ಒಟ್ಟು ನೋಟಗಳು

Friday, July 14, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 44
ವಿಶ್ವ ಕುಟುಂಬಿಯ ಚಿಂತನೆ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಗುರುನಾಥರ ದರ್ಶನವೆಂದರೆ ಏನೋ ಒಂದು, 'ಹತ್ತರ ಕೂಟೆ ಹನ್ನೊಂದು' ಎಂದು ಬರುವವರಿಗೆ ಗುರುನಾಥರು ನಯವಾಗಿಯೇ, ಗುರು ದರ್ಶನದ ಪಾವಿತ್ರತೆಯನ್ನು ತಿಳಿಸಿದ ಪ್ರಸಂಗಗಳಿವೆ. ಒಮ್ಮೆ ಒಬ್ಬ ಗುರುಭಕ್ತರಿಗೆ ಚಿಕ್ಕಮಗಳೂರಿಗೆ ನಾಮಕರಣಕ್ಕಾಗಿ ಹೋಗಬೇಕಾಗಿತ್ತು. ಹಾಗೆಯೇ ಸಖರಾಯಪಟ್ಟಣದ ಮುಖಾಂತರ ಬಂದ ಅವರು, ಗುರುಗಳಿದ್ದರೆ ನೋಡಿ ಹೋಗೋಣವೆಂದು ಗುರುನಾಥರ ಮನೆಯೊಳಗೆ ಕಾಲಿಟ್ಟರಂತೆ. ಅನೇಕ ಜನ ಭಕ್ತರಲ್ಲಿದ್ದರು. ಗುರುನಾಥರು ಆದರದಿಂದ 'ಬನ್ನಿ ಬನ್ನಿ ಎಲ್ಲಿಗೋ ಹೊರಟಿರುವಂತಿದೆಯಲ್ಲಾ ಬನ್ನಿ ಎಲ್ಲಾ ಸೌಖ್ಯವೇ?' ಎಂದು ವಿಚಾರಿಸಿದರಂತೆ. ಆಗ ಬಂದವರು ಸುಮ್ಮನಿರದೆ 'ತಮ್ಮನ್ನೇ ನೋಡೋಣವೆಂದು ಬಂದೆವು' ಎಂದಾಗ 'ಯಾಕಪ್ಪಾ ಸುಳ್ಳು ಹೇಳ್ತೀರಿ... ಹೊರಟಿರುವುದು ನಾಮಕರಣಕ್ಕೆ ಅಲ್ಲವಾ... ಗುರುದರ್ಶನವೆಂದರೆ ಅಷ್ಟು ಸುಲಭವಲ್ಲ... ಅದೊಂದು ಪಿಕ್ ನಿಕ್ ಆಗಬಾರದು... ಯಾವು ಯಾವುದೋ ಕೆಲಸಕ್ಕೆ ಬಂದು ಗುರುದರ್ಶನವನ್ನೂ ಅದರಲ್ಲಿ ಸೇರಿಸಿಕೊಳ್ಳಬಾರದಪ್ಪ.... ಇರಲಿ ಈಗ ಬಂದಿದೀರಿ.... ಇನ್ನು ಮುಂದೆ ಹಾಗೆ ಮಾಡಬೇಡಿ' ಎಂದು ನವಿರಾಗಿ ತಿದ್ದಿದರು ತಮ್ಮ ಭಕ್ತರನ್ನು. 

ಮತ್ತೊಬ್ಬ ಬಹು ದೊಡ್ಡ ಧನಿಕರು ಏನೇನೋ ಕಾರಣಗಳಿಂದ ಹಾಗೂ ಗ್ರಹಚಾರವಶದಿಂದ ತಮ್ಮ ಎಲ್ಲ ಧನಕನಕಗಳನ್ನು ಕಳೆದುಕೊಂಡು ಬಿಟ್ಟರು. ಜೀವನದಲ್ಲಿ ಇದು ಸಹಜ. ಆದರೆ ಇಂತಹ ಹತಾಶೆಯ ಸಂದರ್ಭದಲ್ಲಿ ಸದ್ಗುರುವಿನ ಮಾರ್ಗದರ್ಶನ ಸಿಗುವುದು ಅದೃಷ್ಟ. ಅಂತೆಯೇ ಗುರುನಾಥರ ಸಂಪರ್ಕ ಸೇವೆಗೆ ಬಂದ ಅವರು ಮತ್ತೆ ಸ್ಥಿತಿವಂತರಾಗುತ್ತಾ ಸಾಗಿದರಂತೆ.... ಎಲ್ಲ ಉತ್ತಮ ಸ್ಥಿತಿ ತಲುಪುತ್ತಿದ್ದರೂ, ಯಾರೋ ಒಬ್ಬರು ಆ ಭಕ್ತರಿಗೆ ಒಂದು ಪಾದುಕೆಯನ್ನು ಮಾಡಿಸಿಕೊಂಡು ಹೋಗಿ ಶೃಂಗೇರಿ ಜಗದ್ಗುರುಗಳಿಂದ ಮುಟ್ಟಿಸಿಕೊಂಡು, ದಿನ ನಿತ್ಯ ಮನೆಯಲ್ಲಿ ಪೂಜಿಸಿದರೆ ಧನಧಾನ್ಯ ಸಂಪತ್ತು ವೃದ್ಧಿಸುತ್ತದೆ ಎಲ್ಲ ಒಳ್ಳೆಯದಾಗುತ್ತದೆ, ಎಂದು ಹೇಳಿಬಿಟ್ಟಿದ್ದರಂತೆ. 

ಮನಸ್ಸಿಗೆ ಹುಳ ಬಿಡುವವರು ಅನೇಕ. ಚಂಚಲ ಮನಸ್ಸು ಅದರಂತೆ ಹರಿದಾಡುತ್ತಾ ಏನೇನೋ ಮಾಡುತ್ತದೆ. ಸರಿ ಪಾದುಕೆಗಳನ್ನು ಮಾಡಿಸಿಕೊಂಡ ಅವರು ತಮ್ಮ ಕಾರಿನಲ್ಲಿ ಹೋಗುತ್ತಾ ಹಾಗೇ ಶೃಂಗೇರಿಗೆ ಮೊದಲು ಸಖಾರಾಯಪಟ್ಟಣಕ್ಕೆ ಬಂದು ಗುರುನಾಥರ ದರ್ಶನ ಪಡೆದು ಹೋಗಲು ಬಂದರಂತೆ. ಅವರು ಒಳ ಬರುತ್ತಲೇ ಗುರುನಾಥರು 'ಬನ್ನಿ ಸಾಹುಕಾರರೇ, ಶೃಂಗೇರಿಗೆ ಹೊರಟಿದ್ದೀರಲ್ಲಾ.. ಬನ್ನಿ ಬನ್ನಿ.. ಪಾದುಕೆಗಳನ್ನು ಜಗದ್ಗುರುಗಳಿಗೆ ಮುಟ್ಟಿಸಿ ತಂದು ದೊಡ್ಡ ಶ್ರೀಮಂತರಾಗಬೇಕಲ್ಲವೇ... ನನಗೂ ಒಂದೆರಡು ಪಾದುಕೆಗಳನ್ನು ಕೊಡಿ.... ನಾನು ಮುಟ್ಟಿಸಿ ಶ್ರೀಮಂತನಾಗ್ತೀನಿ... ಇರಲಿ ದೊಡ್ಡವರನ್ನು ನೋಡಲು ಹೊರಟಿದ್ದೀರಿ. ಏನೇನು ಸಿದ್ಧತೆ ಮಾಡಿಕೊಂಡು, ತೆಗೆದುಕೊಂಡು ಹೊರಟಿದ್ದೀರಿ?' ಎಂದು ಪ್ರಶ್ನಿಸಿದಾಗ ಆ ಭಕ್ತರಿಗೆ ತಮ್ಮ ತಪ್ಪಿನ ಅರಿವಾಗಿತ್ತು. 

ಮಕ್ಕಳನ್ನು, ಅಶಕ್ತರನ್ನು, ಹಿರಿಯರು, ಗುರುಗಳನ್ನು ನೋಡಲು ಹೋಗುವಾಗ ಖಾಲಿ ಕೈಯಲ್ಲಿ ಹೋಗಬಾರದೆಂಬ ನಮ್ಮ ಸಂಪ್ರದಾಯವನ್ನು ನಾವು ಅನೇಕ ಸಾರಿ ಮರೆತು ಬಿಡುತ್ತೇವೆ. ಗುರುವೆಂದರೆ ತಪ್ಪನ್ನು ಕಂಡು ನಿರ್ದಾಕ್ಷಿಣ್ಯವಾಗಿ ಅದನ್ನು ತಿದ್ದಿ ಹೇಳುತ್ತಿದ್ದವವನೇ... ಮುಂದೆ ಅಂತಹ ತಪ್ಪುಗಳು ತಮ್ಮ ಶಿಷ್ಯರಿಂದ ಆಗದಂತೆ ನೋಡಿಕೊಳ್ಳುವ ಕರುಣಾಳು. ಆದರೆ ಕೇವಲ ನಮ್ಮ ಸ್ವಾರ್ಥ ಮಾತ್ರಾ ನಮ್ಮ ಕಣ್ಣ ಮುಂದೆ ಇದ್ದಾಗ ಉಪದೇಶಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಮನವಿರುವುದಿಲ್ಲ. ಯಾರು ಸ್ವೀಕರಿಸಿ ಅಂತೆಯೇ ಸಾಗುತ್ತಾರೋ, ಅವರ ಜೀವನ ಉದ್ಧಾರವಾಗಿ ಹೋಗುತ್ತದೆ ಗುರುಕೃಪೆಯಿಂದ. 

ಗುರುನಾಥರು ಹಿಂದಿನ ದಿನವೇ ಅಕ್ಕಿ, ಬೇಳೆ, ರವೆ, ಬೆಲ್ಲ ಮುಂತಾಗಿ ಎಲ್ಲವನ್ನೂ ತರಿಸಿಕೊಟ್ಟಿದ್ದರಂತೆ. ತಮ್ಮ ಶಿಷ್ಯರುಗಳನ್ನು ಕರೆದು ಅದನ್ನೆಲ್ಲಾ ಕಾರಿನಲ್ಲಿ ಇಡಲು ಹೇಳಿ ಪಾದುಕೆ ತೆಗೆದುಕೊಂಡು ಹೋಗುತ್ತಿದ್ದ ಶಿಷ್ಯರಿಗೆ ಇದನ್ನೆಲ್ಲಾ ಜಗದ್ಗುರುಗಳಿಗೆ ತಲುಪಿಸಿಬಿಡಿ' ಎಂದರಂತೆ. 

ಶೃಂಗೇರಿ ತಲುಪಿದ, ಭಕ್ತರನ್ನು ಕಂಡ ಜಗದ್ಗುರುಗಳು, ಮೊದಲು ಕೇಳಿದ್ದು 'ವೆಂಕಟಾಚಲಯ್ಯನವರು ಏನು ಕಳಿಸಿದ್ದಾರೆ ಕೊಡಿ' ಎಂದು ಬಂದ ಶಿಷ್ಯರು ಎಲ್ಲವನ್ನೂ ಜಗದ್ಗುರುಗಳಿಗೆ ಅರ್ಪಿಸಿ ತಮ್ಮ ಸೇವಾ ಕೈಂಕರ್ಯಗಳನ್ನು ಮಾಡುತ್ತಾ, ಗುರುನಾಥರ ಕರುಣೆ, ಮುಂದಾಲೋಚನೆ, ನಮ್ಮನ್ನು ನಂಬಿದ ಭಕ್ತರ ಹಿತಕ್ಕಾಗಿ ಅದೆಷ್ಟು ಗುರುನಾಥರು ಶ್ರಮಿಸುತ್ತಾರೆಂದು ವಿನಮ್ರರಾಗಿ ಮನದಲ್ಲೇ ಗುರುನಾಥರನ್ನು ನೆನೆಯುತ್ತಾ ಶೃಂಗೇರಿಯಲ್ಲಿ ಸೇವೆಯಲ್ಲಿ ನಿರತರಾದರು. 

ಅವರು ಪುನಃ ಹೊರಡುವಾಗ ಜಗದ್ಗುರುಗಳು ಪ್ರಸಾದವನ್ನು ನೀಡಿ 'ಇದನ್ನು ವೆಂಕಟಾಚಲಯ್ಯನವರಿಗೆ ತಲುಪಿಸಿಬಿಡಿ' ಎಂದು ಪ್ರಸಾದವನ್ನು ಕೊಟ್ಟು ಆಶೀರ್ವದಿಸಿ ಕಳಿಸಿದರಂತೆ. ಪುನಃ ಗುರುನಾಥರನ್ನು ಕಂಡು, ಶೃಂಗೇರಿಯ ಪ್ರಸಾದವನ್ನು ಅವರು ಗುರುನಾಥರಿಗೆ ಅಲ್ಲಿದ್ದ ಭಕ್ತರಿಗೆಲ್ಲಾ ತಲುಪಿಸಿದರಂತೆ. 

ಗುರುಕರುಣೆಯ ವಿಶೇಷವೇ ಹೀಗಲ್ಲವೇ. ನಾವು ನಮ್ಮ ಕಷ್ಟ ಸುಖಗಳ ಬಗ್ಗೆ ಮಾತ್ರಾ ಯಾವಾಗಲೂ ಚಿಂತಿಸುತ್ತಿದ್ದರೆ, ಗುರುನಾಥರು ಮಾತ್ರಾ ವಿಶ್ವ ಕುಟುಂಬಿಯಾಗಿ ಎಲ್ಲರ ಹಿತದ ಬಗ್ಗೆ ಚಿಂತಿಸುತ್ತಿದ್ದುದು ಇಲ್ಲಿ ಕಂಡುಬರುತ್ತದೆ. ಇಂತಹ ಗುರುತರ ಜವಾಬ್ದಾರಿಯನ್ನು ಹೊತ್ತಿದ್ದರಿಂದಲೇ ಅಲ್ಲವೇ ಗುರುಗಳು ಗುರುನಾಥರಾದದ್ದು. 

ಪ್ರಿಯ ಗುರುಭಕ್ತ ನಿತ್ಯ ಸತ್ಸಂಗಾಭಿಮಾನಿಗಳೇ ಗುರುವನ್ನು ಕಾಣುವ ರೀತಿ, ಅವರ ದರ್ಶನ ಮಾಡಲು ಹೋದಾಗ ಇರಬೇಕಾದ ನಮ್ಮ ಮನಸ್ಥಿತಿಗಳನ್ನು ನಮಗೆ ಈ ದಿನದ ಸತ್ಸಂಗ ಯತ್ ಕಿಂಚಿತ್ ಪರಿಚಯಿಸಿದ್ದರೆ, ನಮ್ಮ ದೈನಂದಿನ ಜೀವನದ ನಡೆನುಡಿಗಳ ಮೇಲೆ ಪ್ರಭಾವ ಬೀರಿದರೆ... ಅದೇ ಸತ್ಸಂಗದ ಸತ್ಫಲ. ಇಂತಹ ಅನೇಕ ಸತ್ಫಲಗಳನ್ನೇ ನೀಡುವ ಗುರುನಾಥರ ಚರಿತೆಯಲ್ಲಿ, ಲೀಲೆಯಲ್ಲಿ ನಾಳೆಯೂ ಬೇರೆಯೋಣ ಅಲ್ಲವೇ. ತಪ್ಪದೇ ನಾಳೆಯೂ ಬನ್ನಿ, ನಮ್ಮೊಂದಿಗಿರಿ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment