ಒಟ್ಟು ನೋಟಗಳು

Thursday, May 17, 2018

ಗುರುನಾಥ ಲೀಲಾಮೃತ 
ಮಕ್ಕಳ ಮುಗ್ಧತೆಗೂ ಒಲಿವವನು ಎಮ್ಮ ಗುರುನಾಥನು
ರಚನೆ: ಅಂಬಾಸುತ 


ಈಗ್ಗೆ ೪ ವರ್ಷಗಳ ಹಿಂದೆ ನೆಡೆದ ಘಟನೆ. ಅಂದು ನಾಗರಪಂಚಮಿ. ನಮ್ಮ ಮನೆಯಲ್ಲಿ ಪೂಜೆ ಬೇಗನೇ ಮುಗಿದಿತ್ತು. ಸಖರಾಯಪಟ್ಟಣಕ್ಕೆ ಹೋಗಿ ಸದ್ಗುರುನಾಥನ ದರ್ಶನ ಮಾಡಿಬರೋಣವೆಂದು ನಿಶ್ಚಯಿಸಿ, ನಾನು ನನ್ನ ತಂಗಿ ಹಾಗು ಮಾವನೊಂದಿಗೆ ಹೊರಟು, ಸಖರಾಯಪಟ್ಟಣ ತಲುಪಿ ಗುರುಗಳ ಅಧಿಷ್ಠಾನಕ್ಕೆ ನಮಸ್ಕರಿಸಿ ಎಂದೆರಡು ಭಜನೆಗಳನ್ನು ಹೇಳಿದೆವು‌ . ಹಾಗೆಯೇ ಮನೆಯಿಂದ ತಂದಿದ್ದ ಪ್ರಸಾದವನ್ನು ಅಲ್ಲಿದ್ದವರಿಗೆ ಹಂಚಿ ನಾವೂ ತಿಂದು ಹೊರಡೋಣವೆಂದು ಸಖರಾಯಪಟ್ಟಣದ ಬಸ್ ನಿಲ್ದಾಣದೆಡೆ ಹೆಜ್ಜೆ ಹಾಕುತಿದ್ದೆವು.

ನೆಡೆಯಲು ಪ್ರಾರಂಭಿಸಿ ಇನ್ನೂ ೫ ನಿಮಿಷವಾಗಿತ್ತು, ಅಷ್ಟರಲ್ಲಿ ನನ್ನ ತಂಗಿ ,"ಅಯ್ಯೋ ಕಾಲು ನೋವು ಇನ್ನೂ ಅಷ್ಟು ದೂರ ನೆಡೆಬೇಕು, ಬಸ್ ಸ್ಟಾಂಡ್ ನಲ್ಲಿ ಕಾಯ್ಬೇಕು, ಚಿಕ್ಕಮಗಳೂರಿನಲ್ಲಿ ಇಳಿದು ಮತ್ತೆ ಹಾಸನ ಬಸ್ ಹತ್ಬೇಕಲ್ಲಪ್ಪಾ.  ಗುರುಗಳೇ, ಇಲ್ಲೇ ಒಂದು ಸುವಿಹಾರಿ ಬಸ್ ಬರ್ಬಾರ್ದಾ, ಅದು ಸೀದಾ ಹಾಸನಕ್ಕೇ ಹೋಗ್ಬಾರ್ದಾ" ಎಂದಳು. ನಾನು ನಮ್ ಮಾವ ನಕ್ಕು ಸುಮ್ನೆ ನಡಿಯಮ್ಮಾ ಎಂದೆವು. ನಾವು ಇನ್ನೇನು ಗುರುನಾಥರ ತೋಟ ಬಿಟ್ಟು ಮುಖ್ಯರಸ್ತೆ ಬಳಿ ಬರುತ್ತಿದ್ದಂತೆ, ಚಿಕ್ಕಮಗಳೂರು ಕಡೆ ಹೋಗುತಿದ್ದ ಸುವಿಹಾರಿ  ಬಸ್ ಕಾಣಿಸಿತು. ಇಲ್ಲಿ ದಾರಿ ಮಧ್ಯೆ ನಿಲ್ಲಿಸುತ್ತಾನೋ ಇಲ್ಲವೋ ಎಂದು ಅನುಮಾನದಿಂದ ಕೈ ತೋರಿಸಿದ ತಕ್ಷಣ ಬಸ್ ನಿಲ್ಲಿಸಿ ನಮ್ಮನ್ನು ಹತ್ತಿಸಿಕೊಂಡು ಬಸ್ ಹೊರಟಿತು. ಬಸ್ ನ ಒಳಗೆ ಕಂಡಕ್ಟರ್ ಡ್ರೈವರ್ ಬಿಟ್ಟರೆ ಯಾರೂ ಇಲ್ಲ,  ಟಿಕೇಟ್ ಪಡೆಯುವಾಗ ಕಂಡಕ್ಟರ್ "ನಮ್ದು ಕಡೂರು ಡಿಪೊ ಬಸ್ ಸಾರ್, ಚಿಕ್ಕಮಗಳೂರು ಡಿಪೊ ಇಂದ ಕೇಳಿ ಕರೆಸ್ಕೊಳ್ತಿದಾರೆ, ಈ ಬಸ್ ಹಾಸನ ಮಾರ್ಗವಾಗಿ ಮೈಸೂರು ಹೋಗುತ್ತೆ, ನೀವೆಲ್ಲಿ ಇಳೀತೀರಾ" ಎಂದಾಗ ಒಂದು ಕ್ಷಣ ಅವಕ್ಕಾಗಿ ನಂತರ ಹಾಸನ ಎಂದು ಹೇಳಿ ಟಿಕೇಟ್ ಪಡೆದು, ಹಾಸನದ ವರೆಗೂ ಆರಾಮವಾಗಿ ನನ್ನ ತಂಗಿ ಹಾಗು ಮಾವ ನಿದ್ರಿಸಿಕೊಂಡು ಬಂದರು. ಆದರೆ ನನಗೆ ನಿದ್ರೆ ಬರಲಿಲ್ಲ.  ಬದಲಾಗಿ ಗುರುನಾಥ ಎಂಥಾ ಕರುಣಾಳು, ಮಕ್ಕಳ ಈ ಚಿಕ್ಕ ಪುಟ್ಟ ಬೇಡಿಕೆಗಳನ್ನೂ ಈ ರೀತಿಯಾಗಿ ಪೂರೈಸಿದನಲ್ಲಾ ಎಂದು ಅವನ ಮಹಿಮೆಗಳನ್ನು ನನ್ನೊಳಗೇ ನಾನೇ ಕೊಂಡಾಡುತ್ತಾ ಬಂದೆ. ಹಾಸನ ತಲುಪಿದ್ದೇ ತಿಳಿಯಲಿಲ್ಲ.

"ಗುರುರಾಯನಂಥಾ ಕರುಣಾಳು ಕಾಣೆ ನಾನೀ ಜಗದೊಳೂ "

ಸದ್ಗುರು ಚರಣಾರವಿಂದಾರ್ಪಣಮಸ್ತು

Tuesday, May 15, 2018

ಗುರುನಾಥ ಗಾನಾಮೃತ 
ಅವನಿಟ್ಟಂತೆ ನಾನಿರಲೊಲ್ಲೇ
ರಚನೆ: ಅಂಬಾಸುತ 


ಅವನಿಟ್ಟಂತೆ ನಾನಿರಲೊಲ್ಲೇ
ಬಹು ಕೆಟ್ಟತನದಲ್ಲೇ ಕಟ್ಟಿಹೆ ಸಂಸಾರವನ್ನೇ ||ಪ||

ಕೂಡಿಟ್ಟೆ ಕುಡಿಕೆ ಹಣವನ್ನೆ
ಕುಣಿಕೆ ಹಾಕುತಲಿ ಕಡುಬಡವರಿಗೆ
ಕನಿಕರಿಸದೆ ಬಂದೆ ನಾನು
ಕನಕಮಯ ಸತಿಯ ಕನಸ ಕಾಣುತಲಿ ||೧||

ಲೆಕ್ಕಾಚಾರದಿ ಬದುಕುತಲಿಹೆನು
ತುತ್ತು ಅನ್ನವನ್ನೂ ಲೆಕ್ಕ ಹಾಕುತಲಿ
ಕಂಡವರ ಕುತ್ತಿಗೆ ಕುಯ್ದೇ
ಕಟ್ಟಿಕೊಳ್ಳಲು ಎನ್ನ ಅರಮನೆಯನ್ನ ||೨||

ಕೈಚಾಚಿ ನೀಡೇ ಒಂದಾಣೇ
ನೀಡಿದ ದಿನ ನಾ ಹೋಗುವೆ ಎನ್ನಾಣೆ
ನೋಡೇ ನೋಡೇ ಎನ್ನುತ ನಾನಾಡಿದೆ
ನಾಟಕವಾ ಬಹುವಿಕಟತನದಿ ||೩||

ರೇಷಿಮೆ ರುಮಾಲು ಸುತ್ತಿ
ತಲೆ ಎತ್ತಿ ಸಿರಿಗೆ ಕಣ್ಣೊತ್ತಿ
ಮತಿವೀವ ಗುರುನಾಥನ ಬದಿಗೊತ್ತಿ
ಅಂಬಾಸುತನ ಮತಿಗೆ ಪದವಿಕ್ಕೀ ||೪||
ಗುರುನಾಥ ಗಾನಾಮೃತ 
ಮನಸು ಕೂಗುತಿಹದು  ನಿನ್ನನೇ ಬೇಡು ಎಂದು
ರಚನೆ: ಆನಂದರಾಮ್, ಶೃಂಗೇರಿ  


ಮನಸು ಕೂಗುತಿಹದು  ನಿನ್ನನೇ ಬೇಡು ಎಂದು
ಯೋಗ್ಯತೆ ಏನೋ ನಾ ಅರಿಯೆ ನಿನ್ನ ಬಜಿಸಲು ಇಂದು|

ಬರೀ ಬೇಕು ಬೇಡಗಳ ನಡುವೆ ನಾನಿರುವೆ ಇಂದು
ಮೋಹ ಮಾಯೆಯ ಸುಳಿಯಲಿ ಈಜುತಿಹೆನಿಂದು|

ಎಷ್ಟು ಬೇಡಿದರೂ ಬರಿದಾಗದು ಆಸೆಯ ಮಹಾಪೂರ
ದಡ ಸೇರದಾ ಈ ಮನವು ಬೇಡುತಿದೆ ಗುರುವಿನ ಆಸರೆಯ ತೀರ |

ಮೂರು ದಿನದ ಈ ಬದುಕಿಗೆ ನೀಡೆನಗೆ  ನಿನ್ನ ಆಸರೆ
ನಿನ್ನ ಬಜಿಸುತ ಮರೆಯುವೆ ನಿತ್ಯ ಜೀವನದ ಹೊರೆ|

ಬದುಕು ಹಸನು ಮಾಡೆಂದು ಬೇಡುವೆನು ಗುರುವೇ
ಸ್ವಾರ್ಥತೆಯ ಸೋಗಿಂದ ನನ್ನ ಬಿಡಿಸೆನ್ನ  ಗುರುವೇ|

ಅವರಿವರ ಗೊಡವೆ ಬೇಡ ಎನಗೆ ನನ್ನ ಗುರುವೇ
ನಿನ್ನ ಸನಿಹದಲಿ ನನ್ನ ಮನಕೆ ನೆಲೆ ಸಿಗಲಿ ಗುರುವೇ|

Friday, May 11, 2018

ಗುರುನಾಥ ಗಾನಾಮೃತ 
ಅರಿವಿನ ಅರಮನೆಯ ದೊರೆ ಇವನು 
ರಚನೆ: ಅಂಬಾಸುತ 


ಅರಿವಿನ ಅರಮನೆಯ ದೊರೆ ಇವನು
ಮರೆಯದೆ ಭಜಿಸಲು ನಿಜಸುಖವೀವನು ||ಪ||

ಮೂಢತನವೆಂಬ ತಮವ ಕಳೆಯುವನು
ಜ್ಞಾನದೀವಿಗೆಯ ಮನದೊಳು ಬೆಳಗುವನು
ಆಡುಮಾತಿನಲೇ ಮಂತ್ರಾರ್ಥವಾ  ತಿಳಿಸಿ
ಆನಂದ ನೀಡುವನು ಅವಧೂತನು ||೧||

ಬೇಧವ ಅಳಿಸುವ ಬೋಧರೂಪನಿವನು
ಭವದ ಬಾಧೆಗಳ ಬೂದಿ ಮಾಳ್ಪನು
ಸತ್ಯವ ತೋರುವ ಸಚ್ಚಿದಾನಂದನು
ಸಾಧಕಪ್ರಿಯನು ಗುರುನಾಥನು ||೨||

ಆರರ ಆಟವ ನಿಲ್ಲಿಸುವವನು
ಮೂರನು ಮೀರಿಸೊ ಶಕ್ತಿ ಕೊಡುವನು
ಏಕಾದಶದೊಳು ತಾ ಕಾಣುವನು
ಈಶ್ವರನೇ ಇವನು ಗುರುವರನು ||೩||

ಸಖನಾಗಿಹನು ಸಖರಾಯಪುರದೊಳು
ಶ್ರೀವೇಂಕಟಾಚಲ ನಾಮಾಂಕಿತನು
ಅಂಬಾಸುತನಾ ಅನವರತ ಪೊರೆದಿಹ
ಆದ್ಯಂತರಹಿತನು ಅವಧೂತನು ||೪||

Thursday, May 10, 2018

ಗುರುನಾಥ ಗಾನಾಮೃತ 
ಎನ್ನ ಭಾಗ್ಯಕೆ ಎಣೆಯುಂಟೇ 
ರಚನೆ: ಅಂಬಾಸುತ 


ಎನ್ನ ಭಾಗ್ಯಕೆ ಎಣೆಯುಂಟೇ 
ನಿನ್ನ ಕರುಣೆಗೂ ಮಿಗಿಲುಂಟೇ
ಘನ್ನ ಮಹಿಮನೆ ಗುರುದೇವನೇ
ಸಖರಾಯಪುರಾಧೀಶನೇ ||ಪ||

ದಾರಿ ಹೋಕನು ನೀನೆಂದೆ
ದರಿದ್ರ ಎನಗಿಲ್ಲವೆಂದೆ
ದೂರ ತಳ್ಳಿದೆ ಗುರುದೇವನೆ
ನಿನ್ನ ಚರಣವ ನಂಬದೆ ||೧||

ನಾಲ್ವರೊಳು ನೀನೊಬ್ಬನೆಂದೆ
ನಿನ್ನ ಮುಖ ಕಾಣೆನು ಎಂದೆ
ನೀನಾಗೇ ಕರೆದರೂ
ನಾ ಬರಲೊಲ್ಲೆ ಎಂದೆ ||೨||

ಅರಿವಿನಾ ಕಣ್ತೆರೆಸಿದೆ
ಅರಸು ಬಾ ಎನ್ನನು ಎಂದೆ
ಚೈತನ್ಯ ರೂಪನಾದೇ ಗುರುವೆ
ಎನ್ನ ಚಿತ್ತದಲೇ ನೀ ಬಂದು ನೆಲೆಸಿದೆ ||೩||

ಮೂಢತನದಲಿ ನಾನಾಡಿದ
ಮಾತನೆಲ್ಲವ ಮನ್ನಿಸಿದೆ
ಮಾತೆಯಾಗಿ ನಿನ್ನ ಮಡಿಲೊಳು
ಎನ್ನ ನೀ ಇರಿಸಿದೆ ||೪||

ಭಾವವಾದೆ ಪದವಾದೆ
ಎನ್ನ ಕರದಲಿ ನಲಿದಾಡಿದೆ
ಅಂಬಾಸುತ ನೀನೆನ್ನುತಾ
ಹರಸಿದೆ ನೀ ಎನ್ನ ಬೆಳೆಸಿದೆ ||೫||
ಗುರುನಾಥ ಗಾನಾಮೃತ 
ನಿನ್ನ ಬಣ್ಣಿಸಲು ಅದೆಷ್ಟು ಬಕುತರೋ  ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ನಿನ್ನ ಬಣ್ಣಿಸಲು ಅದೆಷ್ಟು ಬಕುತರೋ  ಗುರುವೇ
ನಿನ್ನ ನಂಬಿಹ ಪಾಮರನು ನಾನೂ ಒಬ್ಬ ಗುರುವೇ|

ಮನದಿ ನೆನೆದರೆ ಅಂತರಾಳದಲಿ ನೆಮ್ಮದಿ ನೀಡುವೆ
ಬಜಿಸಿ ಪಾಡಲು ಎಲ್ಲಾ ನಿನ್ನವರೆಂದು ನೀ ಪೊರೆವೇ|

ನಿನ್ನ ನೆನೆಯುತ ಒಮ್ಮೆಯೂ ಮುಂದಡಿ ಇಡಲಿಲ್ಲ
ಹಿಂದೆ ನಿಂತು ಎನ್ನ ಕೈ ಬಿಡದೆ ನೀ  ಕಾಯುವೆಯಲ್ಲಾ|

ಸರಿ ತಪ್ಪುಗಳ ಅರಿವು ನೀ ನೀಡಿ ಸಲಹುವೆ ಗುರುವೇ
ಹುಂಬ ತನವನಳಿಸಿ ಎನ್ನ ಮನುಜನಾ ನೀಮಾಡುವೆ|

ಬಲು ದುಸ್ತರವು ಈ ಬದುಕು ನೀ ಹಸನು ಮಾಡುವೆ
ದಣಿವು ಆರಲು ಸದಾ ನಿನ್ನ ನಾಮವನು ನೆನೆಯುವೆ|

ಎಷ್ಟು ಬೇಡಿದರೂ  ಎನ್ನ ಹರಸಲಿಲ್ಲಾ ಆ ದೈವವೂ
ನಿನ್ನ ನೆನೆದೊಡೆ ಬಂದು ಸಲಹುವನು ನನ್ನ ಗುರುವು|

Monday, May 7, 2018

ಗುರುನಾಥ ಗಾನಾಮೃತ 
ಭವದಿ ಏಕೆ ಈ ಶೋಧನೆ ಗುರುನಾಥನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಭವದಿ ಏಕೆ ಈ ಶೋಧನೆ ಗುರುನಾಥನೇ
ಸಾಧನೆ ಮಾಡಿಸೋ ದೇವದೇವನೇ |

ಕರ್ಮವಶದಿ ಜಗದಿ ಬಂದೆ
ಬೆಳಕಿಗಾಗಿ ಎಲ್ಲೆಡೆ ಅಲೆದೆ |
ಫಲವನು ಕಾಣದೆ ನೊಂದೆ
ಗುರುವೇ ಗತಿಯೆಂದು ತಿಳಿದೆ || ೧ ||

ಶರಣೆನ್ನುವೆ ನಿನ್ನ ಪಾದಕೆ
ನಿನ್ನ ನಾಮವೇ ಸಾಕೆನ್ನ  ಮನಕೆ |
ನಿನ್ನ ಸೇವೆಗಿಂತ ಬೇರೆ ಬೇಡ ಜೀವಕೆ
ನಿನ್ನ ದೃಷ್ಟಿಯೇ ಸಾಕೆನ್ನ ಉದ್ಧಾರಕೆ || ೨ ||

ಮನದಲಿಲ್ಲ ನನಗೆ ಗೊಂದಲ
ನೀನೇ ನನ್ನ ಮಾರ್ಗಬಂಧು |
ನೀನೇ ಬೇಕೆಂಬ ನನ್ನ ಹಂಬಲ
ಕರುಣಿಸೋ ನನ್ನ ಆತ್ಮಬಂಧು || ೩ ||

ನನ್ನ ಬದುಕಿಗೆ ನೀನೇ ಆಧಾರ
ನಿನ್ನ ಮಾತೇ ನನಗೆ ಬಂಗಾರ |
ದಾರಿಯ ತೋರೋ ಕರುಣಸಾಗರ
ಮಾಡೆನ್ನ ಪಾದಸಾಯುಜ್ಯದ ಮಂದಾರ || ೪ ||

Friday, May 4, 2018

ಗುರುನಾಥ ಗಾನಾಮೃತ 
ಉಪವಾಸ ಮಾಡಬೇಕಮ್ಮಾ
ರಚನೆ: ಅಂಬಾಸುತ 


ಉಪವಾಸ ಮಾಡಬೇಕಮ್ಮಾ
ಲೋಕ ಉಪಕಾರಿ ಎಮ್ಮ ಗುರುನಾಥನ ಹೆಸರಲಿ ||ಪ||

ಉಪವೆಂದರೆ ಸನಿಹವಮ್ಮ
ವಾಸವೆಂದರೆ ಇರುವುದಮ್ಮ 
ನಮ್ಮ ಗುರುನಾಥನಾ ನೆನೆದು ಅವನೊಡನಿರುವಂಥಾ ||೧||

ಉದರ ವೈರಾಗ್ಯವೇಕಮ್ಮ
ಮನ ಉದರದಿ ಹಸಿವಿರಬೇಕಮ್ಮ
ನಮ್ಮ ಗುರುನಾಥನಾ ಭಜಿಸೊ ಭಕ್ತಿ ಹಸಿವಿರುವಂಥಾ ||೨||

ದಿನವೆಂಬುದಿದಕೆ ಇಲ್ಲಮ್ಮ
ತಾರೆ ಯೋಗಗಳ ನೋಡಬೇಡಮ್ಮ
ನಮ್ಮ ಗುರುನಾಥನಾ ನಿತ್ಯ ಸೇವಿಪ ಮನವಿರುವಾ ||೩||

ಚಂಚಲತೆಯ ಬಿಡಬೇಕಮ್ಮ
ವಿಷಯವಾಸನೆ ಸುಟ್ಟು ಹಾಕಮ್ಮ
ನಮ್ಮ ಗುರುನಾಥನಾ ನಾಮ ಒಂದೇ ಸಾಕೆನ್ನುವಂಥಾ ||೪||

ಅಂಬಾಸುತನ ಪದ ಕೇಳಮ್ಮ
ಸಖರಾಯಧೀಶನಾ ಎನಿಸಿಹನಾ
ನಮ್ಮ ಗುರುನಾಥನಾ ಪಾದ ಬಿಡದೇ ಪಾಡುತಲೀ ||೫||

Wednesday, May 2, 2018

ಗುರುನಾಥ ಗಾನಾಮೃತ 
ಎಂಥ ದಿವ್ಯಮೂರುತಿಯ ಕಂಡೆನೋ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಎಂಥ ದಿವ್ಯಮೂರುತಿಯ ಕಂಡೆನೋ
ನಮ್ಮ ಗುರುದೇವನ
ಎಂತ ಭವ್ಯಮೂರುತಿಯ ಕಂಡೆನೋ ||

ಕೊರಳೊಳು ಮಣಿಹಾರ 
ಕಣ್ಣಲಿ ಕರುಣೆ
ಗುರುದತ್ತನ ಅವತಾರವಾ ||

ನೊಸಿಲಲಿ ಕುಂಕುಮ 
 ಮೊಗದಲಿ ಹೂನಗೆ 
ಭಕ್ತಜನಮಂದಾರನಾ ||

ಹೃದಯದಿ ಪರಿಶುಧ್ದತೆ
ಕಾಯಕೆ ಬಿಳಿಯ ಉಡುಗೆ
ಭಕ್ತಜನೋದ್ಧಾರಕನಾ ||

ನುಡಿಯಲ್ಲಿ ಮಧುರತೆ
ನೆಡೆಯಲ್ಲಿ ಗಂಭೀರತೆ 
ಸಕಲಜನಪೂಜಿತನಾ ||
ಗುರುನಾಥ ಗಾನಾಮೃತ 
ಹಾಲ ಹಿತವಾಗಿ ಕಾಯಿಸಬೇಕಮ್ಮ
ರಚನೆ: ಅಂಬಾಸುತ 


ಹಾಲ ಹಿತವಾಗಿ ಕಾಯಿಸಬೇಕಮ್ಮ
ಹಿರಿದಾದರೆ ಉರಿ ಹಾಲುಕ್ಕಿ 
ಒಲೆಯ ಪಾಲಾಗುವುದಮ್ಮ ||ಪ||

ಗುಣಪೂರ್ಣ ಪಾತ್ರೆಯೊಳು ಗರತಿ ನೀ ಹಾಲನ್ಹಾಕಿ
ಗಮನವಿಟ್ಟು ಒಲೆಯ ಹಚ್ಚಬೇಕಮ್ಮ
ಹುಳ ಧೂಳುಗಳು ಹಾಲೊಳು ಬೀಳದಂತೆ
ಎಚ್ಚರವಾಗಿರಬೇಕಮ್ಮಾ ನೀ ಎಚ್ಚರವಾಗಿರಬೇಕಮ್ಮಾ ||೧||

ತಳಹಿಡಿಯದಂತೆ ತೊಳಸುತಲಿರಬೇಕು
ಆಗಾಗ ಉರಿಯಾ ಗಮನಿಸುತಿರಬೇಕು
ಶಬ್ಧ ಬಂದರೆ ಹಾಲು ಒಡೆದೂ ಹೋಗುವುದಮ್ಮ
ನಿಶಬ್ಧವಾಗಿರೆ ನೀ ನಿಶ್ಚಿಂತಳಾಗಮ್ಮಾ ||೨||

ಹಾಲುಕ್ಕಿ ಬಂದಾಗ ಮೈಮರೆತು ಕೂಡಬಾರದು
ಅರಿವಿಲ್ಲದೆ ಪಾತ್ರೆ ಕೆಳಗಿಳಿಸಬಾರದು
ಕೈಸುಡುವುದಮ್ಮಾ ಕೆಲಸ ಕೆಡುವುದಮ್ಮ
ಕಾದ ಕಂದನಿಗೆ ಹಾಲಿಲ್ಲವಾಗುವುದಮ್ಮಾ ||೩||

ಬೆಕ್ಕು ಬರದಾ ಹಾಗೆ ಮುಚ್ಚಿಡಬೇಕಮ್ಮ
ಚೊಕ್ಕ ಗುರುನಾಥನ ಮುಂದಿಡಬೇಕಮ್ಮ
ಅಂಬಾಸುತನಾ ಈ ಪದದಿ ಅರ್ಥ ಹುಡುಕಮ್ಮ
ಹಾಲೆಂದರಾತ್ಮವಮ್ಮ ದೇಹ ಪಾತ್ರೆಯಮ್ಮಾ ||೪||

ಗುರುನಾಥ ಗಾನಾಮೃತ 
ಪಟ್ಟವ ಬೇಡೆನೊ ಎನ್ನ ಗುರುವೆ
ರಚನೆ: ಅಂಬಾಸುತ 


ಪಟ್ಟವ ಬೇಡೆನೊ ಎನ್ನ ಗುರುವೆ 
ನೀನಿಟ್ಟಂತೆ ನಾ ಇರುವೆನಯ್ಯ
ಕೆಟ್ಟತನವ ನೀ ಕುಟ್ಟಿಪುಡಿ ಮಾಡೊ
ಕಟ್ಟಿ ಎನ್ನ ನಾಲಿಗೆಯೊಳು ನಿನ್ನ ನಾಮ ||

ಗುರುದೇವಾ ಗುರುದೇವಾ

ಬಿಟ್ಟಿರಲಾರೆನ ಅರೆಕ್ಷಣವಾದರೂ
ಗಟ್ಟಿಗನೆ ಎನ್ನ ಹಟ್ಟಿಯ ಒಡೆಯ
ರಟ್ಟೆ ಬೆಳೆದರೂ ನಿನ್ನಟ್ಟಿಗೆಯಲೇ
ಬೀಡುಬಿಟ್ಟಿರುವೆ ಅನುಗ್ರಹಿಸೋ ||

ಗುರುದೇವಾ ಗುರುದೇವಾ 

ಲೊಟ್ಟೆಹೊಡವೆ ಮನವ ನಿಲ್ಲಿಸಿ
ಇಟ್ಟಿಗೆ ಮೇಲಿನ ವಿಠ್ಠಲನನ್ನು
ಕೊಟ್ಟಿಗೆಯೊಳಗಿನ ಮಾಧವನನ್ನು
ರಟ್ಟು ಮಾಡೊ ನಿನ್ನ ವದನದಲಿ ||

ಗುರುದೇವಾ ಗುರುದೇವಾ 

ಇಷ್ಟಾದರೆ ಸಾಕಯ್ಯ ಗುರುವೇ
ಈ ಅಂಬೆಯ ಸುತ ನೀ ಬಿಟ್ಟ
ತಟ್ಟೆಯೊಳಗಣ ಅನ್ನವ ಉಣ್ಣುವ
ವರವಿಟ್ಟು ಸಲಹೋ ಸಖರಾಯ ||

ಗುರುದೇವಾ ಗುರುದೇವಾ 

Tuesday, May 1, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ನಾಮಸ್ಮರಣೇನ ಜಾಯತೇ 
 ವಿಷಯೇಷು ಅನಾಸಕ್ತಿಃ |
ಭೂತ್ವಾ ನರಃ ಅಂತರ್ಮುಖೀ 
ಅನುಭವತ್ಯಾತ್ಮಬೋಧಮ್ ||

ಸದ್ಗುರುವಿನ ನಾಮದ ನಿರಂತರ ಸ್ಮರಣೆಯಿಂದ ಜನರಲ್ಲಿ ಪ್ರಾಪಂಚಿಕ  ಆಸಕ್ತಿ ಕಡಿಮೆಯಾಗುವುದು. ಇದರಿಂದ ಸಾಧಕನು ಹೆಚ್ಚು ಅಂತರ್ಮುಖಿಯಾಗುತ್ತಾನೆ‌.ಅಂತರ್ಮುಖಿಯಾಗಿ ಆತ್ಮಬೋಧೆಯನ್ನು ಅರಿಯುತ್ತಾನೆ.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಮನಸು ಮಾಗಲಿಲ್ಲ
ರಚನೆ: ಅಂಬಾಸುತ 


ಮನಸು ಮಾಗಲಿಲ್ಲ
ದೇಹ ಭಾಗಲಿಲ್ಲ
ರೋಗ ಕಳೆಯಲಿಲ್ಲ
ರಾಗ ಕೂಡಲಿಲ್ಲ ||

ಅರಿವು ಮೂಡಲಿಲ್ಲ
ಅರಿಯು ಸೋಲಲಿಲ್ಲ
ಹರಿಯು ಕಾಣಲಿಲ್ಲ
ಹರನಾ ನೆನೆಯಲಿಲ್ಲ ||

ಕೊಡೊ ಅಭ್ಯಾಸವಿಲ್ಲ
ಭವವ ಬಿಡುವುದೆ ಇಲ್ಲ
ಮಾತು ಮುಗಿಯಲಿಲ್ಲ
ಮೌನ ಕಾಣಲಿಲ್ಲ ||

ಬೋಧ ಕೇಳಲಿಲ್ಲ
ಬಾಧೆ ಅಳಿಯಲಿಲ್ಲ
ಧ್ಯಾನ ಮಾಡಲಿಲ್ಲ
ಧೇಹಿ ಎಂದೆನಲ್ಲ ||

ಗುರುಪಾದ ಹಿಡಿಯಲಿಲ್ಲ
ಗುರುನಾಥ ಎನ್ನಲಿಲ್ಲ
ಗರಗರ ತಿರುಗಿದೆನಲ್ಲ
ಸುಖ ಕಾಣಲಿಲ್ಲ ||
ಗುರುನಾಥ ಗಾನಾಮೃತ 
ಮುಂಜಾನೆದ್ದು ಮಂಗಳಕರ ಗುರು ಮೂರುತಿ ಕಾಣೀರೊ
ರಚನೆ: ಅಂಬಾಸುತ 


ಮುಂಜಾನೆದ್ದು ಮಂಗಳಕರ ಗುರು ಮೂರುತಿ ಕಾಣೀರೊ
ಹಾಡುತ ಪಾಡುತ ಆರತಿ ಮಾಡುತ ಅವನ ಭಜಿಸಿರೊ ||ಪ||

ಯೋಗನಿದಿರೆಯಿಂದೇಳಯ್ಯ ಗುರುವೇ ಎನುತ ಸುಪ್ರಭಾತವ ಹಾಡಿರೊ
ವೇದಮಂತ್ರ ಘೋಷವ ಮಾಡುತಲಿ ಸ್ನಾನವ ಮಾಡಿಸಿರೊ ||೧||

ರೇಶಿಮೆ ವಸ್ತ್ರ ಗಂಧಾಕ್ಷತೆ  ವಿಧವಿಧದಾ ಪುಷ್ಪವ ಅರ್ಪಿಸಿರೊ
ಧೂಪ ದೀಪ ಫಲ ನೈವೇದ್ಯದ ಒಡನೆ ಆತ್ಮವ ನಿವೇದಿಸಿರೊ ||೨||

ಏಕಾರತಿ ಪಂಚಾರತಿ ಮುಂದೆ ಕರ್ಪೂರದಾರತಿ ಮಾಡಿರೊ
ತಪ್ಪನು ಮನ್ನಿಸಿ ಒಪ್ಪವಾಗಿರಿಸೆನುತ ತುಪ್ಪದಾರತಿಯ ಮಾಡಿರೊ ||೩||

ಧನ್ಯವಿದು ಪ್ರದಕ್ಷಿಣೆ ಎನುತಾ ಅವನಡಿಯಲಿ ಶಿರವನ್ನಿಡಿರೊ
ಜ್ಞಾನ ಭಕ್ತಿ ವೈರಾಗ್ಯ ನೀಡಿ ಎಮ್ಮನು ಪೊರೆ ಎನುತಾ ಬೇಡಿರೋ ||೪||

ಈ ವಿಧದಿ ಸದ್ಗುರು ಸೇವೆಯನು ವಿಧವಿಧದಿ ಮಾಡಿರೋ
ನಿಶ್ಚಲನಾಗಿ ಕುಳಿತು ಅವನನು ಧ್ಯಾನಿಸಿ ನಲಿಯಿರೊ ||೫||

ಸಖರಾಯಪುರಾಧೀಶ ಸದ್ಗುರುನಾಥ ಭಕ್ತೋದ್ಧಾರಕನೋ
ಅಂಬಾಸುತನ ಅಂತರಂಗವಾಸ ಭಕ್ತಜನ ಪ್ರಿಯನೋ ||೬||

Monday, April 30, 2018

ಗುರುನಾಥ ಗಾನಾಮೃತ 
ಎನ್ನ ಗುರುನಾಥನಂಥಾ ಗುರು ಇನ್ನೆಲ್ಲೋ
ರಚನೆ: ಅಂಬಾಸುತ 


ಎನ್ನ ಗುರುನಾಥನಂಥಾ ಗುರು ಇನ್ನೆಲ್ಲೋ
ಸೊಲ್ಲಿಲ್ಲವೋ ಸಲ್ಲಲಿತದ ಮಾತಿದೊ
ಶಿವವಲ್ಲಭೆಯ ಮೇಲಾಣೆ ಕಾಣೀರೊ ||ಪ||

ಕಟ್ಟಲಿಲ್ಲವೊ ಆಶ್ರಮವಾ ಈ ರಾಮನು
ಮುಟ್ಟಲಿಲ್ಲವೊ ಧನಕನಕಾದ ಕಟ್ಟನು
ಇಟ್ಟುಕೊಳ್ಳಲಿಲ್ಲವೊ ಪದವಿಯ ಪರಮತನ
ಗುಟ್ಟಾಗೇ ಇದ್ದನೋ ಬೆಟ್ಟ ಇವ ಕಾಣಿರೊ ||೧||

ದಟ್ಟಿ ಸುತ್ತಿಕೊಂಡು ದಿಟ್ಟನಾಗಿರುತಾನೆ
ಕೊಟ್ಟು ಕೊಟ್ಟು ಪಾಪ ಕಳೆದುಕೊ ಎನುತಾನೆ
ನಸುನಗುತಾನೇ ಅವ ಹುಸಿಮುನಿಸ ತೋರುತಾನೆ
ನಾನೆಂಬುದಾ ಬಿಡಿಸಿ ನರಕ ತಪ್ಪಿಸುತಾನೆ ||೨||

ಲೀಲೆ ತೋರುತ ಭಕುತ ಲಾಲನೆ ಮಾಡುತಾನೆ
ನೋವೆಲ್ಲವಾ ಮರೆಸಿ ನಕ್ಕುನಲಿಯಿಸುತಾನೆ
ಸದ್ಗುರುವೆ ಸರ್ವಸ್ವ ಅರಿಯಿರಿ ಎನುತಾನೆ
ಸತ್ ಚಿತ್ ಆನಂದ ರೂಪನಾಗಿ ಕಾಣುತಾನೆ||೩||

ಸಖರಾಯಪುರದೊಳು ನಿಜ ಸುಖದಾಯಕನಾಗಿ
ಶ್ರೀವೇಂಕಟಾಚಲ ನಾಮಾಂಕಿತನಾಗಿ
ಅಂಬಾಸುತಾದಿಯಾಗಿ ಸಕಲಾ ಭಕ್ತರ ಹರಸಿ
ಅವಧೂತ ಎನಿಸ್ಯಾನೋ ಎಮ್ಮ ಗುರುನಾಥ ಇವ ಕಾಣಿರೋ ||೪||
ಗುರುನಾಥ ಗಾನಾಮೃತ 
ಬಾರೋ ಗುರುರಾಯ ಕರುಣದಿ ಕಾಯೋ ಮಹನೀಯಾ
ರಚನೆ: ಅಂಬಾಸುತ 


ಬಾರೋ ಗುರುರಾಯ ಕರುಣದಿ ಕಾಯೋ ಮಹನೀಯಾ||ಪ||

ಮರೆವಿಗೆ ಮರೆವು ಕೊಟ್ಟು ಅರಿವಿನೊಳೆನ್ನನಿಟ್ಟು
ಆರನ್ನು ಬಿಡುವಂತೆ ನೀ ಹರಸೇ||೧||

ಬೇಧಕ್ಕೇ ಬಾಧೆಯಾಗಿ ಬೋಧರೂಪನಾಗಿ
ಬಾರಿ ಬಾರಿಗು ಎನ್ನ ಎಚ್ಚರಿಸೇ ||೨||

ಸಂಶಯವನ್ನಳಿಸೊ ಸ್ಥಿರತೆಯ ಉಳಿಸೊ
ಸರ್ವರೊಳು ನೀನಿಹೆ ಎಂಬುದ ತಿಳಿಸೇ ||೩||

ನಿಜಮೌನ ಮೆರೆದಾಡಲಿ ಮಾತು ಮರೆಯಾಗಲಿ
ಅನುಭವದಿಂದಲೇ ಸರ್ವವು ವೇದ್ಯವಾಗಿಸೆ ||೪||

ಆಕಾರವೊ ನಿರಾಕಾರವೊ ಆನಂದವ ತರಲಿ
ಅಜ್ಞಾನದಾ ಅರಿಯ ಎಂದೂ ಸೋಲಿಸಲು ||೫||

ಸಖರಾಯಪುರವಾದಿ ಸದ್ಗುರುನಾಥ
ಅಂಬಾಸುತ ನಿನ್ನ ದಾಸಾನುದಾಸಾ ||೬|
ಗುರುನಾಥ ಗಾನಾಮೃತ 
ಈತ ಸಂತನೋ 
ರಚನೆ: ಅಂಬಾಸುತ 


ಈತ ಸಂತನೋ 
ಸುಮ್ಮನಿರುವ ಸಾಧಕನೋ ||ಪ||

ಸ್ವಂತವೆಲ್ಲವ ಬಿಟ್ಟವನೊ
ಸದ್ಗುರು ಚರಣವ ಹಿಡಿದವನೊ
ನಾಮಸ್ಮರಣೆ ಮಾಡಿಹನೊ
ಚಿದಂಬರ ಚಿದಂಬರ ಚಿದಂಬರ ಎನುತಿಹನೊ ||೧||

ದೇಹಭಾವ ಬಿಟ್ಟವನೊ
ಧೇಹಿ ಎನುತ ಜೋಳಿಗೆ ಹಿಡಿದವನೊ
ಎಲ್ಲರೊಳು ಭಗವಂತನ ಕಂಡಿಹನೊ
ಮಗುವಾಗಿ ತಾ ಕುಳಿತಹನೊ ||೨||

ಭಕ್ತಿಯೋಗ ಪೇಳಿಹನೊ
ಭಕ್ತರಿಗೆಲ್ಲ ತಾಯಿಯಾಗಿಹನೊ
ಸೇವೆಯೊಳು ಮುಂದಿಹನೊ
ಸಾಮಾನ್ಯಂತೆ ನಿಂತಿಹನೊ ||೩||

ಪದಕೆ ಮೀರಿದವನೊ ಇವನು
ಪೂರ್ಣರೂಪನಾಗಿ ಕಂಡಿಹನು
ವೀಣೆ ಪಿಡಿದು ಬಂದಿಹನೊ
ಎಮ್ಮ ಅಜ್ಞಾನವ ಕಳೆಯುತಿಹನೊ ||೪||

ಅಂಬಾತನಯ ಅಂಬಾತನಯ 
ಎನುತಲೆನ್ನ ಕೂಗಿಹನೊ
ತನ್ನ ಮಡಿಲೊಳೆನ್ನ ಇರಿಸಿ
ಗುರುವು ಕಾಯ್ವ ಎಂದಿಹನೊ ||೫||