ಕರ್ನಾಟಕದ ಸುಪ್ರಸಿದ್ಧ ಅವಧೂತರಾದ ಸಖರಾಯಪಟ್ಟಣದ ಶ್ರೀ.ವೆಂಕಟಾಚಲ ಅವಧೂತರ ಜೀವನ, ಅವರು ನಡೆಸಿದ ಲೀಲೆಗಳು ಮತ್ತು ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಪ್ರಥಮ ಬ್ಲಾಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬ್ಲಾಗ್ ನಲ್ಲಿ ನೀಡಿರುವ ಮಾಹಿತಿಗಳನ್ನು ಸಂಗ್ರಹಿಸಲು ನನಗೆ ಹಲವಾರು ಗುರು ಬಂಧುಗಳು ಸಹಾಯ ಮಾಡಿರುತ್ತಾರೆ. ಈ ಬ್ಲಾಗ್ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಆದ ಕಾರಣ, ಯಾರಾದರೂ ಬ್ಲಾಗ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಗುರುಬಂಧುಗಳನ್ನು ಸಂಪರ್ಕಿಸಿದಲ್ಲಿ ದಯಮಾಡಿ ನೀಡಬಾರದಾಗಿ ವಿನಂತಿ.
ಒಟ್ಟು ನೋಟಗಳು
Sunday, November 26, 2017
ಅವಧೂತ - ಅಸಮಾನ್ಯ - ಅಪ್ರಮೇಯ - ೧೫
ಸಂಗ್ರಹ : ಅಂಬಾಸುತ
ಶ್ರೀಶಂಕರ ಜಯಂತಿಯ ಸಾಮೂಹಿಕ ಉಪನಯನಕ್ಕಾಗಿ ಗುರು ಸನ್ನಿಧಾನವೊಂದರಲ್ಲಿ ೭-೮ ಮಹಿಳೆಯರು ಸುಮಾರು ೪೦೦ ರಿಂದ ೫೦೦ ಜೊತೆ ಪುರಿಉಂಡೆ ಮತ್ತು ಚಕ್ಲಿ ಬಾಗಿನಗಳನ್ನು ಮಾಡುತ್ತಿದ್ದರು. ಎಲ್ಲಾ ಮುಗಿದು ಸಾಯಂಕಾಲ ಪುರಿ ಚೀಲವನ್ನು ನೋಡಲಾಗಿ ತಂದಷ್ಟೇ ಪುರಿ ಚೀಲದಲ್ಲಿದ್ದುದು ಅಲ್ಲಿದ್ದ ಗುರುಭಕ್ತರಿಗೆ ಗುರುಗಳ ಮಹಿಮೆಯ ಅರಿವನ್ನು ಮೂಡಿಸಿತ್ತು.ಈ ಘಟನೆಗೆ ಕಾರಣವಾದದ್ದು ಬಾಗಿನಗಳನ್ನು ಮಾಡುವಾಗ ಗುರುಭಕ್ತರು ಮಾಡುತ್ತಿದ್ದ ಅವಧೂತ ಗುರುವರೇಣ್ಯರ ನಾಮಸ್ಮರಣೆ.
Saturday, November 25, 2017
ಗುರುನಾಥ ಗಾನಾಮೃತ
ಗುರುಮಂದಿರದೊಳು ದೀಪಾರಾಧನೆ
ರಚನೆ: ಅಂಬಾಸುತ
ಗುರುಮಂದಿರದೊಳು ದೀಪಾರಾಧನೆ
ಘನತರ ಶ್ರೀಗುರುವಿಗಿದು ಸಮರ್ಪಣೆ ||
ಸಾವಿರದ ಸುಖವಾ ನೀಡ್ವಗೇ
ಸಾವಿರದ ದೀಪದ ಸಾಲೂ
ತಮಕಳೆವಾ ಪ್ರಭುವಿಗೇ
ತನ್ಮಯದ ಈ ಸಾಲು ||
ಚಿತ್ತಾರ ವಯ್ಯಾರ
ದೀಪಗಳೇ ಇಲ್ಲಿ ಮಂದಾರ
ಭಾವಿಕ ಭಕುತರ
ಗುರುನಾಮ ಝೇಂಕಾರ ||
ಶ್ರೀಕಾರ ಓಂಕಾರ
ಗುರುವಿಲ್ಲಿ ಸಾಕಾರ
ಬೆಳಗಿಹ ಪ್ರತಿ ಜ್ಯೋತಿಯಲೂ
ಗುರುವಿನದೇ ಆಕಾರ ||
Friday, November 24, 2017
ಅವಧೂತ - ಅಸಮಾನ್ಯ - ಅಪ್ರಮೇಯ - ೧೪
ಸಂಗ್ರಹ : ಅಂಬಾಸುತ
ಗುರುನಿವಾಸಕ್ಕೆ ಬಂದಿದ್ದ ಯತಿಗಳೊಬ್ಬರನ್ನು ಪುನಃ ಅವರ ಆಶ್ರಮಕ್ಕೆ ತಲುಪಿಸಲು ಕರೆದುಕೊಂಡು ಹೊರಟ ಯುವ ಭಕ್ತ "ಗುರುಗಳನ್ನು ಬಿಟ್ಟು ಬರುತ್ತೇನೆ" ಎಂದು ಹೇಳಿದಾಗ, "ಏನಯ್ಯಾ ಗುರುಗಳನ್ನು ಬಿಟ್ಟು ಬರ್ತೀಯಾ, ಹಾಗೆಂದರೆ ಅರ್ಥವೇನು, ಗುರುಗಳನ್ನು ಬಿಡಲು ಅವರೇನು ವಸ್ತುವಾ, ಹಿಡಿದುಕೊಂಡು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದವರನ್ನು ಬಿಟ್ಟು ಬರ್ತೀನಿ ಅಂತಿಯಾ, ಹಾಗೆಲ್ಲಾ ಅನ್ನಬಾರದು. ನಾವಾಡೊ ಪ್ರತೀ ಶಬ್ದದ ಮೇಲೂ ನಮ್ಮ ಗಮನವಿರಬೇಕು." ಎಂದು ಹೇಳುವುದರ ಮೂಲಕ ನಮಗೆಲ್ಲರಿಗೂ ಜೀವನದ ಪಾಠ ಹೇಳಿಕೊಡುತ್ತಿರುವವರು- ಅವಧೂತರು.
ಅವಧೂತ - ಅಸಮಾನ್ಯ - ಅಪ್ರಮೇಯ - ೧೩
ಸಂಗ್ರಹ : ಅಂಬಾಸುತ
ಗರ್ಭಿಣಿಯಾಗಿದ್ದ ಗುರುಭಕ್ತೆಯೊಬ್ಬರಿಗೆ ವೈದ್ಯರು ಬೆನ್ನಿನಲ್ಲಿ ನೀರು ತುಂಬಿದೆ, ಸ್ವಲ್ಪ ತೊಂದರೆಯಾಗಬಹುದೆಂದು ಹೇಳಿದ್ದರಿಂದ ಆಕೆ ಗುರುನಾಥನೇ ಗತಿ ಎಂದು ಗುರು ನಿವಾಸಕ್ಕೆ ಬರುತ್ತಾರೆ. ಆದರೆ ಗುರುನಾಥರು ಆಕೆಯನ್ನು ಏನೂ ಕೇಳದೆ ನಾನು ಹೇಳುವವರೆಗೂ ಇಲ್ಲೇ ನಿಂತಿರು ಎಂದು ಹೇಳಿ ೨-೩ ಘಂಟೆಗಳ ಕಾಲ ಆ ಗರ್ಭಿಣಿ ಹೆಣ್ಣು ಮಗಳನ್ನು ನಿಲ್ಲಿಸಿರುತ್ತಾರೆ. ಆ ನಂತರ ಆಕೆಯನ್ನು ಕರೆದು, "ಏನೂ ತೊಂದರೆಯಾಗುವುದಿಲ್ಲಾ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ." ಎಂದು ಹೇಳಿ ಕಳುಹಿಸುತ್ತಾರೆ. ಹಿಂದಿರುಗಿದ ಆ ಭಕ್ತೆ ವೈದ್ಯರ ಬಳಿ ಹೋಗಿ ತೋರಿಸಿದಾಗ, ಸ್ಕ್ಯಾನಿಂಗ್ ಮಾಡಿಸಿ "ನಿಮಗೀಗ ಯಾವುದೇ ತೊಂದರೆ ಇಲ್ಲ" ಎಂದು ಹೇಳಿ ಆಶ್ಚರ್ಯಪಡುತ್ತಾರೆ. ಈ ಪ್ರಸಂಗದಲ್ಲಿ ಯಾವುದೇ ರೀತಿಯ ಪವಾಡ ನೆಡೆದಿಲ್ಲ. ಯಾವ ಯಾವ ಸಮಸ್ಯೆಗಳಿಗೆ ಯಾವ ಯಾವ ರೀತಿಯ ಪರಿಹಾರ ಚಿಕಿತ್ಸೆ ನೀಡಬೇಕೆಂಬುದನ್ನು ತಿಳಿದು, ಭಕ್ತರ ಬವಣೆಗಳನ್ನು ಪರಿಹರಿಸಿದವರು ಅವಧೂತರು.
Wednesday, November 22, 2017
ಗುರುನಾಥ ಗಾನಾಮೃತ
ಬಾರಿ ಬಾರಿಗೂ ನಿನ್ನ ಭಜಿಸುವೆ ಬಾರೈ
ರಚನೆ: ಅಂಬಾಸುತ
ಬಾರಿ ಬಾರಿಗೂ ನಿನ್ನ ಭಜಿಸುವೆ ಬಾರೈ
ಹೇ ಅವಧೂತಾ ನಿನ್ನ ವದನ ತೋರೈ |ಪ||
ಎಷ್ಟೋ ಜನುಮದಾ ಪುಣ್ಯಾ ನೀ ದೊರಕಿರುವೇ
ಮನದಿಷ್ಟ ಸಲಿಸೋ ಪ್ರಭುವೇ ನೀನೆನ್ನೊಡನಿರುವೇ
ನಿರ್ಗುಣರೂಪ ಅರಿಯದಾ ಮೂಢನೋ ನಾನೂ
ಸಗುಣನಾಗಿ ಬಾರೈ ಕಂದನಾ ಸಲಹೈ ||೧||
ನೀ ಸಾಕಾರಾ ನೀ ನಿರ್ವಿಕಾರಾ
ನೀ ಓಂಕಾರಾ ನೀ ಶಾಸ್ತ್ರಸಾರಾ
ನಾನೆಂಬುದ ಅಳಿಸೋ ನೀ ಘನ್ನಮಹಿಮಾ
ಗುರುವಾಗಿ ಬಾರೈ ಶಿಷ್ಯನ ಪೊರಯೈ ||೨||
ಕಾರುಣ್ಯಮೂರುತಿ ನೀ ಗುರುರಾಯಾ
ಕತ್ತಲ ಕಳೆಯೇ ನೀನೇ ಸೂರ್ಯಾ
ಎನ್ನ ಮನಮಂದಿರದೀ ನೀ ವಿರಾಜಿಸೋ
ತಾಯಾಗಿ ಬಾರೈ ಅಮೃತವನುಣಿಸೈ ||೩||
ಸಖರಾಯಪುರವರಾಧೀಶ್ವರಾ
ಅಂಬಾಸುತನಾ ಕುಲಸ್ವಾಮಿ ನೀನೀಶ್ವರಾ
ಅಡಿಗಡಿಗೆರಗುವೇ ಈ ಮೊರೆಯ ಆಲಿಸೈ
ಸಖನಾಗಿ ಬಾರೈ ಸರಿದಾರಿ ತೋರೈ ||೪||
ಅವಧೂತ - ಅಸಮಾನ್ಯ - ಅಪ್ರಮೇಯ - ೧೨
ಸಂಗ್ರಹ : ಅಂಬಾಸುತ
ವಿದೇಹ ಜೀವಿಗಳ ಇರುವಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶಿಷ್ಯರಿಗೆ ತಮ್ಮ ನಿವಾಸದಲ್ಲೇ ವಿದೇಹ ಜೀವಿಗಳನ್ನು ತೋರಿಸಿ, " ಅತಿಯಾದ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡು ಅವುಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದ ಜೀವಿಗಳಿಗೆ ಮರಣಾ ನಂತರ ಈ ಪರಿಸ್ಥಿತಿ ಬರುತ್ತದೆ, ಹಾಗಾಗಿ ನಾವುಗಳು ಜೀವನದಲ್ಲಿ ಅತಿಯಾದ ಆಸೆಗಳನ್ನು ಹೊಂದಿರಬಾರದು. ಬಂದದ್ದು ನಮದು ಬಾರದ್ದು ಅನ್ಯರದು ಎಂದು ಸಮಚಿತ್ತದಿಂದಿರಬೇಕು" ಎಂದು ಮನದಟ್ಟು ಮಾಡಿಸಿದರು- ಅವಧೂತರು.
Tuesday, November 21, 2017
ಗುರುನಾಥ ಸ್ತೋತ್ರ ಕುಸುಮಾಂಜಲಿ
ಸಂಕಟೇ ವಾಥ ಸಂತೋಷೇ
ತ್ವದನ್ಯೋ ಕೋತ್ರ ಮೇ ಬಂಧುಃ ।
ಸರ್ವಂ ಚ ತ್ವದಧೀನೋತ್ರ
ರಕ್ಷ ಚ ಮಾಂ ಕೃಪಾಸಿಂಧೋ ।।
ಸಂಕಟದ ಸನ್ನಿವೇಶದಲ್ಲಾಗಲಿ ಸಂತೋಷದ ಸನ್ನಿವೇಶದಲ್ಲಿಯಾಗಲೀ ಹೇ ಸದ್ಗುರುವೇ ನನಗೆ ನೀನಲ್ಲದೆ ಬೇರೆ ಯಾರು ಬಂಧುವಿದ್ದಾರು..ಸಕಲವೂ ನಿನ್ನ ಸಂಕಲ್ಪದಂತೆ ನಡೆಯುತ್ತಿದೆ..ಹೇ ಕೃಪಾಸಿಂಧುವೇ ರಕ್ಷಿಸು ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಅವಧೂತ - ಅಸಮಾನ್ಯ - ಅಪ್ರಮೇಯ - ೧೦
ಸಂಗ್ರಹ : ಅಂಬಾಸುತ
ಗುರುನಿವಾಸದಲ್ಲಿ ಹಿರಿಯರೊಬ್ಬರ ಶ್ರಾದ್ಧದ ದಿನ ಮಡಿಯಲ್ಲಿ ಅಡಿಗೆ ಮಾಡುತ್ತಿದ್ದವರು ಅನ್ಯರ ವಿಚಾರದ ಬಗ್ಗೆ ಮಾತನಾಡಿಕೊಂಡು ಅಡಿಗೆ ಮಾಡುತ್ತಲಿರಲು, " ಮಾಡಿದ ಅಡಿಗೆ ಎಲ್ಲಾ ಮೈಲಿಗೆಯಾಯಿತು, ಅನ್ಯರ ವಿಚಾರವೇ ಮೈಲಿಗೆ, ಈಗ ಅದನ್ನು ಹೊರಕ್ಕೆ ಹಾಕಿ ದೈವನಾಮಸ್ಮರಣೆಯೊಂದಿಗೆ ಅಡಿಗೆಯನ್ನು ಮಾಡಿ" ಎಂದು ಖಡಾಖಂಡಿತವಾಗಿ ನುಡಿದರು - ಅವಧೂತರು.
ಅವಧೂತ - ಅಸಮಾನ್ಯ - ಅಪ್ರಮೇಯ - ೯
ಸಂಗ್ರಹ : ಅಂಬಾಸುತ
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಾತ್ವಿಕ ಗುರುಭಕ್ತ ದಂಪತಿಗಳು ಯುಗಾದಿ ಹಬ್ಬದ ಹಿಂದಿನ ದಿನ ಗುರುನಿವಾಸಕ್ಕೆ ತೆರಳಿ, ಗುರುದರ್ಶನ ಮುಗಿಸಿ ಹೊರಡುವಾಗ, ಯಾವ ವಿಚಾರವನ್ನೂ ಹೇಳಿ ಕೇಳಿ ಮಾಡದೆ ಮಾರನೇ ದಿನ ಹಬ್ಬಕ್ಕೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಅಂದರೆ ಮಾವಿನ ಎಲೆ, ಬೇವಿನ ಎಲೆ, ರಂಗೋಲಿ ಹಾಗು ಹಬ್ಬದಡಿಗೆಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಜೊತೆಗಿರಿಸಿ ಕಾರಿನಲ್ಲಿ ಕಳುಹಿಸಿಕೊಟ್ಟರು - ಅವಧೂತರು.
ಅವಧೂತ - ಅಸಮಾನ್ಯ - ಅಪ್ರಮೇಯ - ೮
ಸಂಗ್ರಹ : ಅಂಬಾಸುತ
ಗುರುಗಳು ದೇಹ ತ್ಯಾಗ ಮಾಡಿದ ನಂತರ, ಅವರ ಬಗ್ಗೆ ತಿಳಿದು ನೀವೇ ನನ್ನ ಸದ್ಗುರು ಎಂದು ಬೇಡಿ, ದರ್ಶನಕ್ಕಾಗಿ ಹಾತೊರೆದು ಕಣ್ಣಿರು ಹಾಕಿದ ಯುವಕನಿಗೆ ಸ್ವಪ್ನದಲ್ಲಿ ದರ್ಶನ ನೀಡಿ," ನಾನೇ ನಿನ್ನ ಸದ್ಗುರು, ನೀನೇನೂ ಬೇಡಬೇಕಾಗಿಲ್ಲ, ಯಾವ ಯಾವ ಸಂಧರ್ಭದಲ್ಲಿ ಏನೇನು ನೀಡಬೇಕೋ ಅದೆಲ್ಲವನ್ನೂ ನಾನೇ ನೀಡುತ್ತೇನೆ, ಗುರುಗಳನ್ನು ಕಂಡ ತಕ್ಷಣ ಅವರ ಪಾದಗಳಿಗೆ ನಮಸ್ಕರಿಸಬೇಕು" ಎಂದು ಹೇಳಿ ತಮ್ಮ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಲು ತಿಳಿಸಿ, ಆ ವರ್ಣಿಸಲಾಗದ ಪಾದ ಸ್ಪರ್ಶದ ಸುಖ ನೀಡಿ ಹರಸಿದರು - ಅವಧೂತರು.
ಅವಧೂತ - ಅಸಮಾನ್ಯ - ಅಪ್ರಮೇಯ - ೭
ಸಂಗ್ರಹ : ಅಂಬಾಸುತ
ಸಕಲ ಗ್ರಹ ಬಲ ನೀನೇ ಸದ್ಗುರುನಾಥಾ ಎಂದು ನಂಬಿ ಗುರು ನಿವಾಸಕ್ಕೆ ತೆರಳಿದ್ದ ವಕೀಲರೊಬ್ಬರಿಗೆ, ಒಂದು ಫುಟ್ಬಾಲ್ ಚೆಂಡನ್ನು ನೀಡಿ, "ನಿಗದಿತ ದಿನದವರೆಗೆ ನಿಮ್ಮ ಮನೆಯಲ್ಲಿ ಯಾರೂ ಮುಟ್ಟದ ಜಾಗದಲ್ಲಿ ಇಟ್ಟಿರಿ", ಎಂದು ಹೇಳಿ, ಆ ವಕೀಲರಿಗಿದ್ದ ಸಾಡೇಸಾತ್ ನ ಎಲ್ಲಾ ದುಷ್ಪ್ರಭಾವಗಳನ್ನು ಆ ಚೆಂಡಿನ ಕಡೆ ತಿರುಗಿಸಿ, ಆ ವಕೀಲರನ್ನು ರಕ್ಷಿಸಿದರು - ಅವಧೂತರು.
Subscribe to:
Posts (Atom)