ಒಟ್ಟು ನೋಟಗಳು

Thursday, October 12, 2017

ಗುರುನಾಥ ಗಾನಾಮೃತ 
ನೆನೆ ಮನ ಗುರುಪದವಾ
ರಚನೆ: ಅಂಬಾಸುತ 


ನೆನೆ ಮನ ಗುರುಪದವಾ
ಅಮೃತರೂಪಾ ಆನಂದದಾಯಕ ಪದವಾ ||ಪ||

ಅನುಭವಾಮೃತದಾ ಅಮೋಘ ಪದವಾ
ಸ್ವಾನಂದ ತುಂಬುವಾ ಸ್ವಾರಸ್ಯ ಪದವಾ ||೧||

ದೃಢಭಕ್ತಿ ಬೆಳೆಸೀ ದುಖಃ ಕಳೆವಾ ಪದವಾ
ವೇದಶಾಸ್ತ್ರ ಪರಿಪೂರ್ಣಾತ್ಮಕ ಪದವಾ ||೨||

ಭೇದವ ಅಳಿಸೋ ಬೋಧ ಪದವಾ
ಚಿನುಮಯಾತ್ಮಕ ಗುರು ಪೇಳಿದ ಪದವಾ ||೩||

ಅಜ್ಞಾನ ಅಳಿಸಿ ಸುಜ್ಞಾನವೀವ ಪದವಾ
ರಾಗದ್ವೇಷವ ಮರೆಸೋ ರಮ್ಯತಮ ಪದವಾ ||೪||

ಅರಿವಿನಾಲಯಕೆ ಕರೆದೊಯ್ಯೋ ಪದವಾ
ಅರಿತನ ಬಿಡಿಸೋ ಅತಿಮಧುರ ಪದವಾ ||೫||

ಕಷ್ಟವೆಲ್ಲವನೂ ಪರಿಹರಿಸೊ ಪದವಾ
ಪರಮಪದವಿಗೇರಿಸೋ ಪಾವನ ಪದವಾ ||೬||

ಸಖರಾಯಪುರವಾಸಾ ಗುರುನಾಥ ಪೇಳಿದ ಪದವಾ
ಅಂಬಾಸುತನ ಉದ್ಧರಿಸೇ ಸದ್ಗುರು ಪೇಳಿದ ಪದವಾ ||೭|

Wednesday, October 11, 2017

ಗುರುನಾಥ ಗಾನಾಮೃತ 
ಕಾವಿ ಧರಿಸದ ಸಂನ್ಯಾಸಿಯಿವನಮ್ಮಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್


ಕಾವಿ ಧರಿಸದ ಸಂನ್ಯಾಸಿಯಿವನಮ್ಮಾ
ಮನಕೇ ಕಾವಿಯುಟ್ಟಿಹನಮ್ಮಾ || ಪ ।।

ಭೋಗಭಾಗ್ಯಗಳ ಆಸೆ ಇವಗಿಲ್ಲ 
ಧನಕನಕಗಳು ಇವಗೆ ಬೇಕಿಲ್ಲ
ಮಹಿಮೆಹಿರಿಮೆಗಳ ಗೊಡವೆಯಿಲ್ಲ
ಮಾನಾಪಮಾನಗಳ ಚಿಂತೆಯೇ ಇಲ್ಲ ।। ೧ ।।

ಸ್ವಾತ್ಮಾನಂದದಿ ಸದಾ ನಲಿವನಮ್ಮಾ
ಭಕ್ತರ ದುಗುಡವ ದೂರ ಮಾಡುವನಮ್ಮಾ
ಧರ್ಮಸ್ಥಾಪನೆಯೇ ಇವನ ಗುರಿಯಮ್ಮಾ
ತಾ ನೆಡೆದು ಪರರಿಗೆ ದಾರಿತೋರುವನಮ್ಮಾ ।। ೨ ।।

ನಮ್ಮೊಳಗಿಹ ಗುರುವ ಅರಿಯಿರೆನುವ
ಮೌನದಿ ಸಾಧನೆ ಮಾಡಿರೆನುವ
ಅಣುವಿನಲೂ ಭಗವಂತನ ಕಾಣಿರೆನುವ
ಭುವಿಗೆ ಬಂದ ಉದ್ದೇಶವನು ಸಫಲಮಾಡಿಕೊಳ್ಳಿರೆನುವ ।। ೩ ।।
ಗುರುನಾಥ ಗಾನಾಮೃತ 
ಗುರುನಾಥ ಎಮ್ಮಾ ಪಾಲಿಸೋ ಅವಧೂತಾ
ರಚನೆ: ಅಂಬಾಸುತ 


ಗುರುನಾಥ ಎಮ್ಮಾ ಪಾಲಿಸೋ ಅವಧೂತಾ
ಅಕಳಂಕ ಚರಿತಾ ನಿಜಾನಂದದಾಯಕಾ ||ಪ||

ಗಣನೆಯಿಲ್ಲದಾ ಮಹಿಮೆಯ ನೀ ತೋರೀ
ಗುಣಪೂರ್ಣನಾಗಿಹೆ ಗುರುದೇವನೇ
ವ್ಯರ್ಥವಾಗಿಹ ಈ ಜೀವನಕರ್ಥವಾ
ನೀ ನೀಡು ಬಾರೋ ಹೇ ಕರುಣಾಕರಾ ||೧||

ವ್ಯಕ್ತನಾಗಿಹೆ ನೀ ಅವ್ಯಕ್ತನಾಗಿಹೇ
ವ್ಯಕ್ತಿ ರೂಪವ ಮೀರಿದ ಪರಮಾತ್ಮನೇ
ಭೋಗಿಯ ಹಾಗೆ ಕಂಡಾ ನಿಜಯೋಗಿಯೋ ನೀ
ಭಕ್ತರ ಭಾಗ್ಯದ ನಿಧಿಯೇ ಬೋಧರೂಪನೇ ||೨||

ಸತ್ ಚಿತ್ ಆನಂದ ಸ್ವರೂಪಾ
ಸರಳಾ ಸುಂದರಾ ಶಾಂತ ಪ್ರದೀಪಾ
ವಿರಳಾತಿವಿರಳಾ ವಿಶ್ವಮಾನ್ಯನೇ
ವಿಭೂತಿಪುರುಷಾ ವಿಶ್ವೇಶ್ವರ ರೂಪಾ ||೩||

ಸಖರಾಯಾಧೀಶಾ ಸದ್ಗುರುನಾಥಾ
ಶ್ರೀವೇಂಕಟಾಚಲ ನೀ ಅವಧೂತಾ
ಅಂಬಾಸುತ ಆನಂದ ಪ್ರದಾಯಕಾ
ಆಂತರ್ಯದೊಳಕಾಗಮಿಸೋ ಗುರುವರ್ಯಾ ||೪||

Tuesday, October 10, 2017

ಗುರುನಾಥ ಗಾನಾಮೃತ 
ಸ್ವಸ್ವರೂಪದ ದರ್ಶನ ನೀಡಯ್ಯಾ ಗುರುವೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್ 


ಸ್ವಸ್ವರೂಪದ ದರ್ಶನ ನೀಡಯ್ಯಾ ಗುರುವೇ
ನಿಜಾನಂದದಿ ನಲಿವ ಭಾಗ್ಯವ ‌ನೀಡಯ್ಯಾ ಗುರುವೇ ।। ಪ ।।

ಸ್ವಾಮಿ ಸಮರ್ಥರು ಶ್ರೀಧರಗೆ ದರ್ಶನ ಕೊಟ್ಟಂತೆ
ಸುಮತಿಗೆ ದರ್ಶನ ಕೊಟ್ಟ ಗುರುದತ್ತನಂತೆ 
ಅರ್ಜುನಗೆ ಶ್ರೀಕೃಷ್ಣ ವಿಶ್ವರೂಪವ ತೋರಿಸಿದಂತೆ
ಅಹಲ್ಯೆಗೆ ಶ್ರೀರಾಮ ಶಾಪದಿಂ ಉದ್ಧರಿಸಿದಂತೆ ।। ೧ ।।

ತನ್ನ ಬಾಯಲ್ಲಿ ಜಗವನ್ನೇ ತೋರಿದ ಕೃಷ್ಣನಂತೆ
ಗಜೇಂದ್ರನ ಮೋಕ್ಷಕಾಗಿ ಧರೆಗಿಳಿದು ದರ್ಶನವಿತ್ತಂತೆ 
ಕುರುನಗರಿಯಲಿ ವಿದುರನ ಮನೆಗೆ ಬಂದಂತೆ
ನಿನ್ನನೇ ನಂಬಿಹ ಭಕ್ತರನು ಉದ್ಧರಿಸು ಗುರುವೇ ।। ೨ ।।

Monday, October 9, 2017

ಗುರುನಾಥ ಗಾನಾಮೃತ 
ಅರಿವಿನಾಲಯದ ದೊರೆಯೇ ಗುರುವೇ
ರಚನೆ: ಅಂಬಾಸುತ 


ಅರಿವಿನಾಲಯದ ದೊರೆಯೇ ಗುರುವೇ
ಈ ಅಲ್ಪನ ಅಲ್ಪತ್ವಾ ಕಳೆಯೋ ಪ್ರಭುವೇ ||ಪ||

ಬಿಡಿಸೋ ಮೋಹ ಮಾಯಾಜಾಲವಾ
ಹಿಡಿಸೋ ನಿನ್ನಾ ನಾಮ ಸಂಕೀರ್ತನವಾ
ಕೆಡಿಸೋ ಕಾಮಾದಿ ದುರ್ಗುಣಂಗಳಾ
ನೆಡೆಸೋ ಕರಪಿಡಿದೂ ಸರಿದಾರಿಯೊಳಗೆನ್ನಾ ||೧||

ಸಾಕುಸಾಕಾಯ್ತೋ ಈ ಭವಸಂಕಟಾ
ಬೇಕು ಬೇಕಾಯ್ತೋ ನಿನ್ನ ನಿಜದನುಭವಾ
ಅಲ್ಲಿ ಇಲ್ಲಿ ನಿನ್ನ ಹುಡುಕೋ ಗೋಜಿನ್ನೆನಗೇತಕೋ
ಎನ್ನ ಮನಮಂದಿರದೀ ನೀ ಬಂದು ನೆಲೆಸೋ ||೨||

ನಾ ಮಾಡಿದೆ ನಾ ಹೇಳಿದೆ ಎಂಬುವುದಾ
ನೀ ಹೋಗಲಾಡಿಸೋ ಎನ್ನನುದ್ಧರಿಸೋ
ಬೋಧಾಮೃತವಾ ನೀ ಸದಾ ಸುರಿಸೋ
ಅದ ಹೀರಿ ಈ ಆತ್ಮ ಬೆಳೆವಂತೆ ಹರಸೋ ||೩||

ಬಂದದ್ದು ಬರಲೀ ಹೋದದ್ದು ಹೋಗಲೀ
ಭಗವದ್ರೂಪಿ ಗುರು ಸದಾ ಎನ್ನೊಡನಿರಲೀ
ಅವಧೂತಾತ್ಮಕಾ ಶ್ರೀವೇಂಕಟಾಚಲಾ
ಅಂಬಾಸುತ ಹೃತ್ಕಮಲ ನಿವಾಸಾ ||೪||

Saturday, October 7, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ದೃಢಭಕ್ತೋ ಸ ಮೋಕ್ಷಾರ್ಥೀ
ಪ್ರಯತತಿ ಯ ಯತ್ಪ್ರಾಪ್ತುಂ  |
ಸದಾ ಸರ್ವತ್ರ ಸುಪ್ರೀತಃ
ತದ್ಬ್ರಹ್ಮಮೇವ  ಧ್ಯಾಯತಿ ||


ದೃಢಭಕ್ತನೂ ದೃಢಚಿತ್ತನೂ ಮೋಕ್ಷಾರ್ಥಿಯೂ ಆದ ಭಕ್ತನು ಯಾವ ಜ್ಞಾನವನ್ನು ಪಡೆಯಲು ಸದಾ ಕಾಲವೂ ಪ್ರಯತ್ನಿಸುತ್ತಾನೋ.. ಅಂತಹ ಭಕ್ತನು  ಸಮಾಧಾನಚಿತ್ತತೆಯಿಂದ ಎಲ್ಲೆಡೆಯೂ.. ಸದಾಕಾಲವೂ  ಆ ಬ್ರಹ್ಮವಸ್ತುವನ್ನೇ ಕುರಿತಾಗಿ ಚಿಂತಿಸುತ್ತಿರುತ್ತಾನೆ..‌

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Thursday, October 5, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಮೃಗಜಲ‌ಸುಧಾಮಧ್ಯೇ 
ಪ್ರಾಜ್ಞಶ್ಚಿನೋತ್ಯಮೃತಂ ಹಿ |
ಸ್ವಾತ್ಮಬೋಧೈಹಿಕೀ ಮಧ್ಯೇ
ಸಂತಶ್ಚಿನೋತ್ಯಾತ್ಮಜ್ಞಾನಂ ||


ಮೃಗಜಲ ಹಾಗೂ ಅಮೃತಗಳಲ್ಲಿ ಬುದ್ಧಿವಂತನು ಅಮೃತವನ್ನೇ ಆರಿಸಿಕೊಳ್ಳುತ್ತಾನೆ...ಹಾಗೆಯೇ ಸಾಧಕನು ಅಶಾಶ್ವತವಾದ ಐಹಿಕ ಸಂಪತ್ತು ಹಾಗೂ  ಆತ್ಮಜ್ಞಾನಗಳಲ್ಲಿ ಶಾಶ್ವತವಾದ  ಆತ್ಮಜ್ಞಾನವನ್ನೇ ಆರಿಸಿಕೊಳ್ಳುತ್ತಾನೆ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ನೆನೆ ಮನ ಅನುದಿನ ಗುರುವರನಾ
ರಚನೆ: ಅಂಬಾಸುತ 


ನೆನೆ ಮನ ಅನುದಿನ ಗುರುವರನಾ
ದತ್ತಾವತಾರಿ ಅವಧೂತವರ್ಯನಾ ||ಪ||


ಸೃಷ್ಠಿಸುವ ಬ್ರಹ್ಮ ಇವನೇ
ಪಾಲಿಸುವ ವಿಷ್ಣು ಇವನೇ
ಸಂಹಾರಗೈವ ಮಹೇಶ್ವರನಿವನೇ ||೧||

ಹೆತ್ತ ತಾಯಿತಂದೆ ಇವನೇ
ಚಿತ್ತ ಒಪ್ಪೋ ಸಖನೂ ಇವನೇ
ಹತ್ತಿರದ ಆತ್ಮಬಂಧೂ ಇವನೇ ತಾನೇ ||೨||

ಜ್ಞಾನ ನೀಡೋ ವಾಣಿ ಇವನೇ
ಧನವ ನೀಡೋ ಸಿರಿಯೂ ಇವನೇ
ಶಕ್ತಿರೂಪಿ ಶಾಂಭವಿ ಇವನೇ ತಾನೇ ||೩||

ತಮವಾ ಕಳೆಯೋ ರವಿಯೂ ಇವನೇ
ತಂಪು ನೀಡೋ ಶಶಿಯೂ ಇವನೇ
ತಾರತಮ್ಯ ಮಾಡದ ಭುವಿಯೂ ಇವನೇ ||೪||

ಸಕ್ರೆಪಟ್ಣದ ವಾಸಿಯು ಇವನೇ
ಸತ್ ಚಿತ್ ಆನಂದ ರೂಪಿಯು ಇವನೇ
ಅಂಬಾಸುತನಾ ಸದ್ಗುರುನಾಥಾ ಇವನೆ ತಾನೇ ||೫||

Wednesday, October 4, 2017

ಗುರುನಾಥ ಗಾನಾಮೃತ 
ಬಾರಯ್ಯ ಬಾರಯ್ಯ ಗುರುವರ್ಯಾ
ರಚನೆ: ಅಂಬಾಸುತ 


ಬಾರಯ್ಯ ಬಾರಯ್ಯ ಗುರುವರ್ಯಾ
ಮುದ್ದುಮುಖವಾ ತೋರಯ್ಯ ಮಹನೀಯಾ
ಭಕುತರ ಪಾಲಿಗೆ ನೀ ಜ್ಞಾನಸೂರ್ಯಾ
ಬಿಡದೇ ನಿನ್ನನೇ ಭಜಿಪೆನೂ ಸಲಹಯ್ಯಾ ||

ದೇಹಶುದ್ಧಿಯ ಭಾವಶುದ್ಧಿಯ ಅರಿಯೇನಯ್ಯಾ
ಬಿಡದೇ ನಿನ್ನ ನಾಮಸ್ಮರಣೆಯ ಮಾಳ್ಪೆನಯ್ಯಾ
ಭೋಗಭಾಗ್ಯವ ಎಂದಿಗೂ ಬೇಡೆನೆಯ್ಯಾ
ಸದಾ ನಿನ್ನ ಸಾನಿಧ್ಯದೊಳೂ ಎನ್ನನಿರಿಸೋ ಜೀಯಾ ||

ಈ ಮೂಢನಾ ನೋಡಿ ನೀನೂ ನಗುತಿಹೆ ಏನಯ್ಯಾ
ಈ ಮೂಢತನಕೂ ನೀನೆ ಕಾರಣನಯ್ಯಾ
ಮೌಢ್ಯವ ಹರಿಸೋ ಮುತ್ತಿನಂಥಾ ಮಾತುಗಳನಾಡಿಸೀ
ಮುಕ್ತಿಪಥವಾ ತೋರಯ್ಯಾ ನಾ ಹಾತೊರೆಸಿಹೆನಯ್ಯಾ ||

ಸತ್ತು ಹುಟ್ಟುತಲಿಹೆನಯ್ಯಾ ಸತ್ವಪೂರ್ಣಾನಾಗಿಸಯ್ಯಾ
ಸೋತಮನಕೆ ಸಾಂತ್ವಾನಾ ಹೇಳಲು ಬಾರಯ್ಯಾ
ಸಖರಾಯಪುರದೊಳಿಹಾ ಸಾಹುಕಾರ ನೀನಯ್ಯಾ
ನಿನ್ನ ದಾಸ ಅಂಬಾಸುತನಾ ಅನವರತ ಕಾಯಯ್ಯಾ ||
ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಯಸ್ಯ ಚಿತ್ತೇ ಗುರೊರ್ವಾಕ್ಯಂ
ಕರ್ಮೇ ಚ ಸತ್ಯಸಂಧತಾ |
ಕಾರಣಂ ತತ್ರ ತು ನೂನಂ
ಗುರೋರನುಗ್ರಹಮೇವ ||


ಯಾರ ಮನಸ್ಸಿನಲ್ಲಿ ದೃಢವಾಗಿ ಸದ್ಗುರುವಿನ ವಾಣಿಯಿರುವುದೋ...ಯಾರ ನಡವಳಿಕೆಯಲ್ಲಿ ಸತ್ಯವಿರುವುದೋ...ಇದಕ್ಕೆಲ್ಲಾ ನಿಶ್ಚಯವಾಗಿ ಗುರುವಿನ ಪೂರ್ಣಾನುಗ್ರಹವೇ ಕಾರಣ ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸ್ತಬ್ದತಾ ಅಂತರಂಗೇಪಿ 
ಬಾಹ್ಯೇ ವಾಚಿ ಪಟುತ್ವಂ ಚ |
ಅಗಮ್ಯೋ ಮನೋವ್ಯಾಪಾರಂ  
ತಂ ವಂದೇ ಹೃದಿಸ್ಥಂ ಗುರುಮ್ ||


ಅಂತರಂಗದಲ್ಲಿ ನಿಶ್ಚಲತೆ...ಬಾಹ್ಯದಲ್ಲಿ ಅಮೋಘವಾದ ಮಾತಿನ ಪ್ರಖರತೆ...ತಿಳಿಯಲಸಾಧ್ಯವಾದ ಮನೋವ್ಯಾಪಾರವುಳ್ಳ ಹೃತ್ಸ್ಥಿತನಾದ ಸದ್ಗುರುವಿಗೆ ನಮಿಸುತ್ತೇನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Monday, October 2, 2017

ಗುರುನಾಥ ಗಾನಾಮೃತ 
ಸ್ಮರಿಸಾಬೇಕು ನಿತ್ಯ ಗುರುದೇವನಾ
ರಚನೆ: ಅಂಬಾಸುತ 


ಸ್ಮರಿಸಾಬೇಕು ನಿತ್ಯ ಗುರುದೇವನಾ
ಸ್ಮರಣೆಯಿಂದಾ ಸಾಧ್ಯಾ ನಿಜ ಸಮಾಧಾನಾ ||

ಗುರುವಿತ್ತುದೇ ನಿಜವಾದ ಜ್ಞಾನಾ
ಗುರುದೂಷಣೆ ಗೈದರೇ ಅದೇ ಅಜ್ಞಾನಾ
ಗುರುನಾಮ ಒಂದೇ ಪರಮಾಪಾವನಾ
ಗುರುಪಾದ ಆತ್ಮೋದ್ಧಾರ ಕಾರಣಾ ||

ಗುರುವಿಂದಲೇ ಸಾಧ್ಯಾ ನಿಜವಾದ ಧ್ಯಾನಾ
ಗುರು ಅರಿತಿಹನೂ ಪ್ರತಿ ಚಲನಾವಲನಾ
ಗುರುಕೃಪೆಯಿಂದಾ ದೊರೆವರೂ ಸಜ್ಜನಾ
ಗುರುಕಾರುಣ್ಯವೇ ನಿಜವಾದ ಮಜ್ಜನಾ ||

ಗುರು ಒಬ್ಬನೇ ನೀಡುವನು ಆತ್ಮಜ್ಞಾನಾ
ಗುರುವೆಂದಿಗೂ ತಾ ನಿತ್ಯನಿರಂಜನಾ
ಗುರುವೆಂದು ನಂಬೋ ನಮ್ಮೀ ಅವಧೂತನಾ
ಗುರುವೆಂದು ಭಜಿಸೋ ಸಖರಾಯಪುರವಾಸನಾ ||