಿರ್ವಿಕಾರ ಭಾವ ಎದ್ದು ಕಾಣುತ್ತಿತ್ತು. ಎಂದಿನ ತಮಾಷೆ ಇರಲಿಲ್ಲ. 

ನಾನು ಆಗಲೇ ಹೇಳಿದಂತೆ ಗುರುನಾಥರು ದೇಹ ತ್ಯಾಗ ಮಾಡಿದ್ದು 31ನೇ ಜುಲೈ 2010. ಅದಕ್ಕೂ ಸುಮಾರು 2-3 ತಿಂಗಳ ಮುಂಚಿನಿಂದ ಆಗಾಗ್ಗೆ "ಇಲ್ಲಪ್ಪಾ, ಇನ್ನು ಈ ದೇಹ ಇಟ್ಟುಕೊಂಡು ಕೆಲಸ ಮಾಡಕ್ಕಾಗಲ್ಲ. ಭಾರ ಜಾಸ್ತಿ ಆಯಿತು" ಅಂತ ಹೇಳ್ತಾ ಇದ್ರು. ಜೊತೆಗೆ "ನಾ ಇನ್ನೆಷ್ಟು ಹಗಲು ಇರ್ತೀನಪ್ಪಾ?" ಎಂದು ಪ್ರಶ್ನಿಸುತ್ತಿದ್ದರು. 

ಒಮ್ಮೆ ನಾನು ಅವರ ತೋಟದ ತೆಂಗಿನ ಮಡಿಲನ್ನು (ಹೆಡೆ) ಅವರ ಮೂರು ತೋಟದಿಂದ ಆಯ್ದು ಗಾಡಿಗೆ ತುಂಬಿ ತಂದು ಅದನ್ನು ಮನೆಯ ಹಿಂದೆ ಜೋಡಿಸುತ್ತಿದ್ದೆ. ಎಂದಿಗಿಂತ ಆ ವರ್ಷ ಅತಿ ಹೆಚ್ಚು ತಂದಿದ್ದೆ. 

ಅದನ್ನು ನೋಡಿದ ಗುರುನಾಥರು "ಜೋಡಿಸು ಮುಂದೆ ಬೇಕಾಗುತ್ತೆ" ಅಂದಿದ್ರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಆ ನಂತರ ದೇಹ ಬಿಟ್ಟಾಗ ಉರುವಲಿಗೆ ಇದನ್ನು ಬಳಸಿದ್ರು. ಆಗ ನನಗೆ ಅವರ ಮಾತಿನ ಅರ್ಥವಾಗಿತ್ತು. 

ಆ ಎರಡು ತಿಂಗಳಿಂದ ಈಚೆಗೆ ಗುರುನಾಥರು ಬೇರೆ ಯಾರ ಮನೆಯಲ್ಲಿಯೂ ರಾತ್ರಿ ಉಳಿದುಕೊಳ್ಳುತ್ತಿರಲಿಲ್ಲ. 

ಇದಕ್ಕೂ ಮೊದಲು ಒಮ್ಮೆ ನನ್ನನ್ನು ಹಠಾತ್ತಾಗಿ ಗುರುನಿವಾಸದಿಂದ ಮೂರು ಗಂಟೆ ಕ್ರಮಿಸುವಷ್ಟು ದೂರದಲ್ಲಿದ್ದ ಅದ್ವೈತ ಪೀಠಕ್ಕೆ ಹೋಗಿ ಬಾ ಅಂದ್ರು. 

ಅಂದು ನನಗೆ ವಿಪರೀತ ಸಿಟ್ಟು ಬಂತು. ನಾನು ಸಿಟ್ಟಿನಿಂದ "ಗುರುಗಳೇ ಇಲ್ಲಿ ವಿಪರೀತ ಕೆಲಸವಿದೆ. ನೀವು ಹೀಗೆ ಕಳಿಸುತ್ತಾ ಇದ್ದೀರಾ. ಈ ಥರ ಮಾಡುವ ಬದಲು ನನ್ನ ಕೆಲಸ ಮಾಡಿ ಕೊಟ್ಟು ಕಳಿಸಿ ಬಿಡಿ" ಅಂದೆ ಬೇಸರದಿಂದ. 

ಆಗ ಗುರುನಾಥರು ಹೀಗೆ ಹೇಳಿದರು. "ಅಯ್ಯಾ, ಯಾರು ಯಾರ ಜೊತೆಗೂ ಇರೋಕ್ಕಾಗಲ್ಲ. ಇನ್ನು ನೀ ನನ್ನ ಜೊತೆ ಇರ್ತೀಯಾ?" 

ನಾನು ನನ್ನ ದುಡುಕಿನ ಅರಿವಾಗಿ, "ಸಾರ್, ನಾ ಹಾಗೆ ಹೇಳಿದ್ದಲ್ಲ. ವಿಪರೀತ ಕೆಲಸ ಇರೋವಾಗ ನಾ ಹೇಗೆ ಹೋಗಲಿ" ಎಂದು ಅಳತೊಡಗಿದೆ. ಆಗ ಗುರುನಾಥರು "ಸರಿ ಬಿಡು" ಅಂದ್ರು. 

ಈ ಎಲ್ಲ ಘಟನೆಗಳನ್ನು ಪರಿಶೀಲಿಸಿದಾಗ ಅವರು ದೇಹ ಬಿಡಲು ತೀರ್ಮಾನಿಸಿ ಬಿಟ್ಟಿದ್ದರು ಎಂಬುದು ತಿಳಿದು ಬರುವುದು.  ಆ ಕಾರಣಕ್ಕಾಗಿ ಇದನ್ನು ಇಲ್ಲಿ ದಾಖಲಿಸಿದ್ದೇನೆ. 

ಅದಕ್ಕೂ ಮೊದಲು ಅಂದ್ರೆ ಕೆಲ ವರ್ಷಗಳ ಹಿಂದೆಯೇ ಓರ್ವ ಗುರುಭಕ್ತರನ್ನು ಕರೆದು ಗುರುನಾಥರು ಹೀಗೆ ಹೇಳಿದ್ದರು. "ನಾನು ಇಚ್ಛಾ ಮರಣಿ. ಅಂದ್ರೆ ನನಗೆ ಬೇಕೆನಿಸಿದಾಗ ದೇಹತ್ಯಾಗ ಮಾಡುತ್ತೇನೆ. ಯಾವತ್ತು ನನ್ನ ಬಗ್ಗೆ ದಿನ ಪತ್ರಿಕೆಯಲ್ಲಿ ಬರೆಯುವರೋ ಅದಾಗಿ ಎಂಟು ದಿನಕ್ಕೆ ನಾನು ದೇಹ ಬಿಡುವೆ" ಎಂದಿದ್ದರು. 

ಅಂತೆಯೇ ಒಂದು ಭಾನುವಾರದಂದು ಪತ್ರಿಕೆಯಲ್ಲಿ "ಗುರುವೆಂದರೆ ಹೇಗಿರಬೇಕು" ಎಂಬ ಶೀರ್ಷಿಕೆ ಹಾಗೂ ಗುರುನಾಥರ ಫೋಟೋದೊಂದಿಗೆ ಸಂಪಾದಕೀಯದಲ್ಲಿ ಗುರುನಾಥರ ಬಗ್ಗೆ ಬರೆಯಲ್ಪಟ್ಟಿತ್ತು. ಅದಾಗಿ ಎಂಟನೇ ದಿನಕ್ಕೆ ಗುರುನಾಥರು ದೇಹತ್ಯಾಗ ಮಾಡಿದ್ದರು. 

ಬಹುಶಃ ಆ ಒಂದು ವಾರದ ಮೊದಲು ಗಣಪತಿ ಉಪಾಸಕರಾದ ದಂಪತಿಗಳು ಗುರುದರ್ಶನಕ್ಕಾಗಿ ಬಂದಿದ್ದರು. ಅವರನ್ನು ಮನೆಯೊಳಗೆ ಕರೆದು ನಮಸ್ಕರಿಸಿ ಗೌರವಿಸಿದ ಗುರುನಾಥರು ಹೀಗೆ ಕೇಳಿದರು. 

"ಗಣಪತಿಯೇ ಬಂದಿರುವನು ಎಂಬುದು ನನಗೆ ತಿಳಿದಿದೆ. ನನ್ನ ಬಗ್ಗೆ ಏನಾದರೂ ಹೇಳಿ" ಎಂದರು. 

ಆ ದಂಪತಿಗಳು "ನೀವಿನ್ನು ಬದುಕಿರುವುದು ಕೇವಲ ಒಂದು ವಾರ ಮಾತ್ರ" ಎಂದರು. 

ಅದು ಹಾಗೆಯೇ ಆಯಿತು..... ....,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Tuesday, January 24, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 112


    ಗ್ರಂಥ ರಚನೆ - ಚರಣದಾಸ 


ಪರಿಪಾಲಕ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರು ಎಲ್ಲೆಲ್ಲಿ ಇರುತ್ತಿದ್ದರೋ ಅಲ್ಲೆಲ್ಲಾ ಅನ್ನಾಹಾರಗಳಿಗೆ ಕೊರತೆ ಇರುತ್ತಿರಲಿಲ್ಲ. ಮಾತ್ರವಲ್ಲ ಅಲ್ಲಲ್ಲಿ ಇರುತ್ತಿದ್ದ ಜನರು ಯಾವುದೇ ಕಷ್ಟದಲ್ಲಿದ್ದು ಏನನ್ನಾದರೂ ತಿನ್ನಬಯಸಿ ಸಾಧ್ಯವಾಗದೇ ಇದ್ದಲ್ಲಿ ತಕ್ಷಣವೇ ಅವರ ಭಾವನೆಗಳಿಗೆ ಸ್ಪಂದಿಸಿ ಅವರ ಇಚ್ಛೆಗಳನ್ನು ಈಡೇರಿಸುತ್ತಿದ್ದ ರೀತಿ ವಿಶಿಷ್ಟವಾದುದು. 

ಗುರುನಿವಾಸದಿಂದ ಅನತಿ ದೂರ ವಾಸವಿದ್ದ ವಯೋವೃದ್ಧ ಮುದುಕಿಯೊಬ್ಬಳಿದ್ದಳು. ಆಕೆ ಜೀವನ ನಿರ್ವಹಣೆಗೆ ಹೂವು ಮಾರುತ್ತಿದ್ದಳು. ಆಕೆ ಎಷ್ಟೇ ಹೂವು ಮಾರುತ್ತಿದ್ದರೂ ವ್ಯಾಪಾರವಾಗುತ್ತಿರಲಿಲ್ಲ. ಇದನ್ನರಿತ ಗುರುನಾಥರು ಆಕೆಯನ್ನು ಕರೆದು ಹೂವು ತೆಗೆದುಕೊಳ್ಳಲಾರಂಭಿಸಿದರು. ಆಕೆ ತರುತ್ತಿದ್ದ ಹೂವಿಗಿಂತ ಹೆಚ್ಚು ಹಣವನ್ನು ನೀಡುತ್ತಿದ್ದ ಗುರುನಾಥರು ಆಕೆಯ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟರು. 

ಯಾವುದೇ ದೇಗುಲಗಳಿಗೆ ಹೂವನ್ನು ಕಳಿಸಬೇಕಿದ್ದಲ್ಲಿ ಚರಣದಾಸನಾದ ನನ್ನನ್ನು ಆ ಅಜ್ಜಿಯ ಮನೆಗೆ ಕಳಿಸಿ ತರಿಸುತ್ತಿದ್ದರು. ಆಕೆಗೆ ಆಗಾಗ್ಗೆ ಸೀರೆ, ಹಣ್ಣುಗಳನ್ನು, ಸಿಹಿ ತಿನಿಸುಗಳನ್ನು ನೀಡುತ್ತಿದ್ದರು. 

ಅದೇ ರೀತಿ ಊರಿನಲ್ಲಿ ಯಾರೇ ಭಕ್ತರು ಏನನ್ನಾದರೂ ತೆಗೆದುಕೊಳ್ಳಲು ಬಯಸಿ ಸಾಧ್ಯವಾಗದೆ ಇದ್ದಲ್ಲಿ ಅದನ್ನು ಮನೋವೇಗದಿಂದ ಅರಿತು ಅವರವರ ಮನೆಗೆ ತಲುಪಿಸಿ ಬಿಡುತ್ತಿದ್ದರು. 

ಹಾಗೆಯೇ ಇನ್ನೊಂದು ಸಂದರ್ಭ ಓರ್ವ ವ್ಯಕ್ತಿ (ಬಹುಶಃ ಉತ್ತರ ಕನ್ನಡ ಭಾಗದವರಿರಬೇಕು) ಬಂದರು. ಎಂದಿನಂತೆ ಗುರುಗಳು ವಿಚಾರಿಸಲಾಗಿ ಆತ ಹೀಗೆ ಹೇಳತೊಡಗಿದರು. "ಸ್ವಾಮಿ, ನಾನು ಸಂಸಾರಾಂದಿಗನಾಗಿದ್ದು ಮಕ್ಕಳಿದ್ದಾರೆ. ಈಗ ನನಗೆ ಸಂಸಾರ ಬೇಡವೆನಿಸಿದೆ. ಆದ್ದರಿಂದ ನಾನು ಸನ್ಯಾಸಿಯಾಗಬೇಕೆಂದಿರುವೆ. ತಾವು ದಯಮಾಡಿ ಅನುಗ್ರಹಿಸಿ" ಎಂದರು. 

ಆಗ ತುಸು ಸಿಟ್ಟಾದ ಗುರುನಾಥರು "ಸನ್ಯಾಸಿ" ಪದದ ಅರ್ಥ ಗೊತ್ತೇನಯ್ಯಾ ನಿನಗೆ?" ಎನ್ನಲು ಆತ ನಿರುತ್ತರರಾದರು. ಆಗ ಗುರುನಾಥರು ಹೀಗೆ ಹೇಳಿದರು. "ನಿಂಗೆ ಸನ್ಯಾಸ ಬೇಕೆಂದಲ್ಲಿ ನನ್ನಂತೆ ಎಲ್ಲವನ್ನೂ ದಾನ ಮಾಡಿ ರಸ್ತೆಯಲ್ಲಿ ನಿಂತುಕೋ. ಆಗ ಸನ್ಯಾಸದ ಅರ್ಥ ಗೊತ್ತಾಗುತ್ತೆ" ಅಂದ್ರು. ಆತ ಏನೂ ಮಾತನಾಡದೇ ಕುಳಿತಿದ್ದರು. 

ಕೆಲ ಹೊತ್ತಿನ ನಂತರ ಗುರುನಾಥರಿಗೆ ನಮಸ್ಕರಿಸಿ ಹೊರ ಹೋದ ಆ ವ್ಯಕ್ತಿ ತನ್ನ ವಾಚು, ಉಂಗುರ, ಅಂಗಿ ಹಾಗೂ ಕೈಯಲ್ಲಿದ್ದ ಹಣ ಎಲ್ಲವನ್ನೂ ಅಲ್ಲೇ ದಾರಿಯಲ್ಲಿ ಹೋಗುತ್ತಿದವರಿಗೆ ನೀಡಿ ಬರಿಗೈ ಆದರು. ಕೈಯಲ್ಲಿ ಊಟಕ್ಕೂ ಕಾಸಿಲ್ಲದ ಆ ವ್ಯಕ್ತಿ ಹೀಗೆ ಒಂದು ದಿನ ಕಳೆದರು. ನಂತರ ಹಸಿವು ತಾಳಲಾರದೇ ಗುರುನಿವಾಸಕ್ಕೆ ಬಂದರು. ಅಲ್ಲಿ ಅನ್ನಾಹಾರ ದೊರಕಿತು. 

ಆದರೆ ಉಳಿದುಕೊಳ್ಳಲು ಅವಕಾಶ ಸಿಗಲಿಲ್ಲ. ಆತ ಆ ಚಳಿಯ ಕಾಲದಲ್ಲಿ ಗುರುನಿವಾಸದ ಪಕ್ಕವಿದ್ದ ಬಾವಿಯ ಸಮೀಪ ಮಲಗಬೇಕಾಯಿತು. 

ಹೀಗೆ ಎರಡು ದಿನ ಕಳೆದ ನಂತರ ಆ ವ್ಯಕ್ತಿಯನ್ನು ಒಳಗೆ ಕರೆದ ಗುರುನಾಥರು ಹೀಗೆ ಹೇಳಿದರು. 

"ನೋಡಯ್ಯಾ ನೀ ಸನ್ಯಾಸಿ ಆಗಬೇಕೆಂದಿದ್ರೆ ಅದನ್ನು ನಿನ್ನ ವಿವಾಹದ ಮೊದಲೇ ಯೋಚಿಸಬೇಕಿತ್ತು. ಈಗ ನಿನ್ನನ್ನೇ ನಂಬಿ ಬಂದಿರುವ ನಿನ್ನ ಪತ್ನಿ ಹಾಗೂ ಮಕ್ಕಳನ್ನು ನಾಡು ದಾರಿಯಲ್ಲಿ ಕೈ ಬಿಟ್ಟರೆ ಅದು ಧಾರ್ಮ ವಿರುದ್ಧವಾಗುತ್ತದೆ. ಹಾಗೂ ಅವರ ನೋವು ನಿನ್ನ ಸನ್ಯಾಸ ಧರ್ಮಕ್ಕೆ ಚ್ಯುತಿ ತರುತ್ತದೆ ಅಲ್ಲವೇ?" ಎನ್ನಲು ಆತ ತಲೆ ತಗ್ಗಿಸಿ ನಿಂತರು. 

"ಸಂಸಾರದಿಂದ ನೀನು ಕರ್ತವ್ಯದಿಂದ ಮಿಮುಖವಾಗುವುದು ಸನ್ಯಾಸವಲ್ಲ. ಸಂಸಾರದಲ್ಲೇ ಇದ್ದು ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಾ ಫಲಾಫಲವನ್ನು ಭಗವಂತನಿಗೆ ಸಮರ್ಪಿಸಿ ಬದುಕುವುದೇ ನಿಜವಾದ ಸನ್ಯಾಸ. ಹೇಗೆ ಕಮಲ ಕೆಸರಿನಲ್ಲಿ ಹುಟ್ಟಿದರೂ ಒಂದಿನಿತೂ ಕೆಸರು ಅಂಟಿಸಿಕೊಳ್ಳದೇ ಇರುವುದೋ ಹಾಗೆಯೇ ಜೀವನ ಹೋಗು" ಎಂದು ಹೇಳಿ ಆತನಿಗೆ ಹಣ ಹಾಗೂ ವಸ್ತ್ರವನ್ನು ನೀಡಿ ಕಳಿಸಿಕೊಟ್ಟರು.....,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।