ಒಟ್ಟು ನೋಟಗಳು

Thursday, April 12, 2018

ಗುರುನಾಥ ಗಾನಾಮೃತ 
ವರವೊಂದ ನೀಡಯ್ಯಾ ಗುರುದೇವ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ವರವೊಂದ ನೀಡಯ್ಯಾ ಗುರುದೇವ
ಅಂಜಲಿಪಿಡಿದು ಬೇಡುತಿಹೆ ನಾನು
ವರವೊಂದ ನೀಡಯ್ಯಾ ಗುರುವೇ ||

ಮನದ ಬಿಂಬದಲಿ ನೀನಿಹೆ ದೇವ
ನೀನಿಲ್ಲದೆ ಗತಿಯಾರೆನಗೆ ಗುರುದೇವ !|
ಮನೋವಾಕ್ಕಾಯಗಳಲಿ ತುಂಬಿರಲಿ ನಿನ್ನ ಮೂರುತಿ
ಶಾಂತಮಂದಿರದಿ ನೆನೆಯಲಿ ನಿನ್ನ ಕೀರುತಿ || ೧ ||

ಕಂಗಳಲಿ ತುಂಬಿಹುದು ಆರ್ತತೆಯ ಕಣ್ಣೀರು
ಮನದಲಿ ಹರಿದಿಹುದು ಭಕ್ತಿರಸದಾ ಪನ್ನೀರು |
ನಿ‌ನ್ನ ಸೇವೆಧ್ಯಾನವೆಮ್ಮಯ ಉಸಿರಾಗಲೀ 
ನಿನ್ನ ಮಾತೇ  ಅನುಶಾಸನವಾಗಲೀ || ೨ ||

ಮೌನಮನವು ಕಾಯುತಿದೆ ನಿನ್ನ ವರವ 
ಅಂತರಂಗವು ಬೇಡುತಿದೆ ನಿನ್ನ ಕರುಣೆಯ |
ನಿನ್ನ ಮಹಿಮೆಯು ನಮಗೆ ಅಮೃತವಾಗಲೀ
ಸುಮಾರ್ಗದಿ‌ ನೆಡೆದು ನಿನ್ನ ಪಾದವ ಸೇರುವಂತಾಗಲೀ || ೩ ||

Tuesday, April 10, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ದೈವರುಷ್ಟೋ ಗುರುಸ್ತ್ರಾತಾ
ಗುರುರುಷ್ಟೋ ಕೋ ರಕ್ಷಕಃ !
ಸೇವಯಾ ಪ್ರೀಯತೇ ಗುರುಃ 
ಪೀಡಯಾ ಕೃದ್ಧ್ಯತೇ ಗುರುಃ ||

ಅಜಹರಿಹರಾದಿ ದೈವಗಳು ಕೋಪಗೊಂಡರೆ ಗುರುವು ರಕ್ಷಕನಾಗುತ್ತಾನೆ.ಗುರುವೇ ಕೋಪಗೊಂಡರೆ ಮತ್ತಿನ್ನಾರು ರಕ್ಷಕರು ಇಹರು.ಮನಶುದ್ಧಿಯ ಸೇವೆಯು ಗುರುವಿಗೆ ಪ್ರಿಯವಾದುದು.ಪರಪೀಡೆಯಿಂದ ಗುರುವು ಅತ್ಯಂತ ಕೃದ್ಧನಾಗುತ್ತಾನೆ.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಭಕುತಿ ನೀಡೊ ಗುರುವೇ ಭಕುತಿ ನೀಡೊ
ರಚನೆ: ಅಂಬಾಸುತ 


ಭಕುತಿ ನೀಡೊ ಗುರುವೇ ಭಕುತಿ ನೀಡೊ
ಭಕುತಿ ನೀಡೊ ಗುರುವೇ ಭಕುತಿ ನೀಡೊ||ಪ||
ಮುಕುತಿಗಾಗಲ್ಲವೋ ಶಕುತಿಗಾಗಲ್ಲವೋ
ವಿರಕುತಿಗಾಗಲ್ಲವೋ ವಿಶೇಷತೆಗಾಗಲ್ಲವೋ ||ಅ.ಪ||

ಸತ್ಯ ಸಚ್ಚಿದಾನಂದನೆ ನಿನ್ನನು ನಿತ್ಯವು ಭಜಿಸಲು
ಮಿಥ್ಯೆ ಅಳಿಸುವ ಬೋಧರೂಪನೆ ನಿನ್ನನು ನೆನೆಯಲು
ಹೆತ್ತ ತಾಯ್ತಂದೆಯಂತಿರುವವನೆ ನಿನ್ನನು ಸ್ತುತಿಸಲು
ಅಚ್ಚಳಿಯದ ಮನಮಂದಿರವಾಸನ ಅರ್ಚಿಸಿ ಪೂಜಿಸಲು ||೧||

ಅಂತರಂಗದ ಆತ್ಮಬಂಧುವೇ ನಿನ್ನನು ಅರಿಯಲು
ಆಗಮ ನಿಗಮ ಸ್ತುತಿಸಿದ ರೂಪನೆ ನಿನ್ನನು ಕಾಣಲು
ಅಜಹರಿಹರರು ಒಂದಾದ ನಿನ್ನ ಮೂರತಿ ಸ್ಪರ್ಶಿಸಲು
ನಿನ್ನ ನುಡಿಯೆಂಬಾ ಅನಂದಾಮೃತವನೆ ಸವಿಯಲು||೨||

ನಶ್ವರಕಾಯದಿ ಈಶ್ವರನಾ ಕಂಡು ಪುನೀತನಾಗಲು
ನಾ ನಿನ್ನೊಳಗೆ ಒಂದಾಗಿ ಸದಾ ನಲಿಯಲು
ಸಖರಾಯಪುರದಾ ಸದ್ಗುರುನಾಥನೆ ನಿನ್ನ ಸೇವೆಯೊಳಗಿರಲು
ಅಂಬಾಸುತ ನಾ ಅನವರತಾ ಸದ್ಗುರು ಎನುತಿರಲು ||೩||
ಗುರುನಾಥ ಗಾನಾಮೃತ 
ಸದಾ ನಿನ್ನ ದಿವ್ಯಚರಣವ ನೆನೆವ ಮನವ ನೀಡೊ
ರಚನೆ: ಅಂಬಾಸುತ 


ಸದಾ ನಿನ್ನ ದಿವ್ಯಚರಣವ ನೆನೆವ ಮನವ ನೀಡೊ
ನಾನು ನಿನ್ನೊಳು ಬೆರೆತು ಹೋಗುವಾ ಸ್ವಾನಂದವ ನೀಡೊ ||ಪ||

ಆಸೆಗಳನು ಅಳಿಸಿ ಗುರುವೆ ಆತಂಕವ ಕಳೆಯೊ
ಹಗಲು ರಾತ್ರಿ ಎನ್ನದೆ ನಿನ್ನ ಸ್ಮರಣೆಯೊಳಗೆ ಎನ್ನ ಮರೆಸೊ
ನಿನ್ನ ನಾಮವೊಂದೇ ಎನಗೆ ಅನ್ನ ನೀರು ಉಸಿರಾಗಿರಲಿ
ಈ ಕಣ್ಣಿನಲ್ಲಿ ನಿನ್ನ ಮೂರುತಿಯೇ ನಿತ್ಯವೂ ತುಂಬಿರಲಿ ||೧||

ನಿನ್ನ ಮಹಿಮೆಗಳನು ನೆನೆವುದೆ ಎನಗೆ ಸತ್ಸಂಗವು
ಹೃದಯ ಮಂದಿರದೊಳು ನೀನಿರಲು ಪರಮಾತ್ಮನ ಸಾಮೀಪ್ಯವು
ಬೇಡೆ ನಾನು ಸಾಯುಜ್ಯವ ಗುರುವೇ ನೀನೆಗಿರಲು
ಸಾಧಕನಾನಾಗಲಾರೇ ನಿಜಸಂತ ನಿನ್ನ ಸೇವೆ ಬಿಟ್ಟು ||೨||

ನೀ ಸಖರಾಯನು ಅಂಬಾಸುತ ಆತ್ಮಬಂಧು
ಅಂತರಂಗದೊಡೆಯ ಅಗಣಿತ ಅನಾಥರಾ ಬಂಧು
ಬೇಡುವೇ ನಿನ್ನಡಿಗೆ ಬಾಗುತಾ ನಿನ್ನ ಸೇವೆಯ ನೀಡೊ
ಇದೆ ಎನ್ನ ಕೋರಿಕೆಯು ಕನಿಕರಿಸಿ ಹರಸೊ ||೩||
ಗುರುನಾಥ ಗಾನಾಮೃತ 
ಮನಮಲ್ಲಿಗೆಯ ಇಡು ನೀ ಗುರುಪಾದಕೇ
ರಚನೆ: ಅಂಬಾಸುತ 

ಮನಮಲ್ಲಿಗೆಯ ಇಡು ನೀ ಗುರುಪಾದಕೇ
ಆ ಯೋಗಿ ಬರುತಾನೆ ನಿನ್ನ ಉದ್ಧರಿಸುವುದಕ್ಕೇ ||ಪ||

ಧನವಾ ಕೇಳನು ಅವನು ಧಾನ್ಯ ಕೇಳನು ಅವನು
ಕಾಂಚಾಣ ಕೊಪ್ಪರಿಗೆ ಎಂದೂ ಕೇಳನು
ಪೂಜೆ ಕೇಳನು ವಾಜೀ ಉತ್ಸವ ಕೇಳನವನು
ರಾಜ ಮರ್ಯಾದೆಯಾ ಎಂದೀಗೂ ಬಯಸನು ||೧||

ಶುದ್ಧಃಂತಕರಣದಿಂದ ಅವನಿಗೆ ಬದ್ದನಾಗೇ
ಅವನಿಯ ತಾಪವ ಹರಿಸುವನು
ಅವರಿವರೆಂದು ಅನ್ಯರ ಪಾದ ಪಿಡಿಯದೇ
ಗುರು ನೀನೇ ಗತಿ ಎನಲು ಕಾಯುವನು ||೨||

ಸೇವಕನಾಗು ಅವನ ಮನೆಬಾಗಿಲಾ ಕಾಯ್ದು
ಸಾವಿರದ ಪುಣ್ಯವು ನಿನಗುಂಟು
ಸೋಗಿನ ಮನಬಿಟ್ಟು ಅವನಾ ಚರಣಕ್ಕೆರಗೆ
ಸ್ವರ್ಗವ ಇಳೆಯಲ್ಲೇ ತೋರಿಸುವನು ||೩||

ಸಖರಾಯಪುರದಿಂದ ನಿನ್ನಾ ನಿಜಸಖನು
ಆತ್ಮದ ಮೊರೆ ಕೇಳಿ ಓಡಿ ಬರುವನು
ಅಂಬಾಸುತನ ಅಂತರಂಗದಾ ಮಾತಿದು
ನಮ್ಮೀ ಅವಧೂತನು ನಿಜಭಗವಂತನು ||೪||

Sunday, April 8, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಜ್ಞಾನೇನ ಲಭ್ಯತೇ ಸ್ಥಿರಂ
ಜ್ಞಾನೇನ ಸಾಧ್ಯತೇ ಸರ್ವಂ |
ಜ್ಞಾನೇನ ವಂದ್ಯತೇ ನರಃ 
ಜ್ಞಾನದಾತ್ರೇ ಗುರುಂ ವಂದೇ ||

ಪ್ರಕರ್ಷವಾದ ಜ್ಞಾನದಿಂದ ಶಾಶ್ವತವಾದುದು ಲಭ್ಯವಾಗುತ್ತದೆ.ಉತ್ತಮ ಜ್ಞಾನದಿಂದಲೇ ಸಕಲವೂ ಸಾಧ್ಯವಾಗುತ್ತದೆ.ಜ್ಞಾನವಂತನಾದ ಮನುಜನು ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ. ಇಂತಹ ಸರ್ವಶ್ರೇಷ್ಠ ಜ್ಞಾನವನ್ನು ನೀಡುವಂತಹ ಸದ್ಗುರುವಿಗೆ ನಮಸ್ಕರಿಸುತ್ತೇನೆ...

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಶ್ರೀಗುರುನಾಥ ಸದ್ಗುರುನಾಥ ಶ್ರೀವೇಂಕಟಾಚಲ ಅವಧೂತಾ
ರಚನೆ: ಅಂಬಾಸುತ 


ಶ್ರೀಗುರುನಾಥ ಸದ್ಗುರುನಾಥ ಶ್ರೀವೇಂಕಟಾಚಲ ಅವಧೂತಾ
ಶ್ರೀಗುರುನಾಥ ಸದ್ಗುರುನಾಥ ಶ್ರೀವೇಂಕಟಾಚಲ ಅವಧೂತಾ        ||ಪ||

ಶ್ರೀನಿವಾಸ ಶ್ರೀಶಾರದಾತನಯ ಶ್ರೀವೇಂಕಟಾಚಲ ನಾಮಾಂಕಿತ
ಧರೆಯನುದ್ಧರಿಸೆ ಅವತರಿಸಿದಾ ಸಾಕ್ಷಾತ್ ದತ್ತನವತಾರಿ ||೧||

ಶ್ರಿತಜನ ಪಾಲಕ ಕ್ಷಿತಿಯೊಳಗುತ್ತಮ ಕರುಣಾಸಾಗರನೇ
ಬಿರುದು ಬಿಟ್ಟು ಬಾಧೆಗಳ ಸುಟ್ಟು ಭವ ಹರಿಸುವಾ ಪ್ರಭುವೆ ||೨||

ನಗುವೆ ಒಮ್ಮೆ ನೀ ಮುನಿವೆ ಮತ್ತೊಮ್ಮೆ ನಿನ್ನ ಅರಿವರ್ಯಾರೋ
ಊಹೆಗೆ ನಿಲುಕದ ಅನುಭವ ವೇದ್ಯನೆ ಕರವ ಮುಗಿವೆ ಬಾರೋ ||೩||

ಧರ್ಮ ಕರ್ಮದಾ ಬೋಧರೂಪ ನೀ ಸ್ವಾತ್ಮಾರಾಮನೇ
ಆತ್ಮಾರಾಮರ ಆರಾಧಿಸುವ ಯೋಗ ನೀಡೊ ಎಮಗೇ ||೪||

ಮರ್ಮದ ಮಾತುಗಳಿಂದ ಮನಸಿನ ಕಲ್ಮಷ ನೀ ತೊಳೆದೆ
ಮೌನದಾ ರುಚಿಯ ಹತ್ತಿಸಿ ಮಹಾದೇವನ ತೋರಿಸುವೇ ||೫||

ಪರಂಧಾಮ ನಿನ್ನೊಳಗಿಹುದೈ ಪರಮಾತ್ಮ ನೀನಿಮಗೇ
ಪರಮಪದವಿ ನಾ ಬೇಡೆನಯ್ಯ ನಿನ್ನ ಪಾದದೊಳಗೇ ಇರುವೇ ||೬||

ನಿಜಭಕ್ತಿಯೊಂದ ಬೇಡುವೆನು ನೀಡೋ ನೀನಿನ್ನು ತಡಮಾಡದೆ
ಅಂಬಾಸುತನಾ ನಿನ್ನ ದಾಸರಾ ದಾಸರಾ ದಾಸನಾಗಿರುವೇ ||೭||

Saturday, April 7, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸದ್ಗುರುಸ್ತು ಭಾವಗಮ್ಯಃ
ನ ತು ಸಃ ದೇಹೇನ ಪೂಜ್ಯಃ |
ಸ್ವಾತ್ಮನಶ್ಚ ಪ್ರತಿರೂಪಃ 
ವ್ಯರ್ಥಮನ್ವೇಷಣಂ ಬಹಿಃ ||

ಸದ್ಗುರುವು ನಮ್ಮ ಭಾವಗಮ್ಯನು..ಅವನನ್ನು ದೇಹಭಾವದಿಂದ ಪೂಜಿಸಬಾರದು.. ಅವನು ನಮ್ಮ ಆತ್ಮದ ಪ್ರತಿರೂಪವಾದುದರಿಂದ ಹೊರ ಪ್ರಪಂಚದಲ್ಲಿ ಆತನನ್ನು ಹುಡುಕುವುದು ವ್ಯರ್ಥ..

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ವೇಂಕಟಾಚಲ ವೇಂಕಟಾಚಲ
ರಚನೆ: ಅಂಬಾಸುತ 


ವೇಂಕಟಾಚಲ ವೇಂಕಟಾಚಲ
ವೇಂಕಟಾಚಲ ಪಾಹಿಮಾಂ
ವೇಂಕಟಾಚಲ ವೇಂಕಟಾಚಲ
ವೇಂಕಟಾಚಲ ರಕ್ಷಮಾಂ ||ಪ||

ತತ್ವಪೂರ್ಣ ಬೋಧರೂಪ ಶ್ರೀವೇಂಕಟಾಚಲ ಪಾಹಿಮಾಂ
ತೇಜಃಪುಂಜ ತಮವಿನಾಶಿ ಶ್ರೀವೇಂಕಟಾಚಲ ರಕ್ಷಮಾಂ
ಪರಮಪಾವನ ಪುಣ್ಯನಾಮ ಶ್ರೀವೇಂಕಟಾಚಲ ಪಾಹಿಮಾಂ
ಪದಕೆ ನಿಲುಕದ ಪುಣ್ಯರೂಪ ಶ್ರೀವೇಂಕಟಾಚಲ ರಕ್ಷಮಾಂ ||೧||

ಆರನು ಮೀರಿದ ಆನಂದ ರೂಪ ಶ್ರೀವೇಂಕಟಾಚಲ ಪಾಹಿಮಾಂ
ಅಗಣಿತ ಗುಣ ಮಹಿಮಾಪೂರ್ಣ ಶ್ರೀವೇಂಕಟಾಚಲ ರಕ್ಷಮಾಂ
ಅಂತರಂಗದ ಆದಿ ಮೂರುತಿ ಶ್ರೀವೇಂಕಟಾಚಲ ಪಾಹಿಮಾಂ
ಅನಾಥ ನಾಥ ದೀನಬಂಧು ಶ್ರೀವೇಂಕಟಾಚಲ ರಕ್ಷಮಾಂ ||೨||

ಶ್ರೀನಿವಾಸ ಶಾರದಾ ತನಯ ಶ್ರೀವೇಂಕಟಾಚಲ ಪಾಹಿಮಾಂ
ಭಕ್ತೋದ್ಧಾರಕೆ ನೀನವತರಿಸಿದೆ ಶ್ರೀವೇಂಕಟಾಚಲ ರಕ್ಷಮಾಂ
ಲೀಲಾ ಮೂರುತಿ ಲೋಕರಕ್ಷಕ ಶ್ರೀವೇಂಕಟಾಚಲ ಪಾಹಿಮಾಂ
ಚತುರಾಶ್ರಮವ ಮೀರಿದ ಗುರುದೇವ ಶ್ರೀವೇಂಕಟಾಚಲ ರಕ್ಷಮಾಂ ||೩||

ಪ್ರೇಮ ಪುತ್ಥಳಿ ಮಾತೃಹೃದಯಿ ಶ್ರೀವೇಂಕಟಾಚಲ ಪಾಹಿಮಾಂ
ಪಾಪ ವಿಧೂರ ಪುಣ್ಯಕಾರಣ ಶ್ರೀವೇಂಕಟಾಚಲ ರಕ್ಷಮಾಂ
ಸ್ಥಿತಿ ಗತಿ ಕಾರಣ ಸೂಕ್ಷ್ಮರೂಪ ಶ್ರೀವೇಂಕಟಾಚಲ ಪಾಹಿಮಾಂ
ಅರಿವಿನ ದೊರೆ ನೀ ಆತ್ಮೋದ್ಧಾರಕ ಶ್ರೀವೇಂಕಟಾಚಲ ರಕ್ಷಮಾಂ ||೪||

ಸ್ವಾನುಭವದಾ ಸ್ವಾತ್ಮಾರಾಮ ಶ್ರೀವೇಂಕಟಾಚಲ ಪಾಹಿಮಾಂ
ಆತ್ಮಾರಾಮನ ನಿತ್ಯಾರಾಧಕ ಶ್ರೀವೇಂಕಟಾಚಲ ರಕ್ಷಮಾಂ
ದಟ್ಟಿಯುಟ್ಟ ದಿಟ್ಟ ದೃಷ್ಠಿಯ ಶ್ರೀವೇಂಕಟಾಚಲ ಪಾಹಿಮಾಂ
ದತ್ತನವತಾರಿ ನೀನೇ ಶ್ರೀವೇಂಕಟಾಚಲ ರಕ್ಷಮಾಂ ||೫||

ಸಖರಾಯಪುರದಾ ನಿಜಸಖನೇ ಶ್ರೀವೇಂಕಟಾಚಲ ಪಾಹಿಮಾಂ
ಗುರುನಾಥ ಅವಧೂತ ಶ್ರೀವೇಂಕಟಾಚಲ ರಕ್ಷಮಾಂ
ಅಂಬಾಸುತನಾ ಅಂತರಂಗದೊಡೆಯ ಶ್ರೀವೇಂಕಟಾಚಲ ಪಾಹಿಮಾಂ
ಅನವರತ ನಿನ್ನ ಭಜಿಸುವೆ ಕಾಯೋ ಶ್ರೀವೇಂಕಟಾಚಲ ರಕ್ಷಮಾಂ ||೬||
ಗುರುನಾಥ ಗಾನಾಮೃತ 
ಆನಂದವನಕೆ ಕರೆದೊಯ್ದಾ 
ರಚನೆ: ಅಂಬಾಸುತ 


ಆನಂದವನಕೆ ಕರೆದೊಯ್ದಾ 
ಸದ್ಗುರುನಾಥ ಆನಂದ ಘನನೇ ತಾನಾದಾ ||ಪ||
ಆನಂದ ನೀಡಿದಾ ನಿಜಾನಂದದ ದಾರಿ ತೋರಿದ
ಆನಂದಿಸು ಆನಂದಿಸು ಎಂದು ಬಾರಿ ಬಾರಿಗು ಪೇಳಿದ ||ಅ.ಪ||

ಚೈತ್ರ ಚಿಗುರಿನ ಆನಂದ ಸಾಧು ಆವೀರ್ಭವಿಸಿದಾ ಆನಂದ
ಪಂಚಮಿಯ ಆನಂದ ಪಂಚೇಂದ್ರಿಯಗಳಿಗೆ ಮಹದಾನಂದ ||೧||

ಸೇವೆಯಲ್ಲಿನ ಆನಂದ ಸಾಧು ಕಂಡಾ ಆನಂದ 
ನಾಮಸ್ಮರಣೆಯ ಆನಂದ ನಾದೋಪಾಸದ ನಿತ್ಯದಾನಂದ||೨||

ವೇದಮಂತ್ರದ ಆನಂದ ವಿಷಯವರ್ಜಿತ ವಿನೋದಾನಂದ
ರಥಾರೋಹಿ ಆನಂದ ಶ್ರೀಶೇಷಾಚಲನಾ ಕಂಡಾನಂದಾ ||೩||

ಪ್ರದಕ್ಷಿಣೆಯಾ ಆನಂದ ಚಿತ್ತಾರಕಂಡು ನೇತ್ರಾನಂದ
ಚಿಂತೆ ಬಾರದ ಚಿತ್ತದೊಳಗೆ ಚಿನುಮಯಾತ್ಮಕ ನಿಂತಾನಂದ ||೪||

ಅನ್ನಬ್ರಹ್ಮನ ಪೂರ್ಣ ಆನಂದ ಅಗುಳು ಅಗುಳಲು ಗುರುಮಹಿಮೆ ಕಂಡ ಆನಂದ
ವರ್ಣಿಸಲಾಗದ ಈ ಆನಂದ ಪದಕೆ ನಿಲುಕದ ಪರಮಾನಂದ ||೫||

ಎನ್ನವಧೂತ ನೀಡಿದ ಆನಂದ ಸಖರಾಯಧೀಶ ಇತ್ತ ಆನಂದ
ಅಂಬಾಸುತಗೆ ವರವೀ ಆನಂದ ಅಂಬಿಕೆಯ ಕೃಪೆಯಿಂದ ಆನಂದ ||೬||

Wednesday, April 4, 2018

ಗುರುನಾಥ ಗಾನಾಮೃತ 
ಈ ಡಿಂಬದೊಳಡಗಿಹ ಜಂಭವ ಅಳಿಸೊ ಸದ್ಗುರುರಾಯನೇ
ರಚನೆ: ಅಂಬಾಸುತ 


ಈ ಡಿಂಬದೊಳಡಗಿಹ ಜಂಭವ ಅಳಿಸೊ ಸದ್ಗುರುರಾಯನೇ
ದೊಂಬಿಯಾಗಿಹ ಮನದಿ ನಿನ್ನಯ ನಿಜ ಬಿಂಬವನಿರಿಸುತಲೀ ||ಪ||

ಕಂಬ ಕಂಬದಿ ಹರಿಯ ಕಂಡ ಶಿಶುವಂತೆ ಎನ್ನನಿರಿಸೋ
ಉಂಬುವಾಗ ಉಟ್ಟು ನಲಿಯುವಾಗ ನಿನ್ನ ನೆನೆಯುವಂತೆ ಹರಸೋ ||೧||

ರಂಭೆಯರಾ ವ್ಯಾಮೋಹವ ಕೆಡಿಸೋ ಅಂಬೆಯ ಪಾದ ತೋರಿಸೋ
ಶುಂಭ ಮರ್ಧಿನಿಯಲ್ಲಿ ಭಕ್ತಿಯನ್ನಿರಿಸೋ ಪರಿಪೂರ್ಣನನ್ನಾಗಿಸೋ ||೨||

ಅಂಬುಜೋದ್ಭವ ನೀನು ಅಂಬುಜಾಪತಿ ನೀನು ಶಂಭುಶಂಕರ ನೀನೂ
ಅಂಡ ಪಿಂಡ ಬ್ರಹ್ಮಾಂಡಗಳೊಳೂ ವ್ಯಾಪಕನಾಗಿಹೆ ನೀನೂ ||೩||

ಅಂಬಾಸುತನ ಅಂತರಂಗದ ಒಡೆಯಾ ಸಖರಾಯಪುರದವ ನೀನು
ನಿಜಭಕ್ತರಿಗೆ ನಿಜಸುಖವನ್ನೀವ ನಿಜಾತ್ಮಸಖ ನೀನು ||೪||
ಗುರುನಾಥ ಗಾನಾಮೃತ 
ರಂಗೋಲಿ ಹಾಕಮ್ಮಾ
ರಚನೆ: ಅಂಬಾಸುತ 


ರಂಗೋಲಿ ಹಾಕಮ್ಮಾ
ಮನದೊಳು ಸ್ಥಿರವಾಗಿ ಗುರುನಾಮ ಸ್ಮರಿಸಿ
ಮುದ್ದಾದ ರಂಗೋಲಿ ಹಾಕಮ್ಮಾ ||ಪ||

ಉದಯದೊಳೆದ್ದು ಕಾಮಾದಿ ಕಲ್ಮಷ ತೆಗೆದು
ಶುದ್ಧಭಕ್ತಿ ಎಂಬಾ ಪನ್ನೀರ ಚಿಮುಕಿಸಿ ||೧||

ರಂಗೋಲಿ ಕಾಣದ ದೇಹವೇ ಅಶುಭವು
ರಂಗನೆಂದಿಗೂ ಅಲ್ಲಿಗೆ ಬಾರನು ||೨||

ಎಳೆಯಾ ರಂಗೋಲಿ ಚುಕ್ಕಿ ರಂಗೋಲಿ
ಬಣ್ಣ ಬಣ್ಣ ತುಂಬಿದಾ ಬಗೆ ಬಗೆಯಾ ||೩||

ರಂಗೋಲಿ ಇದ್ದೆಡೆ ಸದಾ ಶುಭ ಶೋಭನಗಳು
ರಂಗೋಲಿ ಇರದೆಡೆ ಮಂಕಾದ ಮನವು ||೪||

ಶುದ್ಧಭಾವವೆಂಬಾ ಅಚ್ಚ ಬಿಳಿ ಹಿಟ್ಟಿನಿಂದ
ಅಚ್ಚುಕಟ್ಟಾಗಿ ನಿನ್ನ ಅಂತರಂಗದೊಳಿಂದು ||೫||

ಗುರುನಾಥ ಅವಧೂತಗೆ ಸಖರಾಪುರಾಧೀಶಗೆ
ಅಂಬಾಸುತನ ಅರಿವಿನ ದೊರೆಗೆ ಪ್ರಿಯವಾದಂಥಾ ||೬||

Tuesday, April 3, 2018

ಗುರುನಾಥ ಗಾನಾಮೃತ 
ಗುರುದೇವನೆ ಗತಿ ಎಂಬುದ ನಂಬೀರೊ
ರಚನೆ: ಅಂಬಾಸುತ 


ಗುರುದೇವನೆ ಗತಿ ಎಂಬುದ ನಂಬೀರೊ
ಅತಿ ಭಕುತಿಯಿಂ ಅವನ ಪಾದವ ಪಿಡಿಯಿರೊ ||ಪ||

ಹಗಲಿರುಳೆನ್ನದೆ ಸ್ತುತಿಸಿರೊ ಹೆತ್ತ ತಾಯ್ತಂದೆ ನೀನೇ ಎನ್ನೀರೊ
ಭಾವಶುದ್ಧಿಯ ಅವನಲ್ಲಿ ಬೇಡಿರೋ ಭಗವಂತ ನೀನೇ ಎನ್ನೀರೊ ||೧||

ಅವನಿತ್ತರೆ ಎಮಗೆ ಅನ್ನ ನೀರೊ ಅವ ನಕ್ಕರೆ ನಾವು ನಕ್ಕೇವೊ
ಅವ ಮುನಿದರೆ ಯಾರೂ ಉಳಿಯೇವೋ ಅವನಿಯ ದೊರೆ ಅವನೇ ನಂಬಿರೊ ||೨||

ಕರುಣಾಸಾಗರನವನು ಕನಿಕರಿಸುವನೋ ಕರಪಿಡಿದೆಮ್ಮನು ಉದ್ಧರಿಸುವನೊ
ಕೋರಿಕೆಯ ಪೂರೈಸೋ ಕಾಮಧೇನು ಅವನು ಎಮ್ಮ ಸುಖದುಖಃಗಳ ಆಲಿಸುವವನೊ ||೩||

ಸಖರಾಯಪುರದೊಳಗೆ ನೆಲೆಸಿಹನೋ ಆತ್ಮಸಖನಾಗಿ ತಾ ಮೆರೆದಿಹನೊ
ಅಂಬಾಸುತನಾ ಅನವರತ ಪೊರೆದಿಹನೋ ಶ್ರೀವೇಂಕಟಾಚಲ ನಾಮಾಂಕಿತನೊ ||೪||

Sunday, April 1, 2018

ಗುರುನಾಥ ಗಾನಾಮೃತ 
ಚಿಂತೆ ಮಾಡಲು ಕಾರಣವೇನು
ರಚನೆ: ಅಂಬಾಸುತ 


ಚಿಂತೆ ಮಾಡಲು ಕಾರಣವೇನು
ಚಿನುಮಯಾತ್ಮಕ ಗುರುವಿಲ್ಲವೇನು
ನಿಶ್ಚಿಂತನಾಗಲು ಬೇಕಿನ್ನೇನು
ಅವನ ಸ್ಮರಣೆ ಸಾಲದೇನು ||ಪ||

ದೇಹ ಕೊಟ್ಟವನವನಲ್ಲವೇನು
ಅನ್ನ ವಸ್ತ್ರ ಕೊಡದಿರನೇನು
ಆನಂದ ಪಡಲು ಬೇಕಿನ್ನೇನು
ಗುರುಕೃಪಾ ನಮಗಿರಲಿನ್ನು ||೧||

ಸರಳ ದಾರಿಯ ತೋರಿಸಿಲ್ಲವೇನು
ಗುರು ನಿನ್ನಯ ಕರ ಪಿಡಿದಿಲ್ಲವೇನು
ಕರೆದೊಯ್ಯುವ ಭಾರ ಅವನದಲ್ಲವೇನು
ಗುರು ನಿನ್ನ ಮುಂದೆ ನಿಂತಿಲ್ಲವೇನೊ ||೨||

ಗುರುವಿನಾ ಮಾತು ರಕ್ಷೆ  ಅಲ್ಲವೇನು
ಗುರುಕರುಣೆಗೆ ಸಮವಿನ್ನೇನು
ಗುರು ಗುರುತರ ಭಾಗ್ಯ ನೀಡನೇನು
ಗುರುವೇ ಎಮಗೆ ದೇವನಲ್ಲವೇನು ||೩||

ಅಂಬಾಸುತನ ಪದಪದಗಳಲ್ಲೂ
ಸದ್ಗುರುನಾಥ ಕಾಣನೇನು
ಸಖರಾಯಪುರಾಧೀಶ ಕಾಣನೇನು
ಎಲ್ಲಾ ಅವನ ಕೃಪಾಭಿಕ್ಷೆ ಅಲ್ಲವೇನೊ ||೪||
ಗುರುನಾಥ ಗಾನಾಮೃತ 
ಅರಿ ಅರಿ ಅರಿಯೋ ಗುರು ಹರಹರಿಯೊ
ರಚನೆ: ಅಂಬಾಸುತ 


ಅರಿ ಅರಿ ಅರಿಯೋ ಗುರು ಹರಹರಿಯೊ
ಅವ ನಿಜ‌ ಅಜನೋ ಆ ಜನ್ಮದ ಪುಣ್ಯದ ಫಲನೊ ||ಪ||

ಸುಲಭಕೆ ಸಿಗನೋ ಸಾಧನೆಯೊಳಗಿಹನೊ
ಬಾಧೆಯ ಕಳೆವನೋ ಬೋಧರೂಪನೊ ||೧||

ದೇಹರೂಪನಲ್ಲನೋ ಗುರು ತತ್ವಪೂರ್ಣನಾಗಿಹನೊ
ತನ್ಮಯತೆಯ ಬೇಡಿಹನೋ ಅಹಂಭಾವ ಕಳೆಯುವನೊ ||೨||

ಒಡಲಾಳದ ಉಸಿರಂತೆ ಅವನಿಹನೊ
ಒಲವಿನ ಘನ ಮೂರ್ತಿಯಾಗಿ ಕಂಗೊಳಿಸಿಹನೊ ||೩||

ನಗಿಸುವನು ಅಳಿಸುವನು ಎಮ್ಮ ಪಕ್ವಗೊಳಿಸುವನು
ಪಾಪದ ಹೊರೆ ಇಳಿಸುವನು ಪುಣ್ಯ ಹೊರಿಸುವನು ||೪||

ಹೊರಗಣ್ಣಿಗೆ ಕಾಣನೋ ಒಳಗರಳಿದ ಮಲ್ಲಿಗೆ ಇವನೊ
ಸದಾ ಘಂ ಎನ್ನುವನೋ ಅನುಭವ ವೇದ್ಯನೋ ||೫||

ಸಖರಾಯಪುರದೊಳಗೆ ನಿಜಸುಖ ನೀಡೆ ನೆಲಸಿಹನೊ
ಅಂಬಾಸುತನ ಮನದಿ ಪದವಾಗಿ ನಲಿದಿಹನೊ ||೬||