ಒಟ್ಟು ನೋಟಗಳು

Sunday, December 4, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 61


    ಗ್ರಂಥ ರಚನೆ - ಚರಣದಾಸ 


ವೆನಿಲಾ ಬೆಳೆದವನ ಹೃದಯಬೇನೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಕಳಸಾಪುರ ಸಮೀಪದ ಹಳ್ಳಿಯೊಂದರ ವಾಸಿಯಾದ ವ್ಯಕ್ತಿಯೋರ್ವರು ಕೋಟಿ ಬೆಲೆಬಾಳುವ ವೆನಿಲಾ ಬೆಳೆದಿದ್ದರು. ಗುರುನಾಥರ ಸಂಪರ್ಕವಿದ್ದ ಅವರಿಗೆ ಇದ್ದಕ್ಕಿದ್ದಂತೆ ಎದೆನೋವಾಗಿ ಪರೀಕ್ಷಿಸಲು ಹೃದಯದಲ್ಲಿ ತೂತಿದ್ದು ಆಪರೇಷನ್ ಅನಿವಾರ್ಯವೆಂದು ವೈದ್ಯರು ಹೇಳಿದ್ದರು. 

ಆ ವ್ಯಕ್ತಿ ಗುರುದರ್ಶನ ಮಾಡಲು ಬರುವಾಗ ಚಿಕ್ಕಮಗಳೂರಿನಲ್ಲೇ ಗುರು ದರ್ಶನವಾಯಿತು. ಸಾಗರ ಸಮೀಪದ ಯತಿವರೇಣ್ಯರ ದರ್ಶನಕ್ಕಾಗಿ ಕಾಯುತ್ತಿದ್ದ ಗುರುನಾಥರು ಮಳೆಯನ್ನೂ ಲೆಕ್ಕಿಸದೇ ರಸ್ತೆಬದಿ ನಿಂತಿದ್ದರು. 

ಗುರುನಾಥರು ಆ ವ್ಯಕ್ತಿಗೆ "ನಿನಗೆ ವೆನಿಲಾದ ಕೋಟಿ ಹಣ ಬೇಕೋ? ಜೀವ ಬೇಕೋ?" ಎನ್ನಲು ಆತ "ಜೀವ" ಎಂದರು. 

ಆಗ ಬಂದ  ಯತಿಗಳಿಗೆ ಆ ವ್ಯಕ್ತಿಯಿಂದ ಪಾದ ಪೂಜೆ ಮಾಡಿ, ಭಿಕ್ಷಾವಂದನೆ ನೀಡುವಂತೆ ಹೇಳಿದರು. ಅವರು ಹಾಗೆಯೇ ಮಾಡಿದರು. 

ನಂತರ ಗುರುನಾಥರು ಆ ವ್ಯಕ್ತಿಗೆ ಇನ್ನೂ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಹೋಗೆಂದು ತಿಳಿಸಿದರು. 

ಆ ವ್ಯಕ್ತಿ ಬೆಂಗಳೂರಿನಲ್ಲಿ ಭೇಟಿಯಾದ ವೈದ್ಯರ ಹೆಸರು ರಾಮ ಎಂಬ ಅಕ್ಷರದಿಂದ ಆರಂಭವಾಗಿತ್ತು. ಪರೀಕ್ಷೆಗೆ ಹೋದಾಗ ಒಳಗೆ ಹಾಕಿದ್ದ ಹಾಡು ರಾಮನ ಕುರಿತಾಗಿತ್ತು. 

ಹಾಗೆಯೇ ಹಿಂದಿನ ದಿನ ದರ್ಶನವಾಗಿದ್ದ ಸನ್ಯಾಸಿಗಳೂ "ರಾಮ" ಎಂಬ ಹೆಸರಿನ ಮಠದವರಾಗಿದ್ದರು. ಎಲ್ಲಕ್ಕಿಂತ ವಿಶೇಷವಾಗಿ ಆ ವ್ಯಕ್ತಿಯ ಹೃದಯ ತೊಂದರೆಗೆ ಆಪರೇಷನ್ ಬೇಡವೆಂದು ತಿಳಿದು ಬಂತು. ಆ ವ್ಯಕ್ತಿ ಇಂದಿಗೂ ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ. 

ಮತ್ತೊಮ್ಮೆ ಬೆಂಗಳೂರಿನಿಂದ ಒಬ್ಬ ಕಟ್ಟಡ ನಿರ್ಮಾಣಕಾರರು ಗುರುನಿವಾಸಕ್ಕೆ ಬಂದಿದ್ದರು. "ತೀರಾ ಇತ್ತೀಚೆಗಷ್ಟೇ ನನ್ನ ಸಹೋದರನು ಅಕಾಲಿಕ ಮೃತ್ಯುವಿಗೆ ಈಡಾಗಿದ್ದು ಆ ನಂತರದಲ್ಲಿ ಮನೆಯ ನೆಮ್ಮದಿ ಹಾಳಾಗಿದೆ. ಏನು ಕಾರಣವೆಂದು ತಿಳಿದು ಬಂದಿಲ್ಲ. ಅದಕ್ಕಾಗಿ ತಮ್ಮಲ್ಲಿಗೆ ಬಂದೆ" ಎಂದು ಆತ ಗುರುನಾಥರಲ್ಲಿ ಬಿನ್ನವಿಸಿಕೊಂಡನು. 

ಆಗ ತುಸು ಯೋಚಿಸಿದ ಗುರುನಾಥರು ಅವರಿಗೆ "ನೀನು ಆ ಮನೆಯನ್ನು ಕೆಲಕಾಲ ಬದಲಿಸೋದು ಒಳ್ಳೆಯದಪ್ಪಾ.. ಕಾರಣ ನಿನ್ನ ಸೋದರಿ ಮರಣಿಸಿದ ಘಳಿಗೆ ಒಳ್ಳೆಯದಿಲ್ಲ. ಅದಕ್ಕಾಗಿ ನಿಮಗೆ ಹಿಂಸೆ ಆಗುತ್ತಿದೆ" ಎಂದರು. 

ಅಲ್ಲಿಂದ ಹಿಂತಿರುಗಿದ ಆತ ಸ್ವಂತ ಮನೆಯನ್ನು ಹೇಗೆ ಬದಲಿಸಲು ಸಾಧ್ಯ? ಎಂದು ಯೋಚಿಸಿ ಗುರುವಾಕ್ಯವನ್ನು ಕಡೆಗಣಿಸಿ ಅಲ್ಲಿಯೇ ವಾಸ ಮುಂದುವರೆಸಿದರು. 

ಆ ಸಂದರ್ಭದಲ್ಲಿ ಆತನ ಪತ್ನಿ ತುಂಬು ಗರ್ಭಿಣಿಯಾಗಿದ್ದರು. ಗುರುವಾಕ್ಯ ಕಡೆಗಣಿಸಿದ ಪರಿಣಾಮ ಹುಟ್ಟಿದ ಮಗು ತೊನ್ನು ಖಾಯಿಲೆ ಹಾಗೂ ಪಾರ್ಶ್ವವಾಯು ಪೀಡಿತವಾಗಿತ್ತು. ಆದಾಗ್ಯೂ ಅವರು ಮನೆ ಬದಲಿಸಲಿಲ್ಲ. ಇದರಿಂದ ಆತ ತೀರಾ ಸಂಕಷ್ಟಕ್ಕೆ ಈಡಾದರು. ಮಾತ್ರವಲ್ಲ ಹದಿನೈದು ವರ್ಷ ರೋಗದಿಂದ ನರಳಿದ ಆ ಮೂಗು ಸತ್ತು ಹೋಯಿತು ಕೂಡ.......,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।



Saturday, December 3, 2016

ಶ್ರೀ ಸದ್ಗುರು ದತ್ತಾತ್ರೇಯ ವಿಶ್ವಸ್ಥ ಮಂಡಳಿ, ಬಾಣಾವರ ವತಿಯಿಂದ ಸಮರ್ಥ ಸದ್ಗುರು ಶ್ರೀ ವೆಂಕಟಾಚಲ ಅವಧೂತರ ಜನೋತ್ಸವದ ಆಯೋಜನೆ  - ಕೃಪೆ: ಶ್ರೀಹರ್ಷ ಹರಿಹರಪುರ, ಬೆಂಗಳೂರು 


ಶ್ರೀ ಸದ್ಗುರು ದತ್ತಾತ್ರೇಯ ವಿಶ್ವಸ್ಥ ಮಂಡಳಿಯು ಕರ್ನಾಟಕದ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಇದೇ ತಿಂಗಳ ಮಾರ್ಗಶಿರ ಬಹುಳ ಷಷ್ಠಿ (19.12.2016) ಯಂದು ಸಮರ್ಥ ಸದ್ಗುರು ಶ್ರೀ ವೆಂಕಟಾಚಲ ಅವಧೂತರ ಜನ್ಮೋತ್ಸವ ಕಾರ್ಯಕ್ರಮವನ್ನು ಬಾಣಾವರದ ದತ್ತ ಕ್ಷೇತ್ರವಾದ ಶ್ರೀ ನಾರಾಯಣ  ಯೋಗೀಂದ್ರ ಸರಸ್ವತಿ ಪರಮಹಂಸರ ದಿವ್ಯ ಬೃಂದಾವನದ ಸನ್ನಿಧಿಯಲ್ಲಿ ಹಮ್ಮಿಕೊಂಡಿರುತ್ತದೆ. 



ಕಾರ್ಯಕ್ರಮವು 19.12.2016, ಸೋಮವಾರ ಬೆಳಿಗ್ಗೆ ಆರು ಗಂಟೆಗೆ ಕಾಕಡಾ ಆರತಿಯೊಂದಿಗೆ ಪ್ರಾರಂಭವಾಗಿ ನಂತರ  ವೀಣಾ ನಾಮಸ್ಮರಣೆ, ಭಜನೆ, ಪ್ರವಚನ, ಮಹಾ ಮಂಗಳಾರತಿ ಹಾಗೂ ಮಧ್ಯಾನ್ಹ ಮಹಾಪ್ರಸಾದದೊಂದಿಗೆ ಸುಸಂಪನ್ನಗೊಳ್ಳುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಗುರುಬಂಧುಗಳು ಶ್ರೀ ಹರ್ಷ ಹರಿಹರಪುರ - ಮೊಬೈಲ್ ಸಂಖ್ಯೆ  89711 25996 ಅಥವಾ ನಾಗರಾಜ್ - ಮೊಬೈಲ್ ಸಂಖ್ಯೆ 90359 35685 ಅನ್ನು ಸಂಕರ್ಪಿಸಬಹುದಾಗಿದೆ. 

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 21


ಆ ದಿನಗಳಲ್ಲಿ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ನನ್ನ ಸಾರಥಿಯಾಗಬೇಕು


ಗುರುನಾಥರ ಬಳಿ ಬರುತ್ತಿದ್ದ, ಅವರನ್ನು ಅಪಾರವಾಗಿ ಪೂಜಿಸುತ್ತಿದ್ದ ಗುರುಭಕ್ತೆಯೊಬ್ಬರ ಬಳಿ, ಆಗಾಗ್ಗೆ 'ನೀನು ತಾಯಿ, ನನ್ನ ತಲೆಗೆ ಎಣ್ಣೆ ಹೆಚ್ಚು, ಅಭ್ಯಂಜನ ಮಾಡಿಸು' ಎಂದು ಸೇವೆ ತೆಗೆದುಕೊಳ್ಳುತ್ತಿದ್ದರಂತೆ. 

ಗುರುನಾಥರು ಕೊನೆಯ ದಿನಗಳಲ್ಲಿ, ಸಖರಾಯಪಟ್ಟಣದ ತಮ್ಮ ಮನೆಯಲ್ಲಿ ಇರುವಾಗ ಆ ಗುರುಭಕ್ತೆಯ ಪತಿಯನ್ನು ಕರೆದು, ಒಂದು ಶ್ವೇತ ವಸ್ತ್ರವನ್ನು ನೀಡುತ್ತಾ 'ನೋಡಪ್ಪಾ, ನೀನು ನನ್ನ ಕೊನೆಯ ಘಳಿಗೆಯ ಸಾರಥಿಯಾಗಬೇಕು. ಈ ವಿಚಾರವನ್ನು ಯಾರ ಮುಂದೆಯೂ ಹೇಳಬೇಡ' ಎಂದಾಗ ಆ ಭಕ್ತರಿಗಾದ ಅಪಾರ ನೋವನ್ನು ವರ್ಣಿಸಲಾಗದು. ಗುರುನಾಥರ ಅಗಲಿಕೆಯ ವಿಚಾರವೇ ಸಹಿಸಲಸದಳವಾದರೂ, ಇಚ್ಛಾ ಮರಣಿಗಳಾದ, ಪ್ರಕೃತಿ ನಿಮಯದಂತೆ ಈ ಭೌತಿಕ ಶರೀರವನ್ನು ಒಂದು ದಿನ ಕಳಚಲೇ ಬೇಕೆಂಬ ಸತ್ಯವರಿತ ಗುರುನಾಥರಂತೂ ನಿರ್ವಿಕಾರಿಗಳಾಗಿ ಇರುತ್ತಿದ್ದರು. ಹೀಗೆ ಸೂಚ್ಯವಾಗಿ, ಸಾಂಕೇತಿಕವಾಗಿ ಗುರುನಾಥರು ತಮ್ಮಗಲಿಕೆಯ ವಿಚಾರವನ್ನು ಭಕ್ತ ಸಮಾಜಕ್ಕೆ ಮೊದಲೇ ತಿಳಿಸಿ, ಅವರ ಸ್ಥೈರ್ಯವನ್ನು ದೃಢಗೊಳಿಸುತ್ತಿದ್ದರು. ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಿದ್ದರು. 

ಒಂದು ಸ್ವಲ್ಪ ಅವನ್ನ ನೋಡ್ಕಳಯ್ಯ 


ಅನೇಕ ದಿನಗಳಿಂದ ಗುರುನಾಥರ ಎಡಬಿಡದೆ ಜೊತೆಗಿರುತ್ತಿದ್ದ ನನಗೆ ಗುರುನಾಥರ ಲೀಲೆಯನ್ನು ಆ ದಿನ ಅರಿಯಲಾಗಲಿಲ್ಲ. ಸಣ್ಣದಾಗಿ ಮಳೆಯು ಜಿನುಗುತ್ತಿತ್ತು. 1963ರಲ್ಲಿ ಅವರ ತಂದೆಯವರು ಗುರುನಾಥರಿಗಾಗಿ ಕಟ್ಟಿಸಿದ ಮನೆಯಲ್ಲಿರಲು ಅವರು ಇಚ್ಛಿಸುತ್ತಿದ್ದುದರಿಂದ, ಓಡಾಡಲಾಗದ ಅವರನ್ನು ನಾವು ಗುರುಬಂಧುಗಳೆಲ್ಲಾ ಕೈಗಳ ಕುರ್ಚಿ ಮಾಡಿ ಈ ಮನೆಗೆ ತಂದಿದ್ದೆವು. ರುದ್ರಜಪ, ಧ್ಯಾನದಲ್ಲಿ ನಿರಂತರ ನಿರತರಾಗಿದ್ದ ಅವರಿಗೆ ಸಾವು-ನೋವುಗಳ ಭಯವೇ ಇರಲಿಲ್ಲ. ಅಂದು ಅವರು ಏನೋ ನಿರ್ಧರಿಸಿದಂತೆ ಇತ್ತು. ರಾತ್ರಿ ಹತ್ತೂವರೆಯ ಸಮಯ ಗುರುನಾಥರು ಮಲಗಿದ್ದರು. ಅವರ ಮಗ ಬಂದು ಗುರುನಾಥರಿಗೆ ಹೊದಿಕೆ ಹೊದಿಸುತ್ತಾ, ಪಾದಗಳಿಗೆ ನಮಸ್ಕರಿಸಿ ಹೊರಬಂದರು. 

ಇದಕ್ಕೆ ಸ್ವಲ್ಪ ಸಮಯದ ಮುಂಚೆ ಗುರುನಾಥರಿಗೆ, ದೂರವಾಣಿ ಕರೆಯೊಂದು ಬಂದಿತ್ತು. ಕೊಡಲೋ, ಬೇಡವೋ ಎಂದು ಯೋಚಿಸುತ್ತಿದ್ದಾಗ ತುಂಬಾ 'ಆಲಸ್ಯವಾಗಿದೆ ಕಣಯ್ಯಾ. ಬೆಳಿಗ್ಗೆ ಮಾತಾಡ್ತೀನಿ' ಅಂದವರು ಮತ್ತದೇಕೋ ಫೋನು ತೆಗೆದುಕೊಂಡು ಫೋನಿನಲ್ಲಿ ಬಹಳ ಹೊತ್ತು ಮಾತನಾಡಿದರು. ಇದಾಗಿ ಮಗ ಬಂದು ಹೊದಿಕೆ ಹೊದಿಸುವಂತೆ ನಾಟಕ ಮಾಡಿ ನಮಿಸಿ, ಹೊರ ಹೋದಾಗ 'ಅಯ್ಯಾ ಮಳೆಯಲ್ಲಿ ಅವನು ಹೋಗ್ತಾ ಇದಾನಯ್ಯಾ, ಅವನ್ನ ಸ್ವಲ್ಪ ನೋಡ್ಕಳಯ್ಯ' ಎಂದಾಗ ನನಗೆ ಹೊರಬರುವುದು ಅನಿವಾರ್ಯವಾಗಿತ್ತು. ಇದೇ ನಾನು ಕೇಳಿದ ಕೊನೆಯ ವಾಕ್ಯ. ಗುರುನಾಥರ ವೇದಿಕೆಯ ಎದುರು ಕುಳಿತ ಆ ವ್ಯಕ್ತಿ ಬಿಕ್ಕಿದರು. ಆ ಕೊನೆಯ ವಾಕ್ಯ - ಗುರುಬಂಧುಗಳ ಮೇಲೊಂದು ಜವಾಬ್ದಾರಿಯನ್ನು ಆಂತರ್ಯದಲ್ಲಿ ಸೂಚಿಸಿತ್ತು. ಶಿರೋಧಾರಿಯಾದ ಆ ಗುರುವಾಕ್ಯವನ್ನಿಂದೂ ಅವರು ನಡೆಸುತ್ತಾ ಸಾಗಿದ್ದಾರೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ಗುರುನಾಥರು ವಹಿಸಿದ್ದಾರೆ. ಏಕೆಂದರೆ ಕರ್ಮತತ್ವದಿಂದ ತನ್ನ ಭಕ್ತರು ದೂರವಾಗಬಾರದೆಂದು ಗುರುವಿನ ಆಶಯವಿರಬೇಕು. ಎಲ್ಲೆಡೆ ಅದು ನಿರಂತರವಾಗಿ ಸಾಗಿರುವುದೇ ಆನಂದದ ಸಂಗತಿ. ಗುರುನಾಥರ ಕೃಪಾ ವಿಶೇಷ. 


ದಿನನಿತ್ಯ ರುದ್ರಾಭಿಷೇಕ 


ಗುರುನಾಥರ ನಿರಂತರ ಸೇವೆಯಲ್ಲಿ ನಿರತರಾದ ಅವರ ಆಪ್ತ ಬಂಧುವೊಬ್ಬರು ಆ ದಿನಗಳ ಗುರುನಾಥರ ಜೀವನವನ್ನು ಸ್ಮರಿಸುತ್ತಾ "ದಿನ ನಿತ್ಯ ಎಲ್ಲಾ ದೇವರ ವಿಗ್ರಹಗಳನ್ನು ಒಂದು ದೊಡ್ಡ ಜರಡಿಯಲ್ಲಿರಿಸಿ, ರುದ್ರ ಪಠಣ ಮಾಡಿ, ಅಭಿಷೇಕ ಮಾಡಲು ತಿಳಿಸುತ್ತಿದ್ದರು. ಗುರುನಾಥರ ಕಾಲಿಗೆ ಆಪರೇಷನ್ ಆಗಿತ್ತು. ನೀರು ಸೋಂಕುವಂತಿರಲಿಲ್ಲ. ಆದರೂ 'ಇರಲಿ ಬಿಡಯ್ಯ. ಏನೂ ಆಗಲ್ಲ' ಎನ್ನುತ್ತಿದ್ದರು. ನಾವು ಪ್ಲಾಸ್ಟಿಕ್ ಗಳನ್ನೆಲ್ಲಾ ಕಟ್ಟಿ, ಬ್ಯಾಂಡೇಜು ಹಾಕಿ ತಡ ನಂತರ ತಲೆಯ ಮೇಲೆ ರುದ್ರಾಭಿಷೇಕ ಮಾಡಿದ, ಎಲ್ಲಾ ದೇವರುಗಳ ತೀರ್ಥ ಗುರುನಾಥರ ತಲೆ, ಮೈ ಕೈಗಳ ಮೇಲೆ ಬೀಳುವಂತೆ ಅಭಿಷೇಕ ಮಾಡುತ್ತಿದ್ದೆವು. ಸ್ವತಃ ಗುರುನಾಥರೂ ರುದ್ರಘೋಷ ಮಾಡುತ್ತಿದ್ದರು" ಎಂದರು. 

ಸ್ವತಃ ಗುರುನಾಥರೇ ಶಿವ ಸ್ವರೂಪರಾಗಿದ್ದರೂ, ಭೌತಿಕ ಶರೀರ ಧರಿಸಿದ ಮೇಲೆ ಈ ಶರೀರಕ್ಕಾಗಬೇಕಾದ ಎಲ್ಲಾ ಕಾರ್ಯಗಳನ್ನೂ ಮನುಷ್ಯ ಸಹಜರಂತೆ, ಅನುಭವಿಸಿದರು. "ಕರ್ಮವನ್ನು ಅನುಭವಿಸಿಯೇ ತೀರಬೇಕು. ಅದನ್ನು ತಪ್ಪಿಸಿಕೊಂಡು ಓಡುವುದಲ್ಲ. ಆದರೆ, ಅದ್ಯಾವುದರಲ್ಲೂ ನಾವು ಅಂಟಿಕೊಳ್ಳಬಾರದೆಂಬುದನ್ನು ಭಕ್ತರಿಗೆಲ್ಲಾ ತೋರಿಸಿದರು". 


ಇನ್ನು ಮೆಟ್ಟಿಲು ಹತ್ತಲ್ಲ 


ಯಾವಾಗಲೂ ತಮ್ಮ ಪ್ರಿಯರಾದ ಗುರುಭಕ್ತರೊಬ್ಬರ ಮನೆಗೆ ಪದೇ ಪದೇ ಬರುತ್ತಿದ್ದ ಗುರುನಾಥರು, ಅಂದು ಅವರಿಗದೇನು ಅನಿಸಿತೋ ಏನೋ, ತಮ್ಮ ಇಹ ಯಾತ್ರೆಯ ಪರಿಸಮಾಪ್ತಿಯ ಬಗ್ಗೆ ಮುನ್ಸೂಚನೆ ನೀಡಿದರಂತೆ. "ಅಯ್ಯಾ, ಇನ್ನು ನನ್ನದಾಯ್ತಯ್ಯಾ, ಇನ್ನು ಮುಂದೆ ನಾನು ಮೆಟ್ಟಿಲು ಹತ್ತುವುದಿಲ್ಲ" ಎಂದಿದ್ದರು. ಸಾಮಾನ್ಯರಿಗಿದು, ಗುರುಗಳ ಕಾಲಿಗೆ ಆಗಿರುವ ನೋವಿನಿಂದಾಗಿ ಅವರಿಗೆ ಮೆಟ್ಟಿಲು ಹತ್ತುವುದು ಕಷ್ಟ. ಹಾಗಾಗಿ ಹೀಗೆ ಮಾತನಾಡಿರಬಹುದೆಂದು ಎಣಿಸಿದರೇನೋ. ಗುರುನಾಥರ ಮಾತಿನ ಮರ್ಮವೇ ಬೇರೆ. ಅದರಂತೆಯೇ ಅದೇ ಅವರು ಆ ಭಕ್ತರ ಮನೆಗೆ ಬಂದಿದ್ದು ಕಡೆಯದಾಯಿತು. ಆದರೇನು, ಭಕ್ತ ಪರಾಧೀನನಾದ ಗುರುನಾಥರು, ದೇಹದ ಪರಾಧೀನತೆಯಿಂದ ಮುಕ್ತರಾದ ಮೇಲೆ - ಎಲ್ಲರ  ಮನೆ ಮನಗಳಲ್ಲಿ ಇರುವುದು, ಹಲವೆಡೆ ಸಶರೀರವಾಗಿ ಕಂಡುಬಂದಿರುವುದೂ ಗುರುಲೀಲೆಯ ಮತ್ತೊಂದು ಮುಖವಾಗಿದೆ. ಅನೇಕರಿಗೆ ಗುರುವಿನ ಮರ್ಮದ ಮಾತುಗಳು ಅರ್ಥವಾದರೂ ಏನೂ ಮಾಡಲಾಗದ ಸ್ಥಿತಿ ಇದ್ದರೆ  - ಇನ್ನು ಕೆಲವರಿಗೆ ಹುಟ್ಟು ಸಾವು ಈ ದೇಹಕ್ಕೆ ಗುರುನಾಥರು 'ಸದಾ ನಿಮ್ಮೊಂದಿಗೆ ಇರುತ್ತೇನೆಂದು' ಅಭಯ ನೀಡಿದ್ದಾರಲ್ಲಾ ಎಂದು ನಿಶ್ಚಿಂತರಾಗಿ ಗುರುನಾಥರ ಚಿಂತನೆ, ನಾಮಸ್ಮರಣೆಯಲ್ಲಿ ತೊಡಗಿದವರೂ ಇದ್ದಾರೆ. 


ಎದುರಿಸಲಾಗದ ಸತ್ಯ 


ಎಷ್ಟು ತತ್ವಗಳನ್ನರಿತರೂ, ಘಟನೆಯನ್ನು ಎದುರಿಸುವಲ್ಲಿ, ತಾಯಿಗಿಂತ ಮಿಗಿಲಾದ ಪ್ರೀತಿಯ ಸವಿಯನ್ನು ಅನುಭವಿಸಿ ಅದನ್ನು ಕಳೆದುಕೊಳ್ಳುತ್ತಿದ್ದೇವೆ ಎಂದಾಗ ದುಃಖ ಉಮ್ಮಳಿಸಿ ಬರುವುದು ಸಹಜ. ಆರ್ತರಾಗಿ ಹೋದಾಗಲೆಲ್ಲಾ ತಲೆದಡವಿ ಸಂತೈಸುತ್ತಿದ್ದ ಆ ಜೀವವಿಲ್ಲ ಎಂದಾಗ ದುಃಖವಾಗದೆ ಇರುತ್ತದೆಯೇ? ಗುರುನಾಥರ ವಿಯೋಗದ ದುಃಖ ಹರಿಸಲು ಈ ಒಂದು ಪ್ರಸಂಗ ಸಹಾಯವಾದೀತು. ಗುರುಚರಿತ್ರೆಯಲ್ಲಿ ಒಂದು ಕಡೆ ಬರುವ ಈ ಪ್ರಸಂಗವೆಂದರೆ, ಗುರುಗಳು ತಮ್ಮ ಗಾಣಗಾಪುರ ವಾಸದ ಇಹಲೀಲೆಯನ್ನು ಪೂರೈಸಿ, ಶ್ರೀ ಗಿರಿಗೆ ಹೋಗುವ ವಿಚಾರ ತಿಳಿಸಿ, ನದಿಯ ಸಮೀಪಕ್ಕೆ ತೆರಳುವಾಗ ಅವರ ನಾಲ್ಕು ಜನ ಪ್ರಿಯ ಶಿಷ್ಯರಿರುತ್ತಾರೆ. ಊರ ಹೊರಗಿನವರೆಗೆ ಊರ ಮಂದಿ ಶಿಷ್ಯರೆಲ್ಲಾ ಗುರುವಿನ ಅಗಲಿಕೆಗಾಗಿ ರೋಧಿಸುತ್ತಾ ಬಂದು 'ಗುರುಗಳು ಹೋಗಬಾರದೆಂದು' ವಿನಂತಿಸುತ್ತಾರೆ. ಗುರುಗಳು ಸಮಾಧಾನ ಹೇಳಿ, ನಾನೆಲ್ಲೂ ಹೋಗುವುದಿಲ್ಲ. ಪ್ರತಿನಿತ್ಯ ಮಧ್ಯಾನ್ಹ ಗಾಣಗಾಪುರಕ್ಕೆ ಭಿಕ್ಷೆಗೆ ಬರುತ್ತೇನೆ. ಸದಾ ನನ್ನ ನಿರ್ಗುಣ ಆವಾಸ ಇಲ್ಲಿಯೇ ಎಂದು ಸಂತೈಸಿ ಬೀಳ್ಕೊಡುತ್ತಾರೆ. ಊರಿಗೆ ಬಂದು ಗುರುಮಠಕ್ಕೆ ಬಂದ  ಎಲ್ಲಾ ಶಿಷ್ಯರಿಗೆ ಗುರುಗಳು ಮಠದಲ್ಲಿರುವುದು ಗೋಚರಿಸುತ್ತದೆ. ನಂತರ ಅದೃಶ್ಯರಾಗುತ್ತಾರೆ. ಗುರುನಾಥರ ಇಹಲೀಲಾ ಪರಿಸಮಾಪ್ತಿಯ ವಿಚಾರ ತಿಳಿದ ಶಿವಮೊಗ್ಗದ ಭಜನಾ ಮಂಡಳಿಯ ಭಕ್ತರು, ತುಂಗೆಗೆ ಬಾಗಿನ ನೀಡಲು ಹೋಗಿದ್ದು, ನಂತರ ಭಜನಾ ಮಂದಿರಕ್ಕೆ ಬಂದು ಗುರುನಾಥರಿಗೆ ಭಜನೆ ಮಾಡಿ, ಕೆಲಕಾಲ ಮೌನ ಧ್ಯಾನ ಮಾಡಿದರು. 'ದೇಹಾತೀತರಾದ ಗುರುನಾಥರು ಕರೆದಲ್ಲಿ ಬರುತ್ತಾರೆಂದು' ಗುರುನಾಥರ ಲೀಲೆಯ ಸತ್ಸಂಗ ನಡೆಯಿತು. ಅಂದು ಪ್ರಸಾದ ವಿನಿಯೋಗವಾದಾಗ ಒಂದಾದ ಮೇಲೆ ಒಂದರಂತೆ ಹತ್ತು ಹನ್ನೆರಡು ಪ್ರಸಾದಗಳನ್ನು ಹಂಚಲಾಯ್ತು. ಗುರುನಾಥರ ಬಳಿ ಬಂದ ಎಲ್ಲರಿಗಾಗುವ ವಿಶೇಷ ಅನುಭವಗಳಲ್ಲಿ ಮೇಲಿಂದ ಮೇಲೆ ಹಲವು ರೀತಿಯ ಪ್ರಸಾದವನ್ನು ತರಿಸಿ, ಭಕ್ತವೃಂದಕ್ಕೆ ಹಂಚಿಸುವುದೂ ಒಂದು. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು, ಗುರುನಾಥರು ತಮ್ಮ ಬಂಧುಗಳು ಕರೆದಲ್ಲಿ ಬಂದೇ ತೀರುತ್ತಾರೆ ಎಂಬುದಕ್ಕೆ. 


ದಾರಿ ತೋರಿದ ಗುರುನಾಥರು 


ಗುರುನಾಥರ ಅಗಲಿಕೆಯ ಆಘಾತಕಾರಿಯಾದ ಸುದ್ದಿಯಿಂದ ಬಳಲಿದ ಭಕ್ತೆಯೊಬ್ಬರಿಗೆ ಎರಡು ದಿನಗಳು ಅಳುವುದೊಂದೇ ಕೆಲಸವಾಗಿತ್ತು. ದುಃಖದ ಆವೇಗ, ತನ್ನ ಕೆಲಸ ಕಾರ್ಯಗಳನ್ನೂ ಮರೆಸಿತ್ತು. ದೈನಂದಿನ ಕೆಲಸಗಳಿಂದ ವಿಮುಖರಾದರೆ ಮನೆಯ ಇತರರ ಬೇಕು ಬೇಡಗಳ ಜವಾಬ್ದಾರಿ ಹೊತ್ತ ಇವರ ಕೆಲಸ ಮಾಡುವವರು ಯಾರು - ಸುದ್ದಿ ತಿಳಿಯುತ್ತಿದ್ದಂತೆ ಸಖರಾಯಪಟ್ಟಣಕ್ಕೆ ಹೋಗಿ ಬಂದರೂ ಮನಸ್ಸು ಸ್ಥಿಮಿತವಾಗಿರಲಿಲ್ಲ. 

'ಗುರುನಾಥ ನನಗಿನ್ಯಾರು ಗತಿ' ಎಂದು ಚಿಂತಿಸುತ್ತಾ ದುಃಖದಲ್ಲಿಯೇ ನಿದ್ದೆಯ ಮಂಪರಿಗಿಳಿದಾಗ ಕನಸೊಂದು ಬಿತ್ತು . ಗುರುನಾಥರು ಅವರ ಮನೆಗೆ ಬಂದು ಅವರ ದೇವರ ಮನೆಯ ಮುಂಭಾಗದಲ್ಲಿ ಹಾಕಿದ್ದ ಶ್ರೀ ಸತ್ ಉಪಾಸಿ ಸದ್ಗುರುಗಳ ಭಾವಚಿತ್ರದಿಂದ ಒಂದು ಹೂವನ್ನು ತೆಗೆದುಕೊಟ್ಟರಂತೆ. ಕೂಡಲೇ ಅವರಿಗೆ ಎಚ್ಚರವಾಯಿತು. ಇದೇನು ಹೀಗಾಯ್ತಲ್ಲಾ ಎಂದು ತಿಳಿದವರಲ್ಲಿ ಪ್ರಶ್ನಿಸಿದಾಗ - ಗುರುವಿಗೆ ಅಳಿವಿಲ್ಲ - ಭ್ರಾಂತಿಯಲ್ಲಿ ನಾವು ಕರ್ತವ್ಯ ವಿಮುಖರಾಗಬಾರದು. ಸದ್ಗುರುವಿನ ಅನೇಕ ರೂಪಗಳಿವೆ. ಅದರಲ್ಲಿ ಒಂದನ್ನು ನಿನ್ನ ತೃಪ್ತಿಗಾಗಿ ತೋರಿದ್ದಾರೆ  ಎಂದಾಗ, ಸತ್ ಉಪಾಸಿಗಳ ದರ್ಶನ ಪಡೆದು ನಿತ್ಯ ಜೀವನದಲ್ಲಿ ತೊಡಗಿದರಂತೆ. ಹೀಗೆ ದಾರಿ ತೋರಿದರು ಗುರುನಾಥರು. ಮುಂದೆ ಗುರು ನುಡಿಗಳನ್ನು ಮಲಕು ಹಾಕುತ್ತಾ ಅರ್ಥ ಮಾಡಿಕೊಂಡಿದ್ದರು. 


ಅಲ್ಲ ನಿನಗೇನೂ ಕೊಡಲ್ಲಯ್ಯ 


ಚಿಕ್ಕಮಗಳೂರಿನ ಗುರುಭಕ್ತರು, ಗುರುನಾಥರನ್ನು ಮೊದಲ ಬಾರಿ ಕಂಡಾಗ - 'ಏನು ಬಂದಿರಿ ಏಕೆ ಬಂದಿರಿ' ಎಂದು ಕೇಳಿದಾಗ 'ನಿಮ್ಮೊಂದಿಗಿರಲು' ಎಂದು ಅವರು ಉತ್ತರಿಸಿದ್ದರು. ಭಾವಶುದ್ಧತೆಗೆ ಬೆಲೆ ನೀಡುವ ಗುರುನಾಥರು ಕೊನೆಯ ಘಳಿಗೆಯಲ್ಲಿ ಕರೆಸಿಕೊಂಡು ಸಾಮೀಪ್ಯವನ್ನು ನೀಡಿದ ಈ ಅದ್ಭುತವನ್ನು ಆ ಗುರುಬಂಧು ಹೀಗೆ ಹೇಳುತ್ತಾರೆ. "ಒಮ್ಮೆ ಗುರುನಾಥರ ಬಳಿ ಹೋದಾಗ, ಅವರು ಅದೇಕೋ 'ಅಲ್ಲಯ್ಯಾ ನಿನಗೇನು ಕೊಡಲಿ ನಾನು, ಏನಾದರೂ ಕೊಡಬೇಕಲ್ಲಯ್ಯ" ಎಂದು ಕೇಳಿದರಂತೆ. ಅದಕ್ಕೆ ಇವರು 'ಏನೂ ಬೇಡ ಗುರುಗಳೇ, ಈ ನಿಮ್ಮ ಮೇಲಿನ ಪ್ರೀತಿ, ಚಂಚಲವಾಗದೆ ಸದಾ ನಿಮ್ಮ ಮೇಲಿರುವಂತೆ ಅನುಗ್ರಹಿಸಿ'- ಎಂದಿದ್ದರಂತೆ. ಆ ಕೊನೆಯ ಘಳಿಗೆಯಲ್ಲೂ, ದೈಹಿಕ ಯಾತನೆಯಲ್ಲಿಯೂ ನನ್ನ ಮರೆಯಲಿಲ್ಲ. ಆ ರಾತ್ರಿ, ಫೋನು ಮಾಡಿ ಕರೆಸಿದರು. ಜೊತೆಯಲ್ಲಿ ಊಟ ಮಾಡಿದರು. ನಾನು ತಂಡ ಚಿಪ್ಸನ್ನು ಎಲ್ಲರಿಗೂ ಕೊಡೆಂದರು. ಅಂಗಾಲಿನಿಂದ ತಲೆಯವರೆಗೆ ಒತ್ತಲು ತಿಳಿಸಿದರು. ಗುರುನಾಥರಿಗೆ ಅತಿಯಾದ ಕೆಮ್ಮಿತ್ತು. 'ಗುರುಗಳೇ ಇದಕ್ಕೇನು ಔಷಧಿ ಮಾಡಬೇಕೆಂದು' ಕೇಳಿದಾಗ - ಸರಳವಾಗಿ 'ಸೌತೆಕಾಯಿ ತಿರುಳು' ಎಂದರು. ಕೂಡಲೇ ಸೌತೆಕಾಯಿ ತರಿಸಲಾಯ್ತು. ಸೌತೆಕಾಯನ್ನೆಲ್ಲಾ ನಾವು ತಿಂದೆವು. ಅದರ ತಿರುಳನ್ನು ಗುರುನಾಥರಿಗೆ ಅಲ್ಲಿದ್ದ ನಾವು ಗುರುಬಂಧುಗಳು ತಿನ್ನಿಸಿದೆವು. ಗುರುನಾಥರ ಸಂಗದಲ್ಲಿ ಸಮಯ ಜಾರುತ್ತಿದ್ದುದೇ ಅರಿವಾಗಿರಲಿಲ್ಲ. ಅಷ್ಟು ಹೊತ್ತಿಗೆ ಇನ್ನೊಬ್ಬ ಗುರುಬಂಧುವಿಗೆ 'ಇವರನ್ನು ಬಸ್ ಸ್ಟ್ಯಾಂಡಿಗೆ ಬಿಟ್ಟು ಬಿಡಯ್ಯಾ' ಎಂದು ನನ್ನನ್ನು ಆಶೀರ್ವದಿಸಿ ಕಳಿಸಿದರು - ಆ ಲೀಲಾ ನಾಟಕ ಸೂತ್ರಧಾರಿಯು 'ನಿಮ್ಮೊಂದಿಗಿರಲು ಬಂದೆ' ಎಂದ ನನ್ನ ಮನದಾಸೆಯ ಮಾತನ್ನು ಹೀಗೆ ಕರೆಸಿಕೊಂಡು ನಡೆಸಿದ್ದಾರೆಂದು ನನಗಾಗ ತಿಳಿಯಲೇ ಇಲ್ಲ' ಎಂದು ಗುರುನಾಥರ ಅಗಲಿಕೆಯ ಕೊನೆ ಘಳಿಗೆಯ ದರ್ಶನದ ವಿಚಾರವನ್ನು ನಿರ್ವಿಕಾರ ಭಾವದಿಂದ ಅವರು ಹಂಚಿಕೊಂಡರು. ಹೀಗೆ ಗುರುನಾಥರು ಅವರವರ ಬೇಡಿಕೆಗನುಗುಣವಾಗಿ ಅವರ ಬೇಡಿಕೆಯನ್ನು ಪೂರೈಸಿ, ಮಾತು ನಡೆಸಿಕೊಂಡ ಮಹಾತ್ಮರಾದರು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 60


    ಗ್ರಂಥ ರಚನೆ - ಚರಣದಾಸ 


ರೋಹಿಣಿ ವೃತ್ತಾಂತ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಒಂದು ದಿನ ಚರಣದಾಸನಾದ ನನ್ನ ಸೋದರಿಯಿಂದ ಕರೆ ಬಂತು. ಆಕೆಯ ನಾದಿನಿಯೊಬ್ಬರು ಪಾರ್ಶ್ವವಾಯು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಯಾವುದೇ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲವೆಂದು ತಿಳಿದು ಬಂತು. ಒಂದೆರಡು ದಿನಗಳಲ್ಲಿ ಭಾವನವರು ಸಖರಾಯಪಟ್ಟಣಕ್ಕೆ ಬಂದು ಗುರುಗಳನ್ನು ಭೇಟಿಯಾದರು. 

ನಂತರ ಗುರುನಾಥರು ಸಹೋದರಿಗೆ ಕರೆ ಮಾಡಿಸಿ "ನಿನ್ನ ಬಲದಿಂದ ನಿನ್ನ ನಾದಿನಿ ಉಳಿಯುತ್ತಾಳೆ. ಸರ್ವಮಂಗಳ - ಸ್ತೋತ್ರ ಹೇಳ್ತಾ ಇರು ಸಾಕು" ಎಂದರು. 

ಅದಾಗಿ ಎರಡು ಮೂರು ದಿನ ಕಳೆದ ನಂತರ ಚರಣದಾಸನಾದ ನನ್ನನ್ನು "ಬೆಂಗಳೂರಿಗೆ ಹೋಗಿ ಭಾವನ ಅಕ್ಕನನ್ನು ನೋಡಿ ಬಾ" ಎಂದು ಕೆಲ ವಿಷಯಗಳನ್ನು ತಿಳಿಸಿ ಕಳಿಸಿದರು. 

ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಅವರು ಸ್ವತಂತ್ರವಾಗಿ ಎದ್ದು ನಡೆಯುವ ಶಕ್ತಿಯನ್ನೇ ಕಳೆದುಕೊಂಡಿದ್ದರು. 

ನಾನು ಆಸ್ಪತ್ರೆ ಪ್ರವೇಶಿಸುವ ಮೊದಲು ಗುರುನಾಥರು ಹೇಳಿದಂತೆಯೇ ಮಾಡಿ ಒಳ ಹೋದೆನು. ಕೆಲ ನಿಮಿಷಗಳಲ್ಲಿ ಆಕೆ ಸ್ವತಂತ್ರವಾಗಿ ಎದ್ದು ನಡೆದಾಡಿದರು. ನಾ ಆಸ್ಪತ್ರೆಯಿಂದ ಹಿಂತಿರುಗಿದ ಮರುದಿನ ಆಕೆಗೆ ಹೊಟ್ಟೆಯಲ್ಲಿ ನೀರು ತುಂಬಿದ್ದು ಆಪರೇಷನ್ ಆಗಲೇಬೇಕೆಂದು ತಿಳಿದುಬಂತು. ಗುರುವಾಕ್ಯದಲ್ಲಿ ಶ್ರದ್ಧೆ ಇದ್ದ ನಾನು ಮತ್ತೆ ಗುರುಗಳು ಹೇಳಿದಂತೆಯೇ ಮಾಡಲು ಮತ್ತೊಮ್ಮೆ ಪರೀಕ್ಷಿಸಿದ ವೈದ್ಯರು ಮಾತ್ರೆಯಲ್ಲೇ ಗುಣಪಡಿಸಬಹುದೆಂದು ತಿಳಿಸಿ, ಆಪರೇಷನ್ ಬೇಡವೆಂದು ಹೇಳಿದ್ದು ತಿಳಿದುಬಂತು. 

ಆ ಮಹಿಳೆ ಇಂದು ಸ್ವತಂತ್ರವಾಗಿ ನಡೆದಾಡುವ ಸ್ಥಿತಿಯಲ್ಲಿದ್ದು ಆರೋಗ್ಯದಿಂದಿದ್ದಾರೆ. "ಗುರುವಾಕ್ಯ ಪ್ರಮಾಣ" ವೆನ್ನಲು ಇದಕ್ಕಿಂತ ಇನ್ಯಾವ ನಿದರ್ಶನ ಬೇಕು?

ಒಮ್ಮೆ ಚರಣದಾಸನಾದ ನನನ್ ಬಂಧುವೊಬ್ಬರು ತನ್ನ ಪತ್ನಿಯೊಂದಿಗೆ ಗುರುನಿವಾಸಕ್ಕೆ ಬಂದಿದ್ದರು. ಬೆಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಅವರ ಪತ್ನಿ ಸ್ತನ ಕ್ಯಾನ್ಸರ್ ನಿಮ್ದ ಬಳಲುತ್ತಿದ್ದರು. ವೈದ್ಯರು ಸಹ ಆಕೆ ಬದುಕುಳಿಯುವ ಬಗ್ಗೆ ಖಾತ್ರಿ ನೀಡಿರಲಿಲ್ಲ. 

ಸದಾಕಾಲ ಹಣಕ್ಕಾಗಿ ಹಂಬಲಿಸುತ್ತಿದ್ದ ಆ ವ್ಯಕ್ತಿಯನ್ನು ಕುರಿತು ಗುರುನಾಥರು "ಏನು ನಿನ್ನ ಹಣ ಈಗ ನಿನ್ ಹೆಂಡ್ತೀನ ಉಳಿಸುತ್ತಾ? ಈಗ ಆಕೇನ ಉಳಿಸೋದು ಒಳ್ಳೆತನ ಹಾಗೂ ಗುರು ಮಾತ್ರ.... ಅರ್ಥವಾಯ್ತಾ?" ಎಂದು ಗದರಿಸಿದರು. 

ಆ ವ್ಯಕ್ತಿ ತನ್ನ ತಪ್ಪಿನ ಅರಿವಾಗಿ ತಲೆತಗ್ಗಿಸಿ ನಿಂತರು. 

ಗುರುನಾಥರು ಅವರನ್ನು ಕರೆದು "ಆಪರೇಷನ್ ಮಾಡಿಸು. ಆಕೆ ಉಳೀತಾಳೆ. ಜೀವಕ್ಕೇನೂ ತೊಂದರೆಯಿಲ್ಲ. ಯಾವುದಾದರೂ ಕುದುರೆಗೆ ಇವಳು ಮುಟ್ಟಿದ ಹುರಳಿಯನ್ನು ತಿನ್ನಿಸು ಸಾಕು" ಎಂದು ಹೇಳಿ ಆಶೀರ್ವದಿಸಿ ಕಳಿಸಿದರು. ಅಂತೆಯೇ ಮಾಡಲು ಇಂದು ಆಕೆ ಸಂಪೂರ್ಣ ಗುಣಮುಖರಾಗಿದ್ದಾರೆ. 

ಹಾಗೆಯೇ ಇನ್ನೊಮ್ಮೆ ಕಡೂರು ಸಮೀಪದ ವ್ಯಕ್ತಿಯೊಬ್ಬರು ಗುರುನಿವಾಸಕ್ಕೆ ಬಂದರು. ಆತ ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು ಯಾವ ಚಿಕಿತ್ಸೆಯೂ ಫಲ ನೀಡಿರಲಿಲ್ಲ. ಆತ ಬದುಕುಳಿಯುವುದೇ ಕಷ್ಟವೆಂದು ವೈದ್ಯರು ಹೇಳಿದ್ದರು. ಈ ವಿಷಯ ತಿಳಿದ ಗುರುನಾಥರು ಎರಡು ದಿನ ವಿಳ್ಳೇದೆಲೆ, ಅಡಿಕೆ ತಿನ್ನಲು ತಿಳಿಸಿದರು. ಇಂದು ಆತ ಗುರುಕೃಪೆಯಿಂದ ಆರೋಗ್ಯವಾಗಿದ್ದಾರೆ, ಮಾತ್ರವಲ್ಲ ಬೆಂಗಳೂರಿನಲ್ಲಿ ಕೆಲಸದಲ್ಲಿ ಇರುವರು....,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, December 2, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 20


ಸರಳ ನುಡಿಗಳ ಸ್ವಾರಸ್ಯ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ದೈನಂದಿನ ಕೆಲಸಕಾರ್ಯಗಳಲ್ಲಿ ನಾವು ಮಾಡುವ ತಪ್ಪುಗಳನ್ನು ಸರಳವಾಗಿ ಗುರುನಾಥರು ತಿದ್ದುತ್ತಿದ್ದ ರೀತಿಗಳು ಹೀಗಿತ್ತು. ಒಮ್ಮೆ 'ಶೃಂಗೇರಿಗೆ ಹೋಗಬೇಕು. ಒಂದಿಷ್ಟು ಬಿಲ್ವ ಪತ್ರೆಯನ್ನು ತಾರಯ್ಯಾ?' ಎಂದರು. ಸ್ವಲ್ಪ ಹೊತ್ತಿನಲ್ಲೇ ನಾನು ಒಂದಿಷ್ಟು ಜಾಸ್ತಿಯೇ ಬಿಲ್ವಪತ್ರೆಗಳನ್ನು ಸಂಗ್ರಹಿಸಿ ತಂದಿದ್ದೆ - ಹೇಗೆ ತಂದಿರಿ ಎಂದು ಕೇಳಿದಾಗ 'ಅಲ್ಲೊಂದು ಕೋಲು ಇತ್ತು. ಬಡಿದು, ಬಿಲ್ವ ಪತ್ರೆಗಳನ್ನು ಉದುರಿಸಿ ತಂದೆ' ಎಂದು ಯಥಾವತ್ತಾಗಿ ತಿಳಿಸಿದೆ. 

'ಅಲ್ಲ ಕಣಯ್ಯಾ ಮರಕ್ಕೆ ನೀರು ಹಾಕಿ ನೀನೇನು ಬೆಳೆಸಿದ್ದೀಯಾ.. ಮರಕ್ಕೆ ಕೋಲಿನಿಂದ ಬಡಿದೆಯಲ್ಲಾ. ಅದಕ್ಕೆಷ್ಟು ನೋವಾಯ್ತು ಯೋಚಿಸಿದೆಯಾ' ಎಂದಿದ್ದರು. ಚೌಕಾಸಿ ಮಾಡುವ ಸ್ವಭಾವದವರು, ಹೂವನ್ನು ಕೊಂಡು ತಂದಾಗ 'ಏನಯ್ಯಾ ಈ ಹೂವು ಮಾರುವವಳ ಬಳಿ ಚೌಕಾಸಿ ಮಾಡಿ ನಾಲ್ಕಾಣೆ ಉಳಿಸಿದೆಯಲ್ಲಾ... ಈ ಹೂವು ಪೂಜೆ ಮಾಡುವರ ಕೈಯಲ್ಲಿ ಸಿಕ್ಕಿ ನುಜ್ಜುಗುಜ್ಜಾಗಿ ಅದನ್ನು ಎಳೆದು ಹರಿದು ನಾಳೆ ಒಣಗಿತು ಎಂದು ಬಿಸಾಡ್ತೀವಿ. ಆ ಬಿಸಿಲಲ್ಲಿ ಕುಳಿತು, ಹೂ ಕಟ್ಟಿ ಮಾರುವ ಮುದುಕಿಗೆ ಎಂಟಾಣೆ ಜಾಸ್ತಿ ಕೊಟ್ಟಿದ್ದರೆ ನಿಜವಾದ ಸಾರ್ಥಕವಾಗುತ್ತಿತ್ತು' ಎನ್ನುತ್ತಿದ್ದರು. 'ತುಳಸಿ, ಹೂವುಗಳನ್ನು ಎರ್ರಾಬಿರ್ರಿ ಕಿತ್ತು ತರುತ್ತೀರಲ್ಲಾ, ನೀವೇನು ನೀರು ಹಾಕಿ ಬೆಳೆಸಿದ್ದೀರಾ? ಕೀಳುವ ಮುನ್ನ ಎಂದಾದರೂ ಯೋಚಿಸಿದ್ದೀರಾ?' ಎಂದು ಪ್ರಶ್ನಿಸುತ್ತಿದ್ದರು.  ಸತ್ಸಂಗ ನಡೆಸುತ್ತಿದ್ದ ಗುರುಬಂಧುಗಳು ಸ್ವಲ್ಪ ಹೊತ್ತು ಮೌನವಾದರು. ಮತ್ತೆ ಅವರೊಳಗೆ ಕುಳಿತ ಗುರುನಾಥರು ಹೀಗೆ ಮುಂದುವರೆಸಿದರು. "ಅನೇಕ ಸಂದರ್ಭದಲ್ಲಿ ಥಟ್ ಅಂತ ಗುರುನಾಥರು ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಏನಾದರೂ ಹೇಳಿ ಬಿಡುತ್ತಿದ್ದರು. ಆ ಕ್ಷಣದಲ್ಲಿ ನಗೆಬುಗ್ಗೆ ಹೊಮ್ಮಿದರೂ, ಯೋಚಿಸಿದಾಗ ಸತ್ಯದ ಅರಿವಾಗುತ್ತಿತ್ತು. ಕೇವಲ ಆಚರಣೆಗೆ ಮಾತ್ರ ಸೀಮಿತಗೊಂಡ, ಭಾವವಿಲ್ಲದ, ನಮ್ಮ ರೀತಿಯ ಅರಿವಾಗುತ್ತಿತ್ತು. ಯಾರಾದರೂ ಕುಳಿತವರು ತಟ್ಟನೆ ಎದ್ದಾಗ 'ಎಲ್ಲಿಗೆ ಹೋಗುತ್ತಿದ್ದೀಯಯ್ಯಾ' ಎಂದು ಗುರುನಾಥರು ಕೇಳುತ್ತಿದ್ದರು. ಅವರು 'ಧರ್ಮೋದಕ ಬಿಡಲು, ಶ್ರಾದ್ಧಕ್ಕೆ... ಎಂದೇನಾದರೂ ಅಂದಾಗ ಗುರುನಾಥರು 'ಜೀವಂತವಿದ್ದಾಗ ಅವರ ಬಾಯಿಗೆ ಒಂದು ತೊಟ್ಟು ನೀರು ಕೊಡದೆ ಸತ್ತಮೇಲೆ ಧರ್ಮೋದಕ ಬಿಡುವುದೇನು ಚಂದನಯ್ಯಾ, ಇದ್ದಾಗ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದೆ ಈಗ ಪ್ರತಿ ವೈದಿಕದಲ್ಲೂ ವಡೆ ಮುರಿಯೋದೆ ಶ್ರಾದ್ಧವಲ್ಲವೆನಯ್ಯಾ..." ಎಂದು ಬಿಡುತ್ತಿದ್ದರು. ಸ್ನಾನಕ್ಕೆ ಹೊರಟೆ ಎಂದು ಯಾರಾದರೂ ಅಂದರೆ, 'ಅಂದರೆ ಬಚ್ಚಲಿಗೆ ನೀರು ಹೊಯ್ಯುವುದು ತಾನೇ?' ಎಂದದ್ದಿದೆ. ಮನಶುದ್ಧವಾಗದ ತನುಶುದ್ಧಿಯಿಂದ ಏನೂ ಪ್ರಯೋಜನವೆಂಬ ಅರಿವು ಮೂಡಿಸುತ್ತಿದ್ದರು". 

ಒಮ್ಮೆ ಈ ಗುರುಬಂಧುಗಳನ್ನು 'ನಡಿಯಯ್ಯಾ ಕಾರು ಹತ್ತು' ಎಂದು ಕಾರು ಹತ್ತಿಸಿಕೊಂಡು ಹೊರಟ ಗುರುನಾಥರು ಎರಡು ಮೂರು ದಿನಗಳ ನಂತರವೇ ವಾಪಸ್ಸು ಬಂದಿದ್ದು. ಈ ಮಧ್ಯೆ ನಡೆದ ಒಂದು ಆಶ್ಚರ್ಯ ಘಟನೆ ಎಂದರೆ, ಎಲ್ಲಿಯೋ ದೂರದ ಊರಿಗೆ ಕಾರು ಸಾಗುತ್ತಿತ್ತು. ತುಂಬಾ ಕತ್ತಲೆಯಾಗಿತ್ತು. ಯಾವುದೋ ಒಂದು ದೊಡ್ಡ ಫ್ಯಾಕ್ಟರಿಯ ಗೇಟಿನಿಂದ ದೂರದಲ್ಲಿ ಕಾರು ನಿಲ್ಲಿಸಿದ ಗುರುನಾಥರು ಆ ದೊಡ್ಡ ಗೇಟಿನ ಬಳಿ ಹೋಗಿ ನಿಂತು, ಆ ತುದಿಯಿಂದ ಈ ತುದಿಯವರೆಗೆ ಗೇಟನ್ನು ತಡವಿದರು. ಆಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಒಳಗೆ ಹೋದಂತೆ ಕಂಡಿತು. ಮಾರನೆಯ ದಿನ ಬಹಳ ಹೊತ್ತಾದರೂ ಗುರುನಾಥರು ಎದ್ದಿರಲಿಲ್ಲ. ಬೆಳಿಗ್ಗೆ ತಿಳಿದ ವಿಚಾರವೆಂದರೆ ಆ ಫ್ಯಾಕ್ಟರಿಯ ದೊಡ್ಡ ಬಾಯ್ಲರ್ ಒಂದು ಒಡೆದು, ಒಬ್ಬರು ಸಾವನ್ನಪ್ಪಿದ್ದರು. ಪಕ್ಕದ ಫ್ಯಾಕ್ಟರಿಯವರ ಸಹಾಯದಿಂದ ಆಗಬಹುದಾದ ಬಹುದೊಡ್ಡ ಅಪಘಾತವು ತಪ್ಪಿತೆಂದು, ಗುರುನಾಥರು ಜನಹಿತಕ್ಕಾಗಿ ಹೀಗೆ ಎಂತೆಂತಹ ಅವಘಡಗಳನ್ನು ತೃಣಮಾತ್ರವಾಗಿಸಿದ್ದಿದೆ. ಇತರರ ನೋವನ್ನು ತಾವು ತೆಗೆದುಕೊಂಡು ಅನುಭವಿಸಿದ ಘಟನೆಗಳನ್ನು ಕಂಡಿದ್ದೇನೆ. ಈ ಕಲಿಯುಗದಲ್ಲಿ ಬೇರೆಯವರ ನೋವನ್ನು ತಾವು ತೆಗೆದುಕೊಂಡು ಅನುಭವಿಸುವ ಶಕ್ತಿ ಗುರುವಿಗಲ್ಲದೆ ಯಾವ ದೇವಾನುದೇವತೆಗಳಿಗೂ ಇಲ್ಲ. ಇದನ್ನೂ ತೋರಿಸಿದ್ದಾರೆ. ಒಮ್ಮೆ ಬಂದ ಒಬ್ಬ ವ್ಯಕ್ತಿ 'ತನ್ನ ತಾಯಿಗೆ ತೀವ್ರವಾದ ಖಾಯಿಲೆ, ಅವರು ಅಹಲ್ಯಾ ಬಳಲುತ್ತಿದ್ದಾರೆ. ಕರುಣೆ ತೋರಿ' ಎಂದು ಬೇಡಿದ. ಗುರುನಾಥರು ಏನೋ ಮಂತ್ರಿಸಿ ಕೊಟ್ಟು 'ಬೇಗ ನಿಮ್ಮ ತಾಯಿಗಿದನ್ನು ಕೊಡು' ಎಂದು ಹೇಳಿದರು. ಆ ಹುಡುಗ ಹೊರಹೋದ. ಸ್ವಲ್ಪ ಹೊತ್ತಿನಲ್ಲಿ, ಗುರುನಾಥರಿಗೆ ತೀವ್ರವಾದ ನೋವು, ಹೊಟ್ಟೆಯುಬ್ಬರಿಕೆಗಳಾದವು. ಗುರುನಾಥರು 'ಆ ಹುಡುಗ ಹೋದನಾ' ಎಂದು ಕೇಳಿದರು. ಆದರೆ ಆತ ಅಲ್ಲೇ ಹೊರಗೆ ಕುಳಿತಿದ್ದ. 'ಬೇಗ ಹೋಗಿ ನಿಮ್ಮ ತಾಯಿಗಿದನ್ನು ಕೊಡಿ' ಎಂದು ಹೇಳಿ ಕಳುಹಿಸಲಾಯಿತು. ಹೀಗೆ ಭಕ್ತರ ನೋವು ಸಂಕಟಗಳನ್ನು ತೆಗೆದುಕೊಂಡ ಉದಾಹರಣೆಗಳಿವೆ" ಎಂದು ಹೇಳಿ ಗುರುನಾಥರ ಸ್ಮರಣೆಯಲ್ಲಿ ಅವರು ನಿರತರಾದರು. 

ಬರುವ ಕಾಲಕ್ಕೆ ಅದೇ ಬರುತ್ತದೆ 


"ಎಲ್ಲರ ಮನೆಯಲ್ಲಿ ಪಾದುಕೆಗಳಿರುತ್ತದೆ. ನಮ್ಮ ಮನೆಯಲ್ಲಿ ಎಲ್ಲವಲ್ಲಾ ಎಂಬ ವಿಚಾರ ಮನದಲ್ಲಿ ಬಂದಿತು. ಒಮ್ಮೆ ಹೀಗೆಯೇ ಜಗದ್ಗುರುಗಳ ಬಳಿ ಹೋಗಿದ್ದಾಗ ಸ್ವಾಮಿ ನನಗೊಂದು ಪೂಜೆಗಾಗಿ ಪಾದುಕೆ ಬೇಕೆಂದು ನಮಸ್ಕರಿಸಿ ಬೇಡಿಕೊಂಡೆ. ನಾನು ಇಂತಹ ಊರಿನವನು, ನಮ್ಮ ತಂದೆ ಇಂತಹವರೆಂದು ಎಲ್ಲಾ ಹೇಳಿಕೊಂಡೆ. ಜಗದ್ಗುರುಗಳು ಎಲ್ಲವನ್ನೂ ಶಾಂತವಾಗಿ ಕೇಳಿಕೊಂಡು 'ಆಯ್ತು, ಶ್ರೀಮಠಕ್ಕೆ ಬರುತ್ತಾ ಇರಿ. ನಿಮಗೆ ಪಾದುಕೆಗಳು ಸಿಗುತ್ತವೆ' ಎಂದರು. ಮನಸ್ಸಿಗೆ ಸ್ವಲ್ಪ ನಿರಾಸೆಯಾಯ್ತು. ಏನು ಮಾಡುವುದಕ್ಕಾಗುತ್ತದೆ? ಎಂದು ಗುರುನಾಥರ ಭಕ್ತರೊಬ್ಬರು ಗುರುಚರಿತ್ರೆಯನ್ನು ಹೀಗೆ ಪ್ರಾರಂಭಿಸಿದರು. 

"ಕೆಲ ದಿನಗಳ ನಂತರ, ಗುರುನಾಥರನ್ನು ಕಾಣಲು ಸಖರಾಯಪಟ್ಟಣಕ್ಕೆ ಹೋಗಿದ್ದೆ. ಗುರುನಾಥರಿಗೆ ನಮಿಸಿ ಕುಳಿತುಕೊಂಡಾಗ, ನಾನು ಮರೆತೇಬಿಟ್ಟಿದ್ದ ಪಾದುಕೆಯ ವಿಚಾರವನ್ನು ಕುರಿತು 'ಅಲ್ಲಯ್ಯಾ ಯಾಕಯ್ಯಾ ನಿಂಗೆ ಪಾದುಕೆ? ಜಗದ್ಗುರುಗಳ ಹತ್ತಿರ ಹೋಗಿ ಪಾದುಕೆ ಕೇಳಬೇಕೆ? ಬರುವ ಕಾಲ ಬಂದರೆ ಅದೇ ನಿಮ್ಮ ಮನೆಗೆ ಬರುತ್ತೆ.... ಪಾದುಕೇಲಿ ಏನಿದೆ... ? ಯಾಕೆ ಬೇಕು ಪಾದುಕೆ?' ಎಂದು ಅವರೆಂದಾಗ ನನಗಾಶ್ಚರ್ಯವಾಯಿತು. ಕೆಲ ದಿನಗಳು ಕಳೆದ ನಂತರ ಒಮ್ಮೆ ಮಂಡಗದ್ದೆಗೆ ಹೋಗಬೇಕಾದ ಪ್ರಸಂಗ ಬಂದಿತು. ನಮ್ಮ ಆಪ್ತರೊಬ್ಬರು 'ನಿಮಗಾಗೇ ಕಾಯುತ್ತಿದ್ದೆವು. ಸರಿಯಾದ ಸಮಯಕ್ಕೆ ಬಂದಿರಿ. ನಾವೇ ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಮೊನ್ನೇ ಶಿರಡಿ ಸಾಯಿಬಾಬಾ ಅವರ ದರ್ಶನಕ್ಕೆ ಹೋಗಿದ್ದೆವು. ಅಲ್ಲಿ ಎರಡು ಪಾದುಕೆಗಳನ್ನು ತೆಗೆದುಕೊಂಡೆವು. ಒಂದು ನಿಮಗೆ, ನಿಮ್ಮ ಮನೆಗೇ ಬಂದು ಕೊಡಬೇಕೆಂದು ಯೋಚಿಸಿದ್ದೆವು. ನೀವೇ ಬಂದಿದ್ದು ಒಳ್ಳೆಯದೇ ಆಯಿತು' ಎಂದರು. ಶಿರಡಿಯ ಸಾಯಿಬಾಬಾ ಎಂದರೆ ದತ್ತರೇ. ಗುರುನಾಥರು ಹೇಳಿದ ಕಾಲ ಹೀಗೆ ಒದಗಿ ಬಂದು ದತ್ತ  ಪಾದುಕೆ ನಮ್ಮ ಮನೆಗೆ ಬಂದಿತು' ಎನ್ನುತ್ತಾ ಗುರುನಾಥರ ಕೃಪೆ, ಅವರ ಭವಿಷ್ಯವಾಣಿಗಳನ್ನವರು ಸ್ಮರಿಸುತ್ತಾ ಗುರುಕಥಾನಕವನ್ನು ಹಾಗೆ ಮುಂದುವರೆಸಿದರು. 

ಪುರಿಜಗನ್ನಾಥದಲ್ಲೂ ಗುರುನಾಥರು 


ತುಮಕೂರಿನ ಗುರುನಾಥರ ಭಕ್ತರೊಬ್ಬರು ಹೀಗೆಯೇ ಪ್ರವಾಸ ಮಾಡುತ್ತಾ ಪುರಿಗೆ ಹೋದರು. ಅಲ್ಲಿ ಜಗನ್ನಾಥನ ದರ್ಶನವಾಯಿತು. ಗುರುನಾಥರ ಈ ಭಕ್ತರಿಗೆ ಮನದಲ್ಲಿ ನಿರಂತರ ಗುರುನಾಥರದೇ ಸ್ಮರಣೆ. ತಾವಿಲ್ಲಿಗೆ ಬಂದಿರುವುದೂ, ಗುರುನಾಥರ ಕರುಣೆಯಿಂದಲೇ ಎಂಬ ಭಾವ ತುಂಬಿತ್ತು. ಜಗನ್ನಾಥನ ಬಳಿ ಬಂದವರಿಗೆ ಒಂದೆಡೆ ಒಬರು ಪ್ರಸಾದ ಕೊಡುತ್ತಿದ್ದರು. ತುಮಕೂರಿನ ಈ ಭಕ್ತರ ಮನದೊಳಗಿದ್ದ ಭಾವ ಎದುರಿಗೆ ಮೂರ್ತಿ ರೂಪವಾದಂತೆ, ಗುರುನಾಥರ ದರ್ಶನವಾಯಿತಂತೆ. ತಮ್ಮ ಕಣ್ಣನ್ನು ನಂಬದಾದರು. ಯಾವ ದೃಷ್ಠಿಯಿಂದ ನೋಡಿದರೂ ಗುರುನಾಥರೇ. ಕೂಡಲೇ ಆ ದಂಪತಿಗಳು ಅವರ ಬಳಿ ಓಡಿದರು, ನಮಸ್ಕರಿಸಿದರು. ಇವರ ಮಾತುಗಳು ಆವರಿಗರ್ಥವಾಗುತ್ತಿಲ್ಲ. ಅವರ ಮಾತು ಇವರಿಗರ್ಥವಾಗುತ್ತಿಲ್ಲ. ಬಹುಶಃ ಇದೂ ಒಂದು ಗುರುನಾಥರ ಲೀಲಾ ವಿನೋದವೇ ಇರಬೇಕು. ತಮ್ಮ ಮನಸ್ಸಿನ ಭಾವ ಮತ್ತಷ್ಟು ಗಟ್ಟಿಯಾಯ್ತು. ಕಾರಣ ಗುರುನಾಥರು ರೀತಿಯದೇ ಚರ್ಯೆ, ಹಾವ, ಭಾವ, ಹಾಗೂ ಅದೇ ಪ್ರಶಾಂತ ನೋಟ. ಕೂಡಲೇ ಅಲ್ಲೊಬರು ಬಂದು ಇವರ ಮಾತುಗಳನ್ನು ತರ್ಜುಮೆ ಮಾಡಿದರು. ತುಮಕೂರಿನ ಈ ಭಕ್ತರು 'ನಿಮ್ಮದೊಂದು ಫೋಟೋ ತೆಗೆದುಕೊಳ್ಳುತ್ತೇವೆ' ಎಂದಾಗ, ಇಲ್ಲಿ ಕ್ಯಾಮರಾ ಬಳಸುವಂತಿಲ್ಲ. ಫೋಟೋ ತೆಗೆಯುವಂತಿಲ್ಲ ಎಂಬ ವಿಚಾರ ತಿಳಿದು ಬಂತು. 

ಆ ಜಾಗದಿಂದ ಸ್ವಲ್ಪ ದೂರಕ್ಕೆ ಅವರನ್ನು ಕರೆದುಕೊಂಡು ಹೋಗಿ ನಮಿಸಿ, ತಮ್ಮ ಬಳಿ ಇದ್ದ ಅಲ್ಪ ಕಾಣಿಕೆಗಳನ್ನು ನೀಡಿದಾಗ, ಗುರುನಾಥರು ಜಗನ್ನಾಥನ ಪ್ರಸಾದವನ್ನು ಕೈತುತ್ತಾಗಿ ಒಂದಾದ ಮೇಲೆ ಒಂದರಂತೆ ನೀಡುತ್ತಿದ್ದರು. ಬೇಡವೆಂದರೂ 'ಇಲ್ಲ, ಹಾಗೆನ್ನಬೇಡಿ. ಇದು ಒಳ್ಳೆಯದು ಪ್ರಸಾದವೆಂದು' ತಾಯಿಯ ಮಮತೆಯಂತೆ, ಗುರುನಾಥರು ನೀಡಿದಂತೆಯೇ ನೀಡಿದರಂತೆ. ಹೀಗೆ ನೆನೆದವರ ಮನದಲ್ಲಿ ಎಂಬಂತೆ ಗುರುನಾಥರು ಪುರಿಯಲ್ಲಿ ಕಂಡದ್ದು ಒಂದು ವಿಚಿತ್ರವಾದರೂ ಸತ್ಯ. ಇಲ್ಲಿದೆ ನೋಡಿ ಅವರ ಭವ್ಯ ಚಿತ್ರ. 



ಗುರುಕರುಣಾಶಾಲಿ. ಕರೆದಲ್ಲಿ ಬರುವ ಕರುಣಾಮಯಿ ಎಂಬುದಕ್ಕೆ ಇದೊಂದು ನಿದರ್ಶನ. ನಿರಂತರ ಹಲವಾರು ವರ್ಷಗಳು ಗುರುನಾಥರ ಜೊತೆ ಜೊತೆ, ಹಗಲು ರಾತ್ರಿಯೆನ್ನದೆ, ಗುರುನಾಥರ ಜೊತೆಗಿದ್ದುದರ ಫಲ- ಅವರಿಗೆ ಈ ರೀತಿ ಸಿಕ್ಕಿರಬೇಕು. 


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 59


    ಗ್ರಂಥ ರಚನೆ - ಚರಣದಾಸ 



ನೆಮ್ಮದಿ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ವಿಧಿಯಾಟದ ಕುರಿತು ಹೇಳುತ್ತಾ: 

"ಭಗವಂತ ಎಲ್ಲಾ  ನೀಡಿ ಕೈಗೆ ಸಿಗದಂತೆ, ಅನುಭವಿಸದಂತೆ ಮಾಡ್ತಾನಲ್ಲಾ ಯಾಕೆ ಹೀಗೆ?" ಎಂದು ಪ್ರಶ್ನಿಸಿದ್ರು. 

ಮತೊಮ್ಮೆ ಸಂಸ್ಕಾರದ ಬಗ್ಗೆ ಮಾತಾಡ್ತಾ "ಗಂಡು ಹೆಣ್ಣು ಒಪ್ಪಿ ಮದ್ವೆ ಆಗಿ ಸಂಸಾರ ನಡೆಸಿದ್ರೂ ಕೂಡಾ ಪರಸ್ಪರರ ಮೇಲೆ ಗೌರವ-ನಂಬಿಕೆ-ಪ್ರೀತಿ ಕಡಿಮೆ ಆಗುತ್ತಲ್ಲಾ ಯಾಕೆ ಹೀಗೆ? 

ಅದೇ ಬೆರಿಯವರು, ಗಂಡ ಅಥವಾ ಹೆಂಡತಿಯ ಒಳ್ಳೆಯ ಗುಣದ ಬಗ್ಗೆ ಹೊಗಳಿದ್ರೆ ಆ ಕ್ಷಣ ಅಭಿಮಾನ ಬಂದ್ರೂ, ಮತ್ತೆ ಎದುರು-ಬದುರಾದಾಗ ಅದೇ ಅಭಿಮಾನ ಇರೋದಿಲ್ವಲ್ಲಾ... ಏನಿದು ಭಗವಂತನ ಲೀಲೆ? ದೇಹ ಸನಿಹವಾದ್ರೂ ಮನಸ್ಸುಗಳೇಕೆ ಬೇರೆಯೋಲ್ಲ?

ಎರಡು ಮನಸ್ಸುಗಳು ಒಂದಾಗುವಿಕೆಯನ್ನು ಮದುವೆ ಅಂತಾರೆ ಕಣಯ್ಯಾ.... 

ಹಾಗಾದ್ರೆ ಇಲ್ಲಿ ಪರಸ್ಪರರ ದೋಷಗಳೇನು? ಹುಡುಕಬೇಕಲ್ವೇ..?" ಎಂದು ನುಡಿಯುತ್ತಿದ್ದರು. ಮತ್ತೊಮ್ಮೆ ಗಂಡು-ಹೆಣ್ಣು ಪುರುಷ-ಪ್ರಕೃತಿ ಒಂದಾದಂತಷ್ಟೆಯೇ... ಅಲ್ಲಿ ಯಾರೂ ಹೆಚ್ಚಲ್ಲ, ಕಡಿಮೆಯೂ ಅಲ್ಲ. ಯಾರು ಯಾರಿಗೂ ಗುಲಾಮರಲ್ಲ. ಆದ್ರೆ ಪರಸ್ಪರ ಗೌರವ ಆದರವಿಟ್ಟು ಸ್ನೇಹಿತರಾಗಿ ಬಾಳಬೇಕಾದ್ದು ಧರ್ಮ. ಅದು ನಮ್ಮ ಹೆತ್ತವರಿಗೆ ನಾವು ಕೊಡುವ ಗೌರವ ವಂದನೆ ಹಾಗೂ ಮುಂದಿನ ಪೀಳಿಗೆಗೆ ಪಥ ನಿರ್ಮಾಣ ಮತ್ತು ಸಮಾಜಕ್ಕೆ ಮಾದರಿ ಅಷ್ಟೇ...... 

ಮತ್ತೂ ಮುಂದುವರೆದು ಅಯ್ಯಾ... ಹಣವಿದ್ದೋರೆಲ್ಲಾ ನೆಮ್ಮದಿಯಾಗಿ ಸಂಸಾರ ಮಾಡ್ತಾರೆ ಅನ್ನೋದು ನಮ್ಮ ಭ್ರಮೆ. ಜೀವನದ ದೋಣಿ ಸಾಗೋಕೆ ಬೇಕಾಗಿದ್ದು ಪರಸ್ಪರರಲ್ಲಿ ಗೌರವ-ಪ್ರೀತಿ ಹಾಗೂ ಸಹನೆ ಅಷ್ಟೇ.. ಹಣ ಜೀವನಾವಶ್ಯಕವಾಗಿರಬೇಕೇ ವಿನಃ ಅದುವೇ ಜೀವನವಾಗಬಾರದು ಅಲ್ವೇ? ... ಎಂದು ಪ್ರಶ್ನಿಸಿ, ಹಣ-ಅಂತಸ್ತಿನ ಬಗ್ಗೆ ನಮಗಿದ್ದ ಭ್ರಮೆಯನ್ನು ಮಟ್ಟ ಹಾಕಿ ಬಿಡುತ್ತಿದ್ದರು. 

ಹೇಗೆ ಒಂದೇ ಬಸ್ಸಲ್ಲಿ ಭಿನ್ನ ಜನರು ಒಂದಾಗಿ ಕಲೆತು ಒಟ್ಟಾಗಿ ಸಾಗಿ ತಮ್ಮ ತಮ್ಮ ಸ್ಥಳ ಬಂದಾಗ ಇಳಿದು ಹೋಗ್ತೀವೋ... ಹಾಗೇ ನಮ್ಮ ಜೀವನ.. ಎಂದು ಹೇಳಿ ಸಂಸಾರದ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನಳಿಸಿ ಬಿಡುತ್ತಿದ್ದರು. 

ಹೀಗೆ ನೆಮ್ಮದಿ, ಆನಂದ ಎಂಬುದು ಒಳಗೆ ಹುಡುಕಬೇಕಾದ ವಿಚಾರವೇ ವಿನಃ ಬಾಹ್ಯದಲ್ಲಲ್ಲ. ನಮ್ಮ ಮನಸ್ಥಿತಿ ಸರಿ ಇದ್ರೆ ಎಂತಾ ಪರಿಸ್ಥಿತಿಯನ್ನೂ ಗೆಲ್ಲಬಹುದು. ಆದ್ರೆ ನಮ್ಮ ಮನಸ್ಥಿತಿಯೇ ಸರಿ ಇಲ್ಲದಿದ್ರೆ... ? ಇಲ್ಲಿ ಬದಲಾಗಬೇಕಾದ್ದು ನಮ್ಮ ಮನಸ್ಥಿತಿ, ದೃಷ್ಟಿಕೋನ ಅಲ್ವೇ... ? ......,,,,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Thursday, December 1, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 19


ಗುರುನಾಥರೆಂದರೆ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮೊದಲಿನಿಂದಲೂ ಬಹಳ ದಯಾವಂತರೂ, ಕರುಣಾಶಾಲಿಗಳೂ ಆಗಿದ್ದ ಗುರುನಾಥರು, ಪ್ರಾಣಿಪಕ್ಷಿಗಳು ಅಷ್ಟೇ ಏಕೆ ಸಸ್ಯಾದಿಗಿಡಗಳ ಬಗ್ಗೆಯೂ ಅದೆಷ್ಟು ಕರುಣೆ ಹೊಂದಿದ್ದರೆಂಬುದನ್ನು ತಿಳಿಸುವ ಅನೇಕ ಘಟನೆಗಳನ್ನು, ಅವರೊಂದಿಗಿದ್ದ ಗುರುಬಂಧುಗಳೊಬ್ಬರು ಹೀಗೆ ವಿವರಿಸುತ್ತಾರೆ: "ಸುಮಾರು ಐವತ್ತು ವರ್ಷಗಳ ಹಿಂದಿನ ಘಟನೆ. ನಮ್ಮ ಮನೆಯಲ್ಲಿದ್ದ ಒಂದು ಹಸುವಿಗೆ ಅದೇನಾಯಿತೋ, ಅದು ತುಂಬಾ ನೋವನ್ನು ಅನುಭವಿಸುತ್ತಿತ್ತು. ನಮಗೇನು ಮಾಡಬೇಕೆಂದು ತಿಳಿಯಲಿಲ್ಲ. ಮನೆಯಲ್ಲೂ ಹಿರಿಯರು ಯಾರೂ ಆ ದಿನ ಇರಲಿಲ್ಲ. ಅದಕ್ಕೇನಾದರೂ ಚಿಕಿತ್ಸೆ ಮಾಡಿಸಲು, ನಾವು ಗುರುನಾಥರ ಬಳಿ ಗಾಭರಿಯಿಂದ ಓಡಿ, ಇದನ್ನು ತಿಳಿಸಿದೆವು. ಅವರು ನಮಗೆ ಧೈರ್ಯ ಹೇಳುತ್ತಾ 'ಬರುತ್ತೇನೆ ಏನೂ ಆಗಲ್ಲಯ್ಯಾ... ಬಾ ನೋಡೋಣ' ಎಂದರು. 'ಒಂದಿಷ್ಟು ನೀರು ಕೊಡಿ' ಎಂದರು. ಅದೇನು ಮಂತ್ರ ಮಾಡಿದರೋ, ಆ ನೀರನ್ನು ಮಂತ್ರಿಸಿ ದನಕ್ಕೆ ಪ್ರೋಕ್ಷಣೆ ಮಾಡುತ್ತಿದ್ದಂತೆ, ಅದು ತನ್ನ ನೋವಿನಿಂದ ದೂರವಾಗಿ, ಎದ್ದು ಅಲ್ಲಿಂದ ಸಲೀಸಾಗಿ ಹೊರಟುಹೋಯಿತು. ಪ್ರಾಣಿಗಳೆಂದರೆ ಅಪಾರ ಪ್ರೀತಿ ಇರುವ ಗುರುನಾಥರು ಆಗಾಗ್ಗೆ ಹೇಳುತ್ತಿದ್ದರು. 'ನನಗೆ ಮನುಷ್ಯರ ಉಸಿರಾಟಕ್ಕಿಂತ ಪ್ರಾಣಿಗಳ ಉಸಿರಾಟದ ಸನಿಹದಲ್ಲಿರುವುದು ಹೆಚ್ಚು ನೆಮ್ಮದಿ ತರುತ್ತದೆ' ಎಂದು ನೆನಪಿಸಿಕೊಂಡರು. 

ಮುಂದಾಗಬಹುದಾದದ್ದನ್ನು ಅತಿ ಸರಳವಾಗಿ ತಿಳಿಸುತ್ತಾ, ಅದಕ್ಕೆ ನಮ್ಮನ್ನು ಸಿದ್ಧಪಡಿಸಿ, ಒಂದೇ ಬಾರಿ ಆಗುವ ಆಘಾತದ ತೀವ್ರತೆಯನ್ನು ಕಡಿಮೆ ಮಾಡುತ್ತಿದ್ದ ಅವರ ರೀತಿ, ಹೇಗೋ ಬರುವುದನ್ನು ಎದುರಿಸಿಯೇ ತೀರಬೇಕೆಂಬ ನಿತ್ಯಸತ್ಯವನ್ನು ಅವರು ಅನೇಕ ಸಾರಿ ಪ್ರಕಟಪಡಿಸಿದ್ದಾರೆ. ನಮ್ಮ ಮನೆಗೆ ಸಾಮಾನ್ಯವಾಗಿ ಬರುತ್ತಿದ್ದ ಅವರು, ಒಂದು ದಿನ ಸಹಜವಾಗಿ ಎಂಬಂತೆ,ನಮ್ಮ ತಾಯಿಯನ್ನು ಕುರಿತು 'ಇನ್ನೇನು ಆಯ್ತಲ್ಲಾ... ಹತ್ತಿರ ಬರುತ್ತಿದೆಯಯ್ಯಾ ಕಾಲ' ಹೀಗೆ ಸೂಚ್ಯವಾಗಿ ಹೇಳಿದರು. ಕೆಲದಿನಗಳಲ್ಲೇ ನಮ್ಮ ತಾಯಿ ಇಹಲೀಲೆಯನ್ನು ಪರಿಸಮಾಪ್ತಿಗೊಳಿಸಿದ್ದರು. ಸುಮಾರು 1988 ರಲ್ಲಿ ಈ ಘಟನೆ ನಡೆದಿದ್ದಿರಬೇಕೆಂದರು. ಎಲ್ಲ ಬಲ್ಲ ಸರ್ವಜ್ಞರಿಗೆ ಅವಿತು ಕುಳಿತು, ಧುತ್ತೆಂದು ಬಂದೆರಗುವ ಮೃತ್ಯುವಿನ ಆಗಮನ ತಿಳಿಯದಿರುತ್ತದೆಯೇ? ಎಲ್ಲ ಅರಿತಿದ್ದರೂ ಅವರಾಡುತ್ತಿದ್ದುದು ಬಹು ಕಡಿಮೆಯೇ. 

ಸರಳ ವಿವಾಹದ ಹರಿಕಾರರು 


"ಗುರುನಾಥರು ನಾನು ಕಂಡಂತೆ ಅನೇಕ ವಿವಾಹಗಳನ್ನು ಮಾಡಿಸಿದ್ದಾರೆ. ಮಾಡುವೆ ಮುಂಜಿಗಳ ಮುಹೂರ್ತ ಇಡುವುದಕ್ಕೆ ಯಾವ ಪಂಚಾಂಗವೂ ಬೇಡ ಇವರಿಗೆ. ಅವರು ಆಡಿದ ಘಳಿಗೆಯೇ ಸುಮುಹೂರ್ತ. ಅವರಿಟ್ಟ ಸಮಯಕ್ಕೆ ಗುರುಬಲ ಅದಾಗಿ ಕೂಡಿ ಬರುತ್ತಿತ್ತು. ಅವರ ಸರಳ ರೀತಿ ನೋಡಬೇಕು. ಯಾರಿಗಾದರೂ ಮಾಡುವೆ ಮಾಡಿಸುವ ಮುನ್ನ, ಗಂಡು ಹೆಣ್ಣು ಮತ್ತು ಅವರ ಕಡೆಯವರನ್ನು ಕರೆಸಿ 'ಏನಯ್ಯಾ ಎಲ್ಲ ಚೆನ್ನಾಗಿ ಆಗುತ್ತೆ. ಈ ಹುಡುಗಿ ಒಪ್ಪಿಗೆಯೇ?" ಎನ್ನುತ್ತಿದ್ದರು. ಅಂತೆಯೇ ಹುಡುಗಿ ಕಡೆಯವರಿಗೆ 'ನೋಡಯ್ಯಾ ಅವನು ದುಡಿಯುವುದಿಷ್ಟೇ. ಏನೇನೋ ಇದೆ ಅಂತ ಭಾವಿಸಬೇಡ.. ಆದರೆ ಲಗ್ನವಾದರೆ ಸುಖವಾಗಿರ್ತಾರೆ' ಎನ್ನುತ್ತಿದ್ದರು. ಮದುವೆಗೆ ಮುಹೂರ್ತವೂ ಅಲ್ಲೇ. ಆ ಕೂಡಲೇ ಹೇಳಿಬಿಡುತ್ತಿದ್ದರು. ಒಂದೆರಡು ದಿವಸದಲ್ಲಿ ಅತ್ಯಂತ ಸರಳ ವಿವಾಹ - ವೀಡಿಯೊ ಖರ್ಚಿಲ್ಲ, ದೊಡ್ಡ ಛತ್ರಗಳ ಹುಡುಕಾಟವಿಲ್ಲ. ಆದರೆ ಸರಳವಾದರೂ ಶಾಸ್ತ್ರೋಕ್ತವಾದ ವಿವಾಹಗಳಾಗಿರುತ್ತಿದ್ದವು. 'ನಂಬಿಕೆ ಇದ್ದರೆ ಮುಂದುವರೆಯಿರಿ.... ಮತ್ತೆ ನಾನು ಬಲವಂತ ಮಾಡಿದೆ ಅಂತ ಒಪ್ಪಬೇಡಿ' ಎಂದೆನ್ನುತ್ತಿದ್ದರು. ಹೀಗೆ ಗುರುನಾಥರು ನನಗೆ ಕಂಡಂತೆ ಹತ್ತಿಪ್ಪತ್ತು ವಿವಾಹಗಳನ್ನು ಮಾಡಿಸಿದ್ದಾರೆ. ಅವರೆಲ್ಲಾ ಸುಖವಾಗಿದ್ದಾರೆ. ಮದುವೆಯೆಂಬ ದುಬಾರಿಯಿಂದ ತಮ್ಮ ಭಕ್ತರನ್ನು ಬಚಾವು ಮಾಡುವುದರ ಜೊತೆಗೆ, ಎಂದೂ ಆಡಂಬರ, ತೋರಿಕೆಯ ಪ್ರಕ್ರಿಯೆಗೆ ಬೆಲೆ ಕೊಡದ ಅವರು, ಎರಡು ಮನಗಳ, ಎರಡು ಮನೆಯವರುಗಳನ್ನು ಈ ರೀತಿ 'ಮದುವೆ' ಎಂಬ ಮೂರಕ್ಷರದಲ್ಲಿ ಒಂದುಗೂಡಿಸುತ್ತಿದ್ದರೇನೋ" ಎನ್ನುತ್ತಾರೆ ಆ ಗುರುಬಂಧುಗಳು. 

ಗುರುವಿನ ಕುರಿತಾಗಿ ಗುರುನಾಥರ ವಿಚಾರಗಳನ್ನು ತಿಳಿಯಲು ಬೆಂಗಳೂರಿಗೆ ಗುರುಬಂಧು ಒಬ್ಬರ ಬಳಿ ಹೋದಾಗ ಈ ಗುರುಬಂಧುಗಳು, 'ನನಗಷ್ಟೇನೂ ತಿಳಿದಿಲ್ಲ... ' ಎನ್ನುತ್ತಾ ಸತ್ಸಂಗಕ್ಕೆ ಕುಳಿತಾಗ- ಗುರುನಾಥರೇ ನುಡಿಸಿದ, ಜ್ಞಾಪಕಕ್ಕೆ ತರಿಸಿದ ವಿಚಾರಗಳನ್ನು ಮುಂದಿಟ್ಟಿದ್ದು ಹೀಗೆ: "ಜಗದ್ಗುರು ಪೀಠದ ಬಗ್ಗೆ ಅಸೀಮ ಭಕ್ತಿ ಭಾವವಿದ್ದ ಗುರುನಾಥರು... ಯಾರು ಏನು ಕಷ್ಟ ಅಂತ ಬಂದರೂ" ಜಗದ್ಗುರುಗಳ ದರ್ಶನ ಮಾಡಿ ಬನ್ನಿ' ಎನ್ನುತ್ತಿದ್ದರು. ಅದರಲ್ಲೂ ಚಂದ್ರಶೇಖರ ಭಾರತಿಗಳ ಬಗ್ಗೆ ಅವರಿಗೆ ಅದೆಂತಹ ಭಕ್ತಿ, ಪ್ರೇಮ, ಭರವಸೆಗಳಿತ್ತೆಂದರೆ, ಅನೇಕ ಸಾರಿ 'ಏನೂ ಆಗುವುದಿಲ್ಲವೆನಯ್ಯಾ ನಿನ್ನ ಕೈಲಿ, ಕಡೆ ಪಕ್ಷ ಚಂದ್ರಶೇಖರ ಭಾರತೀ ಸ್ವಾಮಿಗಳ ನಾಮವನ್ನು ಭಕ್ತಿಯಿಂದ ಬಾಯಲ್ಲಿ ಹೇಳಯ್ಯಾ. ನಿನ್ನ ಎಲ್ಲ  ದೂರವಾಗುತ್ತೆ' ಎನ್ನುತ್ತಿದ್ದರು. ಕೊಡುವುದರಲ್ಲಿ ಎತ್ತಿದ ಕೈ ಆದ ಇವರು ಗುರುವಿಗೆ ಗೌರವ ತೋರುವುದನ್ನು ಗುರುನಾಥರನ್ನು ನೋಡಿ ನಾವು ಕಲಿಯಬೇಕು... ಒಂದು ದಿನದ ಸೇವೆ ಎಂದರೆ ಮಠದ ಗೋವು, ಮಠದ ಕುದುರೆಗಳಿಗೆ ಹುಲ್ಲಿನಿಂದ ಹಿಡಿದು.... ಪೂಜಾದಿಗಳಿಗೆ ಬೇಕಾದ ಹೂವು, ಹಣ್ಣು, ಕಾಯಿ, ಪಂಚಾಮೃತ, ಗುರುಭಿಕ್ಷೆಗೆ ಬೇಕಾದ ತರಕಾರಿಯಿಂದ ಹಿಡಿದು ದವಸ ಧಾನ್ಯಾದಿ ಎಲ್ಲ ವಸ್ತುಗಳನ್ನೂ ಜೋಡಿಸಿ, ಗುರುವಂದನೆ ಸಲ್ಲಿಸುತ್ತಿದ್ದರು. ಎಷ್ಟು ಕೊಟ್ಟರೂ ಕೊಡುತ್ತಿರುವುದೇ ಇವರ ವಿಶೇಷ. ದುಡ್ಡಿದ್ದು ಭಕ್ತಿ ಇಲ್ಲದೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಪಾದಪೂಜೆ ಮಾಡಿದೆವೆಂಬ ಜನರನ್ನು ಕುರಿತು, 'ಪಾದಪೂಜೆ ಎಂದರೆ ನೀವು ಕೊಡುವ ದುಡ್ಡೋ, ದಕ್ಷಿಣೆಯೋ ಅಲ್ಲ. ಪಾದುಕೆಗಳಿಗೆ ಮಾಡುವ ಪೂಜೆಯೂ ಅಲ್ಲ. ಗುರುವಿನ ಪದಗಳ ಪೂಜೆ ಮಾಡಬೇಕು. ಗುರುವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಪಾದಪೂಜೆ' ಎನ್ನುತ್ತಿದ್ದರು. ಸಮಯಕ್ಕೆ ಅತ್ಯಂತ ಬೆಲೆ ಕೊಡುತ್ತಿದ್ದ ಗುರುನಾಥರು, ಜಗದ್ಗುರು ಪೀಠಕ್ಕೆ ಯಾವುದೇ ಸೇವೆ ಸಲ್ಲಿಸುವಾಗ, ಕಳಿಸುವಾಗ, ತಮ್ಮ ಶಿಷ್ಯರನ್ನು ಎಚ್ಚರಿಸುತ್ತಿದ್ದರು. 'ಎಳ್ರಯ್ಯಾ ಬೇಗ ಹೊರಡಿ, ಸರಿಯಾದ ಸಮಯಕ್ಕೆ ತಲುಪದಿದ್ದರೆ ಗುರುದರ್ಶನವಾಗುವುದಿಲ್ಲವೆನ್ನುತ್ತಿದ್ದರು. ನಾವೇನು ಅಲ್ಲಿ ಮಾಡಬೇಕೆಂಬುದನ್ನು ತಿಳಿಸುತ್ತಾ, 'ಮಠಕ್ಕೆ ಹೋಗಿ ಊಟ ಮಾಡಿ ಬರುವುದಲ್ಲ. ಅದಕ್ಕಿಂತ ಮಠಕ್ಕೆ ನಾವೇನು ಕೊಟ್ಟೆವು, ಎಂಬುದನ್ನು ಚಿಂತಿಸುವುದಕ್ಕೆ ಮಠಕ್ಕೆ ಹೋಗಬೇಕು' ಎನ್ನುತ್ತಿದ್ದರು. ಕೊಡುವುದೆಂದರೆ ಗುರುನಾಥರು. ಗುರುನಾಥರೆಂದರೆ ಕೊಡುವುದು. ಎಷ್ಟು ಕೊಟ್ಟರೂ ದಣಿಯದ ಮನ ಅವರದು. ಹಾಗೆ ಕೊಡುತ್ತಿರುವಾಗ, ಅಷ್ಟೊಂದು ವಸ್ತುಗಳು ಅದೆಲ್ಲಿಂದ ಸೃಷ್ಠಿಯಾಗುತ್ತಿದ್ದವು ಎಂಬುದೇ ಆಶ್ಚರ್ಯ. ಇದರ ಬಗ್ಗೆ ಜಗದ್ಗುರುಗಳು ಆಡಿದ ಮಾತೊಂದು ನೆನಪಾಗುತ್ತದೆ. 'ಓಹೋ ಸಖರಾಯಪಟ್ಟಣದ ಅವಧೂತರು ಬಂದರೆಂದರೆ ಮಾಯಾ ಬಜಾರ್ ಸೃಷ್ಠಿಯಾಗಿ ಬಿಡುತ್ತೆ. ಸಖರಾಯಪಟ್ಟಣದ ಗುರುಗಳೆಂದರೆ ಸೃಷ್ಠಿಸುವುದು" ಎಂದದ್ದೂ ಇದೆ. 

ಮದುವೆಯ ಮನೆಯಾದ ನಮ್ಮ ಮನೆ 


ಬೆಳಗಿನ ಆರೂವರೆಗೆ ನಮಗೆ ಗುರುನಾಥರಿಂದ ದೂರವಾಣಿ ಬಂದಿತು. "ನೀವು ತಳಿರು ತೋರಣಗಳನ್ನು ಮನೆಗೆ ಕಟ್ಟಿ ಮದುವೆ ಮನೆಯಂತೆ ಸಂಭ್ರಮಿಸಿರಿ" ಎಂದು. ಆಗ ತಾನೇ ಹೊರಬಂದು, ಮತ್ತೊಬ್ಬ ನಮ್ಮ ಮನೆ ಸನಿಹದ ಗುರು ಭಕ್ತೆಯರನ್ನು ಕಂಡಾಗ 'ನನಗೂ ಗುರುನಾಥರು ಇದೇ ರೀತಿ ಹೇಳಿದರು' ಎಂದರು. ನಾವು ಅಲ್ಲೇ ಸನಿಹದಲ್ಲಿದ್ದ ಒಬ್ಬರ ಮನೆಗೆ ಹೋಗಿ ಮಾವಿನ ಸೊಪ್ಪು ತಂದು ಸಿಂಗರಿಸಿದೆವು. ಸ್ವಲ್ಪ ಹೊತ್ತಿನಲ್ಲಿ ಅಡುಗೆಯ ಪಾತ್ರೆ ಪಡಗಗಳು ಬಂದವು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಒಂದು ಮನೆಗೆ ಗಂಡಿನವರು ಇನ್ನೊಂದು ಮನೆಗೆ ಹೆಣ್ಣಿನವರು ಬಂದರು.

ನಮಗಿದೇನು ಆಗುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ. ಆದರೆ ಗುರುನಾಥರು ಏನೋ ಹೇಳಿದ್ದಾರೆ. ಮಂಗಳಕಾರ್ಯ ನಡೆಯುವುದಿದೆ ಅನ್ನುವುದು ಮಾತ್ರ ತಿಳಿದಿತ್ತು. ಹಾಗೂ ಅವರು ತಿಳಿಸಿದಂತೆ ನಡೆಯುವುದೊಂದೇ ನಮ್ಮ ಕೆಲಸವಾಗಿತ್ತು.

ಚಿರೋಟಿ, ಉಂಡೆ, ಚಕ್ಕುಲಿ, ಭಾಗಿನಗಳೆಲ್ಲಾ ಸಿದ್ಧವಾದವು. ಗುರುನಾಥರು ಎರಡು ಭಕ್ತರ ಮನೆಯ ಕುಡಿಗಳು ಗುರುಬಂಧುಗಳಾಗಿದ್ದವರು, ದಢೀರನೆ ಮದುವೆ ಎಂಬ ಬಂಧನದಿಂದ ಒಂದು ಕುಟುಂಬದವರಾಗುವ 'ಮಂಗಳಮಯ ಮದುವೆ' ನಡೆಸಿದರು. ಆಶ್ಚರ್ಯ ಆದರೂ ನಿಜವಾಗಿ ಸಂಭ್ರಮದಂತೆ ನಡೆಯಿತು. ಹೀಗೆ ನಮ್ಮ ಮನೆಗಳು ಗುರುಬಂಧುಗಳ ಮದುವೆಯಿಂದ 'ಲಕ್ಷ್ಮೀನಾರಾಯಣರ' ದರ್ಶನ ಪಡೆವ ಸ್ಥಾನವಾಯಿತು- ಇದೆಲ್ಲಾ ಆ ಕೂಡಲೇ ಗುರುನಾಥರು ಮಾಡಿದ ವ್ಯವಸ್ಥೆಯಾಗಿತ್ತು.

ಯಾವ ಅದ್ಧೂರಿಯ ದೊಂಬರಾಟವಿಲ್ಲದೆ, ಎರಡು ಯುವ ಹೃದಯಗಳು ಶಾಸ್ತ್ರೋಕ್ತವಾಗಿ ಬಂಧುಗಳ ಸಮ್ಮುಖದಲ್ಲಿ ಒಂದಾಗಿದ್ದು- ನಮ್ಮ ಗುರುನಾಥರ ಲೀಲೆ ಅನುಗ್ರಹದಿಂದ. ತಿಂಗಳುಗಟ್ಟಲೆ ತಯಾರಿ ಇಲ್ಲ. ಭಾರಿ ಹಣದ ಸಾಲದ ಹೊರೆ ಇಲ್ಲ. ವಿಶ್ವ ಮಂಗಲ ಪ್ರಭುವಾದ ನಮ್ಮ ಗುರುನಾಥರಿಗೆ ಈ ಮದುವೆ ಒಂದು ಲೀಲಾ ವಿನೋದದಂತಿತ್ತು. 'ಚೆನ್ನರಾಯಪಟ್ಟಣದ ಗುರು ಭಕ್ತೆಯೊಬ್ಬರು ಗುರುನಾಥರ ಲೀಲಾಮೃತಕ್ಕೆ ತಮ್ಮ ಕಣ್ಣೆದುರು ಜರುಗಿದ ಘಟನೆಯನ್ನು ಹೀಗೆ ತಿಳಿಸಿದರು.

ನನಗೊಂದು ರೇಷ್ಮೆ ಸೀರೆ ತೆಗೆದಿಡು 


ಮತ್ತೆ ಮುಂದುವರೆದು ಇನ್ನೂ ಅದ್ಭುತವಾದ ಮತ್ತೊಂದು ಸಂಗತಿಯನ್ನು ಹೀಗೆ ಹೇಳತೊಡಗಿದರು. "ಅಂದು ಅಲ್ಲಿ ಗೋಕಲಾಷ್ಟಮಿಗಾಗಿ ಉಂಡೆಗಳು ತಯಾರಾಗುತ್ತಿತ್ತು. ಅಲ್ಲಿಗೆ ಬಂದ  ಗುರುನಾಥರು 'ನನಗೂ ಎಲ್ಲಾ ಬಗೆಯ ಐದೈದು ದೊಡ್ಡ ದೊಡ್ಡ ಉಂಡೆಗಳನ್ನು ಕಟ್ಟಿ ತೆಗೆದಿಡಿ' ಎಂದರು. ನಮ್ಮ ಮನೆಗವರು ಅಂದು ಬಂದಿದ್ದಾಗ, ನಮ್ಮ ಮತ್ತೊಬ್ಬ ಗುರುಬಂಧು ಸ್ನೇಹಿತೆಯು ಫೋನು ಮಾಡಿ ರೇಷ್ಮೆ ಸೀರೆಯವರು ಬಂದಿರುವ ವಿಚಾರ ತಿಳಿಸುತ್ತಿದ್ದಾರೆ... ಗುರುನಾಥರಿರುವಾಗ ಇವೆಲ್ಲಾ ಸೀರೆ ವಿಚಾರ ಬೇಕೇ? ಎಂದು ನಾನು ಗಾಭರಿಯಾಗಿರುವಾಗ, ಗುರುನಾಥರೇ ಫೋನು ತೆಗೆದುಕೊಂಡು 'ಹಾಂ.... ಹೌದಮ್ಮ ನನಗೆ ರೇಷ್ಮೆ ಸೀರೆ ಬೇಕು... ನನಗೊಂದು ತೆಗೆದಿಡು' ಎಂದರು. ಇದೇನಿದು ಗುರುನಾಥರಿಗೇಕೆ ರೇಷ್ಮೆ ಸೀರೆ ಬೇಕೆಂಬ ಯೋಚನೆಯು ನನಗೆ ಮನದಲ್ಲಿ ಬರಲಿಲ್ಲ. ಮತ್ತಾರಿಗೋ ಹೇಳಿ ತಾಳಿ ತೆಗೆಸಿದ್ದರಂತೆ.

ಹುಡುಗ ಹುಡುಗಿಯನ್ನು ನೋಡಿಲ್ಲ, ಹುಡುಗಿ ಹುಡುಗನನ್ನು ನೋಡಿಲ್ಲ... ಇದ್ದಕ್ಕಿದ್ದಂತೆ ಅವರಿಬ್ಬರ ಮಾಡುವೆ ಸಾಧ್ಯಾನಾ? ನಮ್ಮ ದೃಷ್ಟಿಯಲ್ಲಿ ಇದರ ಹಿಂದೆ ದೊಡ್ಡ ಪ್ರಕ್ರಿಯೆಗಳೇ ನಡೆಯುತ್ತೆ. ಆದರಿಲ್ಲಿ, ಅವತ್ತು ಗುರುನಾಥರು ಹುಡುಗಿಗೆ ಹೇಳಿದರು. 'ನೋಡಮ್ಮಾ ಇವನೇ ಹುಡುಗ, ಮಾಡುವೆ ಆಗ್ತೀಯಾ?' ಹಾಗೆ ಹುಡುಗನಿಗೂ 'ನೋಡಪ್ಪಾ, ಇವಳೇ ಹುಡುಗಿ' ನಿಮ್ಮಿಬ್ಬರ ಮದುವೆಯಾದರೆ ಸುಖವಾಗಿರ್ತೀರಿ' ಎಂದರು. ಅವರಿಬ್ಬರೂ ಗುರುನಾಥರ ಮಾತಿಗೊಪ್ಪಿದರು. ಕೂಡಲೇ ಮದುವೆಯಾಯಿತು.

ಗುರುಶಿಷ್ಯರ ನಡುವಿನ ಸಂಬಂಧವೇ ಅದಲ್ಲವೇ? ಶಿಷ್ಯನ 'ಜೀವನ ಕಲ್ಯಾಣ' ಗುರುವಿನ ಜವಾಬ್ದಾರಿ. ಗುರುವಾಕ್ಯವೆಂದರೆ ವೇದವಾಕ್ಯ ಎಂದು ತಿಳಿದು ನಡೆಯುವುದು ಶಿಷ್ಯನ ಕರ್ತವ್ಯ.

ಇದರಂತೆ ಅವರಿಬರೂ ಒಪ್ಪಿದರು. ಗುರು ಭಕ್ತರಾದ ಅವರ ಮನೆಯವರೂ ಗುರುವಾಕ್ಯವನ್ನು ಮೀರಲಿಲ್ಲ. ಆ ದಿನವೇ ಗುರುಗಳು ಮಾಡಿಸಿಟ್ಟಿದ್ದ ಉಂಡೆ, ಚಕ್ಕುಲಿಗಳು, ಬಾಗಿಣಗಳು, ರೇಷ್ಮೆ ಸೀರೆ, ತಾಳಿ ಎಲ್ಲವೂ ಒಂದೆಡೆ ಸೇರಿದವು. 'ಚಿಟಿಕೆ ಚಪ್ಪರ' ಎನ್ನುವ ಮಾತೊಂದಿದೆ. ಚಿಟಿಕೆ ಹೊಡೆಯುವುದರಲ್ಲಿ ಎಲ್ಲಾ ಮಂಗಳ ಕೆಲಸಗಳಾಗಿ ಬಿಡುವುದು ಎಂದಿದರ ಅರ್ಥ.

ಹೀಗೆ ಚಿಟಿಕೆ ಹೊಡೆಯುವುದರಲ್ಲಿ ಒಂದು ಮದುವೆ ನಡೆಯಿತು. ಗುರುನಾಥರು ಇಲ್ಲೂ ಆಡಂಬರಕ್ಕೆ ಎಡೆ ಕೊಡಲಿಲ್ಲ. ಅದ್ಧೂರಿಯ ಛತ್ರ ಬಾಜಾ ಭಜಂತ್ರಿಗಳಿಲ್ಲ.. ಸರಳವಾಗಿ ಎಲ್ಲ ನಡೆಸಿದರು. ಗುರುನಾಥರ ಚಮತ್ಕಾರವನ್ನು ನಾವೆಲ್ಲಾ ಕಣ್ಣಾರೆ ಕಂಡು ಸಂತಸಿಸಿದ್ದೆವು' ಎಂದು ಮತ್ತೆ ಗುರುನಾಥರನ್ನು ಸ್ಮರಿಸುತ್ತಾ, ಮನದಲ್ಲಿ ಇಂತಹ ಮಹಾತ್ಮನೊಂದಿಗಿದ್ದ ನಾವೇ ಧನ್ಯರೆಂಬ ಭಾವ ಅವರಲ್ಲಿ ಮೂಡಿತ್ತು.

ಸರಳ ಮದುವೆಯ ಹರಿಕಾರರಾದ ಗುರುನಾಥರು ಹೀಗೆ ಅನೇಕ ಕಲ್ಯಾಣ ಕಾರ್ಯಗಳನ್ನು ನಡೆಸಿರುವುದು, ಅವರ ಭಕ್ತಕೋಟಿಯ ಹಿತಕ್ಕಾಗಿ ಮಾತ್ರವಷ್ಟೇ. ಗುರುನಾಥರು ನಡೆಸಿದ ಕೊನೆಯ ವಿವಾಹ ಇದಾಗಿತ್ತಂತೆ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 58

ಗುರುವಿನೊಡನೆ ಪ್ರಥಮ ಸಮಾಗಮ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಸರ್ಕಾರಿ ಸೇವೆಗೆ ಸೇರಬೇಕೆಂಬ ಅದಮ್ಯ ಹಂಬಲ ನನ್ನದಾಗಿತ್ತು. ಆದರೆ ವಿಧಿ ವೈಪರೀತ್ಯ ನಾ ಬರೆದ ಸ್ಪರ್ಧಾತ್ಮಕ ಪರೀಕ್ಷೆಗಳೆಲ್ಲವೂ ಹಗರಣಗಳ ಗೂಡಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. ನನ್ನ ಸಂಬಂಧಿ ಒಬ್ಬರ ಸಹಾಯದಿಂದಾಗಿ ಮಾರ್ಚ್ 2000 ದಲ್ಲಿ ಗುರುನಾಥರ ಸಹೋದರಿಯ ಮನೆಯಲ್ಲಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ದರ್ಶನವಾಯಿತು. ನಾನು ನಮಸ್ಕರಿಸಲು, ಆ ಭವ್ಯ ಜೀವಿ ತನ್ನೆದುರಿದ್ದ ವಯೋವೃದ್ಧೆಗೆ ಒಂದು ಹಣ್ಣು ನೀಡಲು ಹೇಳಿ ನಮಸ್ಕರಿಸುವಂತೆ ಹೇಳಿದರು. 

ನಾ ಹಾಗೆಯೇ ಮಾಡಲು, "ನೀ ಅಧಿಕಾರಿ ಆಗಿಯೇ ಆಗುತ್ತಿ. ಸಂಶಯಬೇಡ" ಎಂದು ಅಭಯವಿತ್ತರು. 

ಒಡನೆಯೇ "ಜೂನ್ 21 ರಂದು ಮತ್ತೆ ನಮ್ಮಿಬ್ಬರ ಭೇಟಿ ಸರಿಯಾದ ಜಾಗದಲ್ಲಿ ಸರಿಯಾದ ರೀತಿಯಲ್ಲಿ ಆಗುವುದು" ಎಂದು ತಿಳಿಸಿದರು. ಹಾಗೂ "ಅದೆಲ್ಲಿ ಅಂತ ನನಗೆ ತಿಳೀತಿಲ್ಲ" ಅಂದ್ರು. 

ಗುರುವಿನ ಬಗ್ಗೆ ಅರಿವಿರದ ನಾನು ಅಷ್ಟಾಗಿ ತಲೆ ಕೆಡಿಸಿಕೊಳ್ಳದೇ ಅಲ್ಲಿಂದ ಮರಳಿದೆನು. ತದನಂತರ ಶೃಂಗೇರಿ ಸಮೀಪವಿರುವ ನನ್ನೂರಿಗೆ ಬಂದೆನಾದರೂ ಅಲ್ಲಿಂದ ಹೊರಡಲು ಅಡೆತಡೆಯಾಗುತ್ತಿತ್ತು 

ಜೂನ್ 20 ರ ಸಂಜೆ ಬೆಂಗಳೂರಿಗೆ ಹೊರಡಲು ಹಣಕಾಸಿನ ವ್ಯವಸ್ಥೆ ಆಯಿತು. ನೇರವಾಗಿ ಬೆಂಗಳೂರಿಗೆ ಟಿಕೆಟ್ ಪಡೆದಿದ್ದ ನಾನು ಆಕಸ್ಮಿಕವಾಗಿ ಚಿಕ್ಕಮಗಳೂರಿನಿಂದ ನೇರವಾಗಿ ಸಖರಾಯಪಟ್ಟಣಕ್ಕೆ ಬಂದಿಳಿದೆನು. ಆದರೆ ಅಂದು ಅವರು ನುಡಿದಿದ್ದ ದಿನಾಂಕದ ಯಾವುದೇ ಅರಿವು ನನಗಿರಲಿಲ್ಲ. ಬೆಳಿಗ್ಗೆ 11:30 ರ ಸುಮಾರಿಗೆ ಸಖರಾಯಪಟ್ಟಣ ತಲುಪಿದೆನು. 

ಅವರ ಮನೆಯ ಮುಂದಿನ ಕೋಣೆಯಲ್ಲಿ ಮಲಗಿದ್ದ ಅವರಿಗೆ ನನ್ನ ಪರಿಚಯ ತಿಳಿಸಲು, ಅವರು ಅಲ್ಲಿಯೇ ಇದ್ದ ಶಿಷ್ಯರೊಬ್ಬರಿಗೆ ನನಗೆ ಊಟ ನೀಡಲು ತಿಳಿಸಿದರು. ಬೆಳ್ಳಗಿದ್ದ ಆ ವ್ಯಕ್ತಿ ಹಿಂಜರಿಯುತ್ತಾ ನನಗೆ ಊಟ ನೀಡಿದರು. ವರಾಂಡದಲ್ಲಿ ಕುಳಿತು ಊಟ ಮಾಡುವಷ್ಟರಲ್ಲಿ ಗುರುಗಳಿಗೆ ಹೆಚ್ಚು ಪರಿಚಯವಿದ್ದ ಮೂವರು ಬೆಂಗಳೂರಿನಿಂದ ಬರಲು ಅವರಿಗೆ ಆ ಬೆಳ್ಳಗಿನ ವ್ಯಕ್ತಿ ಅಡುಗೆ ಮನೆಯಲ್ಲಿ ಊಟ ಹಾಕುತ್ತಿದ್ದರು. 

ಧಿಡೀರನೆ ಎದ್ದ  ಗುರುನಾಥರು ಏನೊಂದೂ ಮಾತನಾಡದೇ ನನ್ನ ಕೈ ಹಿಡಿದೆಳೆದುಕೊಂಡು ಅಡುಗೆ ಮನೆಗೆ ಕರೆದೊಯ್ದು ಊಟ ಮಾಡಲು ತಿಳಿಸಿದರು. 

ಆಗ ನಾನು ಊಟವಾಯಿತೆನ್ನಲು, "ಹಾಗಾದರೆ ಐದು ನಿಮಿಷ ಇಲ್ಲೇ ಒಳಗೆ ಕುಳಿತಿದ್ದು ಬಾ" ಎಂದರು. "ಜಗವನರಿತ ಗುರುವಿಗೆ ಜಾತಿ ಬಣ್ಣಗಳ ಬೇಧ ಅರಿವಿಗೆ ಬಾರದೀತೆ?". 

ಗುರುವಿನೊಂದಿಗೆ ರಾತ್ರಿ ತಂಗಿದ್ದು 11 ಗಂಟೆಗೆ ನಾನು ಪ್ರಯಾಣ ಮುಂದುವರೆಸಿದೆನು. "ಇನ್ನು ವಾರ ಹದಿನೈದು ದಿನಗಳಿಗೊಮ್ಮೆ ಭೇಟಿ ಆಗುತ್ತಲೇ ಇರುವುದು" ಎಂದರು. ಅದು ಅಂತೆಯೇ ನಡೆಯಿತು. 

"ಗುರುದೇವನ ಬಗ್ಗೆಯಾಗಲೀ ಗುರುವೆಂದರೇನೆಂದಾಗಲೀ ಅರಿವಿರದ ನನಗೆ ನನ್ನ ಮೂರನೇ ಭೇಟಿಯಲ್ಲಿ ಹನ್ನೊಂದು ದಿನ ಜೊತೆಗಿರಿಸಿಕೊಂಡ ಗುರುನಾಥರು ಆಡಿದ ಒಂದೊಂದು ಮಾತುಗಳು ಇಂದಿಗೂ, ಈವರೆಗೂ ನಡೆಯುತ್ತಲೇ ಇದೆ.....,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।