ಒಟ್ಟು ನೋಟಗಳು

Wednesday, December 25, 2019

ನಿನ್ನಂಘ್ರಿಕಮಲವ ಪಿಡಿದೆನೋ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ನಿನ್ನಂಘ್ರಿಕಮಲವ ಪಿಡಿದೆನೋ
ಗುರುನಾಥನೇ
ನಿನ್ನಂಘ್ರಿಕಮಲವ ಬಿಡಲಾರೆನೋ !

ಅಹಂಕಾರವ ಬಿಡುತಲೀ
ಮಮಕಾರವ ಮರೆಯುತಲೀ !
ಚಿಂತೆಶೋಕಗಳ ಮೀರುತಲೀ
ಮೋಹಮಮತೆಯ ದಾಟುತಲೀ !! ೧ !!

ನಿನ್ನ ನುಡಿಯ ನೆನೆಯುತಲೀ
ನಿನ್ನ ನಾಮವ ಸ್ಮರಿಸುತಲೀ !
ನಿನ್ನ ಮಹಿಮೆಯ ಪಾಡುತಲೀ 
ನಿನ್ನ ಚರಣಕೆ ನಮಿಸುತಲೀ !! ೨ !!

ಉದ್ಧರಿಸೆಮ್ಮನು ಎಂದು ಬೇಡುತಲೀ
ನಮ್ಮ ದೈವವೇ ನೀನೆಂದು ತಿಳಿಯುತಲೀ !
ಸಾನಿಧ್ಯಭಿಕ್ಷೆ ನೀಡೆಂದು ಕೋರುತಲೀ
ದತ್ತನೇ ನೀನೆಂದು ಅರಿಯುತಲೀ !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೨೬-೧೨-೨೦೧೯

ಆಲಿಸೋ ಎನ್ನ ಮನದ ಮೊರೆಯ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಆಲಿಸೋ ಎನ್ನ  ಮನದ ಮೊರೆಯ, ಪರಿ ಹರಿಸೋ ಎನ್ನ ಬದುಕ ಬವಣೆಯ
ನಿತ್ಯ ನಿನ್ನ ಸೇವಿಪ ಬಕುತರಂತಲ್ಲ ನಾನು ಎಲ್ಲೋ ಹಾದಿ ತಪ್ಪಿದ ಪಾಮರನೋ|

ಎಲ್ಲಾ ಅರಿತರೂ ಏನೂ ಅರಿವಿಲ್ಲದಂತೆ ನಟಿಸಿ ಮನದ ಅಹಂ ಮುರಿಯುವೆ
ಎಲ್ಲವನೂ ನೀಡಿ ಇನ್ನೂ ಸಾಲದೆಂಬ ಮನವ ನೀಡಿ ಕಾಡಬೇಡವೋ|

ಎಲ್ಲ ನಿನ್ನದಾಗಿರುವಾಗ ನಾನು ಕೊಟ್ಟೆನೆಂಬ ಬಾವ ತುಂಬಿ ನುಡಿಸಬೇಡವೋ
ನಿನ್ನಣತಿಯಿಲ್ಲದೆ ಹುಲ್ಲು ಕಡ್ಡಿಯೂ ಅಲುಗದು ನಾ ಮಾಡಿದನೆಂಬ ಬಾವ ಬೇಡವೋ|

ನಾ ದೊಡ್ಡವನೆಂಬ ಭಾವ ತುಂಬಿ ಎನ್ನ ಆಡಿಸಿ ಬೀಳಿಸ ಬೇಡವೋ
ಎಲ್ಲವರಿಗಿಂತ ನಾ ಸಣ್ಣವನೆಂಬ ಭಾವ ಮೂಡಿಸಿ ಮನತುಂಬಿ  ಎನ್ನ ಹರಸೋ |

ಬಣ್ಣಗಳ  ಚಿತ್ತಾರ ಮನದಿ ಮೂಡಿಸಿ ನಿನ್ನ ನೆನೆವ ಮನದ  ಹಾದಿ ತಪ್ಪಿಸ ಬೇಡವೋ
ಮುನ್ನಡಿ ಇಡುವ ಮುನ್ನ ಎನ್ನ ಮನದಿ ನಿನ್ನ ನಾಮವು ಅಳಿಯದಂತೆ ನೋಡೋ|

Sunday, December 22, 2019

ಮೌನವೇ ಸಾಧನೆಯ ಶ್ರೀಕಾರ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಮೌನವೇ ಸಾಧನೆಯ ಶ್ರೀಕಾರ I
ಶುದ್ಧತೆಯೇ ಗುರುಪ್ರಾಪ್ತಿಗೆ ಓಂಕಾರ II
ಗುರುಕೃಪೆಯೇ ಎಲ್ಲರ ಬಾಳಿಗಾಧಾರ I
ಗುರುಪದಸೇವೆಯಾಗಲಿ ನಮ್ಮ ದೃಢನಿರ್ಧಾರ II

ನಾ ಕಳ್ಳನೋ ಬಲು ಮಳ್ಳನೊ ನಿಜ ಬಕುತಿಯ ಅರಿಯದೇ ನಿನ್ನ ಬೇಡುವೆನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಾ ಕಳ್ಳನೋ ಬಲು ಮಳ್ಳನೊ ನಿಜ ಬಕುತಿಯ ಅರಿಯದೇ ನಿನ್ನ ಬೇಡುವೆನೋ
ಬಲು ನಮ್ರತೆಯ ಸೋಗಿನೊಳು ನಿನ್ನ ಬಜಿಸುವ ಮುಖವಾಡ ದರಿಸಿಹೆನೋ|

ಕಣ್ಣ ಮುಚ್ಚಿ ಬಕುತಿಯಲಿ ಮೈ ಮರೆತವನಂತೆ ನಟಿಸಿ ಇನ್ನೆಲ್ಲೋ ಮನ ನಿಲ್ಲಿಸಿಹೆನೋ
ನಿನ್ನಣತಿಯಿಲ್ಲದೆ ಬದುಕು ಸಾಗದೆಂದು ಅರಿತರೂ ಮೂಡನಂತೆ ಬದುಕಿಹೆನೋ|

ಏನನೋ ಬಯಸಿ ನಿನ್ನಪದತಳದಿ ಭಂಡನಂತೆ ನಿಂತು ಕೂಗುತಿಹೆನೋ
ಕೊಟ್ಟಿದ್ದು ಸಾಲದೆಂಬಂತೆ ನಿರಂತರ ಬೇಡುವ ಕಾಯಕ ಮಾಡಿ ಕೊಂಬಿಹೆನೋ|

ಹೊಲಸು ಬೇಡವೆಂದರೂ ಮನದ ಆಸೆಯ ತುಳಿಯದೆ ಸೋತು ನಿಂತಿಹೆನೋ
ಮತ್ತೆ ಮತ್ತೆ ಮನ್ನಿಸೆಂದು ನಿನ್ನ ಬೇಡುವ ನಾಟಕದಿ ಕಾಲ ಕಳೆದಿಹೆನೋ|

ನಿಜಬಕುತರೊಡನಾಟ  ಬಯಸಿ ಬರೀ ಬಾಹ್ಯಶುದ್ದಿಗೆ  ಗುರುವೆಲ್ಲಿ ಒಲಿವನೋ
ಎನ್ನ ಅಂತರಂಗ ಶುದ್ದಿಗೊಳಿಸದೇ ಗುರುವೇ ಇನ್ನ್ಯಾವ ದಾರಿ ನಾ ಕಾಣೆನೋ |

Monday, December 16, 2019

ನಿನ್ನಿಚ್ಛೆಯಂತೆ ಬದುಕ ನಡೆಸೊ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ನಿನ್ನಿಚ್ಛೆಯಂತೆ ಬದುಕ ನಡೆಸೊ ಗುರುವೆ
ನನ್ನಿಚ್ಛೆಯನ್ನು ನೀ ಅರಿತಿಹೆ ಗುರುವೇ !
ನೀ ಬಯಸಿದಂತೆ ನಾ ನುಡಿವೆ ಗುರುವೇ 
ನೀ ತಿಳಿಸಿದಂತೆ ನಾ ನಡೆವೆ ಗುರುವೇ !!

ನಿನ್ನ ಇಂಗಿತದಂತೆ  ನಡೆವುದೆಲ್ಲವು ಪ್ರಭುವೆ
ನಿನ್ನ ಸಂಕಲ್ಪದಂತೆ ಜಗವು ನಡೆವುದು ಗುರುವೇ !
ನಿನ್ನ ಅಂಕಿತವಿಲ್ಲದೆ ನಡೆಯದೇನೂ ಪ್ರಭುವೇ
ನಿನ್ನ ಪದಸೇವೆ ನಮಗೆಂದಿಗೂ ಇರಲಿ ಗುರುವೇ !! ೧ !!

ನಮ್ಮ ಗತಿಯನು ನಡೆಸುವವನು ನೀನೇ ಗುರುವೇ
ನಮ್ಮ ಮತಿಯನು ಬೆಳಗಿಪನು ನೀನೇ ಗುರುವೇ
ನಮ್ಮ ಆತ್ಮಪ್ರಣತಿಯನು ಹಚ್ಚುವವನು ನೀನೇ ಗುರುವೇ 
ನಮ್ಮ ಹೃನ್ಮಂದಿರದಿ ನಲಿವನು ನೀನೇ ಗುರುವೇ !! ೨ !!

ನಮ್ಮ ಜಡದೇಹದ ಚೈತನ್ಯ ನೀನೇ ಪ್ರಭುವೇ 
ನಮ್ಮ ಮನಸಿನ ಒಡೆಯ ನೀನೇ ಪ್ರಭುವೇ
ನಮ್ಮಿಂದ ಕೆಲಸ ಮಾಡಿಸುವವ ನೀನೇ ಪ್ರಭುವೇ
ನಮ್ಮ ಮನದಲಿ ಧೀಶಕ್ತಿ ತುಂಬುವವ ನೀನೇ ಗುರುವೇ !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೧೭-೧೨-೨೦೧೯

Friday, December 13, 2019

ಧರೆಗವತರಿಸಿದ ಅವಧೂತ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಧರೆಗವತರಿಸಿದ ಅವಧೂತ ನಮ್ಮ ಸಖರಾಯಪುರದ ಗುರುನಾಥ
ನಿಜ ಭಕುತರ ಪೊರೆವಾತ ಭವ ಬಂಧನವ ಕಳೆವಾತ ನಮ್ಮ ಅವಧೂತ|

ಮನವಮರ್ದಿಸಿ ಮನೋ ಚಾಂಚಲ್ಯ ಮರೆಯಾಗಿಸೋ ಗುರುನಾಥ
ಮನವೆಂಬ ಭ್ರಮೆಯ ಲೋಕದಿಹ ಮಿಥ್ಯವ ಅಳಿಸಿ ಸತ್ಯವ ತೋರೋ ಅವಧೂತ|

ಪದಗಳಲಿ ನುಡಿಗಳಲಿ ತೋರುವ ಬಕುತಿಯ ನಿಜಗೊಳಿಸೋ ಗುರುನಾಥ
ತಂತ್ರ ಮಂತ್ರದ ಮನದ ಭಾವದ ಆಚೆ ಹೃದಯ ಕಮಲದ ನಡುವೆ ನೆಲೆ ನಿಲ್ಲೋ ಅವಧೂತ|

ಉಸಿರು ಉಸಿರಲೂ ನಿನ್ನ ಹೆಸರಿರಲಿ ಕೇಳುವ ಕಿವಿಗಳಿಗೆ ಮುದನೀಡಲಿ ಗುರುನಾಥ
ನೋಡುವ ಕಂಗಳಿಗೆ ಬೇರೇನೂ ತೋರದೇ ನಿನ್ನ ದರುಶನ ನೀಡೋ ಅವಧೂತ|

ನಾಳಿನ ಬದುಕಿನ ಬಗ್ಗೆ ಎನಗೆ ಭಯವಿರದೆ ನಿನ್ನ ಸೇವೆಯೇ ಮೊದಲಾಗಲಿ ಗುರುನಾಥ
ಇಂದು ನಿನ್ನದೆಂದು ನಂಬಿ ಸಂತಸದಿ ನಿನ್ನ ಪಾದಸೇವೆ ಕರುಣಿಸೋ ಅವಧೂತ|

Sunday, December 8, 2019

ನೀನೇ ನನ್ನ ದೊರೆಯೆಂದು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನೀನೇ ನನ್ನ ದೊರೆಯೆಂದು ನನ್ನ ಈ ಅಹವಾಲು ನೀಡುತಿಹೆನೋ
ಸರಿ ತಪ್ಪು ನಿರ್ಣಯಿಸಿ ನಿನ್ನ  ಮನೆಯಂಗಳದ ನ್ಯಾಯ ತಿಳುಸೋ ಗುರುವೇ|

ಏನೂ ಅರಿಯದ ನಾನು ನಿನ್ನ ಬಕುತನೆಂದು ಬೀಗುತಾ ಬದುಕುವುದು ಸರಿಯೇ
ಜನುಮಗಳ ಕರ್ಮದ ಹೂರೆ ಹೊತ್ತು ಸಲಹೆಂದು
ಮೊರೆ ಇಡುವುದು ಸರಿಯೇ|

ವಿಷಯದ ಬೆನ್ನತ್ತಿ ಬದುಕು ಕಳೆವ ನಾನು ನಿನ್ನ ನೆನೆವುದು ಸರಿಯೇ
ಪರರ ಸ್ವತ್ತಿಗೆ ಹಂಬಲಿಸುವ  ಮನ ದಾನ ಮಾಡಿದೆನೆಂದು ಬೀಗುವುದು ಸರಿಯೇ|

ಕರಗಳು ಮಲಿನಗೊಂಡಿರುವಾಗ ನಿನ್ನ ಪೂಜಿಸುವುದು ಸರಿಯೇ
ಕಲ್ಮಶ ತುಂಬಿದ ಮನ ಹೊತ್ತು ನಿನ್ನ ಬಜಿಸುವ ಪರಿಯು ಸರಿಯೇ|

ನೋಡುವ ನೋಟದಲಿ ಕಪಟ ತುಂಬಿಹುದು ನಿನ್ನ ದರುಶನ ಪಡೆವುದು ಸರಿಯೇ
ಶಿರದೊಳು ಬರೀ ಕಾಮವಾಸನೆ ಹೊತ್ತು ನಿನ್ನ ಪಾದಕೆ ಶಿರಭಾಗುವುದು ಸರಿಯೇ|

ಅನ್ಯರ ಕೂಳಿಗೆ ಕನ್ನ ಹಾಕುವ ಮನ ನಿನ್ನೊಳು ಸೇರುವುದು ಸರಿಯೇ
ನಿಜ ಬಕುತರ ಮನವನರಿಯದೇ ಅವರ ಭಕುತಿ ಜರಿವುದು ಸರಿಯೇ|

ಹೀಗೆಂದು ಮರುಗುವ ಮನವ ತಹಬಂದಿಗೆ ತಂದು ಹರಸೋ ನನ್ನ ದೊರೆಯೇ
ಸಖರಾಯಪುರದ ಅರಸನು ನೀನು ಇನ್ಯಾರನು ಬೇಡಲಿ ಹೇಳೋ ಗುರುವೇ|

Thursday, December 5, 2019

ದಯಾಮಯನೋ ಕರುಣಾಮಯನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ದಯಾಮಯನೋ ಕರುಣಾಮಯನೋ ನನ್ನ ಗುರುನಾಥನು
ವಿಶ್ವ ಮಾನ್ಯನೋ ಸರ್ವ ಜನ ಪೂಜಿತಾನೋ ನನ್ನ ಮಹಾದೇವನು|

ಏನು ಬೇಡಲಿ ನಾನು ಅವನ ಮುಂದೆ ಬೇಡದಲೇ ಕಷ್ಟವ ನೀಗುವನೋ
ಲೌಕಿಕ ಜೀವನದ ಬೇಕು ಬೇಡಗಳ ನಡುವೆ ಒಮ್ಮೆ ಆತನ ಸ್ಮರಿಸುವೆನೋ|

ದರುಶನ ಸುಲಭವಲ್ಲವೋ ದೇವನ ಸಭೆಯೊಳು ಒಬ್ಬನಾದರೆ  ಬಹು ಪುಣ್ಯವೋ
ಪ್ರಸಾದ ದೊರೆತರೆ ನಿರಂತರ ಅನ್ನಪೂರ್ಣೆಯ ಕರುಣೆ ದೊರೆತಂತೆಯೋ|

ಸಭೆಯೊಳು ಗರ್ವಹರಣವಾದರೆ  ಧನ್ಯವೋ ಬಲು  ಪುಣ್ಯವೋ 
ಮುನಿಸಿನಿಂದ ನುಡಿಯ ಕೇಳ್ದರೆ ಎಲ್ಲಾ ಕರ್ಮದ ಹರಣವೋ ಬಲು ಭಾಗ್ಯಾವೋ|

ಮಗುವಂತೆ ಎಚ್ಚರಿಸಿ ಬಿರುನುಡಿಯಾಡದೆ ತಪ್ಪು ತಿದ್ದಿ ಸರಿ ದಾರಿತೋರುವನೋ
ಜಾತಿ ವಿಜಾತಿಗಳ ಎಲ್ಲೆಮೀರಿ ಸುಜ್ಞಾನಿಗಳ ಸಂಗದೊಳು ಕಾಣಿಸುವನೋ|

ಸಾದು ಸಂತರ ಚಿಂತೆ ದೂರ ಮಾಡುತಾ ಸರ್ವರ ಹಿತ ಕಾಯುವನೋ
ಗುರು ಹಿರಿಯರ ಸೇವೆಯೇ ಬದುಕೆನ್ನುತ ನಂಬಿದವರ ಪೊರೆಯುವನೋ|

Wednesday, December 4, 2019

ಯಾರೇ ಅವರು ನೋಡಮ್ಮ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಯಾರೇ ಅವರು ನೋಡಮ್ಮ ಯಾರೇ ಆ ಗುರುವರ ನೋಡಮ್ಮ
ಅವ ನಮ್ಮವನಲ್ಲವೇ  ಸಖರಾಯಪುರದ ಮಹಾದೇವನಲ್ಲವೇನಮ್ಮ|

ಗದರಿದರೂ  ಗುರಿ ತೋರುವ ಸದ್ಗುರು ಅವನಲ್ಲವೇನಮ್ಮ
ತೋರುವ ಪ್ರೀತಿಗೆ ಮಿಗಿಲಿಲ್ಲ ಅದ ಪಡೆದವ ಧನ್ಯನಲ್ಲವೇನಮ್ಮ|

ಯಾರ ಹಂಗಿಗೂ ಒಳಗಾಗದ ಮಹಾಸಾಧಕ ನಮ್ಮ ಸದ್ಗುರುವಲ್ಲವೇನಮ್ಮ
ಒಳ ಹೊರಗಿನ ಭಾವ ಒಂದಾದರೆ ಅವ ಒಪ್ಪಿ ಹರಸುವನಮ್ಮ|

ಆರು ಅರಿಗಳ ಮೆಟ್ಟಿ ನಿಂತ ಧೀಮಂತ ನೇರ ನುಡಿಗಳ ಶ್ರೀಮಂತನಮ್ಮ
ಅಹಂ ಅಳಿಯದ ಹೊರತು ಎಲ್ಲಾತೊರೆದ ಹೊರತು ದೊರೆಯನಮ್ಮ|

ಭವರೋಗ ವೈದ್ಯನಮ್ಮ  ಭವಬಂಧನವ ಕಳೆವ ಮಹಾ ಸಂತನಮ್ಮ
ನಂಬಿ ನಡೆದರೆ ಎಂದಿಗೂ ಯಾರನೂ ಕೈ ಬಿಡದೆ ಹರಸಿ ಸಲಹುವನಮ್ಮ|

Thursday, November 28, 2019

ಒಂದು ಬಾರಿ ಬಂದು ಹರಸೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಒಂದು ಬಾರಿ ಬಂದು ಹರಸೋ ನನ್ನೊಡೆಯ ಗುರನಾಥನೇ
ನಿತ್ಯ ನಿನ್ನ ನಾಮ ಭಜಿಸುವೆ  ನನ್ನ ಇರುವು ಮರೆಯುತ  |

ಯಾರೋ ನಾನು ಎಲ್ಲೋ ಇದ್ದೆ ಓಡಿಬಂದೆ ನಿನ್ನ ಮಹಿಮೆ ಕೇಳುತಾ
ನನ್ನ ಇರುವು ನನಗೆಂದೇ ನಂಬಿ ವ್ಯರ್ಥ ಬದುಕ ನಡೆಸಿ ಸೋಲುತ|

ಒಮ್ಮೆ ನಿನ್ನ ಲೀಲೆ ಕೇಳಿ ಮರುಗಿ ಮರುಗಿ ಬೇಡಿ ಬಂದೆ ನನ್ನ ಕಾಯೋ ಎನ್ನುತಾ
ಬಂದು ನೋಡಿ ಮೂಕನಾದೆ ನಿಜ ಬಕುತರು ನಿನ್ನ ಸೇವೆ ಮಾಡ್ಪ ರೀತಿ ಆರಿಯುತ|

ನಾನು ಎಲ್ಲೂ ಸಲ್ಲದಾದೆ ನನ್ನ ಭಕುತಿ ಪೊಳ್ಳು ಭಕುತಿಯೆಂದು ತಿಳಿಯುತ
ನಿತ್ಯ ಸತ್ಯ ಅರಿಯದೆ ನಿಜ ಬಕುತಿಯ ತೋರದೇ ಕಾಲ ಹರಣ ಮಾಡುತ|

ಭಕುತಿಗೊಂದು ಬಣ್ಣ ನೀಡಿ ಎನ್ನ ಭಕುತಿ ಮೇಲೆಂಬ ಭಾವದಿ ಮೆರೆಯುತ
ಗುರುವೇ ಕೊಟ್ಟ ಭಿಕ್ಷೆಯನ್ನೇ ನನ್ನದೆಂದು ನೀಡಿ ಎಲ್ಲರೆದುರು ಬೀಗುತಾ|

Tuesday, November 26, 2019

ಎಲ್ಲರೂ ಹಾಡಿ ಭಜಿಸಿದಂತೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲರೂ ಹಾಡಿ  ಭಜಿಸಿದಂತೆ ನಾ ನಿನ್ನ ನಾಮವ ಭಜಿಸಲಾರೆನೋ
ಎನ್ನ ಅಂತರಂಗದೊಳು  ನೆಲೆ ನಿಲ್ಲುವ ತನಕ ನಿನ್ನ ನಾಮವ ಉಸಿರಲಿ ಬೆರೆಸುವೆನೋ|

ಹಾರ ತುರಾಯಿಗಳ  ಫಲ ಪುಷ್ಪಗಳ ನಿನಗೆ ನಾ ಅರ್ಪಿಸೆನೋ
ನಿನ್ನ ನುಡಿಯಂತೆ ಎನ್ನ ಈ ನನ್ನ  ದೇಹವ ಹಣ್ಣು ಮಾಡಿ ಸೇವೆ ನೀಡಿವೆನೋ|

ದೀಪ ದೂಪಗಳ ದೂಪ ಆರತಿಗಳ ನಾ ನಿನಗೆ ಅರ್ಪಿಸೆನೋ
ಮನದ ಅಂಗಳದಿ ನಿನ್ನ ಪೂಜಿಸುತ ಭಾವ ಪುಷ್ಪಗಳ ನೀಡುವೆನೋ|

ನಿನ್ನ ಸೇವೆಗೆಂದು ಈ ನನ್ನ ಜೀವವ ಮೀಸಲಿಟ್ಟು ಕಾಲ ಕಳೆವೆನೋ 
ಎನ್ನ ಹೃದಯ ಕಮಲದೊಳು ನೆಲೆನಿಂತು ಹರಸಿದೊಡೆ ಧನ್ಯನಾಗುವೆನೋ|

ನಿನ್ನ ನಾಮ ಜಪಿಸುತಿರೆ ಮನದ ಕ್ಲೇಶವ ನೀಗುವ ಭಾವರೋಗ ವೈದ್ಯನೋ
ಮನದ ಅಹಂಕಾರವ ಅಳಿಸಿ ನಿಜ ಅರಿವ ಮೂಡಿಸಿ ಸಲಹೋ ಎನ್ನನು|

Monday, November 25, 2019

ಯಾರು ಕಾಯ್ವರೋ ಎನ್ನನು ನೀ ದೂರ ಮಾಡಿದರೆ ನನ್ನ ದೇವನೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಯಾರು ಕಾಯ್ವರೋ ಎನ್ನನು ನೀ  ದೂರ ಮಾಡಿದರೆ ನನ್ನ ದೇವನೇ
ನಿನ್ನ ಬೇಡದಲೇ ಇನ್ಯಾವ ದೇವನ ಕಾಣೆನೋ ನಾನು ಸದ್ಗುರುನಾಥನೇ|

ಜನುಮ ಜನುಮದ ಅರಿವು ನನಗಿಲ್ಲ ಈ ಜನುಮದಿ ನೀನೇ ಎನಗೆಲ್ಲ
ಪಾಪ ಪುಣ್ಯಗಳ ಕರ್ಮ ಫಲಗಳ ಅರಿವು ಈ ಮೂಡ ಮನಕೆ ತಿಳಿಯದಲ್ಲ|

ಬದುಕು ನಡೆಸುವ ನಾನು ನಿನ್ನ ಮೊರೆ ಹೋಗದೇ ಬೇರೆ ದಾರಿ ಬಯಸೆನಲ್ಲಾ ಗುರುವೇ
ಅಂತರಂಗದೊಳು ಭಾವಶುದ್ದಿಗೊಳಿಸಿ ಮನದ  ಮಲಿನವ ದೂರ ಮಾಡೋ ದೊರೆಯೇ|

ನಿನ್ನ ನುಡಿಯೊಳು ತುಂಬಿದ ವೇದಸಾರವ ಈ ಮನವು ಅರಿಯದಾಯಿತಲ್ಲ
ನಿನ್ನ ನಡೆಯಲಿ ಅಡಗಿಹ ಬದುಕಿನ ಅರ್ಥ ತಿಳಿಯದೆ ಮೂಡನಾದೆನಲ್ಲಾ|

ಬರೀ ಬಂದು ಹೋಗುವ ಬದುಕಾಗದೆ ನಿನ್ನ ಕರುಣೆ ನೀಡಿ ಹರಸೋ ಎಂದೆನಲ್ಲ
ಗುರುನಾಥ ನೀನಿರದ ಈ ಮನವು ಒಂದಿನಿತೂ ಈ ಜೀವದೊಳು ನಿಲ್ಲದಲ್ಲಾ|

Sunday, November 24, 2019

ಏನೆಂದು ಬೇಡಲಿ ನಾನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಏನೆಂದು ಬೇಡಲಿ ನಾನು ಏನೆಂದು ಹಾಡಲಿ ನಾನು ಅರಿಯನೋ
ಎಷ್ಟು ಬೇಡಿದರೂ ಸಾಲದು ಎಷ್ಟು ಹಾಡಿದರು ಸಾಲದು ನಾ ದಣಿಯನೋ|

ನಿನ್ನ ಕಾಣದಾ ಕಣ್ಣು ನೊಂದಿತೋ ನಿನ್ನ ನುಡಿಯ ಕೇಳದೇ ಈ ಮನವು ಸೋತಿತೋ
ನಿನ್ನ ಪಾದಸೇವೆ ಮಾಡದೆ ಈ ಕೈಗಳು ಬಲು ಮರುಗಿತೋ ಗುರುವೇ|

ಏನು ಬೇಡಲಿ ನಾನು ಈ ಲೌಕಿಕ ವ್ಯಾಪಾರದ ನಡುವೆ ನಿಂತ ಪಾಮರನೋ
ಬದುಕಿನ ಸತ್ಯವ ಅರಿಯದೇ  ಬದುಕು ಸವೆಸಿ ಸಂತೆಯೊಳು ಒಬ್ಬನಾದೆನೋ|

ಬೇಡದ ಭಾವನೆಗಳ ಒಡನಾಟ ನಡೆಸುತ ವ್ಯರ್ಥ ಸಮಯ ಕಳೆದೆನೋ
ಹಗಲುಗನಸಿನ ಸೌಧದೊಳು ಮನವನಿಟ್ಟು ನಿನ್ನ ನೆನೆವವನಂತೆ ತೋರಿದೆನೋ|

ಎನ್ನ ಅಂತರಂಗ ಶುದ್ದ ಮಾಡೋ ಗುರುವೇ ಈ ನಿನ್ನ ಲೀಲೆಯ ಅರಿಯೆನೋ
ಬಲು ಪಾಪಿ ನಾನು ನಿನ್ನ ಕಣ್ಣ ತಪ್ಪಿಸಿ ಎಲ್ಲೂ ಓಡಲಾರದೆ ಸೋತಿಹೆನೋ|

Saturday, November 16, 2019

ಏಕೋಪಿ ಅನೇಕರೂಪೀ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಏಕೋಪಿ ಅನೇಕರೂಪೀ
ಅನೇಕೋಪಿ ಏಕೋ ಸ್ಥಿತಃ ! 
ತವ ಮಹಿಮಾನಂ ಗುರೋ 
ನಾಹಂ ಜಾನೇ ನೈವ ಜಾನೇ !!

ಒಂದೇ ಶರೀರಿಯಾಗಿದ್ದರೂ ಅನೇಕ ರೀತಿಯಲ್ಲಿ ರೂಪಗಳಲ್ಲಿ  ವ್ಯಕ್ತವಾಗುವುದು, ಅನೇಕ ದಿವ್ಯಾತ್ಮಗಳ ಒಡಲಲಿ ಇರಿಸಿಕೊಂಡರೂ ಒಂದೇ ರೂಪದಲ್ಲಿ ತೋರುವ ನಿನ್ನ ಈ ಪರಿಯ ನಾನು ಅರಿಯನು ಪ್ರಭುವೇ ನಾನು ಅರಿಯೆನು....

!! ಸರ್ವದಾ ಸದ್ಗುರುನಾಥೋ ವಿಜಯತೇ !!
೧೬-೧೧-೨೦೧೯

Friday, November 15, 2019

ಎಷ್ಟು ವರುಷ ಉರುಳಿತು ಅರಿಯೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟು ವರುಷ ಉರುಳಿತು ಅರಿಯೆ ಎಷ್ಟು ಸಮಯ ಕಳೆಯಿತೋ ತಿಳಿಯೇ
ಏನೂ ಸಾಧಿಸದೆ ಏನೂ ಪಡೆಯದೇ ಬರೀ ದೇಹ  ಸಾಕಿದೆನೋ ಗುರುವೇ|

ಬರೀ ನಿನ್ನ ಚರಿತವ ಕೇಳಿ ನಿನ್ನ ಮಹಿಮೆಯ ಪಾಡಿ ಪುಳಕಿತನಾದೆನೋ 
ನಿನ್ನ ಕಾಣದೆ ನಿನ್ನ ನುಡಿಯ ಕೇಳದೇ ಬರೀ ಬರಡು ಜೀವನ ಸಾಗಿಸಿಹೆನೋ|

ಭೂಮಿಗೆ ಬಂದ ಮಹದೇವನೇ ಶುದ್ದ ಮನವ ಹುಡುಕಿ ಹರಸಿದೆ ನೀನು
ಕರ್ಮ ಕಳೆಯದೇ ಯೋಗ್ಯನಾಗದೆ ನಿನ್ನ ದರ್ಶನಭಾಗ್ಯದಿಂದ ವಂಚಿತನಾದೆನು|

ಬೇರೇನೂ ಕೇಳದೆ  ಶುದ್ದ ಮನದ ನಿಜ ಬಕುತಿಯ ಬಯಸುವೆ ನೀನು
ಒಳಗೊಂದು ಹೊರಗೊಂದು ಭಾವವ ವ್ಯರ್ಜಿಸೆ ಮುದದಿ ಹರಸುವೆ ನೀನು|

ಆಡಂಬರಕೆ ಒಲಿಯದಾ ದೇವ ನೀನು ನಿರಾಡಂಬರವ ಬಯಸುವವನು
ಅಂಬರದೊಳಗಿಲ್ಲ ಆ ದೇವನು ಅವ ನಿನ್ನೊಳಗಿಹನೆಂದು ಸಾರಿ ಹೇಳಿದವನು|

Wednesday, November 13, 2019

ನಾನು ಬೇಡಿದನೆಂದು ಎನ್ನ ಕರುಣಿಸ ಬೇಡ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ


ನಾನು ಬೇಡಿದನೆಂದು ಎನ್ನ ಕರುಣಿಸ ಬೇಡ ಗುರುವೇ
ಎನ್ನ ಬಕುತಿಯು ನಿಜವಾದರೆ ನೀ ಎನ್ನ ದೂರ ಮಾಡದಿರು ಗುರುವೇ|

ಕಂಠ ಉಬ್ಬಿ ಬರಿವುದು  ನಿನ್ನ ನಾಮವನು ನೆನೆವಾಗ
ಹೃದಯ ಹಗುರವಾಗುವುದು ನಿನ್ನ ನಾಮ ಪಾಡುವಾಗ ದೊರೆಯೇ|

ಎಲ್ಲರೊಡಗೂಡಿ ಬಲು ಮುದದಿ ನಿನ್ನ ಚರಿತೆಯ ಹಾಡುವೆನು ನಾನು
ನೀ ಎಲ್ಲರನೂ ಕರುಣದಿ ಹರಸುವಾಗ ಒಮ್ಮೆ ನೋಡು  ನನ್ನನು|

ಕಿಂಚಿತ್ತು ನೆನೆದರೂ ನಾನು ಪಡೆವೆನು ದಿನದ ಕೂಳು ಗುರುವೇ 
ನಿರಂತರ ನೆನೆದರೆ ದೊರೆಯುವುದು ಆತ್ಮಕೆ ಬಲು ಆನಂದವು ದೊರೆಯೇ|

ನನ್ನನೇ ಅರ್ಪಿಸುವೆನೆಂದು ಹೇಳಲು ಬಲು ಭಯವು ಗುರುವೇ
ನಾ ಬಲ್ಲೆನು ನನ್ನ ಮನವನು ಅದು ಬಲು ದುರ್ಭಲವು ದೊರೆಯೇ|

Sunday, November 10, 2019

ಗುರುನಾಥ ಅನುಭವಾಮೃತ - 2

ನನ್ನ ತಂದೆಗಾದ ಒಂದು ವಿಶಿಷ್ಟ ಅನುಭವ ತಿಳಿಸುವ ಆಸೆ, ಒಮ್ಮೆ ಸಕರಾಯಪುರಕ್ಕೆ ಶೃಂಗೇರಿ ಜಗದ್ಗುರುಗಳು ಬಂದಾಗ ನನ್ನ ತಂದೆಯವರನ್ನು ಬರಲು ಹೇಳಿದ್ದರು, ಕಾರಣಾಂತರದಿಂದ ಹೋಗಲಾಗಲಿಲ್ಲ, ತಂದೆಯವರು ಗುರು ದರ್ಶನ ಹಾಗೂ ಅವರಿಂದ ಪಡೆಯುವ ತೀರ್ಥ ಪ್ರಸಾದ ತಪ್ಪಿದ ಬಗ್ಗೆ ಬೇಸರ ಮಾಡಿಕೊಂಡರು, ನಂತರ ಮನೆಯ ದೇವರ ಪೂಜೆಯ ತೀರ್ಥವೇ ಅದೇ ಪರಿಮಳದಿಂದ ಕೂಡಿ ಆಶ್ಚರ್ಯ ಉಂಟು ಮಾಡಿದ್ದು, ಹಾಗೂ ಕೆಲವೇ ಕ್ಷಣದಲ್ಲಿ ಅಲ್ಲಿಂದ ಪ್ರಸಾದ ಬಂದಿದ್ದು ಅದ್ಬುತವೇ ಸರಿ.

ಜಾಗ ಇದ್ದೂ ಹಣವೂ ಇದ್ದು ಮನೆ ಕಟ್ಟಲಾಗದೆ  ಒದ್ದಾಡುತ್ತಿದ್ದಾಗ ನನ್ನ ಮನೆಯವರ ಸ್ವಪ್ನದಲ್ಲಿ ಬಂದು ಕೆಲವು ಸೂಚನೆ ನೀಡಿ, ತದ ನಂತರ ಮನೆಯನ್ನೂ ನೀಡಿ ಅನುಗ್ರಹಿಸಿದ್ದು, ಈಗ ನಮ್ಮ ಮನೆ- ಶ್ರೀ ಸದ್ಗುರು ನಿಲಯ- ಶೃಂಗೇರಿಯಲ್ಲಿ ಇದೆ.ಏನೇ ಕಷ್ಟ ಬಂದರೂ ಕ್ಷಣ ಮಾತ್ರದಲ್ಲಿ ದೂರ ಮಾಡುತ್ತಿಹರು ನನ್ನ ಗುರುದೇವ.

ಗುರುನಾಥ ಅನುಭವಾಮೃತ - ಶ್ರೀ. ಆನಂದ ರಾಮ್, ಶೃಂಗೇರಿ

ಅದೊಂದು ಅದ್ಭುತ ಅನುಭವ, ಆ ಕರುಣಾಮಯನ ಸಕರಾಯಪುರದ ವೇದಿಕೆ ದರ್ಶನ , ಸಾನಿಧ್ಯ, ಅಲ್ಲಿ ಕಾಣ ಸಿಗುವ ಪ್ರಶಾಂತತೆ, ಅವರ್ಣನೀಯ. ಕೈ ಮುಗಿದು ಕೆಲ ಕಾಲ ಅಲ್ಲಿ ಕುಳಿತು ಬಂದರೆ ಧನ್ಯತೆಯ ಭಾವ. ಯಾರೋ ಹೇಳಿದರೆಂದು ಸುಮ್ಮನೆ ಕಾಲಹರಣ ಮಾಡಲು, ಸ್ವಾರ್ಥದ ಆಸೆಗಳ ಹೊರೆ ಹೊತ್ತು ಹೋದವಗೆ ಅಲ್ಲಿ ಇರುವ ಸೊಳ್ಳೆಗಳೇ ಇರಲು ಬಿಡದು. ಧನ್ಯತೆಯ ಭಾವ ಹೊಂದಿ ಮೌನದಲಿ ಬೇಡಿದಾಗ ಸಿಗುವ ಆನಂದವೇ ಬೇರೆ, ವಿಷಯುಕ್ತ ಚೇಳುಗಳೂ ಏನೂ ಮಾಡವು,  ಸೂಕ್ಷ್ಮ ಅನುಭವದ ಅವಲೋಕನ ಶಕ್ತಿ ಗುರು ನೀಡಿದ್ದರೆ ಅದರ ಮಾತೇ ಬೇರೆ. 

ಒಮ್ಮೆ ಹೀಗೆ ಮೊದಲ ಬಾರಿ ವೇದಿಕೆ ದರ್ಶನಕ್ಕೆ ಹೊರಟಾಗ ಭಯದಿಂದಲೇ ಹೋಗಿದ್ದೆವು, ಅಂದು ಬಾಗಿಲು ತೆಗೆದಿತ್ತು ಅಲ್ಲಿ ವೇದಿಕೆ ಹತ್ತಿರ ಹೋದ ಕೂಡಲೇ ವಿದ್ಯುತ್ ದೀಪ ಬೆಳಗಿದ್ದು ವಿಶಿಷ್ಟ ಅನುಭವ ನೀಡಿತ್ತು. ಗುರುನಾಥರು ವಿಶ್ವ ವ್ಯಾಪಿ ಆಗುವ ಮೊದಲು ಅವರ ಬಳಿ ಹೋಗಲು ಅನೇಕ ಬಾರಿ ಪ್ರಯತ್ನ ಪ್ರಯತ್ನವಾಗಿಯೇ ಉಳಿಯಿತು, ಹಾಗೂ ನಮ್ಮ ಕರ್ಮವೂ ಕಳೆದಿರಲಿಲ್ಲ ಅನ್ನಿಸುತ್ತೆ.

ಒಂದು ಪ್ರಶ್ನೆ ಸದಾ ನನ್ನ ಕಾಡುವುದು ಅಂದರೆ, ಆ ಮಹಾನ್ ಸಂತ ವಿಶ್ವ ವ್ಯಾಪಿ ಆದಮೇಲೆ ನನಗೇಕೆ ಅವರ ಬಗ್ಗೆ ಹೇಳಲಾಗದ ಕುತೂಹಲ ಹಾಗೂ ಭಕ್ತಿ. ಈಗ ಕರ್ಮ ಕಳೆದು ಶುದ್ದನಾದ ಸಂಕೇತವೇ, ಆ ಗುರುವೇ ಬಲ್ಲ. ನನ್ನ ತಂದೆಯವರಿಗೆ ಅವರ ಸಂಪರ್ಕ ಇತ್ತು, ಬಾಣವರದ ವೇದಿಕೆ ಶುದ್ದ ಗೊಳಿಸಿದಾಗ, ಯಾರಾದರೂ ನಿತ್ಯ ಪೂಜೆ ಸಲ್ಲಿಸ ಬೇಕು ಅಂದಾಗ, ಆ ಭಾಗ್ಯ ನನ್ನ ತಂದೆಗೆ ನೀಡಿದ ಮಹಾನ್ ಶಕ್ತಿ ಅವರು. ಅವರ ಅಗಾಧ ಶಕ್ತಿಯ ಅರಿವು ನನ್ನ ತಂದೆಗೂ ಇರಲಿಲ್ಲ ಎಂಬುದು ಆಶ್ಚರ್ಯ. ತುಂಬಾ ತಿಳಿದವರು, ಶುದ್ದಾತ್ಮರು, ಸರಳ ಜೀವಿ ಎಂಬ ಗೌರವ ಭಾವದಿಂದ ತಮ್ಮ ಲೌಕಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಹೋಗುತ್ತಿದ್ದರು ,ಹಾಗೆಯೇ ನನ್ನ ತಂಗಿಗೆ ಸಂಬಂಧ ಇಂತ ವ್ಯಕ್ತಿಯ ಮುಖಾಂತರ ಆಗುತ್ತೆ ಅಂತ ಹೇಳಿದ್ದರು, ಅದರಂತೆಯೇ ನಡೆದು ಅವರುಗಳು ಸುಖವಾಗಿ ಇದ್ದಾರೆ.

Saturday, November 9, 2019

ಸಖರಾಯಪಟ್ಟಣದ ಗುರುನಾಥ ಅವಧೂತ ಶ್ರೀಶ್ರೀಶ್ರೀ ವೆಂಕಟಾಚಲ ಸದ್ಗುರು - ನಾ ಕಂಡಂತೆ... ನಾಯಕ್ ಸಚ್ಚಿದಾನಂದ ಸಖರಾಯಪಟ್ಟಣ

ನನಗೆ ತಿಳುವಳಿಕೆ ಬಂದಾಗಿನಿಂದ, ನಾನರಿತಂತೆ, ಆ ಬಾಲ್ಯದ ದಿನಗಳು, ನಾನು ಶಾಲೆಗೆ ಹೋಗುತ್ತಿದ್ದಾಗ ನಾನವರ ಮನೆಯ ಮುಂದೆ ಹೋಗುತ್ತಿದ್ದೆ. ಆಗ ಅವರು ಯಾವಾಗಲೂ ಶ್ವೇತ ವಸ್ತ್ರ ಧರಿಸಿರುತ್ತಿದ್ದರು. ಶುಭ್ರವಾದ ಶುದ್ಧ ಸ್ಪಟಿಕ ಬಿಳಿಯ ಪಂಚೆ ಮತ್ತು ಬಿಳಿಯ ಇಸ್ತ್ರಿ ಮಾಡಿದ ಶರಟು ಧರಿಸುತ್ತಿದ್ದರು. ನನ್ನ ಮನಸ್ಸಿನಲ್ಲಿ ಮೂಡಿದ ನೆನಪುಗಳನ್ನು ಜ್ಞಾಪಿಸಿಕೊಂಡರೆ, ಅವರ ಮಂದಹಾಸದ ದುಂಡು ಮುಖ ಮತ್ತು ಅವರ ಹಣೆಯ ಮೇಲಿದ್ದ ತಾಳಿ ಮುದ್ರೆ ಕಣ್ಣ ಮುಂದೆ ನಿಲ್ಲುತ್ತದೆ. ದಾರಿಯಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದರು. ತಮ್ಮ ಮನೆಯೊಳಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರೀತಿಯಿಂದ ಮಾತನಾಡಿಸಿ ಏನಾದರೂ ಸಿಹಿ ತಿನಿಸುಗಳನ್ನು ತಿನ್ನಿಸುತ್ತಿದ್ದರು.
ಆಗಿನಿಂದ ವಿವಿಧ ಹಂತಗಳಲ್ಲಿ ಒಂದೊಂದೇ ಬಾಹ್ಯ ಮತ್ತು ಅಂತರಂಗದ ಆವರಣಗಳನ್ನು ಕಳಚಿ, ತುಂಡು ಬಟ್ಟೆಯನ್ನುಟ್ಟು, ಮೇಲೆ ಹೊದೆಯದೆ ಬಿಟ್ಟು, ದೇಹ ರಕ್ಷಣೆಗೆ ಬೇಕಾಗುವಷ್ಟು ಅತ್ಯಲ್ಪ ಅಹಂಕಾರವನ್ನು ಧರಿಸಿ, ನಿರಹಂಕಾರಿಗಳಾಗಿ, ಜಗದ್ವಿಖ್ಯಾತ ಅವಧೂತರೆನಿಸಿ, ಜೀವನ್ಮುಕ್ತರಾಗಿ, ತಮಗೆ ಬಂದ ಖ್ಯಾತಿಗೆ ಬೆನ್ನು ಮಾಡಿ, ತಾವು ಹುಟ್ಟಿ ಬೆಳೆದ ತಾಯಿ ನೆಲವಾದ ಸಖರಾಯಪಟ್ಟಣದ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದರು. ದೇಶ-ವಿದೇಶದ ಮೂಲೆ ಮೂಲೆಗಳಿಂದ ಬಂದ ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿ, ಸಾಂತ್ವನ ನೀಡಿದರು. ಬರೀ ಮನುಷ್ಯ ಮಾತ್ರರಿಗಲ್ಲದೆ, ಸಕಲ ಪ್ರಾಣಿ, ಪಕ್ಷಿ ಮತ್ತು ಪರಿಸರಗಳಲ್ಲಿ ದಯೆವುಳ್ಳವರಾಗಿ, ಪಂಡಿತ-ಪಾಮರರಿಗೆ, ಯತಿ-ಭಿಕ್ಷುಗಳಿಗೆ, ಗೃಹಸ್ಥರಿಗೆ, ಬಡವ-ಬಲ್ಲಿದರಿಗೆ, ಹಿರಿಯ-ಕಿರಿಯರಿಗೆ, ಜಾತಿ, ಮತ, ಪಂಥಗಳ ಭೇದವೆಣಿಸದೆ, ಸಕಲರಿಗೂ ಸಾಂತ್ವನ ನೀಡಿದರು. ಯಾರೊಬ್ಬರಿಗೂ ನೀತಿ ಭೋದಿಸದೆ ಮನ ನೋಯಿಸದೆ, ಸರಿ-ತಪ್ಪಗಳನ್ನು ಎಣಿಸದಲೇ, ತಿದ್ದಿ ಬುದ್ಧಿ ಹೇಳದೇ ತಾವೇನೆಡದು ತೋರಿದ ಮಹಾನ್ ಚೇತನ. 
ದೇಹಧಾರಿಯಾಗಿ ನಮ್ಮಗಳ ಜೊತೆ ಇದ್ದಾಗಿಗಿಂತ, ಮುಕ್ತರಾದ ಮೇಲೆ ಸ್ಥೂಲ ದೇಹವನ್ನು ಕಳಚಿ, ಸೂಕ್ಷ್ಮಾತಿ ಸೂಕ್ಷ್ಮ ಚೈತನ್ಯ ಸ್ವರೂಪಿಗಳಾಗಿ, ಮೊದಲಿಗಿಂತಲೂ ಸಹಸ್ರ ಪಟ್ಟು ಪ್ರಸ್ತುತವಾಗಿ ಎಲ್ಲಾ ಶಿಷ್ಯರ ಹೃನ್ಮನಗಳಲ್ಲಿ ಸದಾ ಹಚ್ಚ ಹಸಿರಾಗಿ ವಾಸ ಮಾಡುತ್ತಿರುವ ಅಜರಾಮರರಾಗಿದ್ದಾರೆ.
ಸದಾ ಆತ್ಮಾನಂದದಲ್ಲಿ ತಲ್ಲೀನರಾಗಿ ನಿಜ ಆನಂದವನ್ನು ಹಂಚುತ್ತಾ, ಯಾವ ಜಾತಿ-ಪಂಥಗಳಿಗೂ ಸೇರದೆ. ಯಾವ ನಿಧಿ-ನಿಷೇದ ಹಾಗೂ ಕಟ್ಟು ಪಾಡುಗಳಿಗೆ ಬದ್ಧನಾಗದೇ, ಶೋಕ, ಮೋಹ ವಿವರ್ಚಿತನಾಗಿ, ತನ್ನಲ್ಲಿಗೆ ಬಂದವರ ಶೋಕ, ಮೋಹ, ಭವ-ಬಂಧನಗಳನ್ನು ದೂರ ಮಾಡಿದವರು. ಜೀವನದಲ್ಲಿ ಬಳಲಿ ಬೆಂಡಾದವರಿಗೆ ಸಾಂತ್ವನ ನೀಡಿ, ಧೈರ್ಯ ತುಂಬಿ, ಆತ್ಮ ವಿಶ್ವಾಸವನ್ನು ತುಂಬಿ, 
ಜೀವನೋಲ್ಲಾಸವನ್ನು ಜಾಗೃತಗೊಳಿಸಿ, ಸರಳ, ಹಾಗೂ ಸುಲಭೋಪಾಯವನ್ನು ನೀಡುತ್ತಿದ್ದರು. ಗುರುನಾಥರಲ್ಲಿ ಅವರ ಹೆಜ್ಜೆಯನ್ನು ಗುರುತಿಸುವಂತಹಾ ಯಾವುದೇ ಲಕ್ಷಣಗಳಿರಲಿಲ್ಲ. ವಿಲಕ್ಷಣತೆಯೇ ಅವರ ಸ್ವರೂಪ. ಅವರದು ಇಂತಹಾ ಉಡುಪು, ಇಂಥಹಾ ನೆಡೆ, ಇಂಥಹಾ ನುಡಿ, ಇಂಥಹಾ ಚಿಹ್ನೆ ಎಂದು ಹೇಳಲು ಸಾಧ್ಯವೇ ಇಲ್ಲ. ಅವರ ನೆಡೆ, ನುಡಿ ಎಲ್ಲವೂ ಅನಿರೀಕ್ಷಿತ ಹಾಗೂ ನಿಗೂಢ.
ಅವಧೂತ ಪರಂಪರೆ ಒಂದು ಪಂಥವಲ್ಲ. ಅದೊಂದು ಚಿತ್ತ ಸ್ಥಿತಿ. ಯಾರ ಹಂಗೂ ಇಲ್ಲದೆ, ಯಾರನ್ನೂ ಮೆಚ್ಚಿಸುವ ಗೋಜಿಗೆ ನಿಲುಕದೆ, ಎಲ್ಲಾ ಬಂಧನಗಳನ್ನೂ ಕಳಚಿ, ಕುದುರೆ ಹೇಗೆ ತನ್ನ ಮೈ ಮೇಲಿನ ಧೂಳನ್ನು ಕೊಡವಿಕೊಳ್ಳುತ್ತದೋ ಹಾಗೆಯೇ ಎಲ್ಲಾ ಪ್ರಾಕೃತಿಕ, ಸಾಮಾಜಿಕ ಬಂಧನವನ್ನು ಕೊಡವಿಕೊಂಡು, ಇವೆಲ್ಲವುಗಳಿಂದ ಬಿಡುಗಡೆ ಹೊಂದಿದ್ದ ಜೀವನ್ಮುಕ್ತ ಸ್ಥಿತಿ ಅವರದು. ದೇಹ, ಇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರಾದಿ ಅಂತಃಕರಣಗಳ ಗುರುತುಗಳನ್ನು ಕಳೆದುಕೊಂಡು, ಅನಂತವಾದ ಜಗತ್ತಿನ ಮೂಲ ಚೈತನ್ಯದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಸಾಗುವುದೇ ಅವರ ಅನುದಿನದ ಹುಡುಕಾಟವಾಗಿತ್ತು.
ಶಬ್ದಗಳು ಕೇವಲ ಧ್ವನಿಯನ್ನುಂಟು ಮಾಡುತ್ತವೆ. ಆದರೆ ಅದನ್ನು ಮನಸ್ಸು ಇಂದ್ರಿಯ(ಕಿವಿ)ಗಳ ಮೂಲಕ ಗ್ರಹಿಸುತ್ತದೆ. ಬುದ್ದಿ ತನ್ನ ಅನುಭವದ ಮೂಲಕ ಅದಕ್ಕೆ ಅರ್ಥವನ್ನು ಕಲ್ಪಿಸುತ್ತದೆ. ಹಾಗಾಗಿ "ಶಬ್ದಗಳಿಂದುಂಟಾಗುವ ವಿಷಯಕ್ಕೆ ತಲೆ ಕೆಡಸಿಕೊಳ್ಳದೆ, ಅದರ ಹಿಂದಿರುವ ಭಾವಕ್ಕೆ ಬೆಲೆ ಕೊಡಯ್ಯ, ವಿಷಯಕ್ಕಿಂತ ಭಾವನೆಯೇ ಮುಖ್ಯ" ಎಂದು ಹೇಳುತ್ತಿದ್ದರು. ತಮ್ಮ ಕಿವಿಗೆ ಬೀಳುವ ಪ್ರತಿಯೊಂದು ಶಬ್ದವನ್ನು ಬಹಳ ಎಚ್ಚರಿಕೆಯಿಂದ ಜೋಪಾನವಾಗಿ ಆಲಿಸುತ್ತಿದ್ದರು. "ನಾನು ಸದಾ ಶಬ್ದ ಬ್ರಹ್ಮನನ್ನೇ ಆರಾಧನೆ ಮಾಡುತ್ತೇನೆ ಸಾರ್" ಎಂದು ಅನೇಕ ಸಂದರ್ಭದಲ್ಲಿ ನನ್ನಲ್ಲಿ ಹೇಳಿಕೊಂಡಿದ್ದರು. ಅವರ ಪ್ರತಿಯೊಂದು ನೆಡೆ-ನುಡಿಗಳಲ್ಲಿ ಎಷ್ಟೊಂದು ಸೂಕ್ಷ್ಮತೆ ಇತ್ತೆಂದರೆ, ಈ ಕೆಳಗಿನ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುತ್ತದೆ.
ಸಾಮಾನ್ಯವಾಗಿ ಬೆಳಗಿನ ಝಾವ ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ದಿನ ನಮ್ಮ ಮನೆ ಬಾಗಿಲು ತೆಗೆಯುವವರೆಗೂ ದೂರದ ರಂಗಮಂಟಪದಲ್ಲಿ ನಿಂತಿರುತ್ತಿದ್ದರು. ನಮ್ಮ ಅಮ್ಮ ಬಾಗಿಲು ತೆರೆದು ಕಸ ಗುಡಿಸಿ, ರಂಗೋಲಿ ಹಾಕಿದ ಮೇಲೆ ನಿಧಾನವಾಗಿ ಮನೆಗೆ ಬರುತ್ತಿದ್ದರು. ಅಮ್ಮ ಅವರನ್ನು ಮಾತನಾಡಿಸಿ, ಸೋಫಾ ಮೇಲೆ ಕೂರಿಸಿ ಉಪಚರಿಸುತ್ತಿದ್ದರು. ಅವರು ನಮ್ಮ ಮನೆಗೆ ಬರುತ್ತಿದ್ದದ್ದು ನಮ್ಮ (ನಾನು ಮತ್ತು ನನ್ನ ತಮ್ಮಂದಿರು) ಸಲುವಾಗಿ. ದಿನಾ ಬೆಳಗಿನ ಝಾವವೇ ಏಳುವ ನನಗೆ ಎಂದಿಲ್ಲದ ನಿದ್ದೆ ಅಂದು. ಅಮ್ಮ ನನ್ನನ್ನು ಎಬ್ಬಿಸುತ್ತೇನೆಂದರೂ ಬೇಡವೆಂದು ನಿರಾಕರಿಸುತ್ತಿದ್ದರು. ನಾನು ಎದ್ದು ಬರುವವರೆಗೆ ಕಾಯುತ್ತಿದ್ದರು. ನಾನು ಕಣ್ಮುಚ್ಚಿಕೊಂಡು ಬಂದು ನೋಡಿ ಗುರುಗಳೆಂದು ಅವರಿಗೆ ನಮಸ್ಕರಿಸಲು ಹೋದರೆ, "ಹೋಗಯ್ಯಾ ನಿನ್ನ ಎಲ್ಲಾ ನಿತ್ಯ ಕರ್ಮಗಳನ್ನು ಪೂರೈಸಿ ಬಾ, ನಾನು ಎಲ್ಲಿಗೂ ಹೋಗುವುದಿಲ್ಲ, ಇಲ್ಲೇ ಇರುತ್ತೇನೆ" ಎನ್ನುತ್ತಿದ್ದರು. ನಾನು "ಪರವಾಗಿಲ್ಲ ಗುರುವೇ" ಎಂದರೆ, "ನನ್ನ ಇರುವಿಕೆಯಿಂದ ಯಾರಿಗೂ ತೊಂದರೆ ಆಗಬಾರದು, ಹಾಗಿದ್ದರೆ ನಾನು ಹೊರಟೆ" ಎನ್ನುತ್ತಿದ್ದರು. ನಾನು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಬರುವವರೆಗೆ ಕಾಯುತ್ತಿದ್ದರು. ಅತಿ ವಿನಯ ಹಾಗೂ ಗೌರವದಿಂದ, ಮಾರ್ಮಿಕವಾಗಿ "ಈ ಹುಚ್ಚನ ಜೊತೆ ಸ್ವಲ್ಪ ದೂರ ಬರ್ತೀರಾ ಸಾರ್, ಬಲವಂತ ಇಲ್ಲ, ನಿಮ್ಮ ಮನಸ್ಸು ಹೇಗೆ ಹೇಳುತ್ತದೋ ಹಾಗೆ ಕೇಳಿ" ಎನ್ನುತ್ತಿದ್ದರು. ನಮ್ಮ ದೊಡ್ಡಪ್ಪ ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರು. ಅವರು ಬಂದು ಕುಶಲೋಪರಿ ವಿಚಾರಿಸಿ, ಲೋಕಾರೂಢಿಯಂತೆ, "ಏಳಿ, ಎದ್ದೇಳಿ, ತಿಂಡಿ ರೆಡಿಯಾಗಿದೆ, ಒಳಗೆ ನೆಡೆಯಿರಿ" ಎಂದು ಮನೆಯ ಮುಂದಿನ ಹಾಲಿನಲ್ಲಿ ಕುಳಿತ ಗುರುಗಳಿಗೆ ಒಳಗೆ ತೊಟ್ಟಿಯ ಮೇಲಿದ್ದ ಊಟದ ಟೇಬಲ್ಲಿಗೆ ಕರೆದುಕೊಂಡು ಹೋಗಲು ಸೂಚಿಸಿದರು. ನನಗೂ "ನಿಮ್ಮ ಗುರುಗಳನ್ನು ತಿಂಡಿಗೆ ಎಬ್ಬಿಸೋ" ಎಂದರು. ಅಲ್ಲಿಯವರೆಗೂ ಶಾಂತಚಿತ್ತರಾಗಿ ಕುಳಿತಿದ್ದ ಗುರುಗಳು ವಿನಾಕಾರಣ ಎದ್ದು ಸೀದಾ ಮನೆಯಿಂದ ಹೊರಟು ಹೊರಗೆ ಹೋದರು. ನಮ್ಮ ದೊಡ್ಡಪ್ಪನವರಿಗೆ ಬಹಳ ಮುಜುಗರವಾಯಿತು. "ನಾವೆಲ್ಲಾ ಹೇಳಿದರೆ ನಿಮ್ಮ ಗುರುಗಳು ಏಕೆ ಬರುತ್ತಾರೆ" ಎಂದು ಗೊಣಗಿಕೊಂಡು ಒಳ ನೆಡೆದರು.
ನಾನು ಗುರುಗಳ ಹಿಂದೆ ಓಡಿ ಹೊರಬಂದೆ. ಅವರು ಹೊರ ಬಂದವರೇ ಸೀದಾ ನಮ್ಮ ಎದುರು ಮನೆಯ ಜಗುಲಿ ಮೇಲೆ ಕುಳಿತರು. ನಾನೂ ನಿಧಾನವಾಗಿ ಬಂದು ಅವರ ಪಕ್ಕ ಕುಳಿತೆ. ನನ್ನ ಮನಸ್ಸಿನಲ್ಲಿ ಏನೇನೋ ಯೋಚನೆಗಳು ಸುಳಿದು ಮಾಯವಾದವು. ನಾನು ಮನದಲ್ಲೇ, "ಏನು ಗುರುಗಳಪ್ಪಾ ಇವರು? ನಮ್ಮ ದೊಡ್ಡಪ್ಪ ಏನು ತಪ್ಪಿನ ಮಾತನಾಡಿದರು? ತಿಂಡಿ ರೆಡಿಯಾಗಿದೆ ಒಳಗೆ ಬನ್ನಿ ಅಂದ್ರು. ಅದಕ್ಕೆ ಎದ್ದು ಸೀದಾ ಹೊರಕ್ಕೆ ಬರುವುದೇ?" ಹೀಗೆ ಪುಂಖಾನು ಪುಂಖವಾಗಿ ಯೋಚನಾ ಲಹರಿಗಳು ಪುಟಿದೇಳುತ್ತಿದ್ದವು. ಆದರೆ ಏನೂ ಆಗಿಲ್ಲವೋ ಎಂಬಂತೆ ಮುಗುಳು ನಗುತ್ತಾ, ಓರೆ ದೃಷ್ಠಿಯಿಂದ ನನ್ನನ್ನು ದಿಟ್ಟಿಸುತ್ತಾ, ತೇಜಃ ಪುಂಜವಾದ ಅವರ ಓರೆಗಣ್ಣುಗಳಲ್ಲಿ ನನ್ನ ಮನದಾಳಕ್ಕಿಳಿದು, ನನ್ನ ಮನಸ್ಸಿನ ತುಮುಲವನ್ನರಿತು, ನನ್ನ ತಲೆ ಸವರಿ, "ಏಳಯ್ಯಾ ತಿಂಡಿ ತೆಗೆದುಕೊಂಡು ಬಾ, ಅದರ ಜೊತೆಗೆ ಕಾಫೀನೂ ತೆಗೆದುಕೊಂಡು ಬಾ. ಇಲ್ಲೇ ಒಟ್ಟಿಗೆ ತಿನ್ನೋಣ" ಎಂದರು. ನನ್ನ ಮನಸ್ಸಿನ ಯೋಚನಾ ಲಹರಿ ಅಲ್ಲಿಗೇ ನಿಲ್ಲಲಿಲ್ಲ. " ಈ ಕೆಲಸಾನ ಅಲ್ಲೇ ಮನೆ ಒಳಗೆ ಮಾಡಿದ್ರೆ 
ಏನಾಗುತ್ತಿತ್ತು? ನಮ್ಮ ದೊಡ್ಡಪ್ಪನವರಿಗೂ ಸಮಾಧಾನ ಆಗಿರೋದು. ಅವರು ಸುಮ್ಮನೆ ಬೇಜಾರು ಮಾಡಿಕೊಂಡರು. ಈ ಗುರುಗಳು ಯಾಕೆ ಹೀಗೆ ಮಾಡಿದ್ರು??? ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲೇ "ಮಗೂ ಏಳು ಎಂದ ಮೇಲೆ ಒಳಗೇನು, ಹೊರಗೇನು? ಎದ್ದು ನೆಡೀತಿರಬೇಕು. ಒಳಗೆ ಕೊಟ್ಟರೆ ಸತ್ಕಾರ, ಹೊರಗೆ ಕೊಟ್ಟರೆ ಭಿಕ್ಷ ಅಷ್ಟೇನಯ್ಯಾ, ಹೋಗು ತಿಂಡಿ ತೆಗೆದುಕೊಂಡು ಬಾ..... ಹಾಗೇ ಒಂದು ಚೊಂಬು ಕಾಫೀನೂ ತೆಗೆದುಕೊಂಡು ಬಾ" ಎಂದರು. ಅಷ್ಟರಲ್ಲಿ ಅಲ್ಲಿಗೆ ನಾಲ್ಕಾರು ಜನ ಹಾಗೂ ಒಂದೆರಡು ನಾಯಿಗಳೂ ಬಂದವು. ಕೊಟ್ಟ ತಿಂಡಿಯನ್ನು ಅಲ್ಲಿದ್ದವರಿಗೆಲ್ಲಾ ಹಂಚಿ, ಆ ನಾಯಿಗಳಿಗೂ ಸ್ವಲ್ಪ ಹಾಕಿ, ಪ್ರಸಾದವೆಂಬಂತೆ ಒಂದು ಚೂರು ಬಾಯಿಗೆ ಹಾಕಿಕೊಂಡು, ಅಲ್ಲಿದ್ದವರಿಗೆಲ್ಲಾ ಕಾಫಿ ಕುಡಿಸಿದರು. ನಂತರ "ನೆಡೀರಿ ಸಾರ್ ಹೊರಡೋಣ" ಎಂದರು.
ಮನಸ್ಸಿನಲ್ಲಿ ಯಾವುದೇ ವಿಧವಾದ ಕಲ್ಮಶಗಳಿಲ್ಲದೆ, ರಾಗ-ದ್ವೇಷಗಳಿಲ್ಲದೆ ಸದಾ ಮನಸ್ಸನ್ನು ತಿಳಿಯಾಗಿ, ಸ್ವಚ್ಛವಾಗಿರಿಸಿಕೊಂಡಿದ್ದ ಅವರು ಸದಾ ಹಗುರವಾದ ಮನಸ್ಸು ಹೊಂದಿದವರಾಗಿ ಅತೀಂದ್ರಿಯವಾದ ಅಲೌಕಿಕ ಶಕ್ತಿ ಹೊಂದಿದ್ದು ಊಹಾತೀತವಾಗಿರುತ್ತಿದ್ದರು. 
"ಅವಧೂತ" ಎಂಬ ನಾಲ್ಕು ಅಕ್ಷರಗಳ ಪೂರ್ಣರ್ಥಕ್ಕೆ ಅನ್ವರ್ಥವಾಗುವಂತೆ ಬಾಳಿ ಬದುಕಿದವರು.
"ಅ" ಅಂದರೆ, ಆನಂದದ ಶುದ್ಧ ನೆಲೆಯಲ್ಲಿ ಶಾಶ್ವತವಾಗಿ ನಿಂತ ಸ್ಥಿತಿ. ಎಲ್ಲಾ ತರಹದ ರಾಗ-ಭಾವಗಳಿಂದ ವಿರಾಗಿಗಳಾಗಿ, ತಮ್ಮ ಅಪರಿಮಿತವಾದ ಆನಂದದ ಕಾಂತ ಕ್ಷೇತ್ರವನ್ನು ನಿರ್ಮಿಸಿ, ತನ್ನ ಸಾಮ್ಯತೆಗೆ ಬಂದ ಪ್ರತಿಯೊಬ್ಬರನ್ನೂ (ಅಯಸ್ಕಾಂತಕ್ಕೆ ಅಂಟಿದ ಕಬ್ಬಿಣಕ್ಕೂ ಕಾಂತೀಯ ಗುಣ ಬರುವಂತೆ) ಆನಂದಾವಸ್ಥೆಗೆ ಕೊಂಡೊಯ್ಯುವ ಸ್ಥಿತಿ.
"ವ" ಅಂದರೆ, ಸಮಸ್ತ ಪ್ರಾಪಂಚಿಕ ವಾಸನಾ ವಿಶೇಷದಿಂದ ಮುಕ್ತವಾದ ಸ್ಥಿತಿ. ನಾವು ಮಾಡುವ ಪ್ರತೀ ಕರ್ಮಗಳೂ ಮನಸ್ಸಿನಲ್ಲಿ ಮುದ್ರಿತವಾಗಿ ಕೆಲವು ಪ್ರವೃತ್ತಿಗಳಾಗುತ್ತವೆ. ಉದಾಹರಣೆಗೆ, ಯಾವುದಾದರೂ ಸ್ಥಳಕ್ಕೆ ಹೋದರೆ ಹತ್ತು ಹಲವಾರು ವಾಸನೆಗಳು ನಮ್ಮ ಮೂಗಿಗೆ ಬಡಿಯುತ್ತವೆ. ಅವೆಲ್ಲವನ್ನೂ ಗ್ರಹಿಸದೆ, ಮುಖ್ಯವಾದದ್ದನ್ನು ಮನ ಗ್ರಹಿಸಿ, ಅದರ ಮೂಲವನ್ನು ಅರಿತು 
ನೆನಪಿಟ್ಟುಕೊಳ್ಳುತ್ತದೆ. ಇದನ್ನು ವಾಸನೆ ಎನ್ನುತ್ತೇವೆ. ಅದೇ ರೀತಿ ನಮ್ಮ ನಿತ್ಯ ನೈಮಿತ್ತಿಕ ಕರ್ಮಗಳಿಂದುಂಟಾಗುವ ಪ್ರವೃತ್ತಿ ಮನಸ್ಸಿನಲ್ಲಿ ಮುದ್ರಿತವಾದಾಗ ಅದನ್ನು ವಾಸನೆ ಎನ್ನುತ್ತಾರೆ. ಈ ವಾಸನೆಯಿಂದ ಕರ್ಮ ಬಂಧನವಾಗುತ್ತದೆ. ಇದು ಮುಂದುವರೆದು ಆಗಮ, ಸಂಚಿತ ಮತ್ತು ಪ್ರಾರಬ್ಧ ರೂಪವಾಗಿ, ಜನನ-ಮರಣ, ಸುಖ-ದುಃಖ, ಜರಾ-ವ್ಯಾದಿ, ಜನ್ಮ ಜನ್ಮಾಂತರಗಳೆಂಬ ವಿಷ ವರ್ತುಲ ನಿರ್ಮಾಣವಾಗುತ್ತದೆ. ಇದರಿಂದ (ವಾಸನಾ ವಿಶೇಷದಿಂದ) ಮುಕ್ತವಾದರೆ ಜೀವನ್ಮುಕ್ತರಾದಂತೆ.
"ಧೂ" ಅಂದರೆ, ಬಾಹ್ಯಾಭ್ಯಂತರ ಶುಚಿ. ನವದ್ವಾರಗಳಿಂದ ಸದಾ ವಿಷ ವಸ್ತುಗಳನ್ನು ಹೊರ ಹಾಕುವ, ಮಲ ಮೂತ್ರಗಳ ಕೊಂಪೆ, ರಕ್ತ ಮಾಂಸಗಳ ಪಿಂಡವೆಂಬ ಶರೀರ ಮಲಿನವಾದಂತೆ ತೋರಿದರೂ, ಕುದುರೆ ತನ್ನ ಮೈಮೇಲಿನ ಧೂಳನ್ನು ಕೊಡವಿಕೊಂಡು ಮೇಲೇಳುವಂತೆ, ಅಂತರಂಗದ ಅಂತಃಕರಣದ ಧೂಳನ್ನು ಕೊಡವಿ ಕನ್ನಡಿಯಂತೆ ತಿಳಿಯಾದ ಅಂತಃಕರಣವನ್ನು ಹೊಂದಿದವರಾಗಿ ಬಳಿ ಬಂದವರ 
ಕೈಗನ್ನಡಿಯಾಗಿರುವ ಸ್ಥಿತಿ.
"ತ" ಅಂದರೆ ತತ್ ಪದದಲ್ಲಿ ಎಂದಿಗೂ ಕುಂದದೇ ನಿಂತ ಸ್ಥಿತಿ. ಜಗತ್ಕಾರಣಕ್ಕೆ ಕಾರಣವಾದ ಮಹಾಕಾರಣ. ಜ್ಞಾನರೂಪವಾದ, ಜಗತ್ ಚೇತನವಾದ, ಶುದ್ಧ ಚೈತನ್ಯ ಯಾವುದೊಂದಿದೆಯೋ ಅದನ್ನು ಇದಮಿತ್ತಂ ಎಂದು ನಿಖರವಾಗಿ ಹೇಳಲಾಗದ, ಊಹೆಗೆ ಬಾರದ, ಬರಹಕ್ಕೆ ನಿಲುಕದ, ನಿರಾಕಾರ, ನಿರ್ವಿಕಲ್ಪ ಸೃಷ್ಠಿ ಸಂಕಲ್ಪವೇ "ತತ್"-'ಅದು". ಇದನ್ನೇ ಬ್ರಹ್ಮ, ವಿಷ್ಣು, ಮಹೇಶ್ವರ, ಪರಮಾತ್ಮ, ಪರಬ್ರಹ್ಮ, ಶಕ್ತಿ, ಇತ್ಯಾದಿ ಪರಿಮಿತ ಶಬ್ದಗಳಿಂದ ವ್ಯಾಖ್ಯೆ ಮಾಡಲು ಹೋಗಿ ಸೋತು ಸುಮ್ಮನಾಗಿ, ಅದು ಅದಾಗಿರಲಿ "ತತ್" ಎಂದು ಒಪ್ಪಿಕೊಂಡು ಆ ಪದದಲ್ಲಿ ನೆಲೆ ನಿಂತ ಸ್ಥಿತಿ.
ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಅವರ ಕಾಲದಲ್ಲಿ ಬಾಳಿ ಬದುಕಿದ್ದ, ಅವರು ಕಂಡ ಯಾವುದೇ ನಾಮಧೇಯವಿಲ್ಲದೇ ಮುಕುಂದೂರು ಸ್ವಾಮಿಗಳು ಎಂಬ ಮಹಾನ್ ಅವಧೂತರ ಬಗ್ಗೆ ಅವರ "ಯೋಗದಾಗೆ ಎಲ್ಲಾ ಐತೆ" ಎಂಬ ಪುಸ್ತಕ ಓದಿ ತಿಳಿದಿದ್ದೆ. ಅಂತಹದೇ ಒಂದು ಮಹಾನ್ ಚೇತನ ಅವಧೂತ ಶ್ರೀ ವೆಂಕಟಾಚಲ ಸದ್ಗುರುಗಳು. ಅವರು ಅವತರಿಸಿದ ಈ ಕಾಲ ಘಟ್ಟದಲ್ಲಿ ಆ ಮಹಾನ್ ಚೇತನದ ಜೊತೆ ಬಾಳಿ ಬದುಕಿ ಅವರ ಪಾದ ಪೂಜೆಗಿಂತ ಅವರ ಪದ ಪೂಜೆಯೇ ನನ್ನ ಜೀವನದ ಸಾರ್ಥಕ್ಯವೇಂದು ನಾನು ಭಾವಿಸುತ್ತೇನೆ.

ಸಂಗ್ರಹ :ಶ್ರೀ. ಕುಶಾಲ, ಬೆಂಗಳೂರು 

ಮನದ ಮಾತು - ಶ್ರೀ. ಆನಂದ ರಾಮ್, ಶೃಂಗೇರಿ

ಒಮ್ಮೆ ಸುಮ್ಮನೆ ಯೋಚಿಸಿದೆ, ಗುರುವ ಹಂಬಲಿಸುವ ನಾನು ಸ್ವಾರ್ಥದಿಂದ ದೂರ ಇದ್ದೇನ?

ಯಾವುದು ಸ್ವಾರ್ಥ, ಗುರುವಿಗಾಗಿ ಬೇಡುವುದು, ಹೌದು ಬೇಡುವ ಉದ್ದೇಶ ನನಗೆ ಗುರು ದರುಶನ ನೀಡಲೆಂಬುದು, ಅದೂ ಒಂದು ರೀತಿಯ ಸ್ವಾರ್ಥ, ಪದ ಜೋಡಿಸಿ ಹಾಡಿ ಅನುಭವಿಸುವುದು ಅದೂ ಸ್ವಾರ್ಥ, ಭಾವುಕ ಬಕುತರ ಸಂಗದ ಬಯಕೆ, ಗುರು ಕಾರುಣ್ಯ ಪಡೆಯಲು ಹಾದಿ ಸುಗಮ
ವಾಗಲೆಂದೇ? ಹೌದು ಇದೂ ಕೂಡಾ,ಇಷ್ಟೆಲ್ಲಾ ಪ್ರಯತ್ನಗಳು ನಾನು ನನ್ನ ಮಕ್ಕಳು ನನ್ನವರು ಸುಖವಾಗಿ ಇರಲಿ ಎಂಬ ಸ್ವಾರ್ಥ,  ಎಂಬುದು ನನ್ನ ಅನಿಸಿಕೆ.

ಇನ್ನೆಗೆ ಬೇಡಲಿ ನಾನು ಗುರುವನ್ನು ಎಂಬ ಪ್ರಶ್ನೆ ಬಂದಾಗ, ನನ್ನರಿವು ಇಲ್ಲದಂತಾಗಿ, ಹೃದಯದಾಳದಲಿ ಮೂಡುವ ಆ ಒಂದು ದಿವ್ಯ ಅನುಭವ , ಎಲ್ಲಾ ನಿನ್ನದೆಂಬ ಭಾವ ನಾನೇನೂ ಮಾಡುತ್ತಿಲ್ಲ , ನಿನ್ನ ಪ್ರೇರಣೆ ಮಾತ್ರ ಇಲ್ಲಿ ಮುಖ್ಯ ಎಂದು ಭಾವಿಸಿದಾಗ ದೊರೆವ ಬಿಡುಗಡೆಯ ಅನುಭವ ಅಮೂಲ್ಯ.

ಪೂಜಿಸಿದೆ ಎಂಬ ಭಾವ ವೇದ ಮಂತ್ರ ಅರಿತಿಹೆ ಎಂಬ ಭಾವ ನನ್ನೊಡೆಯನ ಮುಂದೆ ನಗಣ್ಯ, ಆ ಒಡೆಯನ ಕಾಣುವ ಹಂಬಲ ಜಾಸ್ತಿ ಆದಾಗ ಬರುವ ಕ್ಷಣಿಕ ಪರೀಕ್ಷೆಗಳು, ಮೂಡುವ ನಿರಾಶೆಯ ಭಾವ ದೂರ ಮಾಡಿದನೆಂಬ ಭಾವ ಎಲ್ಲದರಲ್ಲೂ ಅವನ ಕಾಣುವ ಹಂಬಲ ಜಾಸ್ತಿ ಮಾಡುವುದು.

ಮುಖವಾಡ ಕಳಚದೆ ವಿಧಿ ಇಲ್ಲ ಅವ ಸಿಗುವುದೂ ಇಲ್ಲ, ಡಾಂಭಿಕ ಭಕುತಿ ಅವ ಒಪ್ಪನಲ್ಲ, ಜೀವನ ನಡೆವಾಗ ನಾ ಎಸಗುವ ಕಾರ್ಯಗಳು ಅವನಿಗರ್ಪಿಸಿ ಸುಮ್ಮನೇ ಇರುವುದೊಂದೇ ದಾರಿ.

ಕೂಗು ಅಳತೆಯ ದೂರದಲಿ ಇದ್ದರೂ ನಾ ಕಾಣಲಿಲ್ಲ ಎಂದಾದರೆ ಅದು ನನ್ನ ಕರ್ಮದ ಫಲ ಅಲ್ಲವೇ, ಈಗ ಗುರುನಾಥನೇ ಎಲ್ಲಾ ಎಂಬ ಭಾವ ಬರಲು ಅವನೇ ಕಾರಣ. ಈಗ ಪ್ರತಿ ಕ್ಷಣವೂ ಅವನಿಗಾಗಿ ಹಂಬಲಿಸುತ ಸತತ ಪ್ರಯತ್ನ ನಡೆಸುತಿಹೆನು .

ಗುರುನಾಥರು ಹೇಳಿದಂತೆ ಅನುಸಂಧಾನ ಮಾಡಿದಾಗ ಶೂನ್ಯ ಸೇರಬಹುದು ಅಲ್ಲವೇ? ಇನ್ನೇನೋ ಅನಿಸಿಕೆಗಳು ಮನಕೆ ಬರುವುದು , ನಾನೇನೂ ಸಾಧಕನೂ ಅಲ್ಲ, ನಿಜ ಗುರು ಭಕ್ತನೂ ಅಲ್ಲ. ಈ ಪ್ರಪಂಚದ ಸಂತೆಯಲಿ ನಾನೊಬ್ಬ ಸೊಪ್ಪು ಕೊಳ್ಳುವವ, ಸೊಪ್ಪಿನ ವಿಚಾರ ಬಿಟ್ಟು ಸೊಪ್ಪು ಬೆಳೆದವನ ಗೊಡವೆ ನನಗೇಕೆ ಅಲ್ಲವೇ.

ಹಾಗೇ ಸುಮ್ಮನೆ.

Thursday, November 7, 2019

ನಿನ್ನ ಕಾಣಲು ಓಡಿ ಬಂದೆನೋ ಗುರುವೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ಕಾಣಲು ಓಡಿ ಬಂದೆನೋ ನಿನ್ನ ದರುಷನಕೆ ಕಾದಿಹೆನೋ
ಎಲ್ಲೂ ಕಾಣದೆ ಏನೂ ಅರಿಯದೆ ನಿನಗಾಗಿ ಹಂಬಲಿಸಿ ಸೋತೆನೋ ಗುರುವೇ|

ನಾನೆಂಬ ಭಾವವ ಕಳಚದ ಹೊರತು ನೀ ದೊರೆಯಲಾರೆ ಎಂಬುದಾ ಬಲ್ಲೆನೋ
ಹಾತೊರೆಯುವ ಮನವನಿತ್ತು  ದೂರನಿಂತು ನನ್ನ ಗುರುನಾಥ ನೋಡುತಿಹನೋ|

ಗುರುವೆಂದು ನಿನ್ನ ನಂಬಿ ಗುರುಬಕುತರ ಒಡನಾಟ ನಡೆಸಿಹೆನೋ
ಭಾವಚಿತ್ರದಲಿ ನಿನ್ನ ಕಂಡರೂ ಸಾಕೆನುತ ಕಾಣದೇ ಬಸವಳಿದು ಹೋದೆನೋ|

ಅದೆಷ್ಟು ಆಟವೋ ಗುರುವೇ ನಿನ್ನದು ಅರಿಯದೇ ಮೂಡನಾದೆನೋ
ಆ ನಿನ್ನ ಒಂದು ಮುದ್ದು ನೋಟಕೆ ಕಾದು ಕಾದು ನನ್ನನೇ ಮರೆತು ಹೋದೆನೋ|

ಇಲ್ಲಿ ನೀ ಕಾಣದೆ ಹೋದರೂ ನೀ ಎನ್ನ ದೂರ ತಳ್ಳಿದರೂ ಸೋಲಲಾರೆನೋ
ದರುಶನವ ನೀಡಿ ಸಲಹಿ ಹರಸುವವರೆಗೂ ನಿನ್ನ ಪಾದ ಬಿಡಲಾರೆನೋ|

Saturday, November 2, 2019

ಭಾವನೆಗಳ ಒಡನಾಟದಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಭಾವನೆಗಳ ಒಡನಾಟದಿ ತಕಲಾಟದ ಭಾವಕೆ ಭಕುತಿಯೆಂದೆ
ಮಡಿಯುಟ್ಟು ಜಲದಿ ಮಿಂದೆದ್ದು ಶುದ್ದನಾದನೆಂಬ  ಭಾವದಿ ಮೂರ್ಖನಾದೆ|

ಮರುಳತನದಿ ಮೌನದರಿಸಿ ನಾಮ ಜಪಿಸಿ ನಾನೇ ಬಕುತನೆಂದೆ
ನಾನೂ ನನದೆಂಬ ಭಾವದಿ ಮೈ ಮರೆತು ಸೇವೆಗೈದೆನೆಂದೆ|

ಸ್ವಾರ್ಥದ ಆಸೆ ಹೊತ್ತು ಕೆಲಸ ಕಾರ್ಯ ಮಾಡಿ ದೊಡ್ಡ ಸೇವೆಯೆಂದೆ
ಗುರು ಹಿರಿಯರ ಸೇವೆ ಮಾಡದೆಲೆ ಗುರಿ ಕಾಣದೆ ಕಂಗೆಟ್ಟು ಹೋದೆ|

ಧಾನ ಧರ್ಮ ಮಾಡದೆಲೆ ಮುಖವಾಡ ದರಿಸಿ ಬಲು ಧರ್ಮಿಷ್ಠನೆಂದೆ
ಧೀನ ಅಬಲರ ಕಡೆಗಣಿಸಿ ವ್ಯರ್ಥ ಜೀವನ ನಡೆಸಿ ದೊಡ್ಡವನೆಂದು ಬೀಗಿದೆ|

ನಿನ್ನ ಮಹಿಮೆ ಅರಿಯದಲೇ ನಿನ್ನ ಬಕುತನೆಂದು ನಟಿಸಿ ಬೀಗಿದೆ
ಎನ್ನ ತಪ್ಪಿನರಿವು ಎನಗೆ ಮೂಡಿಸಿ ಸರಿ ದಾರಿ ತೋರಿ ಹರಸೋ ಎಂದೆ|

ಗುರುನಾಥ ಎಂದ ಎನ್ನ ಮನವ ಶುದ್ದಗೊಳಿಸಿ ಹರಸೋ ತಂದೆ
ನಿನ್ನ ಪದಕಮಲ ತೋರಿ ಈ ಪಾಮರನ ಮುನ್ನಡೆಸಿ ದಡ ಸೇರಿಸೋ ಎಂದೆ|

Thursday, October 31, 2019

ನಿನ್ನ ದಿವ್ಯ ಚರಣ ಕಂಡ ಮನವು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ದಿವ್ಯ ಚರಣ ಕಂಡ ಮನವು ಬಲು ಮುದದಿ  ಕುಣಿದಾಡಿತೋ 
ಹೃದಯ ಕಮಲದಿ ನಿನ್ನ ಸ್ಮರಣೆ ನೆಲೆ ನಿಂತು ಧನ್ಯವಾಯಿತೋ ಗುರುವೇ|

ಬುದ್ದಿ ಇಲ್ಲದಾ ಜೀವವಿದು ನಿನ್ನ ನೆನೆವ ಅರಿವು ಪಡೆಯಿತೋ
ಕರ್ಮ ಫಲದ ಅರಿವಿಲ್ಲದೇ ಬದುಕು ನಡೆಸಿ ಮೂಡನಾಯಿತೋ|

ಅಂತರಂಗದಿ ಭಾವ ಶುದ್ದಿ ಇಲ್ಲದೇ ವೇಷ ಧರಿಸಿ ದಿನವ ಕಳೆಯಿತೋ
ಅರಿವಿದ್ದರೂ ಬಾಳು ನಡೆಸಿ ಕಪಟನಾಗಿ ಪಾಪಿಯಾಯಿತೋ|

ತೋರಿಕೆಯ ಭಕುತಿ ಮಾಡಿ ಮಲಿನ ಮನವ ಸಂಗ ಪಡೆಯಿತೋ
ಮೂರು ದಿನದ ಬದುಕಿಗಾಗಿ ಬಣ್ಣ ಬಣ್ಣದ ವೇಷವ ದರಿಸಿತೋ|

ನಿನ್ನ ನಾಮವೊಂದೇ ಸಕಾಯ್ತು ಎನ್ನ ಮನಕೆ  ಬದುಕ ಕಲಿಸಿತೋ
ಸದಾ ನಿನ್ನ ಒಲುಮೆಗಾಗಿ ಮನವು ಮಿಡಿದು ನಿನ್ನ ಪಾದ ಪಿಡಿಯಿತೋ|

Monday, October 21, 2019

ದಯ ಮಾಡೋ ಗುರುವೇ ಎನ್ನಾ ಮನೆಗೆ ದಯಮಾಡೋ - ರಚನೆ :ಆನಂದ ರಾಮ್

ದಯ ಮಾಡೋ ಗುರುವೇ ಎನ್ನಾ ಮನೆಗೆ ದಯಮಾಡೋ
ಪಾಮರನು ನಾನು ನಿನ್ನ ಸೇವೆಯ ಪರಿಯ ಅರಿಯನೋ ಒಮ್ಮೆ ದಯಮಾಡೋ|

ನಿನ್ನ ಚರಿತೆಯ ಓದುತ ನಿನ್ನ ಮಹಿಮೆಯ ಅರಿಯುತ ದೈನ್ಯದಿ ಬೇಡುವೆನೋ
ಸಾಟಿಯಿಲ್ಲದಾ ಗುರುವರ ನೀ ಎನ್ನ ಕೋರಿಕೆಯ ಮನ್ನಿಸಿ ಬರುವಿಯೇನೋ|

ನಿರಂತರ ನಿನ್ನ ಸೇವಿಸುವ ಬಕುತರ ಸಂಗವ ತೊರೆದು ಒಮ್ಮೆ ಹರಸೋ ಎನ್ನನು
ನಿನ್ನ ತತ್ವವ ಅರಿಯದ ಈ ಮೂಡನ ತಪ್ಪನ ಮನ್ನಿಸಿ ಪೊರೆಯೋ ಎನ್ನನು|

ಹಸಿದು ಬಂದ ಬಕುತರ ಹಸಿವ ನೀಗಿಸಿ ನೋವುಂಡವರ ನೋವು ನೀಗುವೆ ನೀನು
ಸಖರಾಯಪುರವೆಂಬ ಪುಣ್ಯ ಮಣ್ಣಲಿ ಜನಿಸಿ ಜಗವ ಪೊರೆವ ಸದ್ಗುರುವೋ ನೀನು|

Wednesday, October 16, 2019

ಎದ್ದು ಬರುವನು ಗುರುವು - ರಚನೆ: ಶ್ರೀ. ಆನಂದರಾಮ್, ಗಾಯನ: ಶ್ರೀ.ಶಿವಾನಂದ್


ಬಂದೇನು ಬೃಂದಾವನಕೆ - ರಚನೆ: ಶ್ರೀ.ಆನಂದರಾಮ್, ಗಾಯನ: ಶ್ರೀ.ಶಿವಾನಂದ್


ಬಂಧಮುಕ್ತ ಮಾಡೋ ಎನ್ನನು ಮನದ ಮಲಿನ ಭಾವಗಳಿಂದ - ರಚನೆ: ಶ್ರೀ.ಆನಂದರಾಮ್

ಬಂಧಮುಕ್ತ ಮಾಡೋ ಎನ್ನನು ಮನದ ಮಲಿನ ಭಾವಗಳಿಂದ 
ಪರಿಶುದ್ಧ ಮಾಡೋ ಎನ್ನ ಹೃದಯವ ಸದಾ  ನಿನ್ನ ಸ್ಮರಣೆಯಿಂದ|

ಬೇಡಲೂ ಭಯವಾಗುತಿದೆ ಗುರುವೇ ಕಪಟ ತುಂಬಿದ ಮಾತಿನಿಂದ
ವಿಧ ವಿಧ  ವೇಷ ಧರಿಸೆ   ಭಕುತಿ  ಇಲ್ಲದ ಭಾವಾವೇಷದಿಂದ |

ಪರಿ ಪರಿಯ ಬೇಡಿಕೆಯ  ಮುಂದಿಡಲಾರೆ ಮುಕ್ತಗೊಳಿಸೆನ್ನ ಕರ್ಮದಿಂದ
ಬಿಡುಗಡೆಗೊಳಿಸೆನ್ನ ಮನವ ಗುರುವೇ  ಅನ್ಯರಾ ವಿಷಯದ ಆಸೆಯಿಂದ|

ಮಂತ್ರ ತಂತ್ರದ ಅರಿವಿಲ್ಲ ಎನಗೆ ದೂರ ಮಾಡು ಎನ್ನ ಮನವ ಶಂಕೆಯಿಂದ
ಕಟ್ಟು ಪಾಡುಗಳು  ಬೇಡವೆನಗೆ ನೀಡೋ ಮನಕೆ ಶಾಂತಿಯ ನಿನ್ನ ಸೇವೆಯಿಂದ|

ನಿನ್ನ ಪಾದಕಮಲದಡಿ ಎನ್ನ ಶಿರವಿಟ್ಟು ಬೇಡುವೆನು ಕುರುಡು ಬಕುತಿಯಿಂದ
ದೂರ ಮಾಡಬೇಡ ಎನ್ನನು ಗುರುವೇ ನಿನ್ನ ನಿಜ ಬಕುತರ  ಸಂಗದಿಂದ|

ಎತ್ತಿರೇ ಆರತಿ ನಮ್ಮ ಗುರುನಾಥಗೆ - ರಚನೆ: ಶ್ರೀ.ಆನಂದ ರಾಮ್, ಗಾಯನ: ಶ್ರೀ.ಶಿವಾನಂದ್


ಗುರು ಕೊಟ್ಟರೆ ಉಂಟು - ರಚನೆ: ಶ್ರೀ.ಆನಂದ ರಾಮ್, ಗಾಯನ: ಶ್ರೀ.ಶಿವಾನಂದ್


ನೀ ಕರುಣಿಸೆ ಇನ್ನೇನು ಬೇಕು ನನ್ನ ದೊರೆಯೇ - ರಚನೆ: ಶ್ರೀ. ಆನಂದರಾಮ್, ಗಾಯನ: ಶ್ರೀ.ಶಿವಾನಂದ್


Thursday, January 3, 2019

ಗುರುನಾಥ ಗಾನಾಮೃತ 
ಮೌನದಲಿ ಬೇಡುವೆ ನನ್ನ ಗುರುವೇ ಎನ್ನ ಮೊರೆಯ ಆಲಿಸೋ ದೊರೆಯೇ
ರಚನೆ: ಆನಂದರಾಮ್, ಶೃಂಗೇರಿ  


ಮೌನದಲಿ ಬೇಡುವೆ ನನ್ನ ಗುರುವೇ ಎನ್ನ ಮೊರೆಯ ಆಲಿಸೋ ದೊರೆಯೇ
ಎಷ್ಟು ಬೇಡಿದರೂ ಸಾಲದು ಕೊನೆ ಇಲ್ಲದ  ಇಷ್ಟಗಳು ನೆರವೇರಲು|

ಮನವ ತಹಬಂದಿಗೆ ತರಲಾರೆನೋ ಎನ್ನ ಮನ್ನಿಸೋ ನನ್ನ ಒಡೆಯ
ಧೂರ್ತ ಯೋಚನೆಯ ಸುಳಿಯ ಮಧ್ಯೆ  ಸಿಲುಕಿ ಮನ ನರಳುತಿದೆ ನೀ ನೋಡೆಯಾ|

ಕರುಬು ತನದ ಬಾದೆಯದು ಉದರ  ಶೂಲೆಯ ತಂದಿಹುದಯ್ಯ
ಕನಿಕರಿಸಿ ಮಲಿನ ಮನವ ಶುದ್ದಗೊಳಿಸಿ ಮನ ನಿನ್ನಲಿ ನಿಲ್ಲಿಸಯ್ಯ|

ಆವರಿಸಿಕೊಂಡಿರುವ ಭ್ರಮೆಯ ಅಳಿಸೋ ಎನ್ನ ಉದ್ದರಿಸೋ
ನಿಜವ ಅರಿಯಲು ಮನಸ ಹದಮಾಡಿ ಸರಿ ದಾರಿಯಾ ತೋರಿಸೋ|

ಬಯಸುವುದೆಲ್ಲಾ ನಿಜವಲ್ಲ ಎಂಬುದ ತಿಳಿಯುವ ಮನ ಕೊಡೋ ಗುರುವೇ
ನೀನಿದ್ದ ಮೇಲೆ ನಿನ್ನದೆಂದು ಅರಿತು ಬಾಳುವ ಅರಿವು ಮೂಡಿಸಯ್ಯಾ ದೊರೆಯೇ|