ಒಟ್ಟು ನೋಟಗಳು

Sunday, March 18, 2018

ಗುರುನಾಥ ಗಾನಾಮೃತ 
ಅಪರಾಧ ಎನದಲ್ಲವೋ ಅಪಮಾನ ಎನಗೇತಕೋ
ರಚನೆ: ಅಂಬಾಸುತ 

ಅಪರಾಧ ಎನದಲ್ಲವೋ ಅಪಮಾನ ಎನಗೇತಕೋ
ಅಪರೋಕ್ಷ ಜ್ಞಾನಿ ಸದ್ಗುರು ನಿನಗಿದು ತಿಳಿದೇನೋ ||ಪ||

ಮೌನ ಮುತ್ತೆಂದು ನೀ ಹೇಳಿದಂತೆ ನಾನಿರುವೇ
ಮಾತನಾಡದೆ ನಾನೀಗಪರಾಧಿಯಾಗಿಹೆ 
ಮುಂದೆ ಮಾತಾಡಲು ಹಿಂದೇಕೆ ನುಡಿಯಲಿಲ್ಲ
ಅಪರಾಧ ನಿನದು ಅಪರಾಧಿ ನಿನೆನುತಿಹರೋ ||೧||

ಸತ್ಯಸುಳ್ಳಿನ ತಕ್ಕಡಿ ಮೇಲೆ ಕೆಳಗಾಗುತಿಹುದೊ
ಧರ್ಮ ಅಧರ್ಮ ಹಾದಿ ಮಂಜಾಗಿಹುದೊ
ಧ್ವನಿ ಕೇಳರೋ ಎನ್ನ ಕಟಕಟೆಯೊಳಗಿರಿಸಿಹರೊ
ತಪ್ಪಿತಸ್ಥ ಇವನೆಂದು ತೀರ್ಪಿತ್ತಿಹರೋ ||೨||

ಭಕ್ತಪಾಲಕ ಗುರುದೇವಾ ಅವಧೂತ
ಕೇಳೋ ಅಂಬಾಸುತನಾ ಅಂತರಂಗದ ಮಾತ
ತಿಳಿತಿಳಿದು ನಾನೇನು ಅಪರಾಧ ಮಾಡಿಲ್ಲವೋ
ಈ ಅಪಮಾನ ಸಹಿಸುವ ಮನವೂ ಎನಗಿಲ್ಲವೋ ||೩||
ಗುರುನಾಥ ಗಾನಾಮೃತ 
ಜಯ ಜಯವೆನ್ನಿ ಸದ್ಗುರುವರಗೆ ಶ್ರೀಗುರುವರಗೆ
ರಚನೆ: ಅಂಬಾಸುತ 

ಜಯ ಜಯವೆನ್ನಿ ಸದ್ಗುರುವರಗೆ ಶ್ರೀಗುರುವರಗೆ
ಸಚ್ಚಿದಾನಂದ ಅವಧೂತಗೆ ಜಯ ಜಯಾ ||ಪ||

ಪರಮನೆನಿಸಿ ಪಾಪಿಗಳನೂ ಉದ್ಧರಿಸೀ
ಪರಮಾತ್ಮನೆಡೆಗೇ ಕರೆದೊಯ್ದಾ ಪ್ರಭುವಿಗೆ ಜಯ ಜಯಾ ||೧||

ಆಶ್ರಮದಾ ಶ್ರಮ ತ್ಯಜಿಸಿ ಅರಿವಿನದೊರೆ ಎನಿಸೀ
ಗಾಡಾಂಧಕಾರವಾ ಕಳೆಯುವ ದೇವನಿಗೆ ಜಯ ಜಯಾ ||೨||

ಆರನು ಮೆಟ್ಟಿ ಮೂರನು ಏರಿ ನಿಂತವಗೇ
ಅತಿಷಯ ಪ್ರೇಮದಿ ಭಕ್ತರ ಸಲಹುವ ನಿಜಗುರುವಿಗೆ ಜಯ ಜಯಾ ||೩||

ಬೋಧರೂಪ ಸುಜ್ಞಾನವ ನೀಡುವಗೇ
ಭವದಾ ಬಾಧೆಯ ಹರಿಸೋ ಭಗವಂತನೀಗೆ ಜಯ ಜಯಾ ||೪||

ವಿತ್ತದಾಸೆಯ ಅಳಿಸಿ ಚಿತ್ತ ಶುದ್ದಿಯ ಮಾಡೀ
ನಿಜಸಂತರ ಸಂಘವಾ ನೀಡುವ ಸದ್ಗುರುವಿಗೆ ಜಯ ಜಯಾ ||೫||

ಸಖರಾಯಪಟ್ಟಣದೊಳು ಸಂತತ ತಾ ನೆಲೆಸೀ
ಅಂಬಾಸುತನಾ ಅನವರತಾ ಪೊರೆವವಗೇ ಜಯ ಜಯಾ ||೬||

Thursday, March 15, 2018

ಗುರುನಾಥ ಗಾನಾಮೃತ 
ಸಖರಾಯಪುರವೆಂಬ ಪುಟ್ಟ ಷಹರಾ
ರಚನೆ: ಅಂಬಾಸುತ 

ಸಖರಾಯಪುರವೆಂಬ ಪುಟ್ಟ ಷಹರಾ
ಅಲ್ಲಿ ಅವಧೂತನೆಂಬ ಒಬ್ಬ ಮಾಯಾಕಾರ
ಅವಧೂತನೆಂದಿಗು ಭಕ್ತಪರಾ
ಅವನ ನಾಮವ ನೆನೆದರೆ ಭವಭಯ ದೂರ ||

ಶುದ್ಧಮನದಿ ಭಜಿಸಿದರೆ ಅವನ ಸಾಕ್ಷಾತ್ಕಾರ
ಅವನ ನುಡಿಗೆ ಬದ್ಧನಾಗೇ ನಮ್ಮ ಆತ್ಮೋದ್ಧಾರ
ಮರೆಯಬೇಡ ಗುರುವೇ ಅಜ ಹರಿ ಹರ
ಮರೆತೆಯಾದರೆ ಬದುಕೇ ಬಹು ದುಸ್ಸಾರ ||

ಪದಪೂಜೆ ಉತ್ತಮ ಪಾದಪೂಜೆ ಅಲ್ಲ
ಭಾವದಿ ಗುರು ಕಾಣು ಭಾವಚಿತ್ರದಲ್ಲಲ್ಲ
ಕೂಡಿ ಹಾಕಬೇಡ ಹಂಚಿ ತಿಂದರೆ ಎಲ್ಲ
ನಾನೊಪ್ಪುವೆನು ಎಂದ ಗುರುವೆ ನಮಗೆ ಎಲ್ಲ ||

ವೇಂಕಟಾಚಲನೆಂಬ ನಾಮ ಧರಿಸಿ ನಿಂತವ
ಶಾರದಾಂಬೆ ಉದರದಿ ಅವತರಿಸಿದವ
ಅಂಬಾಸುತನ ಅಂತರಂಗದಿ ಕುಳಿತವ
ಗುರುನಾಥನೆಂದು ಲೋಕ ವಿಖ್ಯಾತನಾದವ||

Wednesday, March 14, 2018

ಗುರುನಾಥ ಗಾನಾಮೃತ 
ನನ್ನತನವೇನಿಲ್ಲ ನಿನ್ನದಹುದಿಹುದೆಲ್ಲ
ರಚನೆ: ಅಂಬಾಸುತ 

ನನ್ನತನವೇನಿಲ್ಲ ನಿನ್ನದಹುದಿಹುದೆಲ್ಲ
ನಾ ನಿನ್ನ ದಾಸನೋ ಸದ್ಗುರುರಾಯಾ ||ಪ||
ನೀನಿಟ್ಟ ಹಾಗಿರುವೇ ನಿನ್ನನೇ ನಂಬಿರುವೆ
ನೀ ತೋರ್ದ ದಾರಿಯಲ್ಲೇ ನಾ ನೆಡೆವೆನಯ್ಯಾ ||ಅ ಪ||

ಕಣಕಣದಲೂ ನಿನ್ನ ಕಾಣುವಾ ಕಾತುರತೆ
ಎನ್ನಲ್ಲಿ ಮೂಡಿಹುದೋ ಸದ್ಗುರುರಾಯಾ
ನಿನ್ನ ಪದಗಳೇ ಸದಾ ಎನ್ನ ಕಿವಿಯೊಳಗಿರಲಿ
ನಿನ್ನ ಪಾದಧೂಳೆನ್ನ ಶಿರದ ಮೇಲಿರಲಯ್ಯಾ ||೧||

ನಾ ಮಾಡುವಾ ಕರ್ಮ ನಿನಗೆ ಪ್ರಿಯವಾಗಿರಲಿ
ನೀ ಒಪ್ಪುವಂತಿರಲಿ ಸದ್ಗುರುರಾಯಾ
ನಾ ನುಡಿವ ಮಾತಿನಲಿ ನಿನ್ನ ನಾಮ ಬೆರತಿರಲಿ
ನನ್ನುಸುರಿನಾ ಹೆಸರು ನಿನದಾಗಲಯ್ಯಾ ||೨||

ನಿನ್ನುಚ್ಚಿಷ್ಟವೇ ಎನಗೆ ಅನ್ನವಾಗಿರಲಿ
ಪ್ರಾಣಕಾರಣವದೇ ಸದ್ಗುರುರಾಯಾ
ಎನ್ನ ಮೈ ಸೋಕುವ ತಿಳಿಗಾಳಿ ಎಂದಿಗೂ
ನಿನ್ನ ಪಾದಸೇವಕರ ಉಸಿರಾಗಿ ಇರಲಯ್ಯಾ ||೩||

ಸಖರಾಯಪುರವಾಸ ಗುರುನಾಥ ಅವಧೂತಾ
ಸದ್ಭಕ್ತಪಾಲಕ ಸದ್ಗುರುರಾಯಾ
ಅಂಬಾಸುತನ ಈ ಪದ ಪದವು ನಿನಗಯ್ಯಾ
ಒಪ್ಪಿಸುವೆ ಸ್ವೀಕರಿಸೋ ಓ ಎನ್ನ ಜೀಯಾ ||೪||
ಗುರುನಾಥ ಗಾನಾಮೃತ 
ಗುರುನಾಥರ ದರ್ಶನಕೆಂದು ಬಂದೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಗುರುನಾಥರ ದರ್ಶನಕೆಂದು ಬಂದೆ
ಆ ತೇಜೋಮೂರ್ತಿಯ ನೋಡುತ ನಿಂದೆ |
ಭಕ್ತಿಕುಸುಮಗಳ ಅರ್ಪಿಸಲು ತಂದೆ 
ಸಂತೋಷದಿ ಮಾತುಬಾರದೆ ಮೂಕಳಾದೆ ||

ನನ್ನ ಮನದಾಳದ ದನಿಯೇ ನೀನು
ನನ್ನ ಚಿತ್ತದೊಳಗಿನ ಧಣಿಯೇ ನೀನು |
ನನ್ನ ಹೃದಯದೊಳಗಿನ ಮೂರ್ತಿಯೇ ನೀನು 
ನನ್ನ ಅಂತರಂಗದ ಮೌನವೇ ನೀನು || ೧ ||

ಸಮವುಂಟೇ ಇವರ ಹೋಲಿಕೆಗೆ
ಸಾದೃಶ್ಯವುಂಟೇ ಇವರ ಅನುಗ್ರಹಕೆ |
ಶರಣಾಗತರಿಗೆ ಅಭಯನೀಡುವ ಪರಿಗೆ
ಸಾಧಕರಿಗೆ ದಾರಿತೋರುವ ರೀತಿಗೆ || ೨ ||

ಮಾಡುವ  ಕರ್ಮಗಳು ನಿನ್ನುಪಾಸನಾ
ಫಲಗಳೆಲ್ಲವು ನಿನಗೇ ಸಮರ್ಪಣಾ |
ನಿನ್ನ ಪಾದಸೇವಕನೆಂಬ ಭಾವನೆ
ಉಸಿರೊಳು ಬೆರೆತಿರಲೆಂದೇ  ಯಾಚನೆ || ೩ ||

Sunday, March 11, 2018

ಗುರುನಾಥ ಗಾನಾಮೃತ 
ಕಂಡೇ ನಾ ಅವಧೂತನ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಕಂಡೇ ನಾ ಅವಧೂತನ
ಸಖರಾಯಾಧೀಶನಾ |
ಕಂಡೇ ನಾ ಚೈತನ್ಯನ
ಸಚ್ಚಿದಾನಂದನಾ ||

ಅನ್ನವನು ನೀಡುತಿಹ
 ಪರಬ್ರಹ್ಮನಾ
ಜೀವರಲಿ ಬೆರೆತಿಹ
ಉಸಿರಾಗಿಹಾ |
ಹೃದ್ದೀಪವ ಬೆಳಗುತಿಹ
 ಪರಂಜ್ಯೋತಿಯಾ
ಜ್ಞಾನವನು ನೀಡುತಿಹ 
ಮಹಾಜ್ಞಾನಿಯಾ || ೧ ||

ನರನಾರಿಯರಲಿ ಸಮತೆಯಿಹ 
ವಿಶ್ವಬಂಧುವಾ
ಅಣುರೇಣುಗಳಲಿ ಕಾಣುತಿಹ
ವಿಶ್ವವ್ಯಾಪಕನಾ |
ಆರ್ತರ ಕರ್ಮಕಳೆಯುವ
ವಿಶ್ವಪೂಜಿತನಾ
ಯಕ್ಷಕಿನ್ನರರು ಪೂಜಿಸುವ
ವಿಬುಧವಂದಿತನಾ || ೨ ||

ಭಕ್ತರ ಮನಗಳಲಿ ಅಡಗಿಹ
ಸುಪ್ತಚೇತನನಾ 
ಮನದಹಂಕಾರವ ತೊಲಗಿಸೋ
ಸನ್ಮತಿದಾಯಕನಾ |
ಕರುಣಾದೃಷ್ಟಿ ಬೀರುತಿಹ
ಪ್ರೇಮಪೂರ್ಣನಾ 
ಆತ್ಮತತ್ತ್ವವನು ಬೋಧಿಸುವ 
  ಗುರುಪುಂಗವನಾ || ೩ ||

Friday, March 9, 2018

ಗುರುನಾಥ ಗಾನಾಮೃತ 
ಗುರುವ ನಂಬಿರಯ್ಯಾ ಮನದಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಗುರುವ ನಂಬಿರಯ್ಯಾ ಮನದಲಿ
ಗುರುವ ನಂಬಿರಯ್ಯಾ |
ಗುರಿಯ ಸೇರಿರಯ್ಯಾ ಜಗದಲಿ 
ಗುರಿಯ ಸೇರಿರಯ್ಯಾ ||

ಅಂಕೆಯಿಲ್ಲದ ಶುದ್ಧ ದೈವಕೆ
ಶಂಕೆಮಾಡದೆ ನಂಬಿರಯ್ಯಾ |
ಸಂಖ್ಯೆಯಿಲ್ಲದ ಜಪವ ಮಾಡಿ 
ಆತ್ಮನನು ಅರಿಯಿರಯ್ಯಾ || ೧ ||

ಚಿದ್ಘನರೂಪಿ  ಚಿದಾನಂದನ
ಚಿನ್ಮಯಭಾವದಿ ಭಜಿಸಿರಯ್ಯಾ |
ಭವದ ಚಿಂತೆಯ ದೂರಮಾಡಿ 
ಚೈತನ್ಯವ ಹೊಂದಿರಯ್ಯಾ || ೨ ||

ಸಾತ್ವಿಕಭಾವದ ಸತ್ಯಮೂರುತಿಗೆ 
ಸಾಧುಮನದಿ ನಮಿಸಿರಯ್ಯಾ |
ಮೋಹವನಳಿಸುವ ಮಂದಸ್ಮಿತನರ್ಚಿಸಿ
ಮುಕ್ತಿಮಾರ್ಗವ ಕಾಣಿರಯ್ಯಾ || ೩ ||

Tuesday, March 6, 2018

ಗುರುನಾಥ ಗಾನಾಮೃತ 
ಎಷ್ಟು ತಪಸಿನ ಪುಣ್ಯವೋ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಎಷ್ಟು ತಪಸಿನ ಪುಣ್ಯವೋ 
ಯಾವ ಹಿರಿಯರ ಭಾಗ್ಯವೋ  |
 ಲಭಿಸಿತೆಮಗೆ 
ಸದ್ಗುರುವ ಕಾಣುವ ಸೌಭಾಗ್ಯವು ||

ಹೊಸಿಲಲಿ ಗುರುವಿನ  
 ಪಾದಧೂಳಿಯ ಸ್ಪರ್ಷ |
ನೊಸಲಿಗೆ ಹಚ್ಚಿದೊಡೆ      
 ವಿನೂತನ ಹರ್ಷ ||

ಮನೆಯಂಗಳದಲ್ಲಿ ಅವರು   
 ನೆಡೆದಾಡಿದ ಪದಧೂಳಿ |
ಮನದಂಗಳದಲ್ಲಿ ಉಳಿಯಿತು 
ಅಚ್ಚಳಿಯದ ಗುರುಮೂರ್ತಿ ||

ಪ್ರೀತಿಯಿಂದ ಹರಸಿದ
ಅಮೂಲ್ಯ ಸ್ವರಸಿಂಚನ |
ಅನುರಣಿಸಿತ್ತು ಹೃದಯದಲಿ 
ಅಪೂರ್ವ ಸಿರಿಚಂದನ ||


ಪರಿತಪಿಸಿತ್ತು ಮನವು 
ಈ ಅಮೃತಘಳಿಗೆಗೆ  |
ಕರುಣಿಸಿದನು ಗುರುವು
ದೀನರಾ ಈ ಕೋರಿಕೆಗೆ ||

ಮನವನಾವರಿಸಿತ್ತು
ಅನಿರ್ವಚನೀಯ ಭಾವನೆ |
ಮಾತು ಬಾರದೇ ನಮಿಸಿತ್ತು 
ಮನದಲೇ ಗುರುಪಾದಕೆ ||
ಗುರುನಾಥ ಗಾನಾಮೃತ 
ಶರಣಾಗತನಾಗೆಲೆ ಮನವೆ
ರಚನೆ: ಅಂಬಾಸುತ 

ಶರಣಾಗತನಾಗೆಲೆ ಮನವೆ
ಸದ್ಗುರು ಘನ ಸಖರಾಯನಿಗೆ  ||ಪ||

ಶರಣಾಗತರನು ಕಾಯುವನವನು
ಅತಿಷಯ ವರಗಳ ನೀಡುವನು
ವರ್ಣಿಸಲಸದಳ ಮಹಿಮನು ಅವನು
ಸ್ವಾತ್ಮಾರಾಮನು ಸುಂದರನು ||೧||

ಪಾಪರಾಶಿಗಳ ಸುಡುವವನವನು
ಕಣ್ಣೋಟದೇ ಎಮ್ಮ ಉದ್ಧರಿಸುವನು
ಮುತ್ತಿನಂಥಾ ಮಾತುಗಳಾ ಆಡುವವನು
ಮಾತಿಂದಲೇ ಮನಕ್ಲೇಶ ಹರಿಸುವನು ||೨||

ತೋರಿಕೆಗೆ ಸಿಟ್ಟಾಗುವನು
ತನ್ಮಯ ಭಕ್ತಿಗೆ ಒಲಿಯುವನು
ನಿಜಮುಕ್ತಿದಾಯಕನು ಬೋಧರೂಪನು
ಭಕುತರ ಪಾಲಿಗೆ ಭಾಗ್ಯನಿವನು ||೩||

ಗತಿ ಮತಿ ಪಾಲಿಸೊ ಗುರುವೇ ಎನುತಾ
ಸಖರಾಯಪುರವಾಸಿ ಕಾಯೋ ಎನುತಾ
ದಾಸ ಅಂಬಾಸುತನ ದೊರೆಯೇ ಎನುತಾ
ಬಿಡದೇ ಅವನಡಿಯನ್ನೇ ಪಿಡಿಯುತಾ ||೪||
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಜ್ಞಾನಂ ವರ್ತತೇ ಯತ್ರ 
ರಾಜತೇ ಶೋಕಾದಿ ಮೋಹಾಃ |
ಆತ್ಮೈಕತ್ವೇ ಸ್ಥಿತೇ ಯತ್ರ 
ಕುತೋ ಶೋಕಮೋಹಾದಯಃ ||

ಅಜ್ಞಾನವು ಎಲ್ಲಿ ಇರುವುದೋ ಅಲ್ಲಿ ಶೋಕಮೋಹಗಳು ಇರುತ್ತವೆ.ಆದರೆ ಆತ್ಮೈಕತ್ವವು ಎಲ್ಲಿ ಇರುವುದೋ ಅಲ್ಲಿ ಶೋಕಮೋಹಗಳೆಂಬ ಭಾವಗಳ ಉಗಮವಾದರೂ ಹೇಗಾಗುವುದು.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Sunday, March 4, 2018

ಗುರುನಾಥ ಗಾನಾಮೃತ 
ಸುಲಭವಲ್ಲವೀ ಗುರುಸೇವೆ ಮನುಜರಿಗೆಲ್ಲಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಸುಲಭವಲ್ಲವೀ ಗುರುಸೇವೆ ಮನುಜರಿಗೆಲ್ಲಾ
ಸುಲಭವಲ್ಲವೀ ಗುರುಸೇವೆ ಮರುಳರಿಗೆಲ್ಲಾ || 

ಇಹಕು ಗುರುವೇ ಗತಿಯು
ಪರಕೂ ಅವನೇ ಮತಿಯು |
ಗುರುಪಾದವಲ್ಲದೆ ಬೇರೇನು
ಅರಿತು ಸಾಗಿದರೆ ಹಾಲ್ಜೇನು || ೧ ||

ಕಣ್ಣು ಮುಚ್ಚಿದರೆ ಗುರುವಿನ ಬಿಂಬ  
ಕಣ್ಣ ತೆರೆದರೆ ಅವನ ಪ್ರತಿಬಿಂಬ |
ಹೋದೆಲ್ಲಲ್ಲಾ ‌ಬರುವ ಜೊತೆಯಲ್ಲಿ
ಮಾತೆಲ್ಲಲ್ಲಾ ನುಡಿವ ಹರ್ಷದಲ್ಲಿ || ೨ ||

ನೀನೇ ದೈವ ಬದುಕಿನಲಿ
ನೀನೇ ಸಕಲ ಜನ್ಮದಲಿ ।
ಉಸಿರಾಡುವೆ ನಿನ್ನ ನಾಮದಲ್ಲಿ
ಬೆಳಕ ಪಡೆವೆ ನಿನ್ನ ನಗೆಯಲ್ಲಿ ।। ೩ ।।