ಒಟ್ಟು ನೋಟಗಳು

Thursday, October 21, 2021

ಮನದ ಭಾವಗಳ ನಡುವೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮನದ ಭಾವಗಳ ನಡುವೆ ನಿನ್ನ ನಾಮಕೆ ಹುಡುಕಾಡಿ ಸೋತು ನಿಂತಿಹೆನೋ
ಬರದು ಮಾಡದೆ ಮಲಿನ ಭಾವಗಳ ಒಡಲಾಳದಿಂದ ಹೇಗೆ ನಿನ್ನ ಪಡೆವೆನೋ|

ನಿನ್ನ ರೂಪ ಮಿಂಚಂತೆ ಮನದಿ ಬಂದು  ಎನ್ನ  ತಪ್ಪಿನ ಅರಿವು ಮೂಡಿಸಿ  ಮರೆಯಾಯಿತೋ
ಮರುಕಳಿಸದಿರಲಿ ತಪ್ಪುಗಳು ನಿನ್ನ  ನಾಮದ ಬಲವು ಎನ್ನ ಸದಾ ಕಾಯಲೋ|

ಏನು ಬಯಸಲಿ ಗುರುವೇ ನಿನ್ನ ಮಣ್ಣಲಿ ನಿಂತು ಕೇಳದೇ ಕರುಣಿಸಿ ಹರಸುವೆಯೋ
ಎನ್ನ ತಂದೆಯು ನೀನು ನಿನನ್ನೇ ನಂಬಿಹೆನು ಎಂದೆಂದೂ ನಿನ್ನ ಸೇವೆಗೆ ಕಾದಿಹೆನೋ|

ಯಾವ ಸೇವೆಯ ಮಾಡಲಿ ಪ್ರಭುವೇ ನಿನ್ನ ಕೃಪೆಯ ಪಡೆದು ಬದುಕು ಕಟ್ಟಲು
ಭವಬಂಧನದ ಸುಳಿಯೊಳು ಅರ್ಥ ಕಳೆದ ಬದುಕು ನಿನ್ನನೇ ನಂಬಿ ಬೇಡಿಹುದೋ|

ಸಖರಾಯಪುರದ ಮಹಾದೇವನೆ ನಿನ್ನಂಗಳದಿ ನಿಂತು ಅರಿಕೆಯಾ ಸಲ್ಲಿಸಿಹೆನೋ
ಮನ್ನಿಸಿ ಎನ್ನ ಬಾಲಿಶ ಭಾವಗಳ ತಾಕಲಾಟವ ಸ್ಥಿರ ಮನವ  ನೀಡಿ ಪೊರೆಯೋ ಎಂದೆನೋ|

Friday, October 8, 2021

ಹತ್ತಿಕ್ಕುವ ಹಂಬಲದಲಿ ಮನವ ಹುಡುಕಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಹತ್ತಿಕ್ಕುವ ಹಂಬಲದಲಿ ಮನವ ಹುಡುಕಿ ಹೊರಟೆ  ನೆನೆಯುತ ಗುರುವೇ  ನಿನ್ನ  ನಾನು
 ಬಾಹ್ಯ ಬದುಕಿನ ವಾಸನೆಯೊಳು ಹುದುಗಿ  ಹೋದ ಮನವ ಹೇಗೆ ಹುಡುಕಲಿ ನಾನು|

ಬುದ್ಧಿಯ ಅರಿವಿಗೆ ಬರುವ ಮೊದಲೇ ಮನ ತನ್ನಾಟವ ತೋರುತಿಹದೋ ಪ್ರಭುವೇ
ಮಾಯೆಯ ಮುಸುಕೊಳು ಎಲ್ಲಾ ಸೇರಿಹುದೋ ಸರಿ ತಪ್ಪಿನ ಅರಿವಾಗಲಿಲ್ಲ ದೊರೆಯೇ|

ಇಡುವ ಹೆಜ್ಜೆ ತಪ್ಪೆನಿಸುತಿದೆ ಬುದ್ದಿಗೆ ಕೇಳದಾಗಿದೆ ಮನವು ಹಿಂದಡಿಯಿಡಲು  ಗುರುವೇ
ಅಲ್ಪ ಸುಖದ ಅನಂದಕೆ ಹಾತೊರೆಯುವ ಮನವು ನಾಳಿನ ಕರ್ಮದ ಫಲ ತಿಳಿಯದೇ|

ನಿನ್ನನೇ ಭಯದಿ ಕೇಳಲು ಮನವು ಇನ್ನೆಷ್ಟು ದಿವಸ ಕಾಯಿಸುವೆ   ಸೋತಿದೆ ಜೀವವು
ನಿನ್ನವನಲ್ಲದಿರೆ ನಿನ್ನನೇ ನೆನೆವ ಭಜಿಸುವ ಮನವೇಕೆ ನೀಡಿದೆ ನನ್ನ ದೊರೆಯೇ|

ನೀನಿರುವ ಬೃಂದಾವನದ ದರುಶನಕೆ ಓಡೋಡಿ ಬಂದೆ ಬಳಲಿಹಾ ಮನಕೆ ಆನಂದ ನೀಡೋ
ಸಖರಾಯಪುರದ ಒಡೆಯ ಗುರುನಾಥ ನೀನೆನುತ ಹಂಬಲದಿ ಬೇಡಿಹೆನು ಕರುಣೆಯಾ ತೋರೋ|

Monday, October 4, 2021

ಬೆಳಕಾಗಿ ಜಗಕೆ ದಾರಿ ತೋರಿಹೆ ನೀನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬೆಳಕಾಗಿ ಜಗಕೆ ದಾರಿ ತೋರಿಹೆ ನೀನು ಗುರಿ ತೋರಿದರೆ ದಡ ಸೇರುವೆನು ನಾನು
ತಾಮಸಿಕನಾಗಿ  ಅಲೆಮಾರಿಯಾಗಿ ಅಂಧನಂತೆ ಗುರುವೇ ಕೂಗುತಿಹೆನು ನಾನು|

ಶುದ್ಧವಿಲ್ಲವೋ ಎನ್ನ ಅಂತರಂಗ ಬಿಡದಾದೆನೋ ಬಾಹ್ಯ ಕ್ಷಣಿಕ ಬದುಕಿನ  ಸುಖದ ಸಂಗವು
ಮರುಕಳಿಸಿ ಮಾಡಿದಾ ಕರ್ಮಗಳ ನೆನಪು ಭಯದಿ ನಿನ್ನ ಆಸರೆಯ ಬೇಡಿ ಬಂದಿದೆ ಮನವು|

ಇಲ್ಲೂ ಸಲ್ಲದೆ ಅಲ್ಲೂ ಸಲ್ಲದೆ ಮತಿಹೀನನಾಗಿ ಮಾತು ಬರದ ಮುಖನಾದೇನೋ
ಎನ್ನ ಮನವ ಅರಿವ ಗುರದೇವ ನಿನ್ನ ದರುಶನಕೆ ಮುಂದೆ ನಿಲ್ಲಲಾರದೆ ಅವಿತಿಹೆನೋ|

ಬದುಕು ಮೂರು ದಿನವು ಅರಿವಿದ್ದರೂ ಭ್ರಮೆಯಿಂದ ದೂರವಿರದು ಈ ನನ್ನ ಮನವು
ಅಲ್ಪನಲ್ಲವೇ  ನಾನು  ತಿಳಿಯದೇ ನಾ ನಡೆಸುವ ಬಾಳು ಕರುಣೆ ತೋರೆಯಾ ನೀ ಗುರುವು|

ನಿನ್ನನೇ ಸೇವಿಸುವ ನಿಜ ಬಕುತರ ನುಡಿಯ ಆಲಿಸಿ ನಿನ್ನ ಕಾಣ ಬಯಸಿತು ಜೀವವು
ಸಖರಾಯಪುರದ ದೇವನೇ ನಿನ್ನ ಹೊರತು ಇನ್ನ್ಯಾರು ಸಲಹುವರು ಎಂದಿತು ನನ್ನ ಮನವು|