ಒಟ್ಟು ನೋಟಗಳು

Sunday, March 11, 2018

ಗುರುನಾಥ ಗಾನಾಮೃತ 
ಕಂಡೇ ನಾ ಅವಧೂತನ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಕಂಡೇ ನಾ ಅವಧೂತನ
ಸಖರಾಯಾಧೀಶನಾ |
ಕಂಡೇ ನಾ ಚೈತನ್ಯನ
ಸಚ್ಚಿದಾನಂದನಾ ||

ಅನ್ನವನು ನೀಡುತಿಹ
 ಪರಬ್ರಹ್ಮನಾ
ಜೀವರಲಿ ಬೆರೆತಿಹ
ಉಸಿರಾಗಿಹಾ |
ಹೃದ್ದೀಪವ ಬೆಳಗುತಿಹ
 ಪರಂಜ್ಯೋತಿಯಾ
ಜ್ಞಾನವನು ನೀಡುತಿಹ 
ಮಹಾಜ್ಞಾನಿಯಾ || ೧ ||

ನರನಾರಿಯರಲಿ ಸಮತೆಯಿಹ 
ವಿಶ್ವಬಂಧುವಾ
ಅಣುರೇಣುಗಳಲಿ ಕಾಣುತಿಹ
ವಿಶ್ವವ್ಯಾಪಕನಾ |
ಆರ್ತರ ಕರ್ಮಕಳೆಯುವ
ವಿಶ್ವಪೂಜಿತನಾ
ಯಕ್ಷಕಿನ್ನರರು ಪೂಜಿಸುವ
ವಿಬುಧವಂದಿತನಾ || ೨ ||

ಭಕ್ತರ ಮನಗಳಲಿ ಅಡಗಿಹ
ಸುಪ್ತಚೇತನನಾ 
ಮನದಹಂಕಾರವ ತೊಲಗಿಸೋ
ಸನ್ಮತಿದಾಯಕನಾ |
ಕರುಣಾದೃಷ್ಟಿ ಬೀರುತಿಹ
ಪ್ರೇಮಪೂರ್ಣನಾ 
ಆತ್ಮತತ್ತ್ವವನು ಬೋಧಿಸುವ 
  ಗುರುಪುಂಗವನಾ || ೩ ||

Friday, March 9, 2018

ಗುರುನಾಥ ಗಾನಾಮೃತ 
ಗುರುವ ನಂಬಿರಯ್ಯಾ ಮನದಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಗುರುವ ನಂಬಿರಯ್ಯಾ ಮನದಲಿ
ಗುರುವ ನಂಬಿರಯ್ಯಾ |
ಗುರಿಯ ಸೇರಿರಯ್ಯಾ ಜಗದಲಿ 
ಗುರಿಯ ಸೇರಿರಯ್ಯಾ ||

ಅಂಕೆಯಿಲ್ಲದ ಶುದ್ಧ ದೈವಕೆ
ಶಂಕೆಮಾಡದೆ ನಂಬಿರಯ್ಯಾ |
ಸಂಖ್ಯೆಯಿಲ್ಲದ ಜಪವ ಮಾಡಿ 
ಆತ್ಮನನು ಅರಿಯಿರಯ್ಯಾ || ೧ ||

ಚಿದ್ಘನರೂಪಿ  ಚಿದಾನಂದನ
ಚಿನ್ಮಯಭಾವದಿ ಭಜಿಸಿರಯ್ಯಾ |
ಭವದ ಚಿಂತೆಯ ದೂರಮಾಡಿ 
ಚೈತನ್ಯವ ಹೊಂದಿರಯ್ಯಾ || ೨ ||

ಸಾತ್ವಿಕಭಾವದ ಸತ್ಯಮೂರುತಿಗೆ 
ಸಾಧುಮನದಿ ನಮಿಸಿರಯ್ಯಾ |
ಮೋಹವನಳಿಸುವ ಮಂದಸ್ಮಿತನರ್ಚಿಸಿ
ಮುಕ್ತಿಮಾರ್ಗವ ಕಾಣಿರಯ್ಯಾ || ೩ ||

Tuesday, March 6, 2018

ಗುರುನಾಥ ಗಾನಾಮೃತ 
ಎಷ್ಟು ತಪಸಿನ ಪುಣ್ಯವೋ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಎಷ್ಟು ತಪಸಿನ ಪುಣ್ಯವೋ 
ಯಾವ ಹಿರಿಯರ ಭಾಗ್ಯವೋ  |
 ಲಭಿಸಿತೆಮಗೆ 
ಸದ್ಗುರುವ ಕಾಣುವ ಸೌಭಾಗ್ಯವು ||

ಹೊಸಿಲಲಿ ಗುರುವಿನ  
 ಪಾದಧೂಳಿಯ ಸ್ಪರ್ಷ |
ನೊಸಲಿಗೆ ಹಚ್ಚಿದೊಡೆ      
 ವಿನೂತನ ಹರ್ಷ ||

ಮನೆಯಂಗಳದಲ್ಲಿ ಅವರು   
 ನೆಡೆದಾಡಿದ ಪದಧೂಳಿ |
ಮನದಂಗಳದಲ್ಲಿ ಉಳಿಯಿತು 
ಅಚ್ಚಳಿಯದ ಗುರುಮೂರ್ತಿ ||

ಪ್ರೀತಿಯಿಂದ ಹರಸಿದ
ಅಮೂಲ್ಯ ಸ್ವರಸಿಂಚನ |
ಅನುರಣಿಸಿತ್ತು ಹೃದಯದಲಿ 
ಅಪೂರ್ವ ಸಿರಿಚಂದನ ||


ಪರಿತಪಿಸಿತ್ತು ಮನವು 
ಈ ಅಮೃತಘಳಿಗೆಗೆ  |
ಕರುಣಿಸಿದನು ಗುರುವು
ದೀನರಾ ಈ ಕೋರಿಕೆಗೆ ||

ಮನವನಾವರಿಸಿತ್ತು
ಅನಿರ್ವಚನೀಯ ಭಾವನೆ |
ಮಾತು ಬಾರದೇ ನಮಿಸಿತ್ತು 
ಮನದಲೇ ಗುರುಪಾದಕೆ ||
ಗುರುನಾಥ ಗಾನಾಮೃತ 
ಶರಣಾಗತನಾಗೆಲೆ ಮನವೆ
ರಚನೆ: ಅಂಬಾಸುತ 

ಶರಣಾಗತನಾಗೆಲೆ ಮನವೆ
ಸದ್ಗುರು ಘನ ಸಖರಾಯನಿಗೆ  ||ಪ||

ಶರಣಾಗತರನು ಕಾಯುವನವನು
ಅತಿಷಯ ವರಗಳ ನೀಡುವನು
ವರ್ಣಿಸಲಸದಳ ಮಹಿಮನು ಅವನು
ಸ್ವಾತ್ಮಾರಾಮನು ಸುಂದರನು ||೧||

ಪಾಪರಾಶಿಗಳ ಸುಡುವವನವನು
ಕಣ್ಣೋಟದೇ ಎಮ್ಮ ಉದ್ಧರಿಸುವನು
ಮುತ್ತಿನಂಥಾ ಮಾತುಗಳಾ ಆಡುವವನು
ಮಾತಿಂದಲೇ ಮನಕ್ಲೇಶ ಹರಿಸುವನು ||೨||

ತೋರಿಕೆಗೆ ಸಿಟ್ಟಾಗುವನು
ತನ್ಮಯ ಭಕ್ತಿಗೆ ಒಲಿಯುವನು
ನಿಜಮುಕ್ತಿದಾಯಕನು ಬೋಧರೂಪನು
ಭಕುತರ ಪಾಲಿಗೆ ಭಾಗ್ಯನಿವನು ||೩||

ಗತಿ ಮತಿ ಪಾಲಿಸೊ ಗುರುವೇ ಎನುತಾ
ಸಖರಾಯಪುರವಾಸಿ ಕಾಯೋ ಎನುತಾ
ದಾಸ ಅಂಬಾಸುತನ ದೊರೆಯೇ ಎನುತಾ
ಬಿಡದೇ ಅವನಡಿಯನ್ನೇ ಪಿಡಿಯುತಾ ||೪||
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಜ್ಞಾನಂ ವರ್ತತೇ ಯತ್ರ 
ರಾಜತೇ ಶೋಕಾದಿ ಮೋಹಾಃ |
ಆತ್ಮೈಕತ್ವೇ ಸ್ಥಿತೇ ಯತ್ರ 
ಕುತೋ ಶೋಕಮೋಹಾದಯಃ ||

ಅಜ್ಞಾನವು ಎಲ್ಲಿ ಇರುವುದೋ ಅಲ್ಲಿ ಶೋಕಮೋಹಗಳು ಇರುತ್ತವೆ.ಆದರೆ ಆತ್ಮೈಕತ್ವವು ಎಲ್ಲಿ ಇರುವುದೋ ಅಲ್ಲಿ ಶೋಕಮೋಹಗಳೆಂಬ ಭಾವಗಳ ಉಗಮವಾದರೂ ಹೇಗಾಗುವುದು.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Sunday, March 4, 2018

ಗುರುನಾಥ ಗಾನಾಮೃತ 
ಸುಲಭವಲ್ಲವೀ ಗುರುಸೇವೆ ಮನುಜರಿಗೆಲ್ಲಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಸುಲಭವಲ್ಲವೀ ಗುರುಸೇವೆ ಮನುಜರಿಗೆಲ್ಲಾ
ಸುಲಭವಲ್ಲವೀ ಗುರುಸೇವೆ ಮರುಳರಿಗೆಲ್ಲಾ || 

ಇಹಕು ಗುರುವೇ ಗತಿಯು
ಪರಕೂ ಅವನೇ ಮತಿಯು |
ಗುರುಪಾದವಲ್ಲದೆ ಬೇರೇನು
ಅರಿತು ಸಾಗಿದರೆ ಹಾಲ್ಜೇನು || ೧ ||

ಕಣ್ಣು ಮುಚ್ಚಿದರೆ ಗುರುವಿನ ಬಿಂಬ  
ಕಣ್ಣ ತೆರೆದರೆ ಅವನ ಪ್ರತಿಬಿಂಬ |
ಹೋದೆಲ್ಲಲ್ಲಾ ‌ಬರುವ ಜೊತೆಯಲ್ಲಿ
ಮಾತೆಲ್ಲಲ್ಲಾ ನುಡಿವ ಹರ್ಷದಲ್ಲಿ || ೨ ||

ನೀನೇ ದೈವ ಬದುಕಿನಲಿ
ನೀನೇ ಸಕಲ ಜನ್ಮದಲಿ ।
ಉಸಿರಾಡುವೆ ನಿನ್ನ ನಾಮದಲ್ಲಿ
ಬೆಳಕ ಪಡೆವೆ ನಿನ್ನ ನಗೆಯಲ್ಲಿ ।। ೩ ।।

Saturday, March 3, 2018

ಗುರುನಾಥ ಗಾನಾಮೃತ 
ಎನ್ನಂಥ ಪಾಪಿ ಇಲ್ಲ ನಿನಗಿಂತ ಪರಮನಿಲ್ಲ
ರಚನೆ: ಅಂಬಾಸುತ 

ಎನ್ನಂಥ ಪಾಪಿ ಇಲ್ಲ ನಿನಗಿಂತ ಪರಮನಿಲ್ಲ
ಪರಿಪಾಲಿಸಲೇಬೇಕೋ ಗುರುನಾಥಾ ||ಪ||
ಪರಿಪರಿಯ ಈ ಅಕ್ಷರ ಪುಷ್ಪಗಳನ್ನು
ನಿನ್ನಡಿಯೊಳಿಟ್ಟಿರುವೆ ಅನುಗ್ರಹಿಸೋ ||ಅ.ಪ||

ಮೂಢನಾಗಿಹೆನೋ ಬಹು ಮಾತನಾಡುತಿಹೆನೊ
ಮೋಹ ದಾಹ ಮಾಯೆಯೊಳಗೆ ನಾ ಸಿಲುಕಿಹೆನೊ
ಮೂಢತ್ವವನು ಕಳೆಯೋ ಮೌನವಾ ಎನ್ನಲಿರಿಸೊ
ಮಾಯಾ ಪ್ರಪಂಚವ ಮರೆಸೀ ಎನ್ನನಿರಿಸೊ ||೧||

ಧರ್ಮ ಕರ್ಮ ಅರಿಯದೆ ಚರ್ಮದಿ ಮನಸನ್ನಿಟ್ಟೆ
ದೈವ ಗುರುಹಿರಿಯರ ನಿಂದಿಸಿ ನಾ ಸೋತೆ
ಜಗ ಮರ್ಮವ ತಿಳಿಸೋ ಆಸೆಯನ್ನಳಿಸೊ
ಭಕ್ತಿ ಬೀಜವ ನೆಡಲು ಮನವಾ ಹದಗೊಳಿಸೊ ||೨||

ಸಖರಾಯಪಟ್ಟಣದ ಸದ್ಗುರುನಾಥನೆ
ಅಜಹರಿಹರರಾ ನಿಜ ರೂಪದಿಂದಿರುವನೆ
ಅಂಬಾಸುತನಾ ಈ ಅರಿಕೆಯಾ ಆಲಿಸೊ
ಪಾಪ ಕಳೆದೂ ಅವನಾ ಅಂತರಂಗದೊಳು ನೆಲೆಸೊ ||೩||
ಗುರುನಾಥ ಗಾನಾಮೃತ 
ಸಖರಾಯ ಸಖರಾಯ ಸಖರಾಯನೇ
ರಚನೆ: ಅಂಬಾಸುತ 

ಸಖರಾಯ ಸಖರಾಯ ಸಖರಾಯನೇ
ನಿಜ ಸುಖ ನೀಡೋ ಸಖ ಎನಗೆ ನೀನೇನೇ ||ಪ||

ಕಲ್ಲೆದೆಯಾ ಕರಗಿಸಿದೆ ಸಖರಾಯನೇ
ಮೆಲ್ಲಗೆ ಉಳಿ ಇಟ್ಟು ಶಿಲೆಯ ಕಲೆಯಾಗಿಸಿದೆ
ಪ್ರೇಮಪಾಶದಿ ಬಂಧಿಸಿದೆ ಎನ್ನ ಸಖರಾಯನೇ
ಪಾಪ ಛಾಯೆ ಕಳೆಯುತಾ ಪಾವನನನ್ನಾಗಿಸಿದೆ ||೧||

ಸೂತ್ರ ಶಾಸ್ತ್ರ ಮಂತ್ರ ನೀನೇ ಸಖರಾಯನೇ
ಅನ್ನ ವಸ್ತ್ರವಿತ್ತು ಎನ್ನಹಂಕಾರ ನೀ ಕಳೆದೇ
ನಕ್ಕು ಎನ್ನನು ಬರಸೆಳೆದೇ ಸಖರಾಯನೇ
ಮುಂದೆಂದೂ ನಾ ಅಳದಂತೆ ನೀ ಸಲಹಿಹೇ ||೨||

ಕಲ್ಪನೆ ಕೆಡುಹಿದೆ ಸಖರಾಯನೇ
ವಾಸ್ತವದಿ ಸಾಧನೆಗೆ ದಾರಿ ತೋರಿದೇ
ಗುರುನಾಥ ಅವಧೂತ ಸಖರಾಯನೇ
ಅಂಬಾಸುತನಾ ಅರಿವಿನ ದೊರೆ ನೀನೇ ||೩||

Friday, March 2, 2018

ಗುರುನಾಥ ಗಾನಾಮೃತ 
ಬಹು ಪುಣ್ಯಫಲದಿಂದಾ ಗುರುವರನ ನಾ ಕಂಡೇ
ರಚನೆ: ಅಂಬಾಸುತ 

ಬಹು ಪುಣ್ಯಫಲದಿಂದಾ ಗುರುವರನ ನಾ ಕಂಡೇ
ಅವನಿತ್ತ ಕರುಣೆಯೆಂಬಾ ಅಮೃತವಾ ನಾನುಂಡೇ ||ಪ||

ಗತಿಸಿಹೋದವು ಪಾಪವೆಲ್ಲವೂ ಸ್ತುತಿಸಲೆನ್ನ ಗುರುವರನಾ
ಕ್ಷಿತಿಯೊಳಾರನು ನಾ ಕಣೆ ಇವನಂಥಾ ಮಹಿಮನಾ ||೧||

ಎಂಥಾ ಮೂರುತಿಯೋ ಇವನದೆಂತ ಕೀರುತಿಯೋ
ಕಂಡೊಡನೆ ಕಣ್ಣಲ್ಲೇ ಆರತಿಯ ಮಾಡುವಂತಿಹಾ ||೨||

ಇವನ ಸಾನಿಧ್ಯದೊಳೇ ಕೈಲಾಸ ವೈಕುಂಠಾ
ನಕ್ಕರಿವ ರಮಾಕಾಂತ ಮುನಿದರೆ ಮಹಾರುದ್ರಾ ||೩||

ಭಾಗ್ಯ ಭೋಗವ ಬೇಡೆನು ಮೋಕ್ಷಪದವಿಯ ನಾ ಬೇಡೆನು
ಮತ್ತೆ  ಮತ್ತೆ ಹುಟ್ಟಿ ಬಂದು ಇವನ ಸಾನಿಧ್ಯವನೆ ಬೇಡುವೇ ||೪||

ಸಖರಾಯಪಟ್ಟಣದ ಅವಧೂತನಿವನಂತೆ
ಅಂಬಾಸುತನಾ ಪದ ಪದದೊಳು ಇವನ ಪಾದವಂತೇ ||೫||
ಗುರುನಾಥ ಗಾನಾಮೃತ 
ನನ್ನತನವ ಸುಡುವ ಅಗ್ನಿ
ರಚನೆ: ಅಂಬಾಸುತ 

ನನ್ನತನವ ಸುಡುವ ಅಗ್ನಿ
ನಿನ್ನ ಚರಣದಲ್ಲಿಹುದು
ನಿನ್ನ ಚರಣ ಸೇರೋ ಬಯಕೆ
ಎನ್ನ ಮನದಲ್ಲಿಹುದು ||ಪ||

ನನ್ನತನವ ಬೆಳೆಸಿಕೊಂಡು
ನಾನೇ ಕುಗ್ಗಿ ಹೋಗಿಹೆನೂ
ನಿನ್ನ ಚರಣ ಕಾಣದೇ
ಬಳಲಿ ಬೆಂಡಾಗಿಹೆನೂ ||೧||

ಯತ್ನಪಟ್ಟು ಸೋತು ನಿಂತೆ
ನಿನ್ನಡಿಯಾ ಕಾಣಲೂ
ಅರಿಯದಾದೆ ನೀ ಕರವಾ
ಪಿಡಿಯದೆ ಅದು ಆಗದೆಂದು ||೨||

ಅದರಿದೇ ಒದರಿದೇ
ನಾನೆಂದು ಹೆದರಿಸಿದೇ
ನೀನೆಂಬುದ ತೋರಿಸುವಾ
ನಿನ್ನ ಕರುಣೆ ಪಡೆಯದೇ ||೩||

ಗುರುಪಾದದ ಅಗ್ನಿ ಎಂದು
ನನ್ನತನವ ದಹಿಸುವುದೋ
ಶಾಂತ ಭಾವ ನೀಡುತಾ
ಮನ ಭಾರವ ಇಳಿಸುವುದೋ ||೪||

Thursday, March 1, 2018

ಗುರುನಾಥ ಗಾನಾಮೃತ 
ನವವಿಧ ಭಕ್ತಿಯೆಂಬಾ 
ರಚನೆ: ಅಂಬಾಸುತ 

ನವವಿಧ ಭಕ್ತಿಯೆಂಬಾ 
ಬಣ್ಣ ತಂದು ಗುರುವಿನೊಡನೇ
ಹೋಳಿಯಾಡೋಣಾ
ಸದ್ಗುರುವಾ ನೆನೆಯೋಣಾ ||ಪ||

ಕಾಮನ ದಹಿಸಿದ ಪರಮೇಶ್ವರ ನೀ
ಕಳೆಯೋ ಕಾಮ ಕ್ರೋಧವ  ಎನುತಾ
ಹೋಳಿಯಾಡೋಣಾ ಸದ್ಗುರುವಾ ನೆನೆಯೋಣಾ ||೧||

ಕಾಮನ ಪಿತ ಶ್ರೀಕೃಷ್ಣಾ ನೀನೇ
ಕಾಯಾ ವಾಚಾ ಮನಸಾ ನಮಿಪೆ ಎನುತಾ 
ಹೋಳಿಯಾಡೋಣಾ ಸದ್ಗುರುವಾ ನೆನೆಯೋಣಾ ||೨||

ಬಣ್ಣ ಕೆಡಿಸುವವನು ನೀ ಹೊಂಬಣ್ಣ ನೀಡುವನು ನೀನೇ
ಭವದ ಬಂಧ ಹರಿಸೋ ಎನುತಾ
ಹೋಳಿಯಾಡೋಣಾ ಸದ್ಗುರುವಾ ನೆನೆಯೋಣಾ ||೩||

ಸಖರಾಯಪಟ್ಟಣದ ಅವಧೂತ ಗುರುನಾಥ
ಅಂಬಾಸುತನ ಅಂತರಂಗವಾಸ ನೀನೆನುತಾ
ಹೋಳಿಯಾಡೋಣಾ ಸದ್ಗುರುವಾ ನೆನೆಯೋಣಾ ||೪||
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಭಕ್ತಿಯೋಗೋ ವಾ ಚ ಜ್ಞಾನಂ
ರಾಜಯೋಗೋ ವಾ ಚ ಕರ್ಮ !
ಚತುರ್ಯೋಗೇಷ್ವೇಕೇನೈವ  
 ಆತ್ಮಜ್ಞಾನಂ ಸುಸಿಧ್ಯತೇ !!

ಭಕ್ತಿಯೋಗ ಜ್ಞಾನಯೋಗ ಕರ್ಮಯೋಗ ರಾಜಯೋಗ ಎಂಬ ನಾಲ್ಕು ಯೋಗಗಳಿವೆ. ಈ ನಾಲ್ಕು ಯೋಗಗಳಲ್ಲಿ ಯಾವುದನ್ನೇ ಅನುಸರಿಸಿದರೂ ಅವನು  ಆತ್ಮಜ್ಞಾನವ ಅರಿಯುತ್ತಾನೆ. ಈ ನಾಲ್ಕರಲ್ಲಿ ಯಾವ ಯೋಗವನ್ನು ಅಭ್ಯಾಸ ಮಾಡಿದರೂ ಉಳಿದ ಎಲ್ಲಾ ಯೋಗಗಳು ಅದರ ಹಿಂದೆ ಬರುತ್ತದೆ.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು