ಒಟ್ಟು ನೋಟಗಳು

Tuesday, October 31, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸದ್ಗುರುಕೃಪಯಾ ಏವ
ಅಲ್ಪೋಪಿ ಯಾತಿ ಉನ್ನತಿಂ |
ಶಿಲಾಪಿ ಯಾತಿ ದೈವತ್ವಂ
ಪೂಜಕಾನಾಂ ಪ್ರಭಾವೇಣ ||

ಹೇಗೆ ಪೂಜೆ ಮಾಡುವವರ ಭಕ್ತಿಯ ಕಾರಣದಿಂದ ಕಲ್ಲೂ ಸಹ ದೈವತ್ವವನ್ನು ಪಡೆದು ಕಳಾಪೂರ್ಣವಾಗುವುದೋ ಹಾಗೆಯೇ ಸದ್ಗುರುವಿನ ಸೇವೆ ಮಾಡುವುದರಿಂದ ಅವನ ಕರುಣೆಯನ್ನು ಪಡೆದು ಅಲ್ಪನೂ ಸಹ ಆಧ್ಯಾತ್ಮಿಕವಾಗಿ ಉನ್ನತಿಯನ್ನು ಪಡೆಯುತ್ತಾನೆ...ಪಡೆದು ಧನ್ಯನಾಗುತ್ತಾನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಇದು ಭಾಗ್ಯ ಇದು ಭಾಗ್ಯಾ ಇದು ಭಾಗ್ಯವೋ
ರಚನೆ: ಅಂಬಾಸುತ 


ಇದು ಭಾಗ್ಯ ಇದು ಭಾಗ್ಯಾ ಇದು ಭಾಗ್ಯವೋ
ಸದ್ಗುರುನಾಥನಾ ಸೇವೇ ನಿಜ ಭಾಗ್ಯವೋ ||ಪ||


ಸುಲಭಕ್ಕೆ ದೊರೆಯುವುದಿಲ್ಲಾ
ಅತೀ ಸರಳ ಸೇವೆಯಲ್ಲಾ
ಜನುಮಾಂತರದ ಪುಣ್ಯದ ಹೊರೆ ಹೊತ್ತರಿಲ್ಲಾ
ಗುರುಕಾರುಣ್ಯವೇ ಇದಕೆಲ್ಲಾ ಕಾರಣವಯ್ಯಾ
ಗುರು ನೆನೆಯಯ್ಯಾ ಸದ್ಗುರು ಪರಶಿವನಯ್ಯಾ ||೧||


ಹಣದಡಿಯೊಳಗಿದು ಇಲ್ಲಾ
ಬೇಡಾ ಎಂದವನೇ ಮೂಢಾ
ಭಾವುಕಾ ಭಕುತರಿಗೆ ಗುರು ನೀಡಿದಾ ವರಾ
ಗುರು ಅಂತಃಕರಣ ಹೆತ್ತ ತಾಯಿಗೂ ಮಿಗಿಲಯ್ಯಾ
ಗುರು ನಂಬಿರಯ್ಯಾ ಸದ್ಗುರುವೇ ಶಕ್ತಿಯಯ್ಯಾ ||೨||


ನಾನೆಂಬುವವನಿಗೆ ದೂರಾ
ಗತಿ ನೀನೇ ಎಂಬುದೆ ಸಾರಾ
ಸಖರಾಯಪುರವಾಸನಾ ಮಹಿಮೆ ಅಪಾರಾ
ಅಂಬಾಸುತನಾ ಸದ್ಗುರು ಇವನಯ್ಯಾ
ಇವಗಿಂತ ಮಹಿಮನಾ ಭುವಿಯೊಳೆಲ್ಲೂ ಕಾಣೆನಯ್ಯಾ ||೩||
ಗುರುನಾಥ ಗಾನಾಮೃತ 
ಕಂಡೆ ನಾನೂ ಕಂಡೆ ನಾನೂ
ರಚನೆ: ಅಂಬಾಸುತ 


ಕಂಡೆ ನಾನೂ ಕಂಡೆ ನಾನೂ
ಬೃಂದಾವನದಿ ನೆಲೆಸಿದವನಾ
ಕಂಡೆ ನಾನೂ ಕಂಡೆ ನಾನೂ
ಯೋಗಿವರ್ಯ ಗುರುನಾಥನಾ ||ಪ||

ಭಾವುಕತೆಯಾ ಭಕ್ತಿಯೊಳಗೇ
ಮೌನದಾ ಪಿಸುಮಾತಿನೊಳಗೇ
ಸಂತರಾ ಹೃದಯ ಮಂದಿರದೊಳಗೇ
ತನ್ನತನವಾ ಬಿಟ್ಟವರೊಳಗೇ ||೧||

ಅನ್ನದೊಳಗೆ ಅಗ್ನಿಯೊಳಗೇ
ಏಕಮನದ ಕಾಯಕದೊಳಗೇ
ವೇದದೊಳಗೆ ವಾದ್ಯದೊಳಗೇ
ವಿನಯ ತುಂಬಿದ ವಿದ್ಯೆಯೊಳಗೇ ||೨||

ಭಜನೆಯೊಳಗೇ ಭಜಿಸುವವರೊಳಗೇ
ಬೋಧರೂಪ ನೋಟದೊಳಗೇ
ನೋವಿನೊಳಗೇ ನಲಿವಿನೊಳಗೇ
ನನ್ನೊಳಗೇ ನನ್ನಾ ಒಳಗೇ ||೩||

ನಿಜಾನಂದದೊಳಗೇ
ನಿಗಮಾಗಮಗಳಾ ಮಾತಿನೊಳಗೇ
ಅಂಬಾಸುತನಾ ಪದಗಳೊಳಗೇ
ಅತಿಷಯ ಮಾತೃ ಪ್ರೇಮದೊಳಗೇ ||೪||

Monday, October 30, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸ ಭವತಿ ಸನಾಥೋತ್ರ
ಗುರುರ್ಯತ್ರ ಚ ರಕ್ಷಕಃ |
ಸ ಜಾಯತೇ ಅನಾಥೋ ಹಿ
ವಿಸ್ಮರತಿ ಚ ಯೋ ಗುರುಮ್ ||



ಯಾರಿಗೆ ಗುರುವು ರಕ್ಷಕನಾಗಿರುವನೋ ಅವನು ಸನಾಥನಾಗಿರುತ್ತಾನೆ...ಯಾರು ಸದ್ಗುರುವನ್ನು ಮರೆಯುತ್ತಾನೋ ಅವನು ಈ ಪ್ರಪಂಚದಲ್ಲಿ ಅನಾಥನಾಗುತ್ತಾನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Friday, October 27, 2017

ಗುರುನಾಥ ಗಾನಾಮೃತ 
ಸುಮ್ಮನೆ ದೊರಕುವಂತವನೇ ಸದ್ಗುರುವು
ರಚನೆ: ಶ್ರೀಮತಿ.ಶೈಲಜಾ ಕುಮಾರ್


ಸುಮ್ಮನೆ ದೊರಕುವಂತವನೇ ಸದ್ಗುರುವು
ಸುಮ್ಮನೆ ಸಿಗುವಂತವನೇ || ಪ ।।

ನಾನೆಂಬ ಅಹಂ ಅಳಿದವಗೆ
ಸೋಹಂ ಎಂದೆನುವಗೆ
ಕಣಕಣವೂ ಅವನೇ ತುಂಬಿರುವಗೆ
ದೀನನಾಗಿ ಶರಣಾಗಿರುವಗೆ ।। ೧ ।।

ಹೃದ್ದೀಪದಿ ಶುದ್ಧಾತ್ಮವ ಬೆಳಗಿಸುವಗೆ
ಅಂತರಂಗವು ನಿರ್ಮಲವಾಗಿರುವಗೆ
ತ್ರಿಕರಣ ಶುದ್ಧಚರಿತನವಗೆ
ಸಂಸಾರದಿ ಅಸಂಗಿಯಾಗಿರುವಗೆ ।। ೨ ।।

ಎಲ್ಲರಲೂ ಸಮತ್ವವಿರುವಗೆ
ಸಾಧನೆಯ ದಾರಿಲಿ ನಡೆಯುವಗೆ
ನಾಮಸ್ಮರಣೆಯ ಭಕ್ತಿಯಿಂ ಮಾಡುವಗೆ
ಕರ್ತೃತ್ವಭಾವ ನಶಿಸುವವಗೆ ।। ೩ ।।

Thursday, October 26, 2017

ಗುರುನಾಥ ಗಾನಾಮೃತ 
ದೂಡದಿರು ಗುರುವೇ ಭವದೊಳಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್


ದೂಡದಿರು ಗುರುವೇ ಭವದೊಳಗೆ
ಸಿಲುಕಿಸದಿರು ಸದ್ಗುರುವೇ ಮೋಹದೊಳಗೆ   || ಪ ।। 

 ಬಂಧಿಸದಿರು ಪಾಶದೊಳಲಿ
ಮೆರೆಸದಿರು ನಶ್ವರ ಸಂಪತ್ತಿನಲಿ
ಮುಳುಗಿಸದಿರು ಕ್ಷಣಿಕ ಸುಖದಲಿ  ।। ೧ ।।

 ಮೂಕನಾಗಿಸು ಕೃತಕತೆಯಲಿ
ಅಂಧನಾಗಿಸು ಬಣ್ಣದ ಲೋಕದಲಿ
ಬಧಿರನಾಗಿಸು ಮಿಥ್ಯಾಸ್ತುತಿಯಲಿ ।। ೨ ।।

ಲೀನಗೊಳಿಸೆಮ್ಮ  ನಿನ್ನ ಧ್ಯಾನದಲೀ
ನೆಲೆಸು ನೀ ನಮ್ಮ ಚಿತ್ತೇಕಾಗ್ರದಲಿ
ಮಾರ್ಗಬಂಧುವಾಗು ಮೋಕ್ಷದ ದಾರಿಯಲಿ ।। ೩ ।।

Tuesday, October 24, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಚಂಚಲತಾ ಮನಸಸ್ತು
ಅರಿರೇವೋ ಹಿ ಜಾಯತೇ |
ದೃಢಚಿತ್ತಸ್ಯ ಸದ್ಗುರುಃ
ಮಾರ್ಗಬಂಧುರ್ಹಿ ಜಾಯತೇ ||

ಚಂಚಲತೆಯೇ ಮನಕೆ ಅರಿಯಾಗುವುದು. ದೃಢಮನಕೆ ಗುರುವೇ ಅರಿವಾಗುವನು. ಮನಸ್ಸಿ‌ನ ಚಂಚಲತ್ವವೇ ಜ್ಣಾನಪ್ರಾಪ್ತಿಗೆ ಶತೃವಾಗುವುದು...ದೃಢಮನಸ್ಕನಾದ ಸಾಧಕನಿಗೆ ಸದ್ಗುರುವೇ ಆತ್ಮಜ್ಞಾನವೆಂಬ  ಅರಿವನ್ನು ದಯಪಾಲಿಸುವನು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Monday, October 23, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸಾಮಾನ್ಯೋ ಯತ್ಪ್ರಸಾದೇನ
ಪ್ರಾಪ್ನೋತಿ ಸಮಾಧಿಸ್ಥಿತಿಂ |
ಸಾಕ್ಷಾತ್ಕಾರಂ ದರ್ಶಯಂತಂ
ಸದ್ಗುರುಂ ಮನಸಾ ವಂದೇ ||

ಯಾವ ಸದ್ಗುರುವಿನ ಅನುಗ್ರಹದಿಂದ ಸಾಮಾನ್ಯ ಮಾನವನೂ ಕೂಡ ಸಮಾಧಿಸ್ಥಿತಿಯನ್ನು ತಲುಪಿ...ನಂತರ ಬ್ರಹ್ಮ ಸಾಕ್ಷಾತ್ಕಾರದ ಅರಿವು ಉಂಟಾಗುತ್ತದೆಯೋ,  ಅಂತಹ ಸದ್ಗುರುವಿಗೆ ಮನಃಪೂರ್ವಕವಾಗಿ ನಮಿಸುತ್ತೇನೆ.

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Friday, October 20, 2017

ಗುರುನಾಥ ಗಾನಾಮೃತ 
ಎಂದು ಕಾಣುವೆನೋ ಆ ನಿನ್ನ ಭವ್ಯವದನ
ರಚನೆ: ಶ್ರೀಮತಿ.ಶೈಲಜಾ ಕುಮಾರ್


ಎಂದು ಕಾಣುವೆನೋ ಆ ನಿನ್ನ ಭವ್ಯವದನ
ಎಂದು ಕೇಳುವೆನೋ ಆ ನಿನ್ನ  ದಿವ್ಯವಚನ ||


ಸಹಸ್ರಸೂರ್ಯರ ಪ್ರಕಾಶವಿವನ ನಯನ
ನಿಷ್ಕಲ್ಮಷ ನಗುಮೊಗದ ಆನಂದಸದನ
ಮಾರ್ಗಬಂಧುವಿನ ಅಮೋಘ ದರ್ಶನ
ಪ್ರಭೋ ನಿನಗಿದು ಕೋಟಿನಮನ || ೧ ||


ಅಮೃತಧಾರೆಯಿವನ ತತ್ತ್ವಗಳ ಶ್ರವಣ
ದೂರಮಾಡುವನು ಮೋಹದ ಬಂಧನ
ಭಜಿಸಿದರೆ ಇವನನು ಅನುದಿನ
ನಿಶ್ಚಯದಿ ಆಗುವುದು ಜನ್ಮಪಾವನ || ೨ ||


Tuesday, October 17, 2017

ಗುರುನಾಥ ಗಾನಾಮೃತ 
ಮನದೊಳು ಬಚ್ಚಿಟ್ಟೂಕೊಳಬೇಕು ಈ ಪಾದವಾ
ರಚನೆ: ಅಂಬಾಸುತ 


ಮನದೊಳು ಬಚ್ಚಿಟ್ಟೂಕೊಳಬೇಕು ಈ ಪಾದವಾ
ಮೌನದಲೇ ನೆನೆದಿರಬೇಕು ಗುರುಪಾದವಾ ||ಅ||

ಅಭಿಮಾನವಿಲ್ಲದಾ ಆಡಂಬರವಿಲ್ಲದಾ
ಶುದ್ದಮಾನಸಾ ಪೂಜಾವಿಧಿಯಲೀ
ಸಾತ್ವಿಕ ಗುಣಕುಸುಮದಾ ಮಾಲಿಕೆಯೊಡಗೂಡೀ
ಅರ್ಚಿಸಿ ನಿಜ ಆನಂದವ ಪಡೆಯಲೂ ||೧||

ಮಾನಸ ಮಂದಿರದೀ ಬಲುಪ್ರೇಮದಿಂದಲೀ
ಅಹಂಕಾರಾದಿಗಳಾ ಸುಟ್ಟು ದೂರ ಮಾಡುತಲೀ
ತಂದೆ ನೀ ಸುತ ನಾ ಎಂಬ ಶುದ್ದಭಾವದಲೀ
ಸಾಧನೆಯಾ ಮಾರ್ಗವಾ ತೋರೋ ಎನ್ನಲೂ ||೨||

ಮೆಚ್ಚುಗೆ ಬಯಸದಾ ಹೆಚ್ಚಿನ ದ್ರವ್ಯವಿರದಾ
ಅನುಭವಾಮೃತವ ಅಂತರಂಗದೀ ಸ್ಪುರಿಸುವಾ 
ಸಖರಾಯಪುರವಾಸೀ ಸದ್ಗುರುನಾಥನಾ
ಅಂಬಾಸುತನಾ ಸದ್ಗುರುಪಾದವಾ ||೩||

Saturday, October 14, 2017

ಗುರುನಾಥ ಗಾನಾಮೃತ 
ಜಯ ಮಂಗಳಂ ಗುರುವರಾ
ರಚನೆ: ಅಂಬಾಸುತ 


ಜಯ ಮಂಗಳಂ ಗುರುವರಾ
ಶುಭ ಮಂಗಳಂ ಶುಭಕರಾ ||

ಭಾವುಕ ಭಕ್ತರ ಹೃನ್ಮಂದಿರ ನಿವಾಸಾ
ಭಾಷೆಗೆ ನಿಲುಕದಾ ಭಾವಾವೇಷಾ
ಧರೆಯನ್ನುದ್ಧರಿಸೇ ಬಂದಿಹನೀ ಈಶಾ
ಮೂಢರ ಮೂಢತೆಯಾ ಕಳೆಯಲು ಈ ವೇಶಾ ||

ಅರಿತು ಅರಿಯಲು ಸಾಧ್ಯವೇ ಇವನಾ ಮಹಿಮೇ
ಸಾಧನೆಯೊಳಗಡಗಿಹನೂ ಅದೇ ಈತನ ಗರಿಮೇ
ಇದ್ದೂ ಇಲ್ಲದಂತೇ ಇರುವುದೇ ಇವನಾ ಹಿರಿಮೇ
ಸದ್ದಿಲ್ಲದೆ ಸದ್ಭಾವವ ತುಂಬುವ ಮನದೊಳಗೇ ||

ಧನಕನಕವ ದೂರಿರಿಸೀ ನಿಂತಾ ಈ ಸಂತಾ
ಸಾತ್ವಿಕ ಹೃದಯವೇ ಎಂದೂ ಇವನಿಗೆ ಸ್ವಂತಾ
ಆತ್ಮಾರಾಮನ ಆರಾಧಿಪನೂ ಅನವರತಾ
ಅಗಣಿತಗುಣ ಮಹಿಮಾ ಅವಧೂತನೀತಾ ||