ಒಟ್ಟು ನೋಟಗಳು

Sunday, July 26, 2020

ಎಂಥಾ ವೈಭವವೋ ಬಲು ಆನಂದವೋ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಂಥಾ ವೈಭವವೋ ಬಲು ಆನಂದವೋ ಕೈಲಾಸದರೆಗಿಳಿದೆದೆಯೋ
 ಧರೆಗಿಳಿದ ಮಹಾದೇವನೋ ಗುರುವು  ಸಖರಾಯಪುರದವಾಸನೋ|

ಬೃಂದಾವನವೋ ಅದು ನಿಜ ಬಕುತರ ನೆಮ್ಮದಿಯ ತಾಣವೋ
ಹಸಿರು ತುಂಬುದೆಯೋ ತೆಂಗು  ಕಂಗುಗಳ ನಿರ್ಮಲ  ಪುಣ್ಯಭೂಮಿಯೋ|

ವಿಶ್ವ ವ್ಯಾಪಿಯೋ ನನ್ನ ಗುರುವಿನ ಕರುಣೆಯೋ ಬಲು ಅಪರೂಪವೋ
ಎಲ್ಲರಿಗೂ ದೊರೆವುದೋ ಮಹಾಮಹಿಮನ ಕೃಪೆಯ ಹಾರೈಕೆಯೋ|

ಪೂಜೆಯ ಆಡಂಬರವ ಒಲ್ಲನೋ ಗುರುವು ಮನದಾಳದ ಭಕುತಿಗೆ ಒಲಿದನೋ
ಅರಿತ ಬಕುತರ ಗುರುತಿಸೆ ನಾನೆಂಬ ಭಾವವ ಅಳಿಸೆ ಮುದದಿ ಸಲಹುವನೋ|

ಏನೂ ಬೇಡನೋ ನನ್ನ ಗುರುವು ತೋರದಿರು ನಿನ್ನ ಬಕುತಿಯ ಬಡತನವೋ
ಎಲ್ಲಾ ನೀನೆನುತ  ಪಡೆವೆನು ನೆಮ್ಮದಿಯ ಬದುಕಿನ  ನಿತ್ಯ ಪ್ರಸಾದವೋ|

Sunday, July 19, 2020

ಮೌನವಾಗಿರದ ಮನವು ನಿನ್ನ ನಾಮ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಮೌನವಾಗಿರದ ಮನವು ನಿನ್ನ ನಾಮ ಜಪಿಸದಲೇ ಕೊರಗಿಹುದು
ಮಾಡಿದ ಕರ್ಮಗಳ ನೆನೆ ನೆನೆದು ಎನ್ನ ಹೃದಯ ಭಾರವಾಗಿಹುದು ಗುರುವೇ|

ಬೆಳಕ ಕಾಣುವ ಹಂಬಲದಿ ಕತ್ತಲೆಯೊಳು ನಿನ್ನ ನುಡಿ ಕೇಳಲು ಕಾದಿಹೆನೋ
ಸರಿ ತಪ್ಪುಗಳ ಜಂಜಾಟದಲಿ ತಪ್ಪನೇ ಸರಿಯೆಂದು ಭ್ರಮಿಸಿ ಸೋತಿಹೆನೋ|

ಇನ್ಯಾರದೋ ಬಕುತಿಯನು ಮೀರಿಸುವ ಬರದಿ ತೋರಿಕೆಯ ಭಕುತಿ ತೋರಿದೆನೋ
ಹುಂಬ ತನದಿ ನಟಿಸಿ ನಿನ್ನ ಕರುಣೆಯ ಮಾತು ಕೇಳದೇ ಸಮಯ ಕಳೆದೆನೋ|

ನಿನ್ನ ಒಂದು ನೋಟಕೆ ಹಂಬಲಿಸಿ ಹುಂಬನಾಗಿ ನಿನ್ನ ಬೇಡುವುದೇ ಮರೆತೆನೋ
ಸೇವೆ ಮಾಡದೆಲೆ ಎನ್ನ ಕರುಣಿಸೆನ್ನಲು  ನನಗ್ಯಾವ ಬಲವಿದೆ ಅರಿಯೆನೋ|

ಪರಿಪೂರ್ಣ ಮಾಡೆನ್ನ ಬದುಕು ಬರಡಾಗಿ ಹೋಗದಿರಲಿ ಹರಸೆನ್ನನು
ಸಖರಾಯಧೀಶ ನೀನೇ ನನ್ನ ಪ್ರಭುವು ತೆರೆಯೋ ನನ್ನ ಒಳಗಣ್ಣನು |

ಇನ್ನೆಷ್ಟು ಹಾಡಲಿ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಇನ್ನೆಷ್ಟು ಹಾಡಲಿ ಗುರುವೇ ನಿನಗಿಷ್ಟವಾದ ಪದಗಳಲಿ
ಇನ್ನೆಷ್ಟು ಬೇಡಲಿ ಪ್ರಭುವೇ ನೀ ಒಪ್ಪುವ ಭಕುತಿಯ ವಿಧದಲಿ|

ನೀಡಿದೆ ಮತಿಯ ನೀನು ಪದಗಳಲಿ ಪೂಜಿಸುವ ಪರಿಯ ಎನ್ನ ಮನದಲಿ
ನಿಂತರೂ ಕುಳಿತರೂ ನಿನ್ನನೇ ನೆನೆಯುತ ಭಾವಗಳ ಬೆರೆಸಿ ಹಾಡುತಲಿ|

ಯಾಗ ಯಜ್ಞಗಳ ಹೊರತಾಗಿ ಮನದ ಮಾತುಗಳೇ  ಮಂತ್ರವಾಗಿದೆಯಿಲ್ಲಿ
ನೇಮ ನಿಯಮಗಳು ಅರಿವಿಲ್ಲ ಎನಗೆ ನಿನ್ನ ನಾಮ ಬಲವೊಂದೇ ಸಾಕೆನಿಸಿದೆ ಇಲ್ಲಿ|

ಮೌನದಲಿ ಮನದ ಭಾವನೆಗಳು ನಿನ್ನ ಭಜಿಸುವ ಹಾಡಾಗಿದೆ ಇಲ್ಲಿ
ಹೃದಯ ಕಮಲವು ನಿನ್ನ ಕುಳ್ಳಿರಿಸುವ ಮಂದಿರವಾಗಿ ಕಾದಿದೆ ಇಲ್ಲಿ|

ನೀ ನೆಲೆಸಿಹ ಬೃಂದಾವನವ ಕಾಣುವ ಹಂಬಲದಿ ಮನವು ಕಾದಿದೆ ಇಲ್ಲಿ
ಸಖರಾಯಪುರವದು ಪುಣ್ಯಭೂಮಿಯಾಗಿದೆ ನೀನು ಅವತರಿಸಿ ಹರಸಿದಾಗ ಇಲ್ಲಿ|

Monday, July 13, 2020

ಮನದ ಮಂದಿರದಲಿ ನಿನ್ನ ಕುಳ್ಳಿರಿಸಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಮನದ  ಮಂದಿರದಲಿ ನಿನ್ನ ಕುಳ್ಳಿರಿಸಿ ಮುದದಿ ಭಜಿಸುವೆನು ಗುರುದೇವಾ
ಅಂತರಂಗದ ಕದವ ತೆರೆದು ಒಳಗಣ್ಣ ತೆರೆಸಿ ಹರಸೋ ನನ್ನ ಮಹಾದೇವ|

ಬಿರುಗಾಳಿಯಂತೆ ಬರುವ ಮನದ ಬಯಕೆಗಳ ಅಲೆಯ ತಡೆಯೋ ಗುರುದೇವ
ಎನ್ನೊಡಲ ಆಳದಲಿ ಹುದುಗಿಹ ಲೌಕಿಕದ ದುರಾಸೆಯ ನಾಶಮಾಡೋ ದೇವ|

ಎಲ್ಲರಲೂ ದೈವ ಕಾಣುವ ಮನವಿತ್ತು ಮನುಜನಾಗಿ ಮಾಡೋ ಮಹಾದೇವ
ಎನ್ನ ಮನದೊಳಗಿನ ಕಪಟ ವಾಸನೆಯ ದೂರಮಾಡಿ ಶುದ್ಧಗೊಳಿಸೋ ಗುರುದೇವ|

ಬರೀ ಬದುಕಿಗಾಗಿ ಭಜಿಸದೆಲೆ ನಿನ್ನ ಇರುವ ಅರಿವಿನ  ಬಲ ನೀಡಿ ಸಲಹೋ ದೇವ
ಕಷ್ಟ ಕಾರ್ಪಣ್ಯಗಳ ಸುಳಿಯಲಿ ಸಿಲುಕಿಸಿ ಹದಮಾಡಿ ಹರಸೋ ನನ್ನ ದೇವ|

ಅಂತೆಕಂತೆಗಳ ನಡುವೆ ಸಂತೆ ಮಾಡುತಿಹ ಮನದ ಭ್ರಾಂತಿ ದೂರ ಮಾಡೋ ದೇವ
ಅತ್ತಿತ್ತ ಓಡುತಿಹ ಮತಿಯ ನಿನ್ನತ್ತ ಸೆಳೆದು ಕಾಪಾಡೋ ಸಖರಾಯಪುರದ ಮಹನೀಯ|

ಶ್ರೀ ವೆಂಕಟಾಚಲ ಅವಧೂತ ಸ್ತುತಿ - ರಚನೆ: ಶ್ರೀ ಸಾಯಿ ವರ್ಧನ , ಗಾಯನ: ವಿದೂಷಿ ಶ್ರೀಮತಿ. ರೇಖಾ ರವಿಶಂಕರ, ಮೈಸೂರು

ಗುಬ್ಬಿ ಚಿದಂಬರ ಆಶ್ರಮದ ವೇದಪಾಠ ಶಾಲೆಯ ಆಚಾರ್ಯರಾದ ಶ್ರೀ ಸಾಯಿ ವರ್ಧನ ( ಕಾವ್ಯ ನಾಮ:ಲಲಿತಸುತ , ಇವರು ಶ್ರೀ ವಿದ್ಯಾ ಉಪಸಕರು) - ಇವರು ಸಖರಾಯಪಟ್ಟಣ ವೆಂಕಟಾಚಲ ಅವಧೂತರ  ಕುರಿತು ಮಾಡಿರುವ ಸ್ತುತಿ, ಗಾಯನ: ಶ್ರೀಮತಿ. ರೇಖಾ ರವಿಶಂಕರ, ಮೈಸೂರು  - ವಿಡಿಯೋ ಕೃಪೆ: ಶ್ರೀಮತಿ. ಹೇಮಾ, ಬೆಂಗಳೂರು 

ಪಂಕಜಾಸನ ಫಾಲಲೋಚನ ಪಕ್ಷಿವಾಹನ ಸನ್ನಿಭಂ
ಚಂದ್ರಶೇಖರ ಭಾರತೀ ಗುರು ಪಾದ ಪಂಕಜ ಪೂಜಕಮ್
ಸದ್ಗುರುಂ  ಸಖರಾಯಪತ್ತನ ವಾಸಿನಂ ಕರುಣಾಕರಂ
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್ 

ಚಿತ್ತಶೋಧಕ ಮುಕ್ತಿದಾಯಕ ಹಂಸನಾಮಕ ಸದ್ಗುರುಂ 
ಆಶ್ರಿತಾಖಿಲ ಭಕ್ತಸಂಘ ಸಮಸ್ತಪಾಪ ನಿಬರ್ಹಣಂ
ವಾಂಛಿತಾರ್ಥಫಲ ಪ್ರದಾಯಕ ಪಾವನಾಂಘ್ರಿ ಸರೋರುಹಮ್
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್ 

ಸುಸ್ಮಿತಾನನಮಚ್ಯುತಂ ಮಮ ಚಿತ್ತಪದ್ಮ ದಿವಾಕರಂ
ಲೀಲಯಾ ಧೃತ ದೇಹಿನಂ ಮಮ ಕರ್ಮಬಂಧ ವಿಮೋಚಕಮ್
ಶ್ರೀ ಗುರುಂ ಕರಣಾಲಯಂ ಲಲಿತಾಸುತಾರ್ತಿ ನಿವಾರಣಂ
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್


Friday, July 10, 2020

ಬರುವನೋ ಗುರುನಾಥ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬರುವನೋ ಗುರುನಾಥ ಕರೆದಾಗ ನಿಮ್ಮ ಮನದ ಮನೆಯೊಳಗೆ
ನಿಲ್ಲುವನೋ ಮನೆಯೊಳಗೂ ಹೊರಗೂ ಭಾವ ಶುದ್ದಿ ತುಂಬಿ ಬೇಡಿದಾಗ|

ಮಂತ್ರ ತಂತ್ರ ಕೇಳಲೊಲ್ಲ ಅವ ನಿರಂತರ ಭಜಿಸಿರೆ ಸುಲಭದಿ ದೊರೆಯುವ
ನಾನು ಎನ್ನುತಾ ಮುಂದಡಿಯಿಟ್ಟರೆ ಮತ್ತೆಂದೂ ಸಿಗದೆ ಬಲು ಕಾಡಿಸುವ|

ನುಡಿಯ ನಂಬಿ ನಡೆದುದಾದರೆ ಭವ ಬಂಧನವನು ದಾಟಿಸಿ ಬಿಡುವನವ
ಅನುಮಾನಿಸದೆ ದಾರಿ ತುಳಿದರೆ ದಾರಿ ದೀಪವಾಗಿ ಬೆಳುಕು ತೋರುವವ|

ಸಾಧಕನ ನಿಜ ಗುರು ಅವ ಬಾಧಕಗಳ ಬಡಿದೋಡಿಸಿ ಕಾಯುವವ
ಅರಿವಿನರಿವು ಬೇಕೆನುತ ಭಜಿಸುತ ಬೇಡುವ ಬಕುತಗೆ ಹರುಷದಿ ಹರಸುವವ|

ಇನ್ನೇನು ಬೇಕು ನಿಜಬಕುತಗೆ ನಿನ್ನ ಪದತಲದಿ ಶಿರವಿಟ್ಟು ಶರಣಾಗಿ ಬೇಡುವ
ಸಖರಾಯಪುರದ ಮಹನೀಯ ನಿನ್ನೊಲುಮೆ   ಬೇಡುವ ಈ ಪಾಮರಗೆ ಒಲಿಯುವೆಯಾ|

Thursday, July 9, 2020

ಎಂಥಾ ಭಕುತನೋ ನಾನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಂಥಾ ಭಕುತನೋ ನಾನು ಬರೀ ಪದಗಳಲೇ ನಿನ್ನ  ಪೂಜಿಸಿಹೆನೋ
ನಿಜ ಭಕುತಿ ಮಾಡಲಿಲ್ಲ ನಾನು ಬೇಡುವುದೆಲ್ಲಾ ನೀಡು ಎನುತಿಹೆನೋ|

ಅಭಿಷೇಕ ಮಾಡಲಿಲ್ಲ ನಾನು ಧೂಪ ದೀಪ ತೋರದೇ ಬರಿಗೈಲಿ ಬೇಡುತಿಹೆನೋ
ಪುಷ್ಪ ಗಂಧಗಳಿಲ್ಲ ಮಲಿನ ತುಂಬಿದ ಮನಹೊತ್ತು ನಿನ್ನ ಮುಂದೆ ನಿಂತಿಹೆನೋ|

ಸೇವೆ ಮಾಡಲಿಲ್ಲ ನಾನು ನಿನ್ನ ಸೇವಕರ ಸಂಗ ತೊರೆದು ಹೋದೆನಲ್ಲೋ
ಪಾದ ನೋಡಲಿಲ್ಲ ನಾನು ತಲೆಯೆತ್ತಿ ತೋರಿಕೆಗೆ ಭಜಿಸಿ ನಿಂತೆನಲ್ಲೋ|

ಎಲ್ಲಾ ನೋಡುವರೆಂದು ಸಾಲಿನಲಿ ಮುಂದೆ ನಿಂತು ಬೀಗುತಿಹೆನೋ
ವೇಷ ಭೂಷಣಕೆ ಮೊರೆ ಹೋಗಿ  ನಿಜ ಭಕುತರ ಭಕುತಿ ಅರಿಯದಾದೆನೋ|

ನಿನ್ನಣತಿ ಇಲ್ಲದೇ ನಿನ್ನ ಭಕುತನೆನುತ ನಿನ್ನ ನಾಮ ಜಪಿಸುತಿಹೆನೋ
ಸಖರಾಯಪುರದ ದೊರೆಯೇ ಗುರುವೇ ನೀನು ಎನ್ನ ಮನ್ನಿಸಿ ಸಲಹುವೆಯಾ ಇನ್ನುI

Saturday, July 4, 2020

ಕಂಡಿರೇ ಕಂಡಿರೇ ನಮ್ಮ ನಡೆದಾಡುವ ಭಗವಂತನ ಕಂಡಿರೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕಂಡಿರೇ ಕಂಡಿರೇ ನಮ್ಮ ನಡೆದಾಡುವ ಭಗವಂತನ  ಕಂಡಿರೇ
ಸಖರಾಯಪುರವೆಂಬ ದಿವ್ಯ ಸನ್ನಿಧಿಯೊಳು ನೆಲೆಸಿಹ  ಮಹಾದೇವನ ಕಂಡಿರೇ|

ಗುರುನಾಥನೆನ್ನುವರು ಭಕುತರು ಸದ್ಗುರುಮಹಾರಾಜನೆಂದು ಭಜಿಸುವರು
ಭವಸಗರ ದಾಟಿಸುವ ಅಂಬಿಗನ ಅವತಾರವೇ ಅವಧೂತನೆನ್ನುವರು|

ಗುರುವೇ ನನ್ನ ದೊರೆಯೇ ಎನ್ನುತ ದೈನ್ಯದಿ ಅವನಂಗಳದಿ ಕಾಯುವರೋ
ಕರ್ಮಗಳ ಹೊರೆಹೊತ್ತು ಅವನ ದಿವ್ಯ ಪಾದರವಿಂದದಲಿ ಶಿರವಿಟ್ಟು ಮನ್ನಿಸೆನ್ನುವರು|

ಗುರುತತ್ವ ಅರಿಯಿರಿ ಎಂದೆನುತ  ಹಿರಿತನದಲಿ ಭಕುತರ ಸಲಹುತ  ಹರಸುವರೋ
ಗುರುವಾಕ್ಯ ಪ್ರಮಾಣವು ಅನುಮಾನಿಸದೆ ಸೇವಿಸಿ ಬದುಕೆನ್ನುವರು|

ಇಂದು ಶುಭ ದಿನವು ಗುರುವಿಗೆ ನಮನವು ಶುದ್ಧ ಭಾವಕೆ ಬೆಲೆ ಎನ್ನುವರು
ಸಖರಾಯಧೀಶನ ದಿವ್ಯರೂಪದ ಸ್ಮರಣೆಯು ಮನಕೆ ನೆಮ್ಮದಿಯ ನೀಡಲೆನ್ನುವರು|

ಮಧುರ ಮಧುರ ಅತೀ ಮಧುರವೋ ನಿನ್ನ ನಾಮದಾ ಸವಿಯೋ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮಧುರ ಮಧುರ ಅತೀ ಮಧುರವೋ ನಿನ್ನ ನಾಮದಾ ಸವಿಯೋ
ದಿವ್ಯ ಔಷಧವೋ ಬೇಡಿ ಬಂದ ನೊಂದ ಮನಕೆ ಅದು ಅಮೃತವೋ|

ದಿವ್ಯ ದಿವ್ಯವೋ ತುಂಬಿದ ಭಕುತರ ಸಭೆಯೊಳು ನಿನ್ನ ದರುಷನವೋ
ಒಂದೇ ಒಂದು ಕರುಣಾಪೂರಿತ ನೋಟವು ಸಾಕೆಮಗೆ ದಿವ್ಯ ಅನುಭವವೋ|

ನೋವುಂಡು ಬಂದ ಜೀವಕೆ ನೀ ನೀಡುವ ಅಭಯವು ಜೀವ ಬಲವೋ
ಕಳ್ಳ ಮನಸಿನ ಪೊಳ್ಳು ಭಕುತಿಗೆ ನಿನ್ನ ಮಾತಿನ ಚಾಟಿಯ ಶಿಕ್ಷೆಯೋ|

ದೇಹೀ ಎಂದು ಬಂದವರ ಬಾಳಿಗೆ  ಜೊತೆಯಾಗಿ ಬಾಳು ನೀಡಿವಿಯೋ
ಎಲ್ಲರಲೂ ಸಮಭಾವ ತುಂಬಿ ನಾನೆಂಬ ಹಮ್ಮನು ಹೊಡೆದೋಡಿಸಿದೆಯೋ|

ಅಂಜುತಲಿ ಹಿಂದೆ ನಿಂತ ಭಕುತನ ಕೂಗು ಆಲಿಸಿ ಹರೆಸುವೆಯೋ
ಸಖರಾಯಪುರದಲಿ ದಿವ್ಯ ವೇದಿಕೆಯಲಿ ನೆಲೆಸಿ ಮುದದಿ ಎಲ್ಲರಾ ಹರೆಸುವಿಯೋ|

Thursday, July 2, 2020

ಉಸಿರು ಉಸಿರಲೂ ಸದಾ ನಿನ್ನ ನಾಮವೇ ತುಂಬಿರಲಿ ಗುರುವೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಉಸಿರು ಉಸಿರಲೂ ಸದಾ ನಿನ್ನ ನಾಮವೇ ತುಂಬಿರಲಿ ಗುರುವೇ
ಆಡುವ ಮಾತುಗಳಲಿ ನಿತ್ಯ ನಿನ್ನ ಚರಿತವೇ ಕೇಳಿ ಬರಲಿ ಪ್ರಭುವೇ|

ನಾ ಗಳಿಸುವ ನಿತ್ಯ ಜೀವನದ ಕೂಳು ನಿನ್ನ ನಾಮ ಜಪಿಸಿದ ಫಲವಾಗಿರಲಿ
ಎನ್ನ ಜೀವನಕೆ ನಿನ್ನ  ನೆನಪು ಸದಾ ಜೀವ ಸಂಜೀವಿನಿಯಾಗಿ ಬಲ ನೀಡಲಿ|

ಅನುಮಾನದ ಗೂಡಾಗಿರುವ ಈ ಮನಕೆ  ನಿನ್ನ ಸ್ಮರಣೆಯು ಬಲ ನೀಡಿ ಹರಸಲಿ
ಎನ್ನ ಅಂತರಂಗದಲಿ ಹುದುಗಿಹ ಮಾಯೆಯ ಮುಖವಾಡ  ಕಳಚಿ ಬೀಳಲಿ|

ಬೆದರಿ ಬದುಕು ನಡೆಸಿ ರೋಗ ರುಜಿನಗಳಿಗೆ ಅಂಜಿ ನಿಂತೆನು ನಿನ್ನಂಗಳದಲಿ
ಭವರೋಗ ವೈದ್ಯ ನೀನು ಮನದಾಳದ ಭಯ ಓಡಿಸಿ ಸದಾ ಹರಸುವಂತಾಗಲಿ|

ಎಲ್ಲಾ ಮರೆತಂತೆ ನಟಿಸಿ ಎನ್ನ ಮನ್ನಿಸೆಂದು ಬೇಡುತ  ಮತ್ತೆ ಮತ್ತೆ ತಪ್ಪೆಸಿಗಿಹೆನಿಲ್ಲಿ
ಸಖರಾಯಧೀಶ ನೀನು ಎನ್ನ ಭಗವಂತನು ನಿತ್ಯವೂ ಭಜಿಸುತಿರೇ ಮನ್ನಿಸುವನಿಲ್ಲಿ||