ಒಟ್ಟು ನೋಟಗಳು

Saturday, June 30, 2018

ಗುರುನಾಥ ಗಾನಾಮೃತ 
ತೊರೆಯಲಾರೆ ಗುರುವೆ ನಿನ್ನ ಶ್ರೀಪಾದ
ರಚನೆ: ಅಂಬಾಸುತ 

ತೊರೆಯಲಾರೆ ಗುರುವೆ ನಿನ್ನ ಶ್ರೀಪಾದ
ಮರೆಯಲಾರೆ ಗುರುವೆ ನಿನ್ನ ಶ್ರೀಪದ ||ಪ||

ತನುವಿನಾನಂದಕೆ ಕಾರಣ ನಿನ್ನ ಶ್ರೀಪಾದ
ಮನದ ಆನಂದಕೆ ಕಾರಣ ನಿನ್ನ ಶ್ರೀಪದ
ಅರ್ಚಿಸಲು ಪ್ರೇರಣೆ ನಿನ್ನ ಶ್ರೀಪಾದ
ಅರ್ಪಿಸಲು ಪ್ರೇರಣೆ ನಿನ್ನ ಶ್ರೀಪದ ||೧||

ಪಾಪವೆಲ್ಲವ ಕಳೆವುದು ನಿನ್ನ ಶ್ರೀಪಾದ
ಪುಣ್ಯಮಾರ್ಗವ ತೋರ್ವುದು ನಿನ್ನ ಶ್ರೀಪದ
ತೋರುತಿಹುದು ಭಗವಂತನ ನಿನ್ನ ಶ್ರೀಪಾದ
ಅವನೊಳು ತಲ್ಲೀನವಾಗಿಸಿಹುದು ನಿನ್ನ ಶ್ರೀಪದ ||೨||

ಸೇವ್ಯ ಸೇವಕ ಭಾವವೀವಿದು ನಿನ್ನ ಶ್ರೀಪಾದ
ಸ್ವಾನಂದಾಮೃತ ಉಣಿಸುವುದು ನಿನ್ನ ಶ್ರೀಪದ
ಸಗುಣ ಸಚ್ಚಿದಾನಂದ ನಿನ್ನ ಶ್ರೀಪಾದ
ಅವಗುಣ ಅಳಿಸುವುದು ನಿನ್ನ ಶ್ರೀಪದ ||೩||

ಸಖರಾಯಪುರವಾಸಿಯ ಶ್ರೀಪಾದ
ಅಂಬಾಸುತಗಾನಂದವ ನೀಡೊ ಪಾದ
ಶ್ರೀವೇಂಕಟಾಚಲನ ಶ್ರೀಪದ
ಅಲೌಕಿಕ ಸಿರಿಯ ನೀಡೊ ಪದ ||೪||

Thursday, June 28, 2018

ಗುರುನಾಥ ಗಾನಾಮೃತ 
ನಿತ್ಯ ನಿರಂತರ ಆರತಿ ಎನ್ನ ಗುರುವಿಗೆ ಎನ್ನ ಅರಿವಿಗೆ
ರಚನೆ: ಅಂಬಾಸುತ 

ನಿತ್ಯ ನಿರಂತರ ಆರತಿ ಎನ್ನ ಗುರುವಿಗೆ ಎನ್ನ ಅರಿವಿಗೆ
ಮರೆವ ಮರೆಸೊ ಕಿರೀತಿ ಹೊತ್ತ ಸಚ್ಚಿದಾನಂದಗೇ ||ಪ||

ತೋರುವ ಜಗದಿ ತುಡುಕುತನದಿ ಕಳೆದುಹೋಗದಂತೆ ಎಚ್ಚರಿಸಿದವಗೆ
ಎಲ್ಲರೊಳು ತಾನಾಗಿ ಎಲ್ಲೆ ಇರದಂತಾಗಿ ಮೆಲ್ಲನೆ ಎನ್ನೊಳು ಕಂಡವಗೆ ||೧||

ಶಿಲೆಯಿಂದಲಿ ಹೊರಗೆ ಬಂದವಗೆ ಕಲೆಯೊಳು ಅರಳಿ ನಿಂದವಗೆ
ಕಲಿಸಿದವಗೆ ಕಲೆವುದ ಬೆಳಸಿದವಗೆ ಕಾಲಾ ಕರ್ಮಾತೀತಗೇ ||೨||

ಮೌನವ ಮುಡಿ ಎಂದಂಥವಗೆ ಮಾತಿಗೆ ನಿಲುಕದ ಶ್ರೀಪದಗೆ
ಪರಮಪದವಿಯವೀವಗೆ  ಪರಮೇಶ್ವರ ತಾನೆನಿಸಿದವಗೆ ||೩||

ಸಖರಾಯಪುರದ ಎನ್ನಾತ್ಮ ಸಖಗೆ ಸದ್ಗುರುನಾಥಗೆ
ಅಂಬಾಸುತನಾ ಅತಿಮೋದ ಗುರುವಿಗೆ ಶ್ರೀವೇಂಕಟಾಚಲಗೆ ||೪||
ಗುರುನಾಥ ಗಾನಾಮೃತ 
ಮನವು ನಿನ್ನ ಚರಣ ಸೇರಿ ನಲಿಯಲಿ ಗುರುವೆ
ರಚನೆ: ಅಂಬಾಸುತ 

ಮನವು ನಿನ್ನ ಚರಣ ಸೇರಿ ನಲಿಯಲಿ ಗುರುವೆ
ಸರ್ವಕಾರಣ ಸರ್ವಶಕ್ತನು ನೀನೆನುತ ನಿನಗೆ ಶರಣಾಗಲಿ ಪ್ರಭುವೆ  ||ಪ||

ದೇಹಭಾವ ದೂರವಾಗಿ ದೊರೆ ನಿನ್ನ ಕಾಣುವಂತಾಗಲಿ
ಸಾಕ್ಷಿರೂಪ ನಾನೆನುತ ಸುಮ್ಮನಿರುವಂತಾಗಲಿ ||೧||

ವಿಷಯದಾ ವಿಷವೀವ ಜಗವ ಮರೆಯುವಂತಾಗಲಿ
ನಿನ್ನಿಂದಲೇ ಇರುವ ನಾನು ನಿನ್ನೊಳಗೆ ಒಂದಾಗುವಂತಾಗಲಿ ||೨||

ಸತ್ಯವೇ ಸಂಕಲ್ಪವಾಗಲಿ ಸಾಧನೆ ನಿಲ್ಲದೆ ಇರಲಿ
ಸಾಧು ಸಂತ ಸಜ್ಜನರ ಸೇವೆ ಸದಾ ಎನಗೇ ಇರಲಿ ||೩||

ಮಾಯವಾಗೊ ತನುವಿನಾ ತೃಷೆ ತಣ್ಣಗಾಗಲಿ
ತನುವು ಮನವು ಸದಾ ನಿನ್ನ ಸಾನಿಧ್ಯವ ಬಯಸಲಿ ||೪||

ಸಖರಾಯಪುರದಿ ವಾಸಿಪ ಗುರುವೆ ಎನ್ನ ಮೊರೆಯ ಕೇಳೊ
ಅಂಬಾಸುತ ನಿರಂತರ ನಿನ್ನನೆ ಸ್ಮರಿಸೊ ಭಾಗ್ಯವಾ ನೀಡೊ ||೫||

Tuesday, June 26, 2018

ಗುರುನಾಥ ಗಾನಾಮೃತ 
ಪೂಜಿಸೊ ಗುರುವರನಾ ನೀ ಮನದೊಳು ಪೂಜಿಸೊ
ರಚನೆ: ಅಂಬಾಸುತ 

ಪೂಜಿಸೊ ಗುರುವರನಾ ನೀ ಮನದೊಳು ಪೂಜಿಸೊ
ಗುರುಪದವಾ ಪೂಜಿಸೊ ಸದ್ಗುರು ಪಾದ ಪೂಜಿಸೊ ||ಪ||

ಅರಿಗಳ ಅಳಿಸೊ ಮನದಿ ಗುರುವನ್ನಿರಿಸೊ
ಘನ್ನ ಮಹಿಮನ ನೀ ಸದಾ ಮನದಲ್ಲಿರಿಸೊ ||೧||

ಹೂ ಅರಳಿಸೊ ಮನದೊಳಗೆ ನೀ ಹೂವನರಳಿಸೊ
ಅರಳಿದಾ ಆ ಹೂವ ಗುರುಪಾದಕಿರಿಸೊ ||೨||

ಹೊಗೆಯ ಹಾರಿಸೊ ಮನದಿ ಧೂಪವನಿರಿಸೊ
ಆ ಧೂಪದಿ ಗುರು ಮನೆ ಘಂ ಎನ್ನಿಸೊ ||೩||

ತಮವನಳಿಸೊ ಮನದಿ ಜ್ಯೋತಿಯ ನೀ ಬೆಳಗಿಸೊ
ಆ ಜ್ಯೋತಿಯಿಂದಲೆ ಗುರುವಿಗಾರುತಿ ಮಾಡಿಸೊ ||೪||

ಹಸಿವಾ ಇಂಗಿಸೊ ಮನದಿ ಪರಮಾನ್ನ ಬೇಯಿಸೊ
ಆ ಪರಮಾನ್ನದಿಂ ನೀ ಗುರುಭಿಕ್ಷೆ ಇರಿಸೊ ||೫||

ನೀತಿಯನ್ನಿರಿಸೊ ಮನವ ನಿರ್ಮಲವನ್ನಾಗಿಸೊ
ಆ ನಿರ್ಮಲತೆಯಿಂದ ನೀರಾಜನ ಗುರುವಿಗೆನ್ನೊ ||೬||

ಸಖರಾಯಪುರವಾಸ ನೀ ಸಲಹೆನ್ನೊ
ಅಂಬಾಸುತನ ಮನದೊಳು ನೀ ಪೂಜೆಗೊಂಬೊ ಎನ್ನೊ ||೭||

Sunday, June 24, 2018

ಗುರುನಾಥ ಗಾನಾಮೃತ 
ಮುದ್ದು ಮುಖದ ಗುರುವೆ ಮುದ್ದು ಮಾಡುವೆ ಬಾರೊ
ರಚನೆ: ಅಂಬಾಸುತ 

ಮುದ್ದು ಮುಖದ ಗುರುವೆ ಮುದ್ದು ಮಾಡುವೆ ಬಾರೊ
ಪೆದ್ದುತನವಿದು ಎಂದು ದೂರ ನಿಲ್ಲಲು ಬೇಡವೊ ||ಪ||

ಕ್ಷಣಕಾಲ ನೀ ಮಗುವಾಗಿಯೇ ಕಂಡಿಹೆ
ಎನ್ನ ಮಡಿಲೇರಿ ನೀ ನಗುವಂತಿಹೆ
ನಿನ್ನ ಮುದ್ದು ಪಾದವ ಎನ್ನ ಎದೆಗೊತ್ತಿಹೆ
ಎನ್ನ ಪುಣ್ಯಕೆ ಎಣೆ ಇಲ್ಲ ಎಂದಂತಿದೆ ||೧||

ಧೇನುವಿತ್ತ ನೊರೆಹಾಲ ನಿನಗೆ ಉಣಿಸುವೆ
ಜೋಲಿಯೊಳಗೆ ಹಾಕಿ ನಿನ್ನ ತೂಗಿ ಪಾಡುವೆ
ಯೋಗನಿದ್ರೆಯ ಮಾಡೊ ಕಂದಾ ಎನ್ನುವೆ
ಈ ಯೋಗ ಎನಗಿರಲಿ ಎಂದು ಬೇಡುವೆ ||೨||

ಶಾರದಮ್ಮ ಈ ಪರಿ ಪೇಳಿದಂತಿದೆ
ಗುರು ವೇಂಕಟಾಚಲನ ಆಡಿಸಿದಂತಿದೆ
ಅಂಬಾಸುತಗೆ ಈ ಭಾವ ಮೂಡಿದೆ
ಸಖರಾಯಧೀಶನಾ ಮುದ್ದು ಮುಖ ಕಂಡಿದೆ ||೩||
ಗುರುನಾಥ ಗಾನಾಮೃತ 
ನಾ ದಾಸನಾಗಬೇಕೊ ದಾಸಪದ ಬರೆಯಬೇಕೊ
ರಚನೆ: ಅಂಬಾಸುತ 

ನಾ ದಾಸನಾಗಬೇಕೊ ದಾಸಪದ ಬರೆಯಬೇಕೊ
ದೊರೆ ನಿನ್ನ ಅರಿಯಬೇಕೊ ದೊರೆ ನಿನ್ನ ಮೆರೆಸಬೇಕೊ ||ಪ||

ವಿಠ್ಠಲನ ಕರೆದ ಪುರಂದರನಂಥಾಗಬೇಕೊ
ಆದಿಕೇಶವನ ನುತಿಸಿದ ಕನಕನಂಥಾಗಬೇಕೊ ||೧||

ಎನ್ನತನ ಬಿಡಲುಬೇಕೊ ನೀನೆ ಗತಿ ಎನ್ನಬೇಕೊ
ಸಿಕ್ಕರೆ ಉಣ್ಣಬೇಕೊ ಸಿಗದಿರೆ ಸರಿ ಎನ್ನಬೇಕೊ ||೨||

ನಿತ್ಯಗುರು ಸ್ತುತಿಯ ಮಾಡಿ ಸತ್ಯವನ್ನೆ ಪೇಳಬೇಕೊ
ಚಿತ್ತದೊಳಗವಗೆ ಗಟ್ಟಿ ಗುಡಿಯ ಅವಗೆ ಕಟ್ಟಬೇಕೊ ||೩||

ಭಾವ ಹಿರಿದಾಗಬೇಕೊ ಪದವಾಗಿ ಪುಟಿಯಬೇಕೊ
ಪದಪದದ ಒಳಗೂ ಅಕ್ಷರ ಗುರು ಕಾಣಬೇಕೊ ||೪||

ಸಖರಾಯಪುರವಾಸಿ ಅವಧೂತ ಗುರುನಾಥಾ
ಅಂಬಾಸುತನಾ ನಿನ್ನ ದಾಸನನ್ನಾಗಿಸಯ್ಯ ||೫||

Saturday, June 23, 2018

ಗುರುನಾಥ ಗಾನಾಮೃತ 
ಮನ್ನಿಸೋ  ಎನ್ನ ಗುರುನಾಥ  ಎನ್ನ ಮನ್ನಿಸೋ
ರಚನೆ: ಆನಂದರಾಮ್, ಶೃಂಗೇರಿ  


ಮನ್ನಿಸೋ  ಎನ್ನ ಗುರುನಾಥ  ಎನ್ನ ಮನ್ನಿಸೋ
ಪಾಮರನು ನಾನು ಎಡುವುದು ಸಹಜ ಮನ್ನಿಸೋ|

ಅರಿತು ಮಾಡುವೆನು ಪಾಪ ಲೌಕಿಕದ ಬದುಕಿನಲಿ
ತೋರಿಕೆಯ ಬದುಕು  ಆಸೆ ಬುರುಕನ ಹಾದಿಯಲಿ|

ಆಡುವ ನುಡಿಗೂ  ಮಾಡುವ ಕೃತಿಗೂ ಬೇಧವಿಹುದು
ಅರಿತು ಮಾಡುವ ಕರ್ಮದಲಿ ದೇಹ ಮುಳುಗಿಹುದು|

ಬೇಡೆಂದರೂ ಬೆನ್ನ ಬಿದ್ದಿದೆ ಆಸೆಗಳ ಮಹಾಪೂರ
ಬದಲಾವಣೆ ನಾಳೆಯ ನಿರೀಕ್ಷೆಯಲಿ ಬಲುದೂರ|

ಬಣ್ಣದ ಬದುಕಿನೆಡೆ ಮನ ಓಡುವುದು ಗುರುವೇ
ತೋರದಾದೆ ನಿಜ ಭಕುತಿಯ ನಿನ್ನಲಿ  ಓ ಗುರುವೇ|

ನಿನ್ನ ನೆನೆದರೆ ಇಹುದು ಎಲ್ಲದಕೂ ನಿತ್ಯ ಪರಿಹಾರ
ನೆನೆಯುವ ಮನ ಕೊಡು ಓ ಗುರುವೇ ನಿರಂತರ|

Thursday, June 21, 2018

ಗುರುನಾಥ ಗಾನಾಮೃತ 
ನಾನೇನು ಮಾಡಿದೆ ಗುರುವೆ ಮುನಿಸೇಕೆ ಎನ್ನಮೇಲೆ
ರಚನೆ: ಆನಂದರಾಮ್, ಶೃಂಗೇರಿ  


ನಾನೇನು ಮಾಡಿದೆ ಗುರುವೆ ಮುನಿಸೇಕೆ ಎನ್ನಮೇಲೆ
ನಿನ್ನ ಪಾದಾರವಿಂದಕೆ ಎನ್ನ ಶಿರವಿರಸಿ ನಾ ಬೇಡುವೆ|

ಎನ್ನ ಕೋರಿಕೆಯಲಿ ಬರೀ ಸ್ವಾರ್ಥವೇ ತುಂಬಿದೆಯೇ
ಎನ್ನ ಬಕುತಿಯಲಿ ಶುದ್ದ ಮನಸಿನಾ ಕೊರತೆಯೇ|

ನೀ ಕಾಣದ ಮನವದು  ಎಲ್ಲಿದೆ ಹೇಳು ಓ ಗುರುವೇ
ಮಾತು ಕೃತಿಯಲಿ ಲೋಪ ಬಂದಿತೇ ನನ್ನ ಗುರುವೇ|

ಬದುಕು ನಡೆಸುವ  ಬರದಿ ದಾರಿ  ತಪ್ಪಿದೆನೆ ಗುರುವೇ
ಅನ್ಯರ ಮನನೋಯಿಸಿ ಬಾಳು ಕಟ್ಟಿದೆನೆ ಗುರುವೇ|

ಎನ್ನ ಬಲ್ಲವ ನೀನೇ ನನ್ನ ಕಾಯಬೇಕಲ್ಲವೇ ಗುರುವೇ
ನೀನು ಮುನಿದೊಡೆ ಇನ್ಯಾರ ನಾ ಬೇಡಲಿ ಗುರುವೇ|

ಏನು ಬೇಡಲಿ ತಿಳಿದೂ ಸುಮ್ಮನೇಕಿರುವೆ ಗುರುವೇ
ನಿನ್ನ ಮೌನದ ಮುನಿಸು ಹಾರೈಕೆಯು ನನ್ನ ಗುರುವೇ |

Monday, June 18, 2018

ಗುರುನಾಥ ಗಾನಾಮೃತ 
ಅವತರಿಸಿದೆ ನೀ ಈ ಪುಣ್ಯ ಭೂಮಿಯಲಿ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಅವತರಿಸಿದೆ ನೀ ಈ ಪುಣ್ಯ ಭೂಮಿಯಲಿ ಗುರುವೇ
ಕಲಿರಾಯನ ಅಬ್ಬರಿಕೆಯ ಪರ್ವ ಕಾಲದಲಿ ಗುರುವೇ ||

ನಡೆದಾಡುವ ದೇವ ನೀನು ಪ್ರಕಟಗೊಂಡೆ ಗುರುವೇ
ಅಡಿಗಡಿಗೂ ಕಲಿಯ ಕ್ರೂರ ದೃಷ್ಟಿಯ ಮುಂದೆ
ಪಾಪ ಕರ್ಮ ತುಂಬಿ ತೊಳುಕುವ ಈ ಕಾಲದಲ್ಲೂ
ಹರಸಿ ಉದ್ದಾರ ಮಾಡಲು ಅವತರಿಸಿದೆ  ಗುರುವೇ||

ಕರ್ಮಬಂಧನದ ಅರಿವಿದ್ದರೂ ಕರ್ಮಮಾಡುತಿಹೆವು
ಕಲಿಯ ಪಾಪ ಕೂಪದಲ್ಲಿ ಬಿದ್ಧಿಹೆವು ನಾವು
ಸೂಕ್ಷ್ಮಮತಿ ನೀನು ನಮ್ಮ ಸಲಹೂ ಗುರುದೇವ
ಬಂದ ಮುಕ್ತಗೊಲಿಸು ಎಲ್ಲರ ನಮ್ಮ ಮಹಾದೇವ||

ನಾಜೂಕಿನ ನಯವಂಚಕರ ಮಾಯಾ ಜಾಲದಲಿ
ನರ ಜೀವಿಗಳ  ಪಾಪ ಕೂಪದ ನಿತ್ಯ ತೊಳಲಾಟದಲಿ 
ಗೊತ್ತಿದ್ದು ಬದುಕು ನಡೆಸುತಾ ಭ್ರಮೆಯ ಅರಿವಿನಲ್ಲಿ
ನಿನ್ನ ನಾಮವೊಂದು ಕಂಡಿತು ಮುಕ್ತಿಯ ಹಾದಿಯಲ್ಲಿ ||
ಗುರುನಾಥ ಗಾನಾಮೃತ 
ಹರನೊಳು ಗುರುವ ನಾ ಕಂಡೆ
ರಚನೆ: ಅಂಬಾಸುತ 

ಹರನೊಳು ಗುರುವ ನಾ ಕಂಡೆ
ಸದ್ಗುರುವಿನೊಳು ಹರನನು ನಾ ಕಂಡೆ ||ಪ||
ಹರನೆ ಗುರುವು ಗುರುವೆ ಹರನು
ಬೇಧವಿರದೆ ಇಲ್ಲಿ ಸಮನು ಎಂಬುದನು ನಾ ಅರಿತೆ ||ಅ.ಪ||

ಲಿಂಗರೂಪಿ ಹರನು ಇಲ್ಲಿ
ಅಂಗ ಧರಿಸಿ ಕಂಡಿಹನು ಮಂಗಳಾಂಗನಾಗಿಹನು
ಚಿತ್ತಭ್ರಾಂತಿಯ ಸುಟ್ಟಿಹನು, ಜ್ಞಾನಗಂಗೆಯ ಹರಿಸಿಹನು ||೧||

ಸುಸಂಘಪೂರ್ಣ ಗುರುವು ಇಂದು
ಲಿಂಗದೊಳಗೆ ಕುಳಿತಿಹನು ಯೋಗಿಯಂತೆ ಸುಮ್ಮನಿಹನು
ಶಕ್ತಿಯಿಂದೊಡಗೂಡಿಹನು ಎನ್ನಂಬೆಯ ತೋರಿಸಿಹನು ||೨||

ಹರಿಹರಪುರದೊಳಗೆ ಹರನಾ ಗುಡಿಯಾ ಒಳಗೆ
ಸಖರಾಯಪುರದಾ ಸದ್ಗುರು ತಾ ಕಂಡಿಹನು
ಅಂಬಾಸುತನಾ ಹರಸಿಹನು ಕ್ಷಣದೊಳು ತಾ ಮಾಯವಾಗಿಹನು ||೩||
ಗುರುನಾಥ ಗಾನಾಮೃತ 
ಹದ ಮಳೆಯಂತಿಹುದಮ್ಮ ಸತ್ಸಂಗ
ರಚನೆ: ಅಂಬಾಸುತ 

ಹದ ಮಳೆಯಂತಿಹುದಮ್ಮ ಸತ್ಸಂಗ
ಹದ ಮಳೆಯಂತಿಹುದಮ್ಮ ||ಪ||
ಹದ ಮಾಡಿಕೊಳ್ಳಮ್ಮ ಬದು ಗಟ್ಟಿಗೊಳಿಸಿ
ಮನವಾ ನೀ ಹದ ಮಾಡಿಕೊಳ್ಳಮ್ಮ ||ಅ.ಪ||

ಹೊದ್ದು ಮಲಗದೆ ಕದ್ದು ಬಾಳದೆ ಇನ್ನು
ಉತ್ತಮ್ಮ ನೀನೀಗ ಮನವ
ತನುವೆಂಬಾ ಎತ್ತನು ಕಟ್ಟಿ
ತೃಣ ಕಳೆಯನೆಲ್ಲವ ಸುಟ್ಟಿ ||೧||

ಸಜ್ಜನರಿತ್ತ ಭಕ್ತಿ ಬೀಜವ ನೆಟ್ಟು
ಸ್ವಾಧ್ಯಾಯವೆಂಬಾ ಗೊಬ್ಬರವಿಟ್ಟು
ಸಾಧು ಸಂತರ ರಕ್ಷೆಯ ಬೇಲಿಯ ಕಟ್ಟು
ನಾನೆಂಬುದಿರದಾ ಬೆದರು ಬೊಂಬೆಯನಿಟ್ಟು ||೨||

ಗುರುರಕ್ಷೆ ಎಂಬಾ ಮಳೆ ಬಾರದೆ ಇರದು
ಗುಣಪೂರ್ಣ ಬೆಳೆಯನ್ಯಾರು ಕದಿಯರು
ಅಂಬಾಸುತನಾ ಈ ಪದವಾ ಕೇಳಮ್ಮ
ಅಂತರಂಗದೊಳು ಬೇಸಾಯ ಮಾಡಮ್ಮ ||೩||

Saturday, June 16, 2018

ಗುರುನಾಥ ಗಾನಾಮೃತ 
ಸಮನ್ಯಾರಿಲ್ಲ ಇವನಿಗೇ ಸದ್ಗುರುವಿಗೆ
ರಚನೆ: ಅಂಬಾಸುತ 

ಸಮನ್ಯಾರಿಲ್ಲ ಇವನಿಗೇ ಸದ್ಗುರುವಿಗೆ
ಸಮನ್ಯಾರಿಲ್ಲ ಇವನಿಗೆ ||ಪ||

ಅಸಮಾನ್ಯ ಈ ಅವಧೂತ
ಅಸಮತೆಯಾ ಕಳೆವಾತ
ಆದ್ಯಂತರಹಿತ ಈ ಅವಧೂತ
ಅಗಣಿತ ಗುಣಗಣ ಭೂಷಿತ ||೧||

ಆನಂದ ರೂಪ ಈ ಅವಧೂತ
ಅಲ್ಪತೆಯಾ ಅಳಿಸುವಾತ
ಅಚ್ಚುತ ಅನಂತ ಈ ಅವಧೂತ
ಅತಿಷಯ ಪ್ರೇಮಕೆ ಕರಗುವಾತ ||೨||

ಅಮ್ಮನಂತಿಹ ಈ ಅವಧೂತ
ಅನ್ನವನು ಉಣಿಸುವಾತ
ಸಖನಂತಿರುವಾತ ಈ ಅವಧೂತ
ಸಖರಾಯಪುರದಿ ನೆಲೆಸಿದಾತ ||೩||

ಅಂಬಾಸುತನಾ ದೊರೆಯೀತ
ಜಗದಂಬಿಕೆಯಾ ತೋರಿಸುವಾತ
ಶ್ರೀವೇಂಕಟಾಚಲ ನಾಮಾಂಕಿತ
ಗುರುನಾಥ ಅವಧೂತ ನಿಜದೈವನೀತ ||೪||
ಗುರುನಾಥ ಗಾನಾಮೃತ 
ಅಮ್ಮ ನೋಡೇ ಗುರು ಬಂದಿಹರು ಅಮ್ಮಾ ನೋಡೇ
ರಚನೆ: ಆನಂದರಾಮ್, ಶೃಂಗೇರಿ  


ಅಮ್ಮ ನೋಡೇ ಗುರು ಬಂದಿಹರು ಅಮ್ಮಾ ನೋಡೇ
ನಗುಮುಖದ ಸರದಾರ ಹರಸುತ ತಾ ಕುಳಿತಿಹರು|

ಮಂದಹಾಸವ ಬೀರುತ ಎನ್ನ  ಸನಿಹ ಬಾ ಎಂದಿಹರು
ಕೈತುತ್ತು ನೀಡುತ ಗುರು ಎನ್ನ ಬವಣೆಯ ಕಳೆದಿಹರು|

ಮನದಿ ಮೂಡುವ ಮಲ್ಲಿಗೆ ಹೂ ನೀಡುವೆ ಅಮ್ಮ
ನನ್ನ  ಹೃದಯ ಕಮಲದಲಿ ಗುರು ನೆಲಸಲಿ ಅಮ್ಮ |

ಈ ದೇಹವ ಹಣ್ಣು ಮಾಡಿ ನೀಡೆಂದರು ಅಮ್ಮಾ
ಮಸ್ತಕದಲಿ ತನ್ನ ನುಡಿ ಅಚ್ಚಾಗಿರಲಿ ಎಂದರಮ್ಮಾ|
 
ಆಡುವ ಮಾತಿಗೆ ಬಲು ಹಿಡಿತವಿರಲಿ ಎಂದರಮ್ಮಾ
ಮನ ನೋಯಿಸದಲಿ ಬದುಕು ನಡೆಸೆಂದರಮ್ಮಾ|

ಒಂದು ಪತ್ರೆ ಸಾಕು ನೂರಾರು ಬಾರಿ ಜಪಿಸೆಂದರಮ್ಮ
ಅನ್ಯರ ಬದುಕಿನಾ ಹುಳುಕು ನಿನದಲ್ಲಾ ಎಂದರಮ್ಮ |

ರಾಮನಾ ಕಥೆ ಬರೀ ಕಥೆ ಅಲ್ಲ ಎಂದರು ಅಮ್ಮಾ
ರಾಮನಂತೆ ನಿನ್ನ ಬದುಕು ನಡೆಸೆಂದರು ಅಮ್ಮಾ|
ಗುರುನಾಥ ಗಾನಾಮೃತ 
ಬಾ ಬಾರಯ್ಯ ಸದ್ಗುರು ಮಹರಾಯ
ರಚನೆ: ಅಂಬಾಸುತ 

ಬಾ ಬಾರಯ್ಯ ಸದ್ಗುರು ಮಹರಾಯ
ಬಾ ಬಾರಯ್ಯ ನಾ ನಿನ್ನವನಯ್ಯ ||ಪ||

ಮುಕುತಿಯ ಬೇಡೆನೊ ವಿರಕುತಿಯ ಬೇಡೆನೊ
ಶಕುತಿಯ ಬೇಡೆನೊ ಸಿರಿಯ ಬೇಡೆನೊ
ನೀ ನನ್ನವನೆಂದು ಒಮ್ಮೆ ನೀ ಹೇಳಲು
ಬೇಡುವೆನಯ್ಯ ನಾ ಬಾಗುವೆನಯ್ಯಾ ||೧||

ಜ್ಞಾನವ ಕೇಳೆನೊ ಸಾಧನೆ ಕೇಳೆನೊ
ನಿನ್ನ ಬೋಧನೆ ಹೊರತು ನಾನೇನು ಕೇಳೆನೊ
ಪಾದ ಸೇವೆ ಕೇಳೆನೋ ಪದಪದುಮ ಬಯಸೆನೊ
ನೀನಿತ್ತ ಪದದೇ ನಿನ್ನ ಅರ್ಚಿಸುವೆನೊ ||೨||

ದೂರದಲ್ಲೆ ನಿಂತು ನಿನ್ನಾ ದರುಶನ ಗೈದು
ನಾ ನಮಿಸುವೆನೊ ನಿನ್ನನೆಂದು ಕಾಡೆನೊ
ಪಾದ ಪಿಡಿದು ಭೋಗದಿ ಅಭಿಷೇಕ ಮಾಡೆನೊ
ಎನ್ನ ಮನಮಂದಿರದಿ ನಿನ್ನ ಆರಾಧಿಪೆನೊ ||೩||

ಪ್ರಶ್ನೆ ಇತ್ತು ಉತ್ತರ ಬಯಸುವವ ನಾನಲ್ಲ
ಪಕ್ಕದಲ್ಲೇ ಇರಬೇಕೆಂಬಾ ಹಂಬಲ ಎನಗಿಲ್ಲ
ಕೊಟ್ಟಿರುವೆ ನಿನ್ನ ನಾಮ ಎನಗಿನ್ನೇನಯ್ಯ
ನಾಮದೊಳಗೇ ಗುಣಧಾಮ ನಿನ್ನ ನಾ ಕಾಣ್ವೆನಯ್ಯ ||೪||

ಸಖರಾಯಪುರದಾ ಓ ಎನ್ನ ಸಖನೇ
ಸುಖವೋ ದುಖವೋ ನೀನಿಟ್ಟಂತೆ ನಾನಿರುವೆ
ಈ ಅಂಬಾಸುತ ನಿನ್ನ ಚರಣ ಸೇವಕರ ಸೇವಕ
ಆ ಸೇವೆ ಸ್ಥಿರಗೊಳಿಸೊ ಸೇವ್ಯ ಸೇವಕನನ್ನಾಗಿಸೊ ||೫||
ಗುರುನಾಥ ಗಾನಾಮೃತ 
ಬರುತಾನೆ ನೋಡೆ ಎನ್ನ ಗುರು ನಗುತಾನೆ ನೋಡೆ
ರಚನೆ: ಅಂಬಾಸುತ 

ಬರುತಾನೆ ನೋಡೆ ಎನ್ನ ಗುರು ನಗುತಾನೆ ನೋಡೆ
ಕರೆದಾನೆ ನೋಡೆ ಎನ್ನ ಗುರು ಕರುಣಾಳು ಅವ ಕಾಣೆ ||ಪ||

ಎಲ್ಲರಂತಲ್ಲ ಎನ್ನ ಗುರು ಕಲ್ಲಿನೊಳಗವಿತಿಲ್ಲ
ಬಲ್ಲಿದವರಿಗವನಿಲ್ಲ  ಬಲ್ಲವರಿಗೆ ಬೆಲ್ಲ 
ಸೊಲ್ಲಿನಲೆ ಮನ ಸೋಲಿಸಿ ಇವನಲ್ಲೇ ನಿಲ್ಲುವನಲ್ಲ
ಅರಿತವರು ಯಾರಿಲ್ಲ ಇವನ ಲೀಲಾ ||೧||

ಕಾಷಾಯ ಧರಿಸಿಲ್ಲ ಎನ್ನ ಗುರು ಕಿರೀಟ ಹೊತ್ತಿಲ್ಲ
ಧನಕನಕ ಕೇಳೋಲ್ಲ ಅವಗೆ ಗೊತ್ತಿಲ್ಲದ್ದೇ ಇಲ್ಲ
ನಂಬಿದರೆ ಬಿಡಲೊಲ್ಲ ನಂಬದಿರೆ ಕಾಡೋಲ್ಲ
ಬೇಡಿದವರಿಗೆಂದಿಗೂ ಇಹುದಿವನದೇ ಬಲ ||೨||

ಆಧ್ಯಾತ್ಮ ಹೇಳೋಲ್ಲ ಎನ್ನ ಗುರು ಅಂಕೆಶಂಕೆಗೆ ಇಲ್ಲ
ಧರ್ಮವಾ ಬಿಡಲೋಲ್ಲ ಧಾತ ಜಗಕೆಲ್ಲ
ಸಾಲದಿಹ ಜ್ಞಾನವಾ ನೀಡುವ ಇವನೇ ಜಗಲೋಲ
ಯಾರಿಗೂ ತಿಳಿಯದು ಇವನ ದೈವಜಾಲ ||೩||

ಸಖರಾಯಪುರದೊಳಗೆ ಇವ ಕಂಡನಲ್ಲ
ಸದ್ಗುರು ಸ್ಥಾನದಿ ಅಂಬಾಸುತನ ಪೊರೆದಿಹನಲ್ಲ
ಅವಧೂತ ಗುರುನಾಥ ನಿಜದತ್ತ ಎನಿಸಿಹನಲ್ಲ
ಎನ್ನ ಗುರು ಎನ್ನ ಗುರು ಎನುತ ಜನ ಕರೆದಿಹರಲ್ಲ ||೪|

Wednesday, June 13, 2018

ಗುರುನಾಥ ಗಾನಾಮೃತ 
ಯಾರೇನೇ ಎಂದರೆನಗೇನು
ರಚನೆ: ಅಂಬಾಸುತ 

ಯಾರೇನೇ ಎಂದರೆನಗೇನು
ಯಮ ಬಂದು ನಿಂತರು ಹೆದರೆನು ನಾನಿನ್ನು ||ಪ||
ಜ್ಞಾನದಾಯಕ ಗುರುವು ಜೊತೆಗಿರೆ
ಭಯನಿವಾರಿಣಿ ದುರ್ಗಿಯೊಡನಿರೆ 
ಆನಂದದಿ ಅವರಿಟ್ಟಂತೆ ನಾನಿರುವೆ||ಅ.ಪ||

ಹೊನ್ನಿನಾಸೆಗೆ ಹೊರಗೆ ಹೋಗಿದ್ದೆ
ಹದಿಹರಯದ ಬಯಕೆಯೊಳಗೆ ನಾ ಬಿದ್ದೆ
ಕದ್ದೆ ಮಣ್ಣನು ಮೆದ್ದೆ ಗುದ್ದನು ತಿಂದೆ ಗದ್ದಿಗೆಯಿಂದ ಬಿದ್ದೆ
ಗುರಿ ಕಾರಣದೆ ಗುರು ಕಾಪಾಡೆಂದು ನಾನೆದ್ದಿರಲು ||೧||

ಆರು ಜನ ರಕ್ಕಸರು ಅರಿವಿರದೇ
ಎನ್ನೊಳಗೆ ಕುಳಿತು ಸಮರವ ಸಾರಿದರು
ಸೋತೆನೆಂದು ಕಾಯೆಯೆಂದು ತಾಯಿ ಎದುರಲಿ ಮೊರೆ ಇಡಲು
ನಗುತ ಬಂದಂಬಿಕೆ ದುಷ್ಟರ ಸೀಳಿ ಎನ್ನ ಪೊರೆದಿರಲು ||೨||

ಗುರು ರೂಪಿಣಿ ಎನ್ನ ಮಹತಾಯಿ
ಹೆತ್ತವಳ ಮಮತೆಯ ನೀಡುವನು ಎನ್ನ ಗುರುದೇವಾ
ಆಕೆಯೊಳಗೆ ಈತನನ್ನು ಈತನೊಳಗೆ ಆಕೆಯನ್ನು
ಕಂಡು ಸುಖಿಸುವ ಪರಮ ಸೌಭಾಗ್ಯ ಎನಗಿರಲು ||೩||

ಸಖರಾಯಪುರದ ಅವಧೂತ
ಹರಿಹರಪುರವಾಸಿನಿ  ದುರ್ಗಾಂಬಿಕೆ
ಅಂಬಾಸುತಗೆ ಗತಿಯು ಇವರೇ ಅಂಬಾಸುತಗೆ ಮತಿಯು ಇವರೇ
ಅಂಬಾಸುತನೆಂಬ ಹೆಸರು ಎಂದೆಂದಿಗೂ ಇವರಿಂದಲೇ ||೪||

Wednesday, June 6, 2018

ಗುರುನಾಥ ಗಾನಾಮೃತ 
ಭಗವಂತ ಬಂದಾ ನೋಡೊ
ರಚನೆ: ಅಂಬಾಸುತ 

ಭಗವಂತ ಬಂದಾ ನೋಡೊ
ಅವಧೂತ ಬಂದಾ ನೋಡೊ ||ಪ||

ಎಲ್ಲಾ ಈಶ್ವರನಿಚ್ಚೆ ಈಶ್ವರನಿಚ್ಚೆ
ನಶ್ವರ ನಿನ್ನೆಚ್ಚೆ ಎಂದರಿವು ಮೂಡಿಸಿದಾ
ಭಗವಂತ ಬಂದಾ ನೋಡೊ 
ಅವಧೂತ ಬಂದಾ ನೋಡೊ ||೧||

ಆಶ್ರಮದಾ ಶ್ರಮ ಹೊರದವನು
ಕೂಡಿ ಕಳೆಯೊ ಲೆಕ್ಕವ ಕಲಿಸುವಾ
ಭಗವಂತ ಬಂದಾ ನೋಡೋ
ಅವಧೂತ ಬಂದಾ ನೋಡೊ ||೨||

ಮರಿಬೇಡ ಮುರಿಬೇಡ ಮೆರೆಯಲು ಬೇಡ
ಮಾತಿನ ಹಿಡಿತವಾ ಬಿಡಬೇಡ ಎಂದಾ
ಭಗವಂತ ಬಂದಾ ನೋಡೊ
ಅವಧೂತ ಬಂದಾ ನೋಡೊ ||೩||

ಕಾರ್ಯ ಬಹಳಾ ಕಾಮನೆ ಇರಲಿ ವಿರಳಾ
ಕರ್ತೃ ನೀನಲ್ಲ ಅವನೆಂದು ಪೇಳಿದ
ಭಗವಂತ ಬಂದಾ ನೋಡೊ
ಅವಧೂತ ಬಂದಾ ನೋಡೊ ||೪||

ಸತ್ಸಂಗ ಸತ್ಚಿಂತನೆ ಸಂತ ಸೇವೆ
ಸುಲಭೋಪಾಯ ಸಾಧನೆಗೆಂದು ಸಾರಿದ
ಭಗವಂತ ಬಂದಾ ನೋಡೊ
ಅವಧೂತ ಬಂದಾ ನೋಡೊ ||೫||

ಸಖರಾಯಪುರದಿಂದ ಸದ್ಗುರು
ಅಂಬಾಸುತನ ಅರಿವಿನ ಅರಮನೆಯ ಗುರು
ಭಗವಂತ ಬಂದಾ ನೋಡೊ
ಅವಧೂತ ಬಂದಾ ನೋಡೊ||೬||