ಒಟ್ಟು ನೋಟಗಳು

Thursday, July 10, 2025

ಹರನೂ ನೀನೇ ಹರಿಯೂ ನೀನೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಹರನೂ ನೀನೇ ಹರಿಯೂ ನೀನೇ ನನ್ನ ಪಾಲಿಗೆ ಎಲ್ಲವೂ ನೀನೆ ಗುರುವೇ
ನೀನಿಲ್ಲದೇ ಬದುಕು ಇಲ್ಲವೆನಗೆ ಸದಾ ನಿನ್ನಲ್ಲೇ ಲೀನನಾಗಿಹೆ ಪ್ರಭುವೇ.

ಒಂದೊಂದು ಕ್ಷಣ ನಿನ್ನ ನೆನೆಯದೇ ಹೋದರೆ ಬೆದರುವುದು ಜೀವ
ನಿನ್ನ ಆಸರೆಯೊಂದೇ ಸಾಕೆನಗೆ ಬದುಕಿನ ಕೊನೆಯ ತನಕ ಬೇಡುವುದು ಜೀವ.

ನಿನ್ನ ಭಜಿಸುವ ಪರಿಯ ಅರಿಯಲಾರೆ ನಿನ್ನ ಇರುವಿನ ಅರಿವು ತಿಳಿಯಲಾರೆ
ನಿನ್ನ ಕೃಪೆಯ ಬೇಡಿ ಬರುವೆ ನಾನು ಬದುಕು ಬರಿದಾಗಿ ದಾರಿ ಕಾಣಲಾರೆ.

ತಪ್ಪು ಒಪ್ಪುಗಳ ಅರಿವಿಲ್ಲ ಎನಗೆ ದಾರಿ ತೋರುವ ಗುರು ನೀನಾಗು ಪ್ರಭುವೇ
ಅಂಧಕಾರ ಅಳಿಸಿ ಜ್ಞಾನವನು ಕರುಣಿಸಿ ಎನ್ನ ಪೊರೆಯೋ ಸಖರಾಯ ದೊರೆಯೇ.

Friday, January 31, 2025

ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ ಇನ್ನೆಲ್ಲೋ ಹುಡುಕುತಿಹೆನೋ ಗುರುವೇ
ಇರುವಿನರಿವು ಮೂಡಲು ಇನ್ನೆಷ್ಟು ಕಾಡಿ ಬೇಡಬೇಕೋ ತಿಳಿಯನು ನನ್ನ ದೊರೆಯೇ.

ನಿನ್ನಿರುವ ಮರೆತು ಮನ ತೋರಿದೊಡೆ ಓಡುವ ಬದುಕಿಗೆ ಅರ್ಥವಿದೆಯಾ ಗುರುವೇ
ತೋರುವರ್ಯಾರೋ ಸರಿ ದಾರಿಯ ಮಂಕನಂತೆ ತಿರುಗಿ ಬಸವಳಿದೆ ಪ್ರಭುವೇ.

ಯೋಗ್ಯನಲ್ಲ ನಾನು ನಿನ್ನ ಪ್ರೀತಿ ಗಳಿಸಲು ಸೋತು ಸುಣ್ಣವಾಗಿ ಅಸಹಾಯಾಕನಾದೆನೋ 
ಬೇಡಲು ಮನ ಒಪ್ಪದು ಮಾಡಿದಾ ಕರ್ಮವದು ಬಲು ಕಾಡುತಿಹದೋ ದೊರೆಯೇ.

ನಿನ್ನೆದುರು ನಿಂತು ಬೇಡಲಾರದೆ ಅನ್ಯರಿಗೆ ಶರಣಾಗಿ ಅಂಗಲಾಚಿದೆ ನಿನ್ನ ಕರುಣೆಗಾಗಿ
ಕಾರುಣ್ಯಸಿಂದು ಎಂದು ಬಿರುದು ಹೊತ್ತವ ನೀನು ಪಾಮರನ ಕೂಗು ಆಲಿಸದಾದೆಯಾ.

ಸಹಜ ಬದುಕು ಬಳಲಾರದೆ ಬಣ್ಣ ಬಳಿದು ವೇಷ ಧರಿಸಿ ನಿಂತರೆ ಅರಿಯಲಾರೆಯಾ
ಎಲ್ಲದಕೂ ಕ್ಷಮೆ ಇರಲಿ ಮುನಿಸು ತೋರಬೇಡ ನನ್ನ
ಸಖರಾಯಪುರದ ಮಹಾದೇವನೇ.

ಜೊತೆ ಇರಲು ನೀನು ಭಯ ಪಡೆನು ನಾನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಜೊತೆ ಇರಲು ನೀನು  ಭಯ ಪಡೆನು ನಾನು ಇನ್ನೆಂದೂ ಗುರುನಾಥ
ಅಭಯ ನೀಡಲು ನೀನು ಇನ್ನೇಕೆ ಮರುಗುವೆನು ನಾನು ಹೇಳೋ ಗುರುನಾಥ.

ದೂರ ಮಾಡಿದೆ ನೀನೆಂದು ಕೊರಗುತಲಿ ಕಾಲ ಕಳೆದೆನು ಗುರುದೇವ
ನೀ ಜೊತೆಗಿರಲು ಬದುಕು ನಡೆವುದ ಅರಿಯದೇ ಮೂಡನಾದೆ ಗುರುದೇವ.

ಕರ್ಮದ ಫಲವು ಕಾಡುವುದೆಂದು ನೀ ಹೇಳಿದರೂ ಸುಮ್ಮನೆ ಕೊರಗಿದೆ ನಾನು
ನಿನ್ನ ಚರಣದಲಿ ಶಿರವಿರಿಸಿ ಎಲ್ಲವೂ ನಿನ್ನದೆನುವುದ ಮರೆತು ಹಲುಬಿದೆ ನಾನು.

ಕಾಯುವುದ ಕಲಿಯಲಿಲ್ಲ  ಬರೀ ಅವಸರದಲಿ ಬೇಡುವುದೊಂದೇ ಬದುಕಾಯಿತು
ಬೇಕು ಬೇಡಗಳ ಸುಳಿಯೊಳು ಬದುಕಿನರ್ಥ ಅರಿಯದೆ ಸಮಯ ವ್ಯರ್ಥವಾಯಿತು.

ನೀ ಹರಸ ಬೇಕೆಂಬುದು ನನ್ನ ಬಯಕೆ ಆಗದಿರಲಿ ಅದು ಬರೀ ಮರೀಚಿಕೆ
ಸಕಲವನು ಅರಿತಿಹ ನಿನ್ನ ಬೇಡುವುದು ಕಾಡುವುದು ಸರಿಯೇನು ಸಖರಾಯಾಧೀಶ.