ಒಟ್ಟು ನೋಟಗಳು

Thursday, February 27, 2020

ದತ್ತದೇವ ಶರಣಂ ಗುರು ದತ್ತದೇವ ಶರಣಂ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ದತ್ತದೇವ ಶರಣಂ 
ಗುರು ದತ್ತದೇವ ಶರಣಂ
ಪ್ರಭು ದತ್ತದೇವ ಶರಣಂ l

ಅತ್ರಿತಪೋವರದಾತ
ಅನುಸೂಯ ಸುಖದಾತ l
ಅಗಣಿತವರದಾತ
ದತ್ತ ಪ್ರಭೋ ವಿಶ್ವವಿಧಾತ ll ೧ ll

ವಿಭೂತಿಭೂಷಿತ ಗಾತ್ರ
ಮನೋಹರಸ್ಮಿತ ನೇತ್ರ l
ಸಕಲಕಲಾಗಮ ಸೂತ್ರ
ದತ್ತ ತವ ದಿವ್ಯಮಂತ್ರ ll ೨ ll

ದಂಡಕಮಂಡಲುಧಾರಿ
ಭಕ್ತಮಾನಸಸಂಚಾರಿ
ಅಮಿತಲೀಲಾವಿಹಾರಿ
ದತ್ತ ಪ್ರಭೋ ಮನೋಹಾರಿ ll ೩ ll

!! ಸರ್ವದಾ ಸದ್ಗುರುನಾಥೋ ವಿಜಯತೇ !!
೨೭-೨-೨೦೨೦

ಮನತುಂಬಿ ಹಾಡಿದಂತೆ ನಟಿಸುತ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಮನತುಂಬಿ ಹಾಡಿದಂತೆ ನಟಿಸುತ ಮಲಿನ ಭಾವದಿ ನಿನ್ನ ಬೇಡಿ ಫಲವುಂಟೇನು
ಓಡುತಿಹ ಆಸೆಗಳ ಬೆನ್ನತ್ತಿ ಭಜಿಸಿ ಕರುಣಿಸೆಂದರೆ  ಗುರು ಒಪ್ಪುವನೇನು|

ಯಾರೂ ತೋರದ ಭಕುತಿ ನಾ ತೋರುವನೆಂಬ ಆತುರದಿ  ಮುಗ್ಗರಿಸಿ ಬಿದ್ದೆನೇನೋ
ಮರುಳ ಮಾತಿನ ಪದವನು ಜೋಡಿಸುತ  ಶುದ್ಧ ಬಕುತಿಗೆ ವಂಚಿಸಿ ಸೋತು ಹೋದೆನೇನೋ|

ನೀ ಕರುಣಿಸೆಂದು ಬೇಡುತ ಮನಸಿನ ದುರಾಸೆ ಮರೆಮಾಚದೆ ನೀ ಹರುಸುವಿಯೇನು
ಅನ್ಯರ ಹಿತ ಕಾಯದೆ ಸ್ವಾರ್ಥದಲಿ ಬದುಕು ನಡೆಸಿರೆ ನೀ ನನ್ನ ಒಪ್ಪುವಿಯೇನು|

ನೀ ನುಡಿವಂತೆ ನಿನ್ನ ಕರುಣೆಗಾಗಿ ಹಂಬಲಿಸುವ ಬಕುತರ ಕೂಗಿನ ಮುಂದೆ ನಾನಿಲ್ಲವೇನೋ
ಬರೀ ತೋರಿಕೆಯ ಅರಿಕೆಗೆ ನೀ ಒಲಿಯಲಾರೆಂಬ ಅರಿವು  ನನ್ನ ಮನ ಅರಿಯದಾಯಿತೇನೊ|

ಎನ್ನ ಬದುಕನು ಬದಲಿಸಿ ನಿನ್ನಲೇ ನೆಲೆಯಿರಿಸಿ ನೀ ಕಾಯಬಾರದೇನೋ
ಇನ್ನೆಷ್ಟು ಬೇಡಲಿ  ಗುರುವೇ  ದಾರಿ ತೋರಿ ಪಾಮರನ ಹರಸಬಾರದೇನೋ|

Monday, February 17, 2020

ದೂರ ತಳ್ಳಬೇಡಿ ಎನ್ನ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ದೂರ ತಳ್ಳಬೇಡಿ ಎನ್ನ ಗುರುವೇ ನಿಮ್ಮ ಸೇವೆಗೈವ ಭಾಗ್ಯದಿಂದ
ಮುನಿಸು ತೋರಬೇಡಿ ಪ್ರಭುವೇ ನಾನು ನಿಮ್ಮ ಭಜಿಪ ರೀತಿಯಿಂದ|

ತರವಲ್ಲದ  ಬದುಕು ನಡೆಸಿ ಮುಖವಾಡ ಹೊತ್ತು ನಿನ್ನ  ಬೇಡುವುದೆಂತು
ನುಡಿವ ಮಾತುಗಳಲಿ ಶುದ್ಧಭಾವ ಇಲ್ಲದಿರಲು ಗುರು ನೀಡುವುದೇನುಂಟು|

ಅಳುಕು ಮನವ ಹೊತ್ತು ತಳಕು ಭಾವ ತೋರಿ ನಿನ್ನ ವಂಚಿಸುವುದೆಂತು
ಹೃದಯದಲಿ ಮಲಿನ ಆಸೆ ತುಂಬಿ ಬಕುತನ ವೇಷಧರಿಸಿ ನಿನ್ನ ಬೇಡುವುದೆಂತು|

ಹೆತ್ತ ತಂದೆತಾಯಿಗಳ ಸೇವೆಗೈಯಲಿಲ್ಲ ಮುನಿಸು ತೋರದೆ ಹೇಗೆ ಹರಸಬಲ್ಲ
ನಾನೇ ದುಡಿವನೆಂಬ ಹುಂಬಿನಲಿ ಗುರುವೇ ನಿನ್ನ ಮಾತು ಮರೆತನಲ್ಲ|

ನಿನ್ನ ನೆನೆವ ಮನವ ನೀಡಿ ಅನ್ಯರ ಸೊತ್ತಿನಾಸೆ ನೀಡಬೇಡ ಗುರುವೇ
ನಿನ್ನ ಸೇವೆಯ ಭಾಗ್ಯವ  ನೀಡಿ  ನೀ ನಡೆದ ದಾರಿಯ ದೂಳು ಮಾಡಿ ಹರಸೋ ದೊರೆಯೇ|

Saturday, February 15, 2020

ಕರುಣಿಸ ಬಾರದೇ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕರುಣಿಸ ಬಾರದೇ ಗುರುವೇ ಎನ್ನನು ಇನ್ನೆಷ್ಟು ತಡ ಮಾಡುವೆ ಪ್ರಭುವೇ 
ನಿನ್ನ ಬೇಡುವ ಮನವೇತಕೆ ನೀಡಿದೆ ಎನಗೆ ಇದು ನಿನ್ನ ಲೀಲೆಯ ಪರಿಯಲ್ಲವೇ|

ಓಡುವ ಮನದ  ಅರ್ಥವಿಲ್ಲದ ದುರಾಸೆಯ ಸೆಳೆತವ  ತಾಳದಾದೆನೋ
ಅರಿವಿದ್ದರೂ ಎಡವುತಿಹ  ಈ ನನ್ನ ಮನದ ಹುಂಬ ತನಕೆ ಸೋತುಹೋದೆನೋ|

ಕರ್ಮ ಕಳೆಯದೇ ಎನ್ನ ಮನ ಶುದ್ಧಿಯಾಗದೆ ನಿನ್ನ  ಕರುಣೆ ದೊರೆಯದೇನೊ
ಕಪಟ ಭಾವಗಳ ಸಂಗಮದಿ ಬದುಕು ಬಸವಳಿದು ಸೋತಿತೇನೋ|

ಓಡುವ ಬದುಕಿನ ದಾರಿಯಲಿ ಬರೀ ಪೊಳ್ಳು ಮಾತುಗಳ ದ್ವನಿ ಕೇಳಿದೆಯೋ
ಗುರಿ ತಲುಪಿಸುವ ಮುನ್ನ ನೀ ಮೆಚ್ಚುವ ಬದುಕು ನಡೆಸುವ ಬಗೆ ತಿಳಿಸೋ ದೊರೆಯೇ|

ನೇಮನಿಷ್ಠೆಗಳ ಅರಿವೆನಗಿಲ್ಲ ನಿನ್ನ ಸೇವಿಸುವುದರ ಬಿಟ್ಟು ಬೇರೇನೂ ಬೇಕಿಲ್ಲಾ
ನೀ ಕರುಣಿಸುವ ಬಕುತರ ನಡುವೆ ಈ ಪಾಮರನೂ ಒಬ್ಬನಾಗಿರಲಿ ಗುರುದೇವ|


.

Wednesday, February 12, 2020

ನಿನ್ನ ಕಾಣಲು ಓಡೋಡಿ ಬಂದೆನೋ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ಕಾಣಲು ಓಡೋಡಿ ಬಂದೆನೋ ಗುರುವೇ ಕದವೇಕೆ ತೆರೆಯಲಿಲ್ಲ
ಮನದ ತುಂಬಾ ಬಯಕೆಯೇ ತುಂಬಿ ನಿನ್ನ ಕಾಣಲು ಒಳಗಣ್ಣ ತೆರೆಯಲಿಲ್ಲ|

ಅದೇಕೋ ಮಾತು ಅತಿಯಾಗಿ ಮೌನಬಿನ್ನಹ ಮರೆಯಾಗಿ ಸೋತೆನೋ
ಮರೆಯಲಿ ನಿಲ್ಲಲಾರದೆ ತೋರಿಕೆಯ ಹಂಬಲ ಹೆಚ್ಚಾಗಿ ನಿನ್ನಿಂದ ದೂರಾದೆನೋ|

ಆರು ಅರಿಗಳ ಸಂಗವ ಬಿಡದೆ ಮೂರ್ಖನಾಗಿ ವ್ಯರ್ಥವಾಗಿ ನಿನ್ನ ಕೂಗಿಹೆನೋ
ಅಸೂಯೆ ಅಹಂಕಾರಗಳ ಒಡನಾಟದ ಫಲವಾಗಿ ನಿನ್ನ ಪಡೆಯದಾದೆನೋ|

ಹೊನ್ನು ಮಣ್ಣಿನ ಸಂಗ ಮಿತಿ ಮೀರದೆ ಬದುಕು ಮಿತವಾಗಿ ನಡೆಸೆಂದೆ ನೀನು 
ಇಡೀ ಬದುಕೇ ಅದೆಂಬ ಭ್ರಮೆಯ ಬಲೆಯೊಳು ಸಿಲುಕಿ ಬಲು ಮೂಡನಾದೆನೋ|

ನಿನ್ನ ಸೇರುವ ಪರಿ ನಿನ್ನ ಅರಿಯುವ ಪರಿ ಎನ್ನ ಮನಕೆ ತಿಳಿಯದಾಗಿದೆ ಗುರುವೇ
ಇನ್ನು ತಡಮಾಡದೆ ಒಮ್ಮೆಯಾದರೂ ದರುಶನ ನೀಡಿ ಹರಸೋ ಪ್ರಭುವೇ|

Monday, February 10, 2020

ಮೌನದಲಿ ಮಾತು ಭಾವಗಳೆಲ್ಲ ಲೀನವಾಗೋ - ರಚನೆ :ಶ್ರೀ ಆನಂದ ರಾಮ್, ಶೃಂಗೇರಿ

ಮೌನದಲಿ ಮಾತು ಭಾವಗಳೆಲ್ಲ ಲೀನವಾಗೋ ನಿನ್ನ ಮಾತ ನಿಜ ಮಾಡೋ ಗುರುವೇ
ಅರಿವಿಲ್ಲದೇ ನಾನು ನನ್ನ ಮರೆತು ನಿನ್ನ ಸೇರಿದ ಅನುಭವ ನೀಡೋ ದೊರೆಯೇ|

ನಾನೆಂಬ ಬಾವದೊಳು ಮನ ಕಳೆದಿಹುದು ಇದು ಮಿಥ್ಯವೆಂಬ ಅರಿವ ನೀಡೋ ಪ್ರಭುವೇ
ಮಾತಿಲ್ಲದೆ ಮೌನವಾಗಿ ನಿನಗೆ ಶರಣಾಗುವೆ ಶುದ್ಧ ಭಾವವ ಕರುಣಿಸೋ  ದೊರೆಯೇ|

ಅಂತರಾಳದಲಿ ಮೂಡಿಹ ಭಾವ ಕಣ್ಣ ಹನಿಯಾಗಿ ಹರಿದು ನಿನ್ನಲೇ ಸೇರಲಿ
ಭಾವವು ಬರೀ ಮಾತಾಗದೆ ಮೌನದಲಿ ಶರಣಾಗಿ ಸದಾ ನಿನ್ನಲೇ ಲೀನವಾಗಿರಲಿ|

ಮೌನದಲಿ ನಿನ್ನ ಸ್ಮರಿಸುವ ಮನವಿತ್ತು ಎನಗೆ ಮಾತುಗಳ ಸಂಗ ಬೇಡ ಗುರುವೇ
ಹೃದಯದಲಿ ನಿನ್ನ ಕೂರಿಸಿ ಮೌನದಲಿ ಮೆರವಣಿಗೆ ಮಾಡಿ ನಿನ್ನನೇ ಭಜಿಸುವೆ|

ತೋರಿಕೆಯ ಬಕುತಿಮಾಡದೆ ಶುದ್ಧ ಮನದಲಿ ನಿನ್ನ ಬೇಡುತಲಿ ಮೌನದಲಿ ಸ್ತುತಿಸುವೆ
ಶಬ್ದ ಬ್ರಹ್ಮನ ಅರಿವು ನೀಡಿ ಅಲ್ಲ ಸಲ್ಲದ ಪದಗಳ ನುಡಿಸದೆ ಕಾಯೆಂದು ಮೌನದಲಿ ಬೇಡುವೆ|

Sunday, February 9, 2020

ಇಷ್ಟ ಪಟ್ಟು ನಿನ್ನ ಬೇಡುವುದೋ ಯಾವ ಪರಿಯಲಿ ಬಜಿಸುವುದೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಇಷ್ಟ ಪಟ್ಟು ನಿನ್ನ ಬೇಡುವುದೋ ಯಾವ ಪರಿಯಲಿ ಬಜಿಸುವುದೋ ನಾನರಿಯೆ ಗುರುವೇ
ಎಲ್ಲರನು ಸಲಹುವ ಮಹಾದೇವ ನೀನು ನನ್ನ ಕಡೆಗಾಣಿಸದೆ ಹರಸೋ ದೊರೆಯೇ|

ಬೇಡದಲೇ ಬಂದು ಬಕುತರನು ಹರಸುವಿಯಂತೆ ನನ್ನ ಕೂಗು ಕೇಳಲಿಲ್ಲವೇ
ಬೆನ್ನ ಹಿಂದೆ ನಿಂತು ಕಷ್ಟಗಳ ದೂರ ಮಾಡುವ ನಿನಗೆ ಎನ್ನ ಮನವಿ ಬೇಡವೇ|

ನಿನ್ನ ನುಡಿಯಂತೆ ನಡೆಯಲಾರದೆ ನಿನ್ನ ಮನವ ಗೆಲ್ಲಲಾರದೆ ಹೋದೆನೋ
ಮನದ ಕಪಟ ಭಾವ ಮರೆಯಾಗದೆ ಕಣ್ಣೀರಿಟ್ಟು ಬೇಡಿದೊಡೆ ನೀ ಎಲ್ಲಿ ಒಲಿಯುವೆಯೋ|

ಯಾಕೆ ಬೇಡುವೆನೆಂದು ಅರಿಯದೆ ಸುಮ್ಮನೆ ನಿನ್ನ ಬೇಡುತಿಹೆನು ಇದು ತೋರಿಕೆಯಲ್ಲವೇ
ಎನ್ನ ಮನ್ನಿಸಿ ನಿನ್ನ ಪದತಳದಿ ಈ ಪಾಮರನ ಶಿರವಿರಿಸಿ ಬೇಡುವೆನೋ ಕರುಣಿಸೋ|

Thursday, February 6, 2020

ಎಷ್ಟೆಂದು ಬೇಡುವುದು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟೆಂದು ಬೇಡುವುದು ಎಷ್ಟೆಂದು ಕಾಡುವುದು ನಾ ನಿನ್ನ ಗುರುವೇ
ಎಷ್ಟು ಬೇಡಿದರೂ ಮುಗಿಯದು ನನ್ನ ಬದುಕ ಬವಣೆಯು ಓ ನನ್ನ ಪ್ರಭುವೇ|

ಮೂರು ಹೊತ್ತಿನ ಕೂಳು ನೀಡಿ ನೀ ಸಲಹಿದರೂ ಇನ್ನೂ ಬೇಕೆಂಬ ಹಂಬಲವು
ಅನ್ಯರಿಗೆ ಅನ್ಯಾಯ ಮಾಡಿಯಾದರೂ ಬದುಕು ನಡೆಸುವ ಅಲ್ಪ ಮನದ ದುರಾಸೆಯು|

ಮಕ್ಕಳಿಲ್ಲದವರ ಬವಣೆ ಕಂಡರೂ ಇರುವ ಮಕ್ಕಳನು ಪೊರೆವುದು ಅರಿತಿಲ್ಲವೋ
ಅಂತ್ಯವಿಲ್ಲದ ಆಸೆಹೊತ್ತು ಈ ನಿಮಿಷದ ಸುಖವ ಕಳೆದುಕೊಂಡು ಮೂಡನಾದೆನೋ|

ಮೂರು ಮುಷ್ಟಿಯ ಕೂಳು ಒಂದು ಗೇಣಿನಾ ಹೊಟ್ಟೆಗೆ ಸಾಕಲ್ಲವೇ ಗುರುವೇ
ಕೂಡಿಟ್ಟು ಕೂಡಿಟ್ಟು ಅನ್ಯರ ಹಸಿವೆ ಇಂಗಿಸದೆ ನಡೆಸುವ ಬದುಕು ಬೇಕೇ ದೊರೆಯೇ|

ಅರ್ಥವಿರದ ಬದುಕು ನಡೆಸಿ ಮಣ್ಣು ಸೇರುವ ಮುನ್ನ ನಿನ್ನ ಇರುವು ತೋರೋ ಗುರುವೇ
ಅಷ್ಟಿಸ್ಟಾದರೂ ಜಗಕೆ ಒಳಿತು ಮಾಡುವ ಮನವ ನೀಡಿ ಹರಸೋ ಪ್ರಭುವೇ|