ಒಟ್ಟು ನೋಟಗಳು

Wednesday, February 8, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 127


    ಗ್ರಂಥ ರಚನೆ - ಚರಣದಾಸ 


ಗತಿ - ಮತಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇತ್ತೀಚೆಗೆ ಬೇಲೂರು ಸಮೀಪದ ವ್ಯಕ್ತಿಯೊಬ್ಬರು ಸಿಕ್ಕಿದ್ದರು. ಅವರು ಹಿಂದಿನಿಂದಲೂ ಸಖರಾಯಪಟ್ಟಣಕ್ಕೆ ಬರುತ್ತಿದ್ದರು. 

ಚರಣದಾಸನಾದ ನಾನು ಅವರನ್ನು ನಿಮ್ಮ ಅನುಭವವನ್ನು ತಿಳಿಸುವಿರಾ? ಎನ್ನಲು 

ಆತ, ನನ್ನ ಜೀವನದ ಗತಿ-ಮತಿ ಎಲ್ಲವೂ ಆಗಿರುವ ನಮ್ಮ ಗುರುನಾಥರ ಬಗ್ಗೆ ಹೇಳಲು ಪದಗಳೇ ಸಾಕಾಗುವುದಿಲ್ಲ ಎಂದು ನುಡಿದು ಕೆಲಕ್ಷಣ ಭಾವಪರವಶರಾಗಿ ಹೀಗೆ ಹೇಳತೊಡಗಿದರು. 

ಸ್ವಾಮಿ ನಾನು ಗುರುನಿವಾಸಕ್ಕೆ ಬರುತ್ತಿದ್ದ ವಿಚಾರ ನಿಮಗೆ ತಿಳಿದೇ ಇದೆ. ಈಗ ಆರೆಂಟು ವರ್ಷಗಳ ಹಿಂದೆ ನಾನು ನನ್ನ ಸ್ನೇಹಿತರು ಬಂಧುಗಳು ಒಟ್ಟಾಗಿ ಐದಾರು ಜನ ಕಾರನ್ನು ಬಾಡಿಗೆಗೆ ಪಡೆದು ಗುರುದರ್ಶನಕ್ಕಾಗಿ ಸಖರಾಯಪಟ್ಟಣದ ಕಡೆಗೆ ಹೊರಟೆವು. ನಾವು ಅರ್ಧ ದಾರಿ ಕ್ರಮಿಸಿ ಆಗಿತ್ತು. ಆಗ ನನಗೆ ಒಂದು ದೂರವಾಣಿ ಕರೆ ಬಂತು. 

ಕರೆ ಮಾಡಿದವರು ಹೀಗೆ ಹೇಳಿದರು. 

ನನ್ನ ಜೊತೆಯಲ್ಲಿ ನನ್ನ ಮಾವನವರಿದ್ದರು. ಅವರ ಮಗ (ಸುಮಾರು 5-6 ವರ್ಷ) ಶಾಲೆಯಿಂದ ಬರುವಾಗ ಶಾಲಾ ಬಸ್ ಕಂಡಕ್ಟರ್ ನ ಆತುರದಿಂದಾಗಿ ಅದೇ ಬಸ್ ನ ಹಿಂದಿನ ಚಕ್ರದಡಿ ಸಿಕ್ಕಿಕೊಂಡನು. ಬಸ್ಸು ಸರಿಯಾಗಿ ಅವನ ಸೊಂಟದ ಮೇಲೆಯೇ ಹಾಡು ಹೋಗಿತ್ತು. 

ಗಾಬರಿಗೊಂಡಿದ್ದ ನನ್ನ ಮಾವನವರಿಗೆ ನಾನು ಈ ರೀತಿ ಹೇಳಿದೆ. "ನೋಡಿ, ನಮ್ಮೊಂದಿಗೆ ನಮ್ಮ ಗುರುನಾಥರಿದ್ದಾರೆ. ಅವರು ಇಂದಿಗೂ ನಮ್ಮ ಕೈ ಬಿಡುವುದಿಲ್ಲ" ಎಂದು ಧೈರ್ಯ ತುಂಬಿದೆ. ಹಾಗೂ ನಾನೂ ಅಂತೆಯೇ ಪ್ರಾರ್ಥನೆ ಮಾಡಿದೆ. ನಾವು ಸಖರಾಯಪಟ್ಟಣಕ್ಕೆ ಹೋಗುವುದರ ಬದಲಿಗೆ ಆ ಬಾಲಕನನ್ನು ಸೇರಿಸಿದ್ದ ಹಾಸನದ ಆಸ್ಪತ್ರೆಗೆ ಬಂದೆವು. 

ಅಲ್ಲಿಗೆ ಬಂದ ನಮಗೆ ಆಶ್ಚರ್ಯ ಕಾದಿತ್ತು. ಅಷ್ಟು ದೊಡ್ಡ ಬಸ್ ಮೈಮೇಲೆ ಹಾದು ಹೋಗಿದ್ದರೂ ಏಟು ಮಾತ್ರ ಸೈಕಲ್ ಗುದ್ದಿದರೆ ಆಗುವಷ್ಟು ಸಣ್ಣ ಪ್ರಮಾಣದಲ್ಲಿ ಆಗಿತ್ತು. ಇದಕ್ಕೆ ಇತರರು ಏನೆನ್ನುವರು ಎಂಬ ತರ್ಕಗಳು ನನಗೆ ಬೇಡ. ಆದರೆ ನಾವು ನಂಬಿದ ನಮ್ಮ ಗುರು ನಮ್ಮನ್ನು ಕೈಬಿಡಲಿಲ್ಲ, ಎಂದೂ ಕೈ ಬಿಡಲಾರ. ಇಂದಿಗೂ ಆ ನಂಬಿಕೆಯಲ್ಲೇ ಜೀವನ ಸಾಗಿಸುತ್ತಿರುವೆನು. ಎಂದು ಕಣ್ತುಂಬಿಕೊಂಡರು.....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Tuesday, February 7, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 126


    ಗ್ರಂಥ ರಚನೆ - ಚರಣದಾಸ 


ಭವರೋಗ ನಿವಾರಕ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


"ಆಡು ಮುಟ್ಟದ ಸೊಪ್ಪಿಲ್ಲ" ಎಂಬಂತೆ ನಮ್ಮ ಗುರುನಾಥರಿಗೆ ತಿಳಿಯದ ವಿದ್ಯೆಗಳಿರಲಿಲ್ಲ. ಮಾತ್ರವಲ್ಲ ಪ್ರತೀ ಸಮಸ್ಯೆಗೂ ಅವರು ನೀಡುತ್ತಿದ್ದ ಪರಿಹಾರ ಜನ ಸಾಮಾನ್ಯರಿಗೂ ಎಟುಕುವಂತಿರುತ್ತಿತ್ತು.

ಒಮ್ಮೆ ಸಖರಾಯಪಟ್ಟಣಕ್ಕೆ ಸಮೀಪದಲ್ಲಿ ವಾಸಿಸುತ್ತಿದ್ದ ಹೆಣ್ಣು ಮಗಳೊಬ್ಬರು ಗುರುನಾಥರಲ್ಲಿಗೆ ಬಂದು ತನ್ನ ಸಮಸ್ಯೆಯನ್ನು ಈ ರೀತಿಯಾಗಿ ಹೇಳಿಕೊಂಡರು. "ಗುರುಗಳೇ, ನಾನು ಎಲ್ಲಿಗೆ ಹೋದರೂ ಕಾಗೆಗಳು ಬಂದು ನನ್ನ ತಲೆಯನ್ನು ಕುಕ್ಕುತ್ತವೆ. ಮನೆಯಿಂದ ಹೊರ ಹೋಗುವುದೇ ಕಷ್ಟವಾಗಿದೆ. ತಾವು ಕೃಪೆ ಮಾಡಬೇಕು" ಎಂದು ಕಣ್ಣೀರಿಟ್ಟರು.

ಆ ಕೂಡಲೇ ಗುರುನಾಥರು ಹೂವುಗಳನ್ನು ತರಿಸಿ ಆ ಮಹಿಳೆಯ ಕೈಯಿಂದಲೇ ಅಲ್ಲಿ ಓಡಾಡುವ ಮಹಿಳೆಯರಿಗೆ ಕೊಡಿಸಿದರು.

ನಂತರ ಆ ಮಹಿಳೆ ಏಕೆ ಹೀಗೆ ಎಂದು ಕೇಳಲು ಗುರುನಾಥರು "ಏನಿಲ್ಲಮ್ಮಾ ಪ್ರೇತಬಾಧೆಯಿಂದಾಗಿ ಹೀಗಾಗಿದೆ. ಇನ್ನು ಮುಂದೆ ಹೀಗಾಗೋದಿಲ್ಲ" ಎಂದು ಅಭಯ ನೀಡಿದರು. ಅಂತೆಯೇ ಆ ಮಹಿಳೆಗೆ ಮತ್ತೆಂದೂ ಆ ರೀತಿ ಆಗಲಿಲ್ಲ.

ಗುರುನಾಥರು ಒಮ್ಮೆ ಚಿಕ್ಕಮಗಳೂರಿನಲ್ಲಿ ಭಕ್ತರೊಬ್ಬರ ಮನೆಗೆ ಹೋಗಿದ್ದಾಗ ಆ ಮನೆಯವರು ಸರ್ಪ ಸುತ್ತಿನಿಂದ ಬಳಲುತ್ತಿದ್ದ ಒಬ್ಬ ಯುವಕನನ್ನು ಕರೆದುಕೊಂಡು ಬಂದರು. ವಿಪರೀತ ಉರಿಯಿಂದ ಆತ ಆಗಾಗ ಕೂಗಿಕೊಳ್ಳುತ್ತಿದ್ದ.

ಕೊಡಲೇ ಗುರುನಾಥರು ಒಂದು ಜನಿವಾರವನ್ನು ತರಿಸಿ ದೀಪದೆಣ್ಣೆಯಲ್ಲಿ ನೆನೆಸಿ ಅದನ್ನು ಆ ಯುವಕನ ಸೊಂಟಕ್ಕೆ ಕಟ್ಟಲು ಹೇಳಿದರು. ಆಗ ಸಂಜೆಯ ಸಮಯ. ಆಶ್ಚರ್ಯವೆಂದರೆ ಮರುದಿನ ಬೆಳಿಗ್ಗೆ ಹೊತ್ತಿಗೆ ಆ ಯುವಕನ ಸರ್ಪಸುತ್ತು ಸಂಪೂರ್ಣ ಗುಣಮುಖವಾಗಿತ್ತು.

ಮತ್ತೊಮ್ಮೆ ಗುರುನಾಥರು ಚಿಕ್ಕಮಗಳೂರಿನ ಓರ್ವ ಭಕ್ತರ ಕಾರಿನಲ್ಲಿ ಮಲೆನಾಡಿನ ಒಂದು ಶಿವನ ದೇಗುಲ ದರ್ಶನ ಮಾಡಿ ವಾಪಸಾಗುತ್ತಿದ್ದರು. ಚಿಕ್ಕಮಗಳೂರಿಗೆ ಬಂದು ಆ ಯುವಕನ ಮನೆಗೆ ಹೋದರು. ಆ ಯುವಕನ ಪತ್ನಿ ವಿಪರೀತ ಜ್ವರದಿಂದ ನರಳುತ್ತಿದ್ದರು.

ಆಗ ಗುರುನಾಥರು "ಅಮ್ಮಾ ಏನಿಲ್ಲ. ಮನೆ ಬಿಟ್ಟು ಎರಡು ಮೂರು ದಿನವಾಗಿದೆ. ಒಮ್ಮೆ ಮನೆ ಮುಟ್ಟಿ, ತಿರುಗಿ ಬಂದು ನಿನ್ನನ್ನು ಮಾತನಾಡಿಸುವೆ" ಎಂದು ಹೇಳಿ ನೇರವಾಗಿ ಸಖರಾಯಪಟ್ಟಣಕ್ಕೆ ಬಂದು ಮನೆಗೆ ಹೋಗಿ ಅಲ್ಲಿಂದ ಕೂಡಲೇ ತಿರುಗಿ ಚಿಕ್ಕಮಗಳೂರಿಗೆ ಬಂದು ಆ ಯುವಕನ ಪತ್ನಿಯ ಖಾಯಿಲೆ ಬಗ್ಗೆ ವಿಚಾರಿಸಿ, ಆಕೆಗೆ ತಮ್ಮ ಕೈಯಿಂದ ಕೆಲವು ತುತ್ತು ಹಾಲನ್ನವನ್ನು ತಿನ್ನಿಸಿ ಅಲ್ಲಿಂದ ಹೊರಟರು. ವಿಶೇಷವೆಂದರೆ ಕೆಲವೇ ಗಂಟೆಗಳಲ್ಲಿ ಆಕೆ ಸಂಪೂರ್ಣ ಗುಣಮುಖಳಾದರು........,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


ಶ್ರೀ ಸದ್ಗುರು ಅವಧೂತ ವೆಂಕಟಾಚಲ ದೇಶಿಕ ಅಷ್ಟೋತ್ತರಶತ ನಾಮಾವಳಿ 
ರಚನೆ: ಶ್ರೀ.ಮದನಗೋಪಾಲ್, ಬೆಂಗಳೂರು 


ಸದ್ಗುರು ಶ್ರೀ ವೆಂಕಟಾಚಲ ಅವಧೂತರು ಬೆಂಗಳೂರಿನ ರಾಜಾಜಿನಗರ 72ನೇ ಅಡ್ಡ ರಸ್ತೆಯ ನಿವಾಸಿಗಳು  ಹಾಗೂ ವೃತ್ತಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರೂ ಆದ ಗುರುಬಂಧು ಶ್ರೀಯುತ ಮದನಗೋಪಾಲ್ ಅವರಿಗೆ 2012ನೇ ಇಸವಿಯಲ್ಲಿ ಉಪದೇಶ ಮಾಡಿ ಸ್ವತಃ ಅವರ ಕೈಯಿಂದ ಬರೆಸಿಕೊಂಡ ಅಷ್ಟೋತ್ತರಶತ ನಾಮಾವಳಿಯನ್ನು ಗುರುಬಂಧುಗಳ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ. ಗುರುನಾಥರು ಶ್ರೀಯುತ ಮದನಗೋಪಾಲ್ ಅವರನ್ನು ಪ್ರೀತಿಯಿಂದ "ಮದನ ಮೋಹನ್" ಎಂದು ಸಂಬೋಧಿಸುತ್ತಿದ್ದರೆಂದು ಹೇಳಲಾಗಿದೆ. ಈ ಅಷ್ಟೋತ್ತರಶತ ನಾಮಾವಳಿಗಳನ್ನು ಒಳಗೊಂಡ ಕಿರುಹೊತ್ತಗೆಯನ್ನು ಗುರುಬಂಧುಗಳ ಸಹಕಾರದೊಂದಿಗೆ ಪುಸ್ತಕ ರೂಪದಲ್ಲಿ ಹೊರತಂದು 2014ನೇ ಇಸವಿಯ ಪರಮ ಪವಿತ್ರ ವೈಕುಂಠ ಏಕಾದಶಿಯ ದಿನದಂದು ಲೋಕಾರ್ಪಣೆ ಮಾಡಲಾಯಿತು. 

೧. ಓಂ ಅಕ್ಷರಾಯೇ ನಮಃ
೨. ಓಂ ಕ್ಷರಾಯೇ ನಮಃ 
೩. ಓಂ ದ್ವಂದ್ವಾತೀತಾಯ ನಮಃ 
೪. ಓಂ ದ್ವಂದ್ವಹರಾಯ ನಮಃ 
೫. ಓಂ ಶಾಂತಾಯ ನಮಃ 
೬. ಓಂ ಶಾಂತಸ್ವರೂಪ ಪರಬ್ರಹ್ಮಣೇ ನಮಃ 
೭. ಓಂ ಶಾಂತಾವಧೂತಾಯ ನಮಃ 
೮. ಓಂ ಕಪೋಲ ಕಲ್ಪಿತ ಗುರವೇ ನಮಃ 
೯. ಓಂ ಗಿರೀಶಾಯ ನಮಃ 
೧೦. ಓಂ ಗಿರಿಸ್ಥಾವರ ಜಂಗಮಾಯ ನಮಃ 
೧೧. ಓಂ ಕಪಿಲಾಯ ನಮಃ 
೧೨. ಓಂ ಕಪಿಲ ಕಲ್ಪಿತ ಪರಬ್ರಹ್ಮಣೇ  ನಮಃ 
೧೩. ಓಂ ಋಷ್ಯಶೃಂಗ ನಿವಾಸಾಯ ನಮಃ 
೧೪. ಓಂ ಶೃಂಗಗಿರಿ ಚರಾಯ ನಮಃ 
೧೫. ಓಂ ಬಾಣಾವರ ನಿವಾಸಿಯೇ ನಮಃ 
೧೬. ಓಂ ಶಂಕರಲಿಂಗ ಭಗವಾನ್ ಆಶ್ರಿತದಾಯ ನಮಃ 
೧೭. ಓಂ ಕೃಷ್ಣಾವಧೂತ ಸ್ವರೂಪಿಣೇ ನಮಃ 
೧೮. ಓಂ ಕೃಷ್ಣಯೋಗೀಶ್ವರದಾಯಿನೇ ನಮಃ 
೧೯. ಓಂ ಶಿವಾಯ ನಮಃ 
೨೦. ಓಂ ಹರಿಯೇ ನಮಃ 
೨೧. ಓಂ ಅಗಸ್ತ್ಯಮುನಿ ವರಪ್ರಸಾದಾಯ ನಮಃ 
೨೨. ಓಂ ವರಪ್ರದಾಯಿನಿಯೇ ನಮಃ 
೨೩. ಓಂ ಸಾಕಲಾಭೀಷ್ಟದಾಯಿನೇ ನಮಃ 
೨೪. ಓಂ ಕ್ಷಿಪ್ರ ಅವಧೂತ ಕರುಣಾಯೈ ನಮಃ 
೨೫. ಓಂ ಸಂಚಾರಿಣ್ಯೈ ನಮಃ
೨೬. ಓಂ ಅರುಣಾದ್ರಿವಾಸಾಯೈ ನಮಃ 
೨೭. ಓಂ ಅರುಣಾ ಧಾರಿಣಿಯೇ ನಮಃ 
೨೮. ಓಂ ಅರುಣೋದಯಾಯೈ ನಮಃ
೨೯. ಓಂ ಪಶ್ಚಿಮವರದಾಯಿನೇ ನಮಃ 
೩೦. ಓಂ ಸಾಗರವಾಸಿನಿಯೇ ನಮಃ 
೩೧. ಓಂ ತುಂಗಾ ಜಲಕ್ರೀಡಾ ಉದ್ಭವಾಯೈ ನಮಃ 
೩೨. ಓಂ ಚಂದ್ರಶೇಖರ ಪ್ರಸಾದದಾಯಿನೇ ನಮಃ 
೩೩. ಓಂ  ನರಸಿಂಹರೂಪಿಣ್ಯೈ ನಮಃ 
೩೪. ಓಂ ವಿಂಧ್ಯಪರ್ವತ ಕುಂಭೋದ್ಭವಾಯ ನಮಃ 
೩೫. ಓಂ ಹಿಮಾಲಯ ವಾಸಿನ್ಯೈ ನಮಃ 
೩೬. ಓಂ ಮಾನಸಸರೋವರ ಚರಾಯೈ ನಮಃ 
೩೭. ಓಂ ರಮಣಾಯೈ ನಮಃ 
೩೮. ಓಂ ಪೂರ್ಣರಮಣ ಸ್ವರೂಪಾಯೈ ನಮಃ 
೩೯. ಓಂ ದೇಶಿಕಾಯೈ ನಮಃ 
೪೦. ಓಂ ಶಾರದ ಭ್ರಾತೃವೇ ನಮಃ 
೪೧. ಓಂ ಮನೋಮಯಾಯೈ ನಮಃ 
೪೨. ಓಂ ಮನೋವಾಸಿನ್ಯೇ ನಮಃ 
೪೩. ಓಂ ಗ್ರಹಬಲಾಯ ನಮಃ 
೪೪. ಓಂ ನಕ್ಷತ್ರ ಸ್ಥಿರಾಯ ನಮಃ 
೪೫. ಓಂ ವೃತ್ತಾಯ ನಮಃ 
೪೬. ಓಂ ವೃತ್ತಾ ಚಲನಾತೀತಾಯ ನಮಃ 
೪೭. ಓಂ ನಿರ್ಗುಣಾಯ ನಮಃ 
೪೮. ಓಂ ನಿರ್ಮಲಾತೀತಾಯ ನಮಃ 
೪೯. ಓಂ ನಿರ್ಮಲ ಚಿತ್ತಾಯ ನಮಃ 
೫೦. ಓಂ ನಿರ್ಮೋಹಾಯೈ ನಮಃ 
೫೧. ಓಂ ಬಲಾಢ್ಯಾಯ ನಮಃ 
೫೨. ಓಂ ಬಲವಾಯಿನ್ಯೇ ನಮಃ 
೫೩. ಓಂ ಭೀಮೋದ್ಭವಾಯೈ ನಮಃ 
೫೪. ಓಂ ಕೃಷ್ಣಾಯ ನಮಃ 
೫೫. ಓಂ ಕೃಷ್ಣಾತೀತಾಯೈ ನಮಃ 
೫೬. ಓಂ ಮತ್ಸ್ಯಾಯ ನಮಃ 
೫೭. ಓಂ ಉರಗಾಯ ನಮಃ 
೫೮. ಓಂ ಉರಗ ಸ್ವರೂಪಿಣೇ ನಮಃ 
೫೯. ಓಂ ವಾಸುಕಿಯೇ ನಮಃ 
೬೦. ಓಂ ವಾಸುದೇವಾಯ ನಮಃ 
೬೧. ಓಂ ವಾಸುದೇವಕಾರಯೇ ನಮಃ 
೬೨. ಓಂ ಸುಮಂಗಲ ಪ್ರದಾಯಿನೇ ನಮಃ 
೬೩. ಓಂ ಸೌಮ್ಯಮೂರ್ತಿಯೇ ನಮಃ 
೬೪. ಓಂ ವಿಮಾನಾಯ ನಮಃ 
೬೫. ಓಂ ವಿಭಾಲಾಯ ನಮಃ 
೬೬. ಓಂ ವಿಫುಲಶಕ್ತಿ ಪ್ರದಾಯಿನೇ ನಮಃ 
೬೭. ಓಂ ಪ್ರಜ್ವಲರೂಪಾಯೈ ನಮಃ 
೬೮. ಓಂ ಪ್ರಸನ್ನಾಯ ನಮಃ 
೬೯. ಓಂ ಪ್ರಸನ್ನ ಚಿತ್ತಾಯ ನಮಃ 
೭೦. ಓಂ ಪ್ರಸನ್ನ ವರಪ್ರದಾಯ ನಮಃ 
೭೧. ಓಂ ವರಾಹಮೂರ್ತಿಯೇ ನಮಃ 
೭೨. ಓಂ ವರಾಹ ಸ್ವರೂಪಿಯೇ ನಮಃ 
೭೩. ಓಂ ವರಾಹ ಬಲಿಷ್ಠ ಪ್ರದಾಯಿನ್ಯೇ ನಮಃ 
೭೪. ಓಂ ಆಚಾರ್ಯಾಯ ನಮಃ 
೭೫. ಓಂ ಗೀತಾಚಾರ್ಯಾಯ ನಮಃ 
೭೬. ಓಂ ಗೀತಾವಿಶ್ಲೇಷಿಣ್ಯೇ ನಮಃ 
೭೭. ಓಂ ಗೀತಾಬೋಧಾಯ ನಮಃ 
೭೮. ಓಂ ಸುದರ್ಶನಾಯ ನಮಃ 
೭೯. ಓಂ ವಿಶ್ವಹಸ್ತಧಾರಿಣ್ಯೇ ನಮಃ 
೮೦. ಓಂ ಶಂಖಾಯೈ ನಮಃ 
೮೧. ಓಂ ಶಶಾಂಕಾಯ ನಮಃ 
೮೨. ಓಂ ಪುಷ್ಕರಿಣಿಯೇ ನಮಃ 
೮೩. ಓಂ ಪುಷ್ಕರಿಣೀ ಜಲಸ್ವರೂಪಿಣ್ಯೇ ನಮಃ
೮೪. ಓಂ ಈಶಾನ್ಯಾಯ ನಮಃ 
೮೫. ಓಂ ಈಶ್ವರ ರೂಪಾಯ ನಮಃ 
೮೬. ಓಂ ಶುಭಾಯ ನಮಃ 
೮೭. ಓಂ ಶುಭಕರಾಯ ನಮಃ 
೮೮. ಓಂ ಶಂಕರಾಯ ನಮಃ 
೮೯. ಓಂ ಮಧುರಾಯ ನಮಃ 
೯೦. ಓಂ ಮಂದಹಾಸಾಯ ನಮಃ 
೯೧. ಓಂ ಮಧುರನಿಲಯವಾಸಿನೇ ನಮಃ 
೯೨. ಓಂ ಬಿಲ್ವಾಯ ನಮಃ 
೯೩. ಓಂ ಬಿಲ್ವಪತ್ರಧಾರಿಣಿಯೇ ನಮಃ 
೯೪. ಓಂ ಸಂಕಷ್ಟಧಾರಿಣ್ಯೇ ನಮಃ
೯೫. ಓಂ ಅಕ್ಷೋಹಿಣಿ ಸೈನ್ಯ ಹರಾಯ ನಮಃ 
೯೬. ಓಂ ದ್ರೌಪದಿರಕ್ಷಿತ ವರಪ್ರಸಾದಾಯ ನಮಃ 
೯೭. ಓಂ ಪಿಳ್ಳಂಗೋವಿ ಚೆಲುವಕೃಷ್ಣಾಯ ನಮಃ 
೯೮. ಓಂ ನಾದಾಯ ನಮಃ 
೯೯. ಓಂ ನಾದ ಬ್ರಹ್ಮಾಯ ನಮಃ 
೧೦೦. ಓಂ ನಾದ ಲಹರಿ ಪ್ರಿಯಾಯ ನಮಃ 
೧೦೧. ಓಂ ಸಪ್ತಗಿರಿ ವಾಸಾಯ ನಮಃ 
೧೦೨. ಓಂ ಚಲಾಯ ನಮಃ 
೧೦೩. ಓಂ ಅಚಲಾಯ ನಮಃ 
೧೦೪. ಓಂ ಚರಾಚರ ಜಗದೋದ್ಧಾರಾಯ ನಮಃ 
೧೦೫. ಓಂ ಧನುರ್ಧರಾಯೈ ನಮಃ 
೧೦೬. ಓಂ ಪುರುಷೋತ್ತಮಾಯ ನಮಃ 
೧೦೭. ಓಂ ಗೌತಮಾಯ ನಮಃ 
೧೦೮. ಓಂ ವೆಂಕಟಾಚಲ ದೇಶಿಕ ಇಷ್ಟಪ್ರದಾಯಿನೇ ನಮಃ 

ಇತಿ ಶ್ರೀ ಸದ್ಗುರು ಅವಧೂತ ವೆಂಕಟಾಚಲ ದೇಶಿಕ ಶತನಾಮಾವಳಿ  ಸಂಪೂರ್ಣಂ

Monday, February 6, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 125


    ಗ್ರಂಥ ರಚನೆ - ಚರಣದಾಸ 


ಕರುಣೆಯ ಕಡಲು 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಸದ್ಗುರು ಕೇವಲ ಭಕ್ತರ ಕೂಗಿಗೆ ಮಾತ್ರವೇ ಓಗೊಡುವುದು ಮಾತ್ರವಲ್ಲ. ಸೃಷ್ಠಿಯ ಸಕಲ ಚರಾಚರಗಳೆಲ್ಲದರ ಕಷ್ಟಗಳಿಗೂ ಸ್ಪಂದಿಸುವನು. ಅದುವೇ ಸದ್ಗುರುವಿನ ಲಕ್ಷಣ. 

ಗುರುವಿಗೆ ಕಾಲ ದೇಶಗಳ ಮಿತಿ ಇಲ್ಲ. ಆತ ಸರ್ವಾಂತರ್ಯಾಮಿ ಅನಂತ ರೂಪಿ. 

ಒಮ್ಮೆ ಗುರುನಾಥರು ಭಕ್ತರೋರ್ವರ ಕಾರಿನಲ್ಲಿ ಮೈಸೂರಿನ ಕಡೆಗೆ ಹೊರಟಿದ್ದರು. ದಾರಿಯಲ್ಲಿ ಹಳೇಬೀಡು ಕೆರೆಯನ್ನು ನೋಡಿ "ಅಯ್ಯಾ ಕಾರು ನಿಲ್ಲಿಸು" ಎಂದರು ಕೆಳಗಿಳಿದರೆ ಬತ್ತಿ ಹೋಗಿದ್ದ ಕೆರೆಯನ್ನು ನೋಡಿ ಮರುಗಿ "ಅಯ್ಯಾ ಒಂದು ಹನಿ ನೀರಿಲ್ಲ. ಪಶು ಪಕ್ಷಿಗಳ ಕತೆ ಏನಾಗಬೇಕು? ನೀರು ಬರಬೇಕು ಕಣಯ್ಯಾ" ಎಂದು  ನುಡಿದು ಕೆರೆಗೆ ಪೂಜೆ ಸಲ್ಲಿಸಿ ಹೊರಟು ಹೋದರು. 

ಹಾಗೆಯೇ ಬಹುಶಃ 1980 ರ ದಶಕದಲ್ಲಿ ಉತ್ತರ ಕರ್ನಾಟಕದ ಭರಮ ಸಾಗರ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಆ ಊರಿನ ಜನಗಳು ಗುರುನಾಥರ ಮಹಿಮೆಯ ಬಗ್ಗೆ ತಿಳಿದು ಗುರುನಿವಾಸಕ್ಕೆ ಬಂದು ಬತ್ತಿಹೋದ ಕೆರೆಯ ಕುರಿತು ವಿನಂತಿಸಿದರು. 

ಆಗ ಭರಮಸಾಗರಕ್ಕೆ ತೆರಳಿದ ಗುರುನಾಥರು ಒಂದು ಸಣ್ಣ ಬಲೆಯಲ್ಲಿ ಸ್ವಲ್ಪ ಮರಳನ್ನು ಹಾಕಿ "ಶ್ರೀರಾಮ ಜಯರಾಮ" ನಾಮ ಜಪಿಸುತ್ತಾ ಸಮೀಪದ ಆಂಜನೇಯ ದೇಗುಲದಲ್ಲಿ ಇಟ್ಟು ಬಂದರು ಅದಾಗಿ ಕೆಲವೇ ದಿನಗಳಲ್ಲಿ ಧಾರಾಕಾರ ಮಳೆಯಾಗಿ ಕೆರೆ ತುಂಬಿತ್ತು. ಮಾತ್ರವಲ್ಲ ಇಂದಿಗೂ ಆ ಕೆರೆ ಬತ್ತಿಲ್ಲ. ಇದು ಗುರು ಕಾರುಣ್ಯದ ಸಂಕೇತವೆಂದು ಆ ಊರಿನ ಗುರುಭಕ್ತರೊಬ್ಬರು ಚರಣದಾಸನಾದ ನನಗೆ ತಿಳಿಸಿದರು. 

ಆಶ್ಚರ್ಯವೆಂದರೆ ಅವರು ಮೈಸೂರು ತಲುಪಿ ಒಂದೆರಡು ದಿನ ಬಿಟ್ಟು ತಿರುಗಿ ಬರುವಾಗ ಕೆರೆಯಲ್ಲಿ ನೀರು ತುಂಬಿತ್ತು. ಹಾಗಾದರೆ ಆ ಬತ್ತಿದ ಕೆರೆಯಲ್ಲಿ ನೀರು ತುಂಬಿದವರಾರು? ಎಂಬ ಪ್ರಶ್ನೆಗೆ ಉತ್ತರ ಕೇವಲ ಗುರುವೆಂಬ ದೃಢಭವ ಮಾತ್ರವೇ....

ಗುರುನಾಥರು ನಾನು ಕಂಡಂತೆ ಯಾವುದೇ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದುದು ಕಡಿಮೆ. ಕಾರ್ಯಕ್ರಮದ ಹಿಂದಿನ ದಿನ ಇಲ್ಲವೇ  ಕಾರ್ಯಕ್ರಮವಾದ ನಂತರ ಹೋಗಿ ಬರುತ್ತಿದ್ದರು. 

ಇನ್ನು ಭಾಷಣ ಪ್ರವಚನವೆಂದು ವೇದಿಕೆ ಹತ್ತಿದ ಉದಾಹರಣೆಗಳಿಲ್ಲ. 

ಆದರೆ ಊರಿನಲ್ಲಿ ಪುಟ್ಟ ಮಕ್ಕಳು ಆಚರಿಸುತ್ತಿದ್ದ ಗಣಪತಿ ಉತ್ಸವಕ್ಕೆ ಹೋಗಿ ತನ್ನ ಖರ್ಚಿನಲ್ಲೇ ಮಕ್ಕಳಿಗೆ ಸಿಹಿ ತಿನಿಸುಗಳನ್ನು ನೀಡಿ ಒಂದೆರಡು ಕಿವಿ ಮಾತು ಹೇಳಿ ಬರುತ್ತಿದ್ದರು. ಆಗೆಲ್ಲಾ ನಿಜಕ್ಕೂ ಅವರೂ ಮಕ್ಕಳೇ ಆಗಿ ಬಿಡುತ್ತಿದ್ದರು. ಅವರ ಈ ಮುಗ್ಧ ಮನಸ್ಸಿಗೆ ಬಹುಶಃ ಅವರೇ ಸರಿಸಾಟಿ. 

ಅವರು ಎಂದೂ ತಮ್ಮನ್ನು ಗುರು ಎಂದಾಗಲಿ ಅಥವಾ ಬೇರಾವ ಹೆಸರಿನಿಂದಾಗಲಿ ಎಂದೂ ಕರೆದುಕೊಂಡಿರಲಿಲ್ಲ. ಹೆಚ್ಚೆಂದರೆ ತಾನೊಬ್ಬ ಭಿಕ್ಷುಕ ಅಥವಾ ಹುಚ್ಚ ಎಂದು ಹೇಳಿಕೊಳ್ಳುತ್ತಿದ್ದರು. 

ಒಮ್ಮೆ ಅವರು ರೈಲಿನಲ್ಲಿ ಬೆಂಗಳೂರಿನ ಕಡೆಗೆ ಪ್ರಯಾಣ ಮಾಡುವ ಸಂದರ್ಭ ಬಂದಿತು. ರೈಲಿನಲ್ಲಿ ಕುಳಿತ ಅವರನ್ನು ಒಬ್ಬ ಎರಡೂ ಕಾಲಿರದ ಕುಂಟನು ಬಂದು ಗುರುನಾಥರ ಪಾದಕ್ಕೆ ನಮಸ್ಕರಿಸಿ ಅಳುತ್ತಾ ಹೀಗೆ ಕೇಳಿದ್ದನು. "ಹೇ ಭಗವಂತಾ, ನನ್ನ ಯಾಕೆ ಈ ಪರಿಸ್ಥಿತಿಗೆ ತಂದೆ?" ಎಂದು. ಗುರುನಾಥರು ಒಂದೂ ಮಾತನಾಡದೇ ಆತನಿಗೆ ಆಶೀರ್ವದಿಸಿ ಎಲ್ಲರಿಗೂ ಹಣ್ಣನ್ನು ಹಂಚಿ ಬಂದಿದ್ದರು......,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Sunday, February 5, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 124


    ಗ್ರಂಥ ರಚನೆ - ಚರಣದಾಸ 


ನಿರ್ಮೋಹ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಗುರುನಾಥರಿಗಾಗಿಯೇ ಕೆಲವು ಭಕ್ತರು ಕಾರನ್ನು ಖರೀದಿಸಿ ಕೀಲಿಯನ್ನು ತಂದು ಕೊಡ ಬಂದರು. ಆಗ ಗುರುನಾಥರು ಅದನ್ನು ಮುಟ್ಟಿ "ಆಯ್ತಪ್ಪಾ..... ಇನ್ನು ಈ ಕಾರು ನನ್ನದೇ. ಆದ್ರೆ ನೀನೆ ಇಟ್ಕೋ. ನಾ ಬೇಕಾದಾಗ ತೆಗೆದುಕೊಳ್ಳುವೆ" ಎಂದು ಹಿಂತಿರುಗಿಸಿ ಬಿಟ್ಟಿದ್ದರು. ಇದು ಗುರುನಾಥರ ನಿರ್ಮೋಹವನ್ನು ಸಾರಿ ಸಾರಿ ಹೇಳುತ್ತದೆ. 

ಅವರು ಎಂದೂ ಬೇರೆಯವರ ವಸ್ತುಗಳನ್ನು ಬಯಸುತ್ತಿರಲಿಲ್ಲ. ಒಮ್ಮೆ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಾವು ತೋಟದಿಂದ ಅಡಿಕೆ ಕಾಯಿ ಕೀಳಿಸಿ ಮನೆಗೆ ತಂದೆವು. 

ಆಗ ಅಲ್ಲಿಯೇ ಇದ್ದ ಗುರುನಾಥರು, "ನೋಡಯ್ಯಾ ಈ ಅಡಿಕೆಯಲ್ಲಿ ಇಪ್ಪತ್ತಮೂರು ಅಡಿಕೆಕಾಯಿ ನಮ್ಮ ತೋಟದ್ದಲ್ಲ. ಕಣ್ಣು ತಪ್ಪಿನಿಂದಾಗಿ ನಮ್ಮ ಅಡಿಕೆ ಜೊತೆ ಸೇರಿಕೊಂಡಿವೆ. ಈ ಇಪ್ಪತ್ತಮೂರು ಅಡಿಕೆಕಾಯಿಯನ್ನು ತೆಗೆದುಕೊಂಡು ಹೋಗಿ ಪಕ್ಕದ ತೋಟದಲ್ಲಿ ಹಾಕು" ಎಂದು ಹೇಳಿ ಚರಣದಾಸನಾದ ನನ್ನ ಕೈಯಲ್ಲಿಯೇ ಕೊಟ್ಟು ಕಳಿಸಿದರು. 

ಮತ್ತೊಮ್ಮೆ ಭಕ್ತರಾಗಿದ್ದ ಓರ್ವ ರಾಜಕಾರಣಿ ತನ್ನ ಅಭಿಮಾನ ತೋರ್ಪಡಿಸಲು ಬೆಂಗಳೂರಿನಿಂದ ಹತ್ತಿಪ್ಪತ್ತು ಕುರ್ಚಿಗಳನ್ನು ಕಳಿಸಿಕೊಟ್ಟಿದ್ದರು. ಅದನ್ನು ತಂದ ಗಾಡಿಯ ಚಾಲಕನನ್ನು ಕರೆಸಿ ಊಟೋಪಚಾರಗಳನ್ನು ನೀಡಿ ಕೈಗೆ ಸಾಕಷ್ಟು ಹಣ ನೀಡಿ ಹೀಗೆ ಹೇಳಿದರು. "ಅಯ್ಯಾ, ಈ ಕುರ್ಚಿಗಳೆಲ್ಲವೂ ನಿನ್ನದೇ.... ಆದರೆ ಅವನ್ನು ಇಟ್ಟುಕೊಳ್ಳಲು ಸ್ಥಳದ ಅಭಾವವಿರುವುದರಿಂದ ನಿಮ್ಮ ಮನೆಯಲ್ಲಿಯೇ ಇಟ್ಟಿರಲು ಹೇಳು. ನನಗೆ ಬೇಕಾದಾಗ ಬಂದು ತೆಗೆದುಕೊಳ್ಳುವೆನೆಂದು ನಿಮ್ಮ ಮಂತ್ರಿಗಳಿಗೆ ಹೇಳು" ಎಂದು ನುಡಿದು ಮೌನವಾದರು. 

ಗುರುನಾಥರು ಎಷ್ಟು ಪಕ್ಕ ವ್ಯವಹಾರಿಗಳೆಂದರೆ ಹಣಕಾಸಿನ, ಪದಾರ್ಥ ವಿಚಾರ ಮಾತ್ರವಲ್ಲ. ಇತರರ ಶುದ್ಧವಲ್ಲದ ಭಾವನೆಯನ್ನು ಸ್ವೀಕರಿಸುತ್ತಿರಲಿಲ್ಲ. 

ಗುರುನಾಥರ ಈಶ್ವರ ಪ್ರೀತಿ ಎಷ್ಟು ದೃಢವಾದುದೆಂದು ನಾನಾಗಲೇ ಹೇಳಿದಂತೆ ಸಖರಾಯಪಟ್ಟಣ ಅರೆಬಯಲು ಸೀಮೆಯಾಗಿತ್ತು. ಆಗಾಗ್ಗೆ ಮಳೆರಾಯ ಕಣ್ಣುಮುಚ್ಚಾಲೆ ಆಡುತ್ತಲೇ ಇರುತ್ತಿದ್ದನು. 

ಸುಡು ಬಿಸಿಲಿನಿಂದಾಗಿ ಗುರುನಾಥರ ಅಡಿಕೆ ತೋಟ ಹಾಳಾಗಬಾರದೆಂಬ ಉದ್ದೇಶದಿಂದ ಅವರ ಸಂಬಂಧಿಯೊಬ್ಬರು ಬಂದು "ಗುರುಗಳೇ, ಅಡಿಕೆ ತೋಟ ಉಳಿಸಿಕೊಳ್ಳಲು ನಿಮ್ಮ ತೋಟಕ್ಕೆ ಹನಿ ನೀರಾವರಿ ಯೋಜನೆಯನ್ನು ಮಾಡೋಣ" ಎಂದು ಹಠ ಮಾಡತೊಡಗಿದರು. 

ಗುರುನಾಥರು ಪ್ರಕೃತಿಯನ್ನು ಅದರ ಸ್ವಾಭಾವಿಕತೆಯನ್ನು ಎಂದೂ ಬದಲಾಗದಂತೆ ಇರಲು ಬಯಸುತ್ತಿದ್ದರು. ಬಾವಿ ತೋಡಿಸುವುದನ್ನು ಒಪ್ಪುತ್ತಿರಲಿಲ್ಲ. ಆ ವ್ಯಕ್ತಿಯ ಮಾತಿಗೆ ಗುರುನಾಥರು "ತೋಟ ಮಾಡಿಕೊಟ್ಟ ಶಿವ, ಉಳಿಸೋ ವಿದ್ಯೆ ಅವನಿಗೆ ಗೊತ್ತಿಲ್ವೇನಯ್ಯಾ" ಎಂದು ನುಡಿದು ಸುಮ್ಮನಾದರು. 

ಅದಾಗಿ ಒಂದೆರಡು ದಿನಕ್ಕೆ ಧಾರಾಕಾರ ಮಳೆ ಬಂದು ತೋಟ ತಂಪಾಯ್ತು. ಆಗ ಗುರುನಾಥರು "ಈ ನೀರನ್ನು ನೀನು ಕೊಟ್ಟೆಯೋ ಅಥವಾ ನಿನ್ನ ಹನಿ ನೀರಾವರಿ ನೀಡಿತೋ?" ಎಂದು ಆ ವ್ಯಕ್ತಿಯನ್ನು ಪ್ರಶ್ನಿಸಲು ಆತ ಉತ್ತರವಿರದೇ ಮೌನಕ್ಕೆ ಶರಣಾದನು......,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Saturday, February 4, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 123


    ಗ್ರಂಥ ರಚನೆ - ಚರಣದಾಸ 


ಅನನ್ಯ ತ್ಯಾಗಮಯಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುನಾಥರು ಎಂದೂ ಯಾರಿಂದಲೂ ಏನನ್ನೂ ಬಯಸುತ್ತಿರಲಿಲ್ಲ. ಈ ಜಾಗದಿಂದ ಏನನ್ನು ಪಡೆದಿದ್ದರೋ ಅದಕ್ಕಿಂತ ಹೆಚ್ಚು ತಿರುಗಿ ನೀಡಿ ಹೋಗಿರುವರು ಎನಿಸುತ್ತದೆ. ಅವರು ಬಯಸುತ್ತಿದ್ದ ಏಕೈಕ ವಿಚಾರವೆಂದರೆ "ಪ್ರತಿಯೊಬ್ಬ ವ್ಯಕ್ತಿಯ ಒಳ್ಳೆಯ ನಡವಳಿಕೆ ಹಾಗೂ ಒಳ್ಳೆಯ ಮನಸ್ಸು ಮಾತ್ರ". 

ತೀರಾ ಇತ್ತೀಚೆಗೆ ಮಾಜಿ ಶಾಸಕರು ಹಾಗೂ ಅವರ ಶ್ರೀಮತಿಯವರನ್ನು ಭೇಟಿಯಾಗುವ ಅವಕಾಶ ಒದಗಿ ಬಂತು. ಚರಣದಾಸನಾದ ನಾನು ಗುರುನಿವಾಸದಲ್ಲಿದ್ದಾಗ ನನ್ನನ್ನು ನೋಡಿದ್ದ ಅವರು ನನ್ನ ಗುರುತು ಹಿಡಿದು ಮಾತನಾಡಿಸಿದರು. ಆಗ ನಾನು ಅವರಲ್ಲಿ ಗುರುನಾಥರ ಬಗೆಗಿನ ಅನುಭವವನ್ನು ಹೇಳಬೇಕೆಂದು ವಿನಂತಿಸಿದೆ. 

ನೋಡಿ ನಮಗೆ 'ಅವಧೂತ, ಗುರು' ಮುಂತಾದ ಪದಗಳ ಅರ್ಥ ತಿಳಿದಿಲ್ಲ. ಆದರೆ ಜಗತ್ತಿನ ಸಕಲ ಜೀವಿಗಳ ಅಂತರಾಳ, ಒಂದು ಮನದ ಪ್ರತಿಬಿಂಬವೇ ಅವರಾಗಿದ್ದರು ಎಂಬುದು ನಮ್ಮ ನಂಬಿಕೆ. ನಾವು ಅವರನ್ನು 'ಚಲಪತಯ್ಯಾ' ಎಂದೇ ಕರೆಯುತ್ತಿದ್ದೆವು. 

ಒಮ್ಮೆ ನಾನು ನನ್ನ ಪತಿ ಹಾಗೂ ಕುಟುಂಬದ ಸ್ನೇಹಿತರೊಂದಿಗೆ ಗುರುನಿವಾಸಕ್ಕೆ ತೆರಳಿದೆವು. ನಮ್ಮನ್ನು ಆದರಿಸಿದ ಗುರುನಾಥರಿಗೆ ನಮಸ್ಕರಿಸಿ, ಅವರಿಗಾಗಿ ತಂದಿದ್ದ ಒಂದು ಪಂಚೆಯನ್ನು ಅವರಿಗೆ ಸಮರ್ಪಿಸಿದೆವು. 

ಆಗ ಅದರ ಮೇಲೆ ಕೈಯಿಟ್ಟ ಗುರುನಾಥರು ನಸುನಕ್ಕು ನಮ್ಮ ಜೊತೆ ಬಂದಿದ್ದ ನಮ್ಮ ಸ್ನೇಹಿತರ ಕಡೆ ತಿರುಗಿ "ಈ ಪಂಚೆ ಮೇಲೆ ಇವನ ಹೆಸರು ಬರೆದಿದೆ" ಎಂದು ಆ ಪಂಚೆಯನ್ನು ಅವರಿಗೆ ನೀಡಿದರು. ಗುರುನಾಥರೇ ಬಳಸುವರೆಂದು ನಂಬಿದ್ದ ನಮಗೆ ನಿರಾಸೆ ಆಯಿತಾದರೂ ಅವರ ನಿರ್ಮೋಹವನ್ನು ಕಂಡು ಅವರ ಮೇಲಿದ್ದ ನಂಬಿಕೆ ಇಮ್ಮಡಿಯಾಯಿತು. 

ಮತ್ತೂ ಮುಂದುವರೆದ ಆ ಮಾಜಿ ಶಾಸಕರ ಪತ್ನಿ, ನಾವುಗಳು ಗುರುನಾಥರಿಗೆ ನಮಸ್ಕರಿಸಲು ನಿಂತಾಗ ಗುರುನಾಥರು "ನನಗೆ ನಮಸ್ಕರಿಸಬೇಡಿ, ಅದೋ ಅಲ್ಲಿ ಕುಳಿತಿರುವ ನನ್ನ ತಾಯಿಗೆ ನಮಸ್ಕರಿಸಿ, ಆಕೆಗೀಗ 83 ವರ್ಷ ವಯಸ್ಸು" ಎಂದು ತಿಳಿಸಿದರು. 

ಯಾರ ನಮಸ್ಕಾರ, ಸಮಾಜದಿಂದ ಗುರುತಿಸುವಿಕೆ ಯಾವುದನ್ನು ಬಯಸದ ಅವರ ಕರ್ತವ್ಯಪರತೆ ನಮಗೆಲ್ಲಾ ಮಾದರಿ ಎಂದೆನಿಸಿತು. 

ಮತ್ತೊಂದು ಸಂದರ್ಭ. ಗುರುನಾಥರು ಚಿಕ್ಕಮಗಳೂರಿನ ಸಮೀಪದ ಈಶ್ವರ ದೇಗುಲಕ್ಕೆ ಬಂದು ಭಕ್ತರ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಆಗ ನಮ್ಮ ಯಜಮಾನರು ಜಿಲ್ಲಾ ಆಟದ ಮೈದಾನದಲ್ಲಿದ್ದರು. ಅವರು ಗುರುನಾಥರನ್ನು ನೋಡಿರಲಿಲ್ಲ. ಆದರೆ ಅವರನ್ನು ನೋಡಿದ ಗುರುನಾಥರು ಎರಡು ಕಿಲೋಮೀಟರ್ ಹೋದವರು ಮತ್ತೆ ತಿರುಗಿ ಬಂದು ನಮ್ಮ ಯಜಮಾನರನ್ನು ಮಾತನಾಡಿಸಿ ಹಣ್ಣು ನೀಡಿ ನಂತರ ಅಲ್ಲಿಂದ ಹೊರಟು ಹೋದರು. 

ನಮಗೆ ಆ ಸದ್ಗುರು ಎಲ್ಲವನ್ನು ನೀಡಿರುವನು. ಮೇಲಾಗಿ ನಾವು ಏನನ್ನು ಕೇಳದೆಯೇ ಆತ ಎಲ್ಲವನ್ನು ಕೊಟ್ಟಿರುವನು. ನಮ್ಮ ಗುರುನಾಥರನ್ನು ಪವಾಡಗಳ ಹಿನ್ನೆಲೆಯಲ್ಲಿ ನೋಡುವುದಕ್ಕಿಂತ ಅವರೊಂದು "ಜೀವನಾನುಭವ" ಸರಳತೆಯ ಮಹಾ ಮೂರ್ತಿ, ನಮ್ಮೊಳಗಿನ ಅರಿವನ್ನು ಎಚ್ಚರಿಸುವ ಮೇರು ಶಿಖರ ಎನ್ನುವುದು ಸಮಂಜಸ ಎಂದು ಮನದುಂಬಿ ಹೇಳಿ ಮಾತು ಮುಗಿಸಿದರು......,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Friday, February 3, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 122


    ಗ್ರಂಥ ರಚನೆ - ಚರಣದಾಸ 


ಗುರುಭಕ್ತಿ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇತ್ತೀಚೆಗೆ ಚಿಕ್ಕಮಗಳೂರಿಗೆ ಹೋಗಿದ್ದಾಗ ಗುರುನಾಥರ ಮನೆಗೆ ಸದಾ ಬರುತ್ತಿದ್ದ ಒಬ್ಬ ಹುಡುಗ ಸಿಕ್ಕಿದ್ದರು. ಆತನನ್ನು ತನ್ನ ಅನುಭವವನ್ನು ಹೇಳುವಂತೆ ವಿನಂತಿಸಿದೆ. ಆತ ಹೀಗೆ ಹೇಳತೊಡಗಿದರು. 

ನೋಡಿ, ನಾನು ಮದುವೆಯಾದದ್ದು 1998ರಲ್ಲಿ. ಆದರೆ ಬಹಳ ವರ್ಷಗಳಾದರೂ ನಮಗೆ ಮಕ್ಕಳಾಗಿರಲಿಲ್ಲ. ಈ ಮಧ್ಯೆ ಗುರುನಾಥರಿಗೆ ಯಾವುದೋ ಕಾರಣಕ್ಕಾಗಿ ಕಾಲು ಪಾದಗಳು ಸುಟ್ಟು ಹೋಗಿತ್ತು. ಈ ಜನರ ಜಂಗುಳಿಯಿಂದ ದೂರವಿರಲು ಇಚ್ಚಿಸಿದ್ದ ಗುರುನಾಥರು ನಮ್ಮ ಮನೆಗೆ ಬಂದು ನೆಲೆಸಿದರು. ಗುರುನಾಥರು ಬಂದು ಹೋದ ಹತ್ತು ದಿನಕ್ಕೆ ನನ್ನ ಹೆಂಡತಿ ಗರ್ಭ ಧರಿಸಿದಳು. 

ಆಕೆಯು ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಸಮಯ.  ಆಕೆಗೆ ಹೆರಿಗೆಯಾಗುವ ಹಿಂದಿನ ದಿನ ಮತ್ತೆ ನಮ್ಮ ಮನೆಗೆ ಬಂದು ಗುರುನಾಥರು ನಮ್ಮ ಮನೆಯಲ್ಲಿಯೇ ಮಲಗಿದ್ದರು. 

ಮರುದಿನ ಬೆಳಿಗ್ಗೆ ಹೊಟ್ಟೆ ನೋವಿನಿಂದಾಗಿ ನನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ ಸುಮಾರು ಒಂಬತ್ತು ಗಂಟೆ ಸುಮಾರಿಗೆ ಗುರುನಾಥರು ಬೇರೊಬ್ಬರ ಮನೆಗೆ ಹೋಗಿಬಿಟ್ಟರು. ಬೆಳಿಗ್ಗೆ 9-45 ಸುಮಾರಿಗೆ ನನ್ನ ಹೆಂಡತಿ ಗಂಡು ಮಗುವಿಗೆ ಜನ್ಮವಿತ್ತಳು. 

ಈ ವಿಚಾರವನ್ನು ತಿಳಿಸೋಣವೆಂದು ಆ ಹುಡುಗ ನೇರವಾಗಿ ಗುರುನಾಥರು ಮಲಗಿದ್ದ ಮನೆಗೆ ಬಂದರು. ಆದರೆ ಆ ಸಮಯದಲ್ಲಿ ನಿದ್ರಿಸುತ್ತಿದ್ದ ಗುರುನಾಥರು ಕೆಲಕಾಲದ ನಂತರ ಎಚ್ಚರಗೊಂಡರು. ಆ ಹುಡುಗನಿಂದ ವಿಷಯ ತಿಳಿಸಿದಾಕ್ಷಣ ಗುರುನಾಥರು "ಒಳ್ಳೆಯದು ಕಣಯ್ಯಾ. ಆದರೆ ಸ್ವಲ್ಪ ಅವಸರ ಮಾಡಿದರೆನಿಸುತ್ತದೆ. ಇಲ್ಲದಿದ್ರೆ ಆಕೆಗೆ (Normal) ಸಹಜ ಹೆರಿಗೆಯೇ ಆಗುತ್ತಿತ್ತೆನಿಸುತ್ತದೆ. ಹೋಗ್ಲಿ ಬಿಡು" ಎಂದರು. 

ಈ ನಿದ್ರೆಯ ವಿಚಾರವಾಗಿ ಆತ ತನ್ನ ನಂಬಿಕೆಯನ್ನು ಹೀಗೆ ಹೇಳಿದರು. "ನೋಡಿ ಗುರುನಾಥರು ನಿದ್ರೆ ಮಾಡುತ್ತಿದ್ದರೂ ಆಸ್ಪತ್ರೆಯಲ್ಲಿ ನಡೆದ ಘಟನೆಗಳ ಎಲ್ಲ ವಿವರವನ್ನು ಹೇಳಿದರು. ಇದರ ಅರ್ಥ "ಗುರುಗಳಿಗೆ ನಿದ್ರೆ ಎಂದರೆ ಅವರು ಬೇರೆಲ್ಲೋ ಸಂಚಾರ ಹೋಗಿರುವರು ಎಂದರ್ಥ. ಸದ್ಗುರು ನಿದ್ರಿಸಿದರೆಂದರೆ ಜಗದ ಕಾಲ ಚಕ್ರವೇ ನಿಂತು ಹೋಗುವುದು ಎನಿಸುತ್ತದೆ" ಎಂದು ಹೇಳಿ ಮೌನವಾದರು. 

ಆತನ ನಂಬಿಕೆ ಎಷ್ಟು ದೃಢವಾದದ್ದೆಂದರೆ ಇಂದಿಗೂ ಅವರ ಮನೆಯಲ್ಲಿ ಗುರುನಾಥರು ನೀಡಿದ್ದ ಅವರೇ ಬಳಸಿದ ಪಾದುಕೆ (ಹವಾಯಿ ಚಪ್ಪಲಿಗಳು) ಗಳಿವೆ. ಅವೆಲ್ಲವನ್ನೂ ದೇವರ ಕೋಣೆಯಲ್ಲಿ ಒಪ್ಪವಾಗಿರಿಸಿ ಪ್ರತಿನಿತ್ಯವೂ ಅದಕ್ಕೆ ಪೂಜೆ ಸಲ್ಲಿಸುವರು. ಮಾತ್ರವಲ್ಲ ತನ್ನ ಪ್ರತೀ ಹೆಜ್ಜೆ ಇಡುವಾಗಲೂ ಆ ಪಾದುಕೆಗೆ ನಮಸ್ಕರಿಸಿಯೇ ಮುಂದಡಿ ಇಡುತ್ತಿರುವನು. 

ಚರಣದಾಸನಾದ ನಾನು ಆತನನ್ನು ಈ ಪಾದುಕೆಗಳ ವಿಚಾರವಾಗಿ ಪ್ರಶ್ನಿಸಿದಾಗ ಆತ "ನೋಡಿ ಇವು ನನ್ನ ಜೀವ. ಇದು ನನಗೆಲ್ಲವನ್ನೂ ನೀಡಿದೆ. ಬೇರೆಲ್ಲೂ ನಾನು ಹೋಗುವ ಅವಶ್ಯಕತೆ ಕಂಡುಬರುತ್ತಿಲ್ಲ. ದಯಮಾಡಿ ಈ ಪಾದುಕೆಗಳನ್ನು ಬಿಟ್ಟು ಬೇರೇನಾದ್ರೂ ಕೇಳಿ" ಎಂದು ಕಣ್ತುಂಬಿಕೊಂಡರು. ಆಗ ಭಕ್ತಿ ಎಂದರೇನೆಂಬುದನ್ನು ಇವನಿಂದ (ಈ ವ್ಯಕ್ತಿ) ಕಲೀಬೇಕು ಕಣಯ್ಯಾ" ಎಂದು ನನ್ನ ಹತ್ತಿರ ಈ ವ್ಯಕ್ತಿಯ ಬಗ್ಗೆ ಆಗಾಗ್ಗೆ ಗುರುನಾಥರು ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದಿತು.....,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Thursday, February 2, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 121


    ಗ್ರಂಥ ರಚನೆ - ಚರಣದಾಸ 


ಸರ್ವಧರ್ಮ ಸಮಭಾವ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಸದ್ಗುರುವಿಗೆ ಜಾತಿ ಎಂಬುದಿಲ್ಲ. ವಿಷಯದೊಳಗೆ ಇದ್ದು ವಿಷಯ ವಾಸನೆಯಿಂದ ದೂರವಿರುವವನು ಸದ್ಗುರು. 

ಒಮ್ಮೆ ಗುರುನಾಥರು ಅದ್ವೈತ ಪೀಠವೊಂದರ ಯತಿವರೇಣ್ಯರ ದರ್ಶನ ಮಾಡಿ ಚಿಕ್ಕಮಗಳೂರಿನ ಓರ್ವ ಯುವಕನ ಕಾರಿನಲ್ಲಿ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಒಂದು ಸಣ್ಣ ಅಂಗಡಿಯ ಮುಂದೆ ನಿಲ್ಲಿಸಲು ಹೇಳಿದರು. ಅದು ಮುಸ್ಲಿಂ ಧರ್ಮೀಯರ ಅಂಗಡಿಯಾಗಿತ್ತು. ಗುರುನಾಥರು ಆ ಅಂಗಡಿಯಿಂದ ಕಾಫಿ ತರಿಸಿ ಕುಡಿದರು. ಉಳಿದವರಿಗೂ ಕುಡಿಯಲು ಹೇಳಿದರಾದರೂ ಕಾರಿನ ಮಾಲೀಕನನ್ನು ಹೊರತು ಇನ್ಯಾರೂ ಕುಡಿಯಲಿಲ್ಲ. 

ಮತ್ತೊಮ್ಮೆ ಅದೇ ಯುವಕನ ಕಾರಿನಲ್ಲಿ ಬರುತ್ತಿರುವಾಗ ಕಾರಿನ ಚಕ್ರ ಸ್ಫೋಟಗೊಂಡಿತು. ದಾರಿಯಲ್ಲಿ ಚಕ್ರ ಸರಿಪಡಿಸುವವರು ಯಾರೂ ಇಲ್ಲವಲ್ಲ ಎಂದು ಯೋಚಿಸುತ್ತಿರುವಾಗ ಎಲ್ಲಿಂದಲೋ ಬಂದ ನಾಲ್ಕೈದು ಮುಸ್ಲಿಂ ಯುವಕರು ಕಾರಿನ ಚಕ್ರವನ್ನು ಬದಲಿಸಿಕೊಟ್ಟರು. ಕೈಯಲ್ಲಿ ಕೊಡಲು ಕಾಸಿಲ್ಲದ ಆ ಹುಡುಗ ಹಣ್ಣನ್ನು ಮಾತ್ರ ನೀಡಲು, ಗುರುನಾಥರು ಒಂದಷ್ಟು ಕಾಸನ್ನು ನೀಡಿದರು. 

ಇನ್ನೇನು ಕಾರು ಹೊರಡಬೇಕು ಅನ್ನುವಷ್ಟರಲ್ಲಿ ಅಲ್ಲೇ ಇದ್ದ ಮನೆಯೊಂದರಿಂದ ಹೊರಬಂದ ಮುಸ್ಲಿಂ ಮಹಿಳೆಯೊಬ್ಬಳು ಓಡೋಡಿ ಬಂದು ಗುರುನಾಥರಿಗೆ ಕೈಮುಗಿದು ಹೀಗೆ ವಿನಂತಿಸಿದಳು. "ಸ್ವಾಮಿ ನನ್ನ ಮಗ ಲಾರಿ ಚಾಲಕನಾಗಿರುವನು. ಆತನಿಗೆ ಯಾವುದೇ ಆಪತ್ತು ಬರದಂತೆ ಕಾಪಾಡಿ". 

ಆಗ ಗುರುನಾಥರು "ಚಿಂತಿಸಬೇಡ ತಾಯಿ. ಇನ್ನು ಆರು ತಿಂಗಳಲ್ಲಿ ನಿನ್ನ ಮಗ ಲಾರಿಯ ಮಾಲೀಕನಾಗುವನು" ಎಂದು ಅಭಯವಿತ್ತರು. ಇದರಿಂದ ಸಂತಸಗೊಂಡ ಆಕೆ ತನ್ನ ಮನೆಗೆ ಬಂದು ಆತಿಥ್ಯ ಸ್ವೀಕರಿಸಬೇಕೆಂದು ಹಠ ಮಾಡತೊಡಗಿದಳು. 

ಕೊನೆಗೆ ಒಪ್ಪಿದ ಗುರುನಾಥರು ಆಕೆಯ ಮನೆಗೆ ಹೋಗಿ ಆಕೆಯ ಕೈಯಿಂದ ಒಂದು ಲೋಟ ನೀರು ಕುಡಿದು ಆಶೀರ್ವದಿಸಿ ಬಂದರು. ಗುರುವಾಕ್ಯದಂತೆಯೇ ಆಕೆಯ ಮಗ ಲಾರಿಯನ್ನು ತೆಗೆದುಕೊಂಡರು. 

ಮತ್ತೊಂದು ಸಂದರ್ಭ. ಇಂಜಿನೀಯರಿಂಗ್ ನಲ್ಲಿ ನಪಾಸಾದ ವಿದ್ಯಾರ್ಥಿಯೊಬ್ಬ ಗುರುನಾಥರಲ್ಲಿಗೆ ಬಂದು ತನ್ನ ಸಮಸ್ಯೆಗೆ ಪರಿಹಾರ ನೀಡಬೇಕೆಂದು ವಿನಂತಿಸಿದನು. 

ಆಗ ಗುರುನಾಥರು ಆತನಿಗೆ ಒಂದು ಪೆನ್ನು, ಒಂದು ಪ್ಯಾಕ್ ಬಿಸ್ಕತ್ತು, ಒಂದು ಪ್ಯಾಕ್ ಊದುಬತ್ತಿ, ಒಂದು ಪ್ಯಾಕ್ ಸಿಗರೇಟು ತರಲು ಹೇಳಿದರು. 

"ಅದು ಏಕೆ? ಎಂದು ಕೇಳಿ ಇನ್ನೇನು ಬೇಕೆಂದು ಇನ್ನೊಮ್ಮೆ ಹೇಳಿ, ನಾನು ಬರೆದುಕೊಳ್ಳುತ್ತೇನೆ" ಎಂದು ನುಡಿದ ಆ ವಿದ್ಯಾರ್ಥಿಗೆ ಗುರುನಾಥರು "ನನ್ನ ನೋಡಿದ್ಯಲ್ಲಯ್ಯಾ? ಸಾಕು ನಡಿ" ಎಂದು ನುಡಿದರು. ಆಗ ಜೊತೆಯಲ್ಲೇ ಇದ್ದ ಚಿಕ್ಕಮಗಳೂರಿನ ಯುವಕ ಸಲುಗೆಯಿಂದ "ಏನಂದ್ರಿ ಗುರುನಾಥರೇ?" ಎಂದು ಕೇಳಿದನು. ಆಗ ಗುರುನಾಥರು ಸಲುಗೆಯಿಂದ "ಗುದ್ದಿ ಬಿಡ್ತೀನಿ ನೋಡು" ಎಂದು ಹೇಳಿ ಮಾತು ನಿಲ್ಲಿಸಿದರು.....,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


Wednesday, February 1, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 120


    ಗ್ರಂಥ ರಚನೆ - ಚರಣದಾಸ 


ಹೋಳಿಗೆಯೇ ಮದ್ದು 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಒಂದು ಕ್ಷಣ ಮೌನವಾದ ಆ ಮಹಾ ತಾಯಿ ತನ್ನ ನೆನಪಿನ ಆಳಕ್ಕಿಳಿದು ಒಂದೆರಡು ನಿಮಿಷದ ನಂತರ ಮತ್ತೆ ಹೊಸ ಉತ್ಸಾಹದೊಂದಿಗೆ ಗುರುನಾಥರ ಲೀಲಾಮೃತವನ್ನು ಹೇಳತೊಡಗಿದರು. 

ಮತ್ತೊಂದು ಸಂದರ್ಭ. ನಮ್ಮ ಮಗಳು ಹತ್ತನೇ ತರಗತಿ ಉತ್ತೀರ್ಣಳಾದ ನಂತರ ಆಕೆಯನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿಸಿಯಾಗಿತ್ತು. ಆಕೆಗೆ ಹೆಚ್ಚಿನ ತರಬೇತಿಗಾಗಿ ಮನೆ ಪಾಠಕ್ಕೆ ಸೇರಿಸಬೇಕೆಂದುಕೊಂಡೆವು. 

ಆಗ ಗುರುನಾಥರು "ಆ ಹುಡುಗ" ನಲ್ಲಿ "ಆ ಹುಡುಗಿಗೇಕೆ ಮನೆ ಪಾಠ? ಬೇಡವಾಗಿತ್ತು" ಎಂದು ಹೇಳಿ ಕಳುಹಿಸಿದರು. 

ಆದರೂ ನಾವು ಆಕೆಯನ್ನು ಮನೆಪಾಠಕ್ಕೆ ಸೇರಿಸಿದೆವು. ಆದರೆ ಗುರುವಾಕ್ಯವನ್ನು ಮೀರಿದ್ದಕ್ಕೋ ಏನೋ... ಕೇವಲ ಎರಡು ದಿನದಲ್ಲಿ ನಮ್ಮ ಮಗಳಿಗೆ ದಡಾರ ಹಾಗೂ ಜ್ವರ ಆರಂಭವಾಯಿತು. ಆದಾಗ್ಯೂ ನಾವು ಅವಳನ್ನು ಆಸ್ಪತ್ರೆಗೆ ಸೇರಿಸಲಿಲ್ಲ. 

ಈ ವಿಚಾರವನ್ನು ಆ ಹುಡುಗನಿಂದ ತಿಳಿದ ಗುರುನಾಥರು "ನಾಳೆ ಎರಡು ಗಂಟೆಯವರೆಗೆ ನೋಡಿ ಆ ನಂತರವೂ ಗುಣವಾಗದೆ ಇದ್ದಲ್ಲಿ ಆಮೇಲೆ ಬೇಕಿದ್ರೆ ಆಸ್ಪತ್ರೆಗೆ ಸೇರಿಸಿ" ಎಂದು ಹೇಳಿ ಕಳುಹಿಸಿದರು. ನಾವು ಒಪ್ಪಿದೆವು. 

ಮರುದಿನ ಮಧ್ಯಾನ್ಹ ಎರಡು ಗಂಟೆಯ ವೇಳೆಗೆ ನಮ್ಮ ಮಗಳ ಮೇಲಾಗಿದ್ದ ದಡಾರ ಹಾಗೂ ಜ್ವರ ಇದ್ದಕ್ಕಿದ್ದಂತೆಯೇ ಗುಣಮುಖವಾಗಿತ್ತು. ಗುರುನಾಥರ ಈ ಲೀಲೆ ನಮ್ಮೆಲ್ಲರನ್ನೂ ಚಕಿತಗೊಳಿಸಿತ್ತು ಎಂದರು. 

ಮತ್ತೊಮ್ಮೆ ನಾನು ಬೆಳಗಿನ ಜಾವ ವಾಯುವಿಹಾರಕ್ಕೆಂದು ಹೋಗಿದ್ದಾಗ ಆಯತಪ್ಪಿ ಬಿದ್ದು ಕಾಲಿಗೆ ಏಟಾಯಿತು. ಸ್ನೇಹಿತರ ಸಹಾಯದಿಂದ ನಾನು ಮನೆ ತಲುಪಿದೆ. ಅಲ್ಲಿಂದ ಆಸ್ಪತ್ರೆಗೆ ಹೋಗಿ ಎಕ್ಸ್ ರೇ ಹಾಗೂ ಇತರ ಪರೀಕ್ಷೆಗಳನ್ನು ಮುಗಿಸಿದ್ದಾಯಿತು. ಯಾವುದೇ ಸಮಸ್ಯೆಗಳಿಲ್ಲವೆಂದು ತಿಳಿಸಿದ ವೈದ್ಯರು ಕೆಲವು ಮಾತ್ರೆಗಳನ್ನು ನೀಡಿ ಕಳಿಸಿದರು. 

ನನಗೆ ಮನೆಯೊಳಗೆ ನಡೆಯಲೂ ಕಷ್ಟವಾಗಿತ್ತು. ಆದ್ರೆ ಔಷಧ ಖಾಲಿಯಾಯಿತೇ ವಿನಃ ಕಾಲುನೋವು ಮಾತ್ರ ಹಾಗೆಯೇ ಉಳಿಯಿತು. ನಾನು ನಡೆಯುವುದೇ ದುಸ್ತರವಾಗಿತ್ತು. 

ಆಗ ಗುರುನಾಥರು ಆ ಹುಡುಗನಲ್ಲಿ ಹೀಗೆ ಹೇಳಿ ಕಳುಹಿಸಿದರು. "ನಿಮ್ಮ ಮನೆಯಾಕೆಗೆ ಅಲ್ಲೇ ಸಮೀಪದಲ್ಲಿರುವ ಚನ್ನಕೇಶವ ದೇಗುಲಕ್ಕೆ ಪ್ರತಿದಿನವೂ ಹೋಗಿ ದರ್ಶನ ಮಾಡಲು ಹೇಳು. ಆಗಾಗ್ಗೆ ವಿಳ್ಳೇದೆಲೆ, ಖರ್ಜೂರ ತಿನ್ನಲು ಹೇಳಿ" ಎಂದರು. 

ಇದನ್ನು ತಿಳಿದ ನಾನು ಗುರುವಾಕ್ಯದಂತೆಯೇ ಪ್ರತಿನಿತ್ಯವೂ ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರವಿದ್ದ ಆ ದೇಗುಲಕ್ಕೆ ನಡೆದೇ ಬರಲಾರಂಭಿಸಿದೆ. 

ಮಾತ್ರವಲ್ಲ ಇದು ನನ್ನ ದಿನಚರಿಯ ಭಾಗವಾಯಿತು. ಆಶ್ಚರ್ಯವೆಂದರೆ, ಕೆಲವೇ ದಿನಗಳಲ್ಲಿ ನನ್ನ ಕಾಲು ನೋವು ತಾನಾಗಿಯೇ ಗುಣಮುಖವಾಯಿತು. ಇಂದು ಗುರು ಕರುಣೆಯಿಂದ ನಾನು ಆರೋಗ್ಯವಂತಳಾಗಿದ್ದೇನೆ ಎಂದು ನುಡಿದರು. 

ಈ ಮಾತಿನ ಮಧ್ಯೆ ಬಂದ ಪ್ರಾಂಶುಪಾಲರು ತನ್ನ ಜೀವನದ ಇನ್ನೊಂದು ಘಟನೆಯನ್ನು ಹೇಳತೊಡಗಿದರು. "ಇದು ಬಹುಶಃ ಬಹಳ ವಿಶೇಷವಾದ ಅನುಭವ. ನನ್ನ ಜೀವಮಾನ ಕಾಲದಲ್ಲಿ ಎಂದಿಗೂ ಇಂತಹ ಘಟನೆ ನಡೆದಿರಲಿಲ್ಲ" ಎಂದು ಮಾತು ಮುಂದುವರೆಸಿದರು....... 


ನಾನು ರಕ್ತ ಪರೀಕ್ಷೆ ಎಂದೂ ಮಾಡಿಸಿರಲಿಲ್ಲ. ಆಗ ನನಗೆ ಮಧುಮೇಹ ಖಾಯಿಲೆ ಆರಂಭಗೊಂಡಿತ್ತು. ಪರೀಕ್ಷೆ ಮಾಡಿಸಿದಾಗ ಈ ವಿಚಾರ ಧೃಡಪಟ್ಟಿತು. 

ಆಗ ಗುರುನಾಥರು ಆ ಹುಡುಗನಲ್ಲಿ ಹೀಗೆ ಹೇಳಿ ಕಳಿಸಿದರು. "ನಿಮ್ಮೆಜಮಾನರ ಮಧುಮೇಹ ಖಾಯಿಲೆಗೆ ಹೋಳಿಗೆ ಮಾಡಿಕೊಡು" ಎಂದು ಹೇಳಿ ಕಳುಹಿಸಿದರು. ಆದರೂ ಸಕ್ಕರೆ ಖಾಯಿಲೆಗೆ ಯಾರೂ ಹೋಳಿಗೆ ಮಾಡಿ ಕೊಡುವುದಿಲ್ಲ ಎಂಬ ಸಾಮಾನ್ಯ ತಿಳಿವಳಿಕೆಯಿಂದ ನನ್ನ ಮನೆಯಾಕೆ ಗುರುವಾಕ್ಯವನ್ನು ಕಡೆಗಣಿಸಿದರು. 

ಆಗ ಮತ್ತೊಮ್ಮೆ ಆ ಹುಡುಗನಲ್ಲಿ "ಅವರಿಗೆ ಹೇಳು. ಹೋಳಿಗೆ ತಿನ್ನೋದು ಒಳ್ಳೆಯದೋ? ಇಲ್ಲಾ ಮಾತ್ರೆನೋ?" ಎಂದು ಹೇಳಿ ಕಳುಹಿಸಿದರು. 

ಆ ಹುಡುಗನಿಂದ ಈ ವಿಚಾರ ತಿಳಿದ ನನ್ನ ಮನೆಯಾಕೆ ಯಾವುದೇ ತಡಮಾಡದೇ ಹೋಳಿಗೆ ತಯಾರಿಸಿದಳು. 

ನಮ್ಮ ಮನೆಗೆ ವಿದ್ಯಾರ್ಥಿಗಳು ಬರುವುದು ಸಾಮಾನ್ಯವಾಗಿತ್ತು. ಅವರೆಲ್ಲರಿಗೂ ವಿತರಿಸಿ ನಾನೂ ತಿಂದೆ. ನಮ್ಮ ಮನೆಯಲ್ಲಿ ಕಡಿಮೆ ಹೋಳಿಗೆ ಮಾಡಿ ಅಭ್ಯಾಸವಿರಲಿಲ್ಲ. ಆದರೆ ಈ ಬಾರಿ ಕಡಿಮೆ ತಯಾರಿಸಿದ್ದಳು. 

ಆ ಸಮಯಕ್ಕೆ ನಮ್ಮ ಮನೆಗೆ ಬಂದ ಆ ಹುಡುಗ ಹೀಗೆ ಹೇಳಿದ: "ಗುರುನಾಥರು ಹೇಳಿದ್ದು ಅಡುಗೆ ಮನೆಯ ಡಬ್ಬಿಯಲ್ಲಿಟ್ಟಿರುವ ಎರಡು ಹೋಳಿಗೆಯನ್ನು ಸಖರಾಯಪಟ್ಟಣಕ್ಕೆ ತರಬೇಕಂತೆ. ನಾನು ಈ ರಾತ್ರಿಯೇ ಅಲ್ಲಿಗೆ ಹೊರಡುವೆ" ಎಂದನು. ಒಳಹೋಗಿ ನೋಡಿದರೆ ನಮಗೆ ಆಶ್ಚರ್ಯವಾಗಿತ್ತು. 

ಗುರುನಾಥರು ಅಂದಂತೆಯೇ ಡಬ್ಬದಲ್ಲಿ ಕೇವಲ ಎರಡು ಹೋಳಿಗೆ ಉಳಿದಿತ್ತು. ನಾವು ಶ್ರದ್ಧೆಯಿಂದ ಅದನ್ನು ಗುರುನಾಥರಿಗೆ ಕಳಿಸಲು "ಆ ಹುಡುಗನ" ಹತ್ತಿರ ನೀಡಿದೆವು. 

ಸಖರಾಯಪಟ್ಟಣಕ್ಕೆ ಬಂಡ "ಆ ಹುಡುಗ" ತಾನು ತಂದಿದ್ದ ಹೋಳಿಗೆಯನ್ನು ಗುರುನಾಥರಿಗೆ ನೀಡಲು ಗುರುನಾಥರು ತನ್ನ ಸುತ್ತಲಿದ್ದ ಎಲ್ಲರನ್ನು ಕರೆದು "ಬನ್ನಿ ಪ್ರಸಾದ ಬಂದಿದೆ" ಎಂದು ಆ ಹೋಳಿಗೆಯನ್ನು ಎಲ್ಲರಿಗೂ ಹಂಚಿ ತಾನೂ ತಿಂದರಂತೆ.

ಆಶ್ಚರ್ಯವೆಂದರೆ ಅಂದಿನಿಂದ ಈ ದಿನದವರೆಗೂ ನನ್ನ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ವ್ಯತ್ಯಾಸವಾಗಿಲ್ಲ. ನಾನು ಆ ಗುರು ಕೃಪೆಯಿಂದ ಯಾವುದೇ ಮಾತ್ರೆಗಳನ್ನು ತಿನ್ನುತ್ತಿಲ್ಲ. ಇದೆಲ್ಲವೂ ಆ ನನ್ನ ಗುರುಕೃಪೆಯಿಂದ ಮಾತ್ರ ಸಾಧ್ಯವೆಂದು ಅಭಿಮಾನದಿಂದ ನೆನೆದರು.....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।