ಒಟ್ಟು ನೋಟಗಳು

Wednesday, May 24, 2023

ಬದುಕಿನ ಉದ್ದಗಲಕು ಏನನ್ನೋ ಹುಡುಕಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬದುಕಿನ ಉದ್ದಗಲಕು ಏನನ್ನೋ ಹುಡುಕಿ ಸೋತು ನಿಂತಾಯಿತು ಗುರುವೇ
ಇನ್ನು ನೆಮ್ಮದಿಯ ಅರಸಿ ನಿನ್ನ ನಂಬಿ ನಿನ್ನ ಪಾದದ ಬಳಿ ನಿಂತಾಯಿತು ಪ್ರಭುವೇ.

ಕಾಣದಾ ಸುಖವ  ವಿಷಯ ವಸ್ತುವಿನಲಿ ಹುಡುಕೆ ಸಿಗುವುದೇ ದೊರೆಯೇ
ಕಂಡರೂ ಕಾಣದಂತೆ ಮಾಡುವ ಮಾಯೆಯ ಲೀಲೆಗೆ ಸಿಕ್ಕಿ ಬಸವಳಿದೆ ಗುರುವೇ.

ಇಲ್ಲೇ ಇರುವೆ ಎಂದೆನಿಸುತಿದೆ ಒಳ ಮನಸಿನ ಭಾವಕೆ ಹುಡುಕೆ ನೀ ಸಿಗಲಿಲ್ಲ ಗುರುವೇ
ಶುದ್ದ ಭಾವಕೆ ನೀ ಒಲಿವೆ ಎನ್ನುವರು ಅದರ ಕೊರತೆ ಎನ್ನ ಸೋಲಿಗೆ ಕಾರಣವೇ.

ಬಡ ಬಡಿಸುವೆ ಬರೀ ಪದಗಳ ಜೋಡನೆಯಲಿ ಭಕ್ತಿಯಾ ಕೊರತೆ ಕಾರಣವೇ
ನೀನಿಲ್ಲದ ಬದುಕು ಅಸಹನೀಯ ಎನ್ನುವುದು ಬರೀ ತೋರಿಕೆಯ ಬೂಟಾಟಿಕೆಯೇ.

ಒಳಗೆ ಮನದೊಳು ಬಯಕೆಗಳ ಮಹಾ ಪೂರವು ತೋರಿಕೆಗೆ ಭಕ್ತಿಯ ಆಚರಣೆಯೇ
ಸುಪ್ತ ಮನದ ಆಳದಲಿ ತುಂಬಿಹ ಮಲಿನ ಭಾವಗಳ ಎಡ ಬಿಡದ ತಾಕಲಾಟವೇ.

ಬಯಸುವೆ ಗುರುವೇ ನಿತ್ಯ  ನಿನ್ನ ಭಜಿಸುವ ನಿರಂತರ ನಿರ್ಮಲ ಭಾವವೇ 
ನನ್ನ ಸಲಹಿ ಹರಸಲು ತಡವೇಕೆ ಮಾಡುತಿಹೆ ಓ ನನ್ನ ಸಖರಾಯ ಪ್ರಭುವೇ.

No comments:

Post a Comment