ಒಟ್ಟು ನೋಟಗಳು

Wednesday, March 24, 2021

ಆಡುತಿಹರೋ ಎಲ್ಲಾ ನನ್ನ ಬಕುತಿಯ ಕಂಡು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಆಡುತಿಹರೋ ಎಲ್ಲಾ ನನ್ನ ಬಕುತಿಯ ಕಂಡು ಅದು  ನಿಜವಲ್ಲವೆಂದು
ಮುಸು ನಗುತಿಹರೋ ಎಲ್ಲಾ  ಶುದ್ಧ ಭಾವದ ಹೊರತಾದ ಬರೀ ನಾಟಕವೆಂದೋ|

ಮಡಿಯಿಲ್ಲ ಮಂತ್ರದ ಸುಳಿವಿಲ್ಲ ಬರೀ ಕೈ ಮುಗಿದು ಸುತ್ತುವನಲ್ಲ ಎನ್ನುವರೋ
ಶಾಸ್ತ್ರದ ಅರಿವಿಲ್ಲ ನೇಮದ ಹಂಗಿಲ್ಲ ಬರೀ ಮಾತಿನಲೇ ಮುಳುಗಿನಲ್ಲ ಅನ್ನವರೋ||

ಇನ್ನೆಲ್ಲಿ ಹೋಗಲಿ ಇನ್ನೇನು ಮಾಡಲಿ ನನಗ್ಯಾರು ಗತಿ ದೊರೆಯೇ ಬರೀ ದೂರುವರೋ
ಎನ್ನ ಸಣ್ಣ ತನಕೆ ದೊರೆವ ಮನ್ನಣೆಗೆ ನಿನ್ನ ದೂರುವೆನೆಂದು ಎನ್ನ ಜರಿವರೋ|

ನೀ ತೂಗುವ ತಕ್ಕಡಿಯಲಿ ಎನಗಿಲ್ಲ ಬೆಲೆಯು ಎಲ್ಲಾ ನೋಡಿ ಹಂಗಿಪರೋ
ನೀ ಬಯಸಿದ ಬಕುತ ನಾನಲ್ಲ ಸುಮ್ಮನೆ ನಿನ್ನ ಗೆಲ್ಲದೇ ಸೋತಿಹನೆನ್ನುವರೋ|

ಎಲ್ಲರನೂ  ಮನ್ನಿಸುವ ಕರುಣಾಳು ದೊರೆಯು ಸಖರಾಯಪುರದಿ ಸಿಗುವನೆಂದರೋ
ಓಡೋಡಿ ಬಂದು ನೀ ಸಿಗುವೆಯೆಂದು ಶಿರಬಾಗಿಸಿ ನಿನ್ನಮುಂದೆ ಪಾಮರ ನಿಂತೆಹೆನೋ|

Wednesday, March 17, 2021

ನಾನ್ಯಾರು ನಿನ್ನ ಬೇಡಲು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ನಾನ್ಯಾರು ನಿನ್ನ ಬೇಡಲು ಏನಗೇನು ಯೋಗ್ಯತೆ ಇಹುದೋ ನಿನ್ನ ಕೋರಲು
ಮುಂದೆ ನಿಂತನೆಂದು ನೀ ಎನ್ನ ಹರಸ ಬೇಕೆಂಬ ಕಟ್ಟು ಪಾಡು ನಿನಗಿಲ್ಲವೋ|

ನೀ ಹಿಡಿದ ತಖಡಿಯಲಿ ಎನ್ನ ಕರ್ಮಗಳೇ ಭಾರವಾಗಿ ಅತ್ತ ಬಾಗಿಹದೋ
ಇನ್ನೊಂದು ಬದಿಯ ಪುಣ್ಯದಾ ತೂಕ ಹೆಚ್ಚಾಗದೆ ಬದುಕು ವ್ಯರ್ಥವಾಗಿಹುದೋ|

ನಿನ್ನೆಡೆಗೆ ನೋಟವಿಟ್ಟು ಮನದ ಭಾವಗಳ ಅತ್ತಿತ್ತ ಓಡಲು ಬಿಟ್ಟು ಮನ ಸೋತಿಹುದೋ
ನಿನ್ನಂಗಳದಿ ನಿಂತಾಗ ನೀನೇ ಎಲ್ಲಾ ಎನ್ನುವ ಮನ ಶ್ವಾನದಂತೆ ವಾಸನೆಯೊಳು ಸಿಲಿಕಿಹುದೋ|

ಯಾಕಿಷ್ಟು ತರಹದ ಅಮಿಷಗಳ ಬಲೆಯ ಬೀಸಿ ನನನ್ನೇಕೆ ಗೇಲಿ ಮಾಡುತಿಹದೋ
ನಿನ್ನಿಷ್ಟದ ಹಾದಿಯಲಿ ನಿನಗಿಷ್ಟದ ರೀತಿಯಲಿ ಎನ್ನ ಬದುಕು ನಡೆಸೆಂದು ಬೇಡುತಿಹದೋ|

ಬಕುತರಲೂ ವಿಧವುಂಟೇನು ನಾನ್ಯಾವ ಗುಂಪಿಗೂ ಸೇರದೆ ನಿನ್ನಿಂದ ದೂರಾದೆನೋ
ಸಖರಾಯಪುರದ ಸದ್ಗುರೂನಾಥ ನೀನೊಬ್ಬನೇ ಎನ್ನ ಸಂಕಟ ಅಲಿಪ ಮಹಾದೇವನೋ|

Monday, March 8, 2021

ಅನುಮಾನದ ಹುತ್ತದೊಳು ಮನವ ನಿಲ್ಲಿಸಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಅನುಮಾನದ ಹುತ್ತದೊಳು ಮನವ ನಿಲ್ಲಿಸಿ ನಿನ್ನ ಬಜಿಪನೆಂಬ ನಾಟಕವಾಡುತಿಹೆನೋ
ಇರುಳು ಮೊಬ್ಬಿನಲಿ ದಿನದ ಕುಕರ್ಮ ಕಾಡಿದಾಗ ಬೊಬ್ಬಿಡುತ ನಿನ್ನ ಬೇಡಿಹೆನೋ |

ಚಂದವಲ್ಲದ ಬಣ್ಣದ ಬದುಕಿನ ಬಲೆಯ ನೇಯುತ ನಿನ್ನ ಸೇವಿಪನಂತೆ ಹೊತ್ತು ಕಳೆಯುತಿಹೆನೋ
ಹೇಳುವುದೊಂದು ಮಾಡುವುದೆಂಬಂತೆ ಮುಖವಾಡದ ಮೊರೆಹೊಕ್ಕಿಹೆನೋ|

ನಿನ್ನ ಚರಿತ ಪಠಿಸುತ ನಿನ್ನ ಕೀರುತಿ ಹೊಗುಳುತ ಮಳ್ಳನಂತೆ ನಿನ್ನೆದುರು ನಿಂತಿಹೆನೋ
ಸುಮ್ಮನೆ ಕರುಣಿಸೆಂದೆನುತ ಕಣ್ಣಮುಚ್ಚಿ ಮನವೆಲ್ಲೋ ನೆಟ್ಟು ಬೇಡುತಿಹೆನೋ|

ನನ್ನದಲ್ಲದ ದುಡಿಮೆಯ ಫಲದಿ ನಿನ್ನ ಸೇವೆಗೈವೆನೆನುತ ಬೀಗುತಿಹೆನೋ
ಎಲ್ಲಾ ಅವನಿತ್ತುದಾದರೂ ನನ್ನದೆಂಬ ಹಂಮ್ಮಿನಲಿ ಎದೆ ಎತ್ತಿ ನುಡಿಯುತಿಹೆನೋ|

ಇದು ಬದುಕಲ್ಲ ಇದು ನಿಜವಲ್ಲವೆನಿಸಿದರೂ ಮೂಡ ಮನಕೆ ಸೋತಿಹೆನೋ
ಪ್ರಶ್ನೆಗಳ ಹೊರೆಹೊತ್ತು  ದೈನ್ಯದಲಿ ಮೊರೆಯಿಡುತ ಸಖರಾಯಪುರದ ನಿನ್ನಂಗಳದಿ  ನಿಂತೆನೋ|

Sunday, March 7, 2021

ಕಡಲ ಅಲೆಯಂತೆ ಬಂದೆರೆಗುವ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಕಡಲ ಅಲೆಯಂತೆ ಬಂದೆರೆಗುವ ಭಾವನೆಗಳ ಅಲೆಯ ತಡೆಯದಾದೆನೋ
ಹಾಯಿ ನಡೆಸುತ  ಸೋತ ಅಂಬಿಗನಂತಾಗಿ ಗುರುವೇ ನಿನ್ನನೇ ಮೊರೆ ಹೊಕ್ಕೆನೋ |

ತುಂಬಿದ ಕಡಲಂತೆ ಎನ್ನ ಮನವು ಗೊಂದಲದ ಗೂಡಾಗಿ ನಿನ್ನ ಕೂಗಿಹಿದೋ
ಅಲೆಗಳ ಏರಿಳಿತವೇ ಬದುಕಾದರೆ ಸರಿದೂಗಿಸುವ ಶಕ್ತಿ ನೀಡೆಂದು ಬೇಡುತಿಹುದೋ|

ಬೀಸುವ ಗಾಳಿಯು ಅಬ್ಬರದ ಅಲೆಯಾಗದೆ ಮುದ ನೀಡುವ ತಂಗಾಳಿ ಮಾಡೋ
ದೂರ ತೀರವ ಸೇರುವ ಹೋರಾಟದಿ ಆತಂಕ ತ0ದೊಡ್ಡದೆ  ಪಾರುಮಾಡೋ|

ಮರಳಂತೆ ತುಂಬಿಹುದು ಕಲ್ಮಶ ಭಾವಗಳು ನನ್ನ ಮನವೆಂಬ ಕಡಲ ತೀರದಲ್ಲೊ
ಬಂಧನಗಳ ಮರಳಿಂದ ಹೂತು ಹೋಗುವ ಮುನ್ನ ಓಡೋಡಿ ಬಂದು ಕರುಣೆ ತೋರೋ|

ನೀನೊಬ್ಬ  ಕರುಣೆಯಾ ಕಡಲೋ  ಆಳದ ಅರಿವಿಲ್ಲದೇ ನಿನ್ನ ಬೇಡುತಿಹೆನೋ
ನಿನ್ನೊಡಲ ಅಳದಲಿ ಹುದುಗಿ ಮರೆಯಾಗುವ ಆಸೆ ಹೊತ್ತ ಜಲಚರದಂತೆ ನಾನೋ|

ಆರು ಅರಿಗಳೆಂಬ ಕಡಲ ಕಳ್ಳರ ಕೈಗೆ ಸಿಗದಂತೆ ಎನ್ನ ಬದುಕ ಹಸನು ಮಾಡೋ
ಮಂದ ಬುದ್ಧಿಯ ಪಾಮರನನು ನಾನು ಲೌಕಿಕದ ಬಲೆಯ ಜಾಲದಲಿ ಸಿಲುಕಿಹೆನೋ|

ಅದೇಕೋ ನಿನ್ನ ಬೇಡುವ ಹಂಬಲದಿ ಹುಡುಕಾಡಿ ಕಾಡಿಬೇಡಿ ನಿನ್ನನೇ ನಂಬಿಹೆನೋ
ಸಖರಾಯಪುರದ ದೊರೆಯು ನೀನು ಕನಿಕರದಿ ಹರಸೆಂದು ಕೇಳುತಾ ಬಂದು ನಿಂತಿಹೆನೋ|