ಒಟ್ಟು ನೋಟಗಳು

Monday, October 31, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 27


ಪರಮ ದಯಾಳು 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

  
ಇಷ್ಟಕ್ಕೇ ಸುಮ್ಮನಾಗದ ನಾನು ಇನ್ನಷ್ಟು ಅನುಭವಗಳನ್ನು ಹೇಳಿ ಎಂದು ಕೆದುಕಲು ಆ ತಾಯಿ ಮಹದಾನಂದದಿಂದ "ನಮ್ಮ ಅನುಭವದ ಜಗದಲ್ಲಿ ಪರಮ ದಯಾಳು ಎಂದರೆ ಆ ನನ್ನೊಡೆಯ ಮಾತ್ರವೇ..... " ಎಂದು ನುಡಿದು ಹೀಗೆ ಹೇಳತೊಡಗಿದರು. 

ಅದು ಬಹುಶಃ 2003 ರ ಅವಧಿ. ನಮ್ಮ ಯಜಮಾನರು ಕಾರ್ಯನಿಮಿತ್ತ ಪ್ಯಾರಿಸ್ ಗೆ ಹೋಗಬೇಕಿತ್ತು. ನನ್ನ ಕೆಲಸದ ಒತ್ತಡದಲ್ಲಿ ಗುರುನಾಥರಿಗೆ ವಿಚಾರ ತಿಳಿಸಲು ಆಗಲಿಲ್ಲವಲ್ಲ.... ಎಂದು ಚಿಂತಿತಳಾಗಿದ್ದೆ. ಹೀಗಿರಲು ಒಂದು ದಿನ ಗುರುದೇವರು ನಮ್ಮ ಮನೆಯ ಎದುರಿದ್ದ ಭಕ್ತರ ಮನೆಗೆ ಬಂದ ವಿಚಾರ ತಿಳಿದು ಅಲ್ಲಿಗೆ ಹೋಗಿ ನಮ್ಮ ಯಜಮಾನರ ಪ್ರವಾಸದ ಬಗ್ಗೆ ತಿಳಿಸಿದೆ. ಕೂಡಲೇ "ನೀನೂ ಜೊತೆಗೆ ಹೋಗೋದಲ್ವೇ?" ಎಂದು ನಗುತ್ತಾ ಕೇಳಿ ಜೊತೆಗೆ ಒಂದು ವಸ್ತ್ರದಲ್ಲಿ ಒಂದಷ್ಟು ಅಡಿಕೆ ಅರಿಶಿನ ಕುಂಕುಮ ಇತ್ತು ಕಟ್ಟಿ "ನಿಮ್ಮ ಯಜಮಾನರ ಚೀಲದಲ್ಲಿ ಇದು" ಎಂದರು. ನಾನು ಹಾಗೆ ಮಾಡಿದೆ. 

ಪ್ರವಾಸ ಹೊರಟ ನಮ್ಮ ಯಜಮಾನರು ಮುಂಬೈನ ತಾಜ್ ಹೋಟೆಲ್ ಸಮೀಪ ಕೆಲಕಾಲವಿದ್ದು ನಂತರ ವಿಮಾನ ನಿಲ್ದಾಣದೆಡೆಗೆ ಸಾಗಿದರು. ಅದಾಗಿ ಕೇವಲ ಅರ್ಧ ತಾಸಿನಲ್ಲಿ "ತಾಜ್ ಹೋಟೆಲ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಗುರುಕೃಪೆ ನಮ್ಮನ್ನು  ಕಾಪಾಡಿತ್ತು ಎಂದು ಹೇಳಿ ಕ್ಷಣ ಕಾಲ ಮೌನವಾದರು. 

ತುಸು ಹೊತ್ತಿನ ಬಳಿಕ ಮತ್ತೆ ಹೀಗೆ ಹೇಳತೊಡಗಿದರು: "ನಮ್ಮ ಕಚೇರಿಯಲ್ಲಿ ಮುಂಬಡ್ತಿ ವಿಚಾರ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಕಳೆದ ಐದಾರು ವರ್ಷಗಳಿಂದ ಯಾವುದೇ ಮುಂಬಡ್ತಿ ನಡೆದಿರಲಿಲ್ಲ. ಒಂದು ಮಧ್ಯಾನ್ಹ ಊಟವಾದ ನಂತರ ಗುರುನಾಥರು ಒಂದಷ್ಟು ಅರಿಶಿನ ಕುಂಕುಮ ಪೊಟ್ಟಣ ನನ್ನ ಕೈಗಿತ್ತು "ಇದನ್ನು ನಿನ್ನ ಸಹೋದ್ಯೋಗಿಗಳಿಗೆ ಕೊಡು" ಎಂದರು. ಜೊತೆಗೆ ಮುಂಬಡ್ತಿಯಾಗುವ ಸೂಚನೆಯನ್ನು ನೀಡಿದರು. ಅದಾಗಿ ಆರು ತಿಂಗಳಲ್ಲಿ ನನಗೆ ಮುಂಬಡ್ತಿಯಾಯಿತು....... ,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।





Sunday, October 30, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 26


ತೃಣಮಪಿ ನಚಲತಿ ತೇನಾವಿನಾ .... 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುವಿನ ಅಣತಿ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡದು. ಹಾಗಾದ್ರೆ ನಮ್ಮ ಜೀವನದಲ್ಲಿ ಕಷ್ಟ-ಸುಖಗಳೆರಡೂ ಅವನ ಅಣತಿಯಿಂದಲೇ ನಡೆಯುವುದು ಹಾಗೂ ಕಷ್ಟ-ಸಮಸ್ಯೆಗಳು ಒಳ್ಳೆಯ ಕಾರಣಕ್ಕಾಗಿಯೇ ಬರುವುದು. 

"ಪರಮ ಲೌಕಿಕರಾದ ನಮಗೆ ಅವರು ಯಾರೆಂದು ತಿಳಿಯದು. ನಮ್ಮ ಸಮಸ್ಯೆಗೆ ಪರಿಹಾರ ಕೇಳಲು ಹೋದರೆ ನಮಗೆ ಸಿಕ್ಕಿದ್ದು ಜನ್ಮಾಂತರಕ್ಕೆ ಸಾಕಾಗುವಷ್ಟು ಅಭಯ ಹಾಗೂ ಜಾತಿ, ಮತ, ಅಂತಸ್ತುಗಳನ್ನು ಮೀರಿದ ಆತ್ಮೀಯತೆ". 

ಇದು ಚಿಕ್ಕಮಗಳೂರು ಸಮೀಪ ವಾಸಿಸುತ್ತಿದ್ದ ದಂಪತಿಗಳ ಮನದಾಳದ ಮಾತು. ಗುರು ನಿವಾಸಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದ ಆ ದಂಪತಿಗಳು ಮಿತಭಾಷಿಗಳು. ತೀರಾ ಇತ್ತೀಚಿಗೆ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆಗಲೂ ಹಿಂದಿನ ಆತ್ಮೀಯತೆ, ಸರಳತೆ ಅವರಲ್ಲಿ ಕಂಡು ಬಂತು. ನನ್ನ ನೋಡಿದಾಗ ಅವರ ಮೊದಲ ಮಾತು "ನಾವು ಗುರುದೇವನ ಭೇಟಿಯಾದ ದಿನದಿಂದ ಇವತ್ತಿನವರೆಗೂ ಬೇರೆ ಕಡೆಗೆ ತಿರುಗಿಲ್ಲ. ಅವ ತೋರಿದ ದಾರಿ ಮರೆತಿಲ್ಲ" ಎಂದರು ವಿನಮ್ರವಾಗಿ. ಇದು ನನ್ನ ಚಂಚಲತೆಗೆ ಪಾಠವೆಂದುಕೊಂಡು ಗುರುನಾಥರೊಂದಿಗೆ ನಿಮ್ಮ ಒಡನಾಟದ ಬಗ್ಗೆ ಹೇಳ್ತೀರಾ? ... ಎಂದೇ. ನಸುನಕ್ಕು ಕಣ್ಮುಚ್ಚಿ ನೆನಪಿನಾಳಕ್ಕಿಳಿದ ಆ ತಾಯಿ ಹೀಗೆ ಹೇಳತೊಡಗಿದರು. 

"ನಮಗೆ ಗುರುದರ್ಶನವಾಗಲು ಕಾರಣವಾಗಿದ್ದು ನಮಗಿದ್ದ ವಿಪರೀತ ಸಾಲಬಾಧೆ. ಅದು ನಮಗಾಗಿ ಮಾಡಿಕೊಂಡಿದ್ದಲ್ಲ. ಯಾರದೋ ತಪ್ಪಿಗೆ ನಾವು ತಲೆ ಕೊಡಬೇಕಾಯ್ತು. ಈ ಸಮಸ್ಯೆಯೂ ನಮಗೆ ಗುರುಕರುಣೆಯನ್ನು ದೊರಕಿಸಿತು. ಅದು 1991-92 ರ ಕಾಲ. ಸಖರಾಯಪಟ್ಟಣದಲ್ಲಿ ಯಾರೋ ಜ್ಯೋತಿಷ್ಯ ಹೇಳ್ತಾರಂತೆ ಅಂತ ತಿಳ್ಕೊಂಡು ಗುರುನಿವಾಸಕ್ಕ್ ಬಂದು "ಇಲ್ಲಿ ಯಾರೋ ಜ್ಯೋತಿಷ್ಯ ಹೇಳ್ತಾರಂತಲ್ಲಾ.... " ಎಂದು ವಿಚಾರಿಸಿದೆ". ಯಾರಮ್ಮಾ, ಏನಮ್ಮ.... ಒಳಗೆ ಏನು ಹೇಳು" ಎಂಬ ಗುರುವಾಕ್ಯ ಕೇಳಿಸಿತು. 

ಮನೆತುಂಬಾ ಭಕ್ತಾದಿಗಳು ತುಂಬಿದ್ದರು. ಎಲ್ಲರೆದುರು ನಮ್ಮ ವಿಚಾರ ಹೇಳಲು ಮುಜುಗರ. ಆದ್ರೆ ಗುರುಗಳ ಮಾತಿಗೆ ಎದುರಾಡಲು ಧೈರ್ಯ ಸಾಲದೇ ವಿಚಾರ ತಿಳಿಸಿ ನಮ್ಮ ಮಾನ ಕಾಪಾಡಿ... ಎಂದು ಪ್ರಾರ್ಥಿಸಿದೆವು . ಕೂಡಲೇ ಒಂದು ವಿಳ್ಳೇದೆಲೆ ತರಿಸಿ ಜೊತೆಗೆ ಸ್ವಲ್ಪ ಸಕ್ಕರೆ ನೀಡಿ ಕಳಿಸಿದರು. ಅಂದಿನಿಂದ ಆಶ್ಚರ್ಯಕರ ರೀತಿಯಲ್ಲಿ ನಮ್ಮ ಸಮಸ್ಯೆಗಳು ಬಗೆಹರಿಯತೊಡಗಿದವು. ಜೊತೆಗೆ ನಮಗೇ ಅರಿವಿರದಂತೆ ನಮ್ಮಲ್ಲಿದ್ದ ದೋಷಗಳೂ ನಾಶವಾಗಿ ನಮ್ಮ ಜೀವನದ ಗತಿಯೇ ಬದಲಾಯ್ತು. 

ಸಮಸ್ಯೆಗಳಿಗೆ ಪರಿಹಾರ ಎಲ್ಲಾದರೂ ಸಿಗಬಹುದು. ಆದರೆ ಒಂದು ದರುಶನ ಮಾತ್ರದಿಂದ ನಮ್ಮ ಬದುಕನ್ನೇ ಬದಲಿಸಿ ಯಾರಿಂದಲೂ ಏನನ್ನೂ ಅಪೇಕ್ಷಿಸದೆ ನಿತ್ಯಾನಂದವನ್ನು ನೀಡುವ ಶಕ್ತಿ ಸದ್ಗುರುವಿಗೆ ಮಾತ್ರವಿದೆ.... ಆ ಶಕ್ತಿಯನ್ನು ನಾವು ಗುರುದೇವನಲ್ಲಿ ಕಂಡೆವು. 

ಇಂದು ಗುರು ಶರೀರವಾಗಿ ನಮ್ಮೊಂದಿಗಿಲ್ಲವೆಂಬ ಶೂನ್ಯತೆ ನಮ್ಮನ್ನು ಕಾಡಿದರೂ ಆ ಶುದ್ಧ ಭಾವ ಸದಾ ನಮ್ಮನ್ನು ಮುನ್ನೆಡೆಸುತ್ತಿದೆ ಎಂಬ ನಂಬಿಕೆಯಲ್ಲಿ ಜೀವಿಸುತ್ತಿದ್ದೇವೆ. ಎಂದು ನುಡಿದು ಕಣ್ತುಂಬಿಕೊಂಡರು..........,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Saturday, October 29, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 25


 

ಚರಣದಾಸನ ತಂಗಿಯ ಮದುವೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇದಕ್ಕೂ ಮುನ್ನ ನಡೆದ ಒಂದು ಘಟನೆ ಹೇಳುತ್ತೇನೆ. ಗುರುಪತ್ನಿಯ ಸಂಬಂಧಿಕರ ಓರ್ವ ಕನ್ಯೆಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಎಲ್ಲೆಡೆ ವರಶೋಧ ನಡೆದಿತ್ತು. ಕೊನೆಗೊಂದು ದಿನ ಗುರು ಬಂಧುಗಳಲ್ಲೇ ಓರ್ವ ವ್ಯಕ್ತಿಯನ್ನು ಕರೆಸಿ ಮಾತನಾಡಿ ಎರಡು ಮೂರು ದಿನಗಳಲ್ಲಿ ಮದುವೆಯೂ ನಡೆದು ಹೋಯ್ತು. 

ಆ ನಂತರ ಬೆಂಗಳೂರಿನಿಂದ ವಾಪಸಾದ ಗುರುನಾಥರು "ಚಿಂತಿಸಬೇಡ ಕಣೋ ನಿನ್ನ ತಂಗಿ ಮದುವೆಯೂ ಇನ್ನು ಆರು ತಿಂಗಳೊಳಗೆ ಹೀಗೆಯೇ ಅದ್ದೂರಿಯಾಗಿ ನಡೆಯುವುದು" ಎಂದು ಅಭಯವಿತ್ತರು. 

ಇದಾಗಿ ಕೆಲವು ತಿಂಗಳ ನಂತರ ಬೆಂಗಳೂರಿನಲ್ಲಿ ವಾಸವಿರುವ ಚರಣದಾಸನಾದ ನನ್ನ ಎರಡನೇ ಅಕ್ಕನ ಮನೆಯ ಪಕ್ಕದಲ್ಲೇ ಇರುವ ಒಬ್ಬರ ಮನೆಯ ವ್ಯಕ್ತಿ ತಮಿಳುನಾಡಿನಲ್ಲಿ ಕೆಲಸಕ್ಕಿದ್ದರು. ಸೋದರಿಯ ಮನೆಗೆ ಬಂದವರು ಅಲ್ಲಿಯೇ ಇದ್ದ ಚರಣದಾಸನಾದ ನನ್ನ ತಂಗಿಯನ್ನು ನೋಡಿ ಬಾಂಧವ್ಯ ಬೆಳೆಸಲು ಅಪೇಕ್ಷಿಸಿದರು. ಗುರುನಾಥರ ಅನುಮತಿ ಪಡೆಯಬೇಕೆಂದು ನನ್ನ ಸಹೋದರಿ ತಿಳಿಸಲು ಅವರು, ಅಕ್ಕ ಮತ್ತು ಅಕ್ಕನ ಮಗನೊಂದಿಗೆ ಸಖರಾಯಪಟ್ಟಣಕ್ಕೆ ಬಂದರು. 

ಅಂದು ಭಾನುವಾರ. ಗುರು ದರ್ಶನಕ್ಕಾಗಿ ನೂರಾರು ಜನ ಸೇರಿದ್ದರು. ಚರಣದಾಸನಾದ ನಾನು ಸ್ನೇಹಿತರೊಂದಿಗೆ ಬಂದವರೆಲ್ಲರಿಗೂ ಊಟ ಬಡಿಸಿ, ಕೈ ತೊಳೆಸಿ, ಎಲೆ ಎತ್ತಿದೆನು. ಹಾಗೆ ಬಂದವರಲ್ಲಿ ಚರಣದಾಸನಾದ ನನ್ನ ಭಾವನಾಗುವವರೂ ಇದ್ದರಂತೆ. ನಂತರ ಅವರೆಲ್ಲರೂ ಗುರುದರ್ಶನಕ್ಕೆ ಒಳ ಹೋಗುವ ಸಮಯ. ಚರಣದಾಸನಾದ ನಾನು ಗುರುಗಳ ಮನೆಯ ಅಡಿಕೆಯನ್ನು ಹಾಕಿಕೊಂಡು ಶಿವಮೊಗ್ಗಕ್ಕೆ ಹೊರಟೆನು. 

ಭದ್ರಾವತಿ ಸಮೀಪ ಹೋಗುತ್ತಿರುವಾಗ ಕರೆಮಾಡಿದ ಗುರುನಾಥರು "ಅಯ್ಯಾ, ನಿನ್ನ ತಂಗಿಯೊಂದಿಗೆ ಬಾಂಧವ್ಯ ಬೆಳೆಸಲು ಇಚ್ಛಿಸಿದವರು ಇಲ್ಲಿಗೆ ಬಂದಿರುವರು. ನನಗೆ, ಅಮ್ಮ (ಗುರುಪತ್ನಿ) ಹಾಗೂ ನಿನ್ನ ಅತ್ತೆ (ಗುರುಗಳ ಸೋದರಿಯರು) ಎಲ್ಲರಿಗೂ ತುಂಬಾ ಒಪ್ಪಿಗೆಯಾಗಿದೆ. ನೀ ಏನ್ ಹೇಳ್ತೀಯಾ?" ಎಂದರು. ಅದಕ್ಕೆ ನಾನು "ಗುರುಗಳ ಇಚ್ಚೆನೇ ನಂದೂ ಕೂಡ" ಎಂದೆ. 

ಅಂದು ರಾತ್ರಿ ಅವರೆಲ್ಲರನ್ನೂ ಸಕಲ ಪೂಜಾ ಸಾಮಗ್ರಿಗಳನ್ನು ನೀಡಿ ತರೀಕೆರೆಯಲ್ಲಿ ಉಳಿದು ಬೆಳಿಗ್ಗೆ ಶಿವಮೊಗ್ಗ ಸಮೀಪದಲ್ಲಿರುವ ಅದ್ವೈತ ಪೀಠಕ್ಕೆ ಹೋಗಿ ಬನ್ನಿರೆಂದು ಗುರುನಾಥರು ಕಳಿಸಿಕೊಟ್ಟರು. ಮಂಡಿಗೆ ಅಡಿಕೆ ಹಾಕಿ ಚರಣದಾಸನಾದ ನಾನು ಸಖರಾಯಪಟ್ಟಣಕ್ಕೆ ಬಂದೆ. 

ಮರುದಿನ ಬೆಳಿಗ್ಗೆ ಎಂದಿನಂತೆ ಗುರುನಾಥರು ಪಾದುಕೆಗಳಿಗೆ ಆರತಿ ಮಾಡಿ ಗಂಟೆ ಬಾರಿಸಿದರು. ಆನಂತರ ಅತ್ತೆಯಂದಿರಿಗೆ (ಗುರುನಾಥರ ಸೋದರಿ) ಕರೆ ಮಾಡಿಸಿ ಅವರ ಆಶೀರ್ವಾದ ಕೇಳಿಸಿದರು. 

ನಂತರ ಆಯಾಸವಾಗಿದೆ ಎಂದು ಮಲಗಿದ್ದು ಸುಮಾರು ಮಧ್ಯಾನ್ಹ ಹನ್ನೆರಡು ಗಂಟೆಗೆ ಎದ್ದು ಸೀದಾ ದೇವ ಮಂದಿರಕ್ಕೆ ಹೋಗಿ ಗಂಟೆ ಬಾರಿಸಿದರು. ಸಾಮಾನ್ಯವಾಗಿ ಈ ರೀತಿ ಎರಡು ಬಾರಿ ಗಂಟೆ ಬಾರಿಸಿದರೆಂದರೆ ಯಾವುದೋ ಮಹತ್ವದ ಘಟನೆ ನಡೆವುದೆಂಬುದು ಅಲ್ಲಿದ್ದ ನನಗೆ ಆದ ಅನುಭವ. 

ನಂತರ ಹೊರಬಂದು ಚರಣದಾಸನಾದ ನನ್ನ ಮೇಲೆ ವಿನಾ ಕಾರಣ ರೇಗಾಡತೊಡಗಿದರು. "ನಿನ್ನ ತಂಗಿ ಮದುವೆಗೂ ನನಗೂ ಏನು ಸಂಬಂಧನೋ? ನಿಂಗೆ ಬೇಕಾದರೆ ಹೋರಾಡಲು ಸಿದ್ಧನಾಗು" ಎಂದು ಮುಂತಾಗಿ  ಕೂಗಾಡಿದರು. ಈ ಬೈಗುಳದ ಒಳಮರ್ಮ ಅರಿತಿದ್ದ ಚರಣದಾಸನಾದ ನಾನು ಮೌನವಾಗಿ ಹೊರತು ನಿಂತೆ. ಸುಮಾರು 3-30 ಕ್ಕೆ ಶಿವಮೊಗ್ಗ ತಲುಪಿದೆ. 

ಆಗ ಕರೆ ಮಾಡಿಸಿದ ಗುರುನಾಥರು ಅಲ್ಲಿನ ಗುರು ಬಂಧು ಓರ್ವರ ಮನೆಗೆ ಹೋಗಲು ಹೇಳಿದರು. ಅಲ್ಲಿಯೇ ಧಾರೆ ಸೀರೆ, ಪಂಚೆ, ಒಂದಷ್ಟು ಸೀರೆ, ಶಲ್ಯ, ಭಿಕ್ಷಾ ಸಾಮಾನು, ತಾಳಿ ಸರ, ಉಂಗುರ ಕೊಳ್ಳಲು ಹೇಳಿದರು. ಚರಣದಾಸನಾದ ನನ್ನ ಸಂಗಡ ಅವರೇ ನೀಡಿದ ಐನೂರು ರೂಪಾಯಿ ಬಿಟ್ಟು ಬೇರಾವ ಹಣವೂ ಇರಲಿಲ್ಲ. ಆದ್ದರಿಂದ ಆ ಗುರು ಬಂಧುವಿಗೆ ವ್ಯವಸ್ಥೆ ಮಾಡಲು ತಿಳಿಸಿದರು. 

ಚರಣದಾಸನಾದ ನಾನು ಸಕಲ ಸಾಮಗ್ರಿಗಳೊಂದಿಗೆ ಸಂಜೆ ಆರರ ಸುಮಾರಿಗೆ ನಾವು ಅದ್ವೈತ ಪೀಠ ತಲುಪಿ ಭಾವನಾಗುವವರನ್ನು ಪರಿಚಯ ಮಾಡಿಕೊಂಡೆ. 

ಅದಾಗಿ ಕೆಲ ಹೊತ್ತಿಗೆ ಅಕ್ಕ, ಭಾವ, ತಮ್ಮ ಹಾಗೂ ತಂಗಿ ಬೆಂಗಳೂರಿನಿಂದ ಬಂದರು. 

ಚರಣದಾಸನಾದ ನಾನು ಗುರು ನಿವಾಸದಿಂದ ಹೊರಡುವಾಗ ಗುರುನಾಥರು "ಅದ್ವೈತ ಪೀಠದ ಗುರುಗಳ ಸಮ್ಮುಖದಲ್ಲಿ ತಾಂಬೂಲ ವಿನಿಮಯ ಮಾಡಿಕೊಳ್ಳಿ. ಆ ನಂತರ ಕುಳಿತು ದಿನಾಂಕ ನಿಶ್ಚಯ ಮಾಡುವ" ಎಂದಿದ್ದರು. 

ಕೆಲ ಹೊತ್ತಿಗೆ ಸಿಂಹಾಸನಾಸೀನರಾದ ಶ್ರೀ ಶ್ರೀ ಗಳು ಮಧು ಮಕ್ಕಳನ್ನು ಹಸೆಮಣೆಯಲ್ಲಿ ಕೂರಿಸಿ ಮಧುಮಗಳಿಗೆ ಅರಿಶಿನ, ಕುಂಕುಮ, ಬಳೆ ತೊಡಿಸಲು ಹೇಳಿದರು. ಸೋದರಿಯರು ಆ ಕೆಲಸ ಮಾಡಿದರು. 

ನಂತರ ಬಳೆ, ಧಾರೆಸೀರೆ, ಉಂಗುರ ಪ್ರತಿಯೊಂದನ್ನು ಕೇಳಿ ಪಡೆದು ತಾನೇ ಅರಿಶಿನ ಕುಂಕುಮ ಹಚ್ಚಿ ನಂತರ ವಧುವರರಿಗೆ ನೀಡಿದರು. 

ಕೊನೆಯದಾಗಿ "ತಾಳಿ ಇದೆಯೋ?" ಎಂದರು. ತೆಗೆದುಕೊಟ್ಟೆ. ತಕ್ಷಣವೇ ಎದ್ದು ನಿಂತ ಶ್ರೀ ಶ್ರೀಗಳು "ಇನ್ನೇಕೆ ತಡ" ಎಂದವರೇ "ಮಾಂಗಲ್ಯಮ್ ತಂತು ನಾನೇನ.. ..... ... ಮಂತ್ರ ಹೇಳಿದರು. ವಾರ ವಧುವಿಗೆ ತಾಳಿ ಕಟ್ಟಿಯೂ ಆಯ್ತು. ಈ ಎಲ್ಲಾ ಪ್ರಕ್ರಿಯೆ ಬಹುಶಃ ಹತ್ತು ಹದಿನೈದು ನಿಮಿಷದಲ್ಲಿ ಮುಗಿದಿತ್ತು. 

ಅದು ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಬರುವ ಶ್ರೇಷ್ಠ ಘಳಿಗೆ, ಮುಹೂರ್ತವೆಂದು ಆ ನಂತರ ತಿಳಿದು ಬಂತು. 

ಮದುವೆಯಾದ ಮರುದಿನ ನಾವು ವರನ ಮನೆ ನೋಡಿದ್ದು, ಹಾಗೂ ಅವರೆಲ್ಲರೂ ವಧುವಿನ ಮನೆ ನೋಡಿದ್ದು ಮದುವೆಯಾದ ಮೂರು ತಿಂಗಳ ನಂತರವಷ್ಟೇ .... !!!!

ಇಲ್ಲಿ ಸಾಮಾನ್ಯ ಸಂಪ್ರದಾಯದ ಯಾವ ಪ್ರಕ್ರಿಯೆಗಳೂ ಪಾಲನೆಯಾಗಿರಲಿಲ್ಲ. "ಅವಧೂತರಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಇಡೀ ಪ್ರಕೃತಿ ಅವರ ವಶದಲ್ಲಿರುತ್ತದೆ. ಆನೆ ನಡೆದದ್ದೇ ದಾರಿ ಎಂಬಂತೆ ಅವರ ಜೀವನ" ಎಂಬ ಮಹಾತ್ಮರೊಬ್ಬರ ಮಾತು ಇಂತಹ ಘಟನೆಗಳನ್ನು ನೋಡಿದಾಗ ನಿಜವೆನಿಸುತ್ತದೆ. 

ಗುರು ಕೃಪಾಶೀರ್ವಾದದಿಂದ ಇಂದು ಅವರಿಬ್ಬರೂ ಸುಖವಾಗಿರುವರು. ಇಂತಹ ಕರುಣಾಸಾಗರ ಗುರುಮೂರ್ತಿಗೆ ಹೋಲಿಕೆ ಉಂಟೆ ? ...... ,,,,,,,,,,,,,,,,



ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

For more info visit :  http://srivenkatachalaavadhoota.blogspot.in/

Friday, October 28, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 24


 

ಮೂರು ವರ್ಷದಿಂದ ನಡೆಯದವ ನಡೆದಾಡಿದರು 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಅಂದು ಚರಣದಾಸನಾದ ನಾನು ಗುರುಗಳ ಮನೆಯ ಕೆಲಸ ಕಾರ್ಯಗಳನ್ನು ಮುಗಿಸಿ ತೋಟಕ್ಕೆ ಹೋಗಿ ಬರುವ ಹೊತ್ತಿಗೆ ಒಂದು ಕಾರು ಬಂದಿತ್ತು. ಗುರುನಾಥರಿಗೆ ಎರಡು ಮನೆಗಳಿದ್ದು ಒಂದನ್ನು ಖಾಲಿ ಬಿಟ್ಟಿದ್ದರು. ಅದರಲ್ಲಿ ಮತ್ತೆ ಮೂರು ಮನೆಗಳಿದ್ದವು. ಮಧ್ಯದ ಭಾಗವನ್ನು ಬಾಡಿಗೆಗೆ ನೀಡಿದ್ದು ಉಳಿದೆರಡು ಭಾಗಗಳು ಖಾಲಿ ಇದ್ದವು. ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಒಂದು ಭಾಗದ ಮನೆಯಲ್ಲಿ ಒಂದು ದಿನ ಮಲಗಲು ಹೇಳುತ್ತಿದ್ದರು. ನಂತರ ಅವರ ಸಮಸ್ಯೆ ಪರಿಹಾರವಾಗುತ್ತಿತ್ತು. ಇತರೆ ಸಾಂಸಾರಿಕ ಸಮಸ್ಯೆಗಳು, ಮಕ್ಕಳಾಗದಿರುವಿಕೆ, ಮುಂತಾದ ಸಮಸ್ಯೆಗಳಿರುವವರನ್ನು ಇನ್ನೊಂದು ಭಾಗದ ಮನೆಯಲ್ಲಿ ಕೆಲಕಾಲ ಕೂರಿಸುತ್ತಿದ್ದರು, ಇಲ್ಲವೇ ಮಲಗಲು ಹೇಳುತ್ತಿದ್ದರು. 

ಆ ಕಾರಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಇಬ್ಬರು ಎತ್ತಿಕೊಂಡು ಬಂದು ಒಳಗೆ ಕರೆದೊಯ್ದರು. ಚರಣದಾಸನಾದ ನಾನು ತೋಟದಿಂದ ನೇರವಾಗಿ ಹಳೆಯ ಮನೆಗೆ ಹೋದೆ. ಆ ನಂತರ ಈ ಮನೆಗೆ (ಗುರುನಾಥರು ಕುಳಿತಿದ್ದ ಮನೆ) ಬಂದಾಗ ಆ ವ್ಯಕ್ತಿಗೆ ಕಾಲು ಬಿದ್ದು ಹೋಗಿ ಮೂರು ವರ್ಷಗಳಾಗಿದ್ದು ಯಾವುದೇ ಔಷಧಗಳು ಫಲ ನೀಡಿರಲಿಲ್ಲ ಎಂದು ತಿಳಿದು ಬಂತು. ಗುರುನಾಥರು ಅವರ ಬಳಿ ಮಾತನಾಡುತ್ತಾ ಏನನ್ನೋ ಕೊಡುತ್ತಿರುವುದನ್ನು ನೋಡಿ ಚರಣದಾಸನಾದ ನಾನು ಹೊರಬಂದೆನು. 

ಇದಾಗಿ ಬಹುಶಃ ಎರಡು-ಮೂರು ಗಂಟೆಗಳ ನಂತರ ಆ ಮೂವರಿಗೆ ಆ ವ್ಯಕ್ತಿಯ ಕಾಲು ತೊಂದರೆ ಸರಿ ಆಗುವುದೆಂದು ಅಭಯ ನೀಡಿ ಕಳಿಸಿದರು. ಆಶ್ಚರ್ಯವೆಂದರೆ ಮೂರು ವರ್ಷಗಳ ಕಾಲ ನಡೆಯಲಾರದೆ ಮಲಗಿದ್ದ ಆ ವ್ಯಕ್ತಿ ಆರಾಮವಾಗಿ ಎದ್ದು ನಡೆದು ಮನೆಯಿಂದ ಹೊರಬಂದರು. 

ಹಾಗೆಯೇ ವಿಪರೀತ ಮನೋಚಾಂಚಲ್ಯತೆ, ಭಯ ಇತ್ಯಾದಿ ತೊಂದರೆಗಳಿದ್ದವರನ್ನು ಕೆಲಕಾಲ ಹಳೆ ಮನೆಯ ದನದ ಕೊಟ್ಟಿಗೆಯಲ್ಲಿ ಓಡಾಡಲು ಅಥವಾ ಕುಳಿತು ಬರಲು ತಿಳಿಸುತ್ತಿದ್ದರು. 

ಅಂತೆಯೇ ಚರಣದಾಸನಾದ ನಾನು ನೋಡಿದ ಇನ್ನೊಂದು ಘಟನೆ ಎಂದರೆ ಅಂದು ಗುರುನಾಥರ ತಂದೆಯ ಶ್ರಾದ್ಧ ಕಾರ್ಯ ನಡೆದಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಓರ್ವ ಖ್ಯಾತ ಸಂಗೀತಗಾರ್ತಿಯೊಬ್ಬರು ಆಗಾಗ್ಗೆ ಗುರುನಿವಾಸಕ್ಕೆ ಬಂದು ಅನುಗ್ರಹ ಪಡೆದು ವಾಪಸಾಗುತ್ತಿದ್ದರು. 

ಅಂದು ಆಕೆ ಗುರು ದರ್ಶನಕ್ಕಾಗಿ ಗುರುನಿವಾಸಕ್ಕೆ ಬಂದಿದ್ದರು. ಆಕೆಯ ಆರೋಗ್ಯದಲ್ಲಿ ಆಗಾಗ್ಗೆ ವಿಪರೀತ ಏರುಪೇರಾಗುತ್ತಿದ್ದು ಆಕೆ ವೈದ್ಯರಲ್ಲಿ ಪರೀಕ್ಷಿಸಿದಾಗ ಒಂದು ಖಾಯಿಲೆಯಿಂದ ಬಳಲುತ್ತಿರುವುದಾಗಿಯೂ, ಔಷಧ ಬಳಕೆ ಪರಿಣಾಮಕಾರಿಯಾದರೂ ಪೂರ್ಣ ಗುಣಮುಖವಾಗುವುದು ಅಸಾಧ್ಯವೆಂಬುದನ್ನು ವೈದ್ಯರು ತಿಳಿಸಿದರು. ಗಾಬರಿಗೊಂಡ ಆ ಮಹಿಳೆ ಗುರುಗಳ ಆಶೀರ್ವಾದಕ್ಕಾಗಿ ಬಂದಿದ್ದರು. ಗುರುನಾಥರು ಆಗ ತಾನೇ ಶ್ರಾದ್ಧ ಕಾರ್ಯ ಮುಗಿಸಿ ಹೊರಬಂದಿದ್ದರಷ್ಟೆ. 

ಆಕೆಯ ಸಮಸ್ಯೆಯನ್ನು ಕೇಳಿ ತಿಳಿದ ಗುರುನಾಥರು "ಅಯ್ಯಾ, ಒಂದು ಪಂಚೆ ಕೊಡ್ರಯ್ಯಾ" ಎಂದರು. ನಾವು ಪಂಚೆ ನೀಡಿದಾಕ್ಷಣ ಅದನ್ನು ಉಟ್ಟು, ಮೊದಲು ಉಟ್ಟಿದ್ದನ್ನು ಬಿಚ್ಚಿ ಆ ಮಹಿಳೆಯ ಕಡೆಗೆ ಎಸೆದು "ಇದನ್ನ ಇಟ್ಕೋ ಅದು ಯಾವ ಖಾಯಿಲೆ ನಿನ್ನ ಮೇಲೆ ಎರಗುತ್ತೋ ನೋಡೋಣ" ಎಂದು ನುಡಿದು ಒಳ ಹೋದರು. ಇಂದಿಗೂ ಆ ಮಹಿಳೆ ಆರೋಗ್ಯಪೂರ್ಣ ಜೀವನ ನಡೆಸುತ್ತಿರುವರು. 

ಹಾಗೆಯೇ ಮತ್ತೊಂದು ಸಂದರ್ಭ. ಗುರುದರ್ಶನಕ್ಕಾಗಿ ಬೆಂಗಳೂರಿನಿಂದ ಒಬ್ಬ ಸಿರಿವಂತರು ಬಂದಿದ್ದರು. ಅವರ ಸಮಸ್ಯೆಯನ್ನು ಆಲಿಸಿ ಪರಿಹಾರ ಸೂಚಿಸಿದ ಗುರುನಾಥರು ಹೀಗೆ ಹೇಳಿದರು: "ನೀವು ಹೋಗುವಾಗ ಒಬ್ಬ ಭಿಕ್ಷುಕ ನಿಮ್ಮ ಕಾರಿಗೆ ಕೈ ತೋರಿಸುತ್ತಾನೆ. ಅವನನ್ನು ಕೂರಿಸಿಕೊಂಡು ಹೋಗಿ, ಆ ಭಿಕ್ಷುಕನ ಪುಣ್ಯದಿಂದ ಅಪಘಾತದಿಂದ ಪಾರಾಗುವಿರಿ. ಹಾಸನ ಮಾರ್ಗವಾಗಿ ಹೋಗಬೇಡಿ. ಕಡೂರು ಮಾರ್ಗವಾಗಿ ಹೋಗಿ ಎಂದು ವಿನಂತಿಸಿ ಕಳಿಸಿಕೊಟ್ಟರು. 

ಆದರೆ ಗುರುವಾಕ್ಯದ ಮೇಲೆ ಅಸಡ್ಡೆಯೋ ಅಥವಾ "ತಾನು ಸಿರಿವಂತನಾಗಿದ್ದು ಆ ಭಿಕ್ಷುಕನನ್ನು ನನ್ನ ಕಾರಿನಲ್ಲಿ ಹೇಗೆ ಕೂರಿಸಲಿ" ಎಂಬ ಅಹಂಕಾರವೋ ಕಾರಣವಾಗಿ ಆತ ಗುರುವಾಕ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಹಾಸನ ಮಾರ್ಗವಾಗಿ ಬೆಂಗಳೂರು ಕಡೆಗೆ ಹೊರಟರು. ಈ ಕಾರಣವಾಗಿ ಭೀಕರ ಅಪಘಾತಕ್ಕೂ ತುತ್ತಾದರು. 

"ಗುರುವೆಂದರೆ ಬೆಂಕಿಯಪ್ಪಾ. ಆ ಪದವನ್ನು ನಿಮ್ಮ ಇಚ್ಛೆಯಂತೆ ಹಗುರವಾಗಿ ಬಳಸಬೇಡಿ" ಎಂಬ ಗುರುನಾಥರ ಮಾತು ಇಂತಹ ಘಟನೆಯನ್ನು ನೋಡಿದಾಗ ನಿಜವೆನಿಸುತ್ತದೆ....... ,,,,,,,,,,  


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।



Thursday, October 27, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 23

 

    ಕನಸಲ್ಲಿ ಬಂದು ಕಾಪಾಡಿದರು : - ಚಕ್ರದೊಳಗೆ ಸೇರಿದ ನಕಾರಾತ್ಮಕ ಚೈತನ್ಯ 

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಬೆಂಗಳೂರಿನವರಾದ ಆ ವ್ಯಕ್ತಿ ಅರೇಬಿಯಾದ ದೇಶವೊಂದರಲ್ಲಿ ಕೆಲಸದಲ್ಲಿದ್ದರು. ಅವರ ಸ್ನೇಹಿತರಲ್ಲಿ ಅನೇಕರು ಬೆಂಗಳೂರಿನಲ್ಲಿದ್ದು ಅವರಲ್ಲಿ ಕೆಲವರು ಗುರುನಾಥರ ಸಂಪರ್ಕದಲ್ಲಿದ್ದರು. ಹೊರದೇಶದಲ್ಲಿ ವಾಸಿಸುತ್ತಿದ್ದ ಆ ವ್ಯಕ್ತಿ ಅಲ್ಲಿಯೇ ಒಂದು ಕಾರನ್ನು ಕೊಂಡಿದ್ದರು. ಆದರೆ ಅದನ್ನು ತೆಗೆದುಕೊಂಡಾಗಿನಿಂದ ಮಾನಸಿಕ ಹಿಂಸೆ ಹಾಗೂ ಆ ಕಾರಿನಲ್ಲಿ ನೆಮ್ಮದಿಯ ಪ್ರಯಾಣ ಮಾಡಲಾಗುತ್ತಿರಲಿಲ್ಲ. ಅದರ ಕಾರಣವೂ ತಿಳಿಯಲಿಲ್ಲ.

ಈ ಮಧ್ಯೆ ಆ ವ್ಯಕ್ತಿಗೆ ಆಗಾಗ್ಗೆ ಕನಸಿನಲ್ಲಿ ಓರ್ವ ವಯೋವೃದ್ಧ ವ್ಯಕ್ತಿ ಬಂದು ಕಾಣಿಸಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ದಿನವೂ ಕನಸಿನಲ್ಲಿ ಬರುತ್ತಿದ್ದ ಆ  ವ್ಯಕ್ತಿಯ ಚಿತ್ರವನ್ನು ಬರೆದ ಅವರು ಬೆಂಗಳೂರಿನ ಮಿತ್ರರಿಗೆ "ಅಂತಹವರು ಯಾರಾದರೂ ಇರುವರೇ?" ಎಂದು ಕೇಳಿ ಚಿತ್ರವನ್ನು ಕಳಿಸಿಕೊಟ್ಟರು. ಅದನ್ನು ನೋಡಿದ ಮಿತ್ರರು "ಅದು ಬೇರಾರೂ ಅಲ್ಲ. ಸಖರಾಯಪಟ್ಟಣದ ಗುರುನಾಥರು" ಎಂದು ತಿಳಿಸಿದರು. ಮಾತ್ರವಲ್ಲ ಗುರುನಾಥರನ್ನು  ದರ್ಶನ ಮಾಡಿ ಹೊರದೇಶದಲ್ಲಿರುವ ಆ ಮಿತ್ರನ ಸಮಸ್ಯೆಯನ್ನು ಹಾಗೂ ಕನಸಿನ ಬಗ್ಗೆ ತಿಳಿಸಿದರು. 

ಆಗ ಗುರುನಾಥರು "ಅವರ ಕಾರಿನ ಚಕ್ರವು ಲಾರಿಯಲ್ಲಿ ಬರುತ್ತಿರುವಾಗ ಲಾರಿ ಉರುಳಿ ಬಿದ್ದು ಅದರಲ್ಲಿ ಸಾಗಿಸುತ್ತಿದ್ದ ಚಕ್ರಗಳು ಅಲ್ಲೇ ಸನಿಹದಲ್ಲಿದ್ದ ಸ್ಮಶಾನದೊಳಗೆ ಬಿದ್ದವು. ಅದರಲ್ಲಿ ಒಂದು ನಕಾರಾತ್ಮಕ ಚೈತನ್ಯ ಸೇರಿಕೊಂಡಿದೆ. ಆ ಚಕ್ರವನ್ನು ತೆಗೆದು ಹೊಸ ಚಕ್ರ ಹಾಕಲು ಹೇಳಿ ಎಲ್ಲವೂ ಸರಿಹೋಗುವುದು" ಎಂದರು. ಅವರಂದಂತೆಯೇ ಮಾಡಲು ಎಲ್ಲವೂ ಸರಿಹೋಯ್ತು. 

ಅದೇ ರೀತಿ ಮೈಸೂರಿನಲ್ಲಿ ವಾಸವಿದ್ದ ಓರ್ವರ ಮನೆಯ ಪಕ್ಕದವರು ಸದಾ ಗುರುನಾಥರ ಸಂಪರ್ಕದಲ್ಲಿದ್ದರು. ಆದರೆ ಇವರಿಗೂ ಗುರುನಾಥರನ್ನು ನೋಡಬೇಕೆಂಬ ಹಂಬಲವಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಿರಲು ಆ ಮನೆಯ ಮಗನಿಗೆ ಮದುವೆಯಾಯಿತು. 

ಆತ ವಿದೇಶದಲ್ಲಿ ನೆಲೆಸಿದ್ದು ಹೆಂಡತಿಯನ್ನು ವೀಸಾ ಪಾಸ್ ಪೋರ್ಟ್ ಆಗಿರದ ಕಾರಣ ಆಕೆಯನ್ನು ಮೈಸೂರಿನಲ್ಲಿಯೇ ಬಿಟ್ಟು ತಾನೊಬ್ಬನೇ ವಿದೇಶಕ್ಕೆ ತೆರಳಿದರು. ಅವರ ಪತ್ನಿ ಎಷ್ಟೇ ಪ್ರಯತ್ನಿಸಿದರೂ ವೀಸಾ, ಇತ್ಯಾದಿಗಳನ್ನು ಪಡೆಯಲು ವಿಳಂಬವಾಗುತ್ತಿತ್ತು. ಇದರಿಂದ ಆಕೆ ಬಹಳ ಚಿಂತಾಕ್ರಾಂತರಾಗಿದ್ದರು. ಹೀಗಿರಲು ಗುರುನಾಥರ ಬಗ್ಗೆ ತಿಳಿದು ಅವರನ್ನು ದಿನವೂ ಪ್ರಾರ್ಥಿಸತೊಡಗಿದಳು. 

ಒಂದು ರಾತ್ರಿ ಕನಸಿನಲ್ಲಿ ದರ್ಶನ ನೀಡಿದ ಗುರುನಾಥರು "ಮುಖ ಕಾಣದಂತೆ ಮುಚ್ಚಿಟ್ಟಿರುವ ನಮ್ಮಿಬ್ಬರ ಫೋಟೋವನ್ನು ತಿರುಗಿಸಿಡಮ್ಮಾ ಎಲ್ಲವೂ ಸರಿಯಾಗುವುದು" ಎಂದು ಹೇಳಿದರಂತೆ. ಬೆಳಿಗ್ಗೆ ಎದ್ದ ಆ ಮಹಿಳೆ ಕನಸಿನಲ್ಲಿ ಗುರುನಾಥರು ಹೇಳಿದಂತೆಯೇ ಹುಡುಕಲಾಗಿ ಅವರಿಬ್ಬರ ಫೋಟೋವೊಂದು ತಲೆಕೆಳಕಾಗಿ ಬಿದ್ದಿತ್ತು. ಆ ಫೋಟೋವನ್ನು ತೆಗೆದು ಸರಿಯಾಗಿಟ್ಟರಂತೆ. ಅಂದಿಗೆ ಸರಿಯಾಗಿ ಎರಡು-ಮೂರು ದಿನಗಳಲ್ಲಿ ವೀಸಾ ಪಾಸ್ ಪೋರ್ಟ್ ಕೈಸೇರಿ ಅವರು ವಿದೇಶಕ್ಕೆ ಹೋಗುವಂತಾಯಿತು. "ಅರಿತು ಮರೆತು ಒಮ್ಮೆ ಗುರುವೆಂದು ನೆನೆದರೆ ಗುರುತಿಟ್ಟು ಅವರಿಗೆ ಪರತತ್ವ ತೋರುವ" ಎಂಬ ಸಾಲು ಇಂತಹ ಘಟನೆಗಳಿಂದ ಮತ್ತೆ ಮತ್ತೆ ಸತ್ಯವಾಗುತ್ತದೆ ಅನಿಸುತ್ತದೆ........, , , , , , , 


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 
 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


ಶ್ರೀ ವೆಂಕಟಾಚಲ ಅವಧೂತರ ಗುರು ಪರಂಪರೆ 

 

ಶ್ರೀ ವೆಂಕಟಾಚಲ ಅವಧೂತರ ಗುರು ಪರಂಪರೆಯನ್ನು ಗುರು ಬಂಧುಗಳ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ: 

1. ಸದ್ಗುರುಗಳು : ಚಿನ್ಮಯಾನಂದರು - ಭಾವಚಿತ್ರ ಲಭ್ಯವಿರುವುದಿಲ್ಲ. 
2. ಸದ್ಗುರುಗಳು : ಶ್ರೀ ತುಕಾರಾಮ್ ಚೈತನ್ಯ (ಹುಚ್ಚು ತುಖ್ಯ)  
3. ಪರಾತ್ಪರ ಗುರುಗಳು: ಶ್ರೀ ಬ್ರಹ್ಮ ಚೈತನ್ಯ ಮಹಾರಾಜರು  
4. ಪರಮೇಷ್ಟಿ ಗುರುಗಳು : ಶ್ರೀ ಸಚ್ಚಿದಾನಂದೇಂದ್ರ  ಸರಸ್ವತಿ (ಶ್ರೀ. ವೈ.ಸುಬ್ಬರಾಯರು ), ಹೊಳೆನರಸೀಪುರ, 
5. ಪರಮಗುರುಗಳು : ಶ್ರೀ ಜ್ಞಾನಾನಂದೇಂದ್ರ ಸರಸ್ವತಿ (ಶ್ರೀ.ವಿಠಲ ಶಾಸ್ತ್ರೀ), ಹೊಳೆನರಸೀಪುರ
6. ಶ್ರೀ ಅವಧೂತ ವೆಂಕಟಾಚಲ ಗುರುಮಹಾರಾಜರು, ಸಖರಾಯಪಟ್ಟಣ 
 

 



ಶ್ರೀ ವೆಂಕಟಾಚಲ ಅವಧೂತರಿಗೆ ಸಂಬಂಧಿಸಿದ ಗ್ರಂಥಗಳು

 

1. ಶ್ರೀ ಸದ್ಗುರು ಮಹಿಮೆ - ರಚನೆ: ಚರಣದಾಸ 

 

ಶ್ರೀ ವೆಂಕಟಾಚಲ ಆವಧೂತರ ಒಡನಾಟದಲ್ಲಿ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲವಿದ್ದು ಅವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಹೆಸರನ್ನು ಬಹಿರಂಗಪಡಿಸಿಕೊಳ್ಳಲು ಇಚ್ಛಿಸದ "ಚರಣದಾಸ" ರಿಂದ ವಿರಚಿತವಾದ "ಶ್ರೀ ಸದ್ಗುರು ಮಹಿಮೆ" ಗ್ರಂಥವು 156 ಅಧ್ಯಾಯಗಳನ್ನು ಒಳಗೊಂಡಿದ್ದು ಗುರು ಬಂಧುಗಳು ತಪ್ಪದೆ ಪಾರಾಯಣ ಮಾಡಬೇಕಾದ ಗ್ರಂಥವಾಗಿರುತ್ತದೆ. ಈ ಗ್ರಂಥವು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಗ್ರಂಥವನ್ನು ಹೊಂದಲು ಇಚ್ಛಿಸುವ ಗುರುಬಂಧುಗಳು ಶ್ರೀಮತಿ. ಸವಿತಾ ರಘುನಾಥ್, ಬಸವೇಶ್ವರ ನಗರ, ಬೆಂಗಳೂರು ಇವರನ್ನು ದೂರವಾಣಿ ಸಂಖ್ಯೆ: 94810 25416 ಅನ್ನು ಸಂಪರ್ಕಿಸಿ ಗ್ರಂಥವನ್ನು ಖರೀದಿಸಬಹುದು. ಗುರುನಾಥರ ಈ ಅತ್ಯಮೂಲ್ಯ ಗ್ರಂಥಕ್ಕೆ ಬೆಲೆ ಕಟ್ಟಲು ಇಚ್ಛಿಸದ ಚರಣದಾಸರು ಇದಕ್ಕೆ ಇಷ್ಟೇ ಬೆಲೆ ಎಂದು ನಿಗದಿಪಡಿಸಿರುವುದಿಲ್ಲ. ಹಾಗಾಗಿ, ಗುರುಬಂಧುಗಳು ತಮ್ಮ ಶಕ್ತ್ಯಾನುಸಾರ ಗುರುಕಾಣಿಕೆ ನೀಡಿ ಈ ಗ್ರಂಥವನ್ನು ಖರೀದಿಸಿ ಗ್ರಂಥವು ಹೆಚ್ಚು ಹೆಚ್ಚು ಮರುಮುದ್ರಣ ಕಾಣುವಂತೆ ಮಾಡಬೇಕಾಗಿ  ಈ ಮೂಲಕ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. 




2. ಗುರುನಾಥರ ಸನ್ನಿಧಿಯಲ್ಲಿ  - ರಚನೆ:ಶ್ರೀ. ಅನಂತರಾಮು 

 

"ಗುರುನಾಥರ ಸನ್ನಿಧಿಯಲ್ಲಿ" ಎಂಬ ಈ ಮಹೋನ್ನತ ಕನ್ನಡ ಪಾರಾಯಣ ಗ್ರಂಥವನ್ನು ಬೆಂಗಳೂರಿನ ಶ್ರೀಯುತ.ಅನಂತರಾಮು ಅವರು ರಚಿಸಿದ್ದು ಇಪ್ಪತ್ತನಾಲ್ಕು ಅಧ್ಯಾಯಗಳು, ಫಲಶ್ರುತಿ, ಗುರುನಾಥರ ವಾಣಿಗಳು ಹಾಗೂ ಭಜನೆಗಳನ್ನು ಒಳಗೊಂಡಿರುತ್ತದೆ. ಈ ಗ್ರಂಥವನ್ನು ಗುರುಬಂಧುಗಳು ಸಪ್ತಾಹ ರೂಪದಲ್ಲಿ ಕೂಡ ಪಾರಾಯಣ ಮಾಡಬಹುದಾಗಿರುತ್ತದೆ. ಈ ಗ್ರಂಥವನ್ನು ಈ ಕೆಳಕಂಡ ಸ್ಥಳದಲ್ಲಿ ಖರೀದಿಸಬಹುದಾಗಿದೆ: 


ಶ್ರೀ.ಅನಂತರಾಮು, 
ನಂ.64,  ಅಕ್ಷಯ, ಓಂಕಾರನಗರ, 
4ನೇ ಅಡ್ಡರಸ್ತೆ, ಬನ್ನೇರುಘಟ್ಟ ರಸ್ತೆ, 
ಬೆಂಗಳೂರು. 
ದೂರವಾಣಿ ಸಂಖ್ಯೆ: 99029 80962

ಅತಿ ಶೀಘ್ರದಲ್ಲಿಯೇ ಈ ಗ್ರಂಥವು ಇಂಗ್ಲೀಷ್ ಭಾಷೆಯಲ್ಲಿಯೂ ಲಭ್ಯವಾಗುತ್ತದೆ ಎಂದು ಗುರುಬಂಧುಗಳಿಗೆ ತಿಳಿಸಲು ನಾವು ಹರ್ಷಿಸುತ್ತೇವೆ. 

Wednesday, October 26, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 22

 

     ಭಿಕ್ಷಾವಂದನೆ

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಿವಾಸಕ್ಕೆ ಪ್ರತಿದಿನವೂ ನೂರಾರು ಜನರು ಬರುತ್ತಿದ್ದರಷ್ಟೇ.... ಭಕ್ತರ ಮನಸ್ಥಿತಿ ಹಾಗೂ ಪರಿಸ್ಥಿತಿಯನ್ನು ಸದಾ ಗಮನಿಸುತ್ತಿದ್ದ ಗುರುನಾಥರು ಭಕ್ತರು ತನಗಾಗಿ ತರುತ್ತಿದ್ದ ಎಲ್ಲಾ ವಸ್ತುಗಳನ್ನು ಅಲ್ಲಿ ನೆರೆದ ಭಕ್ತರಿಗೆ ಹಾಗೂ ಬೀದಿಯಲ್ಲಿ ಓಡಾಡುತ್ತಿದ್ದ ಜನರಿಗೆ ಹಂಚಿಸಿ ಬಿಡುತ್ತಿದ್ದರೇ ವಿನಃ ತಾವೇನನ್ನೂ ಸ್ವೀಕರಿಸುತ್ತಿದ್ದಿಲ್ಲ. ಹಾಗೆಯೇ ಕಾರು ಜೀಪುಗಳಲ್ಲಿ ಬರುತ್ತಿದ್ದ ಭಕ್ತರಿಗಿಂತ ಮೊದಲು ಆ ಕಾರಿನ ಚಾಲಕನ ಬೇಕು ಬೇಡಗಳನ್ನು ಪೂರೈಸುತ್ತಿದ್ದರು. ಇದೇಕೆ ಹೀಗೆಂದು ಕೇಳಿದವರಿಗೆ, "ಆಗ ಚಾಲನೆ ಮಾಡಿದ್ದರಿಂದ ತಾನೇ ನೀನು ಇಲ್ಲಿಯವರೆಗೆ ಬಂದಿದ್ದು?" ಎಂದು ಪ್ರಶ್ನಿಸುತ್ತಿದ್ದರು. 

ಆ ನಮ್ಮೊಡೆಯ ಎಂದಿಗೂ ಹಸಿದವರಿಗೆ ಆಧ್ಯಾತ್ಮ-ವೇದಾಂತಗಳನ್ನು ಹೇಳಲಿಲ್ಲ.. ಬದಲಿಗೆ ಪ್ರತಿಯೊಬ್ಬರಿಗೂ ಲೌಕಿಕದ ಕರ್ತವ್ಯದಲ್ಲಿ ನಿರತರಾಗಿರಲು ತಿಳಿಸುತ್ತಿದ್ದರು. 

"ಸ್ವಾಮಿ ಸಾಧನೆ ಮಾಡುವುದು ಹೇಗೆ?" ಎಂಬ ಭಕ್ತರೊಬ್ಬರ ಪ್ರಶ್ನೆಗೆ "ಎಂತದೂ ಇಲ್ಲ ಕಣಯ್ಯಾ. ಮಾಡುವ ಪ್ರತಿ ಕೆಲಸದಲ್ಲೂ ಗುರುವನ್ನೇ ಕಾಣತೊಡಗು ಸಾಕು. ಆಗ ಪ್ರತಿ ಕೆಲಸದಲ್ಲೂ ಶ್ರದ್ಧೆ, ನಿಷ್ಠೆ, ಪರಿಪೂರ್ಣತೆ ಸಾಧ್ಯವಾಗುತ್ತದೆ ಹಾಗೂ ನಮ್ಮ ಮನಸ್ಸು ದುರಾಲೋಚನೆಗಳಿಗೆ ಬಲಿಯಾಗುವುದಿಲ್ಲ" ಎಂದಿದ್ದರು. 

ಹಾಗೆಯೇ ಸಮಸ್ಯೆಗಳನ್ನು ಹೊತ್ತು ಬರುತ್ತಿದ್ದ ಭಕ್ತರ ಮನದಿಂಗಿತವನ್ನು ಅರಿತು ಆರ್ಥಿಕವಾಗಿ, ಸಾಮಾಜಿಕವಾಗಿ ಬಸವಳಿದಿದ್ದವರನ್ನು ಮೊದಲು ಮಾತನಾಡಿಸಿ ಕಳಿಸುತ್ತಿದ್ದರು. ಒಮ್ಮೆ ನಾನು ಅದೇಕೆ ಹೀಗೆ ಎಂಬ ಭಾವದಿಂದ ದಿಟ್ಟಿಸಿ ನೋಡಲು ಗುರುನಾಥರು "ಏನಿಲ್ಲಯ್ಯಾ....... ನನ್ನಿಂದ ಏನೋ ಸಹಾಯವಾಗುತ್ತೆ ಅಂತ ಒಂದು ದಿನದ ಕೆಲಸಬಿಟ್ಟು ಬಂದಿರ್ತಾರೆ. ಅಂತಹವರಿಗೆ ಮೊದಲು ಸಹಾಯವಾಗ್ಬೇಕು ಕಣಯ್ಯಾ...... " ಎಂಬ ಮಾತು ಅವರ ಸಾಮಾಜಿಕ ಕಳಕಳಿಯ ಪ್ರತೀಕವೆನಿಸಿದೆ. 

ಹಾಗೆಯೇ ಮತ್ತೊಮ್ಮೆ ಗುರುವಿನ  ಮಹತ್ವವನ್ನು ವಿವರಿಸುತ್ತಾ "ಗುರು ಅಂದ್ರೆ ಗುರು ಅಷ್ಟೇ.... ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕಾದ್ರೆ ಗುರು ಕೃಪೆಯಿಂದ ಮಾತ್ರ ಸಾಧ್ಯ. ಹಾಗೆಯೇ ಕುಟುಂಬದಲ್ಲಿ ಒಬ್ಬ ಸನ್ಯಾಸಿಯಾದರೆ ಆತನ ತಂದೆಯ ಕಡೆಯ ಹನ್ನೆರಡು ತಲೆಮಾರು, ತಾಯಿ ಕಡೆಯ ಎಂಟು ತಲೆಮಾರು ಹಾಗೂ ಗುರುವಿನ ಮೂರು ತಲೆಮಾರು ಇರತಕ್ಕ ಕರ್ಮಗಳೆಲ್ಲ ಕ್ಷಯವಾಗುವುದು" ಎಂದರು. ಮತ್ತು ಮುಂದುವರೆದು "ಪ್ರತಿ ತಿಂಗಳು ದ್ವಾದಶಿಯಂದು ಗುರುದರ್ಶನ ಹಾಗೂ ಭಿಕ್ಷಾವಂದನೆ ನೀಡಿದರೆ ನಮ್ಮ ಹದಿನಾರು ತಲೆಮಾರು ಹೊಂದಿರುವ ಕರ್ಮಗಳೆಲ್ಲಾ ಕ್ಷಯವಾಗುವುದು" ಎಂದರು. 

ಅಂತಹ ಗುರುವಿನ ಒಂದು ದೃಷ್ಟಿ ಬಿದ್ರೆ ಸಾಕು. ಆ ಗುರುವಿಗೆ ಎಂದಿಗೂ ಭಾರ ಕೊಡಬಾರದು ಕಣಯ್ಯಾ ... ಎನ್ನುತ್ತಿದ್ದರು..... ,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 
 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Tuesday, October 25, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 21

 

     ಗುರು ಒಂದು ಅನುಭವ 

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಒಂದು ದಿನ ಬೆಳಿಗ್ಗೆ ಎಂದಿನಂತೆ 5.30 ಕ್ಕೆ ಎದ್ದ ಚರಣದಾಸನಾದ ನಾನು ಹಾಲು ಕರೆದು, ಹೂ ಕೊಯ್ಯಲು ಅಣಿಯಾಗುತ್ತಿದ್ದೆ. ಆಗ ಯಾರೋ ಬಾಗಿಲು ಬಡಿದಂತಾಗಿ ಹೊರಬಂದೆ. ಗುರುನಾಥರು ಆ ವ್ಯಕ್ತಿಯನ್ನು ಇನ್ನೂ ನೋಡಿಯೇ ಇರಲಿಲ್ಲ. ಆದರೂ ಬಾಗಿಲು ತೆಗೆದು ಒಳ ಬರಹೇಳು ಎಂದರು. ನಾನು ಅಂತೆಯೇ ಮಾಡಿದೆ. ಕೂಡಲೇ ಆ ವ್ಯಕ್ತಿಗೆ ಕಾಫಿ ಕೊಡಲು ಹೇಳಿದರು. ನಂತರ ಹೋಟೆಲ್ ನಿಂದ ತಿಂಡಿ ತರಿಸಿ ನೀಡಿದರು. 

ಆ ವ್ಯಕ್ತಿ ಜೀವನದಲ್ಲಿ ಹಲವು ಪರೀಕ್ಷೆ, ಆರ್ಥಿಕ ಸಂಕಷ್ಟಗಳನ್ನೆದುರಿಸಿ ಹೈರಾಣಾಗಿ ಒಮ್ಮೆ ಗುರುನಾಥರನ್ನು ದರ್ಶನ ಮಾಡಿ ಹೋಗಲು ಬಂದಿದ್ದರು. ನಂತರ ಆ ವ್ಯಕ್ತಿಯನ್ನು ವಿಚಾರಿಸಲಾಗಿ ಆತ ತನ್ನ ದಾರಿದ್ರ್ಯ ನಿವಾರಣೆಗಾಗಿ ಕೈಯಲ್ಲಿ ಬಿಡಿಗಾಸು ಇಲ್ಲದೇ ಸುಮಾರು ನಲವತ್ತು ಕಿಲೋಮೀಟರ್ ದೂರವನ್ನು ರಾತ್ರಿ ಈಡೀ ನಡೆದು ಬಂದು ಗುರುನಿವಾಸಕ್ಕೆ ಬಂದಿದ್ದರು. 

ಇದನ್ನು ಕಂಡು ಕರಗಿದ ಗುರುನಾಥರು "ಇನ್ನು ಜೀವನದಲ್ಲಿ ನೀನು ಗೆದ್ದೆ ಕಣಪ್ಪಾ. ಫೋಟೋ ಸ್ಟುಡಿಯೋ ಆರಂಭಿಸು. ಒಳ್ಳೆಯದಾಗುವುದು" ಎಂದು ಹೇಳಿ ಕಳಿಸಿದರು. ಆ ನಂತರ ಗುರು ವಾಕ್ಯದಂತೆಯೇ ಆ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸಿತು. 

ಗುರುನಾಥರು ಫೋಟೋ, ವಿಡಿಯೋ ತೆಗೆಯುವಿಕೆಯನ್ನು ಒಪ್ಪುತ್ತಿರಲಿಲ್ಲ. ಅನುಮತಿ ಪಡೆದು ಬೇಕಾದಲ್ಲಿ ತೆಗೆಯಬಹುದಿತ್ತು. ಆದರೆ ಅನುಮತಿ ಸಿಗುವುದೇ ವಿರಳವಾಗಿತ್ತು. ಗುರುನಾಥರು ಸಾಮಾನ್ಯವಾಗಿ ಎಲ್ಲರಿಂದ ಮೈ ಮುಟ್ಟಿಸಿಕೊಳ್ಳುವುದಾಗಲಿ ಅಥವಾ ಜೊತೆಗಿರಿಸಿಕೊಳ್ಳುವುದಾಗಲೀ ಮಾಡುತ್ತಿರಲಿಲ್ಲ. 

ಅಂದು ಗುರುನಾಥರು ಕುರ್ಚಿ ಮೇಲೆ ಕುಳಿತು ಮಾತನಾಡುತ್ತಿದ್ದರು. ಆಗ ಒಳ ಬಂದ ಅದೇ ವ್ಯಕ್ತಿ ಗುರುನಾಥರ ಅನುಮತಿ ಕೇಳದೆಯೇ ಗುರುನಾಥರ ಫೋಟೋ ತೆಗೆದನು. ಇದನ್ನು ಕಂಡು ಗೊಂದಲಗೊಂಡು ಗುರುನಾಥರು "ಯಾರನ್ನು ಕೇಳಿ ಫೋಟೋ ತೆಗೆದೆ?. ಅನುಮತಿ ಇರದೇ ಇಂತಹ ಕೆಲಸ ಮಾಡಬೇಡಿ. ನೀ ಬದುಕುತ್ತೀಯೋ ಇಲ್ಲವೋ ಗೊತ್ತಿಲ್ಲ. ತೊಂದರೆ ಮಾಡ್ಕೊತೀಯಾ" ಎಂದು ಗುಡುಗಿದರು. ಇದರಿಂದ ಆ ವ್ಯಕ್ತಿ  ಬೆವತು ಹೋದನು. 

ಅದಾಗಿ ಕಾಲ ದಿನಗಳ ನಂತರ ಬೆಂಗಳೂರಿನಿಂದ ಕೆಲವು ಗುರು ಬಂಧುಗಳು ಬಂದಿದ್ದರು. ಆ ವ್ಯಕ್ತಿಯೂ ಜೊತೆಗೆ ಬಂದಿದ್ದನು. ಗುರುನಾಥರು ಎಲ್ಲರನ್ನು ಶೃಂಗೇರಿಗೆ ಹೋಗಿ ಗುರುದರ್ಶನ ಮಾಡಿ ಬನ್ನಿರೆಂದು ಕಳಿಸಿದರು. ಅವರಲ್ಲಿ ಬಾಣಾವರದಿಂದ ಬಂದ ವ್ಯಕ್ತಿಯೊಬ್ಬನಿಗೆ "ನೀನು ಶೃಂಗೇರಿಯಲ್ಲೇ ಕೆಲಕಾಲ ಇರಬೇಕೆಂದೂ ಯಾವುದೇ ಕಾರಣಕ್ಕೂ ಯಾವುದೇ ಕಾರನ್ನು ಹತ್ತಬೇಡ" ಎಂದು ತಿಳಿಸಿದರು

ಅವರೆಲ್ಲರೂ ಜಗದ್ಗುರುಗಳ ದರ್ಶನ ಮಾಡಿ ಅಲ್ಲಿಂದ ಹೊರಟರು. ಬಾಣಾವರದ  ಆ ವ್ಯಕ್ತಿ ಗುರುವಾಕ್ಯವನ್ನು ಹಗುರವಾಗಿ ಪರಿಗಣಿಸಿ ಬೆಂಗಳೂರಿನಿಂದ ಬಂದ ಕಾರಿನಲ್ಲಿ ವಾಪಸ್ ಹೊರಟನು. ಜೊತೆಗೆ ಅಂದು ಫೋಟೋ ತೆಗೆದ ಆ ವ್ಯಕ್ತಿಯೂ ಅದೇ ಕಾರಿನಲ್ಲಿದ್ದರು. 

ಕಾರು ಆಲ್ದೂರಿಗಿಂತ ಸ್ವಲ್ಪ ಹಿಂದೆ ಬರುತ್ತಿರುವಾಗ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು ನೂರು ಅಡಿ ಪ್ರಪಾತಕ್ಕೆ ಐದು ಬಾರಿ ಉರುಳಿ ಬಿತ್ತು. 

ಭಕ್ತರು ಮೈ ಮರೆಯಬಹುದು. ಆದರೆ, ನಿಜವಾದ ಗುರು ಕೈ ಬಿಡುವುದುಂಟೆ? ಕಾರಿನಲ್ಲಿದ್ದ ಎಲ್ಲರಿಗೂ ಕೇವಲ ತರಚಿದ ಗಾಯಗಳಾಗಿತ್ತು. ಎಲ್ಲರೂ ಕಾರಿನಿಂದ ನುಸುಳಿ ಹೊರಬಂದು ಪರಿಚಿತ ವ್ಯಕ್ತಿಯೋರ್ವರಿಗೆ ಕರೆ ಮಾಡಿ ಬೇರೆ ವಾಹನದಲ್ಲಿ ಊರು ತಲುಪಿದರು.

ಆ ವಿಷಯ ತಿಳಿದ ಗುರುನಾಥರು ಅಂದು ಫೋಟೋ ತೆಗೆದ ಆ ವ್ಯಕ್ತಿಯನ್ನು ಕರೆದು "ಇಂದಿಗೆ ಜೀವ ಉಳಿಸಿದ್ದೀನಿ. ಮುಂದೆಂದೂ ಅನುಮತಿ ಇರದೇ ಫೋಟೋ ತೆಗೆಯಬೇಡ ತಿಳೀತಾ..... " ಎಂದರು. ಆತ ತಲೆ ಬಾಗಿ ನಮಸ್ಕರಿಸಿದನು.
ಅಂದಿನಿಂದ ಬಾಣಾವರದ ಆ ವ್ಯಕ್ತಿಗೆ ಗುರುವಾಕ್ಯವನ್ನು ಧಿಕ್ಕರಿಸಿದ ಪರಿಣಾಮ ಮೊದಲಿನಂತೆ ಗುರುನಿವಾಸಕ್ಕೆ ಬರಲು ಸಾಧ್ಯವಾಗಲಿಲ್ಲ. "ವಸ್ತು, ವ್ಯಕ್ತಿಗಳ ಬೆಲೆ ಇರುವಾಗ ತಿಳಿಯೋಲ್ಲಪ್ಪ. ಅದು ಇಲ್ಲವಾದಾಗ ಇರುವಿಕೆಯ ಬೆಲೆ ಅರಿವಾಗುವುದು" ಎಂಬ ಹಾಗೂ "ಗುರುವೆಂದು ಕರೆಯಬೇಡ. ಕರೆದ ಮೇಲೆ ಗುರುವಾಕ್ಯ ನಡೆಸಲು ಸಿದ್ಧವಾಗಿರು" ಎಂಬ ಗುರುಗಳ ಮಾತು ಇಂತಹ ಘಟನೆಗಳನ್ನು ನೋಡಿದಾಗ ಸದಾ ನೆನಪಾಗುತ್ತದೆ.

ಗುರು ಹಿರಿಯರ ಸೇವೆ 

ಒಮ್ಮೆ ಗುರುನಾಥರಲ್ಲಿ ಓರ್ವ ವೃದ್ಧರು ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ "ನನ್ನ  ಮಗ ಅಮೇರಿಕಾದಲ್ಲಿ ನೆಲೆಸಿರುವನು. ವಯಸ್ಸಾದ ನಾವು ಇಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ. ನನ್ನ ಹೆಂಡತಿಗಂತೂ ಕೀಲು ಮತ್ತು ಮೂಳೆ ನೋವಿನಿಂದ ಓಡಾಡಲು ಕಷ್ಟವಾಗಿ ಹಾಸಿಗೆ ಹಿಡಿದಿದ್ದಾಳೆ. ನನ್ನ ಆರೋಗ್ಯ ಅಷ್ಟೊಂದು ಸರಿ ಇಲ್ಲ. ನಮ್ಮನ್ನು ನೋಡಿಕೊಳ್ಳುವವರು  ಇಲ್ಲಿ ಇಲ್ಲ.  ಹೀಗಾಗಿ ಈಗ ನಮ್ಮ ಮಗ ವಾಪಸ್ಸು ಬೆಂಗಳೂರಿಗೆ ಬಂದು ನಮ್ಮ ಜೊತೆ ಉಳಿದರೆ ವಯಸ್ಸಾದ ನಮಗೆ ಬಹಳ ಉಪಕಾರವಾದಂತೆ ಆಗುತ್ತದೆ. ಅವನು ಬೆಂಗಳೂರಿಗೆ ಬರುವ ಹಾಗೆ ಏನಾದರೂ ತಾವು ಅವನಿಗೆ ಮನಸ್ಸು ಬರುವಂತೆ ಮಾಡಬೇಕು" ಎಂದು ವಿನಂತಿಸಿಕೊಂಡರು.

ಸುಮ್ಮನೆ ಆಲಿಸಿದ ಗುರುನಾಥರು "ಹೌದು. ಇದರಲ್ಲಿ ನಿಮ್ಮ ಮಗನದೇನೂ ತಪ್ಪಿಲ್ಲವಲ್ಲ. ನಿಮ್ಮ ಆಸೆಯಂತೆ ಆತ ಅಲ್ಲಿ ಹೋಗಿ ನೆಲೆಸಿದ್ದಾನೆ. ನಿಮಗೆ ಇರಲು ಮನೆ, ಹಣ ಎಲ್ಲವೂ ಇದೆಯಲ್ಲಾ. ಈಗ ಅವನು ಏಕೆ ಬೇಕು?" ಎಂದರು. ಸ್ವಲ್ಪ ಗಲಿಬಿಲಿಗೊಂಡ ಆ ವೃದ್ಧರು ಅರ್ಧವಾಗದವರಂತೆ ಸುಮ್ಮನೆ ಕಣ್ಣು ಕಣ್ಣು ಬಿಡುತ್ತಾ ನಿಂತರು. "ಅಲ್ಲಪ್ಪಾ, ನೀವು ನಿಮ್ಮ ಮಗನಿಗೆ ನೀನು ಚೆನ್ನಾಗಿ ಓದಬೇಕು. ದೊಡ್ಡ ಕೆಲಸ ಹಿಡಿಯಬೇಕು, ಅಮೆರಿಕಾಕ್ಕೆ ಹೋಗಿ ಲಕ್ಷಾಂತರ ದುಡ್ಡು ಸಂಪಾದನೆ ಮಾಡಬೇಕು ಎಂದೆಲ್ಲ ಹೇಳಿದವರು ನೀವೇ ಅಲ್ಲವೇ?. ಈಗ ಅವನು ನೀವು ಹೇಳಿದಷ್ಟನ್ನು ಚಾಚೂ ತಪ್ಪದೆ ಮಾಡುತ್ತಿದ್ದಾನೆ. ನಿಮ್ಮ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾನೆ. ಅಮೆರಿಕಾದಲ್ಲಿ ನೆಲೆಸಿದ್ದಾನೆ,  ಚೆನ್ನಾಗಿ ಓದಿದ್ದಾನೆ, ದೊಡ್ಡ ಕೆಲಸ ಹಿಡಿದಿದ್ದಾನೆ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾನೆ, ತಪ್ಪೇನಿದೆ?".

"ಆತನಿಗೆ, ನೀವು ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು, ಗುರು ಹಿರಿಯರ ಸೇವೆ ಮಾಡಬೇಕು ಎಂದು ಯಾವತ್ತೂ ಹೇಳಿಕೊಡಲಿಲ್ಲ ಅಥವಾ ಅದನ್ನು ನೀವು ಎಂದು ನಿಮ್ಮ ಹಿರಿಯರಿಗೆ ಮಾಡಿ ತೋರಿಸಲಿಲ್ಲ. ವಾಸ್ತವ ಹೀಗಿರಬೇಕಾದರೆ ನಿಮ್ಮ ಮಗ ಕಲಿಯುವುದಾಗಲಿ ಅಥವಾ ಮಾಡುವುದಾಗಲಿ ಹೇಗೆ? ಅಲ್ಲವೇ ಸಾರ್ ? ನೀವು ಏನು ಹೇಳಿ ಕೊಟ್ಟಿದ್ದೀರೋ ಅದನ್ನು ಅವನು ಮಾಡುತ್ತಿದ್ದಾನೆ. ಅವನು ನಿಮ್ಮ ಮಗ ಅಲ್ಲವೇ ಸಾರ್? ಮಾಡಲಿ ಬಿಡಿ, ಈಗ ಯಾವ ಮಂತ್ರ ತಂತ್ರವೂ ಅವನನ್ನು ಬರುವ ಹಾಗೆ ಮನಸ್ಸು ಕೊಡಲು ಸಾಧ್ಯವಾಗುವುದಿಲ್ಲ. ಭಗವಂತನನ್ನು ಬೇಡಿಕೊಳ್ಳಿ. ಭಗವಂತ ಅವನಿಗೆ ಮನಸ್ಸು ಕೊಟ್ಟರೆ ಕೊಡಬಹುದು" ಎಂದು ನಸುನಗುತ್ತಾ ಹೇಳಿ ಅವರನ್ನು ಕಳುಹಿಸಿಕೊಟ್ಟರು. 

ಹೌದು. ಇಲ್ಲಿ ನಾವು ಚಿಂತನೆ ಮಾಡಬೇಕಾದುದನ್ನು ಗುರುನಾಥರು ಅವರ ಮೂಲಕ ನಮಗೆಲ್ಲ ಒಂದು ಪಾಠ ಹೇಳಿದ್ದಾರೆ. ನಾವು ನಮ್ಮ ಮಕ್ಕಳಿಗೆ ಯಾವುದನ್ನು ಹೇಳಬೇಕು? ಯಾವುದರ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು ? ಮತ್ತು ಹೇಗೆ ಹಿರಿಯರ ಸೇವೆ ಮಾಡಬೇಕು ಎನ್ನುವುದನ್ನು ನಾವೇ ಮಾಡಿ  ತೋರಿಸಬೇಕು. ಎಳೆಯ ವಯಸ್ಸಿನಲ್ಲಿಯೇ ನೋಡಿ ಕಲಿತ ಇಂತಹ ವಿಚಾರಗಳು ಮನಸ್ಸಿನ ಆಳದಲ್ಲಿ ಗಟ್ಟಿಯಾಗಿ ಉಳಿಯುತ್ತವೆ. ಆ ನಂತರ ಹೆಚ್ಚಿನ ಅಂಶ ಮಕ್ಕಳು ಪಾಲನೆ ಮಾಡುತ್ತಾರೆ. ಇಷ್ಟರ ಮೇಲೂ ಮಕ್ಕಳು ಅಪ್ಪ ಅಮ್ಮನ ಮತ್ತು ಗುರು ಹಿರಿಯರ ಸೇವೆಯನ್ನು ವೃದ್ಧಾಪ್ಯದಲ್ಲಿ ನಿರ್ವಹಿಸಲಿಲ್ಲ ಎಂದರೆ ಅದು ಅವರವರ ಪ್ರಾರಬ್ಧ ಕರ್ಮವೆಂದೇ ಹೇಳಬೇಕಾಗುತ್ತದೆ, ಅಲ್ಲವೇ? ....... , , , , , , , ,

 
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 
 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Monday, October 24, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 20

 

    ಎರಡು ದೇಹ 

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಈ ಘಟನೆ ಮೊದಲು ನಡೆದದ್ದು ಚರಣದಾಸನಾದ ನಾನು ಗುರುನಿವಾಸಕ್ಕೆ ಬಂದ ಮೊದಲ ದಿನಗಳಲ್ಲಿ ಗುರುನಾಥರು ಊರಿನಲ್ಲಿದ್ದಾಗ ಅಲ್ಲಿ ಸೌಂದರ್ಯ ಲಹರಿ ಅಭ್ಯಾಸ ಮಾಡುತ್ತಿದ್ದ ಹತ್ತು- ಹನ್ನೆರಡು ಮನೆಗಳಿಗೆ ಬೆಳಿಗ್ಗೆ ಅಥವಾ ಯಾವಾಗಲಾದರೂ ಒಮ್ಮೆ ಹೋಗಿ ಅರಿಶಿನ, ಕುಂಕುಮ, ಹಣ್ಣು, ತಿಂಡಿ ನೀಡಿ ಭಜನೆ ಮಾಡಿಸಿ ಬರುವ ಪರಿಪಾಠವಿದ್ದಿತು.

ಒಮ್ಮೆ ಗುರುನಾಥರು ಭಕ್ತರೊಬ್ಬರ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಆ ಮನೆಯವರ ಪತ್ನಿ "ಯೋಗಿಯ ಆತ್ಮಕಥೆ" ಯಲ್ಲಿ ಬರುವ "ಎರಡು ದೇಹದ ಸಂತ" ಎಂಬ ಕಥೆಯನ್ನು ಓದಿ "ಹೀಗಾಗಲು ಸಾಧ್ಯವೇ?" ಎಂದು ಸಂಶಯ ಹೊಂದಿದ್ದರು ಹಾಗೂ ಆ ಸಂಶಯವನ್ನು ಅಲ್ಲಿಯೇ ಇದ್ದ ಗುರುನಾಥರ ಮುಂದೆ ಹೇಳಿದರು. 

ಆಗ ಆಕೆಯನ್ನು ಕರೆದ ಗುರುನಾಥರು ಸಖರಾಯಪಟ್ಟಣದಲ್ಲಿ ತಾನು ನಿತ್ಯವೂ ಹೋಗುತ್ತಿದ್ದ ಒಬ್ಬರ ಮನೆಗೆ ಕರೆ ಮಾಡಿ ಗುರುನಾಥರು ಇದ್ದಾರಾ? ಎಂದು ವಿಚಾರಿಸುವಂತೆ ತಿಳಿಸಿದರು. ಆಕೆ ಹಾಗೆಯೇ ಕರೆ ಮಾಡಿದರು. ಗುರುನಾಥರು ನಗುತ್ತಾ ಆಕೆಯ ಮನೆಯಲ್ಲಿಯೇ ಕುಳಿತಿದ್ದರು. 

ಅತ್ತಲಿಂದ ಕರೆ ಸ್ವೀಕರಿಸಿದ ಮಹಿಳೆ "ಗುರುಗಳು ಈಗ ತಾನೇ ನಮಗೆಲ್ಲಾ ಹೂವು, ಹಣ್ಣು ನೀಡಿ ಆ ಕಡೆ ಹೋಗ್ತಾ ಇದ್ದಾರೆ, ಕರೆಯಲಾ, ಮಾತಾಡ್ತೀರಾ?" ಎಂದು ಕೇಳಿದರು. ಇತ್ತಲಿದ್ದ ಮಹಿಳೆ ಆಶ್ಚರ್ಯಗೊಂಡು ಆ ವಿಷಯವನ್ನು ಗುರುನಾಥರಿಗೆ ತಿಳಿಸಲು ಗುರುಗಳು "ಸರಿ, ಫೋನ್ ಇಡಮ್ಮಾ" ಎಂದು ತಿಳಿಸಿದರು. ಅಲ್ಲಿಗೆ ಪುಸ್ತಕ ಓದಿ ಆಕೆಯ ಮನದಲ್ಲಿ ಮೂಡಿದ್ದ ಸಂಶಯ ಪರಿಹಾರವಾಗಿತ್ತು. 

ಇನ್ನೊಮ್ಮೆ ಗುರುಗಳಿಗೆ ಕುರುವಾಗಿ ಅವರು ಮಲಗಿದ್ದಲ್ಲಿಂದ ಏಳುವ ಸ್ಥಿತಿ ಇರಲಿಲ್ಲ. ಎತ್ತಿಕೊಂಡೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಸಖರಾಯಪಟ್ಟಣದಿಂದ ಸುಮಾರು ಮೂರೂವರೇ ಗಂಟೆ ಕ್ರಮಿಸುವಷ್ಟು ದೂರದಲ್ಲಿರುವ ಒಂದು ಪ್ರಸಿದ್ಧ ದಟ್ಟ ಕ್ಷೇತ್ರಕ್ಕೆ ಹೋದ ಗುರುನಾಥರು ಆ ದಿನ ಮಧ್ಯಾನ್ಹ ಅಲ್ಲಿ ತಯಾರಾದ ಆಹಾರ ವಿಷಯುಕ್ತವಾಗಿದ್ದು "ದಯಮಾಡಿ ಅದನ್ನು ಬಡಿಸಬೇಡಿ"ಎಂದು ವಿನಂತಿಸಿದರು. 

ಆದರೆ ಅಲ್ಲಿನ ಆಡಳಿತಗಾರರು "ಇಂದು ಎರಡು ಸಾವಿರ ಜನರಿಗೆ ಆಹಾರ ಸಿದ್ಧವಾಗಿದ್ದು ಮತ್ತೊಮ್ಮೆ ತಯಾರಿಸುವುದು ಕಷ್ಟವೆಂದೂ ತಾವು ಹೇಳಿದ ಮಾತನ್ನು ಹೇಗೆ ನಂಬುವುದು?" ಎಂದೂ ಕೇಳಿದರು. ಅದಕ್ಕೆ ಗುರುನಾಥರು ಬೇಕಾದಲ್ಲಿ ನಾಯಿಗೆ ಹಾಕಿ ಪರೀಕ್ಷಿಸಿ ಎನ್ನಲು ಅವರು ಹಾಗೆಯೇ ಮಾಡಿದರು. ಅದನ್ನು ತಿಂದ ನಾಯಿ ಅಸ್ವಸ್ಥಗೊಂಡಿತು. ನಂತರ ಗುರುನಾಥರು ಅಲ್ಲಿಂದ ತೆರಳಿದರು. 

ಕ್ಷೇತ್ರದ ಘನತೆ ಕಾಪಾಡಿದ ಗುರುನಾಥರಿಗೆ ಒಂದು ಕೃತಜ್ಞತೆಯನ್ನು ತಿಳಿಸಲಿಲ್ಲವಲ್ಲಾ ಎಂದು ಅಲ್ಲಿಂದ ಹೊರಟ ಆಶ್ರಮದ ವ್ಯಕ್ತಿಯೊಬ್ಬರು ನೇರವಾಗಿ ಆಶ್ರಮದಿಂದ ಎಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಗುರುನಾಥರ ಸಂಬಂಧಿಕರ ಮನೆಗೆ ಬಂದು ನಡೆದ  ಘಟನೆಯನ್ನು ವಿವರಿಸಿ "ಎಲ್ಲಿದ್ದಾರೆ ಗುರುನಾಥರು?" ಎಂದು ಕೇಳಿದರು. 

ಇದನ್ನು ಕೇಳಿ ಆಶ್ಚರ್ಯಗೊಂಡ ಅವರ ಬಂಧುಗಳು "ಗುರುನಾಥರು ಕುರುವಾಗಿ ಮಲಗಿದ್ದು ನಡೆಯುವ ಸ್ಥಿತಿಯಲ್ಲಿಯೇ ಇಲ್ಲ. ಅವರು ಊರು ಬಿಡದೆ ಬಹಳ ಕಾಲವಾಯ್ತು. ಇನ್ನು ಇಲ್ಲಿಗೆ ಬರಲು ಅದೆಂತು ಸಾಧ್ಯ" ಎಂದು ಪ್ರಶ್ನಿಸಿದರು. ಇದನ್ನು ಕೇಳಿದ ಆ ವ್ಯಕ್ತಿ ದಿಗ್ಭ್ರಮೆಗೊಂಡರು. ಸರ್ವಶಕ್ತ ಗುರು ಮಾತ್ರವೇ ಇಂತಹ ಘಟನೆಗಳನ್ನು ನಡೆಸಲು ಸಾಧ್ಯ ಅಲ್ಲವೇ? ....... , , , , , , 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 
 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Sunday, October 23, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 19

 

    ಪರಮ ಗುರುಗಳ ಸಮಾಧಿ ದರ್ಶನ ಮಾಡಿ ಬರುವಾಗ ಆದ ಅನುಭವ


ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಒಮ್ಮೆ ಗುರುವಿನ ಅಣತಿಯಂತೆ ನಾವು ಹದಿನೆಂಟು ಮಂದಿ ಸೇರಿ ಆಂಧ್ರಪ್ರದೇಶ ವಿಶಾಖಪಟ್ಟಣದಲ್ಲಿರುವ ಪರಮ ಗುರುಗಳ ಸಮಾಧಿ ದರ್ಶನಕ್ಕೆ ರೈಲಿನಲ್ಲಿ ಹೊರಟೆವು. ದಾರಿಯುದ್ದಕ್ಕೂ ಆಗಾಗ್ಗೆ ಕರೆ ಮಾಡಿಸುತ್ತಿದ್ದ ಗುರುನಾಥರು ಕುಶಲ ವಿಚಾರಿಸುತ್ತಿದ್ದರು. ವಿಶಾಖಪಟ್ಟಣದ ಸಮುದ್ರ ತೀರದಲ್ಲಿರುವ ಪರಮ ಗುರುಗಳ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ರಾತ್ರಿ ರೈಲಿನಲ್ಲಿ ಬಂದು ಕುಳಿತಿದ್ದೂ ಆಯಿತು.

ಆಗ ಕರೆ ಮಾಡಿಸಿದ ಗುರುನಾಥರು "ನಿಮ್ಮಿಂದ ಮುಂದೆ ಕುಳಿತಿರುವ ಐದನೇ ವ್ಯಕ್ತಿ ಕಪ್ಪು ಅಂಗಿ ತೊಟ್ಟಿರುವನು. ಅವನು ಪ್ರಯಾಣಿಕನಲ್ಲ. ಕಳ್ಳತನಕ್ಕಾಗಿ ಬಂದಿರುವನು. ಅವನ ಮೇಲೆ ಕಣ್ಣಿಡಿ. ಅವನನ್ನು ಅಲ್ಲಿಂದ ಕಳಿಸಿ" ಎಂದರು. ಅವರು ಹೇಳಿದ್ದು ನಿಜವಾಗಿತ್ತು. ಆತನಿಗೆ ಆ ಬೋಗಿಯಲ್ಲಿ ಸೀಟು ಇರಲಿಲ್ಲ. ಅವನನ್ನ ಅಲ್ಲಿಂದ ಕಳಿಸಿದೆವು.

ನಂತರ ಮತ್ತೆ ಕರೆ ಮಾಡಿಸಿದ ಗುರುನಾಥರು "ರಾತ್ರಿ ಒಬ್ಬ ಪ್ರಯಾಣಿಕ ಕೈಗೆ ಏಟು ಮಾಡಿಕೊಂಡು ವಿಪರೀತ ಕೂಗುವನು. ರಕ್ತಸ್ರಾವವಾಗುವುದು. ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆ ತಂದಿರಿಸಿಕೊಳ್ಳಿ" ಎಂದರು. ನಾವು ಹಾಗೆಯೇ ಮಾಡಿದೆವು.

ಅಂತೆಯೇ ರಾತ್ರಿ ಕಿಟಕಿಯ ಗಾಜಿನ ಬಾಗಿಲು ಒಬ್ಬ ಪ್ರಯಾಣಿಕನ ಕೈ ಮೇಲೆ ಬಿದ್ದು ಬೆರಳು ಸಿಕ್ಕಿ ಹಾಕಿಕೊಂಡು ವಿಪರೀತ ಕೂಗತೊಡಗಿದನು. ರಕ್ತಸ್ರಾವವಾಗುತ್ತಿತ್ತು. ಆತ ಸಹಾಯಕ್ಕಾಗಿ ಕೂಗುತ್ತಿದ್ದನು. ನಾನು ಅವರಿಂದ ಅಣತಿ ದೂರದಲ್ಲಿದ್ದು ಆಗಲೇ ಆಯಾಸಗೊಂಡಿದ್ದೆ. ಆದ ಕಾರಣ ಈ ಘಟನೆಯನ್ನು ಕಣ್ಣಾರೆ ನೋಡಿದರೂ ಏಳಲು ಮನಸ್ಸಾಗದೆ ಹಾಗೆಯೇ ಮಲಗಿದೆ. ಬಹುಶಃ ನಂತರ ಯಾರೋ ಗುರುಭಕ್ತರು ಅವನಿಗೆ ಚಿಕಿತ್ಸೆ ನೀಡಿದರೆನಿಸುತ್ತದೆ.

"ಒಂದು ಬಾರಿ ಗುರುವೆಂದು ಕರೆದರೆ ನಿಮ್ಮ ಭಾರವೆಲ್ಲ ಗುರುವಿನದಾಗುವುದು ಕಣಯ್ಯಾ. ಗುರು ಸದಾ ನಿಮ್ಮೊಂದಿಗೇ  ಇದ್ದು ಕಾಪಾಡುವನು" ಎಂಬ ಗುರುನಾಥರ ಮಾತು ಈ ಘಟನೆ ನೋಡಿದಾಗ ಸದಾ ನೆನಪಾಗುವುದು.

ಹಾಗೆಯೇ ಒಮ್ಮೆ ನಾನು ಹಾಗೂ ಸಾಧನಾ ಸ್ಥಿತಿಯಲ್ಲಿದ್ದ ಗುರು ಬಂಧುವೊಬ್ಬರು ಗುರು ಭಕ್ತರೋರ್ವರ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರಿನ ಚಕ್ರದೊಳಗಿನಿಂದ ವಿಚಿತ್ರವಾದ ಶಬ್ದ ಬರತೊಡಗಿತು. ಕಾರಿನಲ್ಲಿ ಕಾರಿನ ಮಾಲೀಕ ದಂಪತಿಗಳು, ನಾನು ಹಾಗೂ ಗುರು ಬಂಧು ಹೀಗೆ ಒಟ್ಟು ನಾಲ್ಕು ಜನರಿದ್ದೆವು. ನಾವು ಸಾಗುತ್ತಿದ್ದ ದಾರಿಯಲ್ಲಿ ಯಾವುದೇ ಗ್ಯಾರೇಜುಗಳೂ ಇರಲಿಲ್ಲ ಹಾಗೂ ಕತ್ತಲಾಗಿತ್ತು.

ಆಗ ಕರೆ ಮಾಡಿದ ಗುರುನಾಥರು ಎಲ್ಲರ ಕುಶಲ ವಿಚಾರಿಸಿ ನಂತರ "ಕಾರಿನ ಹಿಂಬದಿಯ ಚಕ್ರದಲ್ಲಿ ಸದ್ದು ಬರ್ತಿದೆ ಅಲ್ವೇ?" ಎಂದರು. ಅದಕ್ಕೆ ನಾ ಹೌದು ಎಂದೆ. ತಕ್ಷಣ ಕರೆ ನಿಲ್ಲಿಸಿದ ಗುರುನಾಥರು ಮತ್ತೆ ಹತ್ತು ನಿಮಿಷದ ನಂತರ ಕರೆಮಾಡಿ ಈಗ ಸದ್ದು ಬರುತ್ತಿಲ್ಲವಲ್ಲಾ?" ಎಂದು ಕೇಳಿದರು. ಅಂತೆಯೇ ಸದ್ದು ಬರುವುದು ನಿಂತಿತ್ತು. ಈ ಘಟನೆಯನ್ನು ಅವಲೋಕಿಸಿದಾಗ "ಗುರುವಿನ ಅರಿವಿಗೆ ಬಾರದ ಜ್ಞಾನ ಇನ್ಯಾವುದಿರಲು ಸಾಧ್ಯ" ಎಂದು ನನಗನಿಸಿತು. 

ಹಾಗೆಯೇ ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ಒಮ್ಮೆ ಬೆಂಗಳೂರಿನಿಂದ ಕರೆ ಮಾಡಿದ ಮಹಿಳೆಯೊಬ್ಬರು ನನಗೆ ಹೀಗೆ ಹೇಳಿದರು: "ಇಂದು  ನನ್ನ ಮಗನಿಗೆ ಹತ್ತು ಇಯತ್ತೆ ಪರೀಕ್ಷೆಯಿರುತ್ತದೆ. ಆದರೆ ಅವನು ವಿಪರೀತ ಕಟ್ಟು ನೋವಿನಿಂದ ಬಳಲುತ್ತಿದ್ದಾನೆ" ಎಂದು ನುಡಿದರು. 

"ಏನಂತಯ್ಯಾ .... ಅವಳದ್ದು?" ಎಂಬ ಗುರುನಾಥರ ಪ್ರಶ್ನೆಗೆ ನಾನು ಆಕೆಯ ಮಗನ ಸಮಸ್ಯೆಯನ್ನು ವಿವರಿಸಿದೆ. ಸುಮ್ಮನೆ ತಲೆಯಾಡಿಸಿದ ಗುರುನಾಥರು ಬೇರೆ ಕೆಲಸದಲ್ಲಿ ಮಗ್ನರಾದರು. 

ಬೆಳಿಗ್ಗೆ ಹತ್ತು ಗಂಟೆಗೆ ನನ್ನನ್ನು ಕರೆದುಕೊಂಡು ಮನೆಯಿಂದ ಅಣತಿ ದೂರದಲ್ಲಿರುವ ಈಶ್ವರ ದೇಗುಲದ ಮುಂದೆ ಬಂದು ಎಂದಿನಂತೆ ಅರಳೀ ಮರದ ಕೆಳಗೆ ಕುಳಿತರು. ತುಸು ಹೊತ್ತಿನ ನಂತರ "ನಮ್ಮ ಇವಳ ಮಗನಿಗೆ ಕತ್ತು  ನೋವು ಅಂದ್ಯಲ್ವಾ? ಹೋಗಿ ಸ್ವಲ್ಪ ತುಂಬೆ ಸೊಪ್ಪು ಕಿತ್ತುಕೊಂಡು ಬಾ" ಅಂದ್ರು. ನಾ ಕಿತ್ತು ತಂದೆ. 

ಗುರುನಾಥರು ಅವರ ಕುತ್ತಿಗೆಗೆ ತುಂಬೆ ಸೊಪ್ಪನ್ನು ಹಚ್ಚಲು ತಿಳಿಸಿದರು. ನಾನು ಅದಕ್ಕೆ "ಏನು ನಿಮ್ಮ ಕುತ್ತಿಗೆಗೆ ಇದನ್ನು ಹಚ್ಚಿದ್ರೆ ಅಲ್ಲಿ ಅವನ ಕಟ್ಟು ನೋವು ವಾಸಿಯಾಗುತ್ತಾ?" ಎಂದು ಅಹಂಕಾರದಿಂದ ಪ್ರಶ್ನಿಸಿದೆ. 

ಅದಕ್ಕೆ ಗುರುನಾಥರು "ಸರಿ, ನಂಗ್ಯಾಕೆ? ನೀನ್ ಕುತ್ತಿಗೆಗೆ ಹಚ್ಕೋ... ಏನ್ ನಡೆಯುತ್ತೆ ನೋಡುವೆಯಂತೆ" ಎಂದರು. ಚರಣದಾಸನಾದ ನಾನು ಸಂಶಯದಿಂದಲೇ ಹಚ್ಚಿಕೊಂಡೆ. 

ಅದಾಗಿ ಬಹುಶಃ ಅರ್ಧ ಗಂಟೆಯಲ್ಲಿ ಬೆಳಿಗ್ಗೆ ಕರೆ ಮಾಡಿದ ಅದೇ ಮಹಿಳೆ ಮತ್ತೆ ಕರೆ ಮಾಡಿ "ನನ್ನ ಮಗನ ಕತ್ತು ನೋವು ವಾಸಿಯಾಗಿದೆ. ಅವನು ಪರೀಕ್ಷೆಗೆ ಹೋಗುತ್ತಿದ್ದಾನೆ" ಎಂದು ಹೇಳಿ ಗುರುಕೃಪೆಯನ್ನು ನೆನೆದು ಭಾವಪರವಶರಾದರು. ನಾನು ಇದೆಂತಹ ವಿದ್ಯೆಯಪ್ಪಾ ಎಂದು ಚಕಿತನಾದೆ.......,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Saturday, October 22, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 18

 

  ಒಂದು ಚಲನಚಿತ್ರದ ಕತೆ

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅವರದು ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ನೆಲೆ ನಿಂತಿದ್ದ ಅವಿಭಕ್ತ ಕುಟುಂಬ. ಅಕ್ಕ ಖ್ಯಾತ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಅವರ ಇಬ್ಬರು ತಮ್ಮಂದಿರು ಚಲನಚಿತ್ರಗಳ ಹಾಡುಗಳ ಧ್ವನಿಮುದ್ರಣ ಹಾಗೂ ಮಾರಾಟ ಕೇಂದ್ರವನ್ನು ಹೊಂದಿದ್ದರು. ಅಂದಿನ ಸ್ಥಿತಿಗೆ ಬರುವ ಮೊದಲು ಹಲವಾರು ತೊಂದರೆಗಳನ್ನು ಎದುರಿಸಿ ಈಗೀಗ ಅನುಕೂಲ ಸ್ಥಿತಿಗೆ ತಲುಪಿದ್ದರು. ಆದರೂ ಸಂಪೂರ್ಣ ಋಣಮುಕ್ತರಾಗಲು ಬಯಸಿದ್ದರು. ಆಗ ಗುರುನಾಥರ ಸಂಪರ್ಕವಿದ್ದ ಓರ್ವ ವ್ಯಕ್ತಿಯ ಸಹಕಾರದಿಂದ ಗುರುನಾಥರ ಸಂಪರ್ಕಕ್ಕೆ ಬಂದರು. 

ಒಮ್ಮೆ ಅವರು ಗುರುನಿವಾಸಕ್ಕೆ ಬಂದಾಗ, ಚಲನಚಿತ್ರ ಮಾಡಬೇಕೆಂಬ ಅವರ ಮನದ ಇಂಗಿತವನ್ನು ಅರಿತ ಗುರುನಾಥರು "ಆಯ್ತು, ನಿನ್ನನ್ನು ಋಣಮುಕ್ತನಾಗಿಸುತ್ತೇನೆ. ನಿಶ್ಚಿಂತೆಯಿಂದ ಇರು" ಎಂದು ತಿಳಿಸಿ ಸಿನಿಮಾ ನಿರ್ಮಾಣ ಮಾಡಲು ಹೇಳಿದರು. 

ಅಣ್ಣ ತಮ್ಮ ಇಬ್ಬರು ಚಲನಚಿತ್ರ  ನಿರ್ಮಾಣಕ್ಕಾಗಿ ರಾಜಸ್ತಾನ್ ಗೆ ತೆರಳಿ ಬಹುಶಃ ಹತ್ತು ದಿನ ಅಲ್ಲೇ ಇದ್ದರು ಎನಿಸುತ್ತದೆ. ಅವರ ಅಕ್ಕ ಗುರುನಾಥರ ಮನೆಯಲ್ಲೇ ಉಳಿದುಕೊಂಡಿದ್ದರು. 

ಪ್ರತಿ ದಿನ ಸಂಜೆ ರಾಜಸ್ಥಾನ್ ಗೆ ಕರೆ ಮಾಡಿಸಿ ಮಾತನಾಡುತ್ತಾ ಅಂದು ನಡೆದ ಘಟನೆ, ಚಲನಚಿತ್ರ ನಿರ್ಮಾಣದ ಬಗ್ಗೆ ಗುರುನಾಥರೇ ಹೇಳುತ್ತಿದ್ದರು. ಇದು ಅವರ ಸೋದರರು ಹಾಗೂ ಅಲ್ಲಿ ನೆರೆದಿದ್ದವರಿಗೂ ಆಶ್ಚರ್ಯ ಉಂಟು ಮಾಡಿತು. ತಾಯಿ ಮಗನ ಭಾವನಾತ್ಮಕ ಸಂಬಂಧಗಳ ಕತೆ ಹೊಂದಿದ್ದ ಆ ಚಲನಚಿತ್ರ ಇಪ್ಪತೈದು ವಾರ ಭರ್ತಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತು. 

ಆ ಚಲನಚಿತ್ರ ನೋಡಿದ ಮತ್ತೋರ್ವ ಖ್ಯಾತ ನಟರು "ಈ ಚಲನಚಿತ್ರದ ಪ್ರತಿ ಹಂತದಲ್ಲೂ ಯಾವುದೋ ಕಾಣದ ಅಗೋಚರ ಶಕ್ತಿ ಕಂಡುಬರುತ್ತಿದೆ" ಎಂದು ಉದ್ಗರಿಸಿದರು. 

ಆ ಸಿನಿಮಾದಿಂದ ಅವರಿಗೆ ಒಟ್ಟು ಬಹುಶಃ ಹದಿನೆಂಟು ಕೋಟಿಗೂ ಮೀರಿ ಲಾಭವಾಯ್ತು. ನಂತರ ಆ ಸೋದರರು ಸಖರಾಯಪಟ್ಟಣಕ್ಕೆ ಬಂದಾಗ  "ಇನ್ನು ಮುಂದೆ ನಾನು ಹೇಳುವ ತನಕ ಯಾವುದೇ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಕೂಡದು" ಎಂದು ಗುರುನಾಥರು ತಿಳಿಸಿದ್ದರು.

ಈ ಚಲನಚಿತ್ರ ಬಿಡುಗಡೆಗೆ ಮೊದಲು ಚಿತ್ರದ ಪ್ರಥಮ ಪ್ರತಿಯನ್ನು ಅದ್ವೈತ ಪೀಠದ ಶ್ರೀ ಶ್ರೀ ಗಳಿಂದ ಸ್ಪರ್ಶಿಸಿ ಅವರ ಕೃಪಾಶೀರ್ವಾದ ಪಡೆದು ಆನಂತರ ಬಿಡುಗಡೆ ಮಾಡಲು ತಿಳಿಸಿದರು.

ಸಿನಿಮಾ ಯಶಸ್ವಿಯಾದಾಗ "ಅದು ಶ್ರೀ ಶ್ರೀ ಗಳ  ಕೃಪಾಶೀರ್ವಾದದಿಂದ ಕಣಯ್ಯಾ" ಎಂಬ ಗುರುನಾಥರ ಮಾತು "ಎಲ್ಲವೂ ನೀನೇ ಆಗಿ, ಯಾವುದೂ ನೀನಲ್ಲವಾಗಿ ಇರುವುದೇ ನಿಜವಾದ ಗುರುತ್ವ" ಎಂಬ ಅವರ ಮಾತನ್ನು ಹಾಗೂ ವ್ಯಕ್ತಿ ಎಷ್ಟೇ ಶಕ್ತಿವಂತನಾಗಿದ್ದರೂ ವಿನಯವಂತನೂ ಆಗಿರಬೇಕೆಂಬುದನ್ನು ತಿಳಿಸುತ್ತದೆ. 

ಆ ನಂತರ ಯಾವಾಗ ಭರ್ತಿ ಹಣ ಕಾಣಲಾರಂಭಿಸಿತೋ ವ್ಯಕ್ತಿ ಮೈ ಮರೆಯಲಾರಂಭಿಸುವುದು ಸರ್ವೇ ಸಾಮಾನ್ಯ. ಈ ಸೋದರರೂ ಹಾಗೇ ಮಾಡಿದರು. ಮಾತ್ರವಲ್ಲ ಗುರುನಾಥರ ಸಲಹೆಯನ್ನು ಕಡೆಗಣಿಸಿ ಇನ್ನೊಂದು ಚಿತ್ರ ನಿರ್ಮಾಣಕ್ಕೆ ಚಿತ್ರಕತೆ ಸಿದ್ಧ ಮಾಡಿಕೊಂಡು ಕೇವಲ ಆಶೀರ್ವಾದ, ಒಪ್ಪಿಗೆ ಪಡೆಯಲು ಗುರು ನಿವಾಸಕ್ಕೆ ಬಂದರು. 

ಈ ಕುರಿತು ಗುರುನಾಥರು ಒಮ್ಮೆ ನನ್ನಲ್ಲಿ ಹೀಗೆ ಹೇಳಿದ್ದರು. "ಅವರೇ ಎಲ್ಲಾ ತೀರ್ಮಾನ ಮಾಡಿಕೊಂಡು ಕೇವಲ ನನ್ನ ಒಂದು ಮಾತಿಗಾಗಿ ಇಲ್ಲಿಗೆ ಬಂದಿದ್ದಾರಪ್ಪ.... ಅವರ ತೀರ್ಮಾನಕ್ಕೆ ಒಪ್ಪಿ ಸಹಿ ಹಾಕಲು ನಾನೇನು ರಾಜ್ಯಪಾಲನೇನಯ್ಯ ? ಅವರಿಗೆ ನೋವು ಮಾಡಬಾರದೆಂದು ಹೂಂ ಅಂದೆ. ನನಗೇನಯ್ಯ ಕಳಸ ಅಲ್ಲಿ? ಅಲ್ವೇ? ಅಂದಿದ್ರು. 

"ಹರ ಮುನಿದರೆ ಗುರು ಕಾಯಬಲ್ಲ. ಗುರು ಮುನಿದರೆ ಹರನೂ ಕಾಯಲಾರ" ಎಂಬುದಕ್ಕೆ ಸಾಕ್ಷಿ ಎಂಬಂತಿದೆ ಮುಂದಿನ ಘಟನೆ. ಗುರುವಿನ ಅನುಮತಿ ಇರದೇ ಆರಂಭಗೊಂಡ ಆ ಚಲನಚಿತ್ರ ಆರಂಭದಿಂದಲೂ ಕುಂಟುತ್ತಲೇ ಸಾಗಿ ಅವರು ಮೊದಲ ಚಲನಚಿತ್ರದಲ್ಲಿ ಗುರುವಿನ ಅನುಗ್ರಹದಿಂದ ಗಳಿಸಿದ್ದ ಹಣವೆಲ್ಲವನ್ನೂ ಕಳೆದುಕೊಂಡರು. ಮಾತ್ರವಲ್ಲ, ಇಂದು ಬಹುಶಃ ಚಲನಚಿತ್ರರಂಗದಿಂದಲೇ ದೂರವಾಗಿರುವರೆನಿಸುತ್ತದೆ. ಆ ಸೋದರರಿಗೆ ಈ ಸ್ಥಿತಿ ಬರಲು "ಗುರು ವಾಕ್ಯ ಪ್ರಮಾಣವೆಂಬುದನ್ನು ಬದಿಗೊತ್ತಿ ಮೈ ಮರೆತಿದ್ದೆ ಕಾರಣವಲ್ಲವೇ?"........ ,,,,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, October 21, 2016

ಶ್ರೀ ಸದ್ಗುರು ಮಹಿಮೆ   

 

  ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 17

 

  ಸತ್ತ ನಾಯಿಗೆ ಜೀವ

 

ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರು ಸಾಮಾನ್ಯವಾಗಿ ಅವರ ಮನೆಯ ಅಣತಿ ದೂರದಲ್ಲಿರುವ ಈಶ್ವರ ದೇಗುಲದ ಮುಂದಿನ ಅರಳಿ ಮರದ ಕೆಳಗೆ ಕುಳಿತು ಜನರ ಈತಿಬಾಧೆಗಳಿಗೆ ಪರಿಹಾರ ನೀಡುತ್ತಿದ್ದರು. ಕೆಲವೊಮ್ಮೆ ಅದೇ ಅವರ ದರ್ಬಾರ್ ಕೂಡ ಆಗಿರುತ್ತಿತ್ತು. ಊಟ, ಕಾಫಿ, ಎಲ್ಲವೂ ಭಕ್ತಾಧಿಗಳ ಮನೆಯಿಂದ, ಹೋಟೆಲ್ ಗಳಿಂದ ಬರುತ್ತಿತ್ತು.

ಒಮ್ಮೆ ಹೀಗೆ ಕುಳಿತಿದ್ದಾಗ ಒಬ್ಬ ವ್ಯಕ್ತಿ ಬಂದು ಹೀಗೆ ನುಡಿದರು: "ಸ್ವಾಮಿ, ಈಗ ಎಲ್ಲೆಡೆ ಹುಚ್ಚು ನಾಯಿ ಕಾಟ ವಿಪರೀತವಿದೆ. ನಿಮ್ಮ ಮನೆಯ ನಾಯಿಗಳಿಗೂ ಹುಚ್ಚು ನಾಯಿ ಕಡಿಯಬಹುದು.  ನೀವು ಹೂಂ ಅಂದ್ರೆ ಈ ನಾಯಿಗಳಿಗೆ ವಿಷ ಹಾಕಿ ಸಾಯಿಸಿ ಬಿಡ್ತೇನೆ. ಆಗ ತೊಂದರೆ ಇರುವುದಿಲ್ಲ" ಎಂದರು. 

ಸಾಮಾನ್ಯವಾಗಿ ಗುರುನಾಥರು ಇರುವೆಡೆ ನಾಲ್ಕು ನಾಯಿಗಳು ಸದಾ ಇರುತ್ತಿದ್ದವು. ಗುರುನಾಥರು ತೀಕ್ಷ್ಣವಾಗಿ ಆ ವ್ಯಕ್ತಿಯನ್ನೊಮ್ಮೆ ದಿಟ್ಟಿಸಿ ನೋಡಿ "ನಿನ್ನ ಮನಸ್ಸು ಹೇಗೆ ಹೇಳುತ್ತೋ ಹಾಗೆ ಮಾಡಪ್ಪಾ" ಎಂದರು. 

ಕೂಡಲೇ ಆ ವ್ಯಕ್ತಿ ಹೋಟೆಲ್ ನಿಂದ ಅನ್ನ ತಂದು ಅದರೊಂದಿಗೆ ವಿಷಯುಕ್ತವಾದ ಕೀಟನಾಶಕವನ್ನು ಹಾಕಿ ಕಲೆಸಿ, ಆ ನಾಲ್ಕು ನಾಯಿಗಳಿಗೂ ನೀಡಿದನು. ಇದ್ಯಾವುದರ ಅರಿವಿರದ ಆ ನಾಯಿಗಳು ಅದನ್ನು ಚೆನ್ನಾಗಿ ತಿಂದು ಅಲ್ಲೇ ಅರಳಿ ಮರದ ಕೆಳಗೆ ಮಲಗಿದವು. 

ಗುರುನಾಥರು ಅಲ್ಲೇ ಮಲಗಿದರು. ಇದಾಗಿ ಸುಮಾರು ಒಂದು ಗಂಟೆಗಳ ನಂತರ ಎದ್ದ ನಾಯಿಗಳು ಆ ತಿಂದ ಅನ್ನವನ್ನೆಲ್ಲ ವಾಂತಿ ಮಾಡಿಕೊಂಡು ಮೈ ಕೊಡವಿಕೊಂಡು ಹೊರಟವು. ಇದನ್ನು ಕಂಡ ಆ ವಿಷ ಉಣಿಸಿದ ವ್ಯಕ್ತಿ ಹಾಗೂ ಅಲ್ಲಿದ್ದವರು ದಿಗ್ಭ್ರಮೆಗೊಂಡರು. 

ಆಗ ಗುರುನಾಥರು "ಹುಟ್ಟಿಸಿದ ಆ ಸೃಷ್ಟಿಕರ್ತನಿಗೆ ಮಾತ್ರ ಸಾಯಿಸುವ ಅಧಿಕಾರವಿರುತ್ತೆ ಕಣಯ್ಯಾ. ನಿನ್ನಿಚ್ಛೆಯಂತೆ ಯಾವುದೂ ನಡೆಯೋಲ್ಲ ತಿಳೀತಾ?. ನೀನು ಇಲ್ಲಿಗೆ ಬಂದು ಮಾಡಿದ್ದಾದ್ರೂ ಏನು?" ಎಂದು ಕೇಳಿದಾಗ ಆ ವ್ಯಕ್ತಿ ನಿರುತ್ತರರಾದರು. 

ನಂತರ ಆ ವ್ಯಕ್ತಿ ತಾವೊಂದು ಬಾವಿ ತೋಡಿಸಬೇಕೆಂದೂ , ಎಲ್ಲಿ ತೋಡಿಸಿದರೆ ಎಷ್ಟು ಅಡಿ ಆಳದಲ್ಲಿ ನೀರು ಬರುವುದೆಂದು ಕೇಳಲು ಗುರುನಾಥರು ಅದಕ್ಕುತ್ತರ ನೀಡಿ ಒಂದು ದೊಡ್ಡ ಕಲ್ಲನ್ನು ನೀಡಿ "ಇದನ್ನು ಆ ಬಾವಿಯೊಳಗೆ ಹಾಕು. ನಿನ್ನ ಜೀವ ಉಳಿಸುತ್ತೆ" ಅಂದರು. 

ಅಲ್ಲಿಂದ ಹೊರಟ ಆ ವ್ಯಕ್ತಿ ಗುರುನಾಥರು ಅಂದಂತೆಯೇ ಆ ಕಲ್ಲನ್ನು ತಾನು ತೊಡಿಸುತ್ತಿದ್ದ ಬಾವಿಯೊಳಗೆ ಹಾಕಿದರು. 

ಒಮ್ಮೆ ತಾವು ತೋಡಿಸಿದ ಬಾವಿಗಿಳಿದ ಅವರು ನೀರು ಎಷ್ಟು ಬರುತ್ತಿದೆ ಎಂದು ವೀಕ್ಷಿಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ನೀರಿನ ಹರಿವು ಜಾಸ್ತಿಯಾಗಿ ಮುಳುಗಿ ಹೋಗುವ ಸ್ಥಿತಿ ನಿರ್ಮಾಣವಾಯಿತು. ಆಗ ಗುರುನಾಥರು ಅಂದು ನೀಡಿದ್ದ ಕಲ್ಲಿನ ಮೇಲೆ ಕಾಲಿಟ್ಟು ಮೇಲೇರಿ ಬಂದು ತನ್ನ ಜೀವ ಉಳಿಸಿಕೊಂಡರು. 

ಈ ಘಟನೆಯನ್ನು ನೋಡಿದಾಗ "ಯಾರನ್ನೂ  ಯಾವ ರೀತಿಯಲ್ಲಿಯೂ ನಿರ್ದೇಶನ ಮಾಡುವ ಹಕ್ಕು ನಿನಗಿಲ್ಲ. ಯಾರಾದರೂ ಮಾಡುತ್ತಿರುವ ಕೆಲಸದಲ್ಲಿ ನಿನ್ನ ಮೂಗು ತೂರಿಸಬೇಡ ಮತ್ತು ಸೃಷ್ಠಿಸುವ ಅರ್ಹತೆ ನಿನಗಿಲ್ಲವೆಂದ ಮೇಲೆ ಸಾಯಿಸುವ ಅಧಿಕಾರವೂ ನಿನಗಿಲ್ಲ" ಎಂಬ ಗುರುನಾಥರ ಮಾತು ನೆನಪಿಗೆ ಬರುತ್ತದೆ.......,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Thursday, October 20, 2016

ಶ್ರೀ ಸದ್ಗುರು ಸ್ತೋತ್ರಗಳು 

 

ಶ್ರೀ ದಕ್ಷಿಣಾಮೂರ್ತಿ 

 

 


ವಿದ್ಯಾರೂಪೋ ಮಹಾಯೋಗೀ ಶುದ್ಧಜ್ಞಾನೀ ಪಿನಾಕಧೃತ್ ।
ರತ್ನಾಲಂಕಾರ ಸರ್ವಾಂಗಹ  ರತ್ನಮೌಳಿ ಜಟಾಧಾರಃ ।।
ಗಂಗಾಧರೋ ಅಚಲವಾಸೀ ಮಹಾಜ್ಞಾನೀ ಸಮಾಧಿಕೃತ್ ।
ಅಪ್ರಮೇಯೋ ಯೋಗನಿಧಿಹಿ ತಾರಕೋ ಭಕ್ತವತ್ಸಲಃ ।।


ಶ್ರೀ ದತ್ತಾತ್ರೇಯರು

 


ದತ್ತಾತ್ರೇಯೋ ದೇವದತ್ತೋ ಬ್ರಹ್ಮದತ್ತಸ್ತಥೈವ ಚ |
ಆತ್ರೇಯೋ ಅತ್ರಿದತ್ತಶ್ಚ ಸಿದ್ಧಿದಃ ಸಿದ್ಧಿಸೇವಿತಃ ||
ವಿಷ್ಣುದತ್ತೋಽತ್ರಿವರದಃ ಗುರುಗಮ್ಯೋ ಗುರುಸ್ತಥಾ |
ಶಿವದತ್ತೋನಸೂಯಶ್ಚ ಧರ್ಮೋ ಧರ್ಮಪರಾಯಣಃ ||


ಶ್ರೀ ವೇದವ್ಯಾಸ



ಶ್ರುತಾನಿ ದೇವದೇವೇಶ ಪುರಾಣಾನಿ ಮಯಾಽನಘ |
ತ್ವಂ ಪ್ರಸಾದಾದ್ವದೇದಾನೀಂ ಶ್ರೋತುಂ ಕೌತೂಹಲಂ ಹಿ ಮೇ ||
ವಾಸುದೇವೋ ಜಗನ್ನಾಥಃ ಪಾರಾಶರ್ಯಸ್ತಪೋಧನಃ |
ವೇದವೇದಾಂಗತತ್ತ್ವಜ್ಞಃ ಪುರಾಣಪುರುಷೋತ್ತಮಃ ||



ಶ್ರೀ ಆದಿ ಶಂಕರಾಚರ್ಯರು 



ಶ್ರೀ ಶಂಕರಾಚಾರ್ಯವರ್ಯೋ ಬ್ರಹ್ಮಾನಂದಪ್ರದಾಯಕಃ |
ಅಜ್ಞಾನತಿಮಿರಾದಿತ್ಯಃ ಸುಜ್ಞಾನಾಂಬುಧಿಚಂದ್ರಮಾಃ ||
ವರ್ಣಾಶ್ರಮಪ್ರತಿಷ್ಠಾತಾ ಶ್ರೀಮಾನ್ ಮುಕ್ತಿಪ್ರದಾಯಕಃ |
ಶಿಷ್ಯೋಪದೇಶನಿರತಃ ಭಕ್ತಾಭೀಷ್ಟಪ್ರದಾಯಕಃ ||


ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳು 

 





ಶ್ರೀ ಶಂಕರಾಚಾರ್ಯನವಾವತಾರಃ ಶ್ರೀ ಶಂಕರಾನುಗ್ರಹಲಬ್ಧವಿದ್ಯಃ |
ಶ್ರೀ ಚಂದ್ರಮೌಳೀಶನಿವೇಶಿತಾತ್ಮಾ ಶ್ರೀ ಸಚ್ಚಿದಾನಂದಶಿವಾಭಿದಾನಃ ||
ಶ್ರೀ ಶೃಂಗಪುರಪೀಠೇಶಃ ಶ್ರೀವಿದ್ಯಾಜಪತತ್ಪರ |
ಶ್ರೀ ನೃಸಿಂಹಗುರುಭ್ರಾಜತ್ಕರಾಂಭೋರುಹಸಂಭವಃ ||




ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು 

 


ಶ್ರೀ ಶೃಂಗರಪುರಪೀಠೇಶಃ ಶ್ರೀ ವಿದ್ಯಾಜಪತತ್ಪರಃ |
ಸುನಂದನಾಶ್ವಯುಕ್ಕಷ್ಣಮಘಕ್ಪೈರ್ಯಕಾದಶೀಭವಃ ||
ಪ್ಲವಾಬ್ಧಸಿತಮಾಘೀಯಪಂದಮೀಪ್ರಾಪ್ತಮೌಂಜಿಕಃ |
ಪರಿಧಾವೀಶರಚ್ಚೈತ್ರಪ್ರಾಪ್ತತುರ್ಯಾಶ್ರಮಕ್ರಮಃ ||




ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳು 

 


ವಿವೇಕಿನಾಂ ಮಹಾಪ್ರಾಜ್ಞಾನ್ ಘ್ನಂ |
ಧೈರ್ಯೋ ಧಾರ್ಯ ಕ್ಷಮಾನಿಧಿಃ ||
ಸದಾಭಿನವ ಪೂರ್ವಂತಂ |
ವಿದ್ಯಾತೀರ್ಥ ಗುರುಂ ಭಜೆ ||
 


ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮಿಗಳು

 


ಭಾರತೀ ಕರುಣಾ ಪಾತ್ರಂ |
ಭಾರತೀ ಪದ ಭೂಷಣಂ ||
ಭಾರತೀ ಪರಮಾರೂಢಂ |
ಭಾರತೀ ತೀರ್ಥಮಾಶ್ರಯೇ ||

ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು




ವಿದ್ಯಾವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ |
ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ ||



ಗುರು ಪಾದುಕಾ ಸ್ತೋತ್ರಮ್




ಅನಂತಸಂಸಾರ ಸಮುದ್ರತಾರನೌಕಾಯಿತಾಭ್ಯಾಮ್ ಗುರುಭಕ್ತಿದಾಭ್ಯಾಮ್ |
ವೈರಾಗ್ಯಸಾಮ್ರಾಜ್ಯದಪೂಜನಾಭ್ಯಾಂ, ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ಕವಿತ್ವವಾರಾಶಿನಿಶಾಕರಾಭ್ಯಾಮ್ ದೌರ್ಭಾಗ್ಯದಾವಾಂಬುದಮಾಲಿಕಾಭ್ಯಾಮ್ |
ದೂರೀಕೃತಾನಮ್ರ ವಿಪತ್ತತಿಭ್ಯಾಂ, ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ನತಾಯಯೋಃ ಶ್ರೀಪತಿತಾಂ ಸಮೀಯುಃ, ಕದಾಚಿದಪ್ಯಾಶು ದರಿದ್ರವರ್ಯಾಃ |
ಮೂಕಾಶ್ಚ ವಾಚಸ್ಪತಿತಾಂ ಹಿ ತಾಭ್ಯಾಂ, ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ನಾಲೀಕನೀಕಾಶಪದಾಹೃತಾಭ್ಯಾಮ್ ನಾನಾವಿಮೋಹಾದಿನಿವಾರಿಕಾಭ್ಯಾಮ್ |
ನಮಜ್ಜನಾಭೀಷ್ಟತತಿಪ್ರದಾಭ್ಯಾಂ ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ನೃಪಾಲಿಮೌಲಿವ್ರಜರತ್ನಕಾಂತಿಸ್ಸರಿದ್ವಿರಾಜತ್ ಝಷಕನ್ಯಕಾಭ್ಯಾಮ್ |
ನೃಪತ್ವದಾಭ್ಯಾಂ ನತಲೋಕಪಂಕ್ತೇಃ, ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ಪಾಪಾಂಧಕಾರಾರ್ಕ ಪರಂಪರಾಭ್ಯಾಂ, ತಾಪತ್ರಯಾಹೀಂದ್ರ ಖಗೇಶ್ವರಾಭ್ಯಾಮ್ |
ಜಾಡ್ಯಾಬ್ಧಿಸಂಶೋಷಣ ವಾಡವಾಭ್ಯಾಂ, ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ಶಮಾದಿಷಟ್ಕಪ್ರದವೈಭವಾಭ್ಯಾಮ್ ಸಮಾಧಿದಾನೌವ್ರತದೀಕ್ಷಿತಾಭ್ಯಾಮ್ |
ರಮಾಧವಾಂಘ್ರಿಸ್ಥಿರಭಕ್ತಿದಾಭ್ಯಾಂ, ನಮೋ ನಮಃ ಶ್ರೀ ಗುರುವಾದುಕಾಭ್ಯಾಮ್ ||

ಸ್ವಾರ್ಚಾಪರಾಣಾಮಖಿಲೇಷ್ಟದಾಭ್ಯಾಮ್ ಸ್ವಾಹಾಸಹಾಯಾಕ್ಷಧುರಂಧರಾಭ್ಯಾಮ್ |
ಸ್ವಾಂತಾಶ್ಚಭಾವಪ್ರದಪೂಜನಾಭ್ಯಾಂ, ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ಕಾಮಾದಿಸರ್ಪವ್ರಜಗಾರುಡಾಭ್ಯಾಮ್ ವಿವೇಕವೈರಾಗ್ಯನಿಧಿಪ್ರದಾಭ್ಯಾಮ್ |
ಬೋಧಪ್ರದಾಭ್ಯಾಂ ದ್ರುತಮೋಕ್ಷದಾಭ್ಯಾಂ, ನಮೋ ನಮಃ ಶ್ರೀ ಗುರುಪಾದುಕಾಭ್ಯಾಮ್ ||

ಇತಿ ಶ್ರೀ ಶೃಂಗಗಿರಿ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ವಿರಚಿತ ಗುರುಪಾದುಕಾ ಸ್ತೋತ್ರಮ್