ಒಟ್ಟು ನೋಟಗಳು

Tuesday, December 26, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೨೨
ಸಂಗ್ರಹ : ಅಂಬಾಸುತ 

ಸನ್ಯಾಸಾಶ್ರಮಕ್ಕೆ ತೆರಳಲು ಅನುಮತಿ ಕೇಳಲು ಬಂದ ಯುವ ಭಕ್ತರೊಬ್ಬರನ್ನು ಮುಂದಕ್ಕೆ ಕರೆದು ಅವರಿಗೆ ಏನನ್ನೂ ಮಾತನಾಡಲು ಬಿಡದೆ ಅಲ್ಲಿಗೆ ಬಂದ ಬೇರೆ ದಂಪತಿಗಳಿಂದ ಆ ಯುವಭಕ್ತನಿಗೆ ಪಾದಪೂಜೆ ಆರತಿಗಳನ್ನು ಮಾಡಿಸಿ," ಮುಂದೆ ಇದೆಲ್ಲಾ ನೆಡೆಯುತ್ತಲ್ಲಾ ಅದಕ್ಕೆ ಅಭ್ಯಾಸ ಮಾಡ್ಕೊಬೇಕಲ್ವೇನಪ್ಪಾ, ನಿನ್ನ ಸಾಧನೆ ಹೀಗೆಯೇ ಮುಂದುವರೆಯಲಿ" ಎಂದು ಹೇಳಿ ಕಳುಹಿಸಿದವರು, - ಅವಧೂತರು

Monday, December 25, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಗುರುಣಾ ಯತ್ ಜ್ಞಾನದೀಪಂ
ತೇಜೋರೂಪಂ ಪ್ರಜ್ವಾಲಿತಂ |
ದೂರಯತ್ಜ್ಞಾನತಿಮಿರಂ
ಪ್ರಕಾಶಯತಿ ಸುಜ್ಞಾನಮ್ ||

ಸದ್ಗುರುವಿನಿಂದ ಯಾವ ಅರಿವು  ರೂಪವಾದ ತೇಜೋಪೂರ್ಣವೆಂಬ ಜ್ಞಾನದೀಪವು ಬೆಳಗಿದೆಯೋ ಅದು ನಮ್ಮ ಮನದ ಅಜ್ಞಾನರೂಪವಾದ ಕತ್ತಲನ್ನು ದೂರಮಾಡಿ ಸುಜ್ಞಾನವನ್ನು ಬೆಳಗಿಸುತ್ತದೆ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಬ್ಧೌ ಸಂತಿ ರತ್ನಮುಕ್ತಾಃ
ಮೀನಕೂರ್ಮಜಲಚರಾಃ |
ಸರ್ವೇಷಾಂ  ಆಶ್ರಯದಾತಾ
ಸಂತರಿವ ಚ ಗಂಭೀರಃ ||


ಸಮುದ್ರ ರಾಜನು  ಹೇಗೆ ಮುತ್ತು ರತ್ನ ಹವಳಗಳಿಗೆ ಆಶ್ರಯದಾತನೋ ಹಾಗಯೇ ಕ್ರೂರ ಜಂತುಗಳಾದ ಮೊಸಳೆ ಮೀನು ಆಮೆಗಳಿಗೂ ಆಶ್ರಯದಾತನಾಗಿದ್ದಾನೆ..ಹೀಗೆ ಶರಣಾಗತನು ಪೊರೆವ ಸತ್ಪುರುಷರಂತೆ ಸಾಗರನು ಮಹಾಗಂಭೀರನಾಗಿದ್ದಾನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Sunday, December 24, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೨೧
ಸಂಗ್ರಹ : ಅಂಬಾಸುತ 

ಪ್ರತಿನಿತ್ಯ ಧ್ಯಾನವವನ್ನು ಮಾಡುವ ಮೂಲಕ ತನ್ನನ್ನು ತಾನು ಸಾಧನೆಯಲ್ಲಿ ತೊಡಗಿಸಿಕೊಂಡ ಮಾತೆಯೊಬ್ಬರ ಮನಸ್ಸಿನಲ್ಲಿ ನನ್ನ ಸಾಧನೆ ನನ್ನೊಳಗೇ ಇರುವುದು ಬೇಡ, ಇದರಿಂದ ನಾಲ್ಕಾರು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದುಕೊಂಡು ಧ್ಯಾನಕ್ಕೆ ಕುಳಿತ ದಿನವೇ, "ಈ ನಿನ್ನ ಸಾಧನೆ ನಿನ್ನ ಆತ್ಮೋದ್ಧಾರಕ್ಕೇ ವಿನಹಃ ಮತ್ತೊಬ್ಬರ ಸಮಸ್ಯೆಯ ಪರಿಹಾರಕ್ಕಲ್ಲ" ಎಂದು ಎಚ್ಚರಿಸಿದವರು - ಅವಧೂತರು.
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಂಧವಿಶ್ವಾಸೇ ಚಿತ್ತಮ್
ನಾಶಯತಿ ಚ ಸನ್ಮತಿಮ್ |
ಗುರುಪಾದಾಂಬುಜೇ ಚಿತ್ತಮ್
ತಾರಯತಿ ಚ ಭವಾಬ್ಧಿಮ್ ||


ಮನಸ್ಸು ಅಂಧಾನುಕರಣೆಯಲ್ಲಿ ತೊಡಗಿದರೆ ಅದು ನಮ್ಮಲ್ಲಿನ ಸನ್ಮತಿಯನ್ನು ನಾಶಪಡಿಸುತ್ತದೆ...ಗುರುಪಾದಕಮಲದಲ್ಲಿ ಮನವು ಲೀನವಾದರೆ ಅದು ಭವಸಾಗರವನ್ನು ದಾಟಿಸುತ್ತದೆ ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Thursday, December 21, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೨೦
ಸಂಗ್ರಹ : ಅಂಬಾಸುತ 

ಲೌಕಿಕ ಜಂಜಾಟಗಳಿಂದ ಬೇಸತ್ತು ಹೋಗಿ ಸನ್ಯಾಸಶ್ರಮ ಸ್ವೀಕಾರ ಮಾಡಲು ಅಪ್ಪಣೆ ಕೇಳಲು ಹೋದ ಯುವಕನಿಗೆ "ಏನಯ್ಯ ಸನ್ಯಾಸ ತಗೊಬೇಕು ಅಂತಿದೀಯಾ, ತಗಳೋಕೆ ಸನ್ಯಾಸ ಅಂದ್ರೆ ಏನು ಅನ್ಕೊಂಡಿದ್ದೀಯಾ, ಸನ್ಯಾಸ ಅಂದ್ರೆ ಎಲ್ಲವನ್ನೂ ಬಿಡೋದು ಕಣಯ್ಯಾ, ಅಲ್ಲಿ ಮನಸ್ಸಿಗೆ ಖಾವಿ ಹಾಕೋಬೇಕು, ಮೈಗಲ್ಲ, ಆ ಪಕ್ವತೆ ನಿನಗಿನ್ನೂ ಬಂದಿಲ್ಲ, ಬಂದಾಗ ನಾನೇ ಹೇಳ್ತೀನಿ ಈಗ ಮನೆಗೆ ಹೋಗು" ಎಂದು ಹೇಳಿ ಕಳುಹಿಸಿದವರು - ಅವಧೂತರು

Sunday, December 17, 2017

ಗುರುನಾಥ ಗಾನಾಮೃತ 
ಓಡೋಡಿ ಬರುವನು ಎನ್ನ ಸದ್ಗುರುನಾಥನು 
ರಚನೆ: ಅಂಬಾಸುತ 


ಓಡೋಡಿ ಬರುವನು ಎನ್ನ ಸದ್ಗುರುನಾಥನು 
ಏಕ ಮನದಲಿ ಗುರುವೆ ಎಂದು 
ಕೂಗಿ ಕರೆದರೆ ಕ್ಷಣವು ನಿಲ್ಲದೇ ||ಪ||

ಕಷ್ಟ ಸಮಯದಿ ಇಷ್ಟರೂಪನ
ಇಂತಿಷ್ಟು ಬೇಡಿಕೊಳಲು,
ಕಂದ ನೀನು ತಂದೆ ನಾನು 
ಕುಂದನಳಿಸುವೆ ಇಂದೇ ಎಂದು 
ಮಗುವ ಮೊರೆಯಾ 
ಕೇಳಿ ಬಂದಾ ಹರಿಯಂತೇ ಗುರುರಾಯ
ಕಣ್ಣ ಮುಂದೆ ತಾ ನಿಲ್ಲುವನು
ಕಂಬನಿಯಾ ಒರೆಸುತ ಸಲಹುವನು ||೧||

ಭಾವವೊಂದು ಶುದ್ಧವಿರಲು 
ಭಕ್ತಿಯಲ್ಲೇ ಮುಳುಗಿರಲು 
ಭೇಧ ಅಳಿಸುವ ಗುರುವನ್ನೇ
ಆತ್ಮದೊಳು ನಿಲ್ಲಿಸಿರಲು 
ಬಾಲೆ ಪ್ರೀತಿಗೆ ಸೋತು ಉಂಡಾ
ಹರನಂತೆ ಗುರುದೇವಾ
ಮನದಿಷ್ಟವೆಲ್ಲವ ನೀಡುವನು 
ಮನಮನೆಯಾ ತಮವಾ ಕಳೆಯುವನು ||೨||

ಸಖರಾಯಪುರಾಧೀಶನು 
ಸುಖವ ನೀಡುವ ಮಹನೀಯನು 
ಶ್ರೀವೇಂಕಟಾಚಲ ಎಂಬ 
ನಾಮವ ಧರಿಸಿದವನು 
ಅಂಬಾಸುತನಾ ಅನವರತ
ಪೊರೆಯುವವನು 
ಆದ್ಯಂತ ರಹಿತನಾದ
ನಿಜ ಅವಧೂತನು  ||೩||

Saturday, December 16, 2017

ಗುರುನಾಥ ಗಾನಾಮೃತ 
ಜಯ ಜಯ ಗುರುನಾಥ ಜಯ ಸದ್ಗುರುನಾಥ
ರಚನೆ: ಅಂಬಾಸುತ 


ಜಯ ಜಯ ಗುರುನಾಥ ಜಯ ಸದ್ಗುರುನಾಥ
ಅಮಿತವರದಾತ ನಿಜ ಆನಂದ ನಿಲಯಾ ||ಪ||

ಮಾತಿನಲೇ ಮನಶುದ್ಧಗೊಳಿಸಿದೇ ಹರಸಿದೇ
ಮಾರಹರನಾ ರೂಪನಾಗಿ ನೀ ಕಂಡಿಹೇ
ಎನಿತು ಜನುಮದ ಪುಣ್ಯ ನೀನೆನಗೆ ದೊರಕಿಹೇ
ನಿನ್ನ ಸ್ತುತಿಸಲು ಪದ ಸಿಗದೆ ನಾ ಸೋತಿಹೇ ||೧||

ವರವೊಂದ ಬೇಡುವೆನು ನೀನೀಡಬೇಕಯ್ಯಾ
ಸಗುಣನಾಗೀ ಎನ್ನ ಮುಂದೆ ನೀ ಬಾರಯ್ಯಾ
ತಪ್ಪು ಒಪ್ಪುಗಳಾ ತಕ್ಕಡಿಯು ಈಗೇಕೋ
ಒಪ್ಪಮನದಲಿ ಕರೆವೆ ನೀನೋಡಿ ಬಾರಯ್ಯಾ ||೨||

ಕೊನೆಯುಸಿರೊಳೂ ನಿನ್ನ ನಾಮ ಹಸಿರಾಗಿರಲೀ
ಕಡೆ ನೋಟ ನಿನ್ನಾ ನಗುಮೊಗವೆ ಆಗಿರಲೀ
ನಿನ್ನ ಹಂಬಲದಿಂದ ಮತ್ತೆ ಹುಟ್ಟಿ ಬರುವೇ
ನಿನ್ನ ಪಾದದೊಳಿರೊ ಸುಖ ಮುಕ್ತಿಯೊಳಗೆಲ್ಲಯ್ಯಾ ||೩||

ಸಖರಾಯಪುರಾಧೀಶಾ ಶ್ರೀ ಅವಧೂತಾ
ಅಂಬಾಸುತನ ಸರ್ವಸ್ವವೂ ನೀನಯ್ಯಾ
ಕಾಡಿಬೇಡುವೆನಯ್ಯ ಕನಿಕರಿಸೊ ಮಹನೀಯಾ
ಈ ಆತ್ಮಫಲವ ಅರ್ಪಿಸಿಹೆ ಸ್ವೀಕರಿಸಯ್ಯಾ ||೪||
ಅವಧೂತ - ಅಸಮಾನ್ಯ - ಅಪ್ರಮೇಯ - ೧೯
ಸಂಗ್ರಹ : ಅಂಬಾಸುತ 

ಸಾತ್ವಿಕ ಕುಟುಂಬವೊಂದನ್ನು ಗುರುದರ್ಶನಕ್ಕೆ ಕರೆತಂದ ವ್ಯಕ್ತಿ ಹಿಂದಿನ ದಿನ ಮದ್ಯಪಾನ ಮಾಡಿರುತ್ತಾನೆ. ಆದರೆ ಆ ಕುಟುಂಬಕ್ಕೆ ಈ ವಿಚಾರ ತಿಳಿದಿರುವುದಿಲ್ಲ. ಅವರೆಲ್ಲರೂ ಇನ್ನೇನು ಗುರುನಿವಾಸದ ಒಳಗೆ ಹೋಗಬೇಕು ಎನ್ನುವಷ್ಟರಲ್ಲಿ ಒಳಗಿನಿಂದ, "ಕುಡಿದು ಬರುವವರಿಗೆಲ್ಲ ಈ ಮನೆಲಿ ಜಾಗ ಇಲ್ಲ, ನಡಿ ಹೊರಕ್ಕೆ" ಎಂಬ ಧ್ವನಿ ಕೇಳಿ ಬರುತ್ತದೆ. ಇವರುಗಳು ಇಂದು ಗುರುದರ್ಶನದ ಭಾಗ್ಯವಿಲ್ಲವೆಂದು ಹೊರಡಲು ಅನುವಾದಾಗ, ಗುರುನಿವಾಸದ ಒಳಗಿನಿಂದ ಬಂದ ವ್ಯಕ್ತಿಯೊಬ್ಬರು, ಆ ಮದ್ಯಪಾನ ಮಾಡಿದ ವ್ಯಕ್ತಿಯನ್ನು ಬಿಟ್ಟು ನೀವೆಲ್ಲರೂ ಗುರುದರ್ಶನಕ್ಕೆ ಬರಬೇಕೆಂದು ತಿಳಿಸುತ್ತಾರೆ. ಮತ್ತು ಅವರೆಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಆಶೀರ್ವದಿಸುತ್ತಾರೆ‌. ಹೀಗೆ ದುಷ್ಟತನವನ್ನು ದೂರಿರಿಸಿ ಸಾತ್ವಿಕರನ್ನು ಪರಿಪಾಲಿಸಿದವರು - ಅವಧೂತರು.

Friday, December 15, 2017

ಗುರುನಾಥ ಗಾನಾಮೃತ 
ಗುರುನಾಥ ಅವಧೂತ ಎನ್ನೋ
ರಚನೆ: ಅಂಬಾಸುತ 


ಗುರುನಾಥ ಅವಧೂತ ಎನ್ನೋ
ಈ ನಾಲ್ಕಕ್ಷರದಾ ಮಹಿಮೆಯ ತಿಳಿಯೋ ||ಪ||

ಗು ಎನೆ ಗುರುತರ ಭಾಗ್ಯವ ಕೊಡುವಾ
ರು ಎನೆ ರುಜಿನಗಳೆಲ್ಲವಾ ದೂಡುವಾ
ನಾ ಎನೆ ನಾನಿಹೆ ನಿಮ್ಮೊಂದಿಗೆ ಎನುವಾ
ಥ ಎನೆ ತಾರತಮ್ಯವ ಅಳಿಸುವಾ ||೧||

ಅ ಎನೆ ಅಮೃತತ್ವವ ತಾ ನೀಡುವಾ
ವ ಎನೆ ವರ್ಣನಾತೀತ ತಾನಾಗಿಹಾ
ದೂ ಎನೆ ದೂರಿರಿಸುವ ದುಷ್ಟತನವಾ
ತ ಎನೆ ತನ್ನಯ ಭಕ್ತಿಯಾ ನೀಡುವಾ ||೨||

ಕಲ್ಪನೆಗೆ ನಿಲುಕದವನವನೂ
ಕಣ್ಮಂದೆಯೇ ತಾ ನಗುತಿಹನೂ
ಅರಿವಿನ ದೊರೆ ಈ ಗುರುನಾಥನೂ
ಅಂಬಾಸುತನಾ ಸಲಹುತಲಿರುವಾ ಅವಧೂತನೂ ||೩||
ಅವಧೂತ - ಅಸಮಾನ್ಯ - ಅಪ್ರಮೇಯ - ೧೮
ಸಂಗ್ರಹ : ಅಂಬಾಸುತ 


ಗುರುದರ್ಶನಕ್ಕೆಂದು ಗುರುನಿವಾಸಕ್ಕೆ ಬಂದ ದಂಪತಿಗಳು ಕಾರಣಾಂತರಗಳಿಂದ ಗುರುದರ್ಶನ ಅಸಾಧ್ಯ ಎಂದು ತಿಳಿದು ಹೊರಗಡೆಯೇ ಕುಳಿತು ಮನಸ್ಸಿನಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ಸ್ತೋತ್ರ ಪಠಣ ಮಾಡುತ್ತಿರಲಾಗಿ , ಗುರು ನಿವಾಸದ ಒಳಗಿಂದ ಸಿಂಹ ಗರ್ಜನೆಯಂತೆ," ನನ್ನ ದರ್ಶನ ಬೇಕು ಎಂದು ಶ್ರೀಧರಸ್ವಾಮಿಗಳ ಸ್ಮರಣೆ ಮಾಡ್ತಿದ್ದೀಯಾ?, ಅದೇಕೆ ಹಾಗೆ? ಸರಿ ಈಗ ಒಳಗೆ ಬನ್ನಿ, ನಿನಗೆ ಕೆಳಗೆ ಕೂರಲು ಆಗೋಲ್ಲ ಅಲ್ವೇ, ಈ ಕುರ್ಚಿಮೇಲೆ ಕುಳಿತಿಕೋ" ಎಂದು ಹೇಳಿ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಆಶೀರ್ವದಿಸಿದವರು - ಅವಧೂತರು

Thursday, December 14, 2017

ಗುರುನಾಥ ಗಾನಾಮೃತ 
ದತ್ತನ ಕಂಡೀರಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ದತ್ತನ ಕಂಡೀರಾ
ಶ್ರೀಗುರುದತ್ತನ ಕಂಡೀರಾ
ದತ್ತನ ನೋಡೀರಾ 
ಸದ್ಗುರುದತ್ತನ ನೋಡೀರಾ ।। ಪ ।।

ಅಮಿತಾನಂದದಾಯಕನ
ಅಜಹರಿಹರರೂಪನ
ಅಮರಜನಪೂಜ್ಯನ
ಅನವರತರಕ್ಷಿಪನ !! ೧ !!

ತ್ರಿಗುಣಾತೀತನ
ತ್ರಿಮೂರ್ತಿರೂಪನ
ತ್ರಿವಿಕ್ರಮನೆನಿಸಿದ
ತ್ರಿಜಗದ್ವಂದ್ಯನ !! ೨ !!

ಸಚ್ಚಿತ್ಸುಖದಾತನ
ಸ್ವಾತ್ಮಾನಂದದಾಯಕನ
ಸಕಲರಹಸ್ಯವೇದ್ಯನ
ಸಕಲವೇದಸಾರನ !! ೩ !!

ತಾಪನಿವಾರಕನ
ತಾಪತ್ರಯವಾರಕನ
ತಪೋನಿಧಿಯ
ತಿಮಿರನಾಶಕನ !! ೪ !!

ನಿಗಮವೇದ್ಯನ
ನಿರ್ಗುಣನಿರಹಂಕಾರಿ
ನಿತ್ಯನಿರಂತರನ
ನಿರುತಪೊರೆವವನ !! ೫ !!

ಭಕ್ತಜನಹೃನ್ನಿವಾಸನ
ಭಾವಿಕಜನಪ್ರಿಯನ
ಭವಸಾಗರದಾಟಿಸುವ
ಬುಧಜನವಂದಿತನ !! ೬  !!